ರೋಹಿತ್ ವೇಮುಲ ಆತ್ಮಹತ್ಯೆಗೆ Just Shafi ಪ್ರತಿಕ್ರಿಯಿಸಿದ್ದರು ಆತ್ಮಹತ್ಯೆ ಯಾಕೆ ಎನ್ನುವುದು ಅವರ ಬರಹದ ಮುಖ್ಯ ಪ್ರಶ್ನೆಯಾಗಿತ್ತು.
ಅದಕ್ಕೆ ಸಂವರ್ಥ ಸಾಹಿಲ್ ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ

ಸಂವರ್ಥ ಸಾಹಿಲ್
ಮನುಷ್ಯನ ಅಸಹಾಯಕತೆ ಅತಂತ್ರ ಅವಮಾನ ಮತ್ತು ಅವು ಮನುಷ್ಯನನ್ನು ಹೇಗೆ ಅಧೃಡಗೊಳಿಸಬಹುದು ಎಂಬುದರ ನಿಜವಾದ ಅರಿವು ಇರದ ರಾಜಕೀಯ ಪರಿಜ್ಞಾನ ಮಾತ್ರ ಇಂತಹ ಪತ್ರ ಬರೆಯಬಹುದು.
ಆತ್ಮಹತೆಯ್ಯೇ ಕೊನೆಗುಳಿದ ಅಸ್ತ್ರ ಆಗುವ ಪರಿಸ್ಥಿತಿಯನ್ನು ಗ್ರಹಿಸಲಾಗದೆ “ಹೋರಾಟ”ದ ಮಾತು ಆಡುವುದು ಉಪದೇಶ ನೀಡುವುದು ಒಂದು ಬ್ಯಾಡ್-ಫೈತ್ ಕ್ರಿಯೆ ಎಂದು ನನ್ನ ಅಭಿಪ್ರಾಯ.
“ಈಸ ಬೇಕು ಇದ್ದು ಜಯಿಸಬೇಕು” ಎಂಬ ಒಣ ಆದರ್ಶ ಉಳ್ಳವರ ಶಿವಾಲಯವೇ ಹೊರತು ಮತ್ತಿನ್ನೇನೂ ಅಲ್ಲ. ಮನುಷ್ಯ ಬದುಕಿನ ನಿಷ್ಯಕ್ತಿಯ ಹತಾಶೆಯ ದೌರ್ಬಲ್ಯದ ಕ್ಷಣಗಳನ್ನು ಅರಿಯಲಾಗದ ರಾಜಕೀಯ ಬರಿ ಘೋಷಣೆ ಮಾತ್ರವಾಗಿಯೇ ಉಳಿಯುತ್ತದೆ. ಇದರಿಂದ ‘ಹೋರಾಟ’ಕ್ಕೂ ನಿಜವಾದ ಬಲ ಬರುವುದಿಲ್ಲ ಎಂಬುದು ಕಹಿ ಸತ್ಯ.
“ಆತ್ಮಹತ್ಯೆಯಿಂದ ಬರುತ್ತದಾ?” ಎಂಬ ಮರುಪ್ರಶ್ನೆ ಬರುವ ಖಾತ್ರಿ ಇದ್ದೂ ಈ ಮಾತನ್ನು ಹೇಳುತ್ತಿದ್ದೇನೆ, ಆತ್ಮಹತ್ಯೆಯನ್ನು ಸಮರ್ಥಿಸಿಕೊಳ್ಳುವ ಆರೋಪ ಬರಬಹುದು ಎಂಬುದನ್ನು ಅರಿತೂ ಬರೆದಿರುವ ಹಾಗೆ, ಆತ್ಮಹತ್ಯೆಯ ಹಿಂದಿನ ರಾಜಕೀಯ ಅರ್ಥ ಆದಾಗ ಆತ್ಮಹತೆ ದುರ್ಬಲವಾಗಿ ಕಾಣಿಸುವುದಿಲ್ಲ, ಮನುಷ್ಯ ತನ್ನ ದೇಹವನ್ನೇ ತನ್ನ ಬದುಕನ್ನೇ ತನ್ನ ಪರಿಸ್ಥಿತಿಯ ವಿರುದ್ಧದ ಹೋರಾಟದ ಅಸ್ತ್ರವಾಗಿಸಿದ ಅಸಹಾಯಕತೆ ಕಾಣಿಸುತ್ತದೆ. ಆಗ ಹೋರಾಟ ಕಟ್ಟಬೇಕಿರುವ ಮಾರ್ಗಗಳು ಸಹ ಕಾಣಿಸಿಕೊಳ್ಳುತ್ತವೆ.
ಹೃದಯವಂತಿಕೆಯಿಲ್ಲದ ಇಲ್ಲದ ರಾಜಕೀಯಕ್ಕೆ ದೃಷ್ಟಿಯೂ ಇರುವುದಿಲ್ಲ, ದೂರದ್ರುಷ್ಟಿಯೂ ಇರುವುದಿಲ್ಲ. ಕ್ಷಮಿಸಿ ನಿಮ್ಮ ಬಹಿರಂಗ ಪತ್ರ ಸಿಟ್ಟು ತರಿಸಿತು ಮತ್ತು ತೀರಾ ಬ್ಯಾಡ್-ಫೈತ್ ಪತ್ರ ಅನ್ನಿಸಿತು. ಕವಿ ಹೃದಯಿ ಆದ ನೀವು ಭಾವುಕವಾಗಿಯೇ ಬರೆದಿದ್ದೀರಿ ಎಂಬ ಅರಿವು ಇದೆ ಮತ್ತು ನಿಮ್ಮ ನಿಲುವಿನ ಬಗೆಗೆ ಯಾವ ಸಂಶಯವೂ ಇಲ್ಲ. ಆದರೆ ಈ ಪತ್ರ ಮಾತ್ರ ಯಾಕೋ ರಾಜಕೀಯ ಆಕ್ರೋಶದ ನಡುವೆ ಸ್ವಲ್ಪ ಅಮಾನವೀಯ ಆಗಿದೆ ಅನ್ನಿಸಿತು.
ನನ್ನ ಸಿಟ್ಟು ನನ್ನ ಮಾತು ನೋವು ಉಂಟು ಮಾಡಿದರೆ ಕ್ಷಮೆ ಇರಲಿ.





ಸಂವರ್ಥ,
ನಿಮ್ಮ ಅಭಿಪ್ರಾಯವನ್ನು ಅಲ್ಲಗಳೆಯುವ ಅಥವಾ ವಿರೋಧಿಸುವ ಉದ್ದೇಶವಿದಲ್ಲ. ಚರ್ಚೆಗಾಗಿ ಬರೆದಿದ್ದು ಖಂಡಿತ ಅಲ್ಲ. ಎಲ್ಲಕ್ಕೂ ಹೆಚ್ಚಾಗಿ ನಮ್ಮನ್ನು ಬಿಟ್ಟು ಹೋದ ತಮ್ಮನಿಗೆ ಮಾತ್ರವೂ ಅಲ್ಲ. ದೇಶಕ್ಕೆ ಹೆಮ್ಮೆಯಾಗಿ ಬೆಳೆಯಬಹುದಾಗಿದ್ದ ಹುಡುಗ ತನ್ನ ಕೊನೆಯನ್ನ ತಂದುಕೊಂಡ ಬಗ್ಗೆ ನನಗೆ ಆಕ್ರೋಶವಾಗಲೀ ವಿಷಾದವಾಗಲೀ ಇಲ್ಲ. ಅವನಂಥದ್ದೇ ಪರಿಸ್ಥಿತಿಗೆ ಸಿಲುಕಿದ ಬೇರೆಯವರಿಗೆ ಇವನು ಆದರ್ಶವಾಗದಿರಲಿ ಎಂಬ ಕಳಕಳಿ. ಭವ್ಯ ಭಾರತದಲ್ಲಿ ಶೋಷಣೆಗಳು ಜಾತಿ ಕಾರಣಕ್ಕೆ ಆಗುವುದು ಎಷ್ಟು ನಿಜವೋ ಅದು ಬೇರೆ ಬೇರೆ ರೀತಿಯಲ್ಲಿ, ಬೇರೆ ಬೇರೆ ಸ್ತರಗಳಲ್ಲಿ ಆಗುತ್ತವೆ ಕೇವಲ ಒಂದೆರಡು ಜಾತಿಯವರಷ್ಟೇ ಶೋಷಣೆಗೆ ಒಳಗಾಗುವುದಲ್ಲ ಅನ್ನುವುದೂ ಅಷ್ಟೇ ನಿಜ. ಅವನು ಅನುಭವಿಸಿದ ನೋವು ಅಪಮಾನಗಳಲ್ಲಿ ಬಹಳಷ್ಟನ್ನು ಸ್ವತಃ ಅನುಭವಿಸಿದವಳು ನಾನು. ಅದೂ ಅವನ ವಯಸ್ಸಲ್ಲಿ ಮಾತ್ರ ಅಲ್ಲ. ಬಹಳ ಎಳೆಯ ವಯಸ್ಸಿನಿಂದ ಕೂಡ. ನಾನು ಅನುಭವಿಸಿದ್ದು ಜಾತಿಯ ಕಾರಣಕ್ಕೂ ಹೌದು; ಬಡತನದ ಕಾರಣಕ್ಕೂ ಹೌದು. ಹೀಗೆ ತಾಜಾ ಉದಾಹರಣೆಯಾಗಿ ನಿಂತ ಕಾರಣ ಇಷ್ಟು ಆತ್ಮವಿಶ್ವಾಸದಿಂದ ಬರೆಯುತ್ತಿದ್ದೇನೆ.
ನಿಮ್ಮ ಭಾವನೆಗಳು ನನಗೆ ಅರ್ಥವಾದವು. ಆದರೆ ನನ್ನ ಮಾತು ನಿಮ್ಮ ಬರಹದಿಂದ ಮಾತ್ರ ಪ್ರೇರಿತವಾದುದಲ್ಲ ಅನ್ನೋದನ್ನ ದಯವಿಟ್ಟು ಗಮನಿಸಿ. ಇತ್ತೀಚಿನ ಯುವ ಸಮೂಹವನ್ನು ನೋಡಿದರೆ “ಆತ್ಮಹತ್ಯೆ” ಅನ್ನುವ Tendency ಬಹಳ ಬೆಳೆಯುತ್ತಿದೆ ಎಂದು ನನಗನಿಸುತ್ತದೆ. ಹೋರಾಟದ ಮನೋಭಾವದ ಕೊರತೆ ಮಾತ್ರ ಇದರ ಕಾರಣವೆಂದಲ್ಲ; ಇಂದಿನ ಮಕ್ಕಳಲ್ಲಿ “No” ಮತ್ತು “Failure” ಗಳನ್ನ ಸ್ವೀಕರಿಸುವುದಕ್ಕೆ ಕಷ್ಟವೆನಿಸುವ ಮನೋಸ್ಥಿತಿ ನಿರ್ಮಾಣವಾಗಿದೆ. ಆವಾಗ ಇಂಥ ಬಾವುಕ ನೆಲೆಯ ನಿರ್ಧಾರಗಳು ಅರಳಬಹುದಾದ ಬದುಕನ್ನು ಕಿತ್ತು ಬಿಸಾಕುತ್ತವೆ. ವಿವೇಕದ ತಲೆ ಮೇಲೆ ಹೊಡೆದು ವಿಷಾದ ವಿಜೃಂಭಿಸುತ್ತದೆ.
S.S.L.C ಯಲ್ಲಿ ನಾಲ್ಕು ಸಲ ಗಣಿತದಲ್ಲಿ ಫೇಲ್ ಆದ ತಮ್ಮ ಇವತ್ತು ಬ್ಯಾಂಕ್ ಆಫೀಸರ್ !!! ಎಲೆಕ್ಟ್ರಿಕಲ್ ಡಿಪ್ಲೋಮಾದಲ್ಲಿ ಕ್ಯಾರಿ ಓವರ್ ಪದ್ಧತಿ ಇದ್ದು ಕೂಡ ಕನಿಷ್ಟ ಜಸ್ಟ್ ಪಾಸ್ ಆಗಲಾರದ ನಾನು ಎಮ್.ಎಸ್ಸಿ ಗೋಲ್ಡ್ ಮೆಡಲ್^ಗೆ tough competitor ಆದೆ !!! ಹೆಚ್ಚುಗಾರಿಕೆಗಾಗಿ ಹೇಳುತ್ತಿಲ್ಲ ಇದನ್ನು. ಯಾವತ್ತೂ ಫಸ್ಟ್ Rank ಆಗಿರುತ್ತಿದ್ದ ನಾನು ಅವತ್ತು ಫೇಲ್ ಆದಾಗ ನಮಗಿಬ್ಬರಿಗೂ ಮೊದಲು ಕಂಡದ್ದು ಕುಣಿಕೆಯ ಚಿತ್ರವೇ !!! ಕಂಡ ತಕ್ಷಣ ಕೊರಳೊಡ್ಡಲಿಲ್ಲ ಅಷ್ಟೇ. ಮನುಷ್ಯನ ಅಸಹಾಯಕತೆ ಅತಂತ್ರ ಅವಮಾನ ಮತ್ತು ಅವು ಮನುಷ್ಯನನ್ನು ಹೇಗೆ ಅಧೃಡಗೊಳಿಸಬಹುದು ಎಂದು ನೀವನ್ನುತ್ತೀರೋ ಅವುಗಳೇ ಮನುಷ್ಯನಿಗೆ ಬಹು ದೊಡ್ಡ ಗುರುವೂ ಆಗಬಹುದು; ಸಾಧನೆಯ ಕೆಚ್ಚನ್ನೂ ತುಂಬಬಹುದು ಎನ್ನುತ್ತಿದ್ದೇನೆ. ಈ ನಿಟ್ಟಿನಲ್ಲಿ ಅವಲೋಕಿಸಿದರೆ ನಮ್ಮ ಜನರೇಷನ್ ಮತ್ತು ಈ ಜನರೇಷನ್ ನಡುವೆ ಬಹು ದೊಡ್ಡ ಗ್ಯಾಪ್ ಕಾಣಿಸುತ್ತಿದೆ. ಕನಸಿನಾಚೆಗೂ ಜಿಗಿದು ವಾಸ್ತವದ ನೆಲೆಗಟ್ಟಿನಲ್ಲಿ ನಿಂತು ನೋಡುವ ಮನೋಭಾವ, ಮನೋಧಾರ್ಢ್ಯ ಎರಡೂ ಕಾಣೆಯಾದ ಹಾಗೆ ಭಾಸ. ಹೀಗೆ ಜಾತಿ ಪ್ರಶ್ನೆ ಬಂದಾಗ ಇದಕ್ಕೆ ರಾಜಕೀಯ ಮತ್ತಿತರ ಎಲ್ಲ ಬಣ್ಣಗಳನ್ನೂ ಬಳಿದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಹುನ್ನಾರ ನಡೆಸುವವರ ಸಂಖ್ಯೆಯೂ ನಮ್ಮಲ್ಲಿ ಸಣ್ಣದಿಲ್ಲ.
ಇಂಥ ನೋವುಗಳನ್ನ ಬೇರೆ ಬೇರೆ ಕಾರಣಕ್ಕೆ ಅನುಭವಿಸಿ ಸಡ್ಡು ಹೊಡೆದು ಮೇಲೆದ್ದು ಬದುಕು ಬೆಳೆಸಿಕೊಂಡ ಕೆಲವರನ್ನು ವೈಯಕ್ತಿಕವಾಗಿಯೂ ಬಲ್ಲೆ ನಾನು. ಸೋಲು ಯಾವತ್ತೂ ಅನಾಥ; ಗೆಲುವಿಗಷ್ಟೇ ಸಾವಿರ ಅಪ್ಪಂದಿರು. ಅವಮಾನ, ನಿರಾಶೆ, ಸೋಲುಗಳಿಗೆ ಕಾರಣ ಜಾತಿ, ಬಡತನ, ಅಜ್ಞಾನ ಇನ್ನೂ ಅನೇಕವಿರಬಹುದು. ಅವನ್ನು ದಿಟ್ಟತನದಿಂದ ಎದುರಿಸಲು ಸಾಧ್ಯವೇ ಇಲ್ಲದಷ್ಟು ನಮ್ಮ ಸಮಾಜ ಕೆಟ್ಟಿಲ್ಲ. ಅಷ್ಟು ಕೆಟ್ಟಿದ್ದರೆ ಬ್ಯಾಗಲ್ಲಿ ಕೇವಲ ಎಂಟು ನೂರು ರೂಪಾಯಿ ಜತೆಗೆ ಮೈತುಂಬ ಅವಮಾನ, ಸೋಲು, ನಿರಾಶೆಗಳ ಸೇರಿಸಿ ಹೊಲಿದ ಕೌದಿ ಹೊದ್ದುಕೊಂಡು ಬೆಂಗಳೂರಿನ ಬಾಗಿಲು ತಟ್ಟಿದ ಹುಡುಗಿ ಬದುಕು ಕಟ್ಟಿಕೊಂಡು ಹೀಗೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಭಾವನೆಗಿಂತ ಬದುಕು ದೊಡ್ಡದು, ಬದುಕಿಗಿಂತ ಸಾಧನೆ ದೊಡ್ಡದು. ಸಾವಿಗೆ ಇರುವುದರ ಸಾವಿರ ಪಟ್ಟು ಹೆಚ್ಚು ದಾರಿಗಳಿವೆ ಬದುಕುವುದಕ್ಕೆ. ಇಂದಿನ ಯುವ ಸಮೂಹಕ್ಕೆ ಇದು ಅರಿವಾಗಬೇಕಷ್ಟೇ.
ರೋಹಿತ್ ಅವರ ಆತ್ಮಹತ್ಯೆ ದುಃಖ ತರುತ್ತದೆ. ಆದರೆ ಅದರ ಕಾರ್ಯ-ಕಾರಣದ ವಿವರ ತಿಳಿದಾಗ ತಮ್ಮ ರಾಜಕೀಯದ ಮತ್ತು ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಪ್ರಗತಿಪರ, ಮಾನವೀಯ ಹಕ್ಕುಗಳು ಇತ್ಯಾದಿಗಳ ಹೆಸರಿನಲ್ಲಿ ನಮ್ಮ ವಿ ವಿ ಗಳ ವಿದ್ಯಾರ್ಥಿಗಳನ್ನು ಮತ್ತು ಅವುಗಳ ಹಾಸ್ಟೆಲ್ ವಾಸಿಗಳನ್ನು misuse ಮಾಡಿಕೊಳ್ಳುವ ಒಂದು ಪಡೆಯೇ ರೋಹಿತ್ ನ ಆತ್ಮಹತ್ಯೆಯ ಹಿಂದಿದೆ ಎಂಬುದು ಸ್ಪಷ್ಟವಾಗಿದೆ. ಇದು ನಮ್ಮ ದೇಶದ ಎಲ್ಲಾ ವಿ ವಿ ಗಳಲ್ಲಿ ಇರುವ ಪರಿಸ್ಥಿತಿ. ಈಗ ಇದು ಪಕ್ಷ ರಾಜಕಾರಣದ ಬಣ್ಣ ಪಡೆಯುತ್ತಲಿದೆ. ವಿದ್ಯಾರ್ಥಿ ಸಂಘಗಳು ರಾಜಕೀಯದ ತಾಲೀಮು ಮನೆಗಳು ಆಗದಂತೆ ತಡೆಹಾಕಬೇಕಿದೆ. ಜಾತಿ,ಸಿದ್ಧಾಂತ,ವ್ಯಕ್ತಿಗಳ ಹೆಸರಿನಡಿಯಲ್ಲಿ ವಿದ್ಯಾರ್ಥಿಗಳು ಗುಂಪುಗಾರಿಕೆ, street fight ನಡೆಸುವುದನ್ನು ಮತ್ತು ಆ ಮೂಲಕ ಸಾವು ನೋವು ತಡೆಯಬೇಕಾದರೆ ಶಾಲೆ,ಕಾಲೇಜು,ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳನ್ನೇ ಬಹಿಷ್ಕರಿಸಬೇಕಾಗುತ್ತದೆ. ಅದು ಸಾಧ್ಯವೇ? ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ. ಇಂದು ಯಾವ ಯಾವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (UPSC /KPSC /Railway ಇತ್ಯಾದಿ) ಯಾವುದಾದರೊಂದು ವಿಷಯದ ಪ್ರಶ್ನೆ ಪತ್ರಿಕೆ ಇರಬೇಕೋ ಬೇಡವೋ,ಇದ್ದರೆ ಅದು ಎಷ್ಟು ಅಂಕಗಳಿಗೆ ಮತ್ತು ಅದರಲ್ಲಿ ಪಾಸಾಗುವುದನ್ನು ಕಡ್ಡಾಯ ಮಾಡಬೇಕೆ/ಬೇಡವೇ ಎಂದು ಆಯಾ ಪರೀಕ್ಷೆಯ ಸ್ಪರ್ಧಿಗಳೇ (ಅಂದರೆ ವಿದ್ಯಾರ್ಥಿಗಳೇ) ನಿರ್ಧರಿಸುವ ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ. ಅಂತಹುದರಲ್ಲಿ ನಮ್ಮ ಪ್ರಜಾಸತ್ತೆಯಲ್ಲಿ ಯಾವ ಪಕ್ಷದ ಸರ್ಕಾರ ಬಂದರೂ ವಿದ್ಯಾರ್ಥಿ ಸಂಘಗಳ ನಿಷೇಧ ಅಸಾಧ್ಯವೇ. ಅಷ್ಟೂ ಮೀರಿ ನಿಷೇಧ ಮಾಡಿದರೆ ದೇಶದಾದ್ಯಂತ ಗಲಭೆ,ಸಾವು,ನೋವು,ಅವ್ಯವಸ್ಥೆ. ಕೊನೆಗೆ ಆ ಪಕ್ಷದ ಸರ್ಕಾರದ ಕೊನೆ ದಿನಗಳು ಪ್ರಾರಂಭವಾಗುತ್ತದೆ.
ಹೌದು… ಸಾಹಿಲ್ ರ ಅಭಿಪ್ರಾಯದೊಳಗಿನ ತಿರುಳು ಬಹಳ ಅರ್ಥವನ್ನು ಸೂಸುತ್ತದೆ… ‘ಈಸಬೇಕು ಇದ್ದು ಜೈಸಬೇಕು’ ಎಂಬುದು ಉಳ್ಳವರ ಶಿವಾಲಯವಾಗಿ,ಒಣ ಆದರ್ಶಗಳಾಗಿ ಭಾಸವಾಗೂದು ಇಂತಹ ದೌರ್ಭಾಗ್ಯವಂತನ ಸಾವಿನಲ್ಲೂ ‘ಹೋರಾಟ’ದ ಕಾವು ಇರಲಿಲ್ಲ ಎಂಬ ತೆಳು ವಾದಗಳು ತೇಲಿ ಬಂದಾಗ…
ಒಂದು ಸಣ್ಣ ಮುಳ್ಳು ಚುಚ್ಚಿದರೂ ನೋವಾಗುವ ‘ದೇಹ’ ಮತ್ತು ಒಂದು ಸಣ್ಣ ಪ್ರೀತಿ ತುಂಬಿದ ಮಾತಿಗೇ ಮಾರು ಹೋಗುವ ‘ಮನಸ್ಸು’, ಇವೆರಡನ್ನೂ ಒಬ್ಬ ಮನುಷ್ಯ ತ್ಯಜಿಸಿ ಆತ್ಮಹತ್ಯೆಗೆ ಶರಣಾದನೆಂದರೆ ಅದರ ಹಿಂದಿನ ಅಸಹಾಯಕತೆ ,ಅವಮಾನ, ಅವನ ಜರ್ಜರಿತಗೊಂಡ ಮನಸ್ಸಿನ ವೇದನೆಯ ಎದುರು ಅವನೊಳಗೆ ನಾವು ಹುಡುಕುವ ರಾಜಕೀಯ ಪರಿಜ್ಞಾನಕ್ಕೆ, ಹೋರಾಟದ ಕಾವಿಗೆ ಅರ್ಥವೇ ಇರೂದಿಲ್ಲ.
ಆತ್ಮಹತ್ಯೆಯನ್ನು ಸಮರ್ಥಿಸೂದು ಮತ್ತು ಕವಿ ಶಾಫಿಯ ಅಭಿಪ್ರಾಯವನ್ನು ವಿರೋಧಿಸೂದು ನನ್ನ ಉದ್ದೇಶವೂ ಅಲ್ಲ.ಮನುಷ್ಯ ಎಷ್ಟೇ ಪ್ರಭಾವಿ,ಬುದ್ಧಿ ಶಕ್ತಿ ಉಳ್ಳವನಾದರೂ ಅವನ ದೇಹ ಮತ್ತು ಮನಸ್ಸಿನ ನಡುವೆ ನಿಯಂತ್ರಿಸಲಾಗದ ಆಳವಾದ ಕಂದಕವು ನಿರ್ಮಾಣವಾಗುತ್ತಿರೂದು ಅರಿವಾದಾಗ ,ಒಂದು ಹಂತದ ವರೆಗೂ ಮನಸ್ಸನ್ನು ತಡೆದು ನಿಲ್ಲುತ್ತಾನೆ. ಮತ್ತೆ ಮೊದಲಿನಂತಾಗಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಅದರಲ್ಲಿ ಜಯವನ್ನೂ ಕಾಣುತ್ತಾನೆ. ಆದರೆ ಆ ಹಂತವೂ ಮೀರಿದಾಗ ಅದೇ ಕಂದಕದೊಳಗೆ ಬಿದ್ದು ನಕ್ಷತ್ರವೋ ಇನ್ಯಾವುದೋ ಉಪಮೆ-ರೂಪಕಗಳನ್ನು ಹುಡುಕಿ ಹೊರಟು ಬಿಡುತ್ತಾನೆ.
ರಾಜಕೀಯ ಸಿದ್ಧಾಂತಗಳನ್ನು ಯಶಸ್ವಿಯಾಗಿ ಪಾಲಿಸಬೇಕಾದರೆ,ಮನುಷ್ಯನ ಹಕ್ಕಿಗಾಗಿ ಹೋರಾಡಬೇಕಾದರೆ ಮೊದಲು ಆತ್ಮಹತ್ಯೆ ಮಾಡಿಕೊಳ್ಳುವ ಮನುಷ್ಯನ ಅಂತಃಕರಣವನ್ನು ಅರ್ಥೈಸಿಕೊಳ್ಳುವ ಹೃದಯವಂತಿಕೆಯೂ ಬಹಳ ಅವಶ್ಯ.ರೋಹಿತನ ಸಾವಿನಲ್ಲಿ ‘ಮನುಷ್ಯ ತನ್ನ ದೇಹವನ್ನೇ,ತನ್ನ ಬದುಕನ್ನೇ ತನ್ನ ಪರಿಸ್ಥಿತಿಯ ವಿರುದ್ಧದ ಹೋರಾಟದ ಅಸ್ತ್ರವಾಗಿಸಿದ ಅಸಹಾಯಕತೆ ಕಾಣಿಸುತ್ತದೆ’ ಎಂಬ ಸಾಹಿಲ್ ರ ಮಾತು ಚಿಂತಿಸುವಂತೆ ಮಾಡುತ್ತದೆ.
(ತಾಜ್ ಗಡಿನಾಡು)