ಸಂಪು ಕಾಲಂ : ತೇಜಸ್ವಿ, ಯು ಆರ್ ಮತ್ತು ವಿಮರ್ಶೆಯ ಪರಿಭಾಷೆ

ಅದ್ಯಾವುದೋ ಪರೀಕ್ಷೆಗೆ ವಿಚಿತ್ರ ಅಕ್ಷರಗಳಲ್ಲಿ ಅರ್ಜಿ ಸಲ್ಲಿಸ ಹೊರಟ ನಾನು, ಅಂದೇ ಕೊನೇ ದಿನವಾಗಿದ್ದೂ, ಅರ್ಜಿಯನ್ನು ಕಳೆದುಕೊಂಡು ಹುಡುಕುತ್ತಿದ್ದೆ. ಇದ್ದಕ್ಕಿದ್ದಂತೆ “see, you idiot…” ಎಂದು ನನಗೆ ಕಾವ್ಯ ಮೀಮಾಂಸೆಯ ಬಗ್ಗೆ ಅದ್ಭುತವಾಗಿ ವಿವರಿಸುತ್ತಿದ್ದುದು ಮತ್ಯಾರೂ ಅಲ್ಲ, ಸಾಕ್ಷಾತ್ ತೇಜಸ್ವಿಯವರೇ! ಬಿಟ್ಟ ಕಣ್ಣು ಬಿಟ್ಟಂತೆ ಪುಳಕಿತಳಾಗಿ ಅವರ ಮಾತನ್ನು ಕೇಳುತ್ತಿದ್ದೆ. ಅರ್ಜಿ ಗಿರ್ಜಿ ಎಲ್ಲಾ ಮರೆತು, ನಾನಾಯ್ತು ಅವರ ಮಾತು ಪ್ಲಸ್ ಬೈಗುಳವಾಯ್ತು. ಜೀವನ ಪಾವನವಾಗಿ ಹೋಯ್ತು ಎಂದು ಆನಂದ ಪಡುವಷ್ಟರಲ್ಲಿ, ಹಾಳಾದ್ದು ಫೋನ್ ರಿಂಗಾಗಬೇಕೆ. ಎಚ್ಚರವಾಗಿಹೋದದ್ದಕ್ಕೆ ದಿನವಿಡೀ ನಿದ್ದೆಯನ್ನು ಶಪಿಸಿದೆ. ಅಟ್ಲೀಸ್ಟ್ ಅವರ ಮಾತುಗಳನ್ನಾದರೂ ನೆನಪಿನಲ್ಲಿರಿಸಬಾರದಾ ಆ ಸಿಹಿ ಕನಸು.

ಈಡಿಯಟ್ ಅಂದದ್ದು ಮತ್ತು ಕಾವ್ಯ ಮೀಮಾಂಸೆ ಅಂದದ್ದು ಮಸುಕು ನೆನಪು ಬಿಟ್ಟು ಮತ್ತೇನೂ ನೆನಪಿರಲಿಲ್ಲ. ಇದು, ಮೊಟ್ಟ ಮೊದಲಬಾರಿಗೆ ಬರಹಗಾರ, ಕಥೆಗಾರ ತೇಜಸ್ವಿಯ ಬದಲಾಗಿ ಒಬ್ಬ ವಿಮರ್ಶಕ ತೇಜಸ್ವಿಯನ್ನು ಕಂಡದ್ದರ ಸೈಡ್ ಎಫೆಕ್ಟ್. ತೇಜಸ್ವಿಯವರ ಕೆಲವು ವಿಮರ್ಶಾತ್ಮಕ ಲೇಖನಗಳನ್ನು ಓದಲು ಪ್ರಾರಂಭಿಸಿದಾಗಲೇ ಅವರಲ್ಲಿರುವ ಒಬ್ಬ ಭಯಂಕರ ತಾರ್ಕಿಕ, ತಾತ್ವಿಕ, ದಾರ್ಶನಿಕ ವ್ಯಕ್ತಿ ಕಂಡುಬಂದದ್ದು. ಅವರ ಅಗಾಧ ಓದು, ಅನುಭವ ಮತ್ತು ಅವನ್ನೆಲ್ಲ ತಮ್ಮ ತಾರ್ಕಿಕ ದೃಷ್ಟಿಕೋನದಿಂದ ಒರೆ ಹಚ್ಚಿ ನೋಡುವ ಪ್ರಕ್ರಿಯೆ ಇವೆಲ್ಲವೂ ಅವರ ಸೃಜನಶೀಲ ಬರಹಗಳಿಗಿಂತ ಹೆಚ್ಚಾಗಿ ನಮಗೆ ನಾಟುವುದು ಅವರ ಈ ಹಲಕೆಲವು ಪ್ರಬಂಧಗಳ ಮೂಲಕ ಎಂಬುದು ನನ್ನ ಅನುಭವದ ಅನಿಸಿಕೆ. ತೇಜಸ್ವಿಯವರ ವಿಚಾರ ಮಂಥನ ನಮ್ಮನ್ನು ಬೆರಗುಗೊಳಿಸುತ್ತದೆ. ಬರಿಯ ಸೃಜನಾತ್ಮಕ ಸಾಹಿತ್ಯ, ಭಾಷೆ ಅಲ್ಲದೆ, ಸಮಾಜ, ರಾಜಕೀಯ, ವಿಜ್ಞಾನ, ಭೂಗೋಳ, ಹೀಗೆ ಅವರ ಜ್ಞಾನಾರ್ಜನೆ ಎಲ್ಲೆಗೆ ಮೀರಿದ್ದು. ಇದರ ಜೊತೆಗೇ, ತೇಜಸ್ವಿಯವರ ಕೆಲವು ವೈಯಕ್ತಿಕ ಸಿಟ್ಟು, ಸೆಡವುಗಳು, ನಂಬಿಕೆಗಳು, ‘ತೆಳು’ ಎನಿಸುವ ಮಾತುಗಳು ಈ ವಿಮರ್ಶೆಗಳಲ್ಲಿ ಕಂಡು ಬಂದಿವೆ. ಹಲವಾರು ಕಡೆ ಕುವೆಂಪುರವರ ಕೃತಿಗಳ ಬಗೆಗಿನ ಅನಂತಮೂರ್ತಿಯವರ ವಿಮರ್ಶೆಯನ್ನು ಖಂಡಿಸುತ್ತಾ, ಟೀಕಿಸುತ್ತಾ ತೇಜಸ್ವಿಯವರು ತುಂಬಾ ವೈಯಕ್ತಿಕ ಮಟ್ಟದಲ್ಲಿ ಅನಂತಮೂರ್ತಿಯವರನ್ನು ಟಾರ್ಗೆಟ್ ಮಾಡಿದ್ದಾರೆ ಅನಿಸುತ್ತದೆ.

ನನಗಿಲ್ಲಿ ಏಳುವ ಪ್ರಶ್ನೆಗಳು ಅಥವಾ ಅನಿಸಿಕೆಗಳು ಇಷ್ಟು: ಒಂದು ಕೃತಿ ವಿಮರ್ಶೆ ಯಾವ ವೈಯಕ್ತಿಕ ಮಟ್ಟವನ್ನು ಮುಟ್ಟಬಹುದು? ಒಂದು ಲೇಖನವನ್ನು ಟೀಕಿಸುವಾಗ (ಬಿ ಇಟ್ ತೇಜಸ್ವಿ ಅಥವಾ ಅನಂತಮೂರ್ತಿ) ವಿಮರ್ಶಕ ‘ಲೇಖಕ’ನ ಪ್ರಭಾವಳಿಯಿಂದ ಎಷ್ಟು ನಿರ್ಮಮವಾಗಬೇಕು? ಮತ್ತು ಒಂದು ವಿಮರ್ಶಾತ್ಮಕ ಬರಹ ತನ್ನ ನಿಷ್ಠೆಯನ್ನು, ಸತ್ಯತೆಯನ್ನು ಹೆಸರಿಸುತ್ತಾ, ಲೇಖಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ದೋಚುವುದು ಎಷ್ಟರ ಮಟ್ಟಿಗೆ ಸಹ್ಯ? ಅಥವಾ ವಿಮರ್ಶೆಯ ಪಾರಿಭಾಷಿಕತೆಯೇ ಇದೇ ಹೌದೆ?! ಈ ಎಲ್ಲಾ ಪ್ರಶ್ನೆಗಳು ನಾ ಹೆಸರಿಸಿದ ಇಬ್ಬರ ವಿಮರ್ಶಾತ್ಮಕ ಲೇಖನಗಳಲ್ಲೂ ಮೂಡುವಂಥದ್ದು. ತೇಜಸ್ವಿಯವರ “ಕರ್ನಾಟಕ ಸಂಸ್ಕೃತಿ, ವಿಶ್ಲೇಷಣೆ” ಎಂಬ ಲೇಖನ ಅನಂತಮೂರ್ತಿಯವರ “ಭಾರತ ಸಂಸ್ಕೃತಿ ಮತ್ತು ಲೇಖಕ” ಎಂಬ ಒಂದು ವಿಮರ್ಶಾತ್ಮಕ ಲೇಖನದ ವಿಮರ್ಶೆಯಾಗಿದೆ. ಮೊದಲಿಗೆ ತೇಜಸ್ವಿಯವರ ಈ ಲೇಖನ ಓದಿ, ಅಲ್ಲಿ ಕಂಡು ಬಂದ ಅವರ ಸಿಟ್ಟು, ತೆಗಳಿಗೆ, ಅನಂತಮೂರ್ತಿಯವರ ಬಗೆಗಿನ ರಾ ಆದ ಟೀಕೆಗಳು ನನ್ನಲ್ಲಿ ಅಚ್ಚರಿ ಮೂಡಿಸಿದವು.

ಕನ್ನಡ ಸಾಹಿತ್ಯದ ಒಬ್ಬ ಅತ್ಯುತ್ತಮ ಲೇಖಕ, ಮತ್ತೊಬ್ಬ ಅತ್ಯುತ್ತಮ ಲೇಖಕನ ಬಗ್ಗೆ ಇಷ್ಟು ಕಳಪೆಯಾಗಿ ಮಾತನಾಡಲು ಕಾರಣವಾದರೂ ಏನು ಎಂಬ ಕುತೂಹಲ ತಕ್ಷಣವೇ ಅನಂತಮೂರ್ತಿಯವರ ಲೇಖನವನ್ನು ಓದುವಂತೆ ಮಾಡಿತು. ಈ ಒಂದು ರಿವೆರ್ಸ್ ರೀಡಿಂಗ್, ನನ್ನ ಈ ಎಲ್ಲ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ವೈಯಕ್ತಿಕ ಸಿಟ್ಟು ಎನಿಸುವ ತೇಜಸ್ವಿಯವರ ಬರಹದಲ್ಲಿ ಅನಂತಮೂರ್ತಿಯವರನ್ನು ಸಾಕಷ್ಟು ಟೀಕಿಸಲಾಗಿದೆ. ಇಲ್ಲಿ ಅನಂತಮೂರ್ತಿ ತೇಜಸ್ವಿಯವರ ತಂದೆಯಾದ ಕುವೆಂಪುರವರ ಕೃತಿಗಳನ್ನು ಟೀಕಿಸಿದ್ದಾರೆ ಎಂದೋ, ಅನಂತಮೂರ್ತಿ ಒಬ್ಬ ಬೂಟಾಟಿಕೆಯ ಜಾತ್ಯಾತೀತವಾದಿ ಎಂಬ ಅವರ ಅನಿಸಿಕೆಯೋ ಅಥವಾ ನಿಜಕ್ಕೂ ಅನಂತಮೂರ್ತಿ ಅಷ್ಟು ಜಾಳಾದ ಬರಹ ಬರೆದಿದ್ದಾರೋ ಎಂದು ತಿಳಿಯಲು “ಭಾರತೀಯ ಸಂಸ್ಕೃತಿ ಮತ್ತು ಲೇಖಕ” ಎಂಬ ಲೇಖನ ಓದಿದೆ. ತೇಜಸ್ವಿಯವರು ಹೇಳಿದ ಕೆಲವಾರು ಅಂಶಗಳು ನಿಜವಿದ್ದರೂ, ಅದಕ್ಕಿಂತಲೂ ಹೆಚ್ಚಾದ ವಿಚಾರವಂತ, ಬೌದ್ಧಿಕ ಹೊಳಹುಗಳು ಅನಂತಮೂರ್ತಿಯವರ ಲೇಖನದಲ್ಲೂ ಇವೆ. ಮತ್ತೇನಿಲ್ಲದಿದ್ದರೂ ಯಾವುದೇ ಕಳಪೆ ಟೀಕೆಗಳಿಗೆ ಒಳಗಾಗುವ ಬರಹವಂತೂ ಅಲ್ಲವೇ ಅಲ್ಲ ಅನ್ನಿಸಿತು. ಅನಂತಮೂರ್ತಿಯವರ ಲೇಖನದಲ್ಲಿ ಇತರರ ಬಗೆಗಿನ ಯಾವುದೇ ವಯಕ್ತಿಕ ಅಭಿಪ್ರಾಯಗಳಿಗಿಂತ ಅವರ ಕೃತಿಗಳ ಬಗೆಗಿನ ಪ್ರಾಮಾಣಿಕ ಅನಿಸಿಕೆಗಳಿವೆ ಅನ್ನಿಸಿತು.

ಆ ಪ್ರಾಮಾಣಿಕ ಅನಿಸಿಕೆಗಳು, ಅವರ ವಿಚಾರಗಳ ಬುತ್ತಿ ಸೇರಿ ರುಬ್ಬಿ ತಯಾರಾದ ಗಂಭೀರ ಒಳನೋಟಗಳು ಇದ್ದಂತೆ ಭಾಸವಾಯಿತು. ಒಬ್ಬ ವಿಮರ್ಶಕನಿಗೆ ಬೇಕಾದ್ದು ಮುಖ್ಯವಾಗಿ ಇದೇ ಅಲ್ಲವೇ? ಈ ಮಾತನ್ನು ಹೇಳುವಾಗ ನಾನಿಲ್ಲಿ ಯಾರ ಪಕ್ಷವನ್ನೂ ವಹಿಸುತ್ತಿಲ್ಲ ಎಂಬುದು ಗಮನಿಸಬೇಕಾದ ಅಂಶ. ಆದರೆ, ಅನಂತಮೂರ್ತಿಯಂತಹ ಒಬ್ಬ ಜಾತ್ಯಾತೀತವಾದಿಯೂ ತಮ್ಮ ಬರಹದಲ್ಲಿ ಆ ‘ಅತೀತ’ವನ್ನು ತಿಳಿಸಲು ಸಾಧ್ಯವಾಗಲಿಲ್ಲವೇ? ಅಥವಾ ತೇಜಸ್ವಿಯಂತಹ ಒಬ್ಬ ಉತ್ತಮ ಚಿಂತಕ, ಬರಹಗಾರ ಅನಂತಮೂರ್ತಿಯವರನ್ನು ಹಾಗೆ ನೇರವಾಗಿ ಟಾರ್ಗೆಟ್ ಮಾಡುವುದು ಎಷ್ಟು ಸಮಂಜಸ? ಒಬ್ಬ ಬರಹಗಾರನ ಜವಾಬ್ದಾರಿ, ಒಳನೋಟಗಳು ಕಾಲಾನುಗುಣವಾಗಿ, ಸನ್ನಿವೇಶಗಳಿಗೆ ತಕ್ಕಂತೆ ಇರುತ್ತವೆಯೇ? ಒಂದು ವಿಮರ್ಶೆಯ ಪರಿಭಾಷೆ ಲೇಖಕ, ಓದುಗ ಮತ್ತು ವಿಮರ್ಶಕನಿಗೆ ಎಷ್ಟು ಆಳವಾಗಿ ಮತ್ತು ವಿಸ್ತಾರವಾಗಿ ತಿಳಿದಿರಬೇಕು? ಇವೆಲ್ಲಾ ನಮ್ಮನ್ನು ಒಳಗೊಳ್ಳುವ ಪ್ರಶ್ನೆಗಳು. ನನ್ನ ಅನಿಸಿಕೆಯ ಪ್ರಕಾರ ಒಬ್ಬ ಬರಹಗಾರ ಮತ್ತು ವಿಮರ್ಶಕನ ನಡುವೆ ಒಂದು ಆರೋಗ್ಯಕರವಾದ ಸಂಬಂಧವಿರಬೇಕು. “ಕೊಲ್ವ ಬತ್ತಳಿಕೆ ಬಿಲ್ಲು ಬಾಣವನು ಅಲ್ಲೆ ಇಟ್ಟು ಬಾ… “ಎಂಬಂತಹ ಪ್ರತಿಕೂಲವಾದ ವೈಮನಸ್ಯಗಳು ಉತ್ತಮ ಸಾಹಿತ್ಯದ ಪರವಾದ ನಿಲುವುಗಳಲ್ಲ.

ವಿಮರ್ಶೆ ಎಂಬುದು ಟೀಕೆಯಲ್ಲ ಎಂಬ ಮಾತನ್ನು ಸಾಕಷ್ಟು ಬರಹಗಾರರು ಮತ್ತು ವಿಮರ್ಶಕರು ಸಹ ಅರ್ಥಮಾಡಿಕೊಂಡಿಲ್ಲವೇ ಎಂಬ ಅನುಮಾನ ಉಂಟಾಗುತ್ತದೆ. ಈ ಎಲ್ಲಾ ಪ್ರಶ್ನೆ, ಅನುಮಾನಗಳು ಇನ್ನು ಮುಂದೆ ವಿಮರ್ಶೆ ಮತ್ತು ಅದರ ವ್ಯಾಕರಣಗಳನ್ನು ಭೇದಿಸುವುದಕ್ಕೆ ಸಹಾಯ ಮಾಡಿತು. ಅಷ್ಟೇ ಅಲ್ಲದೆ, ನಮ್ಮ ಹಿರಿಯ ಸಾಹಿತಿಗಳು, ಅವರ ಮಿತಿಗಳು ಮತ್ತು ಇವೆಲ್ಲವುಗಳಿಂದ ಸಾಹಿತ್ಯದ ಇರುವಿಕೆ-ಬೆಳವಣಿಗೆ ಇವುಗಳ ಬಗ್ಗೆ ಅಧ್ಯಯನ ಮಾಡಲು ನಮಗೆ ಒಂದು ಗಂಭೀರ ದೃಷ್ಟಿಕೋನ ದೊರೆಯುತ್ತದೆ. ನನ್ನ ಮುಂದಿನ ಲೇಖನದಲ್ಲಿ ಅನಂತಮೂರ್ತಿಯವರ “ಭಾರತೀಯ ಸಂಸ್ಕೃತಿ ಮತ್ತು ಲೇಖಕ” ಬರಹದ ಬಗೆಗಿನ ನನ್ನ ಅನಿಸಿಕೆಗಳನ್ನು ಬರೆಯುತ್ತೇನೆ.

‍ಲೇಖಕರು avadhi

January 19, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. D.Ravivarma

    ವಿಮರ್ಶೆ ಎಂಬುದು ಟೀಕೆಯಲ್ಲ ಎಂಬ ಮಾತನ್ನು ಸಾಕಷ್ಟು ಬರಹಗಾರರು ಮತ್ತು ವಿಮರ್ಶಕರು ಸಹ ಅರ್ಥಮಾಡಿಕೊಂಡಿಲ್ಲವೇ ಎಂಬ ಅನುಮಾನ ಉಂಟಾಗುತ್ತದೆ. ಈ ಎಲ್ಲಾ ಪ್ರಶ್ನೆ, ಅನುಮಾನಗಳು ಇನ್ನು ಮುಂದೆ ವಿಮರ್ಶೆ ಮತ್ತು ಅದರ ವ್ಯಾಕರಣಗಳನ್ನು ಭೇದಿಸುವುದಕ್ಕೆ ಸಹಾಯ ಮಾಡಿತು. ಅಷ್ಟೇ ಅಲ್ಲದೆ, ನಮ್ಮ ಹಿರಿಯ ಸಾಹಿತಿಗಳು, ಅವರ ಮಿತಿಗಳು ಮತ್ತು ಇವೆಲ್ಲವುಗಳಿಂದ ಸಾಹಿತ್ಯದ ಇರುವಿಕೆ-ಬೆಳವಣಿಗೆ ಇವುಗಳ ಬಗ್ಗೆ ಅಧ್ಯಯನ ಮಾಡಲು ನಮಗೆ ಒಂದು ಗಂಭೀರ ದೃಷ್ಟಿಕೋನ ದೊರೆಯುತ್ತದೆ. ನನ್ನ ಮುಂದಿನ ಲೇಖನದಲ್ಲಿ ಅನಂತಮೂರ್ತಿಯವರ “ಭಾರತೀಯ ಸಂಸ್ಕೃತಿ ಮತ್ತು ಲೇಖಕ” ಬರಹದ ಬಗೆಗಿನ ನನ್ನ ಅನಿಸಿಕೆಗಳನ್ನು ಬರೆಯುತ್ತೇನೆ..ಕನ್ನಡ ಸಾಹಿತ್ಯದಲ್ಲಿ ನಿಜವಾದ ವಿಮರ್ಶೆ ಅಂದರೆ ಹುಡುಕುವುದು ಕಷ್ಟ ಆ ನಿಟ್ಟಿನಲ್ಲಿ ಲಂಕೇಶ್ ಮತ್ತು ಡಿ,ಆರ್ ,ನಾಗರಾಜ್ ಒಂದಿಸ್ತು ಹೊಸ ಹೆಜ್ಜೆ ಹಾಕಿದರು ಹಲವೊಮ್ಮೆ ಅವರ ವಿಮರ್ಶೆಗಳಲ್ಲಿ ಕೂಡ ತಮ್ಮೊಳಗಿನ ಸಿಟ್ಟು ಹೊರಬರುತ್ತಿತ್ತು ..ನಿಮ್ಮ ಲೇಖನ ಕನ್ತೆರುಸುವನ್ತಿದೆ.. ಸಿನಿರಂಗದಲ್ಲಿ ವಿಮರ್ಶೆ ಅದೆಸ್ತು ಕಲ್ಮಶವಾಗಿದೆಯ ಅಸ್ತೆ ಕನ್ನಡ ಸಾಹಿತ್ಯದಲ್ಲೂ ವಿಮರ್ಶೆ ಕಲ್ಮಷವಾಗಿದೆ ಅನ್ನೋದಂತೂ ದಿಟ ಸತ್ಯ…
    .

    ಪ್ರತಿಕ್ರಿಯೆ
  2. Anjali Ramanna

    Dear Sam pu
    ನನಗಂತೂ “ವಿಮರ್ಶೆ” ಎನ್ನುವ ವಿಷಯವೇ ಹಾಸ್ಯಾಸ್ಪದ ಅನ್ನಿಸುತ್ತೆ….ಯಾವುದೂ ವಿಮರ್ಶೆ ಅಲ್ಲ ಎಲ್ಲವೂ ಅಧ್ಯಯನ ಮತ್ತು ಅನುಭವ ಮಾತ್ರ ಮತ್ತು ಲೇಖಕನ ವ್ಯಕ್ತ ಅಷ್ಟೆ. (Sorry for sounding arrogant and straight) . ಹಾಂ, IDIOT ಅನ್ನುವ ಪದ ಮಾತ್ರ ಎಲ್ಲಾ ವಿಧಗಳಲ್ಲಿಯೂ, ಯಾವುದೇ ಸಂದರ್ವಭದಲ್ಲೂ, ಸಕಲ ಸ್ವರೂಪಗಳಲ್ಲೂ ನನ್ನ ever favorite !!! 🙂

    ಪ್ರತಿಕ್ರಿಯೆ
  3. Venkatramana Hegde

    ನಿಮ್ಮ ಲೇಖನ ಓದಿದ ಮೇಲೆ ನನಗೆ ತೇಜಸ್ವಿಯವರ “ಕರ್ನಾಟಕ ಸಂಸ್ಕೃತಿ, ವಿಶ್ಲೇಷಣೆ” ಓದಬೇಕೆನ್ನಿಸಿದೆ ಯಾಕೆ೦ದರೆ ಅನ೦ತ ಮೂರ್ತಿಯವರ ಲೇಖನ ಓದಿದ ನನಗೆ ಅದೊ೦ದು ಉತ್ಕ್ರಷ್ಟ ಕ್ರತಿಯೇ ಅನ್ನುವ ಅಭಿಪ್ರಾಯವಿದೆ

    ಪ್ರತಿಕ್ರಿಯೆ
  4. prasanna lakshmipura

    nanage Tejaswi Anantha moorthy avaranna personal agi baredu idare antha annisolla
    avaru yava yava karanagalige Ananatha moorthy teeke madi idare annuvadanna gaminisa beku
    aa vadagalli tirulu illa endare gamanisha bahudu
    aa ondu eradu amasha ee lekhandalli haki iddare anukoola agutittu

    ಪ್ರತಿಕ್ರಿಯೆ
  5. narendra

    No doubt, URA and tejaswi are the two major writes in the kannada literature! both of them have their own edges!

    ಪ್ರತಿಕ್ರಿಯೆ
  6. ಬಿ. ಆರ್. ಸತ್ಯನಾರಾಯಣ

    ಸಂಪು ಅವರ ಈ ಲೇಖನವನ್ನು ಓದಿದಾಗ, ಏಕೋ ಏನೋ, ಕಾಂಗ್ರೆಸ್ ಪರ ತಿಪಟೂರಿನ ಚುನಾವಣಾ ಪ್ರಚಾರದಲ್ಲಿ ದಿವಂಗತ ಧೀರೇಂದ್ರ ಗೋಪಾಲ್ ಹೇಳಿದ ಒಂದು ಕಥೆ ನೆನಪಾಗುತ್ತಿದೆ. ಆಗಿನ ಜನತಾಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಹುದ್ದೆಗೆ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ರಾಷ್ಟ್ರೀಯ ನಾಯಕರಾಗಿದ್ದ ದಿವಂಗತ ಚಂದ್ರಶೇಖರ್ ಅವರು ಒಂದು ಸಣ್ಣ ಪರೀಕ್ಷೆ ಮಾಡಿ ರಾಮಕೃಷ್ಣ ಹೆಗಡೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರಂತೆ. ಆ ಪರೀಕ್ಷೆ ಏನೆಂದರೆ, ಇಬ್ಬರಿಗೂ ಐದೈದು ಚಕ್ಕುಲಿಗಳನ್ನು ಕೊಟ್ಟು, ಮಾರನೆಯ ದಿನ ತರುವಂತೆ ಸೂಚಿಸಿದರಂತೆ. ಅದರಂತೆ ಮಾರನೆಯ ದೇವೇಗೌಡ ಬಂದು ಅಧ್ಯಕ್ಷರೆ, ಇಷ್ಟು ಒಳ್ಳೆಯ ಚಕ್ಕ್ಕುಲಿ ಕೊಟ್ಟು, ಸುಮ್ಮನೆ ಇಟ್ಟುಕೊಂಡು ವಾಪಸ್ ತನ್ನಿ ಎಂದರೆ ಹೇಗೆ? ನನಗೆ ತಡೆಯಲಾಗಲಿಲ್ಲ ಒಂದಿ ತಿಂದೆ ಎಂದ ಹೇಳಿ, ನಾಲ್ಕನ್ನು ವಾಪಸ್ಸು ಕೊಟ್ದರಂತೆ. ಇತ್ತ ರಾಮಕೃಷ್ಣ ಹೆಗಡೆ ಐದೂ ಚಕ್ಕುಲಿಗಳನ್ನು ತಂದು ವಾಪಸ್ ಕೊಟ್ಟರಂತೆ. ಅದನ್ನು ಪರೀಕ್ಷಿಸಿದ ಚಂದ್ರಶೇಖರ್ ರಾಮಕೃಷ್ಣ ಹೆಗಡೆಯವರನ್ನೇ ಮುಖ್ಯಮಂತ್ರಿ ಮಾಡಿದರಂತೆ! ಹಾಗೇಕೆ ಮಾಡಿದರು ಎಂದವರಿಗೆ ಧೀರೇಂದ್ರ ಗೋಪಾಲ್ ಹೇಳಿದ್ದ ಉತ್ತರ: ಐದೂ ಚಕ್ಕುಲಿಯ ಒಳಭಾಗದ ಒಂದೊಂದು ಸುತ್ತನ್ನು ಮಾತ್ರ ತಿಂದು ಲೆಕ್ಕಕ್ಕೆ ಸರಿಯಾಗಿ ಐದು ಚಕ್ಕುಲಿಯನ್ನು ತಂದಿರುವ ಜಾಣ್ಮೆ ಅವರಿಗೆ ಇಷ್ಟವಾಯಿತು, ಅದಕ್ಕೆ!
    (ಇದೇ ಕಥೆ ಏಕೆ ನೆನಪಾಯಿತು ಎಂದು ಕೇಳುವ ಹಾಗಿಲ್ಲ. ಒಂದು ಕಲಾಕೃತಿ ಒಬ್ಬ ಸಹೃದಯನ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದೇ ಬಗೆಹರಿಯದ ಸಮಸ್ಯೆ. ಈ ಸಮಸ್ಯೆಗೆ ಉತ್ತರ ಗೊತ್ತಿದ್ದರೆ, ಜಗತ್ತಿನಲ್ಲಿ ಶ್ರೇಷ್ಟವಲ್ಲದ ಕಲಾಕೃತಿಯೇ ಇರುತ್ತಿರಲಿಲ್ಲ! ಶ್ರೇಷ್ಟತೆಯ ಬಗ್ಗೆ ಮಾರುದ್ದ ಬರೆದವರದೂ ವಿಫಲ ಕಲಾಕೃತಿಗಳೇ ಆಗಿರುವುದು ಸೃಷ್ಟಿಯ ರಹಸ್ಯ ಹಾಗೂ ವೈಚಿತ್ರ್ಯ)
    ಈ ಎಲ್ಲದಕ್ಕೂ ಮುಂಚೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ:
    1. ಕನ್ನಡ ನವೋದಯ ಸಾಹಿತ್ಯವನ್ನು ಧಿಕ್ಕರಿಸಿ ನವ್ಯ ಸಾಹಿತ್ಯ ಪ್ರವರ್ಧಮಾನಕ್ಕೆ ಬಂದಿದ್ದು ಸುಳ್ಳೆ ಅಥವಾ ನಿಜವೆ?
    2. ನವ್ಯದ ಬರಹಗಾರರು ನವೋದಯ ಸಾಹಿತ್ಯವನ್ನು ಟಾರ್ಗೆಟ್ ಮಾಡಿಕೊಂಡಿದ್ದು ನಿಜವಲ್ಲವೆ? ಆಗ ನವೋದಯದ ಪ್ರಾತಿನಿಧಿಕ ಬರಹಗಳನ್ನಾಗಿ ಕುವೆಂಪು ಅವರನ್ನು ಅವರು ಆರಿಸಿಕೊಂಡಿರಲಿಲ್ಲವೆ?
    3. ಕುವೆಂಪು ಸಾಹಿತ್ಯ ನವ್ಯದವರಿಗೆ ಟಾರ್ಗೆಟ್ ಆಗಿದ್ದಷ್ಟು ಬೇರೆ ನವೋದಯ ಸಾಹಿತಿಗಳ ಸಾಹಿತ್ಯ ಏಕೆ ಟಾರ್ಗೆಟ್ ಆಗಲಿಲ್ಲ?
    4. ಏಕಕಾಲದಲ್ಲಿ ಕುವೆಂಪು ಸನಾತನ ವಿರೋಧಿಯಾಗಿಯೂ, ಸನಾತನವಾದಿಯಾಗಿಯೂ ವಿಮರ್ಶಕರಿಗೆ ಕಂಡಿರುವುದು ಸುಳ್ಳೆ? ಇದರರ್ಥ ಕುವೆಂಪು ಅವರನ್ನು ಗ್ರಹಿಸುವಲ್ಲೇ ಪ್ರೌಢ ವಿಮರ್ಶೆ ಎಡವಿತ್ತು ಎಂದಲ್ಲವೆ?
    5. ಕುವೆಂಪು ಪರ-ವಿರೋಧ ಎಂಬ ಎರಡೇ ಗುಂಪುಗಳಿದ್ದಾಗ, ತೇಜಸ್ವಿ ಈ ಪರ ವಿರೋಧ ಎರಡೂ ಅಲ್ಲದ ನೈಜ ಸಾಹಿತ್ಯಕ ದೃಷ್ಟಿಕೋನವೊಂದನ್ನು ಕಂಡುಕೊಂಡೇ ಅಲ್ಲವೆ ಹೊಸದಿಗಂತದೆಡೆಗೆ ಹೆಜ್ಜೆ ಹಾಕಿದ್ದು?
    6. ಭಾರತೀಯ ಸಂಸ್ಕೃತಿ – ಕರ್ನಾಟಕದ ಸಂಸ್ಕೃತಿಗಳಲ್ಲಿ ಭಿನ್ನತೆ ಇಲ್ಲವೆ?
    7. ಕರ್ನಾಟಕದಲ್ಲೊ ತಮಿಳುನಾಡಿನಲ್ಲೊ ಇರುವನು ಮೊದಲಿಗೆ ಕನ್ನಡಿಗ, ತಮಿಳಿಗ ಆಗಿ; ನಂತರ ಭಾರತೀಯ ಆಗುತ್ತಾನೆ. ಅದೇ ಹೊರದೇಶದಲ್ಲಿರುವವನು ಮೊದಲೇ ಭಾರತೀಯನಾಗಿರುತ್ತಾನೆ. ಇವರಿಬ್ಬರಿಗೂ ಕಾಣುವ ಭಾರತೀಯ ಸಂಸ್ಕೃತಿ ಒಂದೇ ಆಗಿರುತ್ತದೆಯೆ?
    8. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಭಾಷೆ ಮತ್ತು ಸಂಸ್ಕೃತಿಯೊಂದು ರಾಜಕೀಯ ಕಾರಣದಿಂದ ಒಕ್ಕೂಟ ವ್ಯವಸ್ಥೆಗೆ ಸೇರಿದಾಕ್ಷಣ, ಕೋರ್ಟಿನಲ್ಲಿ ಅಫಿಡವಿಟ್ ಹಾಕಿ ಹೆಸರು ಬದಲಿಸಿಕೊಂಡಂತೆ ಬದಲಾಗಲು ಸಾಧ್ಯವೆ? ಬದಲಾಗುವುದು ಸಾಧುವೆ?

    ಪ್ರತಿಕ್ರಿಯೆ
    • ಘಮಲು

      ಈ ಕೆಳಗಿನ ಲೇಖನಗಳಲ್ಲಿ ನಿಮಗೆ ಕೆಲವು ಒಳಸುಳಿ(ವು)ಗಳು ಸಿಗಬಹುದು, ನೋಡಿ :
      ೧) “ಡಿ ಆರ್ ನಾಗರಾಜರ ಆಯ್ದ ಬರಹಗಳು” (ಅಕ್ಷರ ಪ್ರಕಾಶನ) ಪುಸ್ತಕ, ಅದರಲ್ಲಿ ಮುಖ್ಯವಾಗಿ “…ಮುಖ್ಯ ವಾಗ್ವಾದಗಳು..” ಎನ್ನುವ ಲೇಖನ..
      ೨)ಡಾ. ರಹಮತ್ ತರೀಕೆರೆ ಅವರ “ಕೆಲವು ಸಂಸ್ಕೃತಿ ಪರಿಕಲ್ಪನೆಗಳು” ಅನ್ನುವ ಲೇಖನ (ಕಣಜದಲ್ಲಿ ಲಭ್ಯ : http://kanaja.in/archives/71911)

      ಪ್ರತಿಕ್ರಿಯೆ
      • ಬಿ. ಆರ್. ಸತ್ಯನಾರಾಯಣ

        ಧನ್ಯವಾದಗಳು….
        ಆದರೆ ನೀವು ತುಂಬಾ ಹಿಂದಿದ್ದೀರಿ!

        ಪ್ರತಿಕ್ರಿಯೆ
    • M.A.Sriranga

      ಬಿ ಆರ್ ಸತ್ಯನಾರಾಯಣ ಅವರಿಗೆ — ತಾವು ಸಂಪು ಅವರ ಲೇಖನದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಕುರಿತಂತೆ
      ಅಂಶ ೧,೨ ಮತ್ತು ೩ರ ಬಗ್ಗೆ– ಕನ್ನಡ ನವ್ಯ ಸಾಹಿತ್ಯ ನವೋದಯ ಸಾಹಿತ್ಯವನ್ನು ಧಿಕ್ಕರಿಸಿ ಬಂತು ಎಂಬ ಅನಿಸಿಕೆ ಸರಿಯಿಲ್ಲ. ಗೋಕಾಕರು, ಅಡಿಗರು ಏಕ್ ದಂ ನವ್ಯ ಕಾವ್ಯ ರಚಿಸಲಿಲ್ಲ. ತಮ್ಮ ಅಭಿವ್ಯಕ್ತಿಗೆ ಒಂದು ಹೊಸ form ಬೇಕೆಂದು ನವ್ಯ ಕಾವ್ಯದೆಡೆಗೆ ತಿರುಗಿದವರು. ಅವರ ಮೂಲವೂ ನವೋದಯ ಸಾಹಿತ್ಯವೇ. ನವ್ಯದ ಬರಹಗಾರರು ಕೇವಲ ಕುವೆಂಪು ಅವರನ್ನು ಟಾರ್ಗೆಟ್ ಮಾಡಿಕೊಂಡವರಲ್ಲ. ಕೆ ಎಸ್ ನರಸಿಂಹಸ್ವಾಮಿಯವರೂ ಸೇರಿದಂತೆ ಆ ಕಾಲದ ಎಲ್ಲ ಪ್ರಮುಖ ನವೋದಯ ಕವಿಗಳ ಕಾವ್ಯವನ್ನೂ ಬಿಟ್ಟು ಬೇರೆಡೆ ಹುಡುಕಾಟ ನಡೆಸಿದವರು. ಕೆ ಎಸ್ ನ ಅವರನ್ನು ಕೇವಲ ದಾಂಪತ್ಯ ಗೀತೆಗಳ ಕವಿ ಎಂದು ನಿರ್ಲಕ್ಷಿಸಿದ್ದರು. ಅವರ ‘ತೆರೆದ ಬಾಗಿಲು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಮೇಲೆ ಅದಕ್ಕಿಂತ ಹಿಂದಿನ ಕೆ ಎಸ್ ನ ಅವರ ‘ಶಿಲಾಲತೆ’ಕವನ ಸಂಕಲನದಲ್ಲಿ ನವ್ಯ ಕಾವ್ಯದ ಹೊಳಹುಗಳು ವಿಮರ್ಶಕರಿಗೆ ಕಂಡಿದ್ದು.
      ೪. ಸಿಪಿಕೆ ಅವರು ಕುವೆಂಪು ಅವರ ಮಾತುಗಳನ್ನು ಸಂಗ್ರಹಿಸಿ ಪ್ರಕಟಿಸಿರುವ ‘ಮಹಾಕವಿಯೊಡನೆ ಮಾತುಕತೆ’ ಎಂಬ ಕಿರು ಪುಸ್ತಕವನ್ನು ತಾವು ಓದಿರಬಹುದು. ತಮ್ಮ ಪ್ರಶ್ನೆಗೆ ಉತ್ತರ ಅಲ್ಲಿ ಸಿಗಬಹುದು.
      ೫. ಇದಕ್ಕೆ ಕೆಲವು “ಸಾಹಿತ್ಯೇತರ ಕಾರಣಗಳೂ” ಇದೆ. “ಆ ಕಾಲದಲ್ಲಿದ್ದ” ಪರಿಸ್ಥಿತಿಯಲ್ಲಿ ಇದಕ್ಕೆ ಉತ್ತರವಿರಬಹುದು.
      ೬ ಮತ್ತು ೭ ಕರ್ನಾಟಕ-ಭಾರತದ ಸಂಸ್ಕೃತಿಗಳಲ್ಲಿ ಭಿನ್ನತೆಯಿದೆ. ಆದರೆ ಕನ್ನಡಿಗರು ತಮಿಳುನಾಡಿನಲ್ಲಿರಲಿ ಅಥವಾ ವಿದೇಶಗಳಲ್ಲಿರಲಿ ಭಾಷೆ ಮತ್ತು ಕೆಲವೊಮ್ಮೆ ಜಾತಿಗಳ ಕಾರಣದಿಂದ ಅಲ್ಲೇ ಅವರುಗಳ ಒಂದು ಧ್ರುವೀಕರಣವೂ ಆಗುತ್ತಿರುತ್ತದೆ. ಇದು ಇತರ ರಾಜ್ಯಗಳ ಸಂಸ್ಕೃತಿಗಳ ಜನರಿಗೂ ಅನ್ವಯಿಸುತ್ತದೆ. ಇದಕ್ಕೆ ನಮ್ಮ ಬೆಂಗಳೂರೇ ಸಾಕ್ಷಿ.
      .

      ಪ್ರತಿಕ್ರಿಯೆ
  7. Roopa Satish

    Hi Sampu,
    Every point and view of yours is valid here…
    “ಬರಹಗಾರನ ಜವಾಬ್ದಾರಿ”!!!.. when egos play a major role, responsibilities are forgotten!! Pratishte / TeekegaLe doddadaagi hogutte!!
    Well, am eagerly awaiting for your next post!
    Good Day 🙂

    ಪ್ರತಿಕ್ರಿಯೆ
  8. Anil Talikoti

    ಅತ್ಯಂತ ಶಕ್ತಿಶಾಲಿಯಾದ, ಪ್ರಬುದ್ಧ ಲೇಖನವಿದು – ನನಗೇನೋ ಯಾವದೇ ವಿಮರ್ಶಕ ಎಷ್ಟೇ ವೃತ್ತಿ ನಿಷ್ಟನಾಗಿದ್ದರೂ ಕೂಡಾ ‘ಲೇಖಕ’ ನ ಪ್ರಭಾವಳಿಯಿಂದ ಸಂಪೂರ್ಣವಾಗಿ ಹೊರ ಬರಲಾರ ಎನಿಸುತ್ತದೆ. ನಿಮ್ಮಿಂದ ಇಂತಹ ಗಂಭೀರ ಲೇಖನಗಳು ಇನ್ನಷ್ಟು ಬರಲಿ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: