ವಸುಂಧರಾ ಕದಲೂರು
ಆ ದಿನವೇ ಸಂಬಳವಾಗಿತ್ತು.
ಮೆಸೇಜೂ ಮೊಬೈಲಿಗೆ
ಬಂದಿತು.
ಅಕೌಂಟಿಗೆ ಸೇರಿದ ದುಡ್ಡನು
ಕಂಡು ಗಾಬರಿಯಾಗಿತ್ತು.
ಅರೆ!
ಏನಿದೇನಿದು, ಏಕಿದೇಕಿದು,
ಕಡಿತವಾಗಿದೆ ಸಂಬಳ!
ಕಡಿಮೆಯಾಗಿದೆ ಭತ್ಯೆಯು!?
ಗಾಬರಿ ಬಿದ್ದೆ,
ಡಿಜಿಟಲ್ ಪಾಸ್ ಬುಕ್ಕನು
ತೆರೆದೆ – ಚೆಕ್ ಮಾಡಿದೆ.
ಹೌದೇ ಹೌದು ಕಡಿಮೆ ಹಣ
ಸಂದಾಯವಾಗಿದೆ.

ಏನಾಗಿದೆ, ಇದೇನಾಗಿದೆ!
ಸಂಬಳ ಏಕೆ ಕಡಿತವಾಗಿದೆ?
ಯೋಚಿಸುತ್ತಿದ್ದಂತೆ ‘ಟಣ್’
ಎಂದು ಸದ್ದಾಯಿತು.
ಮೊಬೈಲಿಗೊಂದು ಮೆಸೇಜು ಬಿತ್ತು.
‘ನಿಮಗೆ ಮುವ್ವತ್ತ ಮೂರು
ಪರ್ಸೆಂಟು ಸಂಬಳ ನೀಡಲಾಗಿದೆ’.
ಉರಿದು ಬಿದ್ದೆ. ಹಲ್ಲು ಕಡಿದೆ.
ಉಗ್ರ ಹೋರಾಟಕ್ಕಿಳಿಯ
ಬೇಕು. ಈ ಕುರಿತು ದೊಡ್ಡ ಬರಹ
ಬರೆಯಬೇಕು. ಯಾರಿಗೆ ಹೇಳಲಿ
ಈ ಬಗ್ಗೆ? ಇದೋ ಅನ್ಯಾಯದ
ಹೊಸ ಬಗೆ. ಮಾಧ್ಯಮಗಳಿಗೆ
ವರದಿ ಮಾಡುವೆ ; ಬ್ರೇಕಿಂಗ್
ನ್ಯೂಸ್ ಬಿತ್ತರಿಸುವೆ.. ಎಂದವಳೇ
ಇನ್ನೇನು ಪತ್ರಿಕೆಗೋ ಮಾದ್ಯಮಕ್ಕೋ
ಕರೆ ಮಾಡಬೇಕೆನ್ನುವಾಗ
ಒಂದೇ ಸಮನೆ ಉಲಿಯಿತು,

ಆ್ಯಪಲ್ ಫೋನಿನ
ರಿಂಗ್ ಟೋನು. ಅರೆ,
ನನ್ನದೇ ಫೋನಿನ ದನಿಯಂತಿದೆ!
ಸರಿಯಾಗಿ ನೋಡಿದೆ..
ಮುಂದಿದ್ದ ಕ್ಯಾಲೆಂಡರಿನ
ಇಪ್ಪತ್ತನೇ ತಾರೀಖು ಕಣ್ಣಿಗೆ ಬಿತ್ತು.
ಇನ್ನೂ ತಿಂಗಳಾಗದೆ ಸಂಬಳವೆಲ್ಲಿ?
ಎನ್ನುತ್ತಾ ಎದ್ದೆ ಹಾಸಿಗೆಯ
ಮಗ್ಗುಲಲ್ಲೇ ಕಂಡಿತು ಅರ್ಧ ತೆರೆದ
‘ಮಹಿಳೆ- ಸಮಾನತೆ- ಮೀಸಲಾತಿ’ಯ
ದೊಡ್ಡ ಹೊತ್ತಿಗೆ; ಓದಲು ಪುಸ್ತಕದ ಅಂಗಡಿಯಿಂದ ಮೊನ್ನೆತಾನೇ
ಕೊಂಡು ತಂದಿದ್ದೆ…!






ಚೆನ್ನಾಗಿದೆ
ಚೆನ್ನಾಗಿದೆ…
ಧನ್ಯವಾದಗಳು.