ಸಂಪು ಕಾಲಂ : ಲೂಸಿಯಾ ಮಾತ್ರೆ ಇಲ್ಲದೆ ಕಂಡ ದೇವಾಲಯದ ಫ್ಯಾಂಟಸಿಗಳು!


ತಮಿಳು ನಾಡಿನ ಬಹುಶಃ ಅತಿ ಪ್ರಾಚೀನವಾದ ದೇವಸ್ಥಾನ ಎಂದರೆ ಜಂಬುಕೇಶ್ವರ ದೇವಾಲಯ. ಇದು ಸುಮಾರು ಒಂದನೇ ಶತಮಾನದಲ್ಲೇ ತನ್ನ ಸಾಮಾಜಿಕ ಪ್ರಸ್ತುತತೆ ಹೊಂದಿತ್ತು ಎಂಬುದು ಶಾಸನಗಳ ಮೂಲಕ ತಿಳಿದು ಬರುತ್ತದೆ. ಈ ದೇವಸ್ಥಾನ ಚೋಳರು, ಪಾಂಡ್ಯರು, ಹೊಯ್ಸಳರು ಮತ್ತು ಮದುರೈ ನಾಯಕರು ಎಲ್ಲರಿಂದ ಆರಾಧಿಸಲ್ಪಟ್ಟಿದೆ. ಸಂಗಮ ಸಾಹಿತ್ಯದಲ್ಲಿ ಈ ದೇವಸ್ಥಾನದ ಪ್ರಸ್ತಾಪವಿದ್ದು ಏಳನೇ ಶತಮಾನದಲ್ಲಿ ತಮಿಳು ಶೈವರು ತಮ್ಮ ಹಾಡುಗಳಲ್ಲಿ ಜಂಬುಕೇಶ್ವರನನ್ನು ಉಲ್ಲೇಖಿಸಿದ್ದಾರೆ.
ಈ ದೇವಸ್ಥಾನದ ಒಳಾವರಣ ಸೇರಿದ ಕೂಡಲೇ ಬಲಭಾಗದಲ್ಲಿ ಒಂದು ಕುತೂಹಲಕಾರೀ ಕೆತ್ತನೆ ಇತ್ತು. ಅದೇನೆಂದರೆ ಒಬ್ಬ ವ್ಯಕ್ತಿಯ ತಲೆಯ ಭಾಗದಿಂದ ಒಂದು ಮರ ಬೆಳೆದಿರುವುದು. ಆ ಮರದ ನೆರಳಿನಲ್ಲಿ ಒಬ್ಬ ಹೆಣ್ಣು ಲಿಂಗಕ್ಕೆ ಪೂಜೆ ಮಾಡುತ್ತಿರುವುದು. ಆ ಲಿಂಗದ ಹಿಂಭಾಗದಲ್ಲಿ ಜೇಡರ ಬಲೆ ಮತ್ತು ಲಿಂಗದ ಮುಂದೆ ಆನೆಯ ಶಿಲ್ಪಗಳು ಕಂಡುಬಂದವು. ಗರ್ಭಗುಡಿಗೆ ಹೋಗುವ ಯಾವ ಆತುರಗಳನ್ನೂ ಈ ಎದುರು ಕಂಡ ಚಿತ್ರ ಹೋಗಲಾಡಿಸಿತ್ತು. ನಮ್ಮ ಕುತೂಹಲದ ಕಣ್ಣುಗಳನ್ನು ಗುರ್ತಿಸಿ ನಮ್ಮ ಟೂರ್ ಮ್ಯಾನೇಜರ್ ಕಥೆ ಪ್ರಾರಂಭಿಸಿದ. ಒಂದಲ್ಲ, ಎರಡಲ್ಲ, ಮೂರು ಮತ್ತೊಂದು! ಈ ಕಥೆಗಳು ಹೇಗೆ ಸಮಾಜಕ್ಕೆ, ವಾಸ್ತವಕ್ಕೆ ಒಗ್ಗಿ ಹೋಗಿಬಿಡುತ್ತವೆ ಎಂಬುದಕ್ಕೆ ಮತ್ತೊಂದು ನಿದರ್ಶನ.
ಈ ಜಂಬುಕೇಶ್ವರ ದೇವಾಲಯವಿರುವುದು ತಿರುವಾನೈಕಾ (ಅಥವಾ ತಿರುವಾನೈಕಾಲ್) ಎಂಬ ಸ್ಥಳದಲ್ಲಿ. ತಿರು+ಆನೈ+ಕಾ ಅಂದರೆ ಪೂಜ್ಯ ಆನೆಯ ಕಾಡು ಎಂದು. ಈ ಸ್ಥಳದ ಕಾವೇರಿ ನದಿ ತೀರದಲ್ಲಿ ಜಂಬು ಎಂಬ ಮಹರ್ಷಿಯು ತಪಸ್ಗೈಯ್ಯುವಾಗ ಆತನ ತಲೆಯ ಮೇಲೆ ವೆನ್ ನಾವಲ್ ಮರವೊಂದು ಬೆಳೆದುಕೊಳ್ಳುತ್ತದೆ. ಆತನ ಭಕ್ತಿಗೆ ಮೆಚ್ಚಿ ಶಿವನು, ಈ ಜಂಬುವಿನ ಸನ್ನಿಧಿಯಲ್ಲಿ ನೆಲೆಸಲು ನಿರ್ಧರಿಸುತ್ತಾನೆ. ಇಷ್ಟರೊಳಗೆ, ಪಾರ್ವತಿ ದೇವಿಯು ಶಿವನು ಜಗತ್ತಿಗಾಗಿ ತ್ಯಾಗ ಮಾಡುತ್ತಿರುವುದನ್ನು ಲೇವಡಿ ಮಾಡುತ್ತಾಳೆ. ಆಕೆಗೆ ಸತ್ಯಾಂಶ ತಿಳಿಯಲು ಶಿವ ಪಾರ್ವತಿಯನ್ನು ಆ ಕಾವೇರಿ ತೀರದ ಜಂಬು-ಮರದ ಬಳಿಗೆ ಕಳುಹುತ್ತಾನೆ. ಜಂಬುವಿನ ಶಿವಭಕ್ತಿಗೆ ಮನಸೋತು, ತನ್ನ ತಪ್ಪು ಅರಿತ ಪಾರ್ವತಿ, ಅಖಿಲಾಂಡೇಶ್ವರಿಯಾಗಿ ಆ ನದೀ ತೀರದಲ್ಲೇ ನೆಲೆಸಿ, ನೀರಿನಲ್ಲಿ ಒಂದು ಲಿಂಗವನ್ನು ಮಾಡಿ ಅದೇ ಮರದಡಿ ಪ್ರತಿಷ್ಠಾಪಿಸುತ್ತಾಳೆ. (ಶಿವನು ನೀರಿನ ರೂಪದಲ್ಲಿ ಇಲ್ಲಿ ರೂಪುಗೊಂಡ ಕಾರಣ ಇದಕ್ಕೆ ಅಪ್ಪುಸ್ಥಲಮ್ ಎಂದು ಸಹ ಕರೆಯುತ್ತಾರೆ).
ಹಿಂದೊಮ್ಮೆ ಶಿವ ಗಣದಲ್ಲಿದ್ದ ಇಬ್ಬರು ಮಹಾ ಶಿವಭಕ್ತರು ಮಲ್ಯವನ ಮತ್ತು ಪುಷ್ಪದಂತ ಎಂಬುವವರು ಸದಾ ಜಗಳವಾಡುತ್ತಾ, ಕೊನೆಗೆ ಒಬ್ಬರನ್ನೊಬ್ಬರು (ಒಬ್ಬರು ಆನೆಯಾಗುವಂತೆಯೂ ಮತ್ತೊಬ್ಬರು ಜೇಡವಾಗುವಂತೆಯೂ) ಪರಸ್ಪರ ಶಪಿಸಿಕೊಳ್ಳುತ್ತಾರೆ. ಆನೆ ಮತ್ತು ಜೇಡರಾಗಿ ಈ ಜಂಬುಕೇಶ್ವರನ ಲಿಂಗದ ಬಳಿ ಬಂದು ಆ ಲಿಂಗಕ್ಕೆ ದಿನನಿತ್ಯ ತಮ್ಮ ಸೇವೆ ಸಲ್ಲಿಸುತ್ತಿರುತ್ತಾರೆ. ಆನೆ ತನ್ನ ಸೊಂಡಿಲಿನಲ್ಲಿ ನೀರನ್ನು ತಂದು ಶಿವಲಿಂಗಕ್ಕೆ ಸ್ನಾನ ಮಾಡಿಸಿ ಹೂ ಮುಡಿಸಿ ಹೋಗುತ್ತಿತ್ತಂತೆ. ಜೇಡ ಎಲೆಗಳು, ಧೂಳು ಉದುರದಂತೆ, ಲಿಂಗದ ಮೇಲೆ ತನ್ನ ಬಲೆ ಕಟ್ಟುತ್ತಿತ್ತಂತೆ. ಪ್ರತಿ ದಿನ ಆ ಆನೆ ಮತ್ತು ಜೇಡಕ್ಕೆ ಆಶ್ಚರ್ಯ. ತಾವು ಹಿಂದಿನ ದಿನವಷ್ಟೇ ಸೇವೆ ಸಲ್ಲಿಸಿ ಹೋಗಿದ್ದರೂ ಪುನಃ ಆನೆ ಬಂದಾಗ ಜೇಡದ ಬಲೆ ಇರುತ್ತಿತ್ತು ಮತ್ತು ಜೇಡ ಬಂದಾಗ ತನ್ನ ಬಲೆ ಮುರಿದು ಬಿದ್ದು ಲಿಂಗದ ಪೂರ ಹೂವು, ಎಲೆಗಳು ರಾಶಿಯಾಗಿರುತ್ತಿತ್ತು. ಈ ಇಬ್ಬರ ಪ್ರೀತಿ ಭಕ್ತಿ, ಒಬ್ಬರೊಬ್ಬರ ಕಾರ್ಯವನ್ನು ನಾಶಮಾಡುವಂತಾಗಿ ಇಬ್ಬರ ನಡುವೆ ಕದನವಾಗಿ, ಇಬ್ಬರೂ ಸಾಯುವಂತಾಗುತ್ತದೆ. ಅವರ ಸಾವಿನ ನಂತರ ಶಾಪವಿಮೋಚನೆಯಾಗುತ್ತದೆ. ಹೀಗೆ ಆನೆಯಿಂದ ರಕ್ಷಿಸಲ್ಪಟ್ಟ ವನ ಇದಾದ್ದರಿಂದ ಇದನ್ನು ತಿರುವಾನೈಕಾ ಎಂದು ಕರೆಯುತ್ತಾರೆ. ಮತ್ತು ಆ ಜೇಡ ಚೋಳ ಕುಟುಂಬದಲ್ಲಿ ರಾಜಕುಮಾರನಾಗಿ ಜನಿಸುತ್ತಾನೆ. ಆ ರಾಜಕುಮಾರ ಕೆಂಪು ಕಣ್ಣುಳ್ಳವನಾದ್ದರಿಂದ ಅವನನ್ನು ಕೋಚೆಂಗಣ್ಣನ್ ಎಂದು ನಾಮಕರಣ ಮಾಡುತ್ತಾರೆ.
ಆ ರಾಜನ ಕೆಂಪು ಕಣ್ಣಿನ ಕಥೆ ಹೀಗಿದೆ: ಜನನಕ್ಕೆ ಪ್ರಶಸ್ತ ಸಮಯವಲ್ಲದಾಗಲೇ ಗರ್ಭಿಣಿ ರಾಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಗ ಆಕೆ, ತನ್ನ ಮಗ ಶ್ರೇಷ್ಠ, ಸಕಾಲದಲ್ಲೇ ಜನಿಸಬೇಕು ಎಂದು ಸಮಯ ತಡೆಹಿಡಿಯಲು ತನ್ನನ್ನು ತಿರುಗು-ಮುರುಗಾಗಿ ಹಗ್ಗಕ್ಕೆ ಕಟ್ಟಿ ಹಾಕುವಂತೆ ಸಲಹೆ ನೀಡುತ್ತಾಳೆ. ಇದರಿಂದ ಆ ರಾಜ ಕೆಂಗಣ್ಣಿನವನಾದ ಎಂಬ ಕಥೆ. ಈ ಕೋಚೆಂಗಣ್ಣನ್ ರಾಜನೇ ತನ್ನ ಪೂರ್ವಾಪರವನ್ನು ಅರಿತು, ಜಂಬುಕೇಶ್ವರನ ದೇವಸ್ಥಾನವನ್ನು ಕಟ್ಟುತ್ತಾನೆ ಮತ್ತು ಯಾವುದೇ ಆನೆಗೆ ಪ್ರವೇಶವಿರದಂತೆ ಗರ್ಭಗುಡಿಯ ದ್ವಾರವನ್ನು ಕೇವಲ ನಾಲ್ಕು ಅಡಿ ಎತ್ತರದಲ್ಲಿ ಮಾಡಿರುತ್ತಾನೆ.
“Stories are equipment for living” ಅಂತ ಒಂದು ಮಾತು ಕೇಳಿದ್ದೆ. ಅದು ಈ ಸಂದರ್ಭದಲ್ಲಿ ಚೆನ್ನಾಗಿ ಅರ್ಥವಾಯ್ತು. ಇಂತಹ ಸ್ಥಳಗಳಲ್ಲಿ ನೆಲೆ, ಕಲೆ, ನಿತ್ಯ ಕಾರ್ಯಗಳು ಎಲ್ಲವೂ ಒಂದೊಂದು ಕಥೆಗಳಿಂದ ಹೆಣೆದುಕೊಂಡಿವೆ. ಆ ಮೇಲೆ ಕಂಡ ಕಥೆಗಳಲ್ಲಿ ಎಷ್ಟೆಲ್ಲಾ ವಿಚಾರಗಳು ಅಡಗಿವೆ. ಪ್ರೇಮ ಸಲ್ಲಾಪ, ಮುನಿಸು, ಅವಮಾನ, ಭಕ್ತಿ, ಸ್ನೇಹ, ದ್ವೇಷ, ವೈರತ್ವ, ಗುಣ, ದುರ್ಗುಣ ಇತ್ಯಾದಿ ಅನೇಕ ಮಾನವ ಸಹಜ ಗುಣಗಳನ್ನೇ ನಾವು ದೈವತ್ವಕ್ಕೂ ಸೇರಿಸಿ ಬಿಡುತ್ತೇವೆ. ನಮ್ಮಲ್ಲಿರುವುದನ್ನೇ ನಾವು ದೇವರಲ್ಲಿ ಕಾಣ ಬಯಸುತ್ತೇವೆ. ಯಾವ ಲೂಸಿಯಾ ಮಾತ್ರೆಗಳಿಲ್ಲದೆ, ನಮಗೆ ಬೇಕಾದಂತೆ ಕಾಣಬಯಸುವ ಕಥೆಗಳು, ಫ್ಯಾಂಟಸಿಗಳಾಗಿ ನಮ್ಮ ಮುಂದೆ ನಿಂತು, ಕಾಲಾಯಗತ ನಮ್ಮ ಚರಿತ್ರೆಗೆ ಸೇರಿಬಿಡುತ್ತವೆ. ಕಾರಂತರ ಮಾತು ನೆನಪಾಗುವುದು ಈ ಸಂದರ್ಭದಲ್ಲೇ!
ಈ ದೇವಸ್ಥಾನದಲ್ಲಿ ಅಖಿಲಾಂಡೇಶ್ವರಿ ಮೂರ್ತಿಯಿದ್ದು, ಆಕೆಯ ಸೌಂದರ್ಯ ಜಗಜ್ಜಾಹೀರಾಗಿದೆ. ಈ ಸೌಂದರ್ಯ ಮೂರ್ತಿಯನ್ನು ಕಂಡೇ ಮುತ್ತುಸ್ವಾಮಿ ದೀಕ್ಷಿತರು ಅಖಿಲಾಂಡೇಶ್ವರಿಯ ಕುರಿತು ಕೃತಿ ರಚನೆ ಮಾಡಿದ್ದಾರೆ. ಈ ಅಖಿಲಾಂಡೇಶ್ವರಿ ಮೂರ್ತಿಗೆ ಆದಿ ಶಂಕರಾಚಾರ್ಯರು ಚಕ್ರದ ಸಂಕೇತವಾಗಿ ಕಿವಿಯೋಲೆಗಳನ್ನು ತೊಡಿಸಿದರಂತೆ. ಈ ಕಾರಣಕ್ಕಾಗಿ ದೇವಸ್ಥಾನದಲ್ಲಿ ಆದಿ ಶಂಕರಾಚಾರ್ಯರ ಮೂರ್ತಿಯೂ ಇದೆ. ಇಷ್ಟೆಲ್ಲಾ ಕಥೆ ಕೇಳಿ ಅಖಿಲಾಂಡೇಶ್ವರಿಯ ವಿಗ್ರಹವನ್ನು ಕಾಣಲು ಕಾತುರಳಾಗಿದ್ದ ನನಗೆ ಭ್ರಮನಿರಸನವೇ ಆಯಿತು ಎನ್ನಬಹುದು. Survival of the fittest ಥಿಯರಿಯನ್ನೇ ತಮ್ಮ ಜೀವವಾಗಿಸಿ, “ನುಗ್ಗಿ ನಡೆ ಮುಂದೆ” ಎಂದು ನೂಕುತ್ತಿದ್ದ ಜನ ಒಂದೆಡೆ, ಗಾಳಿ, ಬೆಳಕು ಸರಿಯಾಗಿರದೆ ನಾವು ಸೊರಗಿದ್ದರೂ, ಕರುಣಿಸದ ಸೂರ್ಯ ದೇವನ ಕಠೊರತೆ ಮತ್ತೊಂದೆಡೆ. ಇಂತಹ ಪರಿಸ್ಥಿತಿಯಲ್ಲಿ ಆ ಅಖಿಲಾಂಡೇಶ್ವರಿ ಮೂರ್ತಿ ಬರಿ ಒಂದು ಹೂವು, ಎಣ್ಣೆ ಮಸಿ, ಹಾಲು, ಇತ್ಯಾದಿಗಳಿಂದ ತುಂಬಿದ ಒಂದು ವಿಗ್ರಹವಾಗಿ ಕಂಡಿತೇ ಹೊರತು ಅದರಲ್ಲಿ ಸೌಂದರ್ಯ ಕಂಡು ಬರಲಿಲ್ಲ. ದರ್ಶನವಾಗಿ ಹೊರ ಬರುತ್ತೇನೆ, ನನ್ನ ಸಹಚಾರಿಯೊಬ್ಬರು ಭಾವಪರವಶರಾಗಿಬಿಟ್ಟಿದ್ದರು. ವಿಗ್ರಹದ ಸೌಂದರ್ಯಕ್ಕೆ ಮನಸೋತಿದ್ದರು. “Beauty lies in the eyes of the beholder” ಎನ್ನುವ ನುಡಿ ನನಗೆ ಚೆನ್ನಾಗಿ ಅರಗಿದ್ದು ಈ ದೇವಸ್ಥಾನದಲ್ಲಿ! ನಮಗೆ ಪ್ರೀತಿ, ಭಕ್ತಿ ಇದ್ದರೆ ಎಂತಹ ವಸ್ತು/ವಿಚಾರವೇ ಆಗಲಿ ಪ್ರಿಯವೆನಿಸುತ್ತದೆ.
ಜಂಬುಕೇಶ್ವರದಿಂದ ಮರಳಿದರೂ ಅಲ್ಲಿನ ಕಥಾಹಂದರಗಳ ಗುಂಗಿನೊಳಗೆ ಮನಸು ವಿಹಂಗಮಿಸುತ್ತಿದ್ದ ನನಗೆ, ಈ ದೇವಸ್ಥಾನದಲ್ಲೂ ಕಂಡು ಬಂದ “ಓನ್ಲಿ ಹಿಂದೂಸ್ ಆರ್ ಅಲೋಡ್” ಬೋರ್ಡು ಅಷ್ಟು ನಾಟಲಿಲ್ಲ. ಆದರೆ ಪಕ್ಕದಲ್ಲೇ ಇದ್ದ ನನ್ನ ಗಂಡ “ಆನೆ ಮತ್ತು ಜೇಡ ಕೂಡ ಹಿಂದೂಗಳೋ?!” ಎಂದು ಕೊಂಕು ನುಡಿದಾಗ ಒಂದು ಕಹಿ ನಗೆ ಬೀರಿ ವಾಸ್ತವಕ್ಕೆ ಬಂದೆ.
ನಮ್ಮ ಮುಂದಿನ ಪಯಣದ ದಾರಿ ಕಂಡದ್ದು ರಾಮೇಶ್ವರಂ ಮತ್ತು ಈ ದಾರಿಯಲ್ಲಿ ನಾವು ಕಂಡದ್ದು ಪಾಂಬನ್ ಸೇತುವೆಯನ್ನು. ಇದು ಭಾರತದ ಮೊಟ್ಟ ಮೊದಲ ಕಡಲ ಸೇತುವೆ. 2.3 ಕಿ.ಮೀ ಉದ್ದವಿದ್ದು ಜಗತ್ತಿನ ಎರಡನೇ ಅತಿ ದೊಡ್ಡ ಸೇತುವೆಯೂ ಆಗಿದೆ. ಈ ಸೇತುವೆಯ ಮುಂಭಾಗದಲ್ಲಿ ಒಬ್ಬ ಮನುಷ್ಯ ಮೃತದೇಹದ ಅಂಗಾಂಗಗಳನ್ನು ಹಿಡಿದು ಅಳುತ್ತಿರುವ ಶಿಲ್ಪವಿದೆ. ಇದಕ್ಕೊಂದು ಹೃದಯವಿದ್ರಾವಕ ವರದಿಯಿದೆ. ಈ ಸೇತುವೆಯು ನೌಕೆಗಳು ಓಡಾಡಲು ತೆರೆದುಕೊಳ್ಳುತ್ತದೆ. ಒಂದು ದೊಡ್ಡ ಚಕ್ರ ತಿರುಗಿಸುವ ಮೂಲಕ ಸೇತುವೆಯ ತೆರೆಯುವಿಕೆ ಮತ್ತು ಮುಚ್ಚುವಿಕೆಯನ್ನು ನೆರವೇರಿಸುತ್ತಿದ್ದರು. ಒಮ್ಮೆ ಒಂದು ನೌಕೆ ಸೇತುವೆದಾಟಿದ ತಕ್ಷಣ ಅಲ್ಲಿನ ಕೆಲಸಗಾರ ಲಗುಬಗೆಯಿಂದ ಆ ಚಕ್ರವನ್ನು ತಿರುಗಿಸುತ್ತಿದ್ದನಂತೆ. ಆದಷ್ಟು ಬೇಗ ತಿರುಗಿಸಿ, ಸೇತುವೆ ಮುಚ್ಚದೆ ಹೋದರೆ, ರೈಲಿನ ಸಾವಿರಾರು ಪ್ರಯಾಣಿಕರ ಜೀವಹಾನಿ. ಆದರೆ ಆತನಿಗೆ ಸುಧಾರಿಸದ ದಣಿವಾಯಿತು. ಆತನಿಗೆ ಊಟ ತಂದ ಆತನ ಮಗ ಅದನ್ನು ಗುರ್ತಿಸಿ, ತಂದೆಗೆ ಸಹಾಯ ಮಾಡಲು ಹೋಗಿ ಚಕ್ರ ತಾನೂ ತಿರುವಲು ಪ್ರಾರಂಭಿಸುತ್ತಾನೆ. ರೆಪ್ಪೆ ಮುಚ್ಚುವಷ್ಟರಲ್ಲಿ ಚಕ್ರ ಆತನ ಕೈ ಸೆಳೆದುಕೊಂಡು ಬಿಟ್ಟಿರುತ್ತದೆ. ಈಗ ಚಕ್ರ ತಿರುವುದ ನಿಲ್ಲಿಸಿ ಕೈ ಬಿಡಿಸಿಕೊಳ್ಳುವಷ್ಟು ಸಮಯವಿಲ್ಲ! ಒಂದು ನಿಮಿಷ ತಡವಾದರೂ ಸಾವಿರಾರು ಪ್ರಾಣಗಳು ನೀರುಪಾಲು. ಈ ತುರ್ತನ್ನು ಅರಿತ ಆ ವ್ಯಕ್ತಿ, ತನ್ನ ಮಗನ ಸ್ಥಿತಿ ಲೆಕ್ಕಿಸದೆ, ಚಕ್ರ ತಿರುವುತ್ತಲೇ ಹೋದನಂತೆ. ಆತನ ಮಗ ಸ್ವಲ್ಪ ಸ್ವಲ್ಪವೇ ಚಕ್ರಕ್ಕೆ ಸಿಲುಕಿ ಸಂಪೂರ್ಣ ಚಕ್ರದ ತುತ್ತಾದನಂತೆ. ಇದು ಕಣ್ಣ ಮುಂದೆ ನೋಡುತ್ತಿದ್ದರೂ, ಸಾವಿರಾರು ಪ್ರಾಣಗಳ ಮುಂದೆ ತನ್ನ ಮಗನ ಜೀವ ಲೆಕ್ಕಿಸದೆ, ಸಂಪೂರ್ಣವಾಗಿ ಚಕ್ರ ತಿರುವಿಯೇ ಬಿಟ್ಟ, ಒಂದು ದೊಡ್ಡ ಕಂಟಕ ತಪ್ಪಿಸಿಯೇ ಬಿಟ್ಟ. ಆದರೆ ಚಕ್ರದ ತಿರುವಿಕೆಯ ಸದ್ದಿನ ಜೊತೆ ತನ್ನ ಮಗನ ಮೂಳೆಗಳ ಮುರಿಯುವಿಕೆಯ ಸದ್ದೂ ಕೇಳಿದ್ದ ಈತ ಅಂದು ಜೀವಚ್ಚವವಾಗಿ ಬಿಟ್ಟನಂತೆ! ಬ್ರಿಟಿಷ್ ಸರ್ಕಾರ ಆತನ ಸಮಯ ಪ್ರಜ್ಞೆಗೆ ಪುರಸ್ಕರಿಸಿ ಆತನ ನೆನಪಿಗಾಗಿ, ಸೇತುವೆಯ ಬಳಿ ಆ ಶಿಲ್ಪವನ್ನು ಕೆತ್ತಿಸಿದರಂತೆ! ಇದು ಕಥೆಯಷ್ಟೇ ನಿಜವಲ್ಲ ಎಂಬುದು ಕೆಲವರ ಅನಿಸಿಕೆ. ಆದರೆ ಇದು ಸತ್ಯ ಘಟನೆ ಎಂಬುದು ಮತ್ತಷ್ಟು ಮಂದಿ ಗುರ್ತಿಸುತ್ತಾರೆ. ಅದು ಏನೇ ಇರಲಿ, ಈ ಕಥೆ ಕೇಳಿದ ಮೇಲಂತೂ ನಾವು ಮೌನದ ಮನೆಸೇರಿದೆವು. ಬೃಹತ್ತಾದ, ಸುಂದರವಾದ ಸುತ್ತುವರೆದಿದ್ದ ಸಮುದ್ರದ ನೋಟ, ಈ ಕಥೆ ಕೇಳಿದ ನಂತರ ನಮಗೆ ತನ್ನ ರೌದ್ರ ರೂಪ ತೋರಿದಂತೆ ಕಂಡಿತು.

ಚೇತರಿಸಿಕೊಳ್ಳುವಷ್ಟರಲ್ಲಿ ರಾಮೇಶ್ವರಂ ಸೇರಿದ್ದವು. ತಡೆಯಲಾರದಷ್ಟು ಧಗೆ ಜೊತೆಗೆ ತೀರಾ ಕೆಟ್ಟ ತಂಗುದಾಣ ಸಿಕ್ಕಿ ಕಂಗೆಟ್ಟಿದ್ದೆವು. ನಮಗಾದ ದಣಿವೆಲ್ಲಾ ಇಂಗಿ ಹೋಗಲು ನಮಗೆ ಸಹಾಯ ಮಾಡಿದ್ದು ರಾಮೇಶ್ವರಂ ದೇವಸ್ಥಾನದ ಭೇಟಿ. ಮತ್ತೊಂದು ಮಾಯಾಲೋಕಕ್ಕೆ ಕಾಲಿಟ್ಟಂತೆ ಭಾಸವಾಯಿತು. ದಕ್ಷಿಣದ ವಾರಣಾಸಿ ಎಂದೇ ಕರೆಯಲ್ಪಡುವ ಈ ದೇವಸ್ಥಾನ ಶೈವರು ಮತ್ತು ವೈಷ್ಣವರು ಎರಡು ಪಂಥಗಳೂ ಆರಾಧಿಸುವ ಸ್ಥಳ. ಹದಿನೈದು ಎಕರೆ ಸವಿಸ್ತಾರವಾಗಿ ಹರಡಿಕೊಂಡಿರುವ ಈ ದೇವಾಲಯ ಹನ್ನೆರಡನೇ ಶತಮಾನದಲ್ಲೇ ತನ್ನ ಇರುವಿಕೆಯನ್ನು ಶಾಸನಗಳ ಮೂಲಕ ನಿರೂಪಿಸಿದೆ. ಈ ದೇವಸ್ಥಾನದ ಒಳಾವರಣ ಮತ್ತು ಕಂಬಗಳು ಜಗತ್ಪ್ರಸಿದ್ಧಿ ಪಡೆದಿವೆ.
ಈ ದೇವಸ್ಥಾನದಲ್ಲಿ ಐದು ಲಿಂಗಗಳಿದ್ದು ಅದರಲ್ಲಿ ಮುಖ್ಯವಾಗಿ ಮೂರು ಲಿಂಗಗಳನ್ನು ಜನರು ತಪ್ಪದೆ ನೋಡಿಯೇ ಹೋಗುತ್ತಾರೆ. ಈಗ ಈ ದೇವಸ್ಥಾನದ ಲೂಸಿಯಾ ಎಫೆಕ್ಟ್ ಗೆ ಹೋಗಿಬರೋಣ: ರಾವಣ ಸಂಹಾರಾನಂತರ ರಾಮನು ತನ್ನ ಬ್ರಹ್ಮಹತ್ಯಾ ದೋಷವನ್ನು ಕಳೆದುಕೊಳ್ಳಲು ಶಿವನಿಗೆ ಪೂಜಿಸಬೇಕೆಂದು ನಿರ್ಧರಿಸುತ್ತಾನೆ. ಆಗ ಕೈಲಾಸದಿಂದ ಲಿಂಗ ತರಲು ಹನುಮಂತನನ್ನು ಕಳುಹಿಸುತ್ತಾನೆ. ಪೂಜೆಯ ಮುಹೂರ್ತ ಮುಗಿಯುವ ಹೊತ್ತಾದರೂ ಹನುಮಂತ ಮರಳುವುದಿಲ್ಲ. ಸಮಯ ಮೀರುವುದು ತಪ್ಪಿಸಲು ಸೀತೆ ಮಣ್ಣಿನಿಂದ ಒಂದು ಲಿಂಗವನ್ನು ತಯಾರಿಸುತ್ತಾಳೆ. ಇದನ್ನು ರಾಮ ಪ್ರತಿಷ್ಠಾಪನೆ ಮಾಡುತ್ತಾನೆ. ಆದ್ದರಿಂದ ಇದನ್ನು ‘ರಾಮ ಲಿಂಗ’ ಎಂದು ಕರೆಯುತ್ತಾರೆ. ಇಷ್ಟರಲ್ಲಿ ಕೈಲಾಸದಿಂದ ಲಿಂಗದೊಂದಿಗೆ ಮರಳಿದ ಹನುಮ ಆಗಲೇ ಪೂಜಿಸಲ್ಪಟ್ಟ ಲಿಂಗವನ್ನು ನೋಡಿ ನಿರಾಶನಾಗುತ್ತಾನೆ. ಅವನ ನಿರಾಶೆಯನ್ನು ಗಮನಿಸಿದ ರಾಮ ಸೀತೆ ಮಾಡಿದ ಲಿಂಗವನ್ನು ಸ್ಥಳಾಂತರ ಮಾಡಲು ಹನುಮನಿಗೆ ಹೇಳುತ್ತಾನೆ. ಸಾಕಷ್ಟು ಪ್ರಯತ್ನಿಸಿದ ನಂತರವೂ ಹನುಮ ಆ ಲಿಂಗವನ್ನು ಕದಲಿಸಲಾರ. ಆಗ ತನ್ನ ಬಾಲವನ್ನು ಲಿಂಗದ ಸುತ್ತು ಗಟ್ಟಿಯಾಗಿ ಸುತ್ತುತ್ತಾನೆ. (ಆ ಬಾಲದ ನಿಶಾನು ಇಂದಿಗೂ ಲಿಂಗದ ಮೇಲಿದೆ ಎಂಬ ಅಂಬೋಣ!) ಆದರೂ ವಿಫಲನಾಗುತ್ತಾನೆ.
ಆಗ ‘ರಾಮ ಲಿಂಗ’ದ ಪಕ್ಕದಲ್ಲೇ ಹನುಮ ತಂದ ಲಿಂಗವನ್ನೂ ಪ್ರತಿಷ್ಠಾಪಿಸಿ ರಾಮ ಅದನ್ನು ‘ವಿಶ್ವಲಿಂಗ’ ಎಂದು ಕರೆಯುತ್ತಾನೆ. ಇದಲ್ಲದೆ ಹನುಮ ತಂದ ಮತ್ತೊಂದು ಲಿಂಗ ಮತ್ತು ಆ ಊರಿನ ರಾಜನಿಗೆ ನೀರಿನ ಬಳಿ ದೊರೆತ ಉಪ್ಪು ಲಿಂಗ ಎರಡೂ ಈ ದೇವಸ್ಥಾನದಲ್ಲೇ ಇವೆ. ಕೊನೆಯ ಮತ್ತು ಮೂರನೆಯ ಪ್ರಮುಖ ಲಿಂಗ ಎಂದರೆ ಸ್ಪಟಿಕ ಲಿಂಗ. ಈ ಸ್ಪಟಿಕ ಲಿಂಗವನ್ನು ಈ ದೇವಸ್ಥಾನಕ್ಕೆ ಆದಿ ಶಂಕರಾಚಾರ್ಯರು ತಂದು ಕೊಟ್ಟರು ಎಂಬ ಪ್ರತೀತಿ. ಬೆಳಗಿನ ಜಾವ ಬಿಟ್ಟರೆ ಈ ಲಿಂಗ ನೋಡಲು ನೋ ಎಂಟ್ರಿ. ಮುಂಜಾನೆ ನಾಲ್ಕಕ್ಕೆ ಕ್ಯೂನಲ್ಲಿ ನಿಂತು ದರ್ಶನ ಮಾಡಬೇಕು! ಮಧ್ಯ ರಾತ್ರಿಯೇ ಎದ್ದು ತಯಾರಾಗಿ, ಮಂಜು ಕವಿದ ಕತ್ತಲೆಯ ರಸ್ತೆಯಲ್ಲಿ, ಚಪ್ಪಲಿ ಕಳಚಿ, ನಾವು ನಡೆದು ಹೋದದ್ದು, ಕ್ಯೂ ನಲ್ಲಿ ನಿಂತು ಸ್ಪಟಿಕ ಲಿಂಗ ದರ್ಶನ ಮಾಡಿದ್ದೂ ಎಲ್ಲಾ ನೆನಪಿಸಿಕೊಳ್ಳಬೇಕಾದ ಥ್ರಿಲ್.
ನಂತರ ಮದುರೈಗೆ ಪ್ರಯಾಣ ಮಾಡಲು ಮಧ್ಯಾಹ್ನದವರೆಗೂ ಸಮಯವಿದ್ದ ನಾವು, ರಾಮೇಶ್ವರಂ ನಗರ ಪ್ರದಕ್ಷಿಣೆ ಹಾಕಿದೆವು. ರಾಮೇಶ್ವರಂ ಸುತ್ತಮುತ್ತಲಿದ್ದ ರಾಮ ತೀರ್ಥ, ಲಕ್ಷ್ಮಣ ತೀರ್ಥ, ಸೀತಾ ತೀರ್ಥ, ಮಂಚಮುಖಿ ಹನುಮ ಇವೆಲ್ಲವೂ ಸುತ್ತಿ ಬಂದೆವು. ಇದರ ಜೊತೆಗೆ ಮುಖ್ಯವಾದ ಎರಡು ಸ್ಥಳಗಳು ನಮ್ಮನ್ನು ಆಕರ್ಷಿಸಿತ್ತು. ಅವು: ತೇಲುವ ಕಲ್ಲುಗಳು ಮತ್ತು ಅಬ್ದುಲ್ ಕಲಾಮ್ ಮನೆ. ಕೊರಾಲ್ ಗಳಂತಿದ್ದ ಒಂದಷ್ಟು ಕಲ್ಲುಗಳನ್ನು ನೀರಿನಲ್ಲಿ ತೇಲಿಸಿ, ಈ ಕಲ್ಲುಗಳನ್ನು ರಾಮ ಸಮುದ್ರ ದಾಟಲು ಸೇತುವೆಯಾಗಿ ಬಳಸಿದ್ದ ಎಂದು ಅಲ್ಲಿದ್ದ ಆಸಾಮಿ ಹೇಳಿದ್ದು ನಾವು ಬೆಕ್ಕಸಬೆರಗಾಗಿ ಸಣ್ಣ ತೂತಿನಲ್ಲೇ ಅವನ್ನು ಮುಟ್ಟಿ ಮುಟ್ಟಿ ನೋಡಿದ್ದು ನನಗೆ ಬಹಳ ಹಾಸ್ಯಾಸ್ಪದವಾಗಿ ಕಂಡಿತ್ತು.

ಆದರೆ, ನಿಜಕ್ಕೂ ನಾನು ದಂಗಾಗಿದ್ದು ಡಾ॥ ಅಬ್ದುಲ್ ಕಲಾಮ್ ಮನೆಯಲ್ಲಿ! ಅವರ ಅನೇಕಾನೇಕ ಸರ್ಟಿಫಿಕೇಟ್ ಗಳು, ಅವರ ಪದ್ಯಗಳು, ಅನುಪಮ ಹೇಳಿಕೆಗಳು, ಅವರ ಸಾಧನೆಗಳ ಜೊತೆಗೆ ಅವರಿಗೆ ಸಂದ ಭಾರತ ರತ್ನ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಬಹಳ ಹತ್ತಿರದಿಂದ ಕಂಡು ಪುಳಕಗೊಂಡೆವು. ಕಲಾಂಗೊಂದು ಸಲಾಂ ಹಾಕಿ ನಮ್ಮ ದಾರಿ ಮದುರೈನತ್ತ ತೆರಳಿತ್ತು.

‍ಲೇಖಕರು G

October 25, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

 1. Vidyashankar H

  Rameshwaram and DhanushKoti is beautiful places 🙂 Thanks for reviving those memories.

  ಪ್ರತಿಕ್ರಿಯೆ
 2. ಅರುಣ್ ಜೋಳದಕೂಡ್ಲಿಗಿ

  ಮೇಡಂ ಬರಹದ ವಿಶ್ಲೇಷಣೆ ತುಂಬಾ ಇಷ್ಟವಾಯಿತು. ಪುರಾತತ್ವ ಅಧ್ಯಯನದಲ್ಲಿ ಬಹುಪಾಲು ಪುರುಷ ಅಧ್ಯಯನಕಾರರೇ ಇರುವುದರಿಂದ ಇಂತಹ ವಿಶ್ಲೇಷಣೆಗಳೇ ಸಾಧ್ಯವಾಗಿಲ್ಲ. ಇಡೀ ಬರಹದಲ್ಲೊಬ್ಬ ಮಹಿಳೆ ತನ್ನ ಸಂವೇದನೆಯ ಮೂಲಕ ದೇವಾಲಯವನ್ನು, ಅದರ ಕೆತ್ತನೆಯ ಶಿಲ್ಪಗಳನ್ನು ನೋಡುವ ದೃಷ್ಟಿಕೋನ ಹೊಸತಾಗಿದೆ.ನನ್ನ ತಿಳಿವಿನ ಮಿತಿಯಲ್ಲಿ ನೇಮಿಚಂದ್ರ ಅವರ ಪ್ರವಾಸಕಥನದಲ್ಲಿ ಇಂತಹ ದೃಷ್ಟಿಕೋನವನ್ನು ಗಮನಿಸಿದ್ದೇನೆ.

  ಪ್ರತಿಕ್ರಿಯೆ
 3. Anil Talikoti

  ಅನುಪಮ ಬರಹ -ಮೊನ್ನೆ ತಾನೆ ಇವನ್ನೆಲ್ಲಾ ನೋಡಿದ್ದರೂ ನಿಮ್ಮ ಬರಹ ಓದಿ ಮತ್ತೊಮ್ಮೆ ನೋಡಬೇಕೆನೆಸುತ್ತಿದೆ.
  -ಅನಿಲ ತಾಳಿಕೋಟಿ

  ಪ್ರತಿಕ್ರಿಯೆ
 4. Badarinath Palavalli

  ತಿರು+ಆನೈ+ಕಾ ಒಳ್ಳೆಯ ನಿರೂಪಣೆ ಸಂಪೂಜೀ.
  ಈಗಲೂ ತೆಲುಗಿನಲ್ಲಿ ನಿಮ್ಮಂತಹ ಸುರಸುಂದರಿಯರನ್ನು ಅಖಿಲಾಂಡೇಶ್ವರಿ ಅಂತಲೇ ಸಂಭೋದಿಸುತ್ತಾರೆ. 😀
  ನನಗೂ ರಾಮೇಶ್ವರಂ ನೋಡುವ ಬಯಕೆ ಇದೆ.
  ಡಾ॥ ಅಬ್ದುಲ್ ಕಲಾಮ್ ಮನೆಯನ್ನು ರಾಷ್ಟ್ರೀಯ ಸ್ಮಾರಕವಾಗಿಸಿದ್ದಾರಾ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: