
ಸಚಿನ್ ಕುಮಾರ
ಬುದ್ಧ ಧ್ಯಾನಸ್ಥನಿರುವಾಗ ಕಪ್ಪೆಯೊಂದು ಹೆಗಲ ಹತ್ತಿತು..
ಅದರ ವಟಗುಟ್ಟುವಿಕೆ ಇನಿತು ದೂರ ಸಾಗಿತು..
ಬುದ್ಧನಿಗೆ ಅದರ ಪರಿವೇ ಇಲ್ಲ..
ಕಪ್ಪೆಗೂ ಅವ ಬುದ್ಧನೆಂಬುದು ಗೊತ್ತಿಲ್ಲ..
ಎರಡೂ ಕಡೆ ಧ್ಯಾನವೊಂದೇ..
ಇವನಿಗೆ ಅರಿವಿನ ಧ್ಯಾನ
ಅದಕ್ಕೆ ಅನ್ನದ ಧ್ಯಾನ
ಬುದ್ಧ ಕಣ್ತೆರೆದಾಗ ಕಪ್ಪೆ ಬಾಯ್ದೆರೆದಿತ್ತು..
‘ನಿನ್ನ ಹಸಿವ ನೀಗಿಸಬಲ್ಲೆನೆ’ ಎಂದ ಬುದ್ಧನ ನೋಡಿತ್ತು..
ಜಗದ ಹಸಿವ ನೀಗಬಹುದೆಂಬ ವಿಶ್ವಾಸ ಇವನದು
ಇವನೇ ಹಸಿವ ಕಳೆವನೆಂಬ ವಿಶ್ವಾಸ ಅದರದು

ನೀ ಕುಳಿತಲ್ಲಿಯೇ ನಿನ್ನ ಅಂಟು ನಾಲಗೆಯ ಉದ್ದ ಚಾಚಿ
ಬಾಚಿ ಒಡಲ ತುಂಬುವೆ..
ಅಂತೇ ನಾನು ಇದ್ದಲ್ಲಿಯೇ ಇದ್ದು ಅರಿವೆಂಬ ನಾಲಗೆಯ ಉದ್ದ
ಚಾಚಿ ಒಡಲ ತುಂಬಬೇಕು…
ಇಬ್ಬರದೂ ಒಂದೇ ಉದ್ಯೋಗ..
ಅಲೆಯಬೇಕು ಅರಿವಿಗಾಗಿ
ವಿಶ್ವಾಸದ ಹಾದಿಯೊಳಗೆ
ಅನ್ನ ಸಿಕ್ಕರೆ ಅರಿವು..
ಅರಿವು ಸಿಕ್ಕರೆ ಅನ್ನ
ಒಮ್ಮೊಮ್ಮೆ ಕಪ್ಪೆಯಾಗಿ..
ಒಮ್ಮೊಮ್ಮೆ ಬುದ್ಧನಾಗಿ…






0 Comments