ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸಚಿನ್ ಬ್ಯಾಟು ಬಿಡುವಾಗ…’ – ಹೃದಯ ಶಿವ ಕವಿತೆ

ಹೃದಯ ಶಿವ

ಸಚಿನ್ ಬ್ಯಾಟು ಬಿಡುವಾಗ ಕಾಲಕ್ಕೆ ನೀರವತೆ,
ಲೋಕಕ್ಕೆ ನಿದ್ದೆಗಣ್ಣು, ದಿನಕ್ಕೆ ಗರ ಬಡಿದಂತೆ ಭಾಸ,
ಗಗನದಾಚೆ ಚಿಮ್ಮುತ್ತಿದ್ದ ಚೆಂಡುಗಳಿಗೆ ಧಿಡೀರನೆ ರೆಕ್ಕೆ ಮಾಯವಾದ ಹಾಗೆ,
ಹರ್ಷೋದ್ಗಾರಗಳ ಸದ್ದಡಗಿ ಕಿವುಡಾದಂತೆ ಒಮ್ಮೆಲೇ ಹತ್ತಾರು ಕ್ರೀಡಾಂಗಣ.
ಸಂದೇಹ ಬೇಡ, ಸಣ್ಣ ಮಗುವಿಗೂ ಗೊತ್ತು :
ನವೆಂಬರ್ ಚಳಿಗೆ ಸೂರ್ಯ ನಡುಗುವಾಗ ಸಚಿನ್ ನಿವೃತ್ತಿ.
 
ಗ್ಲೌಸು, ಪ್ಯಾಡು ತೊರೆವ ಅವನ ಮಗ್ಗುಲಲ್ಲೇ
ಬೇಸರದಿಂದ ಮೈಚಾಚಿ ಮಲಗುವುದು ಪಿಚ್ಚು.
ಸಿಕ್ಸು, ಫೋರುಗಳಿಗಾಗಿ ತುಡಿಯುತ್ತಿದ್ದವರ ನೆನೆದು
ಬಿಕ್ಕಳಿಸುವುವು ಖಾಲಿ ಖಾಲಿ ಗ್ಯಾಲರಿ- ಸಚಿನ್ ತೆರಳಿ
ಕ್ರಿಕೆಟ್ ಅತ್ತರೂ ನಿವೃತ್ತಿ ಅವನ ದಾಖಲೆಗಳಿಗೆ ತಾಕುವುದಿಲ್ಲ.

ಆತನಿಗದೇ ಕೊನೆಯ ಟೆಸ್ಟ್,
ಹಸಿರ ನಡುವೆ ಬಿಳಿಯುಟ್ಟು ಝೇಂಕರಿಸುವೈದು ದಿನ.
ಮಾತೃನೆಲ ಮುಂಬಯಿಯಲ್ಲಿ ಕರುಳಬಳ್ಳಿಯ ಬಂಧ ಕಳಚುವ ಕ್ಷಣ,
ಒಂದು ಸುಧೀರ್ಘ ದಂಡಯಾತ್ರೆ ವಿಶ್ರಮಿಸುವ ಬೆರಗು,
ಸೆಟೆದು ನಿಂತ ಮೈಲಿಗಲ್ಲುಗಳಿಗೆ ಮೌನದ ಸಖ್ಯ-
ಆಡಿಸುವಾತ ಆಟ ಮುಗಿಸಿದಾಗ
ಆಟಗಾರ ಇತಿಹಾಸದೊಂದು ಭಾಗವಾಗುವ ಚೋದ್ಯ.
 
ಸಾವಿರ ಹೃದಯಗಳಲ್ಲಿ ಬೇರು ಬಿಟ್ಟಿದ್ದಾನೆ ಸಚಿನ್.
ಕ್ರಿಕೆಟ್ ಧರ್ಮದ ದೇವರವನು.
ಗುರಿಗೆ, ಸಾಧನೆಗೆ, ರನ್ ದಾಹಕ್ಕಿನ್ನು ಪರಿಪೂರ್ಣವಿರಾಮ,
ಹೊಸಹೆಜ್ಜೆಗಳ ಪಯಣಕ್ಕೆ ಅವನಿನ್ನು ಹೆದ್ದಾರಿ.
ಉಳಿದವರ ಎದೆಗಳಲ್ಲಿ ತೆರಳಿದವನ ನೆರಳ ಹಿಂಜೋಲ.
 

‍ಲೇಖಕರು G

17 November, 2013

5 Comments

  1. Anonymous

    super anna

  2. Kavya Nagarakatte

    ಎಷ್ಟು ಚೆನ್ನಾಗಿ ಬರೆಯುತ್ತೀರಿ. ಸಚಿನ್ ಕ್ರಿಕೆಟ್ ದಿನಗಳನ್ನು ರೂಹಿಲ್ಲದೇ ಕಂಡ ಯಾರದೇ ಮನಸ್ಸಿನಲ್ಲಿ ಹುಟ್ಟಬಹುದಾದ ಅಪ್ಪಟ ಕವಿತೆಯಿದು. ಸಚಿನ್ ಬ್ಯಾಟು ಬಿಡುವಾಗ ಮನಸ್ಸು ಒದ್ದೆಯಾಗಿತ್ತು, ಒಂದು ‘ಎರಾ’ ಮುಗಿದುಹೋದಹಾಗೆ.

    • Anonymous

      ಧನ್ಯವಾದಗಳು

  3. sudarshan

    gaganadhache haruthidda chendugalige rekke maayavada haage splendid imagination sir

  4. R T SHARAN

    ಬಿಕ್ಕಳಿಸುವುವು ಖಾಲಿ ಖಾಲಿ ಗ್ಯಾಲರಿ- ಸಚಿನ್ ತೆರಳಿ, ಕ್ರಿಕೆಟ್ ಅತ್ತರೂ ನಿವೃತ್ತಿ ಅವನ ದಾಖಲೆಗಳಿಗೆ ತಾಕುವುದಿಲ್ಲ.
    wonderful tribute…. superb SHIVA….
    Bharatiya cricket – Krishnana nirgamanada nantarada Gokulavagide eega

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading