“ಇಕ್ರಲಾ, ವದೀರ್ಲಾ, ಆ ನನ್ ಮಕ್ಳ ಚರ್ಮ ಎಬ್ರಲಾ….”, “ನೆನ್ನೆ ದಿನ, ನನ್ನ ಜನಾ…” ಇತ್ಯಾದಿ ಹಾಡುಗಳಿರುವ ಸಿದ್ಧಲಿಂಗಯ್ಯನವರ ಪುಸ್ತಕಗಳು ಅಚಾನಕ್ ಕಣ್ಣಿಗೆ ಬಿದ್ದು ಪುಸ್ತಕದ ಬಿಸಿ ಹಾಗೆ ಹರವಿ ಮೈ ತುಂಬಾ ಹರಡಿತು. ಎಂತಹ ಉದ್ವೇಗ, ಸಿಟ್ಟಿನ ಮಾತುಗಳು! ನಾವು ಮಡಿ ಮೈಲಿಗೆಗಳ ವಾತಾವರಣದ ನಡುವೆ ಕೂತು, ಹೆಚ್ಚು ಎಂದರೆ, “ಛೆ, ಹಾಗೆ ಮಾಡಬಾರದು ಪಾಪ” ಅನ್ನೋದು ಎಷ್ಟು ಸುಲಭ ಮತ್ತು ಎಷ್ಟು ಪೊಳ್ಳು ಅಂತ ಈ ಪುಸ್ತಕದ ಕೆಲವು ಸಾಲುಗಳನ್ನು ಓದಿದರೆ ಸಾಕು ತಿಳಿದು ಬಿಡುತ್ತದೆ. ಈ ಪುಸ್ತಕದ ಹಾಡುಗಳು ನನಗೆ ಥಟ್ಟನೆ ನೆನಪಿಸಿದ್ದು ನಾನು ಇಂಗ್ಲಿಷ್ ತರಗತಿಗಳಲ್ಲಿ ಓದಿದ ಕೆಲವಾರು ಪದ್ಯಗಳು. ನಾನು ಹಂಚಿಕೊಳ್ಳಬೇಕಾದ ಒಂದು ಕನ್ಫ್ಯೂಶನ್ ಅಥವಾ ಕನ್ಫ಼ೆಶನ್ ವಿವರಿಸುವ ಮುನ್ನ ಈ ಕೆಲವು ಸಾಲುಗಳನ್ನು ಹೇಳಿಬಿಡುತ್ತೇನೆ.
ಕೀಟ್ಸ್ರ, ಶೆಲ್ಲಿ, ವರ್ಡ್ಸ್ವರ್ತ್ ಹೀಗೆ ರಮ್ಯವಾದ ರೋಮ್ಯಾಂಟಿಕ್ ಸಾಹಿತ್ಯವನ್ನೇ ಓದುತ್ತಿದ್ದ ಆ ದಿನಗಳಲ್ಲಿ, ಆಂಗ್ಲ ಸಾಹಿತ್ಯದಲ್ಲಿ, ನಾನು ಮೊಟ್ಟ ಮೊದಲು ಒಂದು ‘ಶೋಷಣೆಯ ದನಿ’ ಅಂತ ಓದಿದ ಪದ್ಯ ಬ್ಲೇಕ್ ರವರ “ಚಿಮ್ನೀ ಸ್ವೀಪರ್”. ಅತ್ಯಂತ ‘ಧಾರಾಳಿ’ಗಳಾದ ಬಿಳಿ ಬೂರ್ಜ್ವಾಗಳ ನಡುವೆ ಸಿಲುಕಿ ನಲುಗುವ ಕಪ್ಪು ಹುಡುಗರ ಕಹಿ ವೇದನೆಯನ್ನು ಈ ಸಾಲುಗಳು ಸಮಂಜಸವಾಗಿ ಕಟ್ಟಿಕೊಡುತ್ತವೆ.
……
When my mother died I was very young,
And my father sold me while yet my tongue
Could scarcely cry ” ‘weep! ‘weep! ‘weep! ‘weep!”
So your chimneys I sweep & in soot I sleep.
……
ಅಗಾಧ ಶೋಕ, ಶೋಷಣೆಗಳನ್ನು ಈ ಸಾಲುಗಳು ಕನ್ನಡಿಸಿದ್ದರೂ, ವಿಲಿಯಂ ಬ್ಲೇಕ್ ನ ಈ ಸಾಲುಗಳು ಯಾಕೋ, ಕಾರಂತರ ಚೋಮನ ದುಡಿಯಾಗಿ ಕಂಡು ಬಿಡುತ್ತದೆ! ಮತ್ತದೇ ಮಡಿ ಮೈಲಿಗೆಗಳ ನಡುವೆ ನಿಂತು “ಅಯ್ಯೋ ಪಾಪ” ಎನ್ನುವುದು. ಸಿದ್ಧಲಿಂಗಯ್ಯನವರ ಕ್ರಾಂತಿಕಾರೀ, ಪವರ್ಫುಲ್ ಸಾಲುಗಳನ್ನು ಹೋಲುವ, ಅದನ್ನು ಓದಿದ ಕೂಡಲೇ ನನಗೆ ನೆನಪಾದ, ಫ್ರೆಂಚ್ ಕ್ರಾಂತಿಕಾರಿ ಯುಜಿನಿ ಪಾಟರ್ ಅವರ “ದಿ ಇಂಟರ್ನ್ಯಾಷನೇಲ್” ಎಂಬ ಈ ಪದ್ಯ ಅತ್ಯಂತ ಪ್ರಭಾವ ಬೀರುವಂಥದ್ದು:
……
Arise ye workers from your slumbers
Arise ye prisoners of want
For reason in revolt now thunders
And at last ends the age of cant.
……
ಇವು ಬರಿ ಸಾವಿರಾರು ನದಿಗಳ ಓದಿನಲ್ಲಿ ಮುಳುಗಿದ್ದ ನನಗೆ ತಕ್ಷಣ ನೆನಪಾದ ಮತ್ತು ನಾನು ಕಾಲೇಜಿನಲ್ಲಿ ಪ್ರಾರಂಭಿಕವಾಗಿ ಓದಿದ ಪದ್ಯಗಳು. ಇಂತಹ ಇನ್ನೂ ಅನೇಕ ಶೋಷಣೆಯ ಧ್ವನಿಯಾದ ಪದ್ಯಗಳು ನನ್ನ ಮನ ನಲುಗಿಸಿವೆ. ಆದರೂ, ‘ಸಾವಿರಾರು ನದಿಗಳು’ ರೀತಿಯಲ್ಲಿ ನನಗೆ ಬಿಸಿ ತಟ್ಟಿಸಿದ್ದು, ಚಿಂತನೆಗೆ ಹಚ್ಚಿದ್ದು ವೋಲ್ ಸೋಯಿಂಕಾ ಅವರ ಪದ್ಯಗಳನ್ನು ಓದಿದಾಗ! ಅದರಲ್ಲೂ ಅವರ ‘ಟೆಲಿಫೋನ್ ಕಾನ್ವರ್ಸೆಶನ್’ ಪದ್ಯ. (ಪ್ರತಿಯೊಬ್ಬರೂ ಓದಲೇಬೇಕಾದ ಕವನಗಳಲ್ಲಿ ಇದೂ ಒಂದು) ಅತ್ಯಂತ ಸರಳವಾದ, ಸುಲಭ ಸಾಲುಗಳಲ್ಲಿ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ. ಈ ಕಲೆ ಸಂಪೂರ್ಣ ಅನುಭವದಿಂದ ಪಡೆದುಕೊಂಡದ್ದು ಎಂದು ಅವರೇ ಹೇಳುತ್ತಾರೆ. ಸತ್ಯ ಅಲ್ವಾ! ಅನುಭವದಿಂದ ಬಂದದ್ದು ಗಾಢ! ಅದಕ್ಕೇ ನಮಗೆ ಕಾರಂತರ ಚೋಮನದುಡಿಯಾಗಲೀ, ಬ್ಲೇಕ್ ನ ಚಿಮ್ನೀ ಸ್ವೀಪರ್ ಆಗಲಿ ಅಷ್ಟು ಮನಸ್ಸಿನಾಳವನ್ನು ಘಾಸಿ ಮಾಡುವುದಿಲ್ಲ!
ಅದಿರಲಿ, ನಾನು ಕನ್ಫ್ಯೂಶನ್ ಅಥವಾ ಕಂಫೆಶನ್ ಅಂದದ್ದು, ಈ ‘ಶೋಷಣೆ’ ಎಂಬ ಕಾನ್ಸೆಪ್ಟ್ ನ ಆಳದ ಅಥವಾ ವಿವಿಧ ಮುಖಗಳ ಕುರಿತು! ಯಾರು ಬರೆದದ್ದು ಮರೆತಿದ್ದೇನೆ, ಆದರೆ “ಕಥೆಗಾರ” ನಲ್ಲಿ ಹೀಗೊಂದು ಕಥೆ ನೋಡಿದ್ದೆ. ಒಬ್ಬ ಮಾರ್ಕ್ಸಿಸ್ಟ್, ತನ್ನ ಶ್ರೀಮಂತ ಹುಡುಗಿಗೆ ಮಾರ್ಕ್ಸ್ ನ ತತ್ವ, ಹಿನ್ನೆಲೆ, ಲೋಹಿಯಾ ವಿಚಾರಗಳು, ಕ್ರಾಂತಿ, ಶೋಷಣೆ, ದಂಗೆ ಹೀಗೆಲ್ಲಾ ಜ್ಞಾನ ಬೋಧನೆ ಮಾಡಿ, ದೂರದೂರಿಗೆ ತೆರಳುತ್ತಾನೆ. ಬರಿಯ ಸುಖದ ಮೆತ್ತೆಯ ಜೀವನ ಕಂಡ ಮುಗ್ಧ ಹುಡುಗಿಗೆ ಪ್ರಪಂಚದ ಅರಿವಾಗುತ್ತದೆ. ಆಕೆ ತನ್ನ ಪ್ರಿಯಕರನ ಬೋಧನೆಯಿಂದ ಸಂಪೂರ್ಣ ಪರಿವರ್ತನೆಗೆ ಒಳಗಾಗುತ್ತಾಳೆ. ತನ್ನ ಎಲ್ಲಾ ಸುಖ ಸಂಪತ್ತನ್ನು ತೊರೆದು, ಒಂದು ಬಾಡಿಗೆ ಮನೆಯಲ್ಲಿ ಒಂದು ಚಾಪೆ ಮತ್ತು ಪುಸ್ತಕಗಳೊಂದಿಗೆ ಬದುಕುತ್ತಿರುತ್ತಾಳೆ. ಆಕೆಯನ್ನು ಬಿಟ್ಟು ಹೋಗಿದ್ದ ಆ ಹುಡುಗ ಈಗ ಮತ್ತೆ ಮರಳುತ್ತಾನೆ. ಆದರೆ ಆತನ ಎಲ್ಲಾ ಆದರ್ಶಗಳೂ ಮಣ್ಣಿನ ಪಾಲು. ಕಾರಿನಲ್ಲಿ ಬಂದಿಳಿದ ಈತ ನೆಲದ ಮೇಲೆ ಕೂರಲು ಹಿಂದೆ ಮುಂದೆ ನೋಡುವಷ್ಟು ಬದಲಾಗಿಬಿಟ್ಟಿರುತ್ತಾನೆ! ಅಥವಾ ಆ ರೀತಿ ಕಾಲ ಅವನನ್ನು ಬದಲಾಗಿಸಿ ಬಿಟ್ಟಿರುತ್ತದೆ! ಯಾರೋ ಹೇಳಿದ್ದು, ‘ಸಾವಿರಾರು ನದಿಗಳು’ ಪುಸ್ತಕದಲ್ಲಿ ಕಾವೇರುವ ಆವೇಗ, ನೋವು ಈಗ ಅದರ ಕರ್ತೃವಿನಲ್ಲಿ ಉಳಿದಿಲ್ಲ, ಅದು ಎ.ಸಿ ಕಾರಿನ ತಂಪಿನಲ್ಲಿ ಆರಿಹೋಗಿದೆ ಎಂದು. ಗೊತ್ತಿಲ್ಲ, ಬಹುಶಃ ಇದು ನಿಜವಿರಲಿಕ್ಕೂ ಸಾಧ್ಯ! ಏಕೆಂದರೆ ನನ್ನ ಪ್ರಕಾರ, ಈ ಬದಲಾವಣೆ ಅತ್ಯಂತ ಸಹಜ ಹಾಗೂ ಸಾಧಾರಣ. ಅಂದು ಅವರ ಪ್ರತಿಕ್ರಿಯೆಗೆ ಹೆಮ್ಮೆ ಪಟ್ಟದ್ದಾಗಿದೆ ಆದರೆ ಈಗ ಅವರಲ್ಲಿ ಕಂಡುಬಂದ ಬದಲಾವಣೆಗೆ (ಅದು ನಿಜವಿದ್ದಲ್ಲಿ!) ಅವರನ್ನು ತೆಗಳುವುದು ತಪ್ಪು.
ಯಾವುದೇ ಅನುಭವ ಆಗಲಿ, ಸಂತೋಷ, ದುಃಖ, ಶೋಷಣೆ ಏನೇ ಇರಲಿ, ಅದು ಸ್ವ-ಅನುಭವಕ್ಕೆ ಬಂದಷ್ಟು, ಬೇರೂರಿದಷ್ಟು ಮತ್ತ್ಯಾರಿಗೂ ಆಗುವುದು ಸಾಧ್ಯವಿಲ್ಲ. ಮತ್ತು ಯಾವುದೇ ಅನುಭವ ಸ್ಥಿರವಾಗಿ ಉಳಿಯುವುದಿಲ್ಲ. ಹಾಗೆ ಆ ಬದಲಾದ ಅನುಭವ ಹಿಂದಿನ ಅನುಭವದ ತೀವ್ರತೆಯನ್ನು ಅಳಿಸಿಬಿಡುತ್ತದೆ. ಬಿದ್ದು ಗಾಯ ಮಾಡಿಕೊಂಡಾಗ ಅಳುವ ಮಗು ಅದು ವಾಸಿಯಾಗುತ್ತಲೇ ಮತ್ತೆ ನಗುತ್ತದೆ. ಗಾಯವನ್ನು ಮರೆಯುತ್ತದೆ. ಪ್ರಜ್ಞಾ ಪೂರ್ವಕವಾದ ನೋವಿನ ಅನುಭವ ಇದ್ದೇ ಇರುತ್ತದೆ. ಆದರೆ ಅದರ ರೂಪ, ಗಾಢತೆ ಬದಲಾಗಿ ಬಿಡುತ್ತದೆ. ಈ ಮಾತು ನಾನು ವ್ಯಕ್ತಿಗತ ಹಂತದಲ್ಲಿ ಹೇಳುತ್ತಿದ್ದೇನೆ ಹೊರತು ಸಾಮಾಜಿಕವಾಗಿ ಅಲ್ಲ. ಉದಾಹರಣೆಗೆ ಒಮ್ಮೆ ಸಂಧ್ಯಾರಾಣಿಯವರು ಬರೆದಂತೆ, ಜಾತಿಗತ ಶೋಷಣೆ ತಮ್ಮ ಅನುಭವಕ್ಕೆ ಬರುವವರೆಗೂ ಅದರ ಗಾಢತೆ ತಿಳಿಯಲಿಲ್ಲ ಎಂಬುದು ಇಲ್ಲಿ ನಮೂದಿಸಲು ಸೂಕ್ತವಾಗುತ್ತದೆ.
ನನ್ನ ಮತ್ತೊಂದು ಅನಿಸಿಕೆ ಎಂದರೆ, ‘ಶೋಷಣೆ’ ಎಂಬ ಪದವೇ ತುಂಬಾ ಟೆಂಪೊರಲ್ ಅಥವಾ ಸಾಂದರ್ಭಿಕ! ಜೀವನದ ಪ್ರತಿವ್ಯಕ್ತಿಯೂ ಪರೋಕ್ಷವಾಗಿ ಒಬ್ಬ ಶೋಷಣೆ ಮಾಡುವವನೂ, ಶೋಷಣೆಗೆ ಒಳಗಾದವನೂ ಆಗಿರುತ್ತಾನೆ. ಉದಾಹರಣೆಗೆ, ಮತ್ತದೇ ಸಾವಿರಾರು ನದಿಗಳು ಪುಸ್ತಕದ ವಿಚಾರ ತೆಗೆದುಕೊಂಡರೆ, ದಲಿತರ ಮೇಲಿನ ಶೋಷಣೆಯನ್ನು ವಿವರಿಸುತ್ತಲೇ ಸಿದ್ಧಲಿಂಗಯ್ಯನವರು ದಲಿತ ಮಹಿಳೆಯರ ಮೇಲೆ ಪರೋಕ್ಷವಾಗಿ ಕಡೆಗಣಿಕೆಯ ದೃಷ್ಟಿ ಬೀರಿರುತ್ತಾರೆ. ಇಲ್ಲಿ ‘ಕಡೆಗಣಿಕೆ’ ಪದದ ಅರ್ಥ ಮಹಿಳೆಯನ್ನು ಅಸಹಾಯಕ, ಅಬಲೆ ಎಂದು ಚಿತ್ರಿಸಿರುವುದು. ಕ್ರಾಂತಿಕನ್ಯೆಯ ಬಿಡಿಸ ಹೊರಡುವ ಕ್ರಾಂತಿವೀರನಾಗಿ ನಿಲ್ಲುವ ಕವಿ ಸ್ಥೂಲವಾಗಿ ತಿಳಿಸುವ ವಿಚಾರ ಮತ್ತದೇ “ದೂರದೂರಿನ ರಾಜಕುಮಾರ, ಸುಕುಮಾರಿ ರಾಜಕುಮಾರಿ”ಯ ಫೇರಿ ಟೇಲ್ ಅಲ್ಲವೇ!
ಸರಿ, ಈಗ ಸಾವಿರಾರು ನದಿಗಳಿಂದ ಹೊರಗೆ ಬಂದು ಬಿಡೋಣ! ಮಹಿಳಾ ಶೋಷಣೆಯ ವಿರುದ್ಧ ದಂಗೆ ಎದ್ದ ಮಹಿಳೆಯರೇ ಕೆಳವರ್ಗದ ಮಹಿಳೆಯರ ಮೇಲೆ ಶೋಷಣೆ ಮಾಡುತ್ತಿದ್ದಾರೆ ಎಂಬ ಥಿಯರಿ ಮತ್ತೊಂದಿದೆ. ಥರ್ಡ್ ವರ್ಲ್ಡ್ ಫೆಮಿನಿಸಂ ಮಂಡಿಸುವುದೇ ಈ ವ್ಯಾಖ್ಯಾನವನ್ನು! ಹೀಗೆ, ವರ್ಗಗಳ ಶೋಷಣೆ, ಜಾತಿ, ಲಿಂಗ ಇವೆಲ್ಲ ಹಾರ್ಡ್ ಶೋಷಣೆಗಳು ಎಂದು ಪರಿಗಣಿಸೋಣ. ಆದರೆ ಸಾಫ್ಟ್ ಶೋಷಣೆಗಳ ಬಗ್ಗೆ ಏನು ಹೇಳುವುದು, ಪ್ರತಿ ನಿಮಿಷ, ಪ್ರತಿಯೊಬ್ಬರ ಅಂತರಾಳದಲ್ಲೂ ಭೋರ್ಗರೆಯುವ ಸುನಾಮಿಯಾಗಿ ಈ ಶೋಷಣೆ (ಮಾಡುವ + ಒಳಗಾಗುವ) ಯ ವ್ಯವಸ್ಥೆ ಎಷ್ಟು ಮಾನಸಿಕವಾಗಿ ಬೆಳೆದುಬಿಟ್ಟಿದೆ. ಹೆಜ್ಜೆ ಹೆಜ್ಜೆಗೂ ಸುಳ್ಳು ಹೇಳುವುದು, ನಯವಂಚನೆ ಮಾಡುವುದು, ತಮ್ಮದೇ ಲೋಕದಲ್ಲಿ ಮುಳುಗಿ ಕುಟುಂಬದಲ್ಲೂ ಬೆರೆಯದಷ್ಟು ಅಂತರ್ಮುಖಿಯಾಗುವುದು, ಒಬ್ಬರೊಬ್ಬರ ಮೇಲೆ ಪೈಪೋಟಿ ಬೀರುವುದು, ನಂಬಿದವರಿಗೆ ಮೋಸ ಮಾಡುವುದು, ಹೀಗೆಲಾ ಮಾಡುತ್ತಿದ್ದೇವಲ್ಲಾ ಎಂದು ಮರುಗುವುದು, ಖಿನ್ನತೆಗೆ ಒಳಗಾಗುವುದು, ನೊಂದುಕೊಳ್ಳುವುದು (ಇವೆಲ್ಲ ಸ್ವ-ಶೋಷಣೆ), ಹೀಗೆ ಒಂದಲ್ಲ, ಎರಡಲ್ಲಾ ನೂರಾರು, ಸಾವಿರಾರು ಶೋಷಣೆಗಳಿಗೆ ನಾವು ಯಾರೂ ಹೊರತಲ್ಲ! ಕೆಲವನ್ನು ಬೊಟ್ಟು ಮಾಡಿ ತೋರುತ್ತೇವೆ. ಕೆಲವನ್ನು ನಮಗರಿಯದೆ ನಾವೇ ಮಾಡುತ್ತಿರುತ್ತೇವೆ.
ಹೀಗೆ ನಾನು ಹೇಳುತ್ತಿರುವಾಗ ಯಾವ ಒಂದು ಪಂಥ ಅಥವಾ ಚಳುವಳಿಯ ವೇದಿಕೆಯ ಮೇಲೆ ಕೂತು ಆಡುತ್ತಿರುವ ಮಾತಲ್ಲ, ಇವು ನನ್ನ ಕೆಲವು ಸೂಕ್ಷ್ಮ ಅನಿಸಿಕೆಗಳ ಲಹರಿಗಳಲ್ಲಿ ಒಂದು ಎಂದು ಹೇಳಲೇಬೇಕು. “ಅಮ್ಮಾ ಈವತ್ತು ಆಫೀಸಿಂದ ಬೇಗ ಬಂದುಬಿಡು” ಎಂದು ಮಗು ಬೇಡಿದಾಗ, ನನ್ನ ಗೆಳತಿ “ಹು ಪುಟ್ಟಾ ಪ್ರಾಮಿಸ್” ಎಂದು ಹೇಳಿದರೂ ಆಕೆಯ ಕೆಲಸದ ಒತ್ತಡದಿಂದ ಅದು ಸಾಧ್ಯವಾಗದೆ ಹೋದದ್ದೂ ಕೂಡ ನನ್ನ ಲೆಕ್ಕದಲ್ಲಿ ಮಗುವಿನ ಮನಸಿನ ಮೇಲೆ ಜರುಗಿಸುವ, ಆ ಮಗುವನ್ನು “ಮನುಷ್ಯ”ನನ್ನಾಗಿ ಮಾಡಿಸುವ ಒಂದು ಶೋಷಣೆಯೇ! ಅಲ್ಲವಾ?
ಸಾಮಾಜಿಕ ಹಂತದಲ್ಲಿ ಜರುಗುವ ಮಾಕ್ರೋ ಲೆವೆಲ್ ಅಥವಾ ಹಾರ್ಡ್ ಶೋಷಣೆಗಳು ಖಂಡಿತ ಮಾರಕ. ಅದರ ವಿರುದ್ಧ ಧ್ವನಿ ಏರಿಸಬೇಕು. ಆದರೆ ಈ ಮೈಕ್ರೋ ಲೆವೆಲ್ ಶೋಷಣೆಗಳು ಏನಿವೆ, ಇವು ಮನುಷ್ಯನ ಸಹಜ ಗುಣವೇ? ಅಥವಾ ನಾವು ಕಡೆಗಣಿಸಬಹುದಾದಂತಹ ಶೋಷಣೆಗಳೇ? ಇಷ್ಟಕ್ಕೂ ಶೋಷಣೆ ಎಂದರೇನು? ಯಾರು ಶೋಷಿತರು ಅಲ್ಲ?
“ಇಷ್ಟಕ್ಕೂ ಶೋಷಣೆ ಎಂದರೇನು? ಯಾರು ಶೋಷಿತರು ಅಲ್ಲ?” – ಸಂಯುಕ್ತಾ ನನ್ನನ್ನೂ ಬಹುವಾಗಿ ಕಾಡಿದ.. ಕಾಡುತ್ತಿರುವ ಪ್ರಶ್ನೆಗಳಿವು… ಲೇಖನದ ಓಘ, ವಸ್ತು ಎರಡೂ ಇಷ್ಟವಾದವು. 🙂
“ಜೀವನದ ಪ್ರತಿವ್ಯಕ್ತಿಯೂ ಪರೋಕ್ಷವಾಗಿ ಒಬ್ಬ ಶೋಷಣೆ ಮಾಡುವವನೂ, ಶೋಷಣೆಗೆ ಒಳಗಾದವನೂ ಆಗಿರುತ್ತಾನೆ”- 100% ಸತ್ಯವಾದ ಮಾತು.
ಇಷ್ಟಕ್ಕೂ ಶೋಷಣೆ ಎಂದರೇನು? ಯಾರು ಶೋಷಿತರು ಅಲ್ಲ?”
ಈ ಪ್ರಶ್ನೆ ನನ್ನದೂ ಕೂಡ…
ನಮ್ಮೊಳಗೇ ಉತ್ತರ ಸಿಗದ ಪ್ರಶ್ನೆಗಳಿಗೆ ಹೊಸದಾಗಿ ನಿಮ್ಮ ಈ ಎರಡು ಪ್ರಶ್ನೆಗಳನ್ನ ಸೇರಿಸಿಕೊಳ್ಳಬಹುದು.
ನನ್ನ ಪ್ರಕಾರ.. ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರತಿಯೊಬ್ಬ ಬುದ್ಧಿವಂತ ಮನುಷ್ಯನೂ, ಇನ್ನೊಬ್ಬ ಬುದ್ಧಿವಂತ ಮನುಶ್ಯನನ್ನ ಮೀರಿ ಬದುಕುವ ಪ್ರಯತ್ನ ಶೋಷಣೆಗೆ ದಾರಿಯಾಗಬಹುದೇನೋ..?? ಬುದ್ಧಿವಂತಿಕೆಗೆ ಸ್ಥರಗಳ ಬೇಲಿಯಿಲ್ಲ.. ಜಾತಿಯ ಅಡ್ಡಗಾಲಿಲ್ಲ.. ಲಿಂಗ ತಾರತಮ್ಯವಿಲ್ಲ.. ಆದರೂ ಒಬ್ಬನ ಬುದ್ಧಿವಂತಿಕೆ ಮತ್ತೊಬ್ಬನದನ್ನ ಹಂಗಿಸುವಲ್ಲಿ ಶೋಷಣೆ ಉಧಿಸುತ್ತದೆ. ಒಬ್ಬ ವ್ಯಕ್ತಿ ತಾನು ಮಾಡುತ್ತಿರುವುದು ಅನ್ಯಾಯ ಅಕ್ರಮ ಅನ್ನುವುದು ಯಾವತ್ತು ಇನ್ನೊಬ್ಬ ವ್ಯಕ್ತಿಗೆ ಅರಿವಾಗುತ್ತದೋ.. ಅಲ್ಲಿ ಶೋಷಣೆಯ ಕುರಿತಾದ ಜ್ಞಾನ ಮೊಳೆಯುತ್ತದೆ. ನಮ್ಮ ಬುದ್ಧಿ ಅಲ್ಲಿ ಕೆಲಸ ಮಾಡುತ್ತದೆ. ಅನ್ಯಾಯ ಅಕ್ರಮಗಳು ಎಲ್ಲೆಲ್ಲಿ ಯಾವ ಯಾವ ವ್ಯಕ್ತಿಗೆ ಅರ್ಥವಾಗುತ್ತಾ ಹೋಗುತ್ತದೋ ಅಲ್ಲೆಲ್ಲ ಶೋಷಣೆಯ ಅರ್ಥದ ಬೀಜ ಮೊಳೆಯುತ್ತಾ ಹೋಗುತ್ತದೆ. ಪರಮ ಹೆಡ್ಡ ನೆಂಬ ಪಟ್ಟ ಯಾವತ್ತು ಜಗತ್ತಿನೊಳಗೆ ಅಮೂಲ್ಯ ಪಟ್ಟ ಕಾಯ್ದುಕೊಳ್ಳುವುದೋ ಅಂದು ಜಗತ್ತಿನ ಬುದ್ಧಿವಂತರ ಶೋಷಣೆ ನಿಲ್ಲಬಹುದೇನೋ. ಹೆಡ್ಡನಿಗೆ ಯಾವುದೋ ಅರ್ಥವಾಗುವುದಿಲ್ಲವಲ್ಲ. ಶೋಷಣೆ ಎಂಬುದರ ಅರ್ಥ ಕೂಡಾ. ಅಲ್ಲಿಯವರೆಗೂ ಎಲ್ಲಾ ಥರದ ಬುದ್ಧಿವಂಥರದ್ದೂ ಎಲ್ಲಾ ಥರದ ಬುದ್ಧಿವಂತರ ಮೇಲೆ ಶೋಷಣೆ ಆಗಿಯೇ ತೀರುತ್ತದೆ.
ಸುಂದರ ಲೇಖನ ಮೇಡಂ.. 🙂