ಟಿವಿ ವಾಹಿನಿ ಸಂದರ್ಶನಕ್ಕೆ ಒಂದಿಷ್ಟು ಟಿಪ್ಸ್ ಕೊಡ್ತಾರೆ ಶಾಂತಾ ನಾಗರಾಜ್..

ಶಾಂತಾ ನಾಗರಾಜ್

ಒಂದು ಕಾಲದಲ್ಲಿ ದಾಸಯ್ಯರಾಗಿ ವೃತ್ತಿ ಮಾಡುವವರ ಬಗ್ಗೆ ಸಮಾಜದಲ್ಲಿ ಗೌರವವಿತ್ತು. ಅವರನ್ನೆಂದೂ ಭಿಕ್ಷುಕರೆಂದು ಪರಿಗಣಿಸುತ್ತಿರಲಿಲ್ಲ. ಅದಕ್ಕೇ ದಾಸರು ’ಊರಿಗೆ ಬಂದರೆ ದಾಸಯ್ಯ ನಮ್ಮ ಕೇರಿಗೂ ಬಾ ಕಂಡ್ಯ ದಾಸಯ್ಯ’ ಎಂದೇ ಹಾಡಿದರು! ಆದರೆ ಈ ಕಾಲದಲ್ಲಿ ಹಾಗಿಲ್ಲ ಬಿಡಿ. ನಾನೀಗ ಹೇಳ ಹೊರಟಿರುವುದು ನಮ್ಮಂಥಾ ಸಾಹಿತಿಗಳು, ಸಂಗೀತ ಕಲಾವಿದರು, ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲೋ ಎಲೆಮರೆ ಕಾಯಿಯಂತೆ ತಮ್ಮಷ್ಟಕ್ಕೆ ತಾವಿರುವವರನ್ನು ಈ ಟಿವಿ ವಾಹಿನಿಗಳು ” ತಾವು ಆ ಮರೆಯಾಗಿರುವ ಎಲೆಯನ್ನು ಸರಿಸಿ ಜಗತ್ತಿಗೇ ಈ ಎಲ್ಲರನ್ನೂ ಗೋಚರವಾಗುವಂತೆ ಮಾಡಿ ಇವರೆಲ್ಲರನ್ನೂ ಕೃತಾರ್ಥ’ರನ್ನಾಗಿಸುವ ಕಾಯಕದಲ್ಲಿ ತೊಡಗುತ್ತಾರಲ್ಲಾ ಆಗ ನಾವೆಲ್ಲಾ ಅಕ್ಷರಶಃ ದಾಸಯ್ಯರಾಗುವುದು ನಿಜಕ್ಕೂ ಚೋದ್ಯವೇ ಸರಿ!! ಹೇಗೆನ್ನುತ್ತೀರೋ? ಇಲ್ಲಿ ಕೇಳಿ.

ನೀವು ಒಂದೆರಡು ಪುಸ್ತಕಗಳನ್ನು ಪ್ರಕಟಿಸಿ, ಒಂದೆರಡು ಪದ್ಯ,ಲೇಖನಗಳನ್ನು ಪತ್ರಿಕೆಗೆ ಬರೆದು, ಅದರಲ್ಲಿ ನಿಮ್ಮ ಮುದ್ದು ನಗುಮುಖ ಅಂಚೆಸ್ಟಾಂಪಿನಷ್ಟಗಲ ಗೋಚರಿಸಿ, ನಿಮ್ಮ ಹಣೆಗೆ ’ಸಾಹಿತಿ’ ಎನ್ನುವ ಪಟ್ಟಿಕಟ್ಟಿಕೊಂಡಿರುತ್ತೀರಿ. ಇಲ್ಲಿಂದ ಶುರುವಾಗುತ್ತದೆ ನಿಮ್ಮ ದಾಸಯ್ಯನ ಪಯಣ. ಇವಿಷ್ಟನ್ನೇ ನೋಡಿ ಟಿವಿವಾಹಿನಿಯವರು ರೋಮಾಂಚನಗೊಂಡು ನಿಮ್ಮನ್ನು ಹುಡುಕಿಕೊಂಡು ಬಂದರೆಂದು ನೀವು ಭ್ರಮಿಸಿದರೆ ಅದು ನಿಮ್ಮ ಕನಸಷ್ಟೇ. ನಿಮ್ಮ ಹತ್ತಿರದ ನೆಂಟರೋ, ಇಷ್ಟರೋ ಸ್ನೇಹಿತರೋ ನಿಮ್ಮ ಸಾಹಿತ್ಯ ಓದಿ ಖುಷಿ ಪಟ್ಟಿರುತ್ತಾರೆ. ಅವರು ತಮ್ಮ ಸ್ನೇಹಿತರಿಗೆ ಹೇಳಿರುತ್ತಾರೆ. ಆ ಸ್ನೇಹಿತರ ಮತ್ತೊಬ್ಬ ಸ್ನೇಹಿತರು ಯಾವುದೋ ವಾಹಿನಿಯಲ್ಲಿ ಉದ್ಯೋಗಸ್ಥರಾಗಿರುತ್ತಾರೆ. ಆದ್ದರಿಂದಲೇ ಮೂರು ಕೈಗಳನ್ನು ದಾಟಿ ನಿಮ್ಮ ಮೊಬೈಲ್ ನಂಬರ್ ಅಲ್ಲಿಗೆ ಸೇರಿರುತ್ತದೆ. ಎಲ್ಲ ವಾಹಿನಿಗಳಿಗೂ ದ್ವೇಷ ಮತ್ತು ಗೋಳ್ಕರೆ ಧಾರಾವಾಹಿಗಳನ್ನೂ, ಹುಚ್ಚುಚ್ಚಾದ ರಿಯಾಲಿಟಿ ಶೋಗಳನ್ನೂ, ತಿರುಗಿದಲ್ಲೇ ತಿರುಗುವ ಕ್ರೈಮ್ ಸ್ಟೋರಿಗಳನ್ನೂ ಬಿತ್ತರಿಸಿ ಬಿತ್ತರಿಸಿ ಸಾಕಾಗಿ, ವಾರಕ್ಕೊಮ್ಮೆಯಾದರೂ ಸತ್ವ (?) ಪೂರ್ಣವಾದ ಜಗತ್ತಿಗೆ ’ಮಾದರಿ’ ಗಳನ್ನು ತೋರಿಸುವ ಭ್ರಮೆ ಹುಟ್ಟಿಕೊಳ್ಳುತ್ತದೆ.

ಒಂದು ಸುಂದರ ಸಂಜೆ ಸೂರ್ಯ ಮುಳುಗುವ ಮುನ್ನ ನಿಮ್ಮ ಮೊಬೈಲ್ ರಿಂಗಣಿಸುತ್ತದೆ. ” ತಾವು ಮುಂದಿನವಾರ ಇಂಥಾ ಹೊತ್ತಿಗೆ ಫ್ರೀ ಇದ್ದೀರಾ? ನಿಮ್ಮನ್ನು ನಮ್ಮ ವಾಹಿನಿಯ ಇಂಥಾ ಕಾರ್ಯಕ್ರಮದಲ್ಲಿ ಸಂದರ್ಶಿಸ ಬೇಕೆಂದಿದ್ದೇವೆ” ಎನ್ನುವ ಇನಿದಾದ ಧ್ವನಿ ನಿಮ್ಮ ಕಿವಿಯೊಳಗೆ ಜಿನುಗುತ್ತದೆ. ಇಂಥಾ ಕರೆ ನಿಮಗೆ ಮೊಟ್ಟಮೊದಲನೆಯದಾಗಿದ್ದರೆ ಆ ಕ್ಷಣವೇ ನಿಮ್ಮ ಮನಸ್ಸು ಆಕಾಶದಲ್ಲಿ ಹಾರಾಡುತ್ತಿರುತ್ತದೆ!! ತಕ್ಷಣ ಪುಂಗಿಯ ಮುಂದಿನ ನಾಗರಹಾವಿನಂತೆ ನಿಮ್ಮ ತಲೆ ಓಲಾಡಲು ಶುರುವಾಗುತ್ತದೆ. ಆ ಕ್ಷಣಕ್ಕೆ ನಿಮ್ಮಮನದಲ್ಲಿ ’ಎಲ್ಲೋ ಎಲೆಮರೆ ಕಾಯಿಯಂತಿದ್ದ ನಾನು ಕನ್ನಡದ ಮುಕ್ಕೋಟಿ ಜನಕ್ಕೆ ( ಡಾ.ರಾಜ್ ಕುಮಾರ್ ಹೇಳುತ್ತಿದ್ದಂತೆ ) ಮತ್ತು ಇಂದಿನ ವಾಸ್ತವದಂತೆ ನಾಲ್ಕೂಕಾಲು ಕೋಟಿಜನಕ್ಕೆ ಪರಿಚಿತವಾಗುವುದು ಎಂಥಾ ಪುಣ್ಯ! ಎಂಥಾ ಅವಕಾಶ!!’ ಎನ್ನುವ ಭಾವ ಉಕ್ಕುಕ್ಕಿ ಹರಿಯುತ್ತದೆ. ಯಾಕೆಂದರೆ ಎಲ್ಲಾ ವಾಹಿನಿಯವರೂ ’ತಮ್ಮ ಕಾರ್ಯಕ್ರಮವನ್ನು ಸದಾ ಕಾಲ ನಾಲ್ಕೂಕಾಲುಕೋಟಿ ಜನ ವೀಕ್ಷಿಸುತ್ತಲೇ ಇರುತಾರೆ’ ಎನ್ನುವ ತಮಟೆಯನ್ನು ಬಡಿಯುತ್ತಲೇ ಇರುತ್ತಾರೆ! ನಿಮ್ಮ ಭ್ರಮೆಯನ್ನು ನಾನು ಮೆಚ್ಚುತ್ತೇನೆ ಮತ್ತು ಗೌರವಿಸುತ್ತೇನೆ.

ಆದರೆ ಇಲ್ಲೊಂದು ’ರೆ ರಾಜ್ಯ’ ಎನ್ನುವ ಸಣ್ಣ ತೊಂದರೆ ಇದೆ. ನಿಮ್ಮ ಕಾರ್ಯಕ್ರಮ ಯಾವಾಗ ಬರುತ್ತದೋ ಆಗ ಕನ್ನಡನಾಡಿನ ಹಳ್ಳಿಹಳ್ಳಿಯಲ್ಲೂ ಕರೆಂಟ್ ಇದ್ದರೆ, ಅದೇ ಕ್ಷಣದಲ್ಲಿ ಮನೆಯ ಮಕ್ಕಳು ಕಾರ್ಟೂನ್ ಚಾನಲ್ಲನ್ನು ನೋಡದೇ ಇರುತ್ತಿದ್ದರೆ, ಆಗಲೇ ಮನೆಯ ಯಜಮಾನ ನ್ಯೂಸ್ ಚಾನೆಲ್ಲಿಗೆ ಸರ್ಫ್ ಮಾಡದೇ ಇದ್ದರೆ, ಅದೇ ಹೊತ್ತಿನಲ್ಲಿ ಮತ್ತೊಂದು ವಾಹಿನಿಯಲ್ಲಿ ಅಮ್ಮಂದಿರ ಹಾಗೂ ಅತ್ತೆಯರ ನೆಚ್ಚಿನ ಧಾರಾವಾಹಿಗಳು ಇಲ್ಲದಿದ್ದರೆ, ಅದೇ ಕಾಲಕ್ಕೆ ಸೊಸೆಯಂದಿರ ಮತ್ತು ಹೆಣ್ಣುಮಕ್ಕಳ ತನುಮನಕ್ಕೆ ತಂಪೆರೆಯುವ ಫ್ಯಾಶನ್ ಶೋಗಳನ್ನು ಯಾವ ಚಾನೆಲ್‍ಗಳೂ ಬಿತ್ತರಿಸದಿದ್ದರೆ, ಕ್ರಿಕೆಟ್ ಅಗಲೀ ಅಥವಾ ಅಂಥಾ ಸಾಮೂಹಿಕ ಸನ್ನಿ ಹುಟ್ಟಿಸುವ ಅಂತಾರಾಷ್ಟ್ರೀಯ ಆಟಗಳು ಯಾವ ದೇಶದಲ್ಲೂ ಇಲ್ಲದಿದ್ದರೆ, ಕಾಲೇಜು ಕಿಶೋರ ಕಿಶೋರಿಯರ ಮೆಚ್ಚಿನ ತಾರೆಯ ಸಿನಿಮಾಗಳು ಯಾವ ಚಾನೆಲ್ಲಿನಲ್ಲೂ ಬರುತ್ತಿಲ್ಲವೆಂದಾರೆ , ಹೈಸ್ಕೂಲ್ ಮಕ್ಕಳು ನೂರನೇ ಬಾರಿಯೂ ಮೆಚ್ಚುತ್ತಾ ನೋಡುವ ಹ್ಯಾರಿಪಾಟರ್ ಸಿನಿಮಾ ಎಲ್ಲೂ ಬಿತ್ತರವಾಗದೇ ಇದ್ದರೆ…ರೆ…ರೆ…ರೆ …. ಖಂಡಿತಾ ನಿಮ್ಮನ್ನು ಕನ್ನಡದ ನಾಲ್ಕೂಕಾಲುಕೋಟಿ ಜನ ನೋಡಿಯೇ ನೋಡುತ್ತಾರೆ ಎಂದು ನಾನು ಯಾವ ದೇವರನ್ನಾದರೂ ಮುಟ್ಟಿ ಪ್ರಮಾಣಮಾಡಿ ಹೇಳುತ್ತೇನೆ.

ಈಗ ನಿಮ್ಮ ಸಿದ್ಧತೆಯ ಬಗ್ಗೆ ಒಂದಿಷ್ಟು ಟಿಪ್ಸ್! ಗಾಢಬಣ್ಣದ ಮತ್ತು ತಿಳಿಬಣ್ಣದ ಬಟ್ಟೆಗಳನ್ನು ಸಿದ್ಧಮಾಡಿಕೊಳ್ಳಿ ( ಹೆಂಗಸರಾದರೆ ಸೀರೆ ಅಥವಾ ಚೂಡೀದಾರ್ ಅಥವಾ ಜೀನ್ಸ್ ಪ್ಯಾಂಟ್ ಮತ್ತು ಬಣ್ಣಬಣ್ಣದ ಟಾಪ್ಸ್.  ಗಂಡಸರಾದರೆ ಜುಬ್ಬಾ ಅಥವಾ ಟೀ ಶರ್ಟ್ ಅಥವಾ ಸೂಟು ಕೋಟು ಟೈ ಇತ್ಯಾದಿ ಯಥಾಶಕ್ತಿ) ಯಾಕೆಂದರೆ ನೀವು  ಸ್ಟುಡಿಯೋದಲ್ಲಿ ಸಂದರ್ಶಕ್ಕೆಂದು ಕೂಡಲಿರುವ ಕುರ್ಚಿ ಅಥವಾ ಸೋಫಾದ ಹಿಂದೆ ಯಾವ ಬಣ್ಣದ ಬ್ಯಾಕ್ ಡ್ರಾಪ್ ಇದೆಯೋ ಗೊತ್ತಿಲ್ಲವಲ್ಲ? ಅದಕ್ಕೇ ಮುಂಜಾಗ್ರತೆ! ಎರಡನೆಯದಾಗಿ ನೀವು ಬರೆದಿರುವ ಪುಸ್ತಕಗಳನ್ನು ಮತ್ತು ಲೇಖನಗಳ ಫೈಲ್‍ಗಳನ್ನು ಜೋಡಿಸಿಕೊಳ್ಳಿ. ಹತ್ತೋ ಹದಿನೈದೋ ಪುಸ್ತಕಗಳಾದರೆ ಮತ್ತು ಒಂದೆರಡು ಫೈಲ್ ಆದರೆ ಪರವಾಗಿಲ್ಲ. ನೀವೇನಾದರೂ ನೂರಾರು ಪುಸ್ತಕಗಳನ್ನು ಬರೆದಿದ್ದರೆ ಅವನ್ನು ಹೊತ್ತೊಯ್ಯಲು ಒಂದು ಟೆಂಪೋ ಗೊತ್ತು ಮಾಡಿಕೊಳ್ಳಿ. ಇನ್ನು ಚಿತ್ರದರ್ಶನ! ನಿಮ್ಮನ್ನು ತೊಟ್ಟಿಲಿಗೆ ಹಾಕಿದಾಗಿನ ಭಾವಚಿತ್ರದಿಂದ ಹಿಡಿದು, ಪದವಿಯ, ಮದುವೆಯ, ನಿಮ್ಮದೇ ಪುಸ್ತಕಗಳ ಬಿಡುಗಡೆ ಸಮಾರಂಭಗಳ, ಹಲವಾರು ವೇದಿಕೆಗಳಲ್ಲಿ ನೀವು ಭಾಷಣ ಮಾಡುತ್ತಿರುವ, ಪ್ರಶಸ್ತಿ, ಸನ್ಮಾನ, ಬಹುಮಾನಗಳನ್ನು ಪಡೆಯುತ್ತಿರುವ,ಕಡೆಯದಾಗಿ ಗಂಡಹೆಂದತಿ ಮಕ್ಕಳ, ಅಪ್ಪ ಅಮ್ಮಂದಿರ ಅತ್ತೆಮಾವಂದಿರ ಎಲ್ಲಾ ಫೋಟೋಗಳನ್ನೂ ಒಟ್ಟುಗೂಡಿಸಿ ಕೊಂಡೊಯ್ಯುವುದನ್ನು ಮರೆಯಬೇಡಿ. ನಿಮ್ಮನ್ನು ವಾಹಿನಿಯವರು ಜಗತ್ಪ್ರಸಿದ್ಧರನ್ನಾಗಿಸುತ್ತಿದ್ದಾರಲ್ಲ? ಅದೇನು ಸಾಮಾನ್ಯ ವಿಚಾರವೇ?  ಮತ್ತು ಈ ಬೇಡಿಕೆ ನೀವು ಇನ್ನೇನು ಸಂದರ್ಶನಕ್ಕೆ ಹೊರಡಬೇಕೆನ್ನುವ ಘಳಿಗೆಯಲ್ಲಿ ಎಸ್.ಎಂ.ಎಸ್ ಮೂಲಕ ಬರಬಹುದು!!  ಆಗ ನೀವು ವಿಚಲಿತರಾಗುತ್ತೀರಿ ಮತ್ತು ಅಟ್ಟಹತ್ತಿ ಹಳೆಯ ಫೋಟೊಗಳಿಗೆ ತಡಕಾಡುತ್ತೀರಿ ಎಂದೇ ಈ ಟಿಪ್ಸ್ ಕೊಡುತ್ತಿದ್ದೇನೆ. ಪಾಪ ನನ್ನಂತೆ ನೀವು ಒದ್ದಾಡಬಾರದಲ್ಲ?

ಇನ್ನು ನೀವು ಕರ್ನಾಟಕದ ಯಾವುದೋ ಪಟ್ಟಣದಲ್ಲೋ ಊರಿನಲ್ಲೋ ಗ್ರಾಮದಲ್ಲೋ ಇದ್ದೀರೆಂದು ಕೊಳ್ಳಿ. ಇಂಥಾ ಫೋನ್ ಕರೆ ಬಂದರೆ ನಿಮಗೆ ರಾಜಧಾನಿಯ ದರ್ಶನದ ಭಾಗ್ಯ ಲಭಿಸಿದೆ ಎಂದೇ ಅರ್ಥ. ಯಾಕೆಂದರೆ ಎಲ್ಲಾ ವಾಹಿನಿಗಳು ಬೇರು ಬಿಟ್ಟಿರುವುದು ಬೆಂಗಳೂರೆಂಬ ’ಜಗದಗಲ ಮುಗಿಲೆತ್ತರ’ ಬೆಳೆದಿರುವ ಊರು ಎನಿಸಿಕೊಳ್ಳುವ ಮಹಾನಗರದಲ್ಲಿ ತಾನೆ? ಕರ್ನಾಟಕದ ಪ್ರತಿ ಪ್ರಜೆಗೂ ಬೆಂಗಳೂರಿನಲ್ಲಿ ನೆಂಟರೋ, ಇಷ್ಟರೋ, ಸ್ನೇಹಿತರೋ ಅಥವಾ ನೆಂಟರ ನೆಂಟರೋ, ಸ್ನೇಹಿತರ ಸ್ನೇಹಿತರೋ ಇರುವುದು ಗ್ಯಾರಂಟಿಯಲ್ಲವೇ? ಅವರ ಮನೆಯಲ್ಲಿ ಠಿಕಾಣಿ ಹೂಡಿ ಪರವಾಗಿಲ್ಲ. ಏಕೆಂದರೆ ವಾಹಿನಿಯವರು ಮತ್ತು ನೀವೂ ಮಾಡುತ್ತಿರುವ ಮಹತ್ಕಾರ್ಯಕ್ಕೆ ಅವರೂ ತಮ್ಮ ಪಾಲಿನ ಸಹಾಯವನ್ನು ಯಥಾಶಕ್ತಿ ಮಾಡಲಿ ಬಿಡಿ. ನೀವು ಸ್ವಲ್ಪ ’ವಿಶೇಷ ವ್ಯಕ್ತಿ’ ಯಾದ್ದರಿಂದ ಬೇರೆ ನೆಂಟರಿಗಿಂತಾ ನಿಮಗೆ ’ರೆಡ್ ಕಾರ್ಪೆಟ್’ ಸ್ವಾಗತ ಗ್ಯಾರಂಟಿ. ಬೆಂಗಳೂರಿನಲ್ಲೇ ವಾಸವಾಗಿರುವ ’ವಿಶೇಷ ವ್ಯಕ್ತಿ’ ಗಳಿಗೆ ಇಂಥಾ ಛಾನ್ಸ್ ಇಲ್ಲ ಬಿಡಿ.

ಕಡೆಯದಾಗಿ ಮತ್ತು ಮುಖ್ಯವಾಗಿ ನೀವು ಹೋಗಬೇಕಾಗಿರುವ ವಾಹಿನಿಯ ಸ್ಟುಡಿಯೋ ತಲುಪುವ ವಿಧಾನ. ಕಾರು , ಸ್ಕೂಟರ್ ಲಭ್ಯವಾದರೆ ನಿಮ್ಮ ನೆಲೆಯಿಂದ ಗಮ್ಯಸ್ಥಾನ ತಲುಪಲು ಒಂದು ಗಂಟೆ ಸಾಕು. ಸಿಟಿ ಬಸ್ಸಿನಲ್ಲಿ ಹೋಗಲು ಸಾಧ್ಯವಿಲ್ಲ ಬಿಡಿ. ಯಾವ ವಾಹಿನಿಯ ಆಫೀಸುಗಳೂ ಸಿಟಿ ಬಸ್ ಸ್ಟಾಪಿನ ಹತ್ತಿರವಿಲ್ಲ. ನಿಮ್ಮ ಹತ್ತಿರ ಲಗೇಜ್ ಬೇರೆ ಇದೆಯಲ್ಲ? ಬೆಂಗಳೂರಿನಲ್ಲಿ ಆಟೋಗಳು ಇರುವುದು ಯಾಕೆ ಸ್ವಾಮಿ? ನಿಮ್ಮ ಇಂಥಾ ಸಮಯಕ್ಕೆ ಒದಗುವುದಕ್ಕೇ!! ನೀವು ವಾಹಿನಿಯ ಹೆಸರು ಹೇಳಿದರೆ ಸಾಕು ಆಟೋದವ ಮೀಟರ್ ಬಂದ್ ಮಾಡಿಬಿಡುತ್ತಾನೆ. ಇದಕ್ಕೆ ಅವನು ಕೊಡುವ ಕಾರಣ ಒಂದೇ ” ಅದು ಒಂದು ಮೂಲೆಯಲ್ಲಿದೆ. ವಾಪಸ್ ಸವಾರಿ ಸಿಕ್ಕುವುದಿಲ್ಲ, ನಾನು ಹೇಳಿದಷ್ಟು ಕಕ್ಕಿ, ನಿಮ್ಮನ್ನು ಅಲ್ಲಿಗೆ ತಲುಪಿಸುತ್ತೇನೆ” ವಿಧಿಯೇ ಇಲ್ಲ. ನೀವೀಗ ಆಟೋದವರಿಗೆ ಶರಣು ಶರಣಾರ್ಥಿಯಾಗುತ್ತೀರಿ.

ದೊಡ್ಡ ಟವರ್ ಮುಂದೆ ಏಸುಕ್ರಿಸ್ತ ತನ್ನ ಶಿಲುಬೆಯನ್ನು ತಾನೇ ಹೊತ್ತು ನಿಂತಂತೆ  ’ ನಾನು ಯಾಕಾದರೂ ಇಷ್ಟೊಂದು ಪುಸ್ತಕ ಬರೆದೆನೋ’ ಎಂದು ನಿಮ್ಮನ್ನು ನೀವು ಶಪಿಸಿಕೊಳ್ಳುತ್ತಾ ನಿಂತಿದ್ದೀರಿ. ಯಾರೂ ನಿಮ್ಮನ್ನು ’ಕ್ಯಾರೇ’ ಎನ್ನುವುದಿಲ್ಲ. ಸ್ವಾಗತಕಾರಿಣಿಯ ಮುಂದೆ ನೀವು ಹೋಗಬೇಕಾದ ಚಾನಲ್ಲಿನ ಹೆಸರನ್ನೂ ನಿಮ್ಮನ್ನು ಫೋನ್ ಮಾಡಿ ಕರೆದವರ ಹೆಸರನ್ನೂ ಉಸುರುತ್ತೀರಿ. ಆಕೆ ಯಾವ ಭಾವಕ್ಕೂ ಒಳಗಾಗದೇ ಎಡಕ್ಕೋ ಬಲಕ್ಕೋ ಕೂತಲ್ಲಿಂದಲೇ ಕೈ ಚಾಚಿ ” ಅಲ್ಲಿ ಲಿಫ್ಟ್ ಇದೆ. ಇಷ್ಟನೇ ನಂಬರಿನ ಮಹಡಿಗೆ ಹೋಗಿ ” ಎನ್ನುತ್ತಾಳೆ. ಲಗೇಜ್ ಸಮೇತ ನಿಮ್ಮ ಸವಾರಿ ಲಿಫ್ಟ್ ನಲ್ಲಿ ಮೇಲಕ್ಕೇರುತ್ತದೆ. ಆ ಮಹಡಿಯಲ್ಲಿ ಒಂದಷ್ಟು ಜನ ನಿಮಗೆದುರಾಗುತ್ತಾರೆ. ನಿಮ್ಮ ಕೈಲಿರುವ ಲಗೇಜು ಮತ್ತು ಜೋಲು ಮುಖವನ್ನು ನೋಡಿಯೇ ನೀವಿಂಥದೇ ಕಾರ್ಯಕ್ರಮಕ್ಕೆ ಬಂದಿದ್ದೀರಿ ಎಂದು ಊಹಿಸಿ ಬಿಡುತ್ತಾರೆ. ಅಲ್ಲಿಯೇ ಧೂಳಿನ ಜವನಿಕೆ ಹೊದ್ದ ಸೋಫಾ ತೋರಿಸಿ ” ಇಲ್ಲಿ ಕೂತಿರಿ ನಿಮ್ಮನ್ನು ಕರೆದವರು ಬರುತ್ತಾರೆ” ಎಂದು ಮಾಯವಾಗುತ್ತಾರೆ. ನೀವು ಸೋಫಾದ ತುದಿಯಲ್ಲಿ ಕೂತು ನೀವೇ ಹೊತ್ತುತಂದ ನಿಮ್ಮ ಮಕ್ಕಳ ತಲೆ ಸವರುತ್ತಾ  ’ ಪುಸ್ತಕದ ಬೀರುವಿನಲ್ಲಿ ನಗುನಗುತ್ತಾ ಇದ್ದ ನಿಮ್ಮನ್ನು ಚೀಲದಲ್ಲಿ ತುರುಕಿ ತಂದಿದ್ದೀನಲ್ಲಾ’ ಎಂದು ಮರುಗುತ್ತಾ ಕೂತಿರುತ್ತೀರಿ. ಎಷ್ಟೋ ಹೊತ್ತಿಗೆ ಒಬ್ಬ ಸಾಮಾನ್ಯ ಮನುಷ್ಯ ಬಂದು, ದಿನನಿತ್ಯದ ಕೆಲಸವನ್ನು ಮಾಡುವ ಯಾಂತ್ರದ ಮೂರ್ತಿಯಂತೆ ಅರ್ಧಕಪ್ಪು ಆರಿದ ಟೀಯನ್ನು ನಿಮ್ಮ ಮುಂದಿರಿಸಿ ಹೋಗುತ್ತಾನೆ. ನೀವದನ್ನು ಕುಡಿಯಲೇ ಬೇಕೆನ್ನುವ ದರ್ದು ಅವನಿಗೇನೂ ಇಲ್ಲ ಬಿಡಿ. ಕುಡಿಯುವುದೂ ಬಿಡುವುದೂ ನಿಮ್ಮಿಷ್ಟ.

ಕಡೆಗೆ ಅಂತೂ ನಿಮಗೊಂದು ಕರೆ ಬರುತ್ತದೆ. ಕರೆದವನ ಹಿಂದೆ ಕುರಿಯಂತೆ ನಡೆಯುತ್ತೀರಿ. ಒಂದು ಅರೆಬೆಳಕಿನ ಸ್ಟೂಡಿಯೋದಲ್ಲಿ ಲ್ಯಾಂಡ್ ಆಗುತ್ತೀರಿ. ಅಲ್ಲಿನ ಮೆಟ್ಟಿಲು ಕಾಣದೇ ಮುಗ್ಗರಿಸುತ್ತೀರಿ. ಅಲ್ಲಿನ ಕೆಲವರು ಕಿಸಕ್ ಎನ್ನುತ್ತಾರೆ. ಯಾರೋ ಹೃದಯವಂತರು “ಲೈಟ್ ಹಾಕಿರೋ ಪಾಪ ಅವರಿಗೆ ಕಾಣುತ್ತಿಲ್ಲ” ಎಂದು ಗದರುತ್ತಾರೆ. ’ಬನ್ನಿ ಕುಳಿತುಕೊಳ್ಳಿ’ ಎನ್ನುವ ನಿರ್ಭಾವದ ಸ್ವಾಗತವೂ ಸಿಗುತ್ತದೆ. ಒಂದು ಕನ್ನಡಿ ಮತ್ತು ಎಷ್ಟೋ ಜನರ ಬೆವರಿನ ವಾಸನೆಯಿರುವ ಒಂದು ಒದ್ದೆ ಸ್ಪಂಜಿನೊಡನೆ ಮೇಕಪ್ ಮ್ಯಾನ್ ನಿಮ್ಮ ಮುಂದೆ ಹಾಜರಾಗುತ್ತಾನೆ. ನೀವು ಒಂದೇ ಕಾಲದಲ್ಲಿ ಅವನ ಉಸಿರಿನ ಮತ್ತು ಸ್ಪಂಜಿನ ವಾಸನೆಯನ್ನು ಸಹಿಸಿಕೊಳ್ಳುತ್ತಾ ಮೇಕಪ್ ಮಾಡಿಸಿಕೊಳ್ಳುತ್ತೀರಿ. ಇ-ಮೇಲ್ ಮುಖಾಂತರವೋ ಅಂಚೆಯಲ್ಲೋ ನೀವೇ ಕಳಿಸಿದ ನಿಮ್ಮ ಸ್ವವಿವರವನ್ನು ಆಧರಿಸಿದ ಒಂದು ಪ್ರಶ್ನೆಗಳ ಹಾಳೆಯನ್ನು ಹಿಡಿದು ನಿಮ್ಮನ್ನು ಕರೆದ ವ್ಯಕ್ತಿ ಪ್ರತ್ಯಕ್ಷರಾಗುತ್ತಾರೆ. ವಂದನೆ ಪ್ರತಿವಂದನೆಯೊಂದಿಗೆ ನಿಮ್ಮ ಮುದುಡಿದ ಮನಸ್ಸಿಗೆ ಚಾಲನೆ ದೊರೆಯುತ್ತದೆ.

ಆ ಹೊತ್ತಿಗೆ ದೇವಲೋಕದಿಂದ ಇಳಿದು ಬಂದಂತೆ ವೇಷಭೂಷಿತಳಾದ ನಿರೂಪಕಿ ನಿಮ್ಮೆದುರು ನಿಲ್ಲುತ್ತಾಳೆ. ಅಧಿಕಾರಿ ಪ್ರಶ್ನಾವಳಿಯ ಹಾಳೆಯನ್ನು ಅವಳ ಕೈಗೆ ಹಸ್ತಾಂತರಿಸುತ್ತಾರೆ. ಅವಳದನ್ನೊಮ್ಮೆ ಮೇಲಿಂದ ಕೆಳಗೆ ನೋಡಿ ’ಇಷ್ಟೇನೇ’ ಎನ್ನುವ ಮುಖ ಮಾಡಿ ನಿಮ್ಮನ್ನು ಸಂದರ್ಶಿಸಲು ತಯಾರಾಗಿಯೇ ಬಿಡುತ್ತಾಳೆ. ತನ್ನ ಮೂವತ್ತೆರಡು ಹಲ್ಲುಗಳನ್ನೂ ಕ್ಯಾಮರಾ ಎನ್ನುವ ಸಲಕರಣೆಗೇ ದಾನ ಮಾಡುತ್ತಿರುವವಳಂತೆ, ಒಮ್ಮೆಯೂ ತುಟಿ ಮುಚ್ಚದ ದಂತಸುಂದರಿ ತನ್ನ ಕೋಮಲ ಕಂಠದಿಂದ ಉಲಿಯುತ್ತಾಳೆ!!  ’ ನೀವು ಈ ಪುಸ್ತಕವನ್ನು ಯಾಕೆ ಬರೆದಿರಿ? ಇದೇ ವಸ್ತುವನ್ನು ಯಾಕೆ ಆಯ್ಕೆ ಮಾಡಿಕೊಂಡಿರಿ? ಈ ಕವನವನ್ನು ಎಲ್ಲಿ ಮೊದಲು ಓದಿದಿರಿ? ಮುಂತಾದ ಅರ್ಥಹೀನ ಪ್ರಶ್ನೆಗಳು ಒಂದಾದ ಮೇಲೊಂದರಂತೆ ನಿಮ್ಮನ್ನು ರಾಚುತ್ತವೆ. ಹಲವಾರು ವೇದಿಕೆಗಳಲ್ಲಿ ಭಾಷಣ ಕುಟ್ಟಿದ ನಿಮಗೆ ಈ ಪ್ರಶ್ನೆಗಳು ಬಾಲಿಶವೆನಿಸಿದರೂ ’ಸಂತೆ ಹೊತ್ತಿಗೆ ಮೂರು ಮೊಳ ನೇಯುವಂತೆ’ ಬಾಯಿಗೆ ಬಂದದ್ದನ್ನು ರಂಜನೀಯ ಶೈಲಿಯಲ್ಲಿ ಹೇಳಿ ಸಂದರ್ಶನ ಮುಗಿಸುತ್ತೀರಿ. ನಂತರ ನೀವು ತಂದ ಪುಸ್ತಕಗಳ ಮತ್ತು ಚಿತ್ರಗಳ ಶೂಟಿಂಗ್ ನಡೆದು, ಎಲ್ಲವನ್ನೂ ನಿಮಗಿಂತಾ ಕೆಟ್ಟದಾಗಿ ಬ್ಯಾಗಿಗೆ ತುರುಕಿ ಕೊಟ್ಟು ನಿಮ್ಮನ್ನು ಲಿಫ್ಟ್ ವರೆಗೆ ಬೀಳ್ಕೊಟ್ಟು, ’ ನಿಮ್ಮನ್ನು ಜಗತ್ತಿಗೆ ಪರಿಚಯಿಸಿ ಕೃತಾರ್ಥರನ್ನಾಗಿಸಿದ’ ಮುಖಭಾವದಿಂದ ಆ ಅಧಿಕಾರಿ ನಿರ್ಗಮಿಸುತ್ತಾರೆ.

ನೀವೀಗ ನಿಮ್ಮ ಹೊರೆ ಹೊತ್ತು ಬೀದಿಯಲ್ಲಿ ನಿಂತಿದ್ದೀರಿ. ಯಾವ ಆಟೋದವರೂ ಅಲ್ಲಿ ಕೈ ತೋರಿಸಿದರೂ ನಿಲ್ಲುತ್ತಿಲ್ಲ. ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಧುತ್ತನೆ ಹುಟ್ಟಿಕೊಳ್ಳುತ್ತದೆ. ಕೋಟಿ ಕೋಟಿ ರೂಪಾಯಿಗಳ ಟರ್ನ್ ಓವರ್ ಇರುವ, ಧಾರಾವಾಹಿಯ ಎಪಿಸೋಡ್ ಒಂದಕ್ಕೇ ಲಕ್ಷಗಟ್ಟಲೇ ಸುರಿಯುವ, ಎಲ್ಲೂ ಓಡದ ಸಿನಿಮಾಗಳನ್ನು ಹಲವು ಲಕ್ಷಗಳ ಲೆಕ್ಕದಲ್ಲಿ ಖರೀದಿಸುವ, ರಿಯಾಲಿಟಿ ಶೋ ಗಳಿಗಾಗಿ ಸಾವಿರಾರು ರೂಗಳನ್ನು ಸೆಟ್‍ಗಾಗಿಯೇ ವ್ಯಯಿಸುವ, ಕೈತುಂಬಾ ಹಣ ಕೊಟ್ಟು ನಿರೂಪಕಿಯರನ್ನೂ ಸಿನಿಮಾ ತಾರೆಯರನ್ನಾಗಿಸುವ ಈ ವಾಹಿನಿ ನನಗೇಕೆ ಒಂದು ಸಾರಿಗೆ ವೆಚ್ಚವನ್ನೂ ಕೊಡಲಿಲ್ಲ? ಎನಿಸುತ್ತದೆಯಲ್ಲವೇ? ಯಾಕೆಂದರೆ ವಾಹಿನಿಯ ಕಣ್ಣಿನಲ್ಲಿ ನೀವು ಕೇವಲ ’ದಾಸಯ್ಯ’!  ನಮ್ಮ ಕೇರಿಗೆ ಬಾ ಕಂಡ್ಯ ಎಂದು ಕರೆದು ಜಗತ್ತಿಗೆ ನಿಮ್ಮನ್ನು ಪರಿಚಯಿಸಿದ್ದಾರೆ!! ನೀವು ಹೋಗಿ ಅಲ್ಲಿ ನಿಮ್ಮ ಶಂಖವನ್ನು ಊದಿ ಬಂದಿದ್ದೀರಿ!! ನೀವೇ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು!!!

ಈಗ ನಿಮ್ಮ ನೋವಿನ ಕುದಿತ ಕೊನೆಯ ಹಂತಕ್ಕೆ ಬರುತ್ತದೆ. ಆಟೋದಲ್ಲಿ ಕುಳಿತೇ ನಿಮ್ಮ ಪರಿಚಿತ ಪತ್ರಕರ್ತರಿಗೆ ಫೋನ್ ಹಚ್ಚಿ ನೋವಿನ ವಾಹಿನಿಯನ್ನು ಹರಿಬಿಡುತ್ತೀರಿ. ಅದಕ್ಕೆ ಅವರು ಕೊಡುವ ಜವಾಬನ್ನು ಕೇಳಿ ದಂಗಾಗಿ ಹೋಗುತ್ತೀರಿ!! ” ಅಯ್ಯೋ ರೀ ನೀವು ಇನ್ನೂ ಯಾವ ಕಾಲದಲ್ಲಿದ್ದೀರಿ? ಈಗೆಲ್ಲಾ ಕೆಲವರು ಸಾಹಿತಿಗಳು ,  ಕಲಾವಿದರೂ ತಾವೇ ಸಾವಿರಾರು ರೂಪಾಯಿ ಹಣಕೊಟ್ಟು ಕಾರ್ಯಕ್ರಮ ದೊರಕಿಸಿಕೊಳ್ಳುತ್ತಾರೆ! ಅದು ಪ್ರಸಾರವಾಗುವ ದಿನಾಂಕವನ್ನು ತಮ್ಮ ಎಲ್ಲ ಪರಿಚಿತರಿಗೂ ಎಸ್.ಎಂ.ಎಸ್ ಮೂಲಕ ತಿಳಿಸುತ್ತಾರೆ! ಕಾರ್ಯಕ್ರಮ ಬರುತ್ತಿರುವಾಗಲೂ ಎಸ್.ಎಂ.ಎಸ್ ಕಳಿಸುತ್ತಲೇ ಇರುತ್ತಾರೆ! ಈ ಕಾಲವೇ ಅಂಥಾದ್ದು ನೋಡಿ!. ಅರ್ಜಿಕೊಟ್ಟು ಪ್ರಶಸ್ತಿಗಳನ್ನು ಪಡೆಯುವುದು, ಶಿಫಾರಸ್ಸು ಮಾಡಿಸಿ ಬಹುಮಾನ ಸನ್ಮಾನಗಳನ್ನು ಪಡೆದುಕೊಳ್ಳುವುದು, ಸರ್ಕಾರೀ ಕಚೇರಿಗಳ ಮೆಟ್ಟಲು ಸವೆಸಿ ಸವೆಸೀ ಅಧಿಕಾರಗಳನ್ನು ಪಡೆಯುವುದು ಇವೆಲ್ಲಾ ಒಂದಿಷ್ಟು ಜನ ಸಾಹಿತಿಗಳಿಗೆ, ಕಲಾವಿದರಿಗೆ ಈಗ ಮಾಮೂಲು” !!

ಈ ಹೊತ್ತಿನಲ್ಲಿ  ಎರಡು ಘಟನೆಗಳು ನೆನಪು ಮಾಡಿಕೊಳ್ಳಲು ಅರ್ಹವೆನಿಸುತ್ತದೆ . ಹಲವು ದಶಕಗಳ ಹಿಂದೆ ಆಕಾಶವಾಣಿಯ ಅಧಿಕಾರಿಯೊಬ್ಬರು ಪ್ರಸಿದ್ಧರಾದ ಸಂಗೀತ ಕಲಾವಿದರನ್ನು ಹೀಗೇ ’ದಾಸಯ್ಯ’ನಂತೆ ಭಾವಿಸುತ್ತಾ ” ನಾವಿಲ್ಲದೇ ನೀವು ಹೇಗೆ ಪ್ರಸಿದ್ಧರಾಗುತ್ತೀರಿ”? ಎಂದರಂತೆ. ಆ ಕ್ಷಣದಲ್ಲಿಯೇ ಆ ಸ್ವಾಭಿಮಾನಿ ಕಲಾವಿದರು “ನಿಮ್ಮ ಸಹಾಯವಿಲ್ಲದೇ ನಾನು ಹೇಗೆ ಎತ್ತರಕ್ಕೆ ಏರುತ್ತೇನೆ ನೋಡುತ್ತಿರಿ” ಎಂದು ಹಲವು ದಶಕಗಳು ಆಕಾಶವಾಣಿಯ ಕಡೆ ತಿರುಗಿಯೂ ನೋಡಲಿಲ್ಲ. ತಮ್ಮ ಕಂಚಿನ ಕಂಠದಿಂದ, ತಮ್ಮ ಅನನ್ಯ ಸಾಧನೆಯಿಂದ ಅವರು ಕನ್ನಡದ ಜನಮಾನಸದಲ್ಲಿ ನೆಲೆಯೂರಿದರು. ಅವರು ಯಾವ ಮಟ್ಟದ ಪ್ರಸಿದ್ಧಿಯ ಶಿಖರವನ್ನೇರಿದರೆಂದರೆ ಮುಂದೆ ಆಕಾಶವಾಣಿಯವರು ಶರಣು ಹೊಡೆದು ತಮ್ಮ ಸಂಗೀತೋತ್ಸವಕ್ಕೆ ಅವರನ್ನು ಕರೆತರಬೇಕಾಯಿತು. ಎರಡನೆಯ ಪ್ರಸಂಗ – ಪ್ರಸಿದ್ಧ ಕನ್ನಡ ಕಾದಂಬರಿಕಾರರೊಬ್ಬರನ್ನು  ಸಿನಿಮಾ ಜಗತ್ತಿನ ಶೂರನೊಬ್ಬ ” ನಿಮ್ಮ ಕಾದಂಬರಿಯನ್ನು ಕೊಡಿ ಅದನ್ನು ಸಿನಿಮಾ ಮಾಡಿ ಜನಮನಕ್ಕೆ ಮುಟ್ಟಿಸಿ ನಿಮ್ಮನ್ನು ಪ್ರಸಿದ್ಧರನ್ನಾಗಿಸುತ್ತೇನೆ” ಎಂದನಂತೆ. ಅದಕ್ಕೆ ಆ ಸಾಹಿತಿ ಮಹಾಶಯರು ” ನಾನು ಕಾದಂಬರಿ ಬರೆದಿರುವುದು ನೀನು ಸಿನಿಮಾ ಮಾಡಲಿ ಎಂದಲ್ಲ, ನನಗೆ ನಿನ್ನಿಂದ ಬರುವ ಪ್ರಸಿದ್ಧಿಯೂ ಬೇಕಿಲ್ಲ” ಎಂದರಂತೆ!!

ಇಂಥಾ ಗಟ್ಟಿತನ ಮತ್ತು ಅಸ್ಮಿತೆಗಳು ನಮ್ಮಲ್ಲಿ ಹುಟ್ಟ ಬೇಕಲ್ಲವೇ?

‍ಲೇಖಕರು avadhi

February 22, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. M.A.Sriranga

    ಆಕಾಶವಾಣಿಗೆ ಸಡ್ಡು ಹೊಡೆದ ಸಂಗೀತಗಾರರ ಹೆಸರು ಮತ್ತು ಸಿನಿಮಾ ಶೂರನಿಗೆ ಗದರಿಸಿ ಕಳುಹಿಸಿದ ಪ್ರಸಿದ್ಧ ಕಾದಂಬರಿಕಾರರ ಹೆಸರು ತಿಳಿಸಿದ್ದರೆ ಚೆನ್ನಾಗಿತ್ತು.

    ಪ್ರತಿಕ್ರಿಯೆ
  2. Anitha Naresh manchi

    ಸೂಪರ್… 🙂 🙂 ಪ್ರಸಿದ್ಧಳಾಗದುದಕ್ಕೆ ಮನದಲ್ಲೇ ವಂದಿಸುತ್ತಿದ್ದೇನೆ :p

    ಪ್ರತಿಕ್ರಿಯೆ
  3. h a patil

    – ಟಿವಿ ವಾಹಿನಿಯ ಸಂದರ್ಶನದ ಕುರಿತಂತೆ ನೀವು ಕೊಟ್ಟ ಟಿಪ್ಸ್ ಒಂದು ಸಾಸ್ತವ ಸ್ಥಿತಿಯ ನಿರೂಪಣೆ, ಈ ಬರಹವನ್ನು ಓದುತ್ತ ಹೋದರೆ ಟಿವಿ ಸಂದರ್ಶನ ಸಂಧರ್ಭದಲ್ಲಿ ಎದುರಿಸ ಬೇಕಾಗುವ ಮುಜುಗರದ ಸ್ಥಿತಿ ನೆನದು ನಮ್ಮ ಊರಲ್ಲಿಯೆ ನಾವಿರುಇವುದು ಕ್ಷೇಮ ಎನಿಸುತ್ತದೆ, ಮೇಲಾಗಿ ನಾವೇನೂ ಅಷ್ಟು ಗಣ್ಯ ವ್ಯಕ್ತಿಗಳಲ್ಲ ಬಿಡಿ.ಗಣ್ಯರಾದವರು ಯೋಚಿಸಬೇಕಾದ ವಿಷಯವಿದು, ಒಳ್ಳೆಯ ಅರ್ಥಪೂರ್ಣ ಬರಹ ಕೊನೆಯ ಪ್ಯಾರಾ ನಮ್ಮ ಸಾಂಸ್ಕೃತಿಕ ಪರತಂಪರೆಯ ನೈಜ ಪ್ರಜ್ಞೆಯಂತಿದೆ.

    ಪ್ರತಿಕ್ರಿಯೆ
  4. shanthanagaraj

    ಆ ಸಂಗೀತಗಾರರ ಹೆಸರು ಮತ್ತು ಕಾದಂಬರಿಕಾರರ ಹೆಸರು ತಿಳಿಸಿದ್ದರೆ ನಾನು ಕೋರ್ಟಿನ ಕಟಕಟೆಯಲ್ಲಿ ನಿಲ್ಲಬೇಕಾಗಬಹುದು!! ಏಕೆಂದರೆ ಈ ಹೊತ್ತು ನಾವು ಏನು ಬರೆಯಬೇಕಾದರೂ ಲಾಯರ್ ನೋಟೀಸು, ಕೋರ್ಟು ಇಂಥಾ ಕತ್ತಿಗಳನ್ನು ನೆನೆಸಿಕೊಂಡೇ ಬರೆಯಬೇಕಾಗಿದೆ. ಇವತ್ತು ನಮ್ಮ ವ್ಯಕ್ತಿಸ್ವಾತಂತ್ರ್ಯ ಮತ್ತು ವಾಕ್‍ಸ್ವಾತಂತ್ರ್ಯಗಳು ಎಂಥಾ ಸಂಕುಚಿತ ಮಟ್ಟಕ್ಕಿಳಿದಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.
    ನನ್ನ ಲೇಖನವನ್ನು ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು
    ಶಾಂತಾನಾಗರಾಜ್

    ಪ್ರತಿಕ್ರಿಯೆ
  5. latha vidyaranya

    ನೇಮು ಫೇಮು ಎಂಬ ಆಫೀಮಿನ ಮಾದಕತೆಯ ಆಮಿಷಕ್ಕೆ ತುತ್ತಾಗಿ ಪರದಾಡುವ, ಟೀ ವಿ ಆಫೀಸ್ ಗಳಿಗೆ ಅಲೆದಾಡುವ ಇವರುಗಳ ಪರಿಸ್ಥಿತಿಯನ್ನು ನೆನೆದು ಮನಸ್ಸಿಗೆ ನೋವಾಯಿತು. ನಿಮ್ಮ ಲೇಖನ ಅಂಥಹವರಿಗೆ ಕಣ್ಣು ತೆರೆಸುವಂತಿದೆ! ಬರಹ ತುಂಬಾ ರೋಚಕವಾಗಿದೆ. ಅಭಿನಂದನೆಗಳು ತಮಗೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: