ತೇಜಸ್ವಿಯನ್ನು ಹುಡುಕುತ್ತಾ – ’ಟೆಕ್ಸ್ಟ್ ಬುಕ್ ಓದಿ, ಟ್ಯಾಲೆಂಟ್ ವೇಸ್ಟ್ ಮಾಡ್ಕೋಬೇಡ್ರಿ!’

(ಇಲ್ಲಿಯವರೆಗೆ…)

ಮಗು ಮನಸಿನ ಜಿ.ಹೆಚ್ ನಾಯಕರು ತಾವು ನಂಬಿದ ಆದರ್ಶಗಳು, ತತ್ವ ಸಿದ್ದಾಂತಗಳನ್ನು ಬಿಟ್ಟುಕೊಟ್ಟು ’ಜೀ ಹುಜೂರ್’ ಪಾಲಿಸಿಯನ್ನು ಪಾಲಿಸದ ಕಾರಣಕ್ಕೆ ತಮ್ಮ ಅಧ್ಯಾಪಕ ವೃತ್ತಿಯಲ್ಲಿ ಸಾಕಷ್ಟು ಕಷ್ಟಕೋಟಲೆಗಳಿಗೆ, ಕಿರುಕುಳಗಳಿಗೆ ಒಳಗಾಗಿ ಮಾನಸಿಕವಾಗಿ ತೊಳಲಾಟದಲ್ಲಿ ಇದ್ದಂತ ಕಾಲದಲ್ಲಿ ತೇಜಸ್ವಿ ಇವರ ಬೆಂಬಲಕ್ಕೆ ನಿಂತ ವಿವರಗಳನ್ನು ನಾಯಕರು ನಮ್ಮೊಂದಿಗೆ ಹಂಚಿಕೊಳ್ಳತೊಡಗಿದರು.

ನವ್ಯಕಾವ್ಯದ ಅನುಯಾಯಿ, ಜೊತೆಗೆ ಕುವೆಂಪು ವಿರೋಧಿ ಎಂಬ ಹಣೆಪಟ್ಟಿ ಹಲವರ ವ್ಯವಸ್ಥಿತ ಪಿತೂರಿಯಿಂದಾಗಿ ಜಿ.ಹೆಚ್ ನಾಯಕರಿಗೆ ಬಿಡಿಸಿಕೊಳ್ಳಲಾಗದಂತೆ ಅಂಟಿಕೊಂಡಿತ್ತಂತೆ ಆಗ. ಈ ಹಣೆಪಟ್ಟಿಯ ಕಾರಣದಿಂದಾಗಿ ಇವರ ಪಿ ಹೆಚ್ ಡಿ ಅಧ್ಯಯನದಲ್ಲಿ ದೊಡ್ಡವರು, ಹಿರಿಯರು ಅನ್ನಿಸಿಕೊಂಡಿದ್ದವರೇ ಸಾಧ್ಯವಾದಷ್ಟೂ ಕಿರುಕುಳ ನೀಡಿ ಪಿ ಹೆಚ್ ಡಿ ಪಡೆಯಲು ಸಾಧ್ಯವಾಗದ ಹಾಗೆ ಮಾಡಿದ್ದರಿಂದ ಇವರಿಗೆ ಒಟ್ಟಾರೆ ಯೂನಿವರ್ಸಿಟಿಯ ಒಳರಾಜಕೀಯಗಳು, ಅಲ್ಲಿನ ಬಹುಪರಾಕ್ ಸಂಸ್ಕೃತಿ (ನೇರವಾಗಿ ಬಕೆಟ್ ಹಿಡಿಯುವ ಸಂಸ್ಕೃತಿ ಅನ್ನಬಹುದೇನೊ) ಮುಖಸ್ತುತಿ, ಇವುಗಳೆಲ್ಲದರಿಂದ ನೋವುಂಟಾಗಿ ಅಧ್ಯಾಪನ ವೃತ್ತಿಯನ್ನೇ ಬಿಟ್ಟು ಬೇರೆ ಏನಾದರೂ ವೃತ್ತಿ ಕೈಗೊಳ್ಳಬೇಕು ಎಂಬ ಯೋಚನೆಯಲ್ಲಿದ್ದರಂತೆ. ನಂತರ ಬೇರೆ ದಾರಿ ಕಾಣದೆ ಬೆಳಗಿನ ಹೊತ್ತು ಲಾ ಕಾಲೇಜಿನಲ್ಲಿ ಲಾ ಡಿಗ್ರಿ ಅಭ್ಯಾಸ ಮಾಡುತ್ತಿದ್ದರಂತೆ.

ಅಷ್ಟೊತ್ತಿಗಾಗಲೇ ತೇಜಸ್ವಿ ಮೈಸೂರು ಬಿಟ್ಟು ದೂರದ ಮೂಡಿಗೆರೆಗೆ ಕಾಫಿ ತೋಟ ಮಾಡಲು ಹೋಗಿ ಆಗಿತ್ತು. ಇದನ್ನೆಲ್ಲಾ ಕೇಳಿದ ತೇಜಸ್ವಿಯವರಿಗೂ ಬೇಸರ ಮೂಡಿ ಅವರು ಈ ರೀತಿ ಕ್ಷುಲ್ಲಕ ರಾಜಕೀಯ ಮಾಡುತ್ತಿರುವವರನ್ನು ಬಾಯಿಗೆ ಬಂದ ಹಾಗೆ ಬೈದು “ರೀ ನಾಯಕರೆ ಈ ದರಿದ್ರ ಜನಗಳ ಸಹವಾಸವೇ ಬೇಡ ಕಣ್ರಿ. ಕಾಫಿ ತೋಟಕ್ಕೆ ಅರ್ಜಿ ಹಾಕಿ. ಇಪ್ಪತ್ತು ಎಕರೆವರೆಗೂ ಕೊಡ್ತಾರೆ. (ಆಗ ಸರ್ಕಾರ ಉತ್ತರಕನ್ನಡ ಜಿಲ್ಲೆಯ ಹಳಿಯಾಳ, ಸೂಪ, ಯಲ್ಲಾಪುರ ಮುಂತಾದ ಪ್ರದೇಶಗಳು ಕಾಫಿಗೆ ಸೂಕ್ತ ಎಂದು ಗುರುತಿಸಿ ಈ ಪ್ರದೇಶದಲ್ಲಿ ಕಾಫಿ ತೋಟ ಮಾಡುವವರಿದ್ದರೆ ಅರ್ಜಿ ಕೊಡಬಹುದೆಂದು ಪ್ರಕಟಣೆ ಕೊಟ್ಟಿತ್ತಂತೆ). ಬೇಕಾದಷ್ಟಾಯ್ತು. ತೋಟ ಡೆವಲಪ್ ಮಾಡೋದಕ್ಕೆ ಒಂದೆರಡು ವರ್ಷ ಬೇಕಾಗುತ್ತೆ. ನನಗೆ ಈಗ ಕಾಫಿ ತೋಟ ಮಾಡಿದ ಅನುಭವ ಬೇಕಾದಷ್ಟಿದೆ. ಕೆಲಸದವರನ್ನ ಬೇಕಾದ್ರೆ ನಾನೇ ಕಳಿಸ್ತೀನಿ. ಏನೂ ಯೋಚನೆ ಮಾಡ್ಬೇಡಿ. ಮೊದಲು ಈ ಕೊಳೆತು ನಾರುತ್ತಿರೊ ವ್ಯವಸ್ಥೆಯಿಂದ ಹೊರಗೆ ಬನ್ನಿ” ಎಂಬ ಉತ್ತೇಜಕ ಮಾತುಗಳನ್ನಾಡಿದರಂತೆ.

ನಾಯಕರು ಕಾಫಿ ತೋಟ ಮಾಡುವ ತೇಜಸ್ವಿಯವರ ಆಹ್ವಾನಕ್ಕೆ ಪ್ರತಿಕ್ರಿಯಿಸದ್ದಿದ್ದಾಗ ತೇಜಸ್ವಿ ಅವರ ಮನಸ್ಸಿನ ತೊಳಲಾಟವನ್ನು ಅರ್ಥ ಮಾಡಿಕೊಂಡವರಂತೆ, “ಓದು, ಬರವಣಿಗೆಗೆ ಏನೂ ತೊಂದರೆ ಆಗೋದಿಲ್ರಿ. ನನ್ನೇ ನೋಡಿ ದಿನಕ್ಕೆ ನಾಲ್ಕು ಗಂಟೆ ಓದು ಬರಹ ಮಾಡ್ತಿದ್ದೀನಿ. ಹೋಗ್ತಾ ಹೋಗ್ತಾ ಇನ್ನೂ ಹೆಚ್ಚು ಹೊತ್ತು ಬಿಡುವು ಮಾಡ್ಕೊಳ್ತಾ ಹೋಗಬಹುದು. ನನಗೇನು ಇಷ್ಟ ಆಗುತ್ತೊ ಅದನ್ನ ಓದ್ತೀನಿ, ಬರೀತಿನಿ. ಸುಮ್ಮನೆ ಹಾಳು ಮೂಳು ಎಲ್ಲಾ ಓದ್ಬೇಕಾಗಿಲ್ಲ. ಅಧ್ಯಾಪಕರಾಗಿದ್ದ ಮಾತ್ರಕ್ಕೆ ನನಗಿಂತ ಹೆಚ್ಚು ಓದ್ತೀರಿ, ಬರೀತೀರಿ ಅನ್ನೊದೆಲ್ಲಾ ಸುಳ್ಳು. ಸುಮ್ಮನೆ ಯಾವುಯಾವ್ದೊ ಹಾಳುಮೂಳು ರದ್ದಿಟೆಕ್ಸ್ಟ್ ಬುಕ್ಕುಗಳನ್ನ ಬೆಳಿಗ್ಗೆಯಿಂದ ಸಂಜೆವರೆಗೂ ಪಾಠ ಮಾಡೋದಕ್ಕೆ, ಆಮೇಲೆ ನಾಳೆ ಹೋಗಿ ಮತ್ತೆ ಕ್ಲಾಸ್ ರೂಮಿನಲ್ಲಿ ಪಾಠ ಮಾಡೋದಿಕ್ಕೆ ತಯಾರಿ ಮಾಡ್ಕೊಳ್ಳೊದ್ರಲ್ಲೇ ಟೈಮ್ ಕಳೆದುಹೋಗಿಬಿಡುತ್ತೆ. ಅದ್ರಿಂದ ಸುಮ್ನೆ ನಿಮಗೂ ಪ್ರಯೋಜನ ಇಲ್ಲ, ಹುಡುಗರಿಗೂ ಪ್ರಯೋಜನ ಇಲ್ಲ. ನಡೀರಿ ಕಾಫಿ ತೋಟ ಮಾಡೊರಂತೆ…” ಎಂದು ಜಿ.ಹೆಚ್ ನಾಯಕರನ್ನು ಕಾಫಿ ತೋಟ ಮಾಡಲು ಒಪ್ಪಿಸಿದ್ದರಂತೆ ತೇಜಸ್ವಿ.

ಆ ಪ್ರಕಾರ ಇವರು ತೋಟಕ್ಕೆ ಅರ್ಜಿ ಸಹ ಹಾಕಿದ್ದರಂತೆ. ಆದರೆ ಏನೋ ತಾಂತ್ರಿಕ ಕಾರಣಗಳಿಂದಾಗಿ ಇವರಿಗೆ ತೋಟ ಮಾಡಲು ಜಾಗ ಸಿಗಲಿಲ್ಲವಂತೆ. ಹಾಗಾಗಿ ತೇಜಸ್ವಿಯವರಂತೆ ಕಾಫಿ ತೋಟ ಮಾಡುವ ಕನಸು ಅಲ್ಲಿಗೇ ಕೊನೆಯಾಯಿತಂತೆ. ಇಷ್ಟು ಹೇಳುವಷ್ಟರಲ್ಲಿ ಜಿ.ಹೆಚ್ ನಾಯಕರ ಕಣ್ಣುಗಳು ಭಾವೋದ್ವೇಗದಿಂದ ತುಂಬಿಬಂದಿದ್ದವು. ಅವರು ಕನ್ನಡಕ ತೆಗೆದು ಕಣ್ಣೀರು ಒರೆಸಿಕೊಂಡು ಮಾತು ಮುಂದುವರೆಸಿದರು, “ಇಡೀ ಜಗತ್ತೇ ನನ್ನನ್ನ ಕುವೆಂಪು ವಿರೋಧಿ ಅಂತ ಟೀಕಿಸುತ್ತಿದ್ದರೂ ನನಗೆ ತುಂಬಾ ಇಷ್ಟವಾಗಿದ್ದ ಸಾಹಿತ್ಯದ ಓದು, ವಿಮರ್ಶೆಯ ಕೆಲಸಕ್ಕೆ ಸಹಾಯ ಆಗಲಿ ಅಂತ ಬದುಕಿಗೆ ಪರ್ಯಾಯವಾದ ಒಂದು ದಾರಿ ಹುಡುಕಿಕೊಡೋದಿಕ್ಕೆ ತೇಜಸ್ವಿ ಆಸಕ್ತಿವಹಿಸಿದ್ದರಲ್ಲ ಅದನ್ನ ನೆನೆಸ್ಕೊಂಡಾಗಲೆಲ್ಲ ಅವರ ಪರಿಶುದ್ಧವಾದ ಸ್ನೇಹಕ್ಕೆ, ಕಾಳಜಿಗೆ ನಾನು ಭಾವುಕನಾಗಿಬಿಡ್ತೇನೆ.

ಅಂತ ಸ್ನೇಹಕ್ಕೆ, ಮಮತೆಗೆ ನಾನು ಅರ್ಹನ? ಅಂತ ಬಹಳ ಸಲ ಯೋಚನೆ ಮಾಡಿದ್ದೀನಿ. ಇದರ ಜೊತೆಗೆ ನಾನು ಆಗಲೇ ಹೇಳಿದ ಹಾಗೆ ಅವರ ದೊಡ್ಡಮಗಳು ಸುಸ್ಮಿತಳನ್ನ ನಮ್ಮ ಮನೇಲಿ ಓದೋಕೆ ಬಿಟ್ಟು ಕುವೆಂಪು ವಿರೋಧಿ ಅಂತಿದ್ದವರಿಗೆಲ್ಲಾ ಇನ್ಡೈರೆಕ್ಟಾಗಿ ಉತ್ತರ ಕೊಟ್ರಲ್ಲ ಅಂಥ ದೊಡ್ಡ ವ್ಯಕ್ತಿ ಬಗ್ಗೆ ನಾನೇನು ಹೇಳಲಿ?…” ನಾಯಕರ ಕಣ್ಣುಗಳು ಮತ್ತೆ ಮತ್ತೆ ತೇವವಾಗುತ್ತಿದ್ದವು. ಜೊತೆಗೆ ಗಂಟಲುಕಟ್ಟಿದಂತಾಗಿ ಮಾತು ತಡವರಿಸಲಾರಂಭಿಸಿತು.

ಕೆಲ ನಿಮಿಷಗಳ ನಂತರ ಸಾವರಿಸಿಕೊಂಡು ಅವರು ಮತ್ತೆ ಮಾತು ಪ್ರಾರಂಭಿಸಿದರು, “ಇಷ್ಟೆಲ್ಲ ಮಾಡಿದ್ರೂ ತೇಜಸ್ವಿ ’ತಾನೇನೊ ಮಾಡಿದೆ’ ಅಂತ ಯಾರ ಹತ್ರಾನೂ ಹೇಳ್ಕೊಂಡಿಲ್ಲ. ಮಾಡಿದನ್ನ ಹೇಳ್ಕೊಳ್ಳೊ ಸ್ವಭಾವ ಇರಲಿಲ್ಲ ಅವರಿಗೆ. ಇನ್ನೂ ಒಂದು ಮುಖ್ಯವಾದ ವಿಷಯ, ಈ ಸಂದರ್ಭದಲ್ಲಿ ಹೇಳಲೇಬೇಕು, ತೇಜಸ್ವಿ ಅಷ್ಟು ದೊಡ್ದವರ ಮಗನಾಗಿದ್ರೂ ’ಇಂಥವರ ಮಗ ನಾನು’ ಅಂತ ಎಲ್ಲೂ ತನ್ನನ್ನ ತಾನು ಪ್ರೊಜೆಕ್ಟ್ ಮಾಡ್ಕೊಂಡಿಲ್ಲ. ತಾನಾಗೆ ತನ್ನ ಯೋಗ್ಯತೆಯಿಂದ, ತನ್ನ ಶಕ್ತಿಯಿಂದ, ಸಂಕಲ್ಪ ಬಲದಿಂದ ಬೆಳೆದ ಪ್ರತಿಭಾವಂತ ಅವರು. “ಪಂಪ ಪ್ರಶಸ್ತಿ ನನಗೆ ಬೇಡ, ಬೇರೆ ಯಾರಿಗಾದ್ರು ಕೊಡ್ರಿ!”ಆಮೇಲೆ ಯಾವ ಪ್ರಶಸ್ತಿಗೂ ತಲೆಕೆಡಿಸ್ಕೊಳ್ತಿರ್ಲಿಲ್ಲ. ನನಗೆ ಚೆನ್ನಾಗಿ ನೆನಪಿದೆ, ಒಂದ್ಸಾರ್ತಿ ಇಬ್ಬರು ಸ್ನೇಹಿತರು ನನ್ನ ಹತ್ತಿರ ಬಂದು “ನಾಯಕರೆ ನೋಡಿ ತೇಜಸ್ವಿ ಒಪ್ಪಿದ್ರೆ ಈ ಸಾರಿ ಅವರನ್ನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡ್ಬೇಕು ಅಂತಿದ್ದೀವಿ. ಆದರೆ ಅವರಿಗೆ ಹೇಳೋರ್ಯಾರು? ಅದಕ್ಕೆ ನಿಮ್ಮ ಹತ್ತಿರ ಹೇಳಿಸಬಹುದು ಅಂತ ನಿಮ್ಮ ಹತ್ತಿರ ಬಂದಿದ್ದೀವಿ. ನೀವು ಅವರಿಗೆ ಒಂದು ಮಾತು ಹೇಳಿ” ಅಂದ್ರು. ನಾನು ಹೇಳಿದೆ, “ನಾನು ಅಷ್ಟು ದೊಡ್ಡವನಲ್ಲ. ಅವರಿಗೆ ಹೇಳೋವಷ್ಟು ಯೋಗ್ಯತೆ ನನಗಿಲ್ಲ. ತೇಜಸ್ವಿಯ ತೀರ್ಮಾನ ಅವರೇ ಕೈಗೊಳ್ತಾರೆ. ಅವರ ಮೇಲೆ ಒತ್ತಡ ಹಾಕುವ, ವಶೀಲಿ ಮಾಡುವ ಯೋಗ್ಯತೆ, ಅರ್ಹತೆಗಳು ನನಗಿಲ್ಲ. ನಾನು ಹೇಳೋಲ್ಲ” ಅಂದೆ. ಕೊನೆಗೆ ಯಾರೂ ಅವರಿಗೆ ಅವರನ್ನ ಹೋಗಿ ಕೇಳೊ ಧೈರ್ಯಾನೇ ಮಾಡ್ಲಿಲ್ಲ. ಹೆಸರು ಬೇಕಿದ್ರೆ ಹೇಳ್ತೀನಿ, ಹಿ.ಶಿ ರಾಮಚಂದ್ರೇಗೌಡರು ನನ್ನ ಸ್ನೇಹಿತರು. ಅವರೇ ಬಂದು ಕೇಳಿದ್ರು ನೀವು ಹೇಳಿದ್ರೆ ಒಪ್ಪಬಹುದು ಹೇಳಿ ಅಂತ. ನಾನು ಹೇಳೊಲ್ಲ ಅಂದೆ. ಯಾಕಂದ್ರೆ ಆ ವ್ಯಕ್ತಿತ್ವ ಅಂಥದ್ದು. ನಿಜವಾದ ದೊಡ್ಡವರು ಅವರು. ತೋರಿಕೆಗಲ್ಲ” ಜಿ.ಹೆಚ್ ನಾಯಕರ ನೆನಪುಗಳು ಒಂದರ ಹಿಂದೆ ಒಂದು ಭೋರ್ಗರೆದು ಹರಿಯುತ್ತಿದ್ದವು.

ಈ ಹಂತದಲ್ಲಿ ಹತ್ತು ನಿಮಿಷಗಳ ಕಾಲ ವಿರಾಮ ತೆಗೆದುಕೊಂಡೆವು. ಒಂದೇ ಭಂಗಿಯಲ್ಲಿ ಕೂತು ಕೂತು ದೇಹದ ಅಂಗಾಗಗಳೆಲ್ಲ ಸೆಟೆದುಕೊಂಡಂತಾಗಿದ್ದ ನಮ್ಮ ಹುಡುಗರು ಎದ್ದು ಹೊರಬಂದು ಕೈಕಾಲು ಜಾಡಿಸಿ, ಮೈಮುರಿದು ಹೊಸ ಚೈತನ್ಯದೊಂದಿಗೆ ವಾಪಸ್ ಬಂದರು. ಆಷ್ಟರಲ್ಲಿ ನಾಯಕರ ಶ್ರೀಮತಿಯವರು ಮತ್ತೊಂದು ರೌಂಡು ಕಾಫಿ ತಂದುಕೊಟ್ಟರು. ನಿಧಾನವಾಗಿ ಕಾಫಿ ಹೀರಿ ಮುಗಿಸಿ ಮತ್ತೆ ಚಿತ್ರೀಕರಣ ಪ್ರಾರಂಭಿಸಿದೆವು. ನಾಯಕರು ಆ ಸಂದರ್ಭದಲ್ಲಿ ನಮ್ಮೊಂದಿಗೆ ಬೇರೆ ಬೇರೆ ಇತರೆ ವಿಚಾರಗಳಿಗೆ ಮಾತನಾಡುತ್ತಿದ್ದರೂ ಮನಸ್ಸು ತೇಜಸ್ವಿ ಕುರಿತ ಹಳೆಯ ನೆನಪುಗಳಲ್ಲೇ ವಿಹರಿಸುತ್ತಿದ್ದದದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. “ತೇಜಸ್ವಿಯವರ ಪ್ರಶಸ್ತಿ, ಪುರಸ್ಕಾರಗಳ ನಿರ್ವ್ಯಾಮೋಹದ ಬಗ್ಗೆ ವಿವರವಾಗಿ ಹೇಳಲು ಸಾಧ್ಯವೇ?” ಎಂದು ನಾನು ಕೇಳಿದ ಪ್ರಶ್ನೆಗೆ ಯೋಚಿಸುವ ಗೊಡವೆಯೇ ಇಲ್ಲದೆ ಅವರು ಉತ್ತರಿಸಲು ಪ್ರಾರಂಭಿಸಿದರು, “೨೦೦೦ನೇ ಇಸವಿ. ಆ ವರ್ಷ ನಾನು ಪಂಪ ಪ್ರಶಸ್ತಿ ಆಯ್ಕೆ ಸಮಿತಿಗೆ ಅಧ್ಯಕ್ಷನಾಗಿದ್ದೆ. ಆಗ ಯಾರಿಗೆ ಪ್ರಶಸ್ತಿ ಕೊಡಬೇಕು ಅನ್ನೊ ಚರ್ಚೆ ಬಂದಾಗ ಸರ್ವಾನುಮತದಿಂದ ’ತೇಜಸ್ವಿಗೆ’ ಅಂತ ನಿರ್ಧಾರ ಆಯ್ತು. ಅದರಲ್ಲಿ ನನ್ನ ವೈಯುಕ್ತಿಕ ಹಿತಾಸಕ್ತಿಗಳಾಗಲೀ, ತೇಜಸ್ವಿ ನನ್ನ ಗೆಳೆಯ ಅನ್ನೊ ಪೂರ್ವಾಗ್ರಹಗಳಾಗಲೀ ಯಾವುದೂ ಇರಲಿಲ್ಲ. ಅಲ್ಲಿದ್ದ ಎಲ್ಲರಿಗೂ ಗೊತ್ತಿದೆ ನಾನು ಯಾವ ಮೆಥಡ್ ಅನುಸರಿಸಿ ಆಯ್ಕೆ ಮಾಡಿದ್ದೆ ಅಂತ. ತುಂಬಾ Transparent ಪ್ರಕ್ರಿಯೆ ಆಗಿತ್ತು ಅದು. ಆ ಕಮಿಟಿನಲ್ಲಿ ಕಾ.ತ.ಚಿಕ್ಕಣ್ಣ ಮುಂತಾದವರೆಲ್ಲ ಇದ್ದರು. ಕೊನೆಗೆ ಸರ್ವಾನುಮತದಿಂದ ತೇಜಸ್ವಿಗೆ ಈ ಸಾಲಿನ ಪಂಪ ಪ್ರಶಸ್ತಿ ಅಂತ ತೀರ್ಮಾನ ಮಾಡಿದ್ವಿ. ಆಗ ರಾಮಮೂರ್ತಿ ಅಂತ ಒಬ್ರಿದ್ರು. ಅವರಿಗೆ ತುಂಬಾ ಖುಷಿ ಆಗ್ಬಿಡ್ತು ತೇಜಸ್ವಿಗೆ ಪ್ರಶಸ್ತಿ ಬಂದಿದ್ದು. ಅವರು ನನಗೆ ಗೊತ್ತಿಲ್ದೆ ತಕ್ಷಣ ತೇಜಸ್ವಿಗೆ ಫೋನ್ ಮಾಡಿ ವಿಷಯ ತಿಳಿಸಿದ್ರು. ನೀವು ನಂಬೊಲ್ಲ, ತೇಜಸ್ವಿ ಹೇಳಿದ್ದು ಒಂದೇ ಮಾತು “ನನಗೆ ಬೇಡ ಕಣ್ರಿ….ಬೇರೆ ಯಾರಿಗಾದ್ರು ಕೊಡಿ!!!” ಅಂತ. ಆಮೇಲೆ ನಾನು ಹೊರಗೆ ಬಂದನಲ್ಲ ರಾಮಮೂರ್ತಿ ’ತಡೀರಿ ನಾಯಕರ ಕೈಗೆ ಕೊಡ್ತೀನಿ” ಅಂತ ಹೇಳಿ ಫೋನ್ ನನಗೆ ಕೊಟ್ರು.

ನಾನು “ನಾನೇನ್ ಮಾತಾಡ್ಲಿ? ನೀವು ಹೇಳಿದ್ದು ಆಗಿದ್ಯಲ್ಲ?” ಅಂದ್ರು ಬಿಡದೇ “ಮಾತಾಡಿ ಮಾತಾಡಿ” ಅಂತ ಫೋನ್ ಕೊಟ್ಟೆ ಬಿಟ್ರು. ನಾನು ತೇಜಸ್ವಿಗೆ, “ತೇಜಸ್ವಿ, ನೋಡಿ ಯಾವುದೇ ಪೂರ್ವಾಗ್ರಹಗಳಿಲ್ಲದೆ, ತುಂಬಾ ನೇರವಾಗಿ, ಮುಕ್ತವಾಗಿ ನಿಮ್ಮ ಹೆಸರು ಆಯ್ಕೆ ಆಗಿದೆ. ನೀವು ಒಪ್ಕೊಳಿ” ಅಂದೆ. ಅವರು ಮತ್ತೆ ಅದೇ ಮಾತು ಹೇಳಿದ್ರು “ಬೇಡ ಕಣ್ರಿ ನಾಯಕರೆ. ಬೇರೆ ಯಾರಿಗಾದ್ರು ಕೊಡ್ರಿ. ನನಗೆ ಬಿಲ್ ಕುಲ್ ಬೇಡ್ವೇ ಬೇಡ!!!” ಅಂದ್ರು. ನನಗೆ ಏನು ಹೇಳ್ಬೇಕು ಗೊತ್ತಾಗಲಿಲ್ಲ. ನನಗೆ ಏನಿದು ತೇಜಸ್ವಿ ಅಂದ್ರೆ? ಅಲ್ಲ ಇದೆಂಥ ತೇಜಸ್ವಿ ಇದು? ನನಗೆ ನಂಬೋಕೆ ಆಗಲಿಲ್ಲ. ಅಲ್ಲ ನೀವು ಹೇಳಿ ಸುಲಭಾನ ಅದು ಹುಡುಕ್ಕೊಂಡು ಬಂದ ಗೌರವಾನ ಬೇಡ ಅನ್ನೋದು? ಆದರೆ ಆ ವ್ಯಕ್ತಿತ್ವಕ್ಕೆ ಸಾಧ್ಯ” ನಾಯಕರ ಮತ್ತಷ್ಟು ಭಾವುಕರಾದರು. ಈ ಸಾರಿ ಅವರಿಗೆ ಒತ್ತಿಬರುತ್ತಿದ್ದ ಕಣ್ಣೀರು ತಡೆಯಲಾಗಲೇ ಇಲ್ಲ. ನಮ್ಮ ಮುಂದೆಯೇ ಮಗುವಿನಂತೆ ಅತ್ತು ’ಕ್ಷಮಿಸಿ, ಅವರ ಬಗ್ಗೆ ಭಾವುಕನಾಗದೆ ಮಾತಾಡೋಕಾಗಲ್ಲ’ ಎಂದು ನಮ್ಮ ಕ್ಷಮೆ ಕೋರಿದರು. ನಾಯಕರ ಮುಗ್ಧತೆಗೆ, ದೊಡ್ಡತನಕ್ಕೆ ನಾನು ಮೂಕವಿಸ್ಮಿತನಾದೆ. “ಆಮೇಲೆ ಅವರು ಆ ಪ್ರಶಸ್ತಿ ತಗೊಳ್ಳೋದಿಕ್ಕೂ ಹೋಗ್ಲಿಲ್ಲ. ಯಾರೊ ಮನೆಗೆ ತಂದಿಟ್ಟು ಹೋದ್ರು ಅಂತೇನೊ ಕೇಳಿದ್ದೀನಿ” ಎಂದು ಸೇರಿಸಿದರು. “ಊಟಗೀಟ ಅಂತ ಕೂತ್ರೆ ಕೆಲಸ ಹಾಳಾಗುತ್ತೆ ಕಣ್ರಿ”ನಂತರ ಅವರ ಮಾತು ತೇಜಸ್ವಿಯವರ ಶಿಕಾರಿ, ಫಿಶಿಂಗ್ ಹವ್ಯಾಸಗಳ ಕಡೆ ಹೊರಳಿಕೊಂಡಿತು.

ಹಳೆಯ ಕೆಲ ಘಟನೆಗಳನ್ನು ಅವರು ನಮ್ಮೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದರು, “ಒಂದಿನ ನಾನು, ಮೀರ, ನಮ್ಮ ದೊಡ್ದ ಮಗಳು ಅವರ ತೋಟಕ್ಕೆ ಹೋಗಿದ್ವಿ. ಚಿತ್ರಕೂಟ ಅದು(ತೇಜಸ್ವಿಯವರ ಮೊದಲ ತೋಟದ ಹೆಸರು) ದೊಡ್ಡ ಅರಣ್ಯದ ಥರಾನೆ ಇತ್ತದು. ಸುಮಾರು ಎಪ್ಪತ್ತು ಎಕರೆ ಕಾಡು ಅದು. ಆಗವರು ಬೇಟೆ ಆಡ್ತಿದ್ರು. ಒಂದಿನ ಏನಾಯ್ತು ಅವರು ಎಲ್ಲೊ ಮರೇಲಿ ಕೂತು ಯಾವುದೊ ಪ್ರಾಣಿಗೆ ಗುರಿ ಹಿಡಿದಿದ್ದಾರೆ. ಅದೇ ಸಮಯಕ್ಕೆ ಸರಿಯಾಗಿ ನಾನು ಅದೇ ದಾರಿಲಿ ಬಂದುಬಿಟ್ಟೆ. ಅವರು ಗುರಿ ಹಿಡಿದಿದ್ದ ಪ್ರಾಣಿ, ಹ ಕಾಡುಕುರಿ ಕಾಡುಕುರಿ ಅದು, ಅದು ತುಂಬಾ ಹತ್ತಿರಾನೇ ಇತ್ತು. ತೇಜಸ್ವಿ ಇನ್ನೇನ್ ಅದಕ್ಕೆ ಗುಂಡು ಹೊಡಿಬೇಕು ನಾನು ಅಡ್ಡ ಅದೇ ದಾರಿಲಿ ಬಂದುಬಿಟ್ಟೆ. ಅವರು ಗುಂಡು ಹಾರಿಸಲೇ ಇಲ್ಲ. ಎದ್ದು ಬಂದು ’ನಾಯಕರೆ ನೋಡಿ ಗುರಿ ತುಂಬಾ ಹತ್ತಿರನೇ ಇತ್ತು. ನಿಮಗೆ ಏನೂ ಆಗದ ಹಾಗೆ ಹೊಡಿಬಹುದಿತ್ತು. ಆದರೆ ಆ ರಿಸ್ಕ್ ಬೇಡ ಅಂತ ಸುಮ್ನಾದೆ” ಅಂದ್ರು. ಆ ತಕ್ಷಣ ನನಗೆ ಅವರ ’ಸ್ವರೂಪ’ದಲ್ಲಿ ಬರುವ ಇಂಥಾದ್ದೇ ಒಂದು ಘಟನೆ ನೆನಪಾಯ್ತು. ಅದನ್ನ ತೇಜಸ್ವಿಗೆ ಹೇಳಿದೆ. ಅವರು ನೆನಪಿಸಿಕೊಂಡು ನಕ್ಕರು. ಯಾವುದೊ ಪ್ರಾಣಿಗೆ ಹೊಡಿಯೊಕೆ ಅಂತ ಹೋಗಿ ಮತ್ಯಾರಿಗೊ ಬಿದ್ದು ಅವನು ಒದ್ದಾಡ್ತಾನೆ ನೋಡಿ ಅದು ನೆನಪಾಗಿರಬೇಕು ಅವರಿಗೆ. ಆಮೇಲೆ ಒಂದಿನ ಮೈಸೂರಿನ ಲಿಂಗಾಂಬುಧಿ ಕೆರೆಗೆ ಮೀನು ಹಿಡಿಯೋಕೆ ಅಂತ ಹೋದ್ವಿ. ನಮ್ಮ ಜೊತೆ ಅವತ್ತು ರಾಮದಾಸ್ ಮತ್ತು ಶ್ಯಾಂಸುಂದರ್ ಇದ್ರು. ಹೋದಾಗ ಅಲ್ಲಿ ಕೆರೆ ದಡದ ಮೇಲೆ ಒಂದು ಪುಟ್ಟ ಗುಡಿಸಲು ಹಾಕ್ಕೊಂಡು ಒಬ್ಬ switzerlandನವನು ಒಬ್ಬ ವಾಸ ಮಾಡ್ತಿದ್ದ. ಅವನಿಗೆ ಮೀನು ಹಿಡಿಯುವ ಹುಚ್ಚಂತೆ. ಅವನು ನಮ್ಮ ದೇಶದವಳೊಬ್ಬಳನ್ನ ಮದುವೆ ಆಗಿ ಅವಳ ಜೊತೆ ಸಂಸಾರ ಮಾಡ್ತಾ ಆ ಕೆರೆ ದಡದಲ್ಲೇ ವಾಸ ಆಗಿದ್ದ.

ತೇಜಸ್ವಿಗೆ ಅವನು ಮೊದಲಿಂದ ಪರಿಚಯ ಇತ್ತೊ ಏನೊ, ಅವನತ್ರ ಹೋಗಿ ಮಾತಾಡ್ತಿದ್ರು. ಅವನು ತೇಜಸ್ವಿಗೆ ಬಲೆ ಕೊಟ್ಟ. ಅವನು ನಮ್ಜೊತೆ ಬರ್ತಿದ್ದನೊ ಏನೋ? ಆದರೆ ಅವನ ಹೆಂಡತಿ ತುಂಬು ಬಸುರಿ. ಇವತ್ತೊ ನಾಳೆನೊ ಅನ್ನೊ ಹಾಗಿದ್ದಳು. ಅದಕ್ಕೆ ಅವನು ನಮ್ಮ ಜೊತೆ ಬರದೆ ಬಲೆಕೊಟ್ಟು ಕಳಿಸ್ದ. ತೇಜಸ್ವಿ ಮತ್ತು ರಾಮದಾಸ್ ಬರೀ ಅಂಡರ್ ವೇರಿನಲ್ಲಿ ಕೆರೆಗೆ ಇಳಿದು ಬಲೆ ಹಾಕಿ ಮೀನು ಹಿಡೀತಿದ್ರೆ, ನಾನು ಶ್ಯಾಂಸುಂದರ್ ದಡದ ಮೇಲೆ ನಿಂತ್ಕೊಂಡು ನೋಡ್ತಾ ಇದ್ವಿ. ಅವತ್ತಂತೂ ತೇಜಸ್ವಿ, ರಾಮದಾಸ್ ಇಬ್ಬರೂ ಸೇರಿ ತುಂಬಾ ಮೀನು ಹಿಡಿದ್ರು. ಆ ಮೀನುಗಳಂತೂ ನೋಡೋಕೆ ಒಂದು ಹಬ್ಬ ಅನ್ನೊ ಹಾಗಿದ್ವು. ಮೀನು ಎಲ್ಲಾ ಹಿಡ್ಕೊಂಡು ಅವನ್ನ ನಮ್ಮ ಮನೆಗೆ ತಂದ್ವು. ನಮ್ಮ ಮೀರ (ನಾಯಕರ ಪತ್ನಿ) ಮೀನು ಅಡಿಗೇಲಿ ಫೇಮಸ್. ಸಹಾಯಕ್ಕಿರಲಿ ಅಂತ ರಾಮದಾಸ್ ಅವರ ತಾಯಿನೂ ಕರೆಸ್ಕೊಂಡ್ವಿ. ಆಕೆಯಂತು ನಾನು ಕಂಡ ಬಹಳ ಅಪರೂಪದ ಹೆಣ್ಣುಮಗಳು. ತುಂಬಾ ಒಳ್ಳೆ ಹೆಂಗಸು ಆಕೆ. ಅವರಿಬ್ಬರು ಸೇರಿ ಮೀನು ಅಡಿಗೆ ಮಾಡ್ತಿದ್ರು. ನಾವೆಲ್ಲ ಕೂತು ಅದು ಇದು ಅಂತ ಹರಟೆ ಹೊಡೀತಾ, ಮಾತಾಡ್ತಾ ಕೂತಿದ್ವಿ. ಆಗ ಇನ್ನೇನು ಅಡಿಗೆ ಮುಗೀತಿದೆ ಅನ್ನೊ ಹೊತ್ತಿಗೆ ತೇಜಸ್ವಿಗೆ ಅದೇನು ನೆನಪಾಯ್ತೊ ಏನೊ ಆತುರಾತುರವಾಗಿ ಎದ್ದು “ಹೋಗ್ತೀನಿ ಕಣ್ರಿ. ಅರ್ಜೆಂಟ್ ಕೆಲಸ ಇದೆ” ಅಂತ ಹೇಳಿ ಹೊರಡೋಕೆ ಸಿದ್ದವಾದ್ರು. ನಾವು ’ಅಲ್ರಿ ಇನ್ನೇನು ಊಟ ಮಾಡೊ ಸಮಯ ಆಯ್ತು. ಅಡಿಗೇನೂ ಆಯ್ತು. ಊಟ ಮಾಡ್ಕೊಂಡು ಹೋಗ್ರಿ” ಅಂತ ಹೇಳಿದ್ದನ್ನ ಕೇಳ್ದೆ, “ಮಾರಾಯ್ರೆ, ತಕ್ಷಣ ಮಾಡಬೇಕಾದ ಕೆಲಸ ಒಂದಿದೆ. ಮರೆತೇಬಿಟ್ಟಿದ್ದೆ. ಊಟಗೀಟ ಅಂತ ಕೂತ್ರೆ ಕೆಲಸ ಹಾಳಾಗುತ್ತೆ. ಸಿಕ್ತೀನಿ ಕಣ್ರಿ” ಅಂತ ಹೇಳಿ ಹೊರಟೇಹೋದ್ರು. ಅಲ್ಲ ಅಂಥ ಬಾಯಲ್ಲಿ ನೀರೂರಿಸೊ ಊಟ ಬಿಟ್ಟು ಹೊರಟೇ ಹೋದ್ರಲ್ಲ. ಅದೂ ಅಲ್ಲದೇ ಅವರೇ ಕಷ್ಟಪಟ್ಟು ಹಿಡ್ಕೊಂಡು ಬಂದ ಮೀನು ಅದು. ಅದೇನು ಎಕ್ಸೆಂಟ್ರಿಸಿಟೀಸ್ ಅನ್ನಬೇಕೊ ಅಥವ ಪ್ರತಿಭಾವಿಲಾಸ ಅನ್ನಬೇಕೊ ಗೊತ್ತಾಗಲಿಲ್ಲ ನಮಗೆ.

ಆಮೇಲೆ ಗೊತ್ತಾಯ್ತು ಯಾವುದೊ ಫೋಟೋಗಳನ್ನ ಸ್ಟುಡಿಯೋದಲ್ಲಿ ಪ್ರಿಂಟಿಂಗಿಗೊ ಏನಕ್ಕೊ ಕೊಟ್ಟಿದ್ರು. ಅದನ್ನ ತರೋಕೆ ಹೋಗಿದ್ರು ಅಂತ. ತೇಜಸ್ವಿ ಹಾಗೆ ಮಾಡ್ಲೇಬೇಕು ಅಂತ ಅಂದುಕೊಂಡಿದ್ದನ್ನ ಹಾಗೆ ಹಠಹಿಡಿದು, ಅವರೇನು ಅಂದುಕೊತಾರೆ, ಇವರೇನು ಅಂದುಕೊತಾರೆ ಅಂತ ನೋಡದೇ ಕೆಲಸ ಮಾಡಿದ್ದರಿಂದಲೇ ಅವರು ಅಷ್ಟೆಲ್ಲ ಕೆಲಸ ಮಾಡೋಕಾಗಿದ್ದು. ನನ್ನ ಹಾಗೆ, ನಮ್ಮ ಹಾಗೆ ಕೆಲಸಾನ ಮುಂದಕ್ಕೆ ಹಾಕ್ತಿರಲಿಲ್ಲ. ಆಮೇಲೆ ನೇರ ನಿಷ್ಠ, ಒಂದು ಮಾತು ಇಲ್ಲಿ, ಇನ್ನೊಂದು ಮಾತು ಅಲ್ಲಿ ಅಂಥಾವೆಲ್ಲ ಏನೂ ಇರಲೇ ಇಲ್ಲ. ನಮ್ಮ ಸಾಹಿತಿಗಳಲ್ಲಿ ತುಂಬಾ ಜನಕ್ಕೆ ಅಂಥ ವ್ಯಕ್ತಿತ್ವ ಇಲ್ಲ. ಸಾಹಿತಿಗಳು ಅಂತ ಯಾಕೆ ಹೇಳ್ಬೇಕು, ಒಟ್ಟು ಲೋಕವೇ ಹಾಗಿದೆ. ನನ್ನ ಪ್ರಕಾರ, ಈ ಮಾತು ಹೇಳಲೇಬೇಕು, ಅಪರೂಪದ ಕೆಲವು ಸ್ನೇಹಿತರಿರ್ತಾರಲ್ಲ, ತೇಜಸ್ವಿ ಅಂಥ ಒಬ್ಬ ಅಪರೂಪದ ಸ್ನೇಹಿತ. ನನ್ನ ತಲೆಮಾರಿನ ಸಾಹಿತಿಗಳಲ್ಲಿ ಎಲ್ಲರಿಗಿಂತ ದೊಡ್ದವರು ಅವರು. ಒಬ್ಬ ಲೇಖಕನಾಗಿ ದೊಡ್ದವರೊ ಏನೊ ಅದನ್ನ ನಾನು ಹೇಳಲಾರೆ. ಆದರೆ ವ್ಯಕ್ತಿಯಾಗಿ ಅಂತು ಬಹಳ ದೊಡ್ಡವರು ಅಂತ ನನ್ನ ಅಭಿಪ್ರಾಯ. (ನಿಯಂತ್ರಿಸಲಾಗದ ಕಣ್ಣೀರು ನಾಯಕರ ಕಣ್ಣುಗಳಲ್ಲಿ).

ಮತ್ತೆ ಹೇಳ್ಕೊಂಡು ತಿರುಗ್ತಿರ್ಲಿಲ್ಲ. ಹಾಗಾಗಿ ನಾನು ನನ್ನ ಜೀವನದಲ್ಲಿ ನೋಡಿದ ಬಹುದೊಡ್ಡವರು ಅವರು. ಸದಾ ಅನ್ನಿಸ್ತಿರುತ್ತೆ, ಇನ್ನೂ ಒಂದು ಹತ್ತು ವರ್ಷ ಇದ್ದಿದ್ರೆ ಕನ್ನಡ ಸಾಹಿತ್ಯಕ್ಕೆ ಇನ್ನೂ ಅನೇಕ ಉತ್ತಮ ಕೊಡುಗೆ ಸಿಕ್ತಿತೇನೊ ಅಂತ. ಆಮೇಲೆ ಜ್ಞಾನಪೀಠ ಮಣ್ಣುಮಸಿ ಎಲ್ಲಾ ಬರಬಹುದಾದ ಯೋಗ್ಯತೆಯವರೇ ಅವರು. ಅದರಲ್ಲಿ ಯಾವ ಅನುಮಾನವೂ ಇಲ್ಲ.

ಅಲ್ಲ ಜೂನಿಯರ್ ಇಂಟರ್ ಫೇಲಾದ ಒಬ್ಬ ತರಲೆ ಹುಡುಗ ಕೊನೆಗೆ, ಸಾಹಿತ್ಯ, ವಿಜ್ಞಾನ, ಕಲೆ, ಕೃಷಿ, ಕಾಡು, ಹವ್ಯಾಸಗಳು, ಕಂಪ್ಯೂಟ್ರು ಅಂತ ಆಸಕ್ತಿ ಬೆಳೆಸ್ಕೊಂಡು ಕಣ್ಣ ಮುಂದೇನೆ ನೋಡುನೋಡ್ತಾ ಇದ್ದ ಹಾಗೆ ಕೈಗೆಟುಕದ ಹಾಗೆ, ಇವನು ನಮ್ಮ ಸ್ನೇಹಿತನೇನ? ಅನ್ನೊ ಎತ್ತರಕ್ಕೆ ಬೆಳೆದ್ರಲ್ಲ, ಅದೂ ಯಾರ ಹೆಸರಿನ ಹಂಗೂ ಇಲ್ಲದೇ ಕಾಡಿನ ಮಧ್ಯೆ ಕೂತು!! ಇದಕ್ಕೇನನ್ಬೇಕೊ ನನಗೆ ಗೊತ್ತಾಗ್ತಿಲ್ಲ. ಆ ಮೇರುಪರ್ವತದ ಬಗ್ಗೆ ಇನ್ನೂ ಹೆಚ್ಚು ಮಾತಾಡೋವಷ್ಟು ಅರ್ಹತೆ, ಯೋಗ್ಯತೆ ನನಗಿಲ್ಲ…” ಜಿ.ಹೆಚ್ ನಾಯಕರು ಭಾವೋದ್ವೇಗದಲ್ಲಿ ಒತ್ತಿಬಂದ ಕಣ್ಣೀರು ತಡೆಯಲಾರದೇ ಮಾತು ನಿಲ್ಲಿಸಿ ಎದ್ದು ಕೋಣೆಯ ಒಳಗಡೆಗೆ ಹೊರಟುಹೋದರು. ನಾಯಕರ ಪತ್ನಿ ಮೀರರವರು ಸಹ ಅವರ ಹಿಂದೆಯೇ ಹೋದರು. ಅವರ ಮನೆಯ ಹಾಲಿನಲ್ಲಿ ನಾನು ನಮ್ಮ ಹುಡುಗರು ಸ್ವಲ್ಪ ಹೊತ್ತು ಮೂಕರಾಗಿ ಕುಳಿತಿದ್ದೆವು. ಸ್ವಲ್ಪ ಹೊತ್ತಿನ ನಂತರ ಸಾವರಿಸ್ಕೊಂಡು ಹೊರಬಂದ ನಾಯಕರು ಮತ್ತೊಮ್ಮೆ ನಮ್ಮ ಕ್ಷಮೆ ಕೋರಿ ನಮ್ಮನ್ನು ಬೀಳ್ಕೊಟ್ಟರು.

ಅಷ್ಟರಲ್ಲಾಗಲೇ ನಾವು ಕ್ಯಾಮೆರ ಮತ್ತಿತರ ನಮ್ಮ ಹತ್ಯಾರುಗಳನ್ನು ಪ್ಯಾಕ್ ಮಾಡಿಕೊಂಡಿದ್ದೆವು. ಹೆಚ್ಚು ಮಾತನಾಡದೇ ಆ ದಂಪತಿಗಳಿಗೆವಂದಿಸಿ ಕುವೆಂಪುನಗರದ ಅವರ ಮನೆಯಿಂದ ಹೊರಬಂದೆವು. ನಮ್ಮ ವ್ಯಾನ್ ಏರಿ ಅವರ ಮನೆಯ ಮುಂದಿನಿಂದ ಮುಂದಿನ ಪಯಣದ ದಿಕ್ಕಿನ ಕಡೆ ಹೊರಡುವ ಮೊದಲು ಅಚಾನಕ್ಕಾಗಿ ಅವರ ಮನೆಯ ಕಡೆ ತಿರುಗಿದೆ. ನಾಯಕರು ಮತ್ತವರ ಪತ್ನಿ ಬಾಗಿಲ ಬಳಿ ನಿಂತು ಮಮತೆ ತುಂಬಿದ ಕಣ್ಣುಗಳಿಂದ ನಮ್ಮ ಕಡೆ ನೋಡುತ್ತಿದ್ದರು. ಅಷ್ಟೇ ಅಚಾನಕ್ಕಾಗಿ ಅದುವರೆಗೂ ಕಣ್ಣಿಗೆ ಬೀಳದ ಕಾಪೌಂಡಿನ ಮೇಲಿನ ಆ ಮನೆಯ ಬೋರ್ಡು ’ಪ್ರೀತಿ” ಆಗ ಕಣ್ಣಿಗೆ ಬಿತ್ತು. ನಿತಿನ್ ಗಾಡಿಯನ್ನು ಸೆಕೆಂಡ್ ಗೇರಿನಲ್ಲಿ ಮುಂದಕ್ಕೆ ಓಡಿಸಿದ.

(ಹುಡುಕಾಟ ಮುಂದುವರೆಯುವುದು…)

 

‍ಲೇಖಕರು avadhi

January 19, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. Anonymous

    ಆಪ್ತ ಬರೆಹ.ಲೇಖಕನೊಬ್ಬ ತನ್ನೊಳಗಿನ ಲೇಖಕನನ್ನು ಜೋಪಾನ ಮಾಡಿಕೊಳ್ಳಲು ಹಾಗೂ ಸಾರ್ವಜನಿಕ ಬದುಕಿನಲ್ಲಿ ಪಾರದರ್ಶಕ ಮನೋಸ್ಥಿತಿ ಎಷ್ಟು ಮುಖ್ಯ ಎಂ ಬುದನ್ನು ತೇಜಸ್ವಿಯವರಿಂದ ಕಲಿಯುವುದು ಸಾಕಷ್ಟಿದೆ.ತೇಜಸ್ವಿ,ರಾಮದಾಸ್ ಹಾಗೂ ಜಿ.ಹೆಹ್.ನಾಯಕ್ ತಮ್ಮದೇ ರೀತಿಯಲ್ಲಿ ಸಾಹಿತ್ಯ ಹಾಗೂ ಸಾರ್ವಜನಿಕ ಬದುಕಿಗೆ ತೆತ್ತುಕೊಂದವರು.ಈ ಪರೀಕ್ಷೆಗಳು ಹಾಗೂ ಪಥ್ಯಗಳ ಮಿತಿಗಳ ಬಗ್ಗೆ ತೇಜಸ್ವಿ ಬದುಕಿರುವವರೆಗೂ ಮಾತನಾಡುತ್ತಲೇ ಇದ್ದರು.
    ತೇಜಸ್ವಿಯವರನ್ನು ಕುರಿತ ಈ ‘ಹುಡುಕಾಟ’ಅರ್ಥಪೂರ್ಣವಾಗಿದೆ.
    -ಎಸ್.ಗಂಗಾಧರಯ್ಯ

    ಪ್ರತಿಕ್ರಿಯೆ
  2. malini guruprasanna

    Thanks Parameshwar avare, Naavu Tejasviyavarannu Kodachadriyashtu ettaradalli noduttidvi. Ega Himalayadettara anta neevu manavarike maadi kotri.

    ಪ್ರತಿಕ್ರಿಯೆ
  3. ಜಿ.ಎನ್ ನಾಗರಾಜ್

    ಇಲ್ಲಿಯವರೆಗಿನ ಕಥನದಲ್ಲಿ ಅರ್ದ್ರತೆಯನ್ನು ಮೂಡಿಸುವ ಭಾಗ ಿದು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: