ಸಂಪು ಕಾಲಂ : ’ಮರುಭೂಮಿಯ ಹೂ’ವೊಂದು ಪುಸ್ತಕವಾಗಿ ಘಮಿಸಿ…


೧. ಯಾವುದೋ ಸಣ್ಣ ಜಾಹಿರಾತು ಕಂಪನಿಯ ಲಾಂಜರೀ ಪ್ರಚಾರಕ್ಕಾಗಿ ಮಧ್ಯಮವರ್ಗದ ಹುಡುಗಿಯೊಬ್ಬಳು ಕಾರಣಾಂತರಗಳಿಂದ ಹಿಂಜರಿಕೆಯಿಂದಲೇ ಒಪ್ಪುತ್ತಾಳೆ. ಅವಳು ತಾನು ಮಾಡಿದ್ದು ತಪ್ಪೋ ಸರಿಯೋ ಎಂದು ಯೋಚಿಸುತ್ತಿದ್ದಾಗ, “ಇಸ್ ’ದುನಿಯಾ’ ಮೆ, ಜ್ಯಾದಾ ಸೋಚ್ನೇಕಾ ನೈ, ಬಸ್ ಕಾಮ್ ಕರ್ನೆಕಾ” (ಈ ಮಾಡೆಲಿಂಗ್ ’ಪ್ರಪಂಚ’ದಲ್ಲಿ ಹೆಚ್ಚು ಯೋಚಿಸಬಾರದು, ಕೆಲಸ ಮಾಡಬೇಕಷ್ಟೇ), ಎಂದು ಅವಳ ಸ್ನೇಹಿತೆ ಹೇಳುತ್ತಾಳೆ….
೨. ಹೆಸರಾಂತ ವಸ್ತ್ರವಿನ್ಯಾಸಕನೊಬ್ಬನ ವಸ್ತ್ರ ಪ್ರದರ್ಶನದಲ್ಲಿ ರೂಪದರ್ಶಿಯರು ಗ್ರೀನ್-ರೂಮಿನಲ್ಲಿ ತಯಾರಾಗುತ್ತಿರುತ್ತಾರೆ. ಯಾರೊಬ್ಬರಲ್ಲೂ ಪರಸ್ಪರ ಮಾತುಕಥೆಗಳಿಲ್ಲ. ಎಲ್ಲರೂ ಕನ್ನಡಿಗೆ ತಮ್ಮ ಮುಖವೊಡ್ಡಿ, ಮೇಕಪ್ ಮ್ಯಾನ್ ಗಳಿಗೆ ದೇಹವೊಪ್ಪಿಸಿ ಕೂತಿರುತ್ತಾರೆ. ಅವರಲ್ಲಿ ಒಬ್ಬಳು ತನ್ನಿಷ್ಟದಂತೆ ತನ್ನ ಮೈಗೊಪ್ಪುವಂತೆ ಮೇಲುಹೊದಿಕೆಯನ್ನು ಹಾಕಿದ್ದಾಗ, ಆ ವಸ್ತ್ರವಿನ್ಯಾಸಕ ಬಂದು ಅದನ್ಯಾರು ಮಾಡಿದ್ದು ಎಂದು ಬೈಯ್ಯುತ್ತಾನೆ. ರೂಪದರ್ಶಿ ತಾನೇ ಎಂದು ಹೇಳುತ್ತಿದ್ದಾಗ, “ನಿನಗ್ಯಾರು ತಲೆ ಉಪಯೋಗಿಸು ಎಂದು ಹೇಳಿದ್ದು, ಸುಮ್ಮನೆ ಹೇಳಿದಷ್ಟು ಮಾಡು ಅಷ್ಟೇ” ಎಂದು ಗದರುತ್ತಾನೆ….
ಮಧು ಬಂಡಾರ್ಕರ್ ನಿರ್ದೇಶನದ “ಫ಼್ಯಾಶನ್” ಚಿತ್ರದ ಈ ತುಣುಕುಗಳು ರೂಪದರ್ಶಿಯರ ಕುರಿತಾದ ಜಗತ್ತಿನ ಕ್ಷುಲ್ಲಕ ಮನೋಧರ್ಮವನ್ನು ಅತ್ಯಂತ ಮನೋಗ್ನವಾಗಿ ಚಿತ್ರಿಸುತ್ತದೆ. ಒಂದು ಹೆಣ್ಣು ರೂಪದರ್ಶಿ ಎಂದ ಕೂಡಲೇ ದೂಸರಾಮಾತು ಇಲ್ಲದೇ ಕೀಲಿಕೊಡುವ “ಗೊಂಬೆ”ಯನ್ನಾಗಿಸಿ ಬಿಡುತ್ತೇವೆ. ಅಪರೂಪಕ್ಕೆಂದು ಕ್ಯಾಮರಾ ಮುಂದೆ ಅವಳೆರಡು ಉತ್ತಮ ಮಾತುಗಳಾಡಿದರೆ, ಮರುದಿನ ಪತ್ರಿಕೆಯಲ್ಲಿ “ಬ್ಯೂಟಿ ವಿತ್ ಬ್ರೈನ್ಸ್” ಎಂದು ಹಂಗಿಸುವಂತಹ ಬರಹ! ಜಗತ್ತನ್ನೆಲ್ಲ ಕಾಡುವ ರೂಪದರ್ಶಿಯರೆಂಬ ಈ ಸುಂದರಿಯರನ್ನು (ಅಟ್ಲೀಸ್ಟ್ ನಮ್ಮ ದೇಶದಲ್ಲಿ) ಘನತೆ, ಗಾಂಭೀರ್ಯದಿಂದ ಯಾರೂ ಪರಿಗಣಿಸುವುದಿಲ್ಲ ಎಂಬುದೊಂದು ದುರಂತ ಸತ್ಯ. ಟಿವಿ ಚಾನಲ್ ಬದಲಿಸುವಾಗ ಅಪ್ಪಿತಪ್ಪಿ ರಾಂಪ್ ವಾಕ್ ಮಾಡುವ ಮಾನಿನಿಯರು ಕಂಡರೆ, ರಿಮೋಟು ಒತ್ತುವುದು ಅಲ್ಲೇ ನಿಲ್ಲಿಸಿ, ಅವರು ಬಿಚ್ಚಿಟ್ಟ-ಮುಚ್ಚಿಟ್ಟ ಭಾಗ, ಭಾವಗಳನ್ನು ಗಮನಿಸದೇ ಬಹುಶಃ ಯಾರೂ ಇದ್ದಿಲ್ಲ. ಆದರೆ ನಾವ್ಯಾರೂ ಅವರ ಥಳುಕು-ಬಳುಕಿನ ಹಿಂದಿನ ಗಾಥೆಗಳ ಬಗ್ಗೆ ಎಂದೂ ಗಮನ ಹರಿಸಿರಲಾರೆವು. ಹೆಚ್ಚೆಂದರೆ ಅವರ ಬಗೆಗೆ ಹರಡುವ ಗಾಸಿಪ್ಗಳು ಅಥವಾ ಪೇಜ್ ತ್ರೀ ಸುದ್ದಿಗಳು, ಅಷ್ಟೇ!
ಸುಂದರ ನೀಳ ಕೃಷ್ಣ ಕಾಯ, ಅರೆನಗ್ನವಾಗಿ ಕ್ಯಾಮರಾ ಮುಂದೆ ನಿಂತು ತನ್ನ ಮಾದಕ ಕಣ್ಣುಗಳಿಂದ ಮೋಹಿಸಿ ಜಗತ್ತನ್ನು ಚುಂಬಿಸಿ ಹದಿ-ಮುದಿ ಮನಗಳಿಗೆ ಬಿಸಿತಾಗಿಸಿದ್ದ, ತೊಂಭತ್ತರ ದಶಕದ ಜಾಹಿರಾತು ಲೋಕದ ಪಟ್ಟದರಸಿಯಾಗಿದ್ದ ವಾರಿಸ್ ಡೇರಿಸ್ ಳನ್ನು ಈ ಹಿಂದೆಯೇ ನೋಡಿದ್ದೆ. ದೂರದರ್ಶನದ ಜಾಹೀರಾತುಗಳು, ಬಾಂಡ್ ಸಿನೆಮಾ, ಅಂತರ್ಜಾಲದಲ್ಲಿನ ವಿಧವಿಧ ಭಂಗಿಯ ಚಿತ್ರಗಳು…ಹೀಗೆ. ಜಗತ್ತಿನ ಲಕ್ಷಾಂತರ ರೂಪದರ್ಶಿಗಳಲ್ಲಿ ಇವಳೊಬ್ಬಳೆನಿಸಿತ್ತಷ್ಟೆ. ಆದರೆ ಈಗ ಅವಳ ಚಿತ್ರನೋಡಲು ಹೆದರುತ್ತೇನೆ. ಅವಳನ್ನೊಬ್ಬ ಮೇಕಪ್ಪುಗಳ ಮರೆಯಲ್ಲಿ ಅಡಗಿದ ಹೆಣ್ಣು ಗೊಂಬೆ ಎಂದಷ್ಟೆ ಅರಿತಿದ್ದ ನಾನು, ನನ್ನ ಹೆಣ್ತನ ವಾರಿಸ್ ಡೇರಿಸ್ ಮತ್ತು ಅವಳಂತಹ ಅನೇಕ ರೂಪದರ್ಶಿಯರ ಬೆಡಗಿನ ಹಿಂದಿರುವ ಧೀಮಂತ, ಧೈರ್ಯವಂತ, ಅಸಾಧಾರಣ ವ್ಯಕ್ತಿತ್ವಗಳ ಬಗ್ಗೆ ಆಲೋಚಿಸಲೂ ಸಾಧ್ಯವಾಗಲಿಲ್ಲವೇ ಎಂಬ ಅಂಜಿಕೆ, ಅವಮಾನ.
ರೂಪದರ್ಶಿಯರ ಕಹಿ ಜಗತ್ತನ್ನು ಸ್ಥೂಲವಾಗಿ ಪರಿಚಯಿಸುವ ಕೆಲವೊಂದು “ಫ಼್ಯಾಶನ್” ನಂತಹ ಸಿನೆಮಾಗಳನ್ನು ನೋಡಿದ್ದೆ. ಆದರೆ ಆಫ್ರಿಕಾದ ಸೊಮಾಲಿಯಾ ಬುಡಕಟ್ಟು ಜನಾಂಗದ ದಮನಿತ ಹೆಂಗಸರ ಕೂಪದಿಂದ ಹೇಗೋ ತಪ್ಪಿಸಿಕೊಂಡು, ಜೀವನದುದ್ದಕ್ಕೂ ಮುಳ್ಳಿನ ಹಾದಿಗಳನ್ನು ದಾಟಿ ಬಂದು ಸ್ವಯಂಭೂವಾಗಿ ತನ್ನ ಬದುಕು ಕಟ್ಟಿಕೊಂಡು ಜಗತ್ಪ್ರಸಿದ್ಧಿಯಾದ ವಾರಿಸ್ ಡೇರಿಸ್ ಳ ಆತ್ಮಕಥನ “ಡೆಸರ್ಟ್ ಫ್ಲವರ್” (ಕನ್ನಡದ ರೂಪಾಂತರ) ಓದಿದ ಮೇಲೆ, ರೂಪದರ್ಶಿಯರ ಬದುಕಿನ ಬಗೆಗಿನ ನನ್ನ ನೋಟ ಸಾಕಷ್ಟು ಬದಲಾಗಿದೆ ಎಂದೇ ಹೇಳಬಹುದು. ನನ್ನಲ್ಲಿ ಈ ಅಪರಾಧಿ ಮನೋಭಾವ ಹುಟ್ಟಿಸಿ, ತಪ್ಪೊಪ್ಪಿ ಹಗುರಾಗಿಸಿ ವಾರಿಸ್ ಡೇರಿಸ್ ಗೊಂದು ಸಲ್ಯೂಟ್ ಹಾಕುವಂತೆ ಮಾಡಿದ ಜಗದೀಶ್ ಕೊಪ್ಪರವರಿಗೆ ನಾನು ಋಣಿ. ಇಂಗ್ಲಿಷ್ ಭಾಷೆಯ “ಡೆಸರ್ಟ್ ಫ್ಲವರ್”ಅನ್ನು ಕನ್ನಡಕ್ಕೆ “ಮರುಭೂಮಿಯ ಹೂ” ಆಗಿ ತರ್ಜುಮೆ ಮಾಡಿ ಕನ್ನಡ ಓದುಗರಿಗೆ ವಾರಿಸ್ ಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ ಜಗದೀಶ್ ಕೊಪ್ಪರವರು. ಈ ಕೃತಿ ಕನ್ನಡ ಭಾಷಾಲೋಕಕ್ಕಷ್ಟೇ ಅಲ್ಲದೆ ಸ್ತ್ರೀವಾದ, ಸಮಾನತೆ ಎಂದು ದನಿಯೆತ್ತುವ ಮಹಿಳಾಪರ ಜಗತ್ತಿಗೂ ಒಂದು ಅತ್ಯುತ್ತಮ ಕಾಣ್ಕೆ.
ವಾರಿಸ್ ಡೇರಿಸ್ ಎಂಬುದು ಮರುಭೂಮಿಯಲ್ಲಿ ಬೆಳೆಯುವ ಒಂದು ಬಗೆಯ ಹೂವು. ವಾರಿಸ್ ಹುಟ್ಟಿದಾಗ, ಆ ಹೂವನ್ನು ಇಷ್ಟಪಡುವ ಆಕೆಯ ತಾಯಿ ಆ ಹೂವ ಹೆಸರನ್ನೇ ಆಕೆಗೂ ಇಡುತ್ತಾಳೆ. ಹೂವಿನಷ್ಟೇ ಶುದ್ಧವಾಗಿ, ಮುಗ್ಧವಾಗಿ ಘಮಿಸುತ್ತಿದ್ದ ಹಳ್ಳಿಗಾಡಿನ ಆ ಹೆಣ್ಣುಮಗಳು ಬೆಳೆಯುತ್ತಾ ಬೆಳೆಯುತ್ತಾ ಜಗತ್ತಿನ ಕರಾಳತೆಗಳಿಗೆ ತೆರೆದುಕೊಳ್ಳುತ್ತಾ ಹೋಗುತ್ತಾಳೆ. ಪ್ರಾಣಿಗಳನ್ನು ತುಂಬ ಇಷ್ಟ ಪಡುತ್ತಿದ್ದ ಆ ಹುಡುಗಿ, ಕುರಿಮರಿಯನ್ನು ಸಾಕುತ್ತಿದ್ದಳು. ಕುರಿಮರಿಯ ಕಥೆ ಹೇಳುತ್ತೇನೆಂದು ಮರದ ಬದಿಗೆ ಕರೆದೊಯ್ದ ತಂದೆಯ ಸ್ನೇಹಿತನೊಬ್ಬ ತನ್ನ ಮರ್ಮಾಂಗಕ್ಕೆ “ಅದೇನೋ” ಬಲವಾದ್ದು ಗುದ್ದಿದಾಗ ಅವಳ ಮುಗ್ಧತೆಯ ಮೊದಲ ಮುಸುಕು ಚೂರಾಗುತ್ತದೆ. ಯಾರಿಗೂ ಹೇಳಿಕೊಳ್ಳಲಾಗದ ಭಯ ಸಂಕಟಗಳಲ್ಲೇ ಆ ದುರ್ಘಟನೆಯನ್ನು ಮರೆಯಲು ಪ್ರಯತ್ನಿಸುತ್ತಾಳೆ. ತಾಯಿ ತನಗಾಗಿ, ತನ್ನ ಅಕ್ಕ ತಮ್ಮಂದಿರಿಗಾಗಿ ಹೆಣಗಾಡುತ್ತಿರಲು, ತಂದೆ ಮತ್ತೊಂದು ಮದುವೆ ಮಾಡಿಕೊಂಡು ಬರುವುದು ಸಹ ಅವಳಲ್ಲಿ ಒಂದು ಪ್ರಶ್ನೆಯಾಗಿ ಉಳಿದು ಬಿಡುತ್ತದೆ. ಚಿಕ್ಕಂದಿನಿಂದಲೂ ಹೆಜ್ಜೆ ಹೆಜ್ಜೆಗೂ ಸ್ತ್ರೀಶೋಷಣೆಯನ್ನು ಕಂಡು ಅದನ್ನು ಯಾರೂ ತಪ್ಪೆಂದೇ ಪರಿಗಣಿಸದೆ ಅದು ಬದುಕಿನ ಸಹಜ ಕ್ರಿಯೆ ಎಂಬಷ್ಟು ನಂಬಿಬಿಡಬೇಕಾದ ಪರಿಸ್ಥಿತಿ. ಆದರೂ ವಾರಿಸ್ ಅವುಗಳನ್ನು ಒಂದು ಪ್ರಶ್ನಾಮನೋಭಾವದಿಂದಲೇ ನೋಡುತ್ತಿರುತ್ತಾಳೆ.


ಈ ರೀತಿಯಾದ ಎಷ್ಟೋ ಶೋಷಣೆಗಳಿಂದ ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಅವಳಿಗಾಗಿ ಒಂದು ಆಘಾತ ಕಾದಿರುತ್ತದೆ. ಹೆಣ್ತನದ “ಅದ್ಯಾವುದೋ ಗುಟ್ಟನ್ನು” ಅರಿಯಲು ಬಯಸಿ ಬಯಸಿ ಆಕೆ ಸೊಮಾಲಿಯಾ ಬುಡಕಟ್ಟಿನ ಸಾಂಪ್ರದಾಯಿಕ ಯೋನಿ ವಿಛ್ಛೇದನಾ (Genital mutilation) ಕ್ರಿಯೆಗೆ ಒಳಪಡುತ್ತಾಳೆ. ಈ ಕ್ರಿಯೆಗೆ ಒಳಪಡದ ಹೆಣ್ಣು ಮಗಳು ಅಶುದ್ಧ ಎಂಬ ಭಾವ ಸೋಮಾಲಿಯಾ ಜನಾಂಗದಲ್ಲಿ ಪಸರಿಸಿರುತ್ತದೆ. ಅದರಿಂದ ಅವಳು ಅನುಭವಿಸಿದ ನೋವು ಭಯಾನಕ. ’ಉರಿಯನ್ನು ತಾಳಲಾರದೇ ತಂಪು ಮರಳಿನಲ್ಲಿ ಹೋಗಿ ಕೂಡುವುದು’, ’ಹನಿಹನಿಯಾಗಿ ಗಂಟೆಗಟ್ಟಲೆ ಮೂತ್ರವಿಸರ್ಜನೆ ಮಾಡುವುದು’, ಇತ್ಯಾದಿ ಘಟನೆಗಳನ್ನು ಓದುತ್ತಾ ನಾನು ಕೂತಲ್ಲೇ ಮರಗಟ್ಟಿಹೋಗಿದ್ದೆ, ಉಸಿರು ಭಾರವಾಗಿತ್ತು! ಓದನ್ನು ನಿಲ್ಲಿಸಿ ಈ ವಿಷಯದ ಬಗ್ಗೆ ಗೂಗಲ್ ಮಾಡಿದೆ. ಸಾವಿರಾರು, ಲಕ್ಷಗಟ್ಟಲೆ ಹೆಣ್ಣು ಮಕ್ಕಳು ಈ ಕ್ರಿಯೆಗೆ ಒಳಪಟ್ಟು, ಅನೇಕರು ಇದರಿಂದಲೇ ಜೀವವನ್ನೂ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂತು. ಈ ಕ್ರಿಯೆಯ ಕಾರಣಗಳು ಹೀಗಿವೆಯಂತೆ: ಹೆಣ್ಣಿನ ಲೈಂಗಿಕ ಹಸಿವನ್ನು ತಣಿಸುವುದು, ಆಕೆ ಮದುವೆಗೆ ಮುನ್ನ ಯಾರೊಡನೆಯೂ ಸಂಪರ್ಕ ಹೊಂದದಂತೆ ತಡೆಯುವುದು, ಆಕೆಯನ್ನು ವರಿಸುವವನಿಗೆ ಅಗಾಧ ಸುಖ ಕೊಡುವುದು, ಚಾರಿತ್ರ್ಯವನ್ನು ಕಾಪಾಡಿಕೊಳ್ಳುವುದು ಇತ್ಯಾದಿ ಸಾಮಾಜಿಕ, ಧಾರ್ಮಿಕ, ದೈವಿಕ ಕಾರಣಗಳು! ಗಡುಸಾಗಿ ಒಂದು ವಾಕ್ಯ ಗಂಡನ ಬಾಯಿಂದ ಬಂದರೆ ಹೌಹಾರಿಬಿಡುವ ನಮ್ಮ ಮಾಡ್ರನ್ ಫೆಮಿನಿಸಮಾಯಣ ಇಂತಹ ಅನಾಹುತಗಳನ್ನೆಲ್ಲಾ ಚರಿತ್ರೆಯಾಗಿಸಿಕೊಂಡುಬಂದಿದೆ ಎಂಬ ವಿಷಯ ನಡುಕಹುಟ್ಟಿಸುತ್ತದೆ.
ಒಮ್ಮೆ ಒಂಟೆಗಳನ್ನು ಪಡೆಯುವುದಕ್ಕಾಗಿ ತನ್ನನ್ನು ಯಾವುದೋ ಮುದುಕನಿಗೆ ಕೊಟ್ಟು ತಂದೆ ಮದುವೆ ಮಾಡುತ್ತಾನೆ ಎಂದು ತಿಳಿದ ತಕ್ಷಣ, ವಾರಿಸ್ ಮನೆಬಿಡಲು ನಿರ್ಧರಿಸುತ್ತಾಳೆ. ತಾಯಿಯೊಬ್ಬಳಿಗೆ ತಿಳಿಸಿ ಹೊರಟು ನಿಂತ ಆಕೆಗೆ ತನ್ನ ಮುಂದಿನ ಹಾದಿ ಮತ್ತಷ್ಟು ಕಷ್ಟಗಳ ಕೋಟಲೆ ಎಂಬ ಯಾವ ಸುಳುಹೂ ಇರುವುದಿಲ್ಲ. ದಾರಿಯಲ್ಲೇ ಆಕೆಯನ್ನು ಬಲಾತ್ಕಾರ ಮಾಡಬಂದ ವ್ಯಕ್ತಿಯಿಂದ ಬುದ್ಧಿವಂತಿಕೆಯಿಂದ ತಪ್ಪಿಸಿಕೊಂಡು ನಂತರ ಹೆಜ್ಜೆ ಹೆಜ್ಜೆಗೂ ಪೆಟ್ಟು ತಿಂದು ಇಂಚಿಂಚೇ ಗಟ್ಟಿ ಗೊಳ್ಳುತ್ತಾ ತನ್ನ ಜೀವನವನ್ನು ರೂಪಿಸಿಕೊಳ್ಳುವ ಕಥಾನಕ ರೋಮಾಂಚನವನ್ನುಂಟುಮಾಡುತ್ತದೆ.
ಕಾಮುಕರು, ಶೋಷಕರು, ಮೋಸಗಾರರು, ಅಹಿತರ ನಡುವೆ ಒಬ್ಬೊಂಟಿಯಾಗಿ ಕುಂಟುತ್ತಾ, ಎಡವುತ್ತಾ ಕಡೆಗೂ ತನ್ನದೊಂದು ಸ್ಥಾನ ಪಡೆದುಕೊಂಡು ಜಗವನ್ನು ಗೆಲ್ಲುವ ಧೈರ್ಯವನ್ನು ತೋರುತ್ತಾಳೆ ವಾರಿಸ್. ತನ್ನ ಸಾಧನೆಯನ್ನು ಅಷ್ಟಕ್ಕೆ ನಿಲ್ಲಿಸದೇ, ತನ್ನಂತೆ ಶೋಷಣೆಗೊಳಗಾದ ಅನೇಕ ಮುಗ್ಧ ಮಹಿಳೆಯರ ಪರವಹಿಸಿ, ಯೋನಿ ವಿಛ್ಛೇದನ ಮುಂತಾದ ಅನಿಷ್ಠ ಪದ್ಧತಿಗಳ ವಿರುದ್ಧ ಪ್ರಚಾರಕ್ಕೆ ನಿಲ್ಲುತ್ತಾಳೆ. ಪುಸ್ತಕ ಓದಿ ಮುಗಿಯುವಷ್ಟರಲ್ಲಿ “ಭೇಷ್ ಹುಡುಗಿ” ಎಂದು ತಂತಾನೇ ನನ್ನ ಬಾಯಿಂದ ಹೊರಟ ಉದ್ಗಾರ ಈ ಲೇಖನವನ್ನು ಬರೆಸಿತು. ತನ್ನ ಆತ್ಮವಿಶ್ವಾಸದ ಮೇಲೆ ನಂಬಿಕೆಯಿರುವ/ರದ ಎಲ್ಲ ಹೆಂಗಸರು ಮತ್ತು ಅದನ್ನು ಒಪ್ಪುವ/ಪ್ಪದ ಎಲ್ಲ ಗಂಡಸರು ಈ ಪುಸ್ತಕವನ್ನು ಓದಲೇಬೇಕೆಂದು ನನ್ನ ಅನಿಸಿಕೆ.
 

‍ಲೇಖಕರು G

February 22, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

 1. umasekhar

  pusthakada bagge ninna anisike ,anubhava vodidaga nanu a pusthakavannu vodale bekenba ase vuntagide. Ee pusthakada bagge sunday vkdalli banditha>? ello vodida nenapu.

  ಪ್ರತಿಕ್ರಿಯೆ
 2. ಹನುಮಂತ ಹಾಲಿಗೇರಿ

  “ಟಿವಿ ಚಾನಲ್ ಬದಲಿಸುವಾಗ ಅಪ್ಪಿತಪ್ಪಿ ರಾಂಪ್ ವಾಕ್ ಮಾಡುವ ಮಾನಿನಿಯರು ಕಂಡರೆ, ರಿಮೋಟು ಒತ್ತುವುದು ಅಲ್ಲೇ ನಿಲ್ಲಿಸಿ, ಅವರು ಬಿಚ್ಚಿಟ್ಟ-ಮುಚ್ಚಿಟ್ಟ ಭಾಗ, ಭಾವಗಳನ್ನು ಗಮನಿಸದೇ ಬಹುಶಃ ಯಾರೂ ಇದ್ದಿಲ್ಲ. ಆದರೆ ನಾವ್ಯಾರೂ ಅವರ ಥಳುಕು-ಬಳುಕಿನ ಹಿಂದಿನ ಗಾಥೆಗಳ ಬಗ್ಗೆ ಎಂದೂ ಗಮನ ಹರಿಸಿರಲಾರೆವು.” ತಟ್ಟಿದ ಸಾಲು

  ಪ್ರತಿಕ್ರಿಯೆ
 3. dr.vinaya.a.s.

  pustakada bagge ondu article odidde..nimma writing tumbaa chennagide,bdukina bavanegalu kanniiru tarisuttave.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: