ಪ್ರಮೋದ ಜೋಶಿ
ಸತ್ತವನ ಮನೆ ಮುಂದೆ
ಜೀವ ಭರವಸೆ ಉಳ್ಳವರ ಸಾಲು
ಕ್ಷಣದೊಳಗೆ ಆವರಿಸಿದ
ಮಾಯೆಯ ಸೆರಗಿನಲಿ
ಕೂಡಿ ಬಂದ ಜೀವಿಗಳು
ಎಲ್ಲ ಬಂಧ ತೊರೆದು ಬಂದ
ಕ್ಷಣ ಹೊತ್ತಿನ ವಿರಾಗಿಗಳು
ಅಂತಿಮ ಘಟ್ಟದ ಹೊತ್ತಿನವರೆಗೆ
ಎಲ್ಲ ಮರೆತ ನಿರ್ಮೋಹಿಗಳು
ದುಃಖದ ಛಾಯೆಯ ಘಳಿಗೆಯೊಳಗೆ
ದುಃಖ ವಿನಿಮಯದ ಸಂಕ್ರಮಣ
ತಮ್ಮ ಘಟನೆಯ ಕತೆಗಳ ತೆಗೆದು
ಮಾಡುವರಿಲ್ಲಿ ಅನಾವರಣ

ಬಡವ ಬಲ್ಲಿದ ಹಿರಿಯ ಕಿರಿಯ
ಭೇದ ಮರೆತು ಬಂದವರು
ಯಾವ ಫಲವನೂ ಬಯಸದೇ ಕೂಡಿದ
ಮಾನವೀಯತೆಯ ಪ್ರತೀಕರು
ಸತ್ತ ದೇಹದ ಸುತ್ತ ಅಳುವವರ ಕೂಟ
ಸರತಿಯಂತೆ ಅತ್ತು ದುಃಖ ಮರೆಸುವ ಆಟ
ಹೊರಗಡೆ ಭಜನೆ ತಮಟೆ ಸದ್ದು
ಮುಗಿಸಿ ಬರುವರು ಒಬ್ಬೊಬ್ಬರೆ
ತಿಂಡಿ ತೀರ್ಥ ಮೆದ್ದು
ದುಃಖ ಛಾಯೆಯೊಳು ಹರಟೆಯ ಭರಾಟೆ
ಬಹುದಿನ ತೊರೆದ ಸಂಬಂಧಿಗಳ ಬೇಟೆ
ಸುಖ ದುಃಖದ ವೈಚಾರಿಕತೆಯಲ್ಲೂ
ಚಿಮ್ಮಿಸುವರು ಆಗಾಗ ನಗುವಿನ ಬುಗ್ಗೆ

ಸತ್ತ ದೇಹದ ಮೆರವಣಿಗೆ ತಾಕತ್ತಿನಂತೆ
ಹೊತ್ತು ನಡೆವರೆಲ್ಲರೂ ಒಬ್ಬೊಬ್ಬರಂತೆ
ಅಂತಿಮ ಘಟ್ಟದವರೆಗೂ ಏಕೋಭಾವ
ಮುಗಿಸಿಬಂದೊಡೆ ಇವನ್ಯಾರೊ ಅವನ್ಯಾರೊ
ಎಂಥ ವಿಚಿತ್ರ ಭಾವನೆ
ಇದ್ದಾಗ ಬಾರದವರು ಸತ್ತಾಗ ಬರುವರು
ಸತ್ತಾಗ ಬಂದರೆ ಎದ್ದು ಬರುವನೇ
ಇದ್ದಾಗ ಪ್ರೀತಿಸು ಎಲ್ಲರೂ ನಮ್ಮವರೇ.






0 Comments