ವಿನಯ್ ಗುಂಟೆಗೆ ‘ವಿದ್ಯಾರ್ಥಿ ಕಥಾ ಪ್ರಶಸ್ತಿ’

ಜಯರಾಮಾಚಾರಿ

ದಲಿತರ ಮನೆ ಸ್ಟೀಲ್ ಉಳ್ಳವರ ಮನೆಯ ರಂಗನಾಥ ಪ್ರತಿಮೆಯಾಗಿದ್ದು ಮತ್ತು ಅಪ್ಪನ ಚಪ್ಪಲಿ.

ವಸುಧೇಂದ್ರ ಅವರು ಹೋದ ಕಡೆಯೆಲ್ಲ ಒಂದು ಮಾತನ್ನು ರಿಪೀಟ್ ಮಾಡುತ್ತ ಇರುತ್ತಾರೆ ಅದೇನೆಂದರೆ “ಮನುಷ್ಯ ಮನುಷ್ಯನಾಗಲು ಕಾರಣವಾಗಿದ್ದೆ ಕತೆಗಳು. ಕೇಳಿಸಿಕೊಳ್ಳುವ ಓದಿಸಿಕೊಳ್ಳುವ ದಾಟಿಸಿಕೊಳ್ಳುವ ಕತೆಗಳಿಂದ” ಅಂತ. ಅದು ಅಕ್ಷರಶ ನಿಜ ಎಂದು ನನಗೆ ತುಂಬಾ ಸಲ ಅನಿಸಿದ್ದೇ. ಪ್ರತಿ ಕ್ಷಣಗಳು ಕತೆಗಳಾಗುವ ಸರಕುಗಳೇ. ಇವತ್ತಿಗೆ ಜಗತ್ತಿನಲ್ಲಿ ನಮ್ಮ ಕಲ್ಪನೆಗೂ ಮೀರಿ ನಮ್ಮ ಜಗತ್ತು ನಾವು ಬೆಳೆದಿದ್ದರೆ ಅದಕ್ಕೂ ಕತೆಗಳೇ ಕಾರಣಗಳು. ಜಗತ್ತಿಗೆ ಯೂ ಟರ್ನ್ ಕೊಟ್ಟ ಪೇ ಪಲ್, ಗೂಗಲ್ ಪೇಜ್, ಐ ಫೋನ್ ಇನ್ನೂ ಎಷ್ಟೋ ಹುಟ್ಟಿಗೆ ಪಾಶ್ಚಿಮಾತ್ಯದ ಸಾಹಿತ್ಯವೇ ಕಾರಣ ಅದರಲ್ಲೂ ಸೈ ಫೇ ಕತೆಗಳು.

ಹಾಗೆ ಹಿಂದೆ ಬಿದ್ದ ಜಗತ್ತು, ತುಳಿಸಿಕೊಂಡವರ ನೋವಿಗೆ ದನಿಯಾಗಿದ್ದು ಮತ್ತದೇ ಕತೆಗಳು. ಮಾಂಟೊ, ಖಾಲಿದ್ ಹುಸೇನ್ ಅಷ್ಟೇ ಯಾಕೆ ನಮ್ಮವರ ನಮ್ಮ ಜೊತೆಯೇ ಇದ್ದು ನಮ್ಮಿಂದ ದೂರ ಇದ್ದವರ ಕತೆಗಳನ್ನು ನಮಗೆ ಮುಟ್ಟಿಸಿದ್ದು ದೇವನೂರು ಮಹಾದೇವ, ಶ್ರೀಕೃಷ್ಣ ಆಲನಹಳ್ಳಿ, ಮೊಗಳ್ಳಿ ಗಣೇಶ್.

ಇದನ್ನೆಲ್ಲಾ ಯಾಕೆ ಹೇಳಬೇಕಾಯ್ತು ಅಂದ್ರೆ ಕೇವಲ ಎರಡೇ ಕತೆಗಳನ್ನು ಬರೆದು ನನ್ನನ್ನು ತುಂಬಾ ಗಾಬರಿಗೊಳಿಸಿದ ಬೆಚ್ಚಿಬೀಳಿಸಿದ ನನಗೆ ಏಕಕಾಲಕ್ಕೆ ಮಹಾದೇವ ಆಲನಹಳ್ಳಿ ಮೊಗಳ್ಳಿಯನ್ನು ನೆನಪಿಸಿದ್ದು ವಿನಯ್ ಗುಂಟೆ ಎಂಬ ಹೊಸ ಕತೆಗಾರ. ಇನ್ನೂ ಹರೆಯದಲ್ಲಿರುವ ಈ ಕತೆಗಾರನಲ್ಲಿ ಬೆಂಕಿ ಉಂಡೆಯ ಕತೆಗಳಿವೆ, ಆದರೆ ಆ ಕತೆಗಳಲ್ಲಿ ತಾನು ಮಹತ್ತಾಗಿರುವುದು ಏನೋ ಹೇಳುತ್ತಿದ್ದೇನೆ ಎಂಬ ಮುಖವಾಡವಿಲ್ಲ ತುಂಬಾ ಪ್ರಾಮಾಣಿಕವಾಗಿ ಬರೆದ ಕತೆಗಳು, ಈಗಷ್ಟೇ ಕೆಲವೇ ಕತೆಗಳನ್ನು ಬರೆದಿದ್ದಾನೆ. ಆತನ ಕತೆಗಳು ಇನ್ನೊಂದಷ್ಟು ಕತಾಸಕ್ತರನ್ನು ಓದುಗರನ್ನು ಅವನ ಬೆನ್ನು ತಟ್ಟಿ ಮಾರ್ಗದರ್ಶನ ಮಾಡುವವರು ಖಂಡಿತಾ ಬೇಕು.

ನನಗೆ ವಿನಯ್ ಗುಂಟೆ ಪರಿಚಯವಾಗಿದ್ದು ಅವನ ಕತೆಯಿಂದಲೇ. ವಿಜಯ ಕರ್ನಾಟಕದ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅಂತಿಮ ಹಂತ ತಲುಪಿದ ಟಾಪ್ ೨೫ ಕತೆಗಳಲ್ಲಿ ವಿನಯ್ ಗುಂಟೆ ಬರೆದ ಸಿಲ್ವರ್ ತಟ್ಟೆ ಕತೆ ಕೂಡ ಒಂದು. ಕತಾ ಸ್ಪರ್ಧೆಯಲ್ಲಿ ಅದರಲ್ಲೂ ಈಗಿನ ಕತಾಸ್ಪರ್ಧೆಗಳಲ್ಲಿ ಕತೆಗಾರರ ಹೆಸರು ರಿಪೀಟ್ ಆಗಿ ಕತೆಗಳು ಹೆಚ್ಚು ಕಮ್ಮಿ ಅವರ ಹಳೆಯ ಕತೆಗಳ ಛಾಯೆಯೇ ಇರುವುದರಿಂದ ನಾನು ಹೊಸ ಕತೆಗಾರರ ಕತೆಗಳನ್ನ ಮೊದಲು ಓದೋಣ ಎಂದು ಓದಿದ್ದು ಒಂದು ವಿನಯ್ ಗುಂಟೆ ಅವರ ‘ಸಿಲ್ವರ್ ತಟ್ಟೆ’ ಮತ್ತೊಂದು ಸಂಪತ್ ಸಿರಿಮನೆಯ ‘ಜಮಾ’.

ವಿನಯ್ ಗುಂಟೆ ಅವನ ‘ಸಿಲ್ವರ್ ತಟ್ಟೆ’ ಓದಿ ತುಂಬಾ ಖುಷಿಯಾಗಿದ್ದೆ. ತುಂಬಾ ಸಿಂಪಲ್ ಕತೆ ದಲಿತ ಮಗುವೊಂದು ತಾನು ಓದುವ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಊಟದ ತನ್ನ ಸಿಲ್ವರ್ ತಟ್ಟೆಯನ್ನು ಕಳೆದುಕೊಳ್ಳುವುದು, ಅದೇ ಸಮಯಕ್ಕೆ ಆ ಊರಿಗೆ ಸ್ಟೀಲ್ ಕರಗಿಸಿ ದೇವರ ಪ್ರತಿಮೆ ಮಾಡುವನೊಬ್ಬ ಊರಿಗೆ ಬಂದಿರುತ್ತಾನೆ, ಈ ಸಿಲ್ವರ್ ತಟ್ಟೆಯನ್ನ ಆ ಊರಿನ ಗೌಡರ ಹೆಂಡತಿ ಒಬ್ಬಳು ಕದ್ದು ಅದರಿಂದ ರಂಗನಾಥನ ಪ್ರತಿಮೆ ಮಾಡಿಸಿಕೊಳ್ಳುತ್ತಾಳೆ ಈ ತರ ಕತೆ ಇದೆ. ನನಗೆ ದಲಿತನ ಸಿಲ್ವರ್ ತಟ್ಟೆ ಉಳ್ಳವನ ಮನೆಯ ರಂಗನಾಥ ದೇವರಾಗುವ ಆ ಮೆಟಾಫಾರ್ ನನಗೆ ಅಬ್ಬಾ ಅನಿಸಿಬಿಟ್ಟಿತು. ಆ ಕತೆಯಲ್ಲಿ ತೀರಾ ಪ್ರಾಮಾಣಿಕತೆ ಇತ್ತು. ಅವತ್ತೇ ವಿನಯ್ ಗುಂಟೆಯನ್ನು ಫೇಸ್ಬುಕಲ್ಲಿ ಹುಡುಕಿ ನನ್ನ ಅಭಿಪ್ರಾಯ ಹೇಳಿದ್ದೆ.

ಅದಾದಮೇಲೆ ಆಗಾಗ ಸ್ವಲ್ಪ ಮಾತಾಡಿದ್ದೀವಿ ಅಷ್ಟೇ. ಸ್ಪರ್ಧೆಗಳು ಬಂದಾಗ ಬರೀರಿ ಕತೆ ಎಂದು ಹೇಳುತ್ತಾ ಇರ್ತೀನಿ. ಇವತ್ತು ಅವನ ವಾಟ್ಸಾಪ್ ಸ್ಟೇಟಸ್ ನೋಡಿದಾಗ ಅವನಿಗೆ ಅಕ್ಷರ ಸಾಹಿತ್ಯ ವೇದಿಕೆಯ ಪ್ರಹ್ಲಾದ ಅಗಸನ ಕಟ್ಟೆ ಸ್ಮರಣಾರ್ಥ ‘ವಿದ್ಯಾರ್ಥಿ ಕಥಾ ಪ್ರಶಸ್ತಿ’ ಸಿಕ್ಕಿದ ವಿಷಯ ಹಾಕಿದ್ದ, ಅವನ ಅಪ್ಪನ ಚಪ್ಪಲಿ ಕತೆಗೆ ಸಿಕ್ಕಿದೆ. ಕೂಡಲೇ ಕತೆ ಕಳಿಸಿ ಎಂದೇ ಕಳಿಸಿದ. ಓದಿದ ಕೂಡಲೇ ಸುಮ್ಮನಿರಲಾಗಲಿಲ್ಲ.

ಅಪ್ಪನ ಚಪ್ಪಲಿ ಇತ್ತೀಚೆಗೆ ನಾನು ಓದಿದ ಒಂದೊಳ್ಳೆ ಕತೆ. ಪೇಟೆಯಿಂದ ಊರಿಗೆ ಹಿಂದಿರುವ ಮಗ ತನ್ನ ಅಪ್ಪನಿಗೆ ‘ಹೊಸ ಚಪ್ಪಲಿ’ ತಂದು ಕೊಡುತ್ತಾನೆ, ಚಿಕ್ಕ ವಯಸ್ಸಿನಿಂದಲೂ ಹರಿದ ಮಾಸಿದ ಮುಂದೆ ಹಿಡಿ ಕಿತ್ತು ತಂತಿಯಿಂದ ಕಟ್ಟಿದ ಅಪ್ಪನ ಚಪ್ಪಿ ನೋಡಿದ ಮಗ ಅಪ್ಪನಿಗೆ ಹೊಸ ಚಪ್ಪಲಿ ಮೇಲೆ ಅಷ್ಟೇನೂ ಮೋಹವಿಲ್ಲದಿದ್ದರೂ ಅದನ್ನು ಜೋಪಾನವಾಗಿ ಎತ್ತಿಡುತ್ತಾನೆ ಇತ್ತಕಡೆ ಊರಲ್ಲಿ ಹಬ್ಬ, ಕೆಂಡ ಹಾಯೋದು, ಪೂಜಾರಿಗೆ ದೇವರು ಬರೋದು, ಹುಡ್ಗಿಯರು ಸಿಂಗರಿಸ್ಕೊಂಡು ಓಡಾಡೋದು, ಪ್ರತಿ ಮನೆಯಲ್ಲೂ ಕೋಳಿ ಮಾಂಸದ ಮಸಾಲೆ ಪರಿಮಳ, ಈ ಎಲ್ಲ ಮಧ್ಯದಲ್ಲಿ ಅಪ್ಪನ ಚಪ್ಪಲಿ ಕಳೆದು ಹೋಗುತ್ತದೆ, ಅಪ್ಪ ಒದ್ದಾಡಿ ಹೋಗುತ್ತಾನೆ.

ಕತೆಯನ್ನು ಪೂರ್ತಿ ಬಿಟ್ಟು ಕೊಡುವ ಹಾಗಿಲ್ಲ, ಅದನ್ನು ಓದಿಯೇ ಅನುಭಿವಿಸಬೇಕು. ಆ ಕಳೆದ ಚಪ್ಪಲಿ ಸಿಗುತ್ತಾ? ಆ ಚಪ್ಪಲಿಗೂ ಅಪ್ಪನಿಗೂ ಇರುವ ಸಂಬಂಧವೇನು? ಆ ಚಪ್ಪಲಿಗೂ ಊರಿಗೂ ಇರುವ ಸಂಬಂಧವೇನು ?

ನೀವು ಓದಿದರೆ ತಿಳಿಯುತ್ತದೆ.

ಒಂದು ತಣ್ಣಗಿನ ಧ್ವನಿಯಲ್ಲಿ ಬೆಂಕಿ ಉಂಡೆಯಂತ ಕತೆಯನ್ನು ಬರೆದಿದ್ದಾನೆ ಒಂದು ಚಪ್ಪಲಿಯನ್ನು ಊರಿಗೂ ಜಾತಿಗೂ ಮಾನವೀಯತೆಗೂ ಇತಿಹಾಸಕ್ಕೂ ತಳುಕು ಹಾಕಿರುವ ರೀತಿ ಅದ್ಭುತ. ಈ ಕತೆಯನ್ನು ಓದಿದಾಗ ನನಗೆ ಮಹಾದೇವರ ಗ್ರಸ್ತರು ಕತೆ ತುಂಬಾ ನೆನಪಾಯ್ತು, ಮೊಗಳ್ಳಿಯವರ ಎಷ್ಟೋ ಪಾತ್ರಗಳು ನೆನಪಾದವು, ಅಲನಹಳ್ಳಿಯವರ ವಿವರಗಳು ನೆನಪಾದವು. ಅಷ್ಟರ ಮಟ್ಟಿಗೆ ಕತೆ ಸಶಕ್ತವಾಗಿದೆ. ಇತ್ತೀಚ್ಗೆ ಬಂದ ಕತೆಗಳಲ್ಲಿ ತೀರಾ ವಾಚ್ಯವಾಗಿಯೂ ಇಲ್ಲ ತಾನು ದಲಿತ ಕತೆಯನ್ನ ಹೇಳುತ್ತಿದ್ದೆನೋ ಎನ್ನುವ ಪೂರ್ವಗ್ರಹವೋ ಇಲ್ಲ ಅತಿ ವಿವರವೋ ಇಲ್ಲ ಅತಿ ಸಹನೆಯೂ ಹೊತ್ತುಕೊಂಡು ಭಾರವಾಗಿರುತ್ತವೆ ಆದರೆ ಮಹಾದೇವರ ಕತೆಗಳಲ್ಲಿ ಅಂತ ಭಾರ ಇರುತ್ತಿರಲಿಲ್ಲ.

ಒಂದೊಳ್ಳೆ ಕಿರುಚಿತ್ರವಾಗುವ ಎಲ್ಲ ಎಲಿಮೆಂಟ್ಸ್ ಈ ಕತೆಯಲ್ಲಿ ದಟ್ಟವಾಗಿದೆ.

ತುಂಬಾ ದಿನಗಳಾದ ಮೇಲೆ ಮತ್ತೆ ಮಹಾದೇವರ ಆಲನಹಳ್ಳಿಯ ಮೊಗಳ್ಳಿ ಗಣೇಶರನ್ನು ನೆನಪಿಸುವಂತಹ ಕತೆ ಓದಿದ ಖುಷಿ ನನಗಿದೆ. ವಿನಯ್ ಮುಂದಿನ ದಿನಗಳಲ್ಲಿ ಇನ್ನಷ್ಟು ನೋವು ಉಂಡವರ ಕುಸಿದುಹೋದವರ ಕಳೆದುಹೋದವರ ಮುಟ್ಟಿಸಿಕೊಳ್ಳರಾದವರ ಕತೆಗಳನ್ನು ಯಾವ ಪೂರ್ವಾಗ್ರಹವಿಲ್ಲದೆ ನಮ್ಮೊಳಗೇ ದಾಟಿಸುತ್ತಾನೆ ಎನ್ನುವ ವಿಶ್ವಾಸವಿದೆ. ಹಾಗಂತ ಇವನ ಕತೆಗಳಲ್ಲಿ ತಪ್ಪುಗಳು ಇಲ್ಲವೆಂದಲ್ಲ, ಕೆಲವು ವಾಕ್ಯಗಳು, ಅಕ್ಷರ ದೋಷಗಳು ಇವೆ, ಜೊತೆಗೆ ಭಾಷೆಯಲ್ಲಿ ಇನ್ನೂ ಸ್ವಲ್ಪ ಹಿಡಿತ ಬೇಕಿದೆ, ಇವೆಲ್ಲ ಅವನಿಗೆ ಸಿದ್ಧಿಸಿದರೆ ಕನ್ನಡಕ್ಕೊಬ್ಬ ಹೊಸ ಕತೆಗಾರ ಸಿಗುತ್ತಾನೆ ಎನ್ನುವ ಭರವಸೆ ನನ್ನದು. ಅವನಿಗೆ ಕತಾಪಯಣದಲ್ಲಿ ಒಳ್ಳೆ ಗುರುವೊಬ್ಬರು ಸಿಗಲೆಂಬ ಪ್ರಾರ್ಥನೆ ಕೂಡ. ಸಾಧ್ಯವಾದರೆ ಕತೆಗಳನ್ನು ಓದೋರು ಬರೆಯೋರು ವಿನಯ್ ನ ಕತೆಗಳನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

‘ವಿದ್ಯಾರ್ಥಿ ಕಥಾ ಪ್ರಶಸ್ತಿಗಾಗಿ’ ವಿನಯ್ ಗುಂಟೆಗೆ ಅಭಿನಂದನೆಗಳು.

ಕಂಗ್ರಾಟ್ಸ್ & ಆಲ್ ದಿ ಬೆಸ್ಟ್ .

‍ಲೇಖಕರು avadhi

May 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ramesh pattan kalanuragi

    ಗೌಡರ ಹೆಂಡತಿ ಸಿಲ್ವರ್ ತಟ್ಟೆ ಕದ್ದ ಸನ್ನಿವೇಶ ಅಸಹಜ ಎನಿಸುತ್ತದೆ.
    ರಮೇಶ ಪಟ್ಟಣ, ಕಲಬುರಗಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: