ಸಂಪು ಕಾಲಂ : ಜನಪದದಲ್ಲಿರಬಹುದಾದ ಅನುವಾದ ಮತ್ತು ಸ್ವರೂಪ


ಇತ್ತೀಚೆಗಷ್ಟೇ ಜನಪದ ಅಧ್ಯಯನದಲ್ಲಿ ತೊಡಗಿಕೊಂಡಿರುವ ನಾನು ಕೆಲವು ಕುತೂಹಲಕಾರೀ ಮತ್ತು ವಿಶೇಷ ಅಂಶಗಳನ್ನು ಗಮನಿಸುತ್ತಿದ್ದೇನೆ. ಅವುಗಳಲ್ಲಿ ನನ್ನ ಆಸಕ್ತಿಗೊಲಿದದ್ದು, ಜನಪದದಲ್ಲಿ ಕಂಡು ಬಂದ ಡೈರೆಕ್ಟ್ ಟ್ರಾನ್ಸ್ ಲೇಷನ್ (ಭಾಷಾನುವಾದ) ಮತ್ತೊಂದು ಭಾವಾನುವಾದ. ಅನುವಾದಗೊಂಡದ್ದು ಹೌದೋ ಅಥವಾ ಬೇರೆ ಬೇರೆ ಮೂಲಗಳಿಂದ ಬೆಳೆದುಬಂದದ್ದೋ ಗೊತ್ತಿಲ್ಲ. ಆದರೆ, ಶಿಷ್ಟ ಸಾಹಿತ್ಯ ಮತ್ತು ಜನಪದ ಹಾಡುಗಳಲ್ಲಿ ಕಂಡುಬರುವ ಕೆಲವು ಇಂಟೆರೆಸ್ಟಿಂಗ್ ಸಾಮೀಪ್ಯ/ವ್ಯತ್ಯಾಸಗಳ ಬಗೆಗೆ ಗಮನಹರಿಸುವುದು ನನ್ನ ಇಂದಿನ ಲೇಖನದ ಉದ್ದೇಶ.
ನಾನು ಶಾಲೆ ಕಲಿಯೋ ದಿನಗಳು. ಪ್ರತಿಬಾರಿಯಂತೆ ಬೇಸಿಗೆ ರಜೆಗೆಂದು ನಮ್ಮ ತಾತನೂರು ಪುಲಿಗಲ್ ಗೆ ಹೋಗಿದ್ದೆ. ಅಲ್ಲಿನ ಊರಭಾಷೆ ತೆಲುಗು. ನಮ್ಮ ಹಳ್ಳೀಲಿ ಪ್ರತಿಯೊಬ್ಬರೂ ಕಲೆಗಾರರು. ಅದ್ಬುತವಾಗಿ ಹಾಡೋದು, ಪದ ಹೇಳೋದು, ಕಂಜರ, ತಮಟೆಗೆ ತಕ್ಕ ಹೆಜ್ಜೆ ಹಾಕೋದು. ಯಾವ ಮ್ಯೂಸಿಕ್ ಕ್ಲಾಸುಗಳಿಲ್ಲದೆ ಲಯಬದ್ಧವಾಗಿ, ಮಧುರವಾಗಿ ಹಾಡುವುದು ಅವರಿಗೆ ರಕ್ತಗತ. ಹೊಲ ಉಳುವಾಗ ಹಾಡೊ ಹಾಡುಗಳು, ಬೀಸೊ ಪದ, ಸೊಬಾನೆ ಹಾಡುಗಳು, ಭಕ್ತಿ ಭಜನೆಗಳು ಇತ್ಯಾದಿ ಲೆಕ್ಕವಿಲ್ಲದಷ್ಟು ಹಾಡುಗಳು ಯಾವ ಬರಹಗಳಲ್ಲೂ ದಾಖಲಾಗದೆ ಬಾಯಿಂದ ಬಾಯಿಗೆ ಹಬ್ಬುತ್ತಾ ತಲೆಮಾರುಗಳಿಂದ ಜೀವಂತವಾಗಿರುವ ಸಾಲುಗಳು. ಅವರ ಹಾಡುಗಳಲ್ಲಿನ ಆ ಜಾನಪದ ಸೊಗಡು ಎಷ್ಟೆಂದರೆ ಇತ್ತೀಚೆಗಿನ ಸಿನೆಮಾ ಹಾಡು ಕಲಿಯುವ ತಲೆಮಾರು ಸಹ, ಸಿನೆಮಾ ಹಾಡುಗಳನ್ನೂ ಜನಪದ ಸೊಗಡಿನಲ್ಲೇ ಹಾಡುತ್ತಾರೆ. ಮತ್ತು ನಾವು ಪ್ರಯತ್ನ ಪಟ್ಟರೂ ಆ ಸೊಗಡಿನ ಲಯವನ್ನು ಹಿಡಿದು ಅನುಕರಿಸಲಾರೆವು!
ಇಂತಹ ಮಂದಿ ನಮ್ಮ ಮನೆ ಕೆಲಸಕ್ಕೆ ಬರುವಾಗ ಅವರನ್ನು ಕರೆಸಿ ಮುಂದೆ ಟೇಪ್ ರೆಕಾರ್ಡರ್ ಇಟ್ಟು, ಹಾಡು ಎಂದುಬಿಟ್ಟರೆ ನೋಡಬೇಕು, ಅವರ ಸಂಭ್ರಮ, ಸಿಗ್ಗು, ನಗು ಎಲ್ಲ. ಅವರಿಗೆ ಎಂದಿಗೂ ಸಿಗದ ವಿಶೇಷ ಮನ್ನಣೆಯನ್ನು ಕೊಡುತ್ತಿದ್ದೇವೆ ಎಂದೋ, ಅವರದ್ದೇ ಧ್ವನಿ ಕೇಳಿ ನಾಚಿಕೆಯಾಗಿಯೋ, ಅವರ ಹಾಡು ನಗರದವರೆಗೂ ಹೋಗುತ್ತದೆ ಎಂಬ ಸಂತೋಷದಲ್ಲೊ ಅವರು ಹಿಗ್ಗಿ ಹೋಗುತ್ತಿದ್ದರು. ಹಾಡಿದ ನಂತರ “ಪಾಟ ಪೆಟ್ಟು ಅಮ್ಮಯ್ಯಾ” ಅಂತ ಪುನಃ ಪುನಃ ಕೇಳಿ ರೆಕಾರ್ಡ್ ಆದ ಹಾಡನ್ನು ಕೇಳಿ ನಕ್ಕು ಸಂಭ್ರಮಿಸುತ್ತಿದ್ದರು. ಒಂದು ದಿನ ಒಬ್ಬ ಹೆಂಗಸು ಬಂದಿದ್ದಾಗ ಕೂರಿಸಿ ಹಾಡಲು ಹೇಳಿದ್ದಾಗ ಆಕೆ ಒಂದು ವಿಶೇಷವಾದ ಹಾಡನ್ನು ಹಾಡಿದ್ದಳು. ಪೌರಾಣಿಕ ಜನಪದ ಸಾಲಿಗೆ ಸೇರುವ ಆ ಹಾಡನ್ನು ಅವರು “ಗುಬ್ಬೀಯಾಲ ಪಾಟ” ಎಂದು ಕರೆಯುತ್ತಿದ್ದರು. ಅದರ ಸಾಲುಗಳು ಹೀಗಿವೆ:
(ನಿಖರವಾದ ಪದಗಳನ್ನು ಮರೆತಿದ್ದೇನೆ. ಗೌರಿಗೆ ಮದುವೆ ಮಾಡುವ ಸಮಯ, ತಂದೆ ಮಗಳನ್ನು ಕೇಳುತ್ತಾನೆ. “ಮಗಳೆ ಗೌರಿ ನಿನ್ನನ್ನು ಯಾರಿಗೆ ಕೊಟ್ಟು ಮದುವೆ ಮಾಡಲಿ” ಎಂದು. ಮೊದಲಿಗೆ ಬ್ರಾಹ್ಮಣರಿಂದ ಪ್ರಾರಂಭಿಸುತ್ತಾ, ಅಗಸರು, ಮಾದಿಗರು, ಕೋಮಟಿಗರು ಎಂದೆಲ್ಲ ತಂದೆ ಕೇಳಿದಾಗ ಒಬ್ಬೊಬ್ಬರನ್ನೂ ಒಂದೊಂದು ಕಾರಣ ಕೊಟ್ಟು ಗೌರಿ ವಿರೋಧಿಸುತ್ತಾಳೆ. ಕೊನೆಗೆ ಫಕೀರ, ಭಿಕ್ಷುಕನಾದ ಶಿವನನ್ನು ವರಿಸುವೆ ಎಂದು ಹೇಳುತ್ತಾಳೆ. ಇದು ಸಂದರ್ಭ)
ಗೌರಮ್ಮಾ ನಿನ್ನೆವ್ರಿಕೀತುನೂ ಗುಬ್ಬೀಯಾಲು…
ಬಾಪುನೋಳ್ಳಕೀತಾಮಾ ಬಾಲಾ ಗೌರಮ್ಮಾ…..ಗುಬ್ಬೀಯಾಲು
ಬಾಪುನೋಳ್ಳ ಮೊಡುಗ್ಯಾಲು ನೇ ಪಿಂಡಲೇನು ಗುಬ್ಬೀಯಾಲು
ಚಾಕಲೋಳ್ಳಕೀತಾಮಾ…ಗುಬ್ಬೀಯಾಲು
ಚಾಕಲೋಳ್ಳ ಬಟ್ಟಾಲು ನೇ ಉತಕಾಲೇನು ಗುಬ್ಬಿಯಾಲು….
ಈ ಹಾಡು ಹೀಗೆ ಮುಂದುವರೆಯುತ್ತದೆ. ಬ್ರಾಹ್ಮಣರಾದರೆ ಅವರ ಮಡಿ ಬಟ್ಟೆ ಹಿಂಡಲಾರೆ, ಒಪ್ಪೊತ್ತೂಟ ಮಾಡಲಾರೆ, ಅಗಸರಾದರೆ, ಅವರ ರಾಶಿ ಬಟ್ಟೆ ಒಗೆಯಲಾರೆ, ಕೋಮಟಿಗರಾದರೆ ಕಾಸುಕಾಸನ್ನು ಲೆಕ್ಕ ಹಾಕಲಾರೆ, ಈ ರೀತಿ ತಮಾಷೆಯಾಗಿ ಹಾಡು ಸಾಗುತ್ತದೆ. ಇದು ಅಂದಿನ ಸಮಾಜದ ಪರಿಸ್ಥಿತಿಯನ್ನು ತೋರುವ ಸಾಲುಗಳಾಗಿರಬಹುದು, ಅಥವಾ ಪ್ರತಿ ವರ್ಗದ ಪ್ರತಿಮೆಗಳ ಕುರಿತಾದ ವ್ಯಂಗ್ಯಾಭಿವ್ಯಕ್ತಿಯಾಗಿರಬಹುದು, ಅಥವಾ ಸುಮ್ಮನೆ ಸಾಲು ಹೆಣೆಯಲು ಇವನ್ನು ಬಳಸಿರಬಹುದು. ಆದರೆ ಈ ಹಾಡಿನಲ್ಲಿ ಆ ಜನಪದರ ಸಾಮಾಜಿಕ ಅನುಭವ ಎಷ್ಟಿತ್ತೆಂಬುದು ಅರಿವಾಗುತ್ತದೆ. ಈ ಹಲವಾರು ಕಾರಣಗಳಿಗೆ ಈ ಹಾಡು ನನ್ನನ್ನು ವಿಶೇಷವಾಗಿ ಸೆಳೆದಿತ್ತು. ಇದನ್ನು ಕೇಳಿ ಸಾಕಷ್ಟು ವರ್ಷಗಳೇ ಕಳೆದಿದ್ದವು.

ಇತ್ತೀಚೆಗೆ, ದೇ.ಜ.ಗೌರವರ ’ಜನಪದ ಗೀತಾಂಜಲಿ’ ಪುಸ್ತಕವನ್ನು ಓದುತ್ತಿದ್ದಾಗ ಆಶ್ಚರ್ಯಕರವಾಗಿ ಥೇಟ್ ಇದೇ ಸಾಲುಗಳು ಕನ್ನಡದಲ್ಲಿ ಕಂಡು ಬಂದಿತು! ಅದು ಹೀಗಿದೆ:
ಗೌರಮ್ಮ ಹುಟ್ಟಿದಳಿನ್ ಯಾರಿಗೆ ಕೊಡಲಿ…
ಬ್ರಾಂಬರಿಗೆ ಕೊಡಲೇನೆ ಮಗಳೇ ಶ್ರೀ ಗೌರಿ…
ದಿನಕೊಂದು ಮಡಿಸೀರೆ ನಾ ಉಡಲಾರೆ…
ಒಕ್ಕಲಿಗರಿಗೆ ಕೊಡಲೇನೆ ಅಕ್ಕೈಯ್ಯ
ಒಕ್ಕಲಿಗರ ಹೊಲಗದ್ದೆ ನಾ ಗೆಯ್ಯಲಾರೆ …
ಈ ಹಾಡಿನಲ್ಲೂ ಗೌರಿ ಎಲ್ಲ ವರ್ಗಗಳ ಮದುವೆ ಪ್ರಸ್ತಾಪ ಧಿಕ್ಕರಿಸಿ, ಶಿವನನ್ನು ವರಿಸುತ್ತೇನೆ ಎನ್ನುತ್ತಾಳೆ. ನನಗೆ ತಕ್ಷಣ ಆ ಹಿಂದೆ ಕೇಳಿದ ತೆಲುಗು ಹಾಡು ನೆನಪಾಗಿ ಇದು ಯಥಾವತ್ (ಬಹುಪಾಲು) ತರ್ಜುಮೆಯಾಗಿ ಕಂಡಿತು. ಯಾವ ಬರಹ ಮೂಲಗಳೂ ಇಲ್ಲದೆ (ಆ ಕಾಲದಲ್ಲಿ) ಇಂತಹ ಹಾಡುಗಳು ಬಾಯಿಂದ ಬಾಯಿಗೆ ಹರಡಿಕೊಂಡೇ ಭಾಷಾಂತರಗೊಂಡದ್ದು ಇರಬಹುದೇ ಎನಿಸಿತು!
ಇದು ಭಾಷಾನುವಾದವಾದರೆ, ಭಾವಾನುವಾದಗಳು ಕಂಡುಬಂದದ್ದು ಅನೇಕ. ಮತ್ತು ಆ ಭಾವಾನುವಾದ ಎಷ್ಟು ಸೊಗಸಾಗಿ ಮೂಡಿಬಂದಿದೆ ಎಂದರೆ, ಶಿಷ್ಟ ಭಾಷೆಯ ಹಾಡುಗಳಿಗಿಂತ ಜನಪದವೇ ಹೆಚ್ಚು ಆಪ್ತವೆನಿಸುತ್ತದೆ. ಕೆಲವು ಉದಾಹರಣೆಗಳನ್ನು ನೋಡೋಣ:
೧. ನಾರಾಯಣ ಸ್ವಾಮಿಯ ಹಾಡು:
– “ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಗೆಗೆ ಬರಲಿ”
– “ನಾರಾಯಣ ನಿನ್ನ ನಾಮದ ಬೀಜವ ನಾನೆಲ್ಲಿ ಬಿತ್ತಿ ಬೆಳೆಯಲಿ ನಿನ ನಾಮ ನಾಲಗೆ ಮೇಲೆ ಬೆಳೆದೇನ”
೨. ಸರಸ್ವತಿಯ ಹಾಡು:
– “ಶಾರದದೇವಿಯೆ ಕೈಯನು ಮುಗಿಯುವೆ, ಕರುಣವ ತೋರುತ ಸಲಹಮ್ಮ, ಮರೆಯದ ರೀತಿಲಿ ಪಾಠಗಳೆಲ್ಲವ ಕಲಿಯಲು ಜ್ಞಾನವ ನೀಡಮ್ಮ”
– “ಹಟ್ಟೀಯ ಮನೆಯೋಳೆ ಪಟ್ಟೆದುಂಗುರದೋಳೆ ಪಟ್ಟೆಯ ಸೀರೆ ನೆರಿಯೋಳೆ – ಸರಸೋತಿ ಗುಟ್ಟುನಲಿ ಮತಿಯ ಕಲಿಸವ್ವ”
೩. ತಾಯಿಯ ಬಗ್ಗೆ:
– ಮಾತೃ ದೇವೋಭವ
– “ಕಾಸಿಗಿ ಹೋಗುದಕ ಏಸೊಂದು ದಿನಬೇಕು, ತಾಸ್ ಹೊತ್ತಿನ ಹಾದಿ ತೌರೂರು ಮನೆಯಲ್ಲಿ ಕಾಶಿ ಕುಂತವಳೆ ಹಡೆದವ್ವ”
ಇತ್ಯಾದಿ ಎಷ್ಟೊಂದು ಹಾಡುಗಳಲ್ಲಿ, ಮಾತುಗಳಲ್ಲಿ ಭಾವ ಒಂದೇ ಭಾಷೆ ಬೇರೆಯಾಗಿ ಕಾಣುತ್ತದೆ. ಮೊದಲೆರಡು ಉದಾಹರಣೆಗಳಂತೂ ಬಹುಪಾಲು ಒಂದೇ ವ್ಯಾಖ್ಯಾನವನ್ನು ನೀಡುತ್ತದೆ. ಇಲ್ಲಿ ಎರಡರ ಭಾವ ಒಂದಾದ್ದರಿಂದ ಎರಡೂ ಬೇರೆ ಬೇರೆ ಮೂಲಗಳಲ್ಲೇ ಸೃಷ್ಟಿಯಾದವೋ ಅಥವಾ ಯಾವೊಂದರಿಂದ ಮತ್ತೊಂದು ಪ್ರಭಾವಗೊಂಡಿದೆಯೇ ಹೇಳುವುದು ಕಷ್ಟ.
ಆದರೆ ಅದಕ್ಕಿಂತ ಮುಖ್ಯವಾಗಿ ನಾವಿಲ್ಲಿ ಗಮನಿಸಬಹುದಾದ್ದು, ಹಾಡು ಜನಪದದಲ್ಲಿ ಕೇಳಿದಾಗ ಅದು ನಮ್ಮಾಳಕ್ಕೆ ಇಳಿಯುವ, ನಮ್ಮೆದೆ ತಟ್ಟುವ ಭಾವಸ್ಪುರಣೆಯನ್ನು. ಶಿಷ್ಟ ಅಥವಾ ವೈದಿಕ ಸಾಹಿತ್ಯದ ನಾರಾಯಣನ ನಾಮಸ್ಮರಣೆಯ ಸಾರಾಮೃತವು ಹೇಗೆ ನಾಲಗೆ ಮೇಲೆ ಬರುತ್ತದೆಯೊ ಹಾಗೆ ಜನಪದದ ನಾರಾಯಣನ ನಾಮದ ಬೀಜ ನಾಲಗೆಯ ಮೇಲೆ ಬಿತ್ತನೆಗೊಳ್ಳುತ್ತದೆ. ವ್ಯತ್ಯಾಸ ಗಮನಿಸಿ! ಜನಪದದಲ್ಲಿ ಯಾವುದೇ ಹೈ-ಫೈ ಹೋಲಿಕೆಗಳಿಲ್ಲದೆ ತಮ್ಮ ದಿನನಿತ್ಯದ ಬದುಕನ್ನೇ ಬಿಂಬಿಸುವ ಭಕ್ತಿಭಾವ.
ಎರಡನೆಯ ಸರಸ್ವತಿಯ ಹಾಡು, ಶಿಷ್ಟ ಭಾಷೆಯಲ್ಲಿ ಸಾಧಾರಣವಾಗಿ ಕಾಣುತ್ತದೆ. ಅದೇ ಜನಪದವಾದಾಗ, ಆ ಸಾಲುಗಳಲ್ಲಿ ಸಾಕಷ್ಟು ಹೊಳಹುಗಳು ಕಂಡು ಬರುತ್ತವೆ. “ಹಟ್ಟೀಯ ಮನೆಯೋಳೆ” ಎಂಬ ಪದ ಪ್ರಯೋಗವೇ ಸರಸ್ವತಿಯಿಂದ ತಾವು ದೂರಾದ ವಿಷಯವನ್ನು ತಿಳಿಸುತ್ತದೆ. ಉಂಗುರ, ಪಟ್ಟೆ ಸೀರೆ ಇವೆಲ್ಲ ಶ್ರೀಮಂತಿಕೆಯನ್ನು ತೋರುತ್ತಾ, ಸರಸ್ವತಿ ಶ್ರೀಮಂತರ ಪಾಲು ಎಂಬ ಕಹಿಯನ್ನೂ ಬೀರುತ್ತದೆ. ಮೂರನೆಯ ಮತ್ತು ಬಹಳ ಇಂಟೆರೆಸ್ಟಿಂಗ್ ಸಾಲು ಎಂದರೆ, “ಗುಟ್ಟಿನಲಿ ಮತಿಯ ಕಲಿಸವ್ವ”. ಇಲ್ಲಿ ಜನಪದರು, “ಗುಟ್ಟಿನಲಿ” ಎಂಬ ಪದ ಬಳಕೆ ನನ್ನನ್ನು ಬಹಳ ಕಾಡಿತು. ಬಹುಶಃ ಇದರ ಅರ್ಥ, ಸರಸ್ವತಿ, ಆ ಕಾಲದಲ್ಲಿ, ಆ ಜನರಿಗೆ ಸಿಗುವ ಸಂಭವವೇ ಇರಲಿಲ್ಲ. ಸರಸ್ವತಿ ಒಲಿಯುವ ಪ್ರಮೇಯವೇ ಎದುರಾದಲ್ಲಿ ಅವರು ಕಷ್ಟವೆದುರಿಸಬೇಕಾಗಿತ್ತು (ನನಗೆ ಈ ಸಂದರ್ಭದಲ್ಲಿ ನೆನಪಾಗುವುದು, ವೇದಗಳನ್ನು ಕೇಳಿಸಿಕೊಂಡ ಮಾದಿಗರ ಕಿವಿಯಲ್ಲಿ ಕಾದ ಕಬ್ಬಿಣದ ರಸ ಹುಯ್ಯುತ್ತಿದ್ದರು ಎಂಬ ಕೇಳ್ನುಡಿ), ಆದರೂ ಸರಸ್ವತಿಯನ್ನು ಒಲಿಸಿಕೊಳ್ಳುವ ಆಸೆ, ಅದಕ್ಕಾಗಿ “ಸರಸೋತಿ, ಗುಟ್ಟಿನಲಿ ಮತಿಯ ಕಲಿಸವ್ವ” ಎಂದಿರಬಹುದು.
ಮೂರನೆ ಸಾಲುಗಳು ತಾಯಿಯ ಬಗ್ಗೆ. ಯಾವ ಶಿಷ್ಟ ಸಾಹಿತ್ಯಕ್ಕೂ ಮೀರಿ ಜನಪದದಲ್ಲಿ ಭಾವನೆಗಳ ಸ್ಪುರಣೆಯಾಗುತ್ತದೆ. ಅದಕ್ಕೆ ನಾವು ಬಹುಬೇಗ ಕನೆಕ್ಟ್ ಆಗಬಲ್ಲೆವು ಎಂಬುದಕ್ಕೆ ಇದೊಂದು ಉದಾಹರಣೆ. ಮಾತೃ ದೇವೋಭವ ಎಂದು ಹುಟ್ಟಿದಾಗಿನಿಂದಲೂ ಓದುತ್ತಿದ್ದ ನನಗೆ, ಕಾಸೀಗಿ ಹೋಗುದಕ ಏಸೊಂದು ದಿನ ಬೇಕು…..ಕಾಸಿ ಕುಂತವ್ಳೆ ಹಡೆದವ್ವ ಸಾಲುಗಳು ಕೇಳಿದಾಗ ಮನಮುಟ್ಟಿದಂತೆ ಎಂದಿಗೂ ಮುಟ್ಟಿಲ್ಲ. ಜನಪದದ ವಿಶೇಷತೆಯೇ ಇದು. ಅವರು ಬಳಸುವುದು ಜನರ ಭಾಷೆ, ಜನರ ಬದುಕನ್ನು ಹೊರತು ಯಾವ ದೂರಾದೂರದ ಕಲ್ಪನೆಗಳ ಜೋಡಣಿಕೆಯಲ್ಲ. ಮನೆಮಾತನ್ನೇ ಬಳಸಿ ತಮ್ಮ ಮುಗ್ಧತೆಯ ಭಾವದಲ್ಲೇ ಜನಪದವು ಆಧ್ಯಾತ್ಮ ಪರಿಕಲ್ಪನೆಗಳನ್ನೂ ಸರಳವಾಗಿ ಪದವಾಗಿಸಿ ಜನರ ಮನಸಿಗೆ ನಾಟುವಂತೆ ಮಾಡುತ್ತದೆ. ಅನಕ್ಷರಸ್ಥರ ಬಾಯಿಪದವಾಗಿ ಹರಡಿ ಹೊಳೆಯಾದ ಜಾನಪದ ಯಾವ ಶಿಷ್ಟ ಸಾಹಿತ್ಯಕ್ಕೂ ಕಡಿಮೆಯಿಲ್ಲ.

‍ಲೇಖಕರು G

March 1, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

’ಚರಿತ್ರೆಯನ್ನು ನೆನೆದು ಕಲಕಿಬಿಟ್ಟ ಮನಸ್ಸು ಅರೆ ನಿಮಿಷ ಮೌನ’ – ಸಂಯುಕ್ತಾ ಪುಲಿಗಳ್

ನಾವು ಇಷ್ಟೇಕೆ ಹೆದರಿದ್ದೇವೆ? ಸಂಯುಕ್ತಾ ಪುಲಿಗಳ್ ಅದೆಷ್ಟೆಷ್ಟೋ ಓದಿಬಿಟ್ಟ, ಪದಕಗಳ ಮೇಲೆ ಪದಕಗಳ ಗೆದ್ದುಬಿಟ್ಟ, ಅತ್ಯುನ್ನತ...

9 ಪ್ರತಿಕ್ರಿಯೆಗಳು

  1. ಪರಮೇಶ್ವರ ಗುರುಸ್ವಾಮಿ

    ಬಹಳ ಮುಖ್ಯ ಎನಿಸುವ observation. ಯಾಕೆಂದರೆ ಡಿಕನ್ಸನ ಕಾದಂಬರಿಗಳನ್ನು ಮೊದಲ ಸಲ ಓದಿದಾಗ ನನಗೆ ಕಾಡಿದ್ದ ಪ್ರಶ್ನೆ: ನಮ್ಮಲ್ಲಿ ಪಂಪನಿಂದ ಮುದ್ದಣನವರೆಗೂ ದೇವರುಗಳು ಮತ್ತು ರಾಜಮಹಾರಾಜರುಗಳ ಬದುಕು ಮಾತ್ರ ಚಿತ್ರಿತವಾಗಿದೆ. ಸಾಮಾನ್ಯರ ಬದುಕಿನ ವಿವರಗಳೇ ಇಲ್ಲವಲ್ಲ ಯಾಕೆ ಎಂಬದು. ಇದು ನಲವತ್ತು ವರ್ಷಗಳ ಹಿಂದೆ. ಕ್ರಮೇಣ ಅರಿತುಕೊಂಡದ್ದು: ಬದುಕಿನ ನೇರ ಅನಭವವಿದ್ದ ಬಹುಸಂಖ್ಯಾತರಿಗ ಮೌಖಿಕ ಅಭಿವ್ಯಕ್ತಿ ಮಾತ್ರ ಸಾಧ್ಯವಿತ್ತು. ಅಕ್ಷರ ನಿರಾಕರಿಸಲಾಗಿತ್ತಲ್ಲ. ಶೂದ್ರಕ, ಮುಖ್ಯವಾಗಿ ಗುಣಾಢ್ಯರಂಥವರಲ್ಲದೆ ಸಂಪು ಇಲ್ಲಿ ಪ್ರಯತ್ನಿಸಿರುವ ಹಾಗ ಮೌಖಿಕ ಸಾಹಿತ್ಯವನ್ನು ಪರಿಭಾವಿಸುವುದು ಬಹಳ ಮುಖ್ಯ ಅನ್ನಿಸುತ್ತದೆ.

    ಪ್ರತಿಕ್ರಿಯೆ
  2. vanamala v

    ತುಂಬಾ ಚೆನ್ನಾಗಿ ಬರೆದಿದೀರಿ. ಇಷ್ಟವಾಯ್ತು.

    ಪ್ರತಿಕ್ರಿಯೆ
  3. ಪು.ಸೂ.ಲಕ್ಷ್ಮೀನಾರಾಯಣ ರಾವ್

    ಶಿಷ್ಟ ಹಾಗು ಜನಪದ ಸಾಹಿತ್ಯಗಳ ತುಲನೆ ಚೆನ್ನಾಗಿದೆ. ಇದೆ ರೀತಿ ‘ ಮಾಯದಂಥ ಮಳೆ ಬಂದತಮ್ಮ ಮದಕಾದ ಕೆರೆಗೆ ‘ ಎಂಬ ಹಾಡಿಗೆ ಅನುರೂಪವಾಗಿ ತೆಲುಗಿನಲ್ಲಿ ‘ಗಂಗಮ್ಮತಲ್ಲಿ ‘ ಹಾಡು ಇದೆ . ‘ವಾನ ವಾನಂದೂರು ವದಿಯೇಮಿ ವಾನಮ್ಮ …… ತೂರುಪು ದೇಸಮು ಪೋಯಿನಾವೆ ಗಂಗಮ್ಮ ತಾಮರ ಪೂವುಲೇ ತೆಚ್ಚಿನಾವೆ ಗಂಗಮ್ಮ …… ‘ ಎಂಬಿತ್ಯಾದಿಯಾಗಿ ಬರುವ ಸಾಲುಗಳು ಸಹ ಗಮನಾರ್ಹ.
    ಬಹುಶಃ ನಿಮ್ಮ ಈ ಲೇಖನ ಪ್ರಾದಿಶಿಕತೆಯ ಮಹತ್ವದ ಬಗ್ಗೆ ಸಹ ಯೋಚಿಸಬಹುದಾದ ಸೂಚನೆಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೆನೆ. ಪ್ರಾದೆಶಿಕತೆಯಲ್ಲಿ ಅಥವಾ ‘ದೇಸಿ’ಯಲ್ಲಿ ‘ಮಾರ್ಗ’ಕ್ಕಿಂತ ಬೌದ್ಧಿಕತೆಯು ಹೆಚ್ಚು ಹೆಚ್ಚು ಭಾವನಾತ್ಮಕವಾಗುವ , ಆಪ್ತವಾಗುವ ,ಸಾಮಾಜಿಕವಾಗುವ ಸನ್ನಿವೇಶವನ್ನು ಕಾಣುತ್ತೇವೆ ಅಂತ ಅನ್ನಿಸುತ್ತದೆ.
    ಉದಾ: ಸಂಸ್ಕೃತದಲ್ಲಿ ಬರುವ ‘ದೇಹೋ ದೆವಾಲಯಃ ಪ್ರೋಕ್ತೋ ಜೀವೋ ದೇವಃ ಸನಾತನ ‘ ಎಂಬ ಮಾತನ್ನು ಬಸವಣ್ಣನವರ ‘ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡುವೆ ಬಡವನಯ್ಯ ….. ‘ಎಂಬ ವಚನದೊಂದಿಗೆ ಹೋಲಿಸಬಹುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This