ಶ್ರೀನಿವಾಸ ಪ್ರಭು ಅಂಕಣ: ನಾನು ಜೈಲು ಪಾಲಾಗುವ ಪ್ರಸಂಗ ಎದುರಾಗಿಬಿಟ್ಟಿತು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

100

ಪ್ರಾಯೋಜಿತ ಕಾರ್ಯಕ್ರಮಗಳ ಹಾಗೂ ಕಮರ್ಶಿಯಲ್ ವಿಭಾಗಗಳನ್ನು ವಹಿಸಿಕೊಂಡ ಮೇಲೆ ಸೃಜನಾತ್ಮಕವಾಗಿ ಮಾಡುವುದಕ್ಕೆ ಏನೂ ಇಲ್ಲದಿದ್ದರೂ ನೆಮ್ಮದಿ ಕೆಡಿಸುವಂತಹ ಒತ್ತಡಗಳಿಗೇನೂ ಕೊರತೆ ಇರಲಿಲ್ಲ. ಇದ್ದದ್ದೇ ಅಲ್ಲೊಂದು ಇಲ್ಲೊಂದು ಚಿಕ್ಕ ಪುಟ್ಟ ಅವಕಾಶ.. ಒಂದೊಂದಕ್ಕೂ ನೂರೆಂಟು ಅರ್ಜಿದಾರರು! ಅವಕಾಶ ಸಿಗದ ನೂರೇಳು ಜನಕ್ಕೆ ನನ್ನ ಮೇಲೆ ಕೆಂಗಣ್ಣು.. ಒಳಗೊಳಗೇ ಅಸಮಾಧಾನದ ಹೊಗೆ. ಕೆಲವೊಮ್ಮೆಯಂತೂ ವಿಶಿಷ್ಟ ರೀತಿಯ, ಊಹಿಸಿರದಿದ್ದಂತಹ ಸಂದರ್ಭಗಳು ಸೃಷ್ಟಿಯಾಗಿ ಗೊಂದಲದಲ್ಲಿ ಕೆಡವುತ್ತಿದ್ದವು.

ಒಮ್ಮೆ ಹೀಗಾಯಿತು:

ಒಬ್ಬ ಪ್ರತಿಷ್ಠಿತ ನಟ—ನಿರ್ಮಾಪಕನ ಧಾರಾವಾಹಿ ಪ್ರತಿ ಬುಧವಾರ ಸಂಜೆ ಏಳು ಗಂಟೆಗೆ ಪ್ರಸಾರವಾಗುತ್ತಿತ್ತು. ವಾಸ್ತವವಾಗಿ ಪ್ರಸಾರವಾಗಬೇಕಿರುವ ಕಂತಿನ ಟೇಪ್ ಅನ್ನು ಎರಡು ದಿನ ಮುಂಚಿತವಾಗಿಯೇ ಧಾರಾವಾಹಿ ನಿರ್ಮಾಪಕರು ನಮಗೆ ತಲುಪಿಸಬೇಕು.. ಆಗ ಪ್ರಸಾರಯೋಗ್ಯವಲ್ಲದ ಏನಾದರೂ ಸಮಸ್ಯೆಗಳಿದ್ದರೆ ಅವನ್ನು ಸರಿಪಡಿಸಿ ತರಲು ಸಾಕಷ್ಟು ಸಮಯಾವಕಾಶವಿರುತ್ತಿತ್ತು. ಆದರೆ ಬಹಳಷ್ಟು ನಿರ್ಮಾಪಕರು ಈ ನಿಯಮವನ್ನು ಅವರವರದ್ದೇ ಅನಿವಾರ್ಯ ಕಾರಣಗಳಿಗಾಗಿ ಪಾಲಿಸಿದವರೇ ಅಲ್ಲ! ಸಂಜೆ ಏಳು ಗಂಟೆಗೆ ಪ್ರಸಾರವಾಗಬೇಕಿರುವ ಧಾರಾವಾಹಿಯ ಕಂತಿನ ಟೇಪ್ ಸಂಜೆ 6.30ಕ್ಕೆ ನಮ್ಮ ಕೈಸೇರಿರುವ ಪ್ರಸಂಗಗಳೂ ಉಂಟು. ದೂರದರ್ಶನಕ್ಕೆ ಆದಾಯ ತರುತ್ತಿದ್ದಂತಹ ಕಾರ್ಯಕ್ರಮಗಳಾದುದರಿಂದ ನಾವುಗಳೂ ಆದಷ್ಟೂ ಹೊಂದಾಣಿಕೆ ಮಾಡಿಕೊಂಡು ಸಹಕರಿಸುತ್ತಿದ್ದೆವು.

ನಾನು ಹೇಳಿದ ಪ್ರತಿಷ್ಠಿತ ನಟ—ನಿರ್ಮಾಪಕನಿಗೆ ಅದೇನೋ ದ್ವಂದ್ವಾರ್ಥದ ಸಂಭಾಷಣೆಗಳ ಮೇಲೆ ವಿಪರೀತ ಮೋಹ! ಮನೆ ಮಂದಿಯೆಲ್ಲಾ ಕುಳಿತು ನೋಡುವ ದೂರದರ್ಶನದಂತಹ ಮಾಧ್ಯಮಕ್ಕೆ ಅಂಥದ್ದೆಲ್ಲಾ ಒಗ್ಗುವುದಿಲ್ಲ, ‘ಪ್ರಿಯ ವೀಕ್ಷಕರೇ’ ಕಾರ್ಯಕ್ರಮದಲ್ಲಿ ಜನರೂ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ, ನಮಗೂ ಸಹಾ ಕೀಳು ಅಭಿರುಚಿಯ ಸಂಭಾಷಣೆಗಳಿದ್ದರೆ ಪ್ರಸಾರ ಮಾಡಲು ಮುಜುಗರವಾಗುತ್ತದೆ ಎಂದು ಎಷ್ಟು ರೀತಿಯಲ್ಲಿ ತಿಳಿಸಿ ಹೇಳಿದರೂ ಆ ಮಹಾಶಯರು ನಮ್ಮ ಮಾತನ್ನು ಗಂಭೀರವಾಗಿ ಪರಿಗಣಿಸದೆ ತಮ್ಮ ಚಾಳಿಯನ್ನೇ ಮುಂದುವರಿಸುತ್ತಿದ್ದರು. ಅದೊಂದು ಬುಧವಾರವೂ ಹಾಗೇ ಆಯಿತು. ಸಂಜೆ 6.30ಕ್ಕೆ ಟೇಪ್ ನಮ್ಮ ಕೈ ಸೇರಿತು.. ಪ್ರಸಾರಕ್ಕೆ ಪೂರ್ವಭಾವಿಯಾಗಿ ಒಮ್ಮೆ ನೋಡಲೇಬೇಕಾದ್ದು ಕಡ್ಡಾಯವಾದ್ದರಿಂದ ತರಾತುರಿಯಲ್ಲೇ ಹೋಗಿ ನೋಡಿದರೆ ಎರಡು ಮೂರು ದೃಶ್ಯಗಳಲ್ಲಿ ದ್ವಂದ್ವಾರ್ಥದ, ಕೀಳು ಅಭಿರುಚಿಯ ಸಂಭಾಷಣೆಗಳು! ಒಂದೋ ಎರಡೋ ಶಬ್ದಗಳಾದರೆ ಧ್ವನಿ ಕೇಳದಂತೆ ಮಾಡಿ ಹೇಗೋ ನಿಭಾಯಿಸಬಹುದು..ವಾಕ್ಯ ವಾಕ್ಯಗಳೇ ಹಾಗಿದ್ದುಬಿಟ್ಟರೆ!?

ನನಗೆ ವಿಪರೀತ ಸಿಟ್ಟು ಬಂದು ‘ಈ ಕಂತು ಪ್ರಸಾರಯೋಗ್ಯವಲ್ಲ’ ಎಂದು ಒಂದು ನೋಟ್ ಬರೆದು ನಿರ್ದೇಶಕರ ಬಳಿ ತೆಗೆದುಕೊಂಡು ಹೋದೆ. ಶ್ರೀನಿವಾಸ್ ಅವರು ಕ್ಷಣ ಕಾಲ ಯೋಚಿಸಿ, “ನಡೆಯಿರಿ.. ನಾನೂ ಒಮ್ಮೆ ನೋಡಿಯೇ ಬಿಡುತ್ತೇನೆ” ಎಂದು ನುಡಿದು ನಮ್ಮೊಟ್ಟಿಗೆ ಬಂದು ಅಂದಿನ ಕಂತನ್ನು ವೀಕ್ಷಿಸಿದರು. “ಖಂಡಿತವಾಗಿ ಇದು ಪ್ರಸಾರಯೋಗ್ಯವಲ್ಲ.. ಜನರ ಅಭಿರುಚಿ ಕೆಡಿಸುವಂತಹ ಯಾವ ಕಾರ್ಯಕ್ರಮವನ್ನೂ ಪ್ರಸಾರ ಮಾಡಬಾರದು ಎನ್ನುವುದು ನಮ್ಮ ನೈತಿಕ ಹೊಣೆ.. ಈ ಕಂತನ್ನು ಪ್ರಸಾರ ಮಾಡಬೇಡಿ.. ಸೂಕ್ತ ಹೇಳಿಕೆಯನ್ನು ಕೊಟ್ಟು ಬೇರೆ ಏನಾದರೂ ಕಾರ್ಯಕ್ರಮವನ್ನು ಪ್ರಸಾರ ಮಾಡಿ.. ಈ ಧಾರಾವಾಹಿಯ ನಿರ್ಮಾಪಕರಿಗೆ ಇನ್ನೊಮ್ಮೆ ಇಂತಹ ಅಚಾತುರ್ಯವಾಗದಂತೆ ಎಚ್ಚರ ವಹಿಸಿ ಎಂದು ನಿಷ್ಠುರವಾಗಿಯೇ ಎಚ್ಚರಿಕೆ ನೀಡಿ” ಎಂದು ನುಡಿದು ನನಗೆ ಬೆಂಬಲವಾಗಿ ನಿಂತುಬಿಟ್ಟರು.

ಆ ಧಾರಾವಾಹಿಯ ನಿರ್ಮಾಪಕರಿಗೋ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿಹೋಯಿತು! “ತುಂಬಾ ಕಷ್ಟಪಟ್ಟು ಕಮರ್ಶಿಯಲ್ಸ್ ತಂದಿದೀವಿ ಸರ್.. ಇದೊಂದು ಸಲ ದಯವಿಟ್ಟು ಸಹಕರಿಸಿ.. ಮುಂದೆ ಹೀಗಾಗದ ಹಾಗೆ ನೋಡಿಕೋತೀವಿ” ಎಂದು ಅಂಗಲಾಚಿದರು. ಆದರೆ ಅವರ ಸ್ಥಿತಿಗೆ ಕನಿಕರಿಸಲಾಗದಷ್ಟು ಗಂಭೀರವಾಗಿತ್ತು ಪರಿಸ್ಥಿತಿ. ಜೊತೆಗೆ ಹಾಗೆ ಅವರಿಗೆ ಎಚ್ಚರಿಕೆ ನೀಡಿದ್ದು ಸಹಾ ಅದೇ ಮೊದಲ ಸಲವೇನೂ ಆಗಿರಲಿಲ್ಲ! ಒಟ್ಟಿನಲ್ಲಿ ಅಂದು ಆ ಧಾರಾವಾಹಿಯ ಕಂತು ಪ್ರಸಾರವಾಗಲಿಲ್ಲ. ನನ್ನ ಮೇಲೆ ಕೆಂಡ ಕಾರುವವರ ಪಟ್ಟಿಗೆ ಮತ್ತೊಬ್ಬರ ಸೇರ್ಪಡೆಯಾಯಿತು! ಹಾಗೆ ಧಾರಾವಾಹಿಯ ಕಂತಿನ ಪ್ರಸಾರವನ್ನು ನಿಲ್ಲಿಸಿದ್ದು ನಮ್ಮ ಒಂದಿಬ್ಬರು ಹಿರಿಯ ಅಧಿಕಾರಿಗಳಿಗೇ ಇಷ್ಟವಾಗಲಿಲ್ಲ. “ಸುಖಾಸುಮ್ಮನೆ ಕೇಂದ್ರಕ್ಕೆ ಬರುವ ಆದಾಯಕ್ಕೆ ಕಲ್ಲು ಹಾಕುತ್ತಿದ್ದಾನೆ” ಎಂದು ಬಹಿರಂಗವಾಗಿಯೇ ನನ್ನ ವಿರುದ್ಧ ಅಪಸ್ವರವೆತ್ತಿದರು. ಆ ಧಾರಾವಾಹಿಯ ನಿರ್ಮಾಪಕನಂತೂ “ಮಾಮೂಲು ಕೊಡದ ಕಾರಣಕ್ಕೆ ಪ್ರಸಾರ ನಿಲ್ಲಿಸಿದ” ಎಂದೆಲ್ಲಾ ಅಪವಾದ ಹೊರಿಸಿ ‘ಸೇಡು ತೀರಿಸಿಕೊಂಡ’ ತೃಪ್ತಿಯನ್ನು ಅನುಭವಿಸಿ ಸಂತುಷ್ಟರಾದರು! ಅದೃಷ್ಟವಶಾತ್ ನಮ್ಮ ನಿರ್ದೇಶಕರೂ ನನಗೆ ಬೆಂಬಲವಾಗಿ ನಿಂತದ್ದರಿಂದ ಹೆಚ್ಚಿನ ಚರ್ಚೆಗೆ ಅವಕಾಶವಾಗದೆ ಪ್ರಸಂಗಕ್ಕೆ ತೆರೆ ಬಿತ್ತು.

ಇತ್ತ ನಿತ್ಯಾನಂದ ಸರಸ್ವತಿಗಳು(ಅಣ್ಣ) ಸೂರ್ಯನಾರಾಯಣ ಅವರ ಮನೆಯಲ್ಲಿ ಹೊರಗಿನ ಕೋಣೆಯಲ್ಲಿ ವಾಸ್ತವ್ಯಕ್ಕಿದ್ದರಲ್ಲಾ, ಅಲ್ಲಿ ಒಂದು ಸಮಸ್ಯೆ ಎದುರಾಯಿತು.ಆ ಮನೆ ಇದ್ದುದು ಬಸವೇಶ್ವರ ನಗರದ ಮುಖ್ಯರಸ್ತೆಯಲ್ಲಿ.. ಬೆಳಗಿನಿಂದ ಸರಿರಾತ್ರಿಯವರೆಗೆ ಆ ರಸ್ತೆಯಲ್ಲಿ ವಿಪರೀತ ವಾಹನಗಳ ಓಡಾಟ. “ಕಿವಿಗಡಚಿಕ್ಕುವ ಈ ವಾಹನಗಳ ಭರಾಟೆ.. ವಿನಾಕಾರಣ ಕೂಗಿಸುವ ಹಾರ್ನ್ ಗಳ ಕರ್ಕಶ ಸದ್ದಿನಲ್ಲಿ ನನಗೆ ಕ್ಷಣಮಾತ್ರವೂ ಧ್ಯಾನ ಸಾಧ್ಯವಾಗ್ತಿಲ್ಲ.. ಸಂತೆಯಲ್ಲಿ ಕೂತು ಜಪ ತಪ ಓದು ಬರಹ ಸಾಧ್ಯವೇ? ತುಂಬಾ ಕಷ್ಟವಾಗ್ತಿದೆ” ಎಂದು ಅಣ್ಣ ಪೇಚಾಡಿಕೊಳ್ಳತೊಡಗಿದರು. ಈ ಸಮಸ್ಯೆಯನ್ನು ಬಗೆಹರಿಸಲು ಇರುವುದೊಂದೇ ಮಾರ್ಗ: ಮನೆ ಬದಲಿಸುವುದು! ಕೊನೆಗೆ ಅಕ್ಕ ಭಾವಂದಿರು ಕನಕಪುರ ರಸ್ತೆಯಲ್ಲಿರುವ ಎಲಚೇನಹಳ್ಳಿಯ ಸಮೀಪ ವಿಶಾಲ ಬಯಲಿನಲ್ಲಿ ಪ್ರಶಾಂತ ವಾತಾವರಣದಲ್ಲಿದ್ದ ಒಂದು ಮನೆಯನ್ನು ಅಣ್ಣನ ವಾಸ್ತವ್ಯಕ್ಕೆ ಗೊತ್ತು ಮಾಡಿದರು. ಅಣ್ಣನ ಜಪ ತಪಾದಿಗಳಿಗೆ ಅದು ಅನುಕೂಲಕರ ಸ್ಥಳವೇ ಆಗಿದ್ದರೂ ನಗರ ಪ್ರದೇಶದಿಂದ ಹಾಗೂ ನಮ್ಮಗಳ ಮನೆಗಳಿಂದ ತುಂಬಾ ದೂರದಲ್ಲಿದ್ದುದರಿಂದ ಪದೇ ಪದೇ ಹೋಗಿಬರುವುದು ಕಷ್ಟಸಾಧ್ಯವಾದ ಮಾತಾಯಿತು.ಅಣ್ಣನ ಶಿಷ್ಯ ವೃಂದದವರದ್ದೂ ಸಹಾ ಅದೇ ಪೇಚಾಟ: “ಇಲ್ಲಿದ್ದಾಗ ಪಾಠ ಪ್ರವಚನಗಳಿಗೆ ತುಂಬಾ ಅನುಕೂಲವಾಗಿತ್ತು.. ಈಗ ಒಂದೊಂದು ಸಲ ಹೋಗಿಬರೋದು ಅಂದ್ರೇನೇ ಇಡೀ ದಿನ ಮುಗಿದುಹೋಗುತ್ತೆ”. ಅಣ್ಣನ ಅಧ್ಯಯನ—ಅನುಷ್ಠಾನಗಳಿಗೆ, ಬರವಣಿಗೆಗೆ ಮಾತ್ರ ಅದು ತುಂಬಾ ಅನುಕೂಲಕರವಾದ ವಾತಾವರಣವಾಗಿತ್ತು.

ನೋಡನೋಡುತ್ತಿದ್ದಂತೆ ಅನಿರುದ್ಧನಿಗೆ ಒಂದು ವರ್ಷ ತುಂಬಿಬಿಟ್ಟಿತು! “ನಾಮಕರಣ ಶಾಸ್ತ್ರ ಮಾಡಿದಾಗ ಎಲ್ಲಾ ನೆಂಟರಿಷ್ಟರನ್ನೂ ಕರೆದಿರಲಿಲ್ಲ..ಈಗ ಮಗುವಿನ ಮೊದಲನೆಯ ಹುಟ್ಟು ಹಬ್ಬಕ್ಕಾದರೂ ಎಲ್ಲರನ್ನೂ ಕರೆಯೋಣ” ಎಂದು ಅಮ್ಮ ಅಪೇಕ್ಷೆ ಪಟ್ಟರು. ಅದೇ ಪ್ರಕಾರವಾಗಿ ಆಪ್ತ ಬಂಧು ಮಿತ್ರರನ್ನೆಲ್ಲಾ ಆಹ್ವಾನಿಸಿ ಬಸವೇಶ್ವರ ನಗರದ ಶಿವಪ್ರಭಾ ಕಲ್ಯಾಣ ಮಂಟಪದಲ್ಲಿ ಅನಿರುದ್ಧನ ಮೊದಲನೆಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದೆವು.

ನಳಿನಿ ಅಕ್ಕ—ಮೂರ್ತಿ ಭಾವನಿಗಂತೂ ಅನಿರುದ್ಧ ಎಂದರೆ ವಿಶೇಷ ಅಕ್ಕರೆ! ಅಂದು ಕಾರ್ಯಕ್ರಮದಲ್ಲಾದರೂ ಅಷ್ಟೇ.. ಮಗು ಅವರ ಕಣ್ಗಾವಲಿನಿಂದ ದೂರವಾದ ಕ್ಷಣವೇ ಇಲ್ಲ ಅನ್ನಬೇಕು!

ಆತ್ಮೀಯ ಗೆಳೆಯ ನಾಗೇಂದ್ರ ಪ್ರಸಾದ್ ಈ ಬಾರಿಯೂ ಸೊಗಸಾದ ಮ್ಯಾಜಿಕ್ ಷೋ ನಡೆಸಿಕೊಟ್ಟು ನೆರೆದಿದ್ದ ಮಕ್ಕಳನ್ನೆಲ್ಲಾ ರಂಜಿಸಿದರು. ಪುಟ್ಟು ರಾಧಿಕೆಯಂತೂ ತನ್ನ ಆಪ್ತ ಗೆಳತಿಯರೊಂದಿಗೆ ಸಡಗರದಿಂದ ಕುಣಿದು ಸಂಭ್ರಮಿಸಿದಳು. ರಂಜನಿಯ ಆಪ್ತ ಗೆಳತಿ—ಸಹೋದ್ಯೋಗಿ ರೇಖಾ ಒಂದೆರಡು ಭಾವಗೀತೆಗಳನ್ನು ಸೊಗಸಾಗಿ ಹಾಡಿ ಮಗನ ಹುಟ್ಟುಹಬ್ಬಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗನ್ನು ನೀಡಿದಳು. ಈ ರೇಖಾ ನಮ್ಮ ಕುಟುಂಬಕ್ಕೆ ಪರಮಾಪ್ತಳು. ನಮ್ಮಿಬ್ಬರು ಮಕ್ಕಳಿಗೂ ರೇಖಾ ಆಂಟಿ ಎಂದುಬಿಟ್ಟರೆ ವಿಶೇಷ ಪ್ರೀತಿ—ಅಭಿಮಾನ! ರೇಖಾ ರಾಧಿಕಾಳನ್ನು ಮುದ್ದಿನಿಂದ ಕರೆಯುತ್ತಿದ್ದುದು ‘ಲಡ್ಡು’ ಎಂದು! ಅನಿರುದ್ಧನಿಗೆ ‘ಕರುಮರಿ’ ಎಂಬ ಮುದ್ದಿನ ನಾಮಕರಣ! ಎಲ್ಲರ ನೋವಿಗೆ ಮಿಡಿಯುವ, ಕಷ್ಟಗಳಿಗೆ ಸ್ಪಂದಿಸುವ ರೇಖಾಳದ್ದು ವಿಶಿಷ್ಟ ವ್ಯಕ್ತಿತ್ವ.ನೇರ ಮಾತು.. ಮುಖವಾಡಗಳಿಲ್ಲದ ನಡಾವಳಿ.. ಸ್ನೇಹಶೀಲ ಸಹೃದಯತೆ.. ನಿರ್ಮಲ ಅಂತಃಕರಣ. ನಮ್ಮ ಮಕ್ಕಳು ಅವಳನ್ನು ಅದೆಷ್ಟು ಹಚ್ಚಿಕೊಂಡು ಬಿಟ್ಟಿದ್ದರೆಂದರೆ ಮುಂದೆ ಕೆಲ ವರ್ಷಗಳ ನಂತರ ರೇಖಾ ಮದುವೆಯಾಗಿ ಹೊರಟಾಗ ಅನಿರುದ್ಧ ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದ— ರೇಖಾ ಆಂಟಿಯನ್ನು ಕಳೆದುಕೊಂಡು ಬಿಡುತ್ತೇನೆಂಬ ಆತಂಕದಿಂದ!ವಿದ್ಯಾರ್ಥಿ ವಲಯದಲ್ಲೂ ‘ಒಳ್ಳೆಯ ಶಿಕ್ಷಕಿ’ಯೆಂಬ ಮೆಚ್ಚುಗೆಗೆ ಪಾತ್ರಳಾಗಿರುವ ರೇಖಾ ರಂಜನಿಯ ಅತ್ಯಾಪ್ತ ಗೆಳತಿಯರಲ್ಲಿ ಒಬ್ಬಳು.

ನೂರಾರು ಮಂದಿ ಆಪ್ತೇಷ್ಟರನ್ನು ಆಹ್ವಾನಿಸಿ ನಾವೇ ಆಯೋಜಿಸಿ ನಡೆಸಿದ ಮೊದಲ ದೊಡ್ಡ ಕಾರ್ಯಕ್ರಮ ಅನಿರುದ್ಧನ ಮೊದಲ ವರ್ಷದ ಹುಟ್ಟುಹಬ್ಬ! ಅದು ಯಾವುದೇ ತರಹದ ತೊಂದರೆಗಳಾಗದೆ ನಿರ್ವಿಘ್ನವಾಗಿ ನೆರವೇರಿದ್ದು ಸಹಜವಾಗಿಯೇ ನಮ್ಮ ಮನಸ್ಸನ್ನು ಅರಳಿಸಿತು. “ಇಡಿಯ ವಾತಾವರಣದಲ್ಲಿ ಆಪ್ತತೆ—ಆತ್ಮೀಯತೆಯ ತರಂಗಗಳು ಪ್ರವಹಿಸುತ್ತಿದ್ದವು” ಎಂದು ಬಂದವರೆಲ್ಲರೂ ಮೆಚ್ಚಿ ನುಡಿದಾಗಲಂತೂ ನನಗೂ ರಂಜನಿಗೂ ಸ್ವರ್ಗಕ್ಕೆ ಮೂರೇ ಗೇಣು!

ಆಫೀಸಿನಲ್ಲಿ ಧಾರಾವಾಹಿ ವಿಭಾಗದ್ದು ಒಂದು ಬಗೆಯ ಸಮಸ್ಯೆಯಾದರೆ ಕಮರ್ಶಿಯಲ್ ವಿಭಾಗದ್ದು ಮತ್ತೊಂದು ಬಗೆಯ ಸಮಸ್ಯೆ. ಆಗ ಈಗಿನಂತೆ ಹತ್ತಾರು ವಾಹಿನಿಗಳಿರಲಿಲ್ಲ. 1994 ರಲ್ಲಿ ಆರಂಭವಾಗಿದ್ದ ಉದಯ ವಾಹಿನಿ ಇನ್ನೂ ಅಷ್ಟೇನೂ ಜನಪ್ರಿಯತೆಯನ್ನು ಗಳಿಸಿಕೊಂಡಿರಲಿಲ್ಲ. ಒಂದು ರೀತಿಯಲ್ಲಿ ದೂರದರ್ಶನವೇ ‘ಏಕಾಮೇವಾದ್ವಿತೀಯ’ವಾಗಿ ಮೆರೆಯುತ್ತಿತ್ತೆಂದರೆ ಅತಿಶಯೋಕ್ತಿ ಏನಲ್ಲ. ಹಾಗಾಗಿ ದೂರದರ್ಶನದ ಕಾರ್ಯಕ್ರಮಗಳಿಗೆ—ವಿಶೇಷವಾಗಿ ಚಲನಚಿತ್ರ ಸಂಬಂಧಿ ಕಾರ್ಯಕ್ರಮಗಳಿಗೆ ಜಾಹಿರಾತು ವಲಯದಲ್ಲಿ ವಿಶೇಷ ಬೇಡಿಕೆ ಇತ್ತು. ಜಾಹೀರಾತುಗಳು ದೂರದರ್ಶನದ ಮುಖ್ಯ ಆದಾಯದ ಮೂಲಸೆಲೆಯಾದ್ದರಿಂದ ಅವನ್ನು ಒದಗಿಸುವ ಮಧ್ಯವರ್ತಿ ಏಜೆನ್ಸಿಗಳೊಂದಿಗೆ ನಮ್ಮ ವಾಣಿಜ್ಯ ವಿಭಾಗದ ನಿಕಟ ಸಂಪರ್ಕವಿರುತ್ತಿತ್ತು. ಒಂದು ರೀತಿಯಲ್ಲಿ ಪರಸ್ಪರ ಅವಲಂಬನೆಯ ಸನ್ನಿವೇಶವಾದುದರಿಂದ ಪರಸ್ಪರ ‘ಓಲೈಕೆ’ಗಳೂ ಸಾಂಗವಾಗಿಯೇ ನಡೆಯುತ್ತಿದ್ದವು. ದೆಹಲಿಯಿಂದ ಯಾರಾದರೂ ವರಿಷ್ಠರು ಬಂದರೆ ಅವರ ಆದರಾತಿಥ್ಯಗಳ ಹೊಣೆ ಈ ಏಜನ್ಸಿಗಳದ್ದಾಗಿರುತ್ತಿತ್ತು. ಆ ಸಂಬಂಧವಾಗಿ ಪೂರ್ವಭಾವಿ ಸಂದೇಶ ನಮಗೆ ಬಂದು ನಮ್ಮಿಂದ ಏಜನ್ಸಿಗಳಿಗೆ ರವಾನೆಯಾಗಿ ವ್ಯವಸ್ಥೆಗಳು ಏರ್ಪಡುತ್ತಿದ್ದವು.

ಇವೆಲ್ಲಾ ವಾಣಿಜ್ಯ ಪ್ರಧಾನ ವಿಭಾಗಗಳಲ್ಲಿ ಸರ್ವೇಸಾಧಾರಣ ಸಂಗತಿಯೇ ಆದರೂ ಸೃಜನಾತ್ಮಕ ವಿಭಾಗ—ಚಟುವಟಿಕೆಗಳಲ್ಲೇ ಅದುವರೆಗೆ ಬದುಕು ಕಳೆದ ನನ್ನಂಥವರಿಗೆ ಈ ವ್ಯವಸ್ಥೆಗೆ ಒಗ್ಗಿಕೊಳ್ಳುವುದು ಬಹಳ ಕಷ್ಟವಾಗುತ್ತಿತ್ತು. ಈ ಏಜನ್ಸಿಗಳ ‘ಹಿತ ರಕ್ಷಣೆ’ಗಾಗಿ ಒಂದೆರಡು ಬಾರಿ ದೆಹಲಿ ಪ್ರವಾಸವೂ ಆಯಿತು.. ಅನೇಕ ವ್ಯವಹಾರಗಳಿಗೆ ಮಧ್ಯವರ್ತಿಯ ಪಾತ್ರ ನಿರ್ವಹಣೆಯೂ ಆಯಿತು.. ಒಗ್ಗದ ಒಲ್ಲದ ಕೆಲಸಗಳ ಕೆಸರಲ್ಲಿ ಸಿಕ್ಕಿಕೊಂಡು ಒದ್ದಾಡಿದ್ದೂ ಆಯಿತು! ಈ ನಡುವೆ ವಾರ್ತಾ ಪ್ರಸಾರದ ನಂತರ ಖಾಲಿ ಇದ್ದ ಸಮಯದಲ್ಲಿ 15 ನಿಮಿಷಗಳ ಧಾರಾವಾಹಿಯನ್ನು ಪ್ರಾರಂಭಿಸಬಹುದೆಂಬ ಸಲಹೆಯೂ ನಿರ್ದೇಶಕರಿಂದ ಬಂದು ಆ ನಿಟ್ಟಿನಲ್ಲಿ ಕೆಲಸಗಳು ಆರಂಭವಾದವು. ಅದಕ್ಕೆ ಅರ್ಜಿ—ಕಥಾಹಂದರಗಳ ಆಹ್ವಾನ—ಪರಿಶೀಲಿಸಲು ತಜ್ಞರ ನೇಮಕ ಇತ್ಯಾದಿ ಎಲ್ಲಾ ಸಿದ್ಧತೆಗಳೂ ಪ್ರಾರಂಭವಾದವು.

ಅದರ ಬೆನ್ನಿಗೇ ಶುರುವಾದದ್ದು ಒತ್ತಡಗಳ ವರಸೆ! ದೂರದ ದೆಹಲಿಯಿಂದ ಬದಿಯ ಸೋಮನಹಳ್ಳಿಯವರೆಗೆ ಎಲ್ಲರೂ ಒತ್ತಡ ಹೇರುವವರೇ.. ಮಂಜೂರಾತಿಗೆ ಬೇಡಿಕೆ ಸಲ್ಲಿಸುವವರೇ! ಹತ್ತು ಅವಕಾಶಗಳಿದ್ದರೆ ಇನ್ನೂರು ಬೇಡಿಕೆಗಳ ಅನುಪಾತದಲ್ಲಿ ಅರ್ಜಿಗಳ ಸುರಿಮಳೆ! ನಿಗದಿತ ದಿನಾಂಕಕ್ಕಿಂತ ತಡವಾಗಿ ಬಂದ ಅರ್ಜಿಯೊಂದನ್ನು ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಆ ಅರ್ಜಿದಾರ ಕೇಸ್ ದಾಖಲಿಸಿ ಹಲವಾರು ಬಾರಿ ಕೋರ್ಟ್ ಗೆ ಅಲೆದಾಡುವ ಪ್ರಸಂಗವೂ ಎದುರಾಯಿತು! ಕೊನೆಗೆ ಜಡ್ಜ್ ಸಾಹೇಬರು,”ಅಷ್ಟು ಯಾಕೆ ಹಟ ಮಾಡ್ತೀರಿ? ಸಾವಿರ ಅರ್ಜಿ ಜೊತೆ ಇವರದ್ದೂ ಒಂದು ಸೇರಿಸಿಕೊಂಡು ನೋಡಿಬಿಟ್ರೆ ಆಯಿತಪ್ಪಾ! ಅವರ ಮನಸ್ಸಿಗೂ ಸಮಾಧಾನ.. ತೀರ್ಮಾನ ನಿಮ್ಮದೇ ಆದ್ದರಿಂದ ನಿಮಗೂ ಸಮಸ್ಯೆ ಇಲ್ಲ! ಸರಳವಾಗಿ ಬಗೆಹರಿಯೋ ಸಮಸ್ಯೆಗೆ ಕೋರ್ಟ್ ಟೈಂ ಹಾಳು ಮಾಡಬೇಕೇ?” ಎಂದು ನಗುತ್ತಲೇ ಚುಚ್ಚಿದಾಗ ನಾನೂ ನಗುತ್ತಲೇ ಅರ್ಜಿಯನ್ನು ಸ್ವೀಕರಿಸಲು ಒಪ್ಪಿಕೊಂಡುಬಿಟ್ಟೆ ಅನ್ನಿ.

ಏತನ್ಮಧ್ಯೆ ಆಗ ದೂರದರ್ಶನದಿಂದಲೇ ಆರಂಭಿಸಿದ್ದ dd 9 ಉಪವಾಹಿನಿಯನ್ನು ಬಲ ಪಡಿಸಲು, ಅದಕ್ಕಾಗಿ ಪ್ರಾಯೋಜಿತ ಕಾರ್ಯಕ್ರಮಗಳನ್ನು ತರಲು ಬಹಳವಾಗಿಯೇ ಶ್ರಮಿಸಿದೆ. ಜಾಹೀರಾತುದಾರರ ಬೆಂಬಲದ ಕೊರತೆಯ ಕಾರಣಕ್ಕೆ ನಾವು ಎಣಿಸಿದಷ್ಟು ಮಟ್ಟದಲ್ಲಿ ಅದನ್ನು ಬೆಳೆಸಲಾಗದಿದ್ದರೂ ಕೆಲವಾದರೂ ಒಳ್ಳೆಯ ಪ್ರಾಯೋಜಿತ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಯಿತು ಎನ್ನುವುದೇ ಸಮಾಧಾನದ ಸಂಗತಿ.

ಏನೇ ಆದರೂ ಸೃಜನಾತ್ಮಕ ವಿಭಾಗಗಳಿಂದ ದೂರವಾಗಿ ಮೊದಲೇ ಕುಗ್ಗಿದ್ದ ನನಗೆ ಈ ‘ವ್ಯವಹಾರ ಕೇಂದ್ರಿತ ವಾಣಿಜ್ಯ ವಿಭಾಗಗಳ ಕಾರ್ಯವೈಖರಿ ಉಸಿರು ಕಟ್ಟಿಸುವಂತೆ ಮಾಡಿಬಿಟ್ಟಿತ್ತು. ಅತೃಪ್ತರ ಒಂದು ಪಡೆಯೇ ನಿರ್ಮಾಣವಾಗಿ ನಿರ್ದೇಶಕರಿಗೆ ಅಸಂಖ್ಯಾತ ಮೂಗರ್ಜಿಗಳು ರವಾನೆಯಾಗತೊಡಗಿದವು! ಎಷ್ಟೇ ದಪ್ಪ ಚರ್ಮದವನಾಗಬೇಕೆಂದು ಸಂಕಲ್ಪ ಮಾಡಿಕೊಂಡರೂ ನನ್ನ ಸೂಕ್ಷ್ಮ ಪ್ರಕೃತಿಗೆ ಅದನ್ನೆಲ್ಲಾ ತಾಳಿಕೊಳ್ಳುವುದು ಕಷ್ಟವಾಗತೊಡಗಿತ್ತು. ನನ್ನ ಜತೆಗಿದ್ದವರೇ ಒಂದಿಬ್ಬರು ಅವರ ಕಡೆಯವರ ಒಂದು ಬೇಡಿಕೆಗೆ ಸ್ಪಂದಿಸಲಿಲ್ಲವೆಂಬ ಕಾರಣಕ್ಕೆ (ಅದೂ ಕಳಪೆ ಗುಣಮಟ್ಟದ ಕಾರಣಕ್ಕೆ!) ಮೂಗರ್ಜಿ ರವಾನಿಸಿದ್ದು ಅರಿವಾಗಿ ತುಂಬಾ ಬೇಸರವಾಗಿಹೋಯಿತು. ಆ ಮೂಗರ್ಜಿಗಳ ತುಂಬೆಲ್ಲಾ ಬರಿಯ ಸುಳ್ಳು ಆಪಾದನೆಗಳೇ! ಎಷ್ಟೆಂದು ಸಹಿಸಿಕೊಳ್ಳುವುದು? ರೋಸಿಹೋಗಿ ಕೊನೆಗೊಂದು ದಿನ ನಿರ್ದೇಶಕರಿಗೆ ಹೇಳಿಯೇ ಬಿಟ್ಟೆ: “ದಯವಿಟ್ಟು ಈ ವಾಣಿಜ್ಯ ವಿಭಾಗಗಳಿಂದ ನನಗೆ ಮುಕ್ತಿಕೊಡಿ.. ಮರಳಿ ನಾಟಕ ವಿಭಾಗವನ್ನೇ ಕೊಟ್ಟುಬಿಟ್ಟರಂತೂ ನೆಮ್ಮದಿಯಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ.. ಈಗ ನನಗೆ ಬಿಡುಗಡೆ ಬೇಕು”.

ನಿರ್ದೇಶಕರಿಗೂ ನನ್ನ ಸಂಕಟ ಅರ್ಥವಾಯಿತೆಂದು ತೋರುತ್ತದೆ.. ಮೂಗರ್ಜಿಗಳೂ ಅವರ ಮೇಲೆ ಒಂದಿಷ್ಟು ಪ್ರಭಾವ ಬೀರಿರಲಿಕ್ಕೂ ಸಾಕು.. ಒಟ್ಟಿನಲ್ಲಿ ಹೆಚ್ಚು ವಿಳಂಬ ಮಾಡದೇ ಮತ್ತೆ ನನ್ನನ್ನು ನಾಟಕ ವಿಭಾಗಕ್ಕೆ ವರ್ಗಾಯಿಸಿಯೇ ಬಿಟ್ಟರು. ದೂರದರ್ಶನದ ಅತ್ಯಂತ ಪ್ರಭಾವೀ ವಿಭಾಗದಿಂದ ಕೇವಲ ಒಂದೂವರೆ ವರ್ಷದೊಳಗೆ ಸ್ವ ಇಚ್ಛೆಯಿಂದ ಹೊರನಡೆದ ಪ್ರಥಮ ನಿರ್ಮಾಪಕನೂ ಬಹುಶಃ ನಾನೇ ಎಂದು ತೋರುತ್ತದೆ! ಅತೃಪ್ತ ಬಣದ ಅಸಂತುಷ್ಟ ನಿರ್ಮಾಪಕರು ಪ್ರಾಯೋಜಿತ ಹಾಗೂ ವಾಣಿಜ್ಯ ವಿಭಾಗದಿಂದ ನನ್ನ ನಿರ್ಗಮನವಾದುದನ್ನು ಸಂಭ್ರಮಿಸಿದರೆ ನಾಟಕ ವಿಭಾಗಕ್ಕೆ ನನ್ನ ಪುನರಾಗಮನವನ್ನು ಆತ್ಮೀಯ ರಂಗಕರ್ಮಿಗಳು ಪ್ರೀತಿಯಿಂದ ಸ್ವಾಗತಿಸಿದರು.

ಹೀಗೆ ನಾಟಕ ವಿಭಾಗಕ್ಕೆ ಬರುತ್ತಿದ್ದಂತೆಯೇ, ಕೆಲವೇ ದಿವಸಗಳಲ್ಲಿ ನಾನು ಜೈಲು ಪಾಲಾಗುವ ಪ್ರಸಂಗ ಎದುರಾಗಿಬಿಟ್ಟಿತು!

‍ಲೇಖಕರು avadhi

June 16, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: