ಅವನತ್ತ ಕವಿತೆಗಳೇ ಹರಿದುಬಂದವು..

 

ನೀನು ನಕ್ಷತ್ರವಾಗಿಹೆ ಎಂದು
ಕತ್ತಲಾಗುವುದನು ಕಾಯುತ್ತಿದ್ದೆ
ನಾ ಇಲ್ಲಿಂದ..
ನೀನು
ನೊಂದುಕೊಂಡು ಉಸಿರ
ಹಾಸಿದ ನೆಲದ ಮೇಲೆ
ಬಿದ್ದುಕೊಂಡು
ನಿನ್ನ ಹುಡುಕುತ್ತಿದ್ದೇನೆ
ಕಣ್ಣಲಿ ತುಂಬಿದ ನೀರಿನಲಿ
ಆದರೆ..
ನಕ್ಷತ್ರಗಳೆಲ್ಲ ಮಂಜಾಗಿ ನೀ ಕಾಣದಾಗಿಹೆ
ಹನಿ ಇಂಗಿ ಹೋದ ನೆಲದಲಿ
ನಿನ್ನ ನೆನಪ ಹುದುಗಿಸಿದ್ದೇನೆ
ಮುಂದೊಂದು ದಿನ ಬಿದ್ದ ಹನಿ
ಗಂಟಲ ಸೇರಿ
ಗ್ರಹ-ನಕ್ಷತ್ರಗಳೆನಿಸಿದವರ ಎದೆ
ತಟ್ಟಬಹುದು ಎಂದು
ನನ್ನ ಗೆಳೆಯರು ಹೀಗೆ ಮಾಡುತ್ತಿದ್ದಾರೆ
ನೀ ಕೊರಳೊಡ್ಡಿ ಸಾವಿನನುಭವದ
ಅನ್ನವಿಕ್ಕಿದ್ದಿ
ಉಣ್ಣಲಾಗುತ್ತಿಲ್ಲ
ಹನಿ ನೀರ ಹುಡುಕುತ್ತಾ
ಕತ್ತಲಿಗೆ ಬಂದಿದ್ದೇನೆ
ಕತ್ತಲು ಕಳೆದು
ವಿಜ್ಞಾನ ಸೂರ್ಯ ಬರಲಿದ್ದಾನೆ
ನಿನ್ನೆಲ್ಲ ನಕ್ಷತ್ರಗಳು
ವಿಜ್ಞಾನ ಸೂರ್ಯರಲ್ಲವೇ…

– ಪ್ರಗಾಥ ಮೋಹನ

12400970_963139603770776_884877344830618477_n

ದುಃಖದಲ್ಲಿದ್ದಾಗಲೇ ಹೇಳಿಬಿಡಬೇಕು
ಸುಡಿ ನಿಮ್ಮ ಜಾತಿಗಳನ್ನು
ಧರ್ಮದ ಕಟ್ಟಳೆಗಳನ್ನು
ಮನುಷ್ಯ ಮನುಷ್ಯನನ್ನು ದ್ವೇಶಿಸಿ ಕೊಲ್ಲುತ್ತಿರುವ
ನಿಮ್ಮ ಸುಳ್ಳು ಆತ್ಮೋದ್ದರಾದ ಭೊಗಳೆ
ಪವಿತ್ರ ಅಪವಿತ್ರ
ಮೇಲು ಕೀಳಿನ
ಜಾತಿ ಪದ್ದತಿ ಕಲ್ಮಶ ಮನಸ್ಸುಗಳನ್ನು
ಇಲ್ಲವಾದಲ್ಲಿ ಈ ಸೃಷ್ಟಿಯಲ್ಲಿ
ಉಳಿಯುವುದು
ಕೇವಲ ಸಾಯಿಸುವ ಅಸ್ತ್ರಗಳು
ಅಸ್ತಿಪಂಜರಗಳು

-ಕೃಷ್ಣ

12400970_963139603770776_884877344830618477_n

ಪ್ರತೀಸಾರಿಯೂ ಇಲ್ಲೊಂದು
ಸಾವು ಸಂಭವಿಸಬೇಕು
ಸಮಸ್ಯೆಗಳನ್ನು ಜೀವಂತವಾಗಿರಿಸಲು

ನೋಡಿ ಈಗ ವೇಮುಲಾ
ಜೀವ ಬೇಕಾಯ್ತು
ನಿಮಗೆಲ್ಲಾ ಸಮಸ್ಯೆ ಕಾಣಲು

ಕಾಲೇಜು ಸೀಟಿನಿಂದ
ಹಿಡಿದು ಎಲ್ಲಾ ಮುಗಿಸಿ
ಹೊರಡುವ ಗೇಟಿನ ತನಕ
ಎಲ್ಲ ಯೂನಿವರ್ಸಿಟಿಲೀ
ಏನುಂಟು ಏನಿಲ್ಲ

ಅಧಿಕಾರಶಾಹಿ ಕೈಗಳು
ಭ್ರಷ್ಟತೆ, ಅಸಮಾನತೆ
ತಾರತಮ್ಯ, ಜೊಲ್ಲು
ಸುರಿಸೋ ಕಾಮದ ಕೊರಳು

ಅಡಿಗಡಿಗೂ ಎದುರಾಗೋ
ವ್ಯವಸ್ಥಿತ ಬೆದರಿಕೆ
ಮಾನಸಿಕ ಹಿಂಸೆ
ಇವರು ವಿದ್ಯಾದಾನ
ಮಾಡೋ ಅಸುರರು

ಇರಲಿ ವೇಮುಲಾ
ಸತ್ತು ಸಾಧಿಸಿದ್ದೇನು ನೀನು?
ನೋಡೀಗ ನಿನ್ನ ಸಾವು
ಇವರಿಗಾಹಾರ ಮೃಷ್ಟಾನ್ನ
ಎಡದವರು ಬಲಕ್ಕೂ
ಬಲದವರು ಎಡಕ್ಕೂ
ಎಸೆದಾಡುತ್ತಿದ್ದಾರೆ ನಿನ್ನ
ಕನಸು ಆಸೆ ಮತ್ತು ಸಾವನ್ನು

ನೀನೇನು ಮೊದಲೆಯವನು
ಅಥವಾ ಕೊನೆಯವನೂ ಅಲ್ಲ
ಬಿಡು ..
ನೀನು ಬದುಕಬೇಕಿತ್ತು
ನಾವೆಲ್ಲಾ ಪ್ರತೀಕ್ಷಣವೂ
ಹೋರಾಡುತ್ತಿದ್ದೇವೆ
ಅಕ್ಷರ ದಂಧೆಯ ಅಡ್ಡಾಗಳಾದ
ಯೂನಿವರ್ಸಿಟಿಗಳ ವಿರುದ್ಧ
ನಿನಗೇಕೆ ಇದು ಗೊತ್ತಾಗಲಿಲ್ಲ

ನೀನೀಗ ನಮಗೆ ದಾರಿ ನಕ್ಷತ್ರ
ಸಾಯಲಲ್ಲ ಅಣ್ಣಾ
ಹೋರಾಡೋಕೆ
ನಕ್ಷತ್ರಗಳನ್ನ ಭೂಮಿ
ಮೇಲೂ ಬೆಳಗೋಕೆ
ಮುಂದೆ ನಿನ್ನ ಸ್ನೇಹಿತರ ಮಕ್ಕಳು
ಅದೇ ಯೂನಿವರ್ಸಿಟಿಯಲ್ಲಿ
ಅನೇಕಾನೇಕ ಮಹನೀಯರಾಗೋಕೆ

ನಾವು ಇಲ್ಯಾರಿಗೂ
ಸಾವಿನ ಆಹಾರವಾಗೋಲ್ಲ
ಅವರು ನುಂಗಲಾರದ
ಸಂವಿಧಾನದ ನಕ್ಷತ್ರಗಳಾಗುತ್ತೇವೆ
ನೀನಲ್ಲಿಂದಲೇ ನೋಡಿ
ಹೊಳಪಾಗು ….!

-ಪಾವನಾ ಭೂಮಿ

12400970_963139603770776_884877344830618477_n

ಕೊನೆಗಾಣಿಸಿಕೊಳ್ಳಬಾರದಿತ್ತು
ಶಿವನೊಲಿಸಬಂದ ಪ್ರಸಾದ ಕಾಯ.
ಯಾರದೋ ದಬ್ಬಾಳಿಕೆಗೆ, ನೀಚತನಕ್ಕೆ
ಉತ್ತರಕೊಡಬೇಕಿತ್ತು
ಯಾರು ಮುನಿದು ನಮ್ಮನೇನ ಮಾಡುವರು!
ಊರು ಮುನಿದು ನಮ್ಮನ್ನೆಂತು ಮಾಡುವರು ?
ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯ
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ನ ಆಗಬೇಕಿತ್ತು.
ಬರೀ ತೆಪ್ಪಗಿದ್ದರೆ ಸಾಲದು ಗುಟುರಬೇಕಿತ್ತು.
ಆನೆಗೆ ಅಂಕುಶವಾಗಬೇಕಿತ್ತು.

-ವಿಶ್ವಾರಾಧ್ಯ ಸತ್ಯಂಪೇಟೆ 

 

‍ಲೇಖಕರು Admin

January 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಶಮ, ನಂದಿಬೆಟ್ಟ

    “ಇರಲಿ ವೇಮುಲಾ
    ಸತ್ತು ಸಾಧಿಸಿದ್ದೇನು ನೀನು?
    ನೋಡೀಗ ನಿನ್ನ ಸಾವು
    ಇವರಿಗಾಹಾರ ಮೃಷ್ಟಾನ್ನ
    ಎಡದವರು ಬಲಕ್ಕೂ
    ಬಲದವರು ಎಡಕ್ಕೂ
    ಎಸೆದಾಡುತ್ತಿದ್ದಾರೆ ನಿನ್ನ
    ಕನಸು ಆಸೆ ಮತ್ತು ಸಾವನ್ನು”

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: