ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ ಕುಲಕರ್ಣಿ ಓದಿದ ‘ಅವ್ವ ಹಚ್ಚಿದ ದೀಪ’

ಸತೀಶ ಕುಲಕರ್ಣಿ

ಅವ್ವ ಹಚ್ಚಿದ ದೀಪ – ಎಚ್.ಕೆ. ಕೊಟ್ರಪ್ಪನವರ ಮೊದಲ ಕವನ ಸಂಕಲನ. ಹರಿಹರ ಪಾಲಿಫೈರ‍್ಸ್ ನಲ್ಲಿ ಕಾರ್ಮಿಕರಾಗಿ ದುಡಿದು ನಿವೃತ್ತರಾದವರು. ಅವರಿಗೆ ೭೫ ವರ್ಷ. ಪಕ್ಕಾ ಟ್ರೇಡ್‌ಯೂನಿಯನಿಸ್ಟ್ರಾದ ಕೊಟ್ರಪ್ಪನವರು ಬಂಡಾಯ, ಸಮುದಾಯ, ಚಳವಳಿಯ ಜೊತೆಗೆ, ಕಮ್ಯೂನಿಸ್ಟ್ ಸಿದ್ಧಾಂತಗಳಿಗೂ ಬದ್ಧರಾದವರು. ೧೯೭೧ ರಲ್ಲಿ ೨೨೫ ರೂಗಳಿಗೆ ಕೊಂಡ ಸ್ಪೀಡ್ ಕಿಂಗ್ ಎಂಬ ಸೈಕಲ್ಲನ್ನು ಈಗಲೂ ಜತನವಾಗಿಟ್ಟುಕೊಂಡಿದ್ದಾರೆ. ಇದು ಅವರ ಬದ್ಧತೆ ಮತ್ತು ಜೀವನ ಪ್ರೀತಿಯ ಒಂದು ಉದಾಹರಣೆ ಮಾತ್ರ.

ಸೃಜನಶೀಲತೆ ಮತ್ತು ಹೋರಾಟಗಳನ್ನು ಏಕಕಾಲಕ್ಕೆ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಕೊಟ್ರಪ್ಪ ಹೆಚ್ಚು ಓದಿದವರಲ್ಲ. ಚಳವಳಿಗಳ ಪಾಠಶಾಲೆಯಿಂದ ಬೆಳೆದವರು. ತಮ್ಮ ಸಾಮಾನ್ಯತೆಯಲ್ಲಿಯೆ ಕಾವ್ಯ ಪ್ರೀತಿ ಮತ್ತು ಜೀವನ ಪ್ರೀತಿ ಕಂಡುಕೊ೦ಡು ಅವ್ವ ಹಚ್ಚಿದ ದೀಪ ಕವನ ಸಂಕಲನವನ್ನು ನಾಲ್ಕಾರು ದಶಕಗಳ ನಂತರ ಪ್ರಕಟಿಸಿದ್ದಾರೆ.

ತುಂಗಭದ್ರಾ ನದಿ ತಟದ ಹರಿಹರ ನಗರ ಸಾಂಪ್ರದಾಯಿಕ ಜನಜೀವನದ ಜೊತೆಗೆ ಉದ್ಯಮದ ಉಗಮಕ್ಕೂ ಕಾರಣವಾಗಿದೆ. ನೀರು ಜನಜೀವನ ಕಟ್ಟುವುದಕ್ಕೆ ದೊಡ್ಡ ಆಸರೆ. ಸಾಮಾನ್ಯರ ಬದುಕು ಬವಣೆಗಳಿಗೆ ಬಾಯಿ ಕೂಡ ಆಗುತ್ತದೆ. ಹರಿಹರ ದಾವಣಗೆರೆ ಜೋಡಿ ನಗರಗಳು ೭–೮ ದಶಕಗಳಿಂದ ಸಾಮಾಜಿಕ ರಾಜಕೀಯ ಚರಿತ್ರೆಗೆ ಸಾಕ್ಷಿಯಾಗಿವೆ. ಇಂತಹ ನೆಲದ ಒಂದು ಕುಡಿ ಕೊಟ್ರಪ್ಪನವರು.

ಅವ್ವ ಹಚ್ಚಿದ ದೀಪ ಸಂಕಲನದಲ್ಲಿ ೮೮ ಕವಿತೆಗಳು ಮತ್ತು ಪ್ರತಿಕ್ರಿಯೆ ರೂಪದ ೩೯ ಚುಟುಕುಗಳಿವೆ. ಸಂದರ್ಭ ಸನ್ನಿವೇಶಗಳನ್ನು ಛೇದಿಸಿ ಒಂದು ಸಂದೇಶ ಕೊಡುವ ಚುಟುಕುಗಳಿವು. ಇದು ಸಂಕಲನದ ಸ್ವಭಾವವೂ ಹೌದು. ಕೊಟ್ರಪ್ಪನವರ ಕಾವ್ಯ ತಳಾದಿಯಲ್ಲಿ ಒಂದು ಸಾಮಾಜಿಕ ಅರಿವು ಇದೆ. ಪ್ರಜ್ವಲಿಸುತ್ತಲೇ ತನ್ನ ಕಾಲಕ್ಕೆ ಕೊಟ್ಟಿರುವ ಚಿಂತನೆಗಳೂ ಹೌದು.

ಚಂದ್ರ
ರೊಟ್ಟಿಯಂತೆ,
ನಕ್ಷತ್ರಗಳು
ಅನ್ನದಗಳುಗಳ೦ತೆ
ಕಾಣುತ್ತಿದ್ದವು ಹಸಿದ ಹೊಟ್ಟೆಗೆ

ತಿನ್ನಲು
ಕೈಹಾಕಿದರೆ
ಸಿಗದಷ್ಟು ದೂರದಿಂದಲೇ ನಕ್ಕು
ಬೆಂಕಿ ಹಾಕುತ್ತಿದ್ದವು ಹಸಿವಿಗೆ

ಗರೀಬರ ಬೆಳದಿಂಗಳು – ಎನ್ನುವ ೯ ಸಾಲಿನ ಕವಿತೆ ಸಾಕು. ಕೊಟ್ರಪ್ಪನವರು ಹೇಳ ಬೇಕಾದುದೆಲ್ಲ ರೂಪಕವಾಗಿ ಹೇಳಿದ್ದಾರೆ.

ಬಂಡಾಯ ಕಾವ್ಯದ ಸಿದ್ಧ ಟ್ರ್ಯಾಕಿನಲ್ಲಿ ನಿರೂಪಿತ ಕವಿತೆಗಳು, ಜಡಜಟೀಲವಾಗದೆ ನೇರವಾಗಿ ತೆರದಿಟ್ಟಂತಹವು. ಹೆಣ ಕೆಗೆ ಇನ್ನಿಷ್ಟು ಕುಸುರು ಹಾಕಿ ಓದುಗನ ಮನಸ್ಸಿಗೆ ಛಾಪೊತ್ತುವ ಶೈಲಿ ಬೇಕಿತ್ತೆನಿಸುತ್ತದೆ. ಇದು ಕವಿಯ ಮೊದಲ ಕವನ ಸಂಕಲನ. ಕವಿಗೆ ಓದಿನ ಅವಶ್ಯಕತೆ ಇದ್ದು ಸಾಣ ಹಿಡಿದ ಶೈಲಿ ನಿರೂಪಣೆ ರೂಢಿಸಿಕೊಳ್ಳಬೇಕು.

ಅವ್ವ ಹಚ್ಚಿದ ದೀಪ ಕವಿತೆ ಭಾವನಾತ್ಮಕ ನೆಲೆಯದು. ೨-೩ ದಶಕಗಳಲ್ಲಿ ಬರೆದಿಟ್ಟ ಸಂಕಲನವಾದುದರಿ೦ದ ಒಂದಿಷ್ಟು ರೀಯಾಯಿತಿ ಕೊಡಬಹುದೇನೊ. ಮಾಗಿದ ಮನಸ್ಸು, ದೀರ್ಘ ಜೀವನಾನುಭವಗಳು ಹೆಪ್ಪುಗಟ್ಟಿ ಮುಂದಿನ ಸಂಕಲನದಲ್ಲಿ ಬರುವಂತಾಗಲಿ.

ಬಡವರ ಪರದ ಹಲಬು, ಎದೆ ತುಂಬಿದ ಸಾಮಾಜಿಕ, ರಾಜಕೀಯ ಕಳಕಳಿ, ತಪ್ಪಿಯೂ ನಿರಾಸೆಯ ಕೂಪಕ್ಕೆ ಬಿದ್ದಿಲ್ಲ. ಕೊಳೆ, ಶಾಂತಿಗಾಗಿ, ಹಂಬಲ, ಬಿದ್ದಿತ್ತು ಬಡತನ, ಬಾ ದೀಪವೆ, ತಲೆ, ಇತಿಹಾಸ ಮುಂತಾದ ಸಾರ್ಥಕ ಸರಚನೆಗಳಿವೆ.

‍ಲೇಖಕರು avadhi

26 May, 2023

1 Comment

  1. vijayalaxmi

    super

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading