ಸತೀಶ್ ಚಪ್ಪರಿಕೆ ಹೊಸ ಕೃತಿ: ‘ಘಾಂದ್ರುಕ್’

ಹಿರಿಯ ಪತ್ರಕರ್ತ, ‘ಬುಕ್ ಬ್ರಹ್ಮ’ದ ಸಂಸ್ಥಾಪಕರಾದ ಸತೀಶ್ ಚಪ್ಪರಿಕೆ ಹೊಸ ಕಾದಂಬರಿಯೊಂದಿಗೆ ಓದುಗರ ಮುಂದೆ ಬಂದಿದ್ದಾರೆ.

ಅಂಕಿತ ಪುಸ್ತಕ ಪ್ರಕಟಿಸಿರುವ ‘ಘಾಂದ್ರುಕ್’ ಈ ತಿಂಗಳ 25 ರಂದು (ಭಾನುವಾರ) ಬಿಡುಗಡೆಯಾಗುತ್ತಿದೆ.

‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ, ಹಿರಿಯ ವಿಮರ್ಶಕರೂ ಆದ ಜಿ ಎನ್ ರಂಗನಾಥ ರಾವ್ ಅವರು ಈ ಕೃತಿಯನ್ನು ಪ್ರಕಟನೆಯ ಪೂರ್ವದಲ್ಲಿಯೇ ಓದಿ ವ್ಯಕ್ತಪಡಿಸಿದ ಮಹತ್ವದ ಒಳನೋಟಗಳನ್ನು ‘ಅವಧಿ’ಯ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ.

ಒಂದು ನವ್ಯೋತ್ತರ ‘ನವ್ಯ’ ಕಾದಂಬರಿ

ಪ್ರಜ್ಞಾವಂತರೆಲ್ಲರೂ ಓದಲೇಬೇಕಾದ ಮಹತ್ವದ ಕೃತಿ

ಜಿ.ಎನ್. ರಂಗನಾಥ ರಾವ್

ಹೊಸ ಭಾವನೆಗಳನ್ನು ಸತತವಾಗಿ ಕಾಣುವ, ಕಟ್ಟುವ ಪ್ರಜ್ಞೆಯೇ  ಪ್ರತಿಭೆ. ಈ ಪ್ರತಿಭೆಯ ಉಸಿರಿನಿಂದ ವರ್ಣಿಸಬಲ್ಲ ನಿಪುಣನೇ ಕವಿ ಎನ್ನುತ್ತಾನೆ ನಮ್ಮ ಕಾವ್ಯ ಮೀಮಾಂಸಕನಾದ ಭಟ್ಟತೌತು. ಇದಕ್ಕೆ ನವನವೋನ್ಮಷಶಾಲಿ ಎಂಬ ಪಾಠಾಂತರವೂ ಉಂಟು. ಯುಗದ ಪ್ರಚಲಿತ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದೇ ಆಧುನಿಕ ಕಥನ ಎಂದು ಪಾಶ್ಚಾತ್ಯ ವಿಮರ್ಶೆ ಹೇಳುತ್ತದೆ.

ಪತ್ರಕರ್ತ, ಕಥೆಗಾರ ಸತೀಶ್ ಚಪ್ಪರಿಕೆಯವರ ಇತ್ತೀಚಿನ ಕಾದಂಬರಿ `ಘಾಂದ್ರುಕ್’ ಓದಿದಾಗ ಈ ಮಾತುಗಳು ನೆನಪಿಗೆ ಬಂದವು. ಚಪ್ಪರಿಕೆ ಅವರ ಈ ಕಾದಂಬರಿ ವಸ್ತು, ವಿಷಯ, ಶೈಲಿಯಲ್ಲಿ ವಿನೂತನವೂ ಹೌದು ಅದೇ ರೀತಿ ಸಮಕಾಲೀನತೆಯೊಂದಿಗೆ ಅನುಸಂಧಾನ ನಡೆಸುವ ವಿಶಿಷ್ಟ ಕೃತಿಯೂ ಹೌದು.

`ಫಾಂದ್ರುಕ್’ ನಮ್ಮಲ್ಲಿ  ತೀವ್ರ ಅಸಕ್ತಿ ಹುಟ್ಟಿಸುವುದು ಅದರ ಭೌಗೋಳಿಕ ವಿಸ್ತಾರ ಮತ್ತು ಮಾನವೀಯ ಸಂಬಂಧಗಳ ಆಕರ್ಷಣೆಯಿಂದಾಗಿ. ನಮ್ಮ ದಕ್ಷಿಣ ಕನ್ನಡದಿಂದ ಹಿಡಿದು ಹಿಮಾಲಯದ ತಪ್ಪಲು, ನೇಪಾಳ, ಅಲ್ಲಿನ `ಫಾಂದ್ರುಕ್’ ಎಂಬ ಹಳ್ಳಿ , ಅನ್ನಪೂರ್ಣ ಶಿಖರ, ಗಂಡಕಿ ನದಿ – ಹೀಗೆ ಪ್ರಕೃತಿ, ಸೃಷ್ಟಿ ಮತ್ತು ಮಾನವ ಬದುಕಿನ ಗತ, ಲಯಗಳು ಒಂದರೊಳಗೊಂದು ಬೆಸೆದುಕೊಂಡು ಅನಾವರಣಗೊಳ್ಳುವ ಈ ಕಾದಂಬರಿಯ ಕಥನದಲ್ಲಿ ಒಂದಕ್ಕಿಂತ ಹೆಚ್ಚು ಆಯಾಮಗಳಿವೆ. ಈ ಕಾದಂಬರಿಯ ಮೂಲ ಮೌಲ್ಯಗಳು ಚಿಂತನೆ ಇರುವುದು ನೇಪಾಳವೂ ಸೇರಿದಂತೆ, ಭಾರತೀಯ ಸಂಸ್ಕೃತಿಯಲ್ಲೇ. ಇದಕ್ಕೆ ಆಧುನಿಕ ಯುಗದಲ್ಲಿ ಮೂಡಿರುವ ಆಯಾಮಗಳು ಈ ಬದುಕನ್ನು ಹೆಚ್ಚು ಸಂಕೀರ್ಣಗೊಳಿಸಿವೆ. ಚಿಂತನೆಯಲ್ಲಿ ಸ್ವಲ್ಪ ಗೊಂದಲ ಅರಾಜಕತೆಗಳಿಗೆಡೆ ಮಾಡಿಕೊಟ್ಟಿವೆ. ಹೊಸ ಆಯಾಮಗಳನ್ನೊಳಗೊಂಡ ವರ್ತಮಾನದ ಆಧುನಿಕ ಬದುಕಿನ ಶೋಧವೇ ಕಾದಂಬರಿಯ ಧ್ಯೇಯ ಉದ್ದೇಶಗಳು ಎಂದೇ ಇದನ್ನು ನವ್ಯೋತ್ತರ `ನವ್ಯ’ ಕಾದಂಬರಿ ಎಂದು ಕರೆಯಬಹುದೇನೋ.

ವ್ಯಕ್ತಿಗತ ನೆಲೆಯಿಂದ ಸಾರ್ವತ್ರಿಕ ನೆಲೆಗೆ ಚಾಚಿಕೊಳ್ಳುವ ಈ ಕಾದಂಬರಿಯಲ್ಲಿ ಮುಖ್ಯವಾಗಿ ಈ ಕೆಲವು ಆಯಾಮಗಳನ್ನು ಗುರುತಿಸಬಹುದು. ವರ್ತಮಾನ ಕಾಲದ ಕಾರ್ಪೊರೆಟ್ ಜಗತ್ತು, ಪ್ರಕೃತಿ, ಸೃಷ್ಟಿ- ಬದುಕಿನ ಲಯ ಗತಿಗಳು, ಮಾನವ ಸಂಬಂಧಗಳು, ಧಾರ್ಮಿಕ ಜಿಜ್ಞಾಸೆ ಮತ್ತು  ಜಾಗತಿಕ ಪರಿಸ್ಥಿತಿ.

*******

ಕಾದಂಬರಿಯ ನಾಯಕ ಸಿದ್ಧಾರ್ಥ ಹಳ್ಳಿಯ ಕೃಷಿ ಕುಟುಂಬದಲ್ಲಿ ಹುಟ್ಟಿ, ಎಳವೆಯಲ್ಲೇ ತಾಯಿಯನ್ನು ಕಳೆದುಕೊಂಡು, ತಂದೆಯ ಅಕ್ಕರಾಸ್ಥಗಳಲ್ಲಿ ಬೆಳೆದು ಉನ್ನತ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಐ ಟಿ ಕಂಪನಿಯೊಂದನ್ನು ಸ್ಥಾಪಿಸುತ್ತಾನೆ. ಅವನೇ ಈ ಕಂಪನಿಯ ಸಿ.ಇ.ಒ. ದುಡಿಮೆಯ, ಸಂಪಾದನೆಯ ಉತ್ಸಾಹದಲ್ಲಿ, ಗೆಳತಿಯರ ಜೊತೆ ಮೋಜು ಮೇಜುವಾನಿಗಳ ರಂಜನೆಯಲ್ಲಿ ಬದುಕು ವೈಭವೋಪೇತವಾಗಿರುವಾಗಲೇ ಸಿದ್ಧಾರ್ಥನಿಗೆ ಹೃದಯಾಘಾತವಾಗುತ್ತದೆ. ಇದರಿಂದ ಪಾರಾಗುತ್ತಾನೆ. ಮುಂದೆ ಕಂಪನಿಯಲ್ಲಿ ನಡೆಯುವ ಹೃದಯಾಘಾತದಷ್ಟೇ ಮಾರಕವಾದ ಒಂದು ಘಟನೆಯಿಂದಾಗಿ ಜರ್ಝರಿತನಾಗುತ್ತಾನೆ. ಸ್ಥಾಪಿತ ಕಂಪನಿಗಳಲ್ಲಿ ಹೊರಗಿನವರು ಕೋಟಿಗಟ್ಟಳೆ ಬಂಡವಾಳ ಹೂಡಿ ಕೊನೆಗೆ ಕಂಪನಿಯ ಷೇರುಗಳನ್ನು ಲಪಟಾಯಿಸಿ ಸಂಸ್ಥಾಪಕರನ್ನು ಹೊರಡೂಡುವುದು ಕಾರ್ಪೊರೆಟ್ ವಲಯದ ಇಂದಿನ ವಿದ್ಯಮಾನ. ಇದರಂತೆ ಸಿದ್ಧಾರ್ಥನೂ ವಂಚನೆಗೊಳಗಾಗುತ್ತಾನೆ.

ಇದರೊಟ್ಟಿಗೆ ತಂದೆಯ ಅನಾರೋಗ್ಯವೂ ಸೇರಿಕೊಳ್ಳುತ್ತದೆ. ಸಿ.ಇ.ಒ. ಹುದ್ದೆಗೆ ರಾಜಿನಾಮೆ ಕೊಡುತ್ತಾನೆ. ತಂದೆಯ ನಿಧನಾನಂತರ ಒಂದು ದಿನ ಮನೆಬಿಟ್ಟು ತನ್ನನ್ನು ತಾನು ಅರಿತುಕೊಳ್ಳುವ ಪ್ರಯತ್ನನವಾಗಿ `ಬುದ್ಧನಾಗಲುನೇಪಾಳದ ಯಾತ್ರೆ ಕೈಗೊಳ್ಳುತ್ತಾನೆ. ಅನ್ನಪೂರ್ಣ ಪರ್ವತ ಶ್ರೇಣಿಯ ಹೈಕಿಂಗ್‌ನಲ್ಲಿ ಬದುಕಿನ ಅರ್ಥ, ಸತ್ಯ, ವಿಸ್ತಾರಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.

`ಘಾಂದ್ರುಕ್’ ಬದುಕಿನ ಪಯಣದ ಸಂಕೇತ. ಸಿದ್ಧಾರ್ಥ ಅನ್ನಪೂರ್ಣ  ಸರ್ಕೀಟ್ ನಲ್ಲಿ ಹಾಗೂ ನೇಪಾಳದ ಇತರ ಸ್ಥಳಗಳಲ್ಲಿ ನಡೆಸುವ ಪರ್ಯಟನದಲ್ಲಿ ಅವನ ಜೊತೆ ಪ್ರಕೃತಿ, ಸೃಷ್ಟಿ ಮತ್ತು ಬದುಕಿನ ಗತಿ ಲಯಗಳು ಕೈಕೈ ಹಿಡಿದೇ ಸಾಗುತ್ತವೆ. ಈ ಪಯಣದಲ್ಲಿ ಪ್ರಕೃತಿಯ ರಮಣೀಯತೆ ಮತ್ತು ಅಗಾಧತೆ, ಸೃಷ್ಟಿಯ ನಿಗೂಢಗಳು, ಇಲ್ಲಿನ ಬದುಕಿನ ಲಯಗತಿಗಳ ವಿರಾಟ ರೂಪದ ದರ್ಶನವಾಗುತ್ತದೆ. ಸಿದ್ಧಾರ್ಥನ ಬದುಕಿನ ವಿವರಗಳ ಸುರುಳಿ ಹಿಮ್ಮಂಚಿ-ಮುಮ್ಮಿಂಚುಗಳಲ್ಲೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಈ ಪಯಣದ ಓಘ ಹೊಸ ಪರಿಚಯಗಳಲ್ಲಿ, ಅವರ ಜೊತೆ ಮದ್ಯಪಾನ, ಪ್ರಣಯಗಳಲ್ಲಿ ತೀವ್ರವಾದ ರಭಸದ ಗತಿಯನ್ನು ಪಡೆದುಕೊಳ್ಳುತ್ತದೆ. ಪ್ರಕೃತಿ ಮತ್ತು ಸೃಷ್ಟಿಯ ಸಹಜ ಕರೆಯೋ ಪ್ರೇರಣೆಯೋ ಎಂಬಂತೆ ಹೊಸ ಪರಿಚಯದ ಹೆಣ್ಣು-ಗಂಡುಗಳಲ್ಲಿ ಲೀಲಾಜಾಲವಾಗಿ, ಬೆರೆಯುತ್ತಾನೆ. ಮುಕ್ತವಾಗಿ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಾನೆ. ಬದುಕಿನ ಲಯಗತಿಗಳನ್ನು ಕಂಡುಕೊಳ್ಳುತ್ತಾನೆ. ಹೀಗೆ ಪ್ರಕೃತಿ-ಸೃಷ್ಟಿಗಳು ಅವನ ಬದುಕಿನ ಪಯಣದ ಭಾಗಗಳಾಗಿ ಬಿಡುತ್ತವೆ.

ಇಲ್ಲಿ ಪ್ರಕೃತಿ-ಸೃಷ್ಟಿಗಳು ಮತ್ತು ಬದುಕಿನ ಗತಿಲಯಗಳು ತೆರೆದುಕೊಳ್ಳುವುದೇ ಮಾನವೀಯ ಸಂಬಂಧಗಳ ಮುಖಾಮುಖಿಯಿಂದಾಗಿ. ಅಗ್ರೇಸರ ಸಿದ್ದಾರ್ಥನ ಮಾನವೀಯ ಸಂಬಂಧಗಳ ಅನುಭವ ಶುರುವಾಗುವುದು ಕೌಟುಂಬಿಕ ಆಪ್ತ ನೆಲೆಯಲ್ಲೇ. ನಂತರ ಅದು ವಿಶ್ವವ್ಯಾಪಿಯಾಗಿ ಹೊಸಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಬಚ್ಚಲಲ್ಲಿ ಬೆತ್ತಲೆಗೊಳಿಸಿ ಸ್ನಾನ ಮಾಡಿಸುವ ಅಜ್ಜಿ, ಸ್ನೇಹಿತನಂತೆ ಕಾಣುವ ತಂದೆ, ಚಿಕ್ಕಪ್ಪ, ತಮ್ಮ – ಹೀಗೆ ಇವರುಗಳ ಆಪ್ತತೆಯಲ್ಲಿ ಹಿತವಾಗುವ ಸಂಬಂಧ ಒಂದು ಮಜಲು. ಮುಂದೆ ಪಾಂಡು, ಫಣೀಂದ್ರ, ಗೌರವ್ ಮೊದಲಾದ ಸ್ನೇಹಿತರು, ರೋಹಿತ್ ಬನ್ಸಾಲ್, ಕಂಪನಿಯ ಒಡನಾಡಿಗಳು, ಕೊನೆಯಲ್ಲಿ ಬರುವ ಮೇಜರ್ ಸಾಬ್  ಇವರೊಂದಿಗಿನ ಸಂಬಂಧ ಮತ್ತೊಂದು ಮಜಲಿನದು.

ಸುಚಿತ್ರಾ, ನಿಶ್ಚಲ, ಲೂಸಿ ಮತ್ತು ಸೋಫಿಯಾ ಜೊತೆಗಿನ ಸಂಬಂಧಗಳು ಅವನನ್ನು ತೀವ್ರವಾಗಿ ಬದುಕಿನ ಜಿಜ್ಞಾಸೆಯಲ್ಲಿ ತೊಡಗಿಸುವ ಇನ್ನೊಂದು ಬಗೆಯ ಸಂಬಂಧಗಳು. ಈ ಸಂಬಂಧಗಳನ್ನು ಕಾಣುವುದರಲ್ಲಿ, ಬೆಳೆಸುವುದರಲ್ಲಿ ಅವನದೇ ಆದ ಪ್ರಬುದ್ಧ ದೃಷ್ಟಿಕೋನವಿದೆ.ಅದು ಚಿಕ್ಕ ಪ್ರಾಯದಲ್ಲೇ ಕಂಡುಂಡ ಅನುಭದಿಂದ ಬಂದದ್ದು.

ಮಾತುಗಳನು ಗಮನಿಸಿ:

“…ಬದುಕೇ ಹೀಗಲ್ಲವೆ? ಒಮ್ಮೆ ಒಂದಾಗಿ ಕಾಣುವುದು, ಮತ್ತೊಮ್ಮೆ ಮತ್ತೊಂದಾಗಿ ಕಾಣುತ್ತದೆ. ಒಮ್ಮೆ ಹಸಿರು, ಇನ್ನೊಮ್ಮೆ ಕಪ್ಪು, ಮತ್ತೊಮ್ಮೆ ಬಿಳುಪು, ಮಗದೊಮ್ಮೆ ಕಂದು, ಕೆಲವೊಮ್ಮೆ ನೀಲಿ…

ಹೇಗೆ ಮುಖವಾಡ ಬದಲಿಸಿಕೊಂಡು, ಬಣ್ಣ ಬದಲಿಸಿ ಸಾಗುತ್ತದಲ್ಲ ಈ ಬದುಕು?

ಅಥವಾ ಈ ಮನುಷ್ಯ!

ಎಷ್ಟೊಂದು ಬಣ್ಣ,

ಎಷ್ಟೊಂದು ಮುಖವಾಡ, ಎಷ್ಟೊಂದು ಗೋಸುಂಬೆತನ…ಅದನ್ನೆಲ್ಲ ಕಳಚಿಕೊಳ್ಳಬೇಕು. ಮುಖವಾಡದ ಒಂದೊದೇ ಪದರವನ್ನು ಕಿತ್ತೆಸೆಯುತ್ತ ಮುಂದೆ ಸಾಗಬೇಕು. ಸಾಗುತ್ತಾ ಸಾಗುತ್ತಾ ಬದುಕಲ್ಲಿ ಬೆತ್ತಲಾಗಬೇಕು. ಮನುಷ್ಯನಾಗಬೇಕು…”

ಅನ್ನಪೂರ್ಣ ಹಾದಿಯಲ್ಲಿ ಕೈಗೊಳ್ಳುವ ಈ ನಿರ್ಧಾರ ಪ್ರಾಮಾಣಿಕವಾದದ್ದು ಎಂಬುದು ಹೆಣ್ಣುಗಳ ಕಾಮ ಸಂಬಂಧದಲ್ಲಿ, ಕುಟುಂಬದವರೊಂದಿಗಿನ ರಕ್ತ ಸಂಬಂಧಗಳೊಂದಿಗಿನ ಅವನ ನಡವಳಿಕೆಯಲ್ಲಿ ಸಾಬೀತಾಗುತ್ತದೆ.

ಹೊಸ ಸಂಬಂಧಗಳಲ್ಲಿ ನಾಲ್ವರು ಮಹಿಳೆಯರು ಅವನ ಬದುಕಿನೊಂದಿಗೆ ಚೆಲ್ಲಾಟ ವಾಡುತ್ತಾರೆ- ಸುಚಿತ್ರಾ, ನಿಶ್ಚಲ, ಲೂಸಿ ಮತ್ತು ಸೋಫಿಯಾ. ಲೂಸಿ ಲೈಂಗಿಕ ಸಮಾಗಮಕ್ಕೆ ಆಹ್ವಾನಿಸಿದಾಗ, ಸ್ವಲ್ಪ ಯೋಚನೆಯ ನಂತರ “ಇಷ್ಟು ಬೇಗ ಬೇಡ. ಕಾಲ ಇನ್ನೂ ಪಕ್ವವಾಗಬೇಕು ಅನ್ನಿಸ್ತಾ ಇದೆ” ಎಂದು ನಯವಾಗಿ ನಿರಾಕರಿಸುತ್ತಾನೆ. ಲೂಸಿಯಾಳ ಕರೆಯನ್ನ ತಿರಸ್ಕರಿಸಿದ ಸಿದ್ದಾರ್ಥನಿಗೆ ಸುಚಿತ್ರಾ ಚಕ್ರಪಾಣಿಯ ನೆನಪಾಗುತ್ತದೆ. ಸುಚಿತ್ರಾ `ನೈಲ್’ ಸ್ಟಾರ್ಟ್ ಅಪ್ ಕಂಪೆನಿಯ ಮಾಲೀಕಳು. ಮೊದಲ ಭೇಟಿ ನೋಟಗಳಲ್ಲೇ ಸಿದ್ದಾರ್ಥನಿಂದ ಆಕರ್ಷಿತಳಾದ ಅವಳು ವಿಧವೆ ಎನ್ನುವುದು ನಂತರ ಗೊತ್ತಾಗುತ್ತೆ. ಸಿದ್ಧಾರ್ಥನನ್ನು ಮದುವೆಯೂ ಆಗುತ್ತಾಳೆ. ಆದರೆ ಎಷ್ಟೇ ಪ್ರೀತಿಸಿದರೂ ಹಾಸಿಗೆಯಲ್ಲಿ ಅವನ ಜೊತೆ ಕೂಡಲಾಗುವುದಿಲ್ಲ-

“ಸಿಧ್, ಹೇಗೆ ಹೇಳಬೇಕೊ ನನಗೆ ಗೊತ್ತಾಗುತ್ತಿಲ್ಲ. ನಂಗ್ಯಾಕೋ ನಿನ್ನ ಜೊತೆ ದೈಹಿಕವಾಗಿ ಒಂದಾಗಲು ಸಾಧ್ಯವಾಗುತ್ತಿಲ್ಲ. ನಾವು ನಾಲ್ಕೈದು ಬಾರಿ  ಹತ್ತಿರವಾದಾಗಲೂ ನನ್ನ ಮೊದಲ ಗಂಡ ವಿನೋದ್ ಮುಖವೇ ಎದುರು ಬಂದು ನಿಲ್ಲುತ್ತಿತ್ತು”

ಎನ್ನುತ್ತಾಳೆ. ಸಿದ್ಧಾರ್ಥನೂ  ಸುಚಿತ್ರಾಳಲ್ಲಿ ಮೋಹಿತನೇ.  ಆದರೆ ಈ ಮೋಹ ಅವನನ್ನು ಆಕ್ರಮಣಕಾರಿಯನ್ನಾಗಿ ಮಾಡುವುದಿಲ್ಲ-

ಡೋಂಟ್ ವರಿ. ನಾವಿಬ್ಬರು ಸೇರಿಯೇ ಈ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳೋಣ ಎಂದು ಸಮಾಧಾ ಪಡಿಸುತ್ತಾನೆ.” ಅವನ ಪ್ರಯತ್ನವನ್ನೂ ಮೀರಿ ಇಬ್ಬರೂ ವಿಚ್ಛೇದನ ಎಂಬ ಪ್ರೌಢ ನಿರ್ಧಾರ ತೆಗೆದುಕೊಳ್ಳುತ್ತಾರೆ.

ನಿಶ್ಚಳಳೊಂದಿಗಿನ ಇವನ ಸಂಬಂಧ ಆಧುನಿಕ ಲೋಕದ ಮತ್ತೊಂದು ಮುಖವನ್ನು ತೆರೆದು ನಿಲ್ಲಿಸುತ್ತದೆ.

ಸೋಫಿಯಾಳೊಂದಿಗಿನ  ಸಿದ್ದಾರ್ಥನ ಸಂಬಂಧ ಒಂದು ರೀತಿಯಲ್ಲಿ ಕಾದಂಬರಿಯ ಪರಾಕಾಷ್ಠೆ, ಶಿಖರಪ್ರಾಯವಾದುದು. ಅವರಿಬ್ಬರದೂ ಸಂಕೀರ್ಣವಾದ ಸಂಬಂಧ. ಅದರಲ್ಲೂ ಪ್ರೀತಿ ಇದೆ, ಕಾಮದ ಸೆಳೆತವಿದೆ. ಜೊತೆಗೆ ಇವರಿಬ್ಬರನ್ನೂ ಹತ್ತಿರಕ್ಕೆ ತರುವ ಕೆಲವು ಬೌದ್ಧಿಕ ಎಳೆಗಳೂ ಇವೆ.

ಬೌದ್ಧ ಮಂದಿರ, ಕಣ್ಣೀರಾಗಿ ಕಾಡಿದ ಅಪ್ಪಯ್ಯ. ಝೆಸ್ಟ್ ಇಂಟಲಿಜೆನ್ಸ್ ಕಂಪನಿ, ಸ್ವಯಂಕೃತ ಅಪರಾಧಗಳು ಈ ನೆನಪುಗಳನೆಲ್ಲ ಮೆಲುಕು ಹಾಕುತ್ತಾ ಸಾಗಿದ್ದಾಗ ತಲೆ ಸುತ್ತಿದಂತಾಗಿ ಕಣಿವೆಗೆ ಬಿದ್ದಾಗ  ಅವನನ್ನು ಪಾರು ಮಾಡುವವಳು ಸೋಫಿಯಾ.

ಹೀಗೆ ಪರಿಚಯವಾದ ಸೋಫಿಯಾಳಲ್ಲಿ ಅಮ್ಮನ ಅಕ್ಕರೆ, ಆತಂಕ, ಒಲವುಗಳನ್ನು ಕಂಡು ಸ್ವಲ್ಪ ಭಾವುಕನಾಗುತ್ತಾನೆ. ಆದರೂ ಈ ಸೋಫಿಯಾಳೂ ಅವನ ಬಾಳಿನಲ್ಲಿ ಬಂದು ಹೋದ ಹಾದಿ ಹೋಕ ಹೆಣ್ಣು ಸಂಗಾತಿಗಳಂತಿರಬಹುದೆ ಎಂಬ ಅನುಮಾನ ಮೂಡುತ್ತದೆ. ಅವಳೊಡನೆ ಸಂಬಂಧದ ನಿರ್ವಹಣೆಯೂ ಪುಟಗಳನ್ನು ಹಾರಿಸಬೇಕು ಎನ್ನುವಷ್ಟು ಅತೃಪ್ತಿಕರವಾದದ್ದು. ಆದರೆ ಸೋಫಿಯಾಳ ಶುಶ್ರೂಷೆ, ಉಪಚಾರಗಳಲ್ಲಿ ಆಪ್ತತೆ ಮೂಡುತ್ತದೆ. ಸೋಫಿಯಾ ಕನ್ಫೆಷನ್ ಮಾದರಿಯಲ್ಲಿ ತನ್ನ ಲೈಂಗಿಕ ಜೀವನ ಹಾಗೂ ಇತರರ ವಿವರಗಳನ್ನು ಸಿದ್ದಾರ್ಥನಿಗೆ ಒಪ್ಪಿಸುತ್ತಾಳೆ. ಇಬ್ಬರೂ ತಮ್ಮ ಜೀವನಗಾಥೆಯನ್ನು  ಹಂಚಿಕೊಳ್ಳುತ್ತಾರೆ. ಈ ಪ್ರಕ್ರಿಯೆಯಲ್ಲಿ ಸೋಫಿಯಾ ಅವನಿಗೆ ಉಳಿದ ಹೆಣ್ಣುಗಳಂತೆ ಹಾಸಿಗೆ ಸಂಗಾತಿ ಮಾತ್ರ ಆಗುವುದಿಲ್ಲ ಬೌದ್ಧಿಕ ಸಂಗಾತಿಯೂ ಆಗಬಲ್ಲಳು ಎಂಬುದು ಸ್ಪಷ್ಟವಾಗುತ್ತದೆ. ಇಬ್ಬರೂ ದೇವರು, ಧರ್ಮ, ಜಾಗತಿಕ ಪರಿಸ್ಥಿತಿಗಳನ್ನು ಕುರಿತು ತೀವ್ರವಾಗಿ ಚರ್ಚಿಸುತ್ತಾರೆ, ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ.

ಗಂಡು-ಹೆಣ್ಣುಗಳ ಸಂಬಂಧಂತೆಯೇ ಮನುಷ್ಯ ಸಂಬಂಧಗಳೂ ಅವನು ಬದುಕಿನ ಬಗ್ಗೆ ಗಾಢವಾಗಿ ಚಿಂತಿಸುವಂತೆ ಮಾಡುತ್ತವೆ. ಕಂಪೆನಿಯ ಶೇರುದಾರರ  ಕಡೆಯವನಾದ ಬನ್ಸಾಲ್  ನೀಡುವ ಆಘಾತದಂತೆಯೇ ತಂದೆಯ ಮರಣಕಾಲದಲಿ ನಾಟಕೀಯವಾಗಿ ಪ್ರತ್ಯಕ್ಷವಾಗುವ ತಾಯಿ-ಮಗಳು ಯಾರೆಂದು ಅವನಲ್ಲಿ ಪ್ರಕ್ಷುಬ್ಧತೆ ಉಂಟು ಮಾಡುತ್ತದೆ. ಅವರು ತನ್ನ ಮಲತಾಯಿ ಮತ್ತು ಮಲ ತಂಗಿ ಎಂದು ತಿಳಿದಾಗ ಅಪ್ಪ ಇದನ್ನು ತನ್ನಿಂದ ಮುಚ್ಚಿಟ್ಟಿದ್ದೇಕೆ ಎಂದು ಕೋಪಗೊಂಡರೂ ಅವರಿಬ್ಬರ ಬಗ್ಗೆ ಅವನಲ್ಲಿ ಮಾನವೀಯ ಸಂಬಂಧ ಜಾಗೃತಗೊಳ್ಳುತ್ತದೆ. ಅವರನ್ನು ತಾಯಿ-ತಂಗಿಯರಂತೆ ಕಾಣುವ ಪ್ರಬುದ್ಧತೆಯನ್ನ ಮೆರೆಯುತ್ತಾನೆ.

ಹೀಗೆ ಮನುಷ್ಯ ಸಂಬಂಧಗಳು ಕೃತಿಯಲ್ಲಿ ತುಂಬ ಸಂಯಮದಿಂದ ಪರಸ್ಪರ ಅರಿತುಕೊಳ್ಳುವ ಪ್ರಾಮಾಣಿಕತೆಯಲ್ಲಿ ವ್ಯಕ್ತವಾಗುತ್ತದೆ.

******

ಕಾದಂಬರಿಯುದ್ದಕ್ಕೂ ಬರುವ ಸೃಷ್ಟಿ, ಪ್ರಕೃತಿ, ಗಂಡಕಿ ನದಿ, ಮುಕ್ತಿನಾಥನ ದರ್ಶನಕ್ಕೆ ಬರುವ ಹಿಂದು- ಬೌದ್ಧ ಯಾತ್ರಾರ್ಥಿಗಳು – ಇವೆಲ್ಲವೂ ಕೃತಿಗೆ ಒಂದು ಆಧ್ಯಾತ್ಮಿಕ ಆವರಣವನ್ನೂ ಕಟ್ಟಿಕೊಡುತ್ತವೆ. ಇದು ಸಿದ್ಧಾರ್ಥ, ಸೋಫಿಯಾರಂಥವರ ಆತ್ಮಜ್ಞಾನ ಪ್ರಕಾಶಕ್ಕೆ, ಧರ್ಮ ಜಿಜ್ಞಾಸೆಗೆ ಸಹಕಾರಿಯಾಗುವಂಥ ಆಧ್ಯಾತ್ಮಿಕ ಆವರಣ. ತಾನು ಹುಟ್ಟಿನಿಂದ ಜೈನ ಎಂದು ಸಿದ್ದಾರ್ಥ ಲೂಸಿ ಜಾರ್ಜಳಿಗೆ ಹೇಳಿದಾಗ ಅವಳಲ್ಲಿ ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳ ಬಗ್ಗೆ ಇದ್ದ ಆಸಕ್ತಿ ಗರಿಗೆದರುತ್ತದೆ. ಈ ಧರ್ಮಗಳ ಬಗ್ಗೆ ತನ್ನ ಜ್ಞಾನ-ಅಜ್ಞಾನಗಳನ್ನು ಪ್ರದರ್ಶಿಸುತ್ತಾಳೆ.

“ಜೈನ ಧರ್ಮದ ಆಗಿನ ಪ್ರಚಾರಕರು ಸ್ವಲ್ಪ  ಸಡಿಲ ನಿಲುವು ತಳೆದಿದ್ದರೆ ಇಂದು ಕೂಡ ಜೈನ ಧರ್ಮ ಪ್ರಪಂಚದುದ್ದಕ್ಕೂ ಹರಡಿ ಬೌದ್ಧ ಧರ್ಮದಷ್ಟೆ ಪ್ರಭಾವಶಾಲಿಯಾಗಿ ಉಳಿಯುವ ಸಾಧ್ಯತೆಯಿತ್ತು ಆದರೆ ಹಾಗಾಗಲಿಲ್ಲ

ಎನ್ನುವುದು ಅವಳ ಅಭಿಮತ. ಸಿದ್ಧಾರ್ಥನ ನಿಲುವು ಇನ್ನೂ  ನಿಸ್ಸಂದಿಗ್ಧವಾದದ್ದು:

“ಇದು ನನ್ನ ವೈಯಕ್ತಿಕ ಅಭಿಪ್ರಾಯ. ಅಹಿಂಸೆಯ ಬಗ್ಗೆ ಜೈನ ಧರ್ಮದ ಸ್ಥಾಪಕರು ಮತ್ತು ಅದರ ಪ್ರಚಾರಕರಿಗಿದ್ದ ಅಪಾರ ಬದ್ಧತೆಯೇ ಆ ಧರ್ಮದ ಕುಸಿತಯಕ್ಕೆ ಕಾರಣವಾಯಿತು. ಜೊತೆ-ಜೊತೆಗೆ ಜೈನ ಧರ್ಮದ ಹಲವು ಕಠಿಣ ನಿಲುವುಗಳು- ಆಚರಣೆಗಳು- ಸಂಪ್ರದಾಯಗಳು ಕೂಡಾ ಜನರಿಂದ ಅದು ದೂರವಾಗಲು ಕಾರಣಗಳಾದವು. ಆ ನಿಟ್ಟಿನಲ್ಲಿ ಸ್ವಲ್ಪ ಲಿಬರಲ್ ಆಗಿ  ಮನುಷ್ಯ ಪರವಾಗಿದ್ದ ಬೌದ್ಧ ದರ್ಮ ಒಂದು ಥರಾ ಇನ್ ಕ್ಲೂಸಿವ್ ಆಗಿ ಪ್ರಪಂಚದೆಲ್ಲಡೆ ವ್ಯಾಪಿಸುತ್ತಾ ಹೋಯಿತು. ಜೈನ ಧರ್ಮ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿ ಉಳಿಯಿತು….”

ಇಬ್ಬರಿಗೂ ಪ್ರಪಂಚದಲ್ಲಿ ಇವತ್ತು ಯಾವ ಧರ್ಮವೂ ಧರ್ಮವಾಗಿ ಉಳಿಯದೇ, ರಾಜಕೀಯದ, ರಾಜಕೀಯ ಪಕ್ಷಗಳ, ರಾಜಕಾರಣಿಗಳ ಪ್ರಬಲ ಅಸ್ತ್ರವಾಗಿರುವ ಕಠೋರ ವಾಸ್ತವಿಕತೆಯ ಅರಿವಿದೆ. ಮುಕ್ತಿನಾಥನ ದೇವಸ್ಥಾನದಲ್ಲಿ ಸಿದ್ದಾರ್ಥ ಮತ್ತು ಸೋಫಿಯಾ ನಡುವಣ ಚರ್ಚೆಯಲ್ಲಿ ದೇವರು- ಧರ್ಮಗಳ ಜಿಜ್ಞಾಸೆ ಇನ್ನೂ  ಹೆಚ್ಚು ಸೂಕ್ಷ್ಮತೆಯನ್ನೂ ಗಾಂಭೀರ್ಯತೆಯನ್ನೂ ಪಡೆದುಕೊಳ್ಳುತ್ತದೆ.

“ಜೀವನದ ಯಾವುದೇ ಹಂತದಲ್ಲಿ ನೀನು ಜನ್ಮ ತಳೆದ ಜೈನ ಧರ್ಮವನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ  ನಿನ್ನ ಮೇಲೆ ಯಾರೂ, ಯಾವತ್ತೂ ಒತ್ತಡ ಹಾಕಲಿಲ್ವಾ?”

ಇದು ಸಫಿಯಾಳ ಪ್ರಶ್ನೆ. ದಕ್ಕೆ ಸಿದ್ಧಾರ್ಥನ ಉತ್ತರ:

“ಬಾಲ್ಯದ ಏಳೆಂಟು ವರ್ಷಗಳ ಕಾಲ ಆ ಬಗ್ಗೆ ಏನೂ ಗೊತ್ತಿರಲಿಲ್ಲ. ಹೊಸ್ಮನೆಯಲ್ಲಿದ್ದ ಅ ಸಂದರ್ಭದಲ್ಲಿ  ನನಗಂತೂ ನಾವು ಪ್ರತ್ಯೇಕವಾದ ಜೈನ ಧರ್ಮಕ್ಕೆ ಸೇರಿದವರು ಅನ್ನೋ ಭಾವನೆ ಮೂಡಲು ಅವಕಾಶವೇ ಇರಲಿಲ್ಲ. ಅಲ್ಲಿನ ವಾತಾವರಣ ಹೇಗಿತ್ತೆಂದರೆ ಕೃಷಿ ಮಾಡೋದೆ ನಮ್ಮ ಧರ್ಮ ಅಂತ ಎಲ್ಲರೂ ಅನ್ಕೊಂಡಿದ್ದರು. ನೀನು ಯಾವ ಜಾತಿ, ಯಾವ ಧರ್ಮ ಅಂತ ಯಾರೂ ಅಷ್ಟಾಗಿ ತಲೆ ಕೆಡಸಿಕೊಳ್ಳುತ್ತಿರಲಿಲ್ಲ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಬದುಕು ಕಟ್ಟಿಕೊಳ್ಳುವುದೇ ಜೀವನವಾಗಿತ್ತು. ಮನೆಯೊಳಗೆ ಸ್ವಲ್ಪ ಮಡಿಗಿಡಿ ಬಿಟ್ಟರೆ ಹೊರಗೆ ಎಲ್ಲ ಮಕ್ಕಳೂ ಒಂದೇ ಕುಟುಂಬಕ್ಕೆ ಸೇರಿದವರಂತೆ ಇದ್ವಿ. ಈ ಧರ್ಮ, ಜಾತಿಯ ಹುಚ್ಚು, ಮೇಲು-ಕೀಳಿನ ಭಾವನೆ ನಗರಗಳಲ್ಲಿರುವ  ವಿದ್ಯಾವಂತ ಅಪ್ಪರ್ ಮಿಡ್ಲ್ ಕ್ಲಾಸ್ ನಲ್ಲಿ ಇದ್ದಷ್ಟು ನಮ್ಮೂರಲ್ಲಂತೂ ಇರಲಿಲ್ಲ. ಅದರಲ್ಲಂತೂ  ಈಗೀಗ ಈ ಒಡೆದು ಬದುಕುವ ಭಾವನೆಗಳು ವಿಜೃಂಭಿಸುತ್ತವೆ.”

ಇದಕ್ಕೆ ಸೋಫಿಯಾ,

ಇಂಡಿಯಾದ ಹಳ್ಳಿಗಳಲ್ಲಿ ಧರ್ಮ-ಜಾತಿ,ಅಸಮಾನತೆಗಳು ವಿಜೃಂಭಿಸುತ್ತಾ ಇದೆ ಅನ್ನುವ ಭಾವನೆ ಇದೆ”

ಎಂದು ವಿಸ್ಮಯಿಸುತ್ತಾಳೆ. ಇಂಥ ಸಾಮುದಾಯಿಕ ಜೀವನದ  ಪರಿಸರದಲ್ಲಿ. ಮನೆಯಲ್ಲಿ `ಣಮೋಕಾರ’ ಕಲಿಯಿರಿ ಎಂಬ ಒತ್ತಡವಿಲ್ಲದ ಮನೆಯ ವಾತಾವರಣದಲ್ಲಿ ಬೆಳೆದವನು ಸಿದ್ಧಾರ್ಥ.

“ಹಿಂದೂ ಧರ್ಮದ ಪಾಲಿಗೆ ಅದರದೇ ಆದ ಜಾತಿ ವ್ಯವಸ್ಥೆ, ವರ್ಣ ಪದ್ಧತಿ, ಮೇಲು-ಕೀಳಿನ ಕಡಿವಾಣವೇ ಶಾಪವಾಯಿತು. ಅಹಿಂಸೆಗೆ ಜೈನ ಧರ್ಮ ಕಟ್ಟುನಿಟ್ಟಾಗಿ  ಅಂಟಿಕೊಂಡಿದ್ದರಿಂದ  ಅದು ಇದ್ದ ಸ್ಥಳಕ್ಕೇ ಸೀಮಿತಗೊಂಡಿತು. ವಾಸ್ತವಕ್ಕೆ ಹೊಂದಿಕೊಂಡು ಮುನ್ನಡೆದ ಬೌದ್ಧ ಧರ್ಮ ಕ್ರಿಶ್ಚಿಯಾನಿಟಿ ,ಇಸ್ಲಾಂಗೆ ಹಿಂಸೆ, ಕ್ರೌರ್ಯದಲ್ಲೂ ಕೂಡಾ ಪೈಪೋಟಿ ನೀಡಿ ಜಗತ್ತಿನಲ್ಲೆಡೆ ಪಸರಿಸಿ  ನಿಂತಿತು.”

 -ಇದು ಕ್ರಿಶ್ಚಿಯಾನಿಟಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಒತ್ತಡವಿದ್ದ ಕುಟುಂಬದಲ್ಲಿ ಹುಟ್ಟಿದ ಸೋಫಿಯಾಳ ಅನ್ನಿಸಿಕೆ. ಇದಕ್ಕೆ ಸಿದ್ಧಾರ್ಥ ಬರೆಯುವ ಭರತ ವಾಕ್ಯವೆಂದರೆ:

“ನನಗರ್ಥವಾಗದ ವಿಷಯವೇನೆಂದರೆ… ಮನುಷ್ಯನಿಗೆ ಮನುಷ್ಯತ್ವ, ಪ್ರೀತಿಯನ್ನು ಕಲಿಸದೆ, ಹಿಂಸೆ ದ್ವೇಷಗಳನ್ನೇ ಕಲಿಸುವ ಧರ್ಮಗಳಿದ್ದು ಮಾನವ ಕುಲಕ್ಕೆ ಏನು ಪ್ರಯೋಜನ ಅಂತ?”

ಇದು ಈ ಶತಮಾನಕ್ಕೆ  ಅಗತ್ಯವಾದ, ಮಾನವ ಕುಲದ ಹೊಸ ಕುಡಿಗಳ ಧ್ವನಿ-ಇಂಗಿತಗಳಿಗೆ ಹಿಡಿದ ಕನ್ನಡಿ.

*******

`ಘಾಂದ್ರುಕ್’ ಕಾದಂಬರಿಯ ಕೇಂದ್ರ ಪ್ರಜ್ಞೆ ಭಾರತೀಯ, ವಿಶೇಷವಾಗಿ ಜೈನ ಧರ್ಮ ಮೂಲದ್ದು. ಆದರೆ ಅನ್ಯ ದೇಶಗಳ ಧರ್ಮ. ಸಂಸ್ಕೃತಿ, ಧರ್ಮ ರಾಜಕಾರಣ, ನಾಗರಿಕತೆ ಮತ್ತು ಯುದ್ಧೋನ್ಮಾದಗಳು ದಡಕ್ಕೆ ಅಪ್ಪಳಿಸುವ ಬೋರ್ಗರೆವ ಅಲೆಗಳಂತೆ ಈ ಪ್ರಜ್ಞೆಯನ್ನು ಕಲಕುತ್ತವೆ. ಅದೂ ವಿದೇಶಿ ಪಾತ್ರಗಳ  ಚಿಂತನೆ ಮೂಲಕ .ಇದು ಕೇಂದ್ರ ಪ್ರಜ್ಞೆಯೊಂದಿಗೆ ಅನುಷಂಗಿಕವಾದುದೇ. ಸೋಫಿಯಾ ಯು ಎನ್ ಎಚ್ ಸಿ ಆರ್ ನಲ್ಲಿ ಉದ್ಯೋಗಿಯಾಗಿದ್ದವಳು. ಅವಳ ಮುಖೇನ ಸಿರಿಯಾ, ಆಫ್ಘನಿಸ್ಥಾನ, ಪಾಕಿಸ್ತಾನ, ಸಿರಿಯ- ಟರ್ಕಿ, ಮ್ಯಾನ್ಮಾರ್‍ ಮೊದಲಾದ ದೇಶಗಳಲ್ಲಿನ  ರಾಜಕಾರಣ, ಧರ್ಮಾಂಧ ರಾಜಕಾರಣ, ಆದೇಶಗಳಲ್ಲಿ  ನಡೆಯುವ ದಂಗೆಗಳು ಮೊದಲಾದವು ತೆರೆದುಕೊಳ್ಳುತ್ತವೆ. ಸಿರಿಯಾದಲ್ಲಿ ಸೋಫಿಯಾಳ ಪತ್ರಕರ್ತ ಪ್ರಿಯಕರ ಧರ್ಮಾಂಧರ ಅಮಾನುಷ ದಾಳಿ ತಡೆಯಲು ಹೋಗಿ ಅವರಿಂದ ಬರ್ಬರ ಹತ್ಯೆಗೆ ಗುರಿಯಾಗುತ್ತಾನೆ. ತನ್ನ ಪ್ರಿಯಕರ ಪೋಲೆಂಡ್ ಮೂಲದ ಪ್ಯಾಟ್ರಿಕನ ಹ್ರದಯ ವಿದ್ರಾವಕ ಹತ್ಯೆ ಅವಳಲ್ಲಿ  ಖಿನ್ನತೆಯನ್ನೂ  ಕಿಚ್ಚನ್ನೂ ಹಚ್ಚುತ್ತದೆ.

“ದಮಾಸ್ಕಸ್ ಮಾತ್ರವಲ್ಲ, ಹೋಮ್ಸ್, ಹಾಮಾ, ಅಲೆಪ್ಪೊದಂಥ ಸಿರಿಯಾದ ಯಾವುದೇ ನಗರ ಪ್ರವೇಶಿಸಿದರೂ ಅಕ್ಷರಶ: ರಣರಂಗ ಹೊಕ್ಕಂತಾಗುತ್ತಿತ್ತು”

ಎನ್ನುವ ಅವಳು ಅಂತರ್ಯುದ್ಧಗಳು ಏಕಾಗುತ್ತವೆ ಎಂದು ಯೋಚಿಸುತ್ತಾಳೆ:

“ಸಿಧ್, ಆಫ್ಘನಿಸ್ತಾನ, ಸಿರಿಯಾ… ಈ ಹಿಂದೆ ರುವಾಂಡಾ, ವಿಯಟ್ನಾಂ, ಶ್ರೀಲಂಕಾ, ಇರಾಕ್, ಇರಾನ್… ಯಾವುದೇ ಯುದ್ಧ- ಅಂತರ್ಯುದ್ಧಗಳು ಯಾಕೆ ಆದವು? ಆಗ್ತಾ ಇವೆ? ಅದಕ್ಕೆ ಯಾರು ಹೊಣೆ? ಅನ್ನೋ ಪ್ರಶ್ನೆ ಸದಾ ನನ್ನ ಕಾಡ್ತಾ ಇರುತ್ತೆ. ಆಫ್ಘನಿಸ್ತಾನದಲ್ಲಿ ನನ್ನ ಕಣ್ಣು ಅರ್ಧ ತೆರೆಯಿತು. ದಮಾಸ್ಕಸ್‌ ನಲ್ಲಿ ನಾನು ನೆಲೆ ನಿಂತ ಪ್ರತಿ ಸಂದರ್ಭದಲ್ಲಿ ಇದೊಂದು ಅನಗತ್ಯದ ಅಂತರ್ಯುದ್ಧ ಎಂದೇ ನನಗನ್ನಿಸಿತ್ತು. ಆ ದೇಶದ ಯಾವುದೇ ಒಬ್ಬ ಸಾಮಾನ್ಯ ಪ್ರಜೆಯನ್ನ ಕೇಳಿದ್ರೂ.. ಅವರಿಗೆ ಬೇಕಿದ್ದದ್ದು ಶಾಂತಿ, ನೆಮ್ಮದಿಯ ಜೀವನ. ಆದರೆ, ರಾಜಕೀಯ ಮಹತ್ವಾಕಾಂಕ್ಷೆಗಳು ದೇಶಗಳನ್ನು ಯುದ್ಧ-ಅಂತರ್ಯುದ್ಧಕ್ಕೆ ತಳ್ಳಿಬಿಡುತ್ತವೆ. ಅದು ಎಷ್ಟೋ ವ್ಯಕ್ತಿಗಳಿಗೆ, ಕಂಪನಿಗಳಿಗೆ ಬೇರೆ ದೇಶಗಳಿಗೆ ಒಂದು ಎಕನಾಮಿಕ್ ಆಪರ್ಚುನಿಟಿ. ನನ್ನ ಪ್ರಕಾರ ಯುದ್ಧ\ಅಂತರ್ಯುದ್ಧವೂ ಅಮೆರಿಕಾ, ರಷ್ಯಾ, ಚೀನಾದಂತಹ ಪ್ರಭಾವಿ ರಾಷ್ಟ್ರಗಳ ಪಾಲಿಗೆ ಒಂದು ವ್ಯಾಪಾರ ಅಷ್ಟೇ. ಆ ವ್ಯಾಪಾರ  ಮಾಡೋಕೆ ಅವರು ಪೀಸ್, ಹ್ಯುಮಾನಿಟಿ, ಹ್ಯೂಮನ್ ರೈಟ್ ಹೆಸರು ಬಳಸಿಕೊಳ್ಳುತ್ತಾರೆ. ಹಾಗೆ ಹೇಳುತ್ತಲೇ ಅವರೇ ಯುದ್ಧ-ಅಂತರ್ಯುದ್ಧಗಳಲ್ಲಿ ಭಾಗಿಯಾಗುವ ಎಲ್ಲ ಬಣಗಳಿಗೂ ವೆಪನ್‌ಗಳನ್ನು ಸರಬರಾಜು ಮಾಡುತ್ತಾರೆ. ಯುದ್ಧ ಅಂತರ್ಯುದ್ಧಗಳು ಕೂಡಾ ಒಂದು ಬೃಹತ್ ಜಾಗತಿಕ ಉದ್ಯಮ. ಅದಕ್ಕೆ ಒಂದು ನಾಜೂಕಾದ ಹೆಸರು ಡಿಫೆನ್ಸ್ ಇಂಡಸ್ಟ್ರಿ”

ಹೀಗೆ ಹೇಳೀ, ಯುದ್ಧ ಅಂತರ್ಯುದ್ಧಗಳ  ಅಳಿಸಲಾಗದ ಪರಿಣಾಮ ಆಗುವುದು ಎಳೆಯ ಮಕ್ಕಳ ಮೇಲೆ ಎಂದು, ಆಫ್ಘನಿಸ್ತಾನ ಮತ್ತು ಮ್ಯಾನ್ಮಾರ್‍ ನಿರಾಶ್ರಿತರ ಉದಾಹರಣೆ ಕೊಡುತ್ತಾಳೆ. ಹೀಗೆ ವಿಶ್ವದ ರಾಜಕಾರಣ, ಯುದ್ಧೋನ್ಮಾದ, ದರ್ಮಾಂಧತೆ ಮೊದಲಾದ ವಿಶ್ವದ ವಿದ್ಯಮಾನಗಳ ನೋಟಕ್ಕೆ ತೆರೆದು ಕೊಳ್ಳುವ ಒಂದು ಪುಟ್ಟ ಬೆಳಕಿಂಡಿಯೂ ಆಗಿ ಕಾದಂಬರಿ ನಮ್ಮ  ಗಮನ ಸೆಳೆಯುತ್ತದೆ. ಹೊಸ ದನಿಗೆ ಪುಟ ಕೊಡುತ್ತದೆ.

*****

`ಘಾಂದ್ರುಕ್’ ಕಾದಂಬರಿಯ ವಸ್ತು, ವಿನ್ಯಾಸ, ವಿಸ್ತಾರ ಮತ್ತು ಹಾಸು ಬೀಸುಗಳು ಎರಡು ತೋಳುಗಳ ತೆಕ್ಕೆಗೆ ಮೀರಿದಂಥವು. ಕ್ಯಾನ್ವಾಸ್ ಬ್ರಹತ್ತಾದುದು. ಅದರ ದೃಷ್ಟಿಕೋನವೂ ವಿಶಾಲವೂ ಉದಾತ್ತವೂ ಆದುದು. ಕಥಾನಾಯಕ ತನ್ನನ್ನು  ತಾನು ಕಂಡುಕೊಳ್ಳುವ  ಮಾರ್ಗದಲ್ಲಿ ಬರುವ `ಘಾಂದ್ರುಕ್’ ಒಂದು ಸಣ್ಣ  ಗ್ರಾಮ. ಅನ್ನಪೂರ್ಣ ಸರ್ಕೀಟ್ ನಲ್ಲಿ ಎದುರಾಗುವ ಶಾಂತಿಯ ತಾಣ. ಕಥಾ ನಾಯಕನಿಗೆ ನೆಮ್ಮದಿ ಮತ್ತು ಶಾಂತಿಗಳನ್ನು ನೀರ್ಧಾರಗಳಿಗೆ ಪ್ರೇರಣೆಯಾಗುವ ಬುದ್ಧ  ವಿಹಾರ.

ಶುರುವಿಗೇ `ಘಾಂದ್ರುಕ್’ ಕೃತಿಯನ್ನು ನವ್ಯೋತ್ತರ ನವ್ಯ ಕಾದಂಬರಿ ಎಂದು ಕರೆದೆ. ಏಕೆಂದರೆ, ನವ್ಯದ, ಎಂದರೆ ಎಲಿಯಟ್, ಸಾರ್ಥರ್, ಕಾಮು, ಕಾಫ್ಕ ಕೃತಿಗಳು ಎರಡನೇ ಮಹಾಯುದ್ಧದ ಘೋರ ಪರಿಣಾಮಗಳು ಇವುಗಳಿಂದ ಪರಿಣಾಮವಾದ ಅಸ್ತಿತ್ವವಾದಗಳಿಂದ ಪ್ರಭಾವಿತವಾದುದು. ಇದರ ಪರಿಣಾಮ ಎಂಬಂತೆ ಹುಟ್ಟಿದ ಅನಾಥ ಪ್ರಜ್ಞೆ ನವ್ಯದ ಕೇಂದ್ರ ಕಥಾ ನಾಯಕ ಸಿದ್ದಾರ್ಥನಲ್ಲೂ ಸ್ವಲ್ಪ ಅನಾಥ ಪ್ರಜ್ಞೆ ಇದೆ, ವಿಪರೀತವಾದ ಕಾಮವೂ ಇದೆ. ಕಥಾನಾಯಕ ಧರ್ಮಾಂದತೆಯ ವಿರೋಧಿಯಾದೂ ಸಂಪೂರ್ಣವಾಗಿ ಸನಾತನ ಧಾರ್ಮಿಕ ಮೌಲ್ಯಗಳ ವಿರೋಧಿಯಲ್ಲ. ಅದರ ಅನುಷ್ಠಾನದ ಮಾದರಿಗಳ ಬಗ್ಗೆ ಮಾತ್ರ ಅವನ ವಿರೋಧವಿದೆ. ಆದರೆ `ಘಾಂದ್ರುಕ್’ ನವ್ಯ ಸಾಹಿತ್ಯ ಚಳವಳಿಯ  ಕಾಲಘಟ್ಟವನ್ನು ಮೀರಿ ಬೆಳೆದಿದೆ. ಇಲ್ಲೊಂದು ಉಜ್ವಲವಾದ ಮಾನವ ಪ್ರಜ್ಞೆ ಇದೆ. ಧರ್ಮದಂಥ ಹಳೆಯ ಪಳೆಯುಳಿಕೆಗಳನ್ನು ಮೆಲುಕು ಹಾಕುತ್ತಲೇ ಆಧುನಿಕ ಜಗತ್ತಿನ, ಅಂದರೆ ೨೧ನೇ ಶತಮಾನದ ಜಗತ್ತಿನ ಸುಪ್ತ ಬಯಕೆಗಳ, ಯುದ್ಧವೂ ಸೇರಿದಂತೆ ಈ ಹೊಸ ಶತಮಾನದ ಮಾನವನ ಲೋಲುಪತೆಗಳ ಬಗ್ಗೆ ಮಾತನಾಡುತ್ತದೆ. ನಯನಜೂಕಿನ ಯುದ್ದೋನ್ಮಾದದ ಬಗ್ಗೆ, ಮಾನವೀಯತೆಗೆ ಕವಡೆ ಕಿಮ್ಮತ್ತನ್ನೂ ಕೊಡದ ಧರ್ಮಾಂಧತೆ ಬಗ್ಗೆ ಮಾತನಾಡುತ್ತದೆ, ವರ್ತಮಾನ ಕಾಲದ  ಸಾಮಾನ್ಯ ಮನುಷ್ಯರ ಕಳಕಳಿ-ಕಾಳಜಿಗಳಿಗೆ ದನಿಯಾಗಿ ಹೊಸ ಜೀವನ ಮೌಲ್ಯಗಳಿಗಾಗಿ ಹಾತೊರೆಯುತ್ತದೆ -ಎಂದೇ ಇದು  ನವ್ಯೋತ್ತರ ನವ್ಯ’ ಕಾದಂಬರಿ.

ಕಲಾಕೃತಿಗಳು ಮೇಲ್ನೋಟಕ್ಕೆ  ನೋಡಲು ಎಷ್ಟು ಸುಂದರವೂ ,ಆಕರ್ಷಣಿಯವೂ  ಆಗಿರುತ್ತದೆಯೋ  ಅಷ್ಟೇ  ನಿಗೂಢ. ತನ್ನ ಆಂತರ್ಯವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಸಹೃದಯನಾದವನು ಕೃತಿಯ ಅಂತರಂಗಕ್ಕಿಳಿದೇ ಅದರ ಆಂತರ್ಯದ ಅರ್ಥ, ಮೌಲ್ಯಗಳನ್ನು ಅನ್ವೇಷಿಸಬೇಕಾಗುತ್ತದೆ. ಸತೀಶ್ ಚಪ್ಪರಿಕೆಯವರ ಈ ಕಾದಂಬರಿ ಅಂಥದೊಂದು ಕೃತಿ ಎದು ಹೇಳಲು ಸಂತೋಷವಾಗುತ್ತದೆ. ಆಧುನಿಕ ಜಗತ್ತಿನ ವಂಚನೆಗೊಳಗಾಗಿ, ತನ್ನನ್ನು ತಾನು ಅರಿತುಕೊಳ್ಳುವ, ತನ್ಮೂಲಕ ಬದುಕನ್ನು  ಅನ್ವೇಷಿಸ ಹೊರಟ ಕಥಾನಾಯಕ ತನ್ನ ಅನುಭವಗಳಲ್ಲಿ ಕಂಡದ್ದೇನು? ಈ ಕಾದಂಬರಿಯ ಅಂತ:ಸತ್ವವೇನು? ಜೀವನದ ಕಟು ಸತ್ಯಗಳು ಮತ್ತು ವಾಸ್ತವಿಕತೆಗಳು ಅನುಭವೀಕೃತ ವಾದಂತೆಲ್ಲ ಇಲ್ಲಿ ಕಾಣ ಸಿಗುವ ಜೀವನದರ್ಶನ ಏನನ್ನು ಹೇಳುತ್ತದೆ? ಇಲ್ಲಿ ಅರ್ಥೈಸುವ, ನಿರ್ದೇಶಿಸುವ ಜೀವನ ಮೌಲ್ಯಗಳೇನು? ಇಂಥ ಮಹತ್ವದ ಪ್ರಶ್ನೆಗಳು ~ಘಾಂದ್ರುಕ್; ಕಾದಂಬರಿಯನ್ನು ಓದಿ ಮುಗಿಸಿದಾಗ ಉದ್ಭವಿಸುತ್ತವೆ.

ಕಥಾ ನಾಯಕ ಕೊನೆಯಲ್ಲಿ ಕೈಗೊಳ್ಳುವ ನಿರ್ಧಾರ ಕಾದಂಬರಿಗೊಂದು  ತಾತ್ವಿಕ ಮಾರೋಪವನ್ನೂ ಸೂಚಿಸುತ್ತದೆ. ಹಿಮಾಲಯದ ತಪ್ಪಲಲ್ಲಿರುವ ಘಾಂದ್ರುಕ್ ಪುರಾತನ ಶಕ್ತಿ ಸ್ಥಳದಲ್ಲಿ ಕೂತಾಗ ಅವನಿಗಾಗುವ ಜ್ಞಾನೋದಯ ಅವನ ಮುಂದೆ ಭವಿಷ್ಯದ ನಾಲ್ಕು ಮಾರ್ಗಗಳನ್ನು ತೆರೆಯುತ್ತದೆ. ಈ ಮಾರ್ಗಗಳು ಒಂದಕ್ಕಿಂತ ಮತ್ತೊಂದು ಆಕರ್ಷಕ.

ನೋಡಿದರೆ ಹೊಯ್ದಾಟದ ಕಾದಂಬರಿಗೆ ಒಂದು ಅರ್ಥ ಪೂರ್ಣವಾದ ಸಮಾರೋಪ ಬೇರೆಯದೇ!

ಸಿದ್ಧಾರ್ಥನ ಬದುಕಿನ ಈ ನಿರ್ಧಾರದ ಭರತ ವಾಕ್ಯ:

ಧವಳ ಗಿರಿ!

ಧವಳ ಗಿರಿ ಪ್ರಪಂಚದ ಏಳನೆಯ ಅತಿ ಎತ್ತರದ ಪರ್ವತ ಶ್ರೇಣಿ. ಬಿಳಿ ಬೆಟ್ಟಗಳ ಗುಡ್ಡ ಸಾಲು. ಮನುಷ್ಯ ಏರಬೇಕಾದ ಉತ್ತುಂಗವನ್ನೂ, ಔನ್ನತ್ಯವನ್ನೂ  ನಿಷ್ಕಳಂಕ ಗುಣವನ್ನೂ  ಸಂಕೇತಿಸು ಪರ್ವತ ಶ್ರೇಣಿ.

ಇನ್ನು ಈ ಕಾದಂಬರಿಯ ಭಾಷೆಯ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕು.

 ಸತೀಶ್ ಚಪ್ಪರಿಕೆಯವರ ಭಾಷೆ ಸೃಜನಶೀಲವಾದದ್ದು, ಕಾವ್ಯಮಯವಾದ ಬರವಣಿಗೆ. ರೂಪಕ ನಿಷ್ಠವಾದ ಭಾಷೆ. ಅವರ ಭಾಷೆ ಅಲ್ಲಲ್ಲಿ ವಾಚ್ಯವಾಗುವುದೂ ಉಂಟು:

“ನಕ್ಷತ್ರಗಳೇ ತುಂಬಿದ್ದ ಆಕಾಶ ಭುವಿಯ ಮೇಲೆ ಹಾಲಿನಂಥ ಬೆಳಕು ಚೆಲ್ಲಿತ್ತು. ಹಸಿದಿದ್ದ ಭುವಿ ಹಾಲನ್ನು ಹೀರುತ್ತ  ಸುಖಿಸುತ್ತಿತ್ತು”

ಕಾಮ, ಪ್ರಣಯಗಳ ನಿರೂಪಣೆಯಲ್ಲಿ ಇಂಥ ಕೆಲವು ವಾಚ್ಯಗಳು ಓದುಗರು ಹುಬ್ಬೇರಿಸುವಂತೆ ಮಾಡುತ್ತವೆ.

ಕೊನೆಯಲ್ಲಿ ಒಂದು ಮಾತು. ಇದು ಕನ್ನಡದ ಪ್ರಜ್ಞಾವಂತರೆಲ್ಲರೂ ಓದಲೇಬೇಕಾದ ಮಹತ್ವದ ಕೃತಿ.

‍ಲೇಖಕರು avadhi

June 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: