ನಮ್ಮ ಮನೆಗೆ ಹಿರಿಯರೊಬ್ಬರು ಬಂದಿದ್ದರು. ಎಂದಿನಂತೆ ಅವರೊಟ್ಟಿಗೆ ನಡೆದದ್ದು ಬಿಸಿ ಚಹಾದೊಂದಿಗೆ ಪುಸ್ತಕಗಳ ಬಗೆಗಿನ ಚರ್ಚಾಕೂಟ. ಸಂಭಾಷಣೆ ನಿಖರವಾಗಿ ನೆನಪಿಲ್ಲ, ಆದರೆ ಅದರ ನಡುವಿನ ಒಂದು ಮಾತು ಹೀಗಿತ್ತು… “ಕಥೆ, ಕಾದಂಬರಿಗಳು ಕವಿತೆಯ ಹಾಗಲ್ಲ, ಅವನ್ನು ಯಾರಾದರೂ, ಹೇಗಾದರೂ ಓದಬಹುದು” ಎಂದು. ಸಾಹಿತ್ಯ ವಿದ್ಯಾರ್ಥಿಯಾದ ನನಗೆ ಈ ಮಾತು ಸಖ್ಯವೆನಿಸಲಿಲ್ಲ. ಕಥೆ, ಕಾದಂಬರಿ ಅಂದರೆ ಸಾಹಿತ್ಯ, ಸಾಹಿತ್ಯ ಅಂದರೆ ಜೀವನದ ಕೈಗನ್ನಡಿ. ಎಲ್ಲ ವಿಜ್ಞಾನಗಳಿಗಿಂತಲೂ ಸಾಹಿತ್ಯ ಹೆಚ್ಚು ವೈಜ್ಞಾನಿಕ ಅಂತ ಅನ್ನಿಸಿತು. ಅವರಿಗೆ ಹೇಳಬೇಕಾದ್ದು ಹೇಳಿ, ಮಾತು ಮುಗಿದಿತ್ತು, ಅವರು ಹೊರಟಿದ್ದರು. ನಾನು ಮಾತ್ರ ಕಾದಂಬರಿಯ ಗುಂಗಿನಲ್ಲಿದ್ದೆ.
ಸಾಕಷ್ಟು ಮಂದಿಗೆ ಈ ರೀತಿ, ಅಂದರೆ, ಕಥೆ ಕಾದಂಬರಿ ಎಂದರೆ ಏನೋ ಕೆಲಸಕ್ಕೆ ಬಾರದ, ಬರಿಯ ಒಂದು ಮನರಂಜನೆಗಾಗಿ ಓದಿ ಮರೆಯುವಂತಹ, ಒಂದು ಸಾಧಾರಣ ಕಮೆರ್ಶಿಯಲ್ ಸಿನೆಮಾದಂತಹ ಭಾವನೆ. ಆದರೆ, ಮನಸ್ಸಿನ ಭಾವನೆಗಳನ್ನು, ನಮಗೇ ಅರಿವಾಗದಂತಹ ಒಳತೋಟಿಗಳನ್ನು, ಜೀವನದ ವಿವಿಧ ಜಟಿಲತೆಗಳನ್ನು ಸಹಜವಾಗಿ, ಪರಿಣಾಮಕಾರಿಯಾಗಿ ಮತ್ತು ಸ್ವಾರಸ್ಯಕರವಾಗಿ ಅಕ್ಷರಗಳಲ್ಲಿ ಹಿಡಿದಿಟ್ಟು ಒಂದು ರೂಪಾಕಾರ ತಾಳುವ ಸಾಹಿತ್ಯ, ನಾನಾಗಲೇ ಹೇಳಿದಂತೆ ವಿಜ್ಞಾನಕ್ಕಿಂತಲೂ ವೈಜ್ಞಾನಿಕ. ಈ ರೀತಿ ಮನಸ್ಸು ಲಹರಿಯಲ್ಲಿ ಮುಳುಗಿದ್ದಾಗ ತೇಲಿ ಬಂದ ಒಂದು ಮಾತು ಇದು “Creative writing is creative only if it is read by creative reading”. ನಿಜ ಅಲ್ಲವಾ!
ಹೀಗೆ ಯೋಚಿಸುತ್ತಿರುವಾಗಲೇ ಯಾವುದಾದರೂ ಕಾದಂಬರಿ ಓದಬೇಕು ಅನಿಸಿತು. ಇತ್ತೀಚಿಗೆ ಓದಿದ ಕಾದಂಬರಿಗಳಲ್ಲಿ ಜೋಗಿಯ ಚಿಕ್ಕಪ್ಪನೇ ಕೊನೆ. ಅಡಿಗರ ಕಾವ್ಯದ ರಸಧಾರೆಯಲ್ಲಿ ಈಜಲು ತವಕಿಸಿ, ಈಜಾಟ ಕಲಿಯಲು ಪ್ರಾರಂಭಿಸಿ ಹೆಚ್ಚು ದಿನಗಳಾಗಿರಲಿಲ್ಲ, ಆದ್ದರಿಂದ ನನ್ನ ಲೈಬ್ರರಿಯ ಮುಂದೆ ಹೋಗಿ ನಿಂತಾಗ ತಕ್ಷಣ ಕಣ್ಣಿಗೆ ಬಿದ್ದದ್ದು ಅಡಿಗರ ಕಾದಂಬರಿ ‘ಅನಾಥೆ’. ಅಡಿಗರು ಬರೆದ ಎರಡೇ ಕಾದಂಬರಿಗಳಲ್ಲಿ ‘ಅನಾಥೆ’ ಒಂದು. ಒಮ್ಮೆ ಅಡಿಗರು ತ.ರಾ.ಸು ಅವರನ್ನು ಕುರಿತು ಹೀಗಂದಿದ್ದರಂತೆ, “ನೀವೆಲ್ಲಾ ಏನಯ್ಯಾ ಕಾದಂಬರಿ ಬರೀತಿರಿ, ನಾನು ಬರೀತೀನಿ ನೋಡಿ ಒಂದು. ಅದು ಕಾದಂಬರಿ ಅಂದರೆ” ಅಂತ. ಅದಕ್ಕೆ ತ.ರಾ.ಸು, “ಮತ್ತೆ ಬರಿಯಯ್ಯಾ, ನಾನೇ ಪ್ರಕಟಿಸ್ತೀನಿ” ಅಂದರಂತೆ. ಆಗಲೇ ಬರೆದದ್ದು, ‘ಆಕಾಶದೀಪ’ ಮತ್ತು ‘ಅನಾಥೆ’.
ಒಂದು ಮಾತಿನಲ್ಲಿ ಹೇಳಬೇಕಾದರೆ, ಅಡಿಗರ ಕಾವ್ಯ ಸಾಮರ್ಥ್ಯವೆಂಬ ಗಣಿಗೆ ಈ ಕಾದಂಬರಿಯ ತೂಕವನ್ನು ಒರೆ ಹಚ್ಚಿ ನೋಡಿದೆ. ಹಾಗಾಗಿ ಈ ಕಾದಂಬರಿ ನನಗೆ ಇಷ್ಟವಾಗಲಿಲ್ಲ. ಆದರೆ, ನನಗೆ ಸಂತೋಷ ತಂದ ವಿಚಾರವೆಂದರೆ, ಕಾದಂಬರಿ, ಸಾಹಿತ್ಯ, ಓದು, ಅಧ್ಯಯನ ಇವುಗಳ ಬಗೆಗೆ ಕೆಲವು ಕುತೂಹಲಕಾರಿಯಾದ ಅನಿಸಿಕೆಗಳು ಮೂಡಲು ಈ ‘ಅನಾಥೆ’ ಸಹಾಯ ಮಾಡಿದ್ದು.
ಬಹುಶಃ, ನಾನು ಮಾಡಿದ ತಪ್ಪು ಕೆಲಸದಿಂದ, ಅಂದರೆ ಈ ಕಾದಂಬರಿಯನ್ನು ಅಡಿಗರ ಕಾವ್ಯಕ್ಕೆ ಹೋಲಿಸಿ ಓದಿದ್ದರಿಂದ ಬಹಳ ಸಾಧಾರಣವಾಗಿ ಕಂಡ ಈ ಕಥೆಯ ಸಂಕ್ಷಿಪ್ತ ಸಾರಾಂಶ ಹೀಗಿದೆ:
…….ದಕ್ಷಿಣ ಕನ್ನಡ ಜಿಲ್ಲೆಯ ಸಣ್ಣ ಊರೊಂದರ ಮಳೆಗಾಲದಲ್ಲಿ ಕಥೆಯ ಪ್ರಾರಂಭ. ಸುತ್ತ ಮುತ್ತಲೂ ತನ್ನ ನೆಂಟರಿದ್ದರೂ ಹೆಚ್ಚು ಕಡಿಮೆ ಒಬ್ಬೊಂಟಿ ಎನಿಸುವ ಬ್ರಾಹ್ಮಣ ಯುವಕ ಶೀನಪ್ಪ. ಈತ ಸುಗುಣ ಸಂಪನ್ನ. ಸದ್ಗುಣ, ಆದರ್ಶ, ನ್ಯಾಯ, ನೀತಿ ಇವು ಈತನ ಜೀವಾಳ. ಯಾರೊಬ್ಬರಿಗೂ ನೋವಾಗದಂತೆ ಈತನ ನಡೆ-ನುಡಿ. ಈತ ಪ್ರೀತಿಸಿ ಇನ್ನೇನು ಮದುವೆ ನಿಶ್ಚಯವಾಗಬೇಕು ಅನ್ನುವಷ್ಟರಲ್ಲಿ ಆ ಹುಡುಗಿ ಸಿಡುಬಿನಿಂದ ಜೀವ ತೆರುತ್ತಾಳೆ. ನೊಂದ ಶೀನಪ್ಪ ತನಗೆ ಮದುವೆಯೇ ಬೇಡ ಎಂದು ನಿರ್ಧರಿಸಿರುತ್ತಾನೆ. ಗುಡುಗು ಮಿಂಚಿನ ಕತ್ತಲ ರಾತ್ರಿಯಲ್ಲಿ ಈತ ಒಮ್ಮೆ ವಾಲ್ಮೀಕಿ ರಾಮಾಯಣವನ್ನೋದುತ್ತಾ ರಾಮ ಸೀತೆಯನ್ನು ಕಾಡಿಗಟ್ಟಿದ ದುರ್ಬರ ಕ್ಷಣವನ್ನು ನೆನೆಯುತ್ತಾ ಕಣ್ಣೀರಿಡುತ್ತಾನೆ. ಅದೇ ಕ್ಷಣಕ್ಕೆ ಯಾರೋ ಮನೆಬಾಗಿಲಿನಲ್ಲಿ ಕಿರುಚಿದ ಧ್ವನಿ ಕೇಳಿ ಹೋಗಿ ನೋಡಿದಾಗ ಕಂಡದ್ದು, ಗರ್ಭಿಣಿ ಸ್ತ್ರೀಯೊಬ್ಬಳು ಪ್ರಜ್ಞೆ ತಪ್ಪಿ ಬಿದ್ದದ್ದು. ತಾನು ಒಬ್ಬ ಬ್ರಹ್ಮಚಾರಿ ಬ್ರಾಹ್ಮಣ. ಈಕೆ ಪರಸ್ತ್ರೀ. ಈಕೆಯನ್ನು ತನ್ನ ಮನೆಯಲ್ಲಿಟ್ಟುಕೊಂಡು ಶುಶ್ರೂಷೆ ಮಾಡಬೇಕಾದ್ದು ಮಾನವೀಯತೆ. ಆದರೆ, ಪರಸ್ತ್ರೀಯನ್ನು ಮನೆಯಲ್ಲಿಟ್ಟುಕೊಳ್ಳುವುದು ಧರ್ಮದ ವೈರುಧ್ಯ.
ಹೀಗೆ, ಧರ್ಮ ಸಂಕಟಕ್ಕೆ ಸಿಕ್ಕಿ ಒದ್ದಾಡಿ ಕೊನೆಗೂ ಶೀನಪ್ಪ ತೆಗೆದುಕೊಳ್ಳುವ ನಿರ್ಧಾರ, ಆಕೆಗೆ ಆಶ್ರಯ ಕೊಡುವುದು. ಇದರ ಪರಿಣಾಮ ತಾನು ಊರಿನ ಜನರ ಬಾಯಿಗೆ ಸಿಕ್ಕು ಧರ್ಮದಿಂದ ಬಹಿಷ್ಕರಿಸಲ್ಪಡುತ್ತಾನೆ. ತನ್ನ ಒಂಟಿ ಬಾಳಿನಲ್ಲಿ ದೀಪವಾಗಿ ಬಂದ ಈ ಗರ್ಭಿಣಿ ಸ್ತ್ರೀ ಪದ್ಮ ಎಂದು. ಜೂಜಾಟಕ್ಕೆ ಬಲಿಯಾಗಿ ಸಾಲಗಾರನಾದ ಆಕೆಯ ಪತಿ, ತಲೆಮರೆಸಿಕೊಂಡು ಬೇರೆ ಊರಿನಲ್ಲಿ ಆತನ ಸ್ನೇಹಿತ ಸುಬ್ಬನ ಸಹಾಯದಿಂದ ಒಂದು ವ್ಯಾಪಾರ ಹೂಡುತ್ತಾನೆ. ವ್ಯಾಪಾರ ಕೊಂಚ ಕುದುರುತ್ತಿರುವಾಗ, ಸುಬ್ಬನನ್ನು ಊರಿಗೆ ಹೋಗಿ ಪದ್ಮಳನ್ನು ಕರೆದು ತರಲು ಹೇಳುತ್ತಾನೆ. ತನ್ನ ಪತಿಯು ಕಾಣದಾದರೂ, ವೇಷ ಮರೆಸಿಕೊಂಡು ಬಂದು ಪ್ರೀತಿತೋರಿ ಗರ್ಭಿಣಿಯಾದ ಪದ್ಮ, ಊರಿನ ಜನರ ಕಣ್ಣಲ್ಲಿ ತಪ್ಪಿತಸ್ಥೆ. ಎಲ್ಲ ಅಪವಾದಗಳನ್ನೂ ಹೊತ್ತು ತನ್ನ ಕುಟುಂಬದವರಿಂದಲೇ ನೊಂದಿದ್ದ ಪದ್ಮ, ಸುಬ್ಬ ಬಂದು ಕರೆದ ಕೂಡಲೇ ತನ್ನ ಗಂಡನನ್ನು ಸೇರಲು, ತನ್ನ ಪುಟ್ಟ ಮಗುವನ್ನು ಅಲ್ಲೇ ಬಿಟ್ಟು ಹೊರಟೇ ಬಿಡುತ್ತಾಳೆ. ಮಧ್ಯಪಾನದ ಚಪಲ ಚೆನ್ನಿಗನಾದ ಸುಬ್ಬ ಪದ್ಮಳನ್ನು ಕತ್ತಲ ಮಳೆಯ ರಾತ್ರಿ ಒಂದು ಕಡೆ ನಿಲ್ಲಲು ಹೇಳಿ ತಾನು ಕುಡಿದ ಅಮಲಿನಲ್ಲಿ ಮತ್ತೆಲ್ಲೋ ಮಲಗಿ ಬಿಡುತ್ತಾನೆ. ಕಾಯುವಷ್ಟೂ ಕಾದು, ಎದುರು ಕಂಡ ಯಾರೋ ದುಷ್ಟರಿಂದ ಪಾರಾಗಲು ಮಳೆಯಲ್ಲೇ ಪದ್ಮ ತನ್ನ ಶಕ್ತಿ ಮೀರಿ ಓಡಿ, ಕೊನೆಗೆ ಶೀನಪ್ಪನ ಮನೆಯ ಬಳಿ ಬಂದು ಬಿದ್ದಿರುತ್ತಾಳೆ. ಇದು ಪದ್ಮಳ ಕಥೆ. ತನ್ನ ಮನೆಯವರೆಲ್ಲರಿಂದ ದೂರಾಗಿ ಅನಾಥೆಯಾದ ಈಕೆ ಶೀನಪ್ಪನ ಬದುಕಿನ ಒಂದು ಭಾಗವಾಗಿ ಬೆಳೆದುಬಿಡುತ್ತಾಳೆ. ಆಕೆಗೂ ಶೀನಪ್ಪ ಬಹಳ ಹತ್ತಿರವೆನಿಸಿಬಿಡುತ್ತಾನೆ.
ದಿನಕಳೆದಂತೆ ಅವರಿಬ್ಬರ ಹೃದಯ ಪರಸ್ಪರರಿಗೆ ಮಿಡಿಯುತ್ತದೆ. ಆದರೆ ಇದು ತಪ್ಪು ಎಂದು ಇಬ್ಬರಿಗೂ ತಿಳಿಯುತ್ತದೆ. ಹೆರುವ ಸಮಯದಲ್ಲಿ ಮಗುವನ್ನು ಕಳೆದುಕೊಂಡ ನೋವಿನೊಂದಿಗೆ, ಶೀನಪ್ಪನಂತಹ ದೇವಮಾನವನನ್ನು ಬಿಟ್ಟು ಹೋಗಲು ಕಷ್ಟವಾದರೂ, ಆತನಿಗೆ ತನ್ನಿಂದ ಮತ್ತೆ ಅಪವಾದ ಬರಬಾರದು ಎಂದು ಮನೆ ಬಿಟ್ಟು ಹೊರಡುತ್ತಾಳೆ. ಆಕೆ ತನ್ನೂರು ಸೇರುವ ಹೊತ್ತಿಗೆ ತನ್ನ ಗಂಡ ಮತ್ತೊಂದು ಮದುವೆ ಆಗಿರುತ್ತಾನೆ. ತನ್ನ ಮೊದಲನೇ ಮಗು ಆಕೆಯನ್ನು ತಾಯಿ ಎಂದು ಗುರುತಿಸುವುದಿಲ್ಲ. ಇತ್ತ ಕಡೆ ಶೀನಪ್ಪನೂ ಇಲ್ಲ. ತನ್ನ ಸುತ್ತ ಎಲ್ಲರೂ ಇದ್ದರೂ ಆಕೆ ಮತ್ತೊಮ್ಮೆ ಅನಾಥೆಯಾಗುತ್ತಾಳೆ. ಈ ವಿಷಯವನ್ನು ಅರಿತ ಶೀನಪ್ಪ ಆಕೆಗಾಗಿ ಅತ್ಯಂತ ಮರುಕಪಡುತ್ತಾನೆ. ತಾನೊಂದು ಬಗೆದರೆ ದೈವ ಒಂದು ಬಗೆಯುತ್ತದೆ ಎಂಬ ನೋಟ್ ನಿಂದ ಕಥೆ ಮುಗಿಯುತ್ತದೆ……..
ಈ ಕಥೆಯಲ್ಲಿ ವಿಶೇಷವೆನಿಸುವ ಪ್ಲಾಟ್ ಆಗಲೀ, ನಿರೂಪಣೆಯಾಗಲೀ ಇಲ್ಲ. ಇನ್ನೂ ಹೇಳಬೇಕೆಂದರೆ ಕೆಲವು ಕಡೆ ಕಾವ್ಯಾತ್ಮಕ ರೂಪಕಗಳು ಹೆಚ್ಚಾಗಿ ಬಿಗಿತ ಕಡಿಮೆಯಾಗಿರುವುದೂ ಉಂಟು. ಇಡೀ ಕಥೆಯಲ್ಲಿ ಹೆಣ್ಣನ್ನು ಬಹಳ ದುರ್ಬಲ ಎಂದು ಚಿತ್ರಿಸಿರುವುದೂ ಇದೆ. ಇದು ಉದ್ದೇಶಿತ ಅಲ್ಲ ಬದಲಾಗಿ ಇದು ಅಂದಿನ ಕಾಲಧರ್ಮವಾಗಿತ್ತು ಮತ್ತು ಈ ಕಾದಂಬರಿಯಲ್ಲಿ ಅಡಿಗರ ಮುಖ್ಯ ಗಮನ ಬೇರೆಡೆ ಇದ್ದು, ಅವರು ಹೇಳಬೇಕಾದ್ದೇ ಈ ಪುರುಷ ಸ್ತ್ರೀ ಸಮಾನತೆಗಳಿಗಿಂತ ಮಿಗಿಲಾದ ಯಾವುದೋ ಸಾತ್ವಿಕ, ತಾತ್ವಿಕ ಆಧ್ಯಾತ್ಮವಾಗಿತ್ತು.
ಈ ಕಥೆಯಲ್ಲಿ ನಾವು ಗಮನಿಸಬೇಕಾದ್ದು ಅಡಿಗರ ನೈತಿಕ ಪ್ರಜ್ಞೆ, ಮಾನವೀಯ ಮೌಲ್ಯಗಳ ಪ್ರಬಲ ಪಡಿಮೂಡಿಕೆ. ಸ್ವಾತಂತ್ರೋತ್ತರ ಕಾಲದಲ್ಲಿ ಎದುರಾದ ಅನೇಕ ಚದುರುವಿಕೆ, ಬಿಕ್ಕಟ್ಟು, ತೊಂದರೆಗಳಲ್ಲಿ ಮುಖ್ಯವಾದ್ದು ಕಳೆದುಹೋಗುತ್ತಿದ್ದ ನೈತಿಕತೆ ಮತ್ತು ಆದರ್ಶಗಳು. ಈ ಆದರ್ಶಗಳು ಮತ್ತು ಅದಕ್ಕೆ ಎದುರಾಗಬಹುದಾದ ಮನುಷ್ಯ ಸಹಜ ಅಡೆತಡೆಗಳು ಮತ್ತು ಅವನ್ನೆಲ್ಲಾ ಹಿಮ್ಮೆಟ್ಟಿ, ಸತ್ಯದ ಕಡೆಗೆ ನಡೆಯುವುದು. ನಾವು ಇಷ್ಟೆಲ್ಲಾ ಸತ್ಯಾಸತ್ಯತೆಗಳನ್ನು ನಂಬಿ ನಮ್ಮ ಕರ್ತವ್ಯ ನಾವು ಮಾಡುತ್ತಿದ್ದರೂ ಕೊನೆಗೆ ವಿಧಿ ಹೇಗಿದೆಯೋ ಹಾಗೆ ಜರುಗುವುದು ಎಂಬ ಒಂದು ಆಧ್ಯಾತ್ಮಿಕ ಒಳನೋಟ.
ಒಬ್ಬ ಶ್ರೇಷ್ಠ ಕವಿ ಅಷ್ಟೇ ಶ್ರೇಷ್ಠ ಕಾದಂಬರಿಕಾರನೂ ಆಗಬೇಕಿಲ್ಲ ಎಂಬ ಸತ್ಯ ಅರಿತು ಈ ಕಥೆಯನ್ನು ನಾವು ಓದಬೇಕು. ಆಗ ಕಥೆಯ ನಿಜವಾದ ಸತ್ವ ಸವಿಯಲು ಸಿಗುತ್ತದೆ ಎಂಬ ಅರಿವಿನೊಂದಿಗೆ ಈ ಕಾದಂಬರಿಯಿಂದ ನನಗಾದ ಮತ್ತೊಂದು ಅನುಭವ ಎಂದರೆ, ಒಂದು ಕಥೆಯ ಮೂಲಕ ಒಬ್ಬ ಕಥೆಗಾರ ತನ್ನ ಮನಸ್ಸಿನ ತುಮುಲಗಳನ್ನು ಪ್ರಶ್ನೆಗಳನ್ನೂ ಬಿಚ್ಚುತ್ತಾ ಹೋಗುತ್ತಾನೆ. ತನ್ನ ಅನೇಕ ಹುಡುಕಾಟಗಳು, ಆದರ್ಶಗಳು, ವಿಕಾರತೆಗಳು, ಒಳ್ಳೆ ತನಗಳೂ, ಕೆಟ್ಟ ಆಲೋಚನೆಗಳೂ ತಮ್ಮ ತಮ್ಮ ಪಾತ್ರಗಳನ್ನು ಹೇಳಿಕೊಳ್ಳುತ್ತಾ ಒಂದು ಕಥೆಯ ನೆಲೆಯನ್ನು ಕಟ್ಟುತ್ತದೆ. ಈ ಮಾತನ್ನು ಸ್ಪಷ್ಟೀಕರಿಸಲು ಮತ್ತು ಇನ್ನು ಮುಂದೆ ಕೆಲವು ಮಾತುಗಳನ್ನು ಹೇಳಲು ನಾನು ಅನಂತ ಮೂರ್ತಿಯವರ ‘ಸಂಸ್ಕಾರ’ವನ್ನು ಹೋಲಿಕೆಗಾಗಿ ತೆಗೆದುಕೊಳ್ಳುತ್ತೇನೆ. ಎರಡೂ ಕಥೆಗಳ ಒಂದು ಭಾಗ ಕಾಮನ್ ಆಗಿ ಕಂಡುಬರುತ್ತದೆ. ಅದೇನೆಂದರೆ ಕಾಮ.
‘ಸಂಸ್ಕಾರ’ದ ಪ್ರಾಣೇಶಾಚಾರ್ಯ ಚಂದ್ರಿಗಾಗಿ ಸೋಲುತ್ತಾನೆ. ‘ಅನಾಥೆ’ಯ ಶೀನಪ್ಪ ಪದ್ಮಳಿಗಾಗಿ ಸೋಲುತ್ತಾನೆ. ಆದರೆ ಇವೆರಡಕ್ಕೂ ಕಂಡು ಬರುವ ವ್ಯತ್ಯಾಸ ಗಮನೀಯ. ಶೀನಪ್ಪ ತಾನು ಮಾಡಿದ್ದು ತಪ್ಪು ಎಂದು ತನ್ನ ನೈತಿಕ ಮಟ್ಟದಿಂದ ಕುಸಿದುಹೋಗುತ್ತಾನೆ ಮತ್ತು ತನ್ನಷ್ಟಕ್ಕೆ ಕೊರಗಿ, ತಾನು ಮಾಡಿದ್ದು ತಪ್ಪು ಎಂದು ತಿದ್ದಿಕೊಳ್ಳುತ್ತಾನೆ. ಇಲ್ಲಿ ಕಾಣುವುದು ಅಡಿಗರ ಮಾರಲ್ ವ್ಯಾಲ್ಯೂಸ್. ಪ್ರಾಣೇಶಾಚಾರ್ಯ ಚಂದ್ರಿಗೆ ಮನಸೋತದ್ದು ತಪ್ಪು ಅನ್ನಿಸಿದರೂ ಅದು ಮನುಷ್ಯ ಸಹಜ ಪ್ರತಿಕ್ರಿಯೆ. ತಾನು ಇಷ್ಟಕ್ಕಾಗಿ ಜಗತ್ತೇ ಮುಳುಗಿದಂತೆ ಕೂರುವ ಅವಶ್ಯಕತೆಯಿಲ್ಲ ಎಂದು ಮುಂದಿನ ಸ್ಟೆಪ್ ತೆಗೆದುಕೊಳ್ಳುತ್ತಾನೆ. ಇಲ್ಲಿ ಕಾಣುವುದು ಅನಂತಮೂರ್ತಿ ಅವರ ಹುಡುಕಾಟ, ತಾರ್ಕಿಕ ಮನೋಭಾವ, ಸಮಾನವಾಗಿ, ರಾಷನಲ್ ಆಗಿ ಬದುಕಿ ನಿರೂಪಿಸುವ ತುಡಿತ. ಹೀಗೆ ಶೀನಪ್ಪ ಒಬ್ಬ ಅತ್ಯುತ್ತಮ ಸಾತ್ವಿಕ ಮನುಷ್ಯನಾಗಿ ಕಂಡರೆ, ಪ್ರಾಣೇಶಾಚಾರ್ಯ ಒಬ್ಬ ರೆಬೆಲ್ ಆಗಿ (ನಾರಣಪ್ಪನಷ್ಟು ಅಲ್ಲದಿದ್ದರೂ) ಕಾಣುತ್ತಾನೆ. ಇದೇ ನೋಡಿ ಕಾದಂಬರಿ ಓದು ಮತ್ತು ಅದರ ಮನನ ಕೊಡುವ ಖುಷಿ ಅಂದರೆ!
ಅಡಿಗರಲ್ಲಿ ಮತಾಂಧತೆ, ಧರ್ಮಾಂಧತೆ, ಸ್ತ್ರೀ ಶೋಷಣೆ ಇವುಗಳ ವಿರುದ್ಧ ಧ್ವನಿ ಎತ್ತಿದ್ದರೂ, ಅದು ಅನಂತ ಮೂರ್ತಿ ಅವರಲ್ಲಿ ಕಂಡು ಬಂದಷ್ಟು ತೀವ್ರವಾಗಿ ಕಾಣುವುದಿಲ್ಲ. ಇದು ಕಾಲಾಂತರದ ಕಾರಣ ಮತ್ತು ಇತರ ವಯಕ್ತಿಕ ಕಾರಣಗಳೂ ಇರಬಹುದು. ಒಂದು ಕಾದಂಬರಿ ಇತಿಹಾಸದ ಓದೂ ಆಗಬಹುದಲ್ಲವೇ!
ಇದೇ ರೀತಿ ಮತ್ತೊಂದು ಕಂಪಾರಿಸನ್ ಕೊಡಬಹುದು ಎಂದರೆ ಅದು ಸ್ತ್ರೀ ಪಾತ್ರಗಳದ್ದು. ಎರಡು ಕಥೆಗಳಲ್ಲೂ ಸ್ತ್ರೀ ಶೋಷಣೆಯನ್ನು ಬಿಂಬಿಸಲಾಗಿದೆ. ಆದರೆ ‘ಅನಾಥೆ’ ತನ್ನ ಹೆಸರಿನಿಂದಲೂ ಹಿಡಿದು ಸ್ತ್ರೀಯನ್ನು ಒಂದು ಅನುಕಂಪದ ದೃಷ್ಟಿಯಿಂದ ತೋರುತ್ತದೆ. ಬಂದ ಕಷ್ಟವೆಲ್ಲಾ ಸಹಿಸಿಕೊಂಡು ನಗುತ್ತಾ ಇರುವ ಕ್ಷಮಯಾಧರಿತ್ರಿಯಾಗಿ ಸ್ತ್ರೀ ಕಾಣುತ್ತಾಳೆ. ಆದರೆ, ಸಂಸ್ಕಾರದಲ್ಲಿ ನಾರಣಪ್ಪನ ಶವ ಕೊನೆಗೂ ಸಂಸ್ಕಾರ ಮಾಡುವುದೇ ಒಂದು ಸ್ತ್ರೀ ಎಂದು ತೋರಿಸಲಾಗಿದೆ. ಇಡೀ ಕಥೆಯಲ್ಲಿ ಎಲ್ಲೂ ಸ್ತ್ರೀಯನ್ನು ಒಬ್ಬ ಅಸಹಾಯಕಿ, ಅಬಲೆ ಎಂದು ಚಿತ್ರಿಸಿಲ್ಲ. ಜೆನೆರೇಶನ್ ಗ್ಯಾಪ್ ಅನ್ನುತ್ತೆವಲ್ಲಾ ಅದೇ ಇರಬಹುದು ಇಲ್ಲೂ ಕಂಡುಬರುವ ಪ್ರಬಲ ಕಾರಣ.
ಒಂದು ಕಾದಂಬರಿ ಅಥವಾ ಕಥೆ, ನಾವು ಓದಿದಷ್ಟೂ ವಿಸ್ತಾರವಾಗಿ ತನ್ನ ಹರವುಗಳನ್ನು ತೆರೆದುಕೊಳ್ಳುತ್ತಾ ಹೋಗುತ್ತದೆ. ತನ್ಮೂಲಕ ಮತ್ತೆ ನಮ್ಮ ನಂಬಿಕೆಗಳು, ಹುಡುಕಾಟಗಳನ್ನು ತನ್ನ ದಾರಿಯನ್ನು ಹಿಡಿಯಲು ಗಟ್ಟಿಗೊಳಿಸುತ್ತದೆ ಮತ್ತು ಇದು ಬರೀ ಟೈಂಪಾಸ್ ಗೆ ಓದುವ ಓದು ಅಲ್ಲ ಎಂಬ ನನ್ನ ಅನುಭವ ಪುನರ್ನವೀಕರಣಗೊಂಡದ್ದು ಹೀಗೆ.
ಸೊಗಸಾದ ವಿಮರ್ಶೆ. ಕಾದಂಬರಿ ಓದಿನ ಖುಶಿಯನ್ನೂ ಸಿರಿಯನ್ನೂ ತುಂಬ ಚೆನ್ನಾಗಿ ನಿರೂಪಿಸಿದ್ದೀರಿ
I will have to read this novel.
Ello hudukikondu odteerallappa….
Sampu it made interesting reading
ನಿಮ್ಮೊಲಗಿನ ಸೂಕ್ಷ್ಮ ಓದುಗನಿಗೆ ನಮನ’ . ನೀವು ಓದಿದ್ದಸ್ತೆ ಅಲ್ಲ ನಮಗೂ ಓದಿಸಿದ್ದಿರಿ ‘ ಆ ಅ ಕಾದಂಬರಿಯ ಚಿತ್ರಣವನ್ನು ಎಳೆ ಎಳೆಯಾಗಿ ಬಿಚ್ಚಿಡುವ , ಮನುಸ್ಯ ಸಂಭಂದಗಳ ಸೂಕ್ಷ್ಮತೆ ಮತ್ತು ವೈರುಧ್ಯಗಳನ್ನು ಮನಸಿಗೆ ತಟ್ಟುವ ಕಾಡುವ ಹಾಗೆ ಬರೆದಿದ್ದೀರಿ ನಾನು ಆ ಕಾದಂಬರಿಯ ಹೆಸರೇ ಕೆಲಿರಲಿಲ್ಲ ಅನಂತಮೂರ್ತಿ ಅವರ ಸಂಸ್ಕಾರ ಹತ್ತಾರು ಬರಿ ಓದಿದ್ದೇನೆ ..”ನಾನು ಬ್ರಾಹ್ಮನ್ಯವನ್ನು ಬಿಟ್ಟರು ಬ್ರಾಹ್ಮಣ್ಯ ನನ್ನನ್ನು ಬಿಡಲಿಲ್ಲ ” ಎನ್ನುವ ಒಳಮಾತನ್ನು ಪ್ರಾನೆಶಚಾರಿ ಸ್ವಗತ ವನ್ನು ಹತ್ತಾರು ಬಾರಿ ಗೆಳೆಯರೊಂದಿಗೆ ಚರ್ಚಿಸಿದ್ದೆನೆ ಅಡಿಗರ ಆ ಹಳೆ ಕಾದಂಬರಿ ನನಗೆ ಹೊಸ ಕಾದಂಬರಿ ಯು ಹೌದು..
ಅದನ್ನು ಓದಲು ಪ್ರಯತಿಸುವೆ… ನಿಮ್ಮ ಬರಹಕ್ಕೆ ನಾನು ಅಭಿನಂದಿಸದೆ ಇರಲಾರೆ…
Anathe kaadambari naanu saha Odiddene. Adigara saahitya premadalli odiddene. Chennagide. Sampu ravare prashneyaaki avare uttara kottu olle vimarshe kottiddare. Dhanyavaadagalu. khushiyaaytu.
ಮೊದಲು ನಿಮ್ಮ ಓದುವ ರೀತಿಗೆ ಮತ್ತು ಓದಿದನ್ನು ನೀವು ದಕ್ಕಿಸಿಕೊಳ್ಳುವ ರೀತಿಗೆ ಒಂದು ಸಲಾಂ ಹೇಳಲೇ ಬೇಕು.. ತೀರಾ ಇತ್ತೀಚೆಗಷ್ಟೇ ಓದುವುದನ್ನ ಶುರು ಮಾಡಿರುವ ನಾನು ತೀರಾ ಇತ್ತೀಚಿನ ಹಲವು ಪುಸ್ತಕಗಳನ್ನಷ್ಟೇ ಓದಿದ್ದೇನೆ.. ಓದಬೇಕು, ಓದಲೇಬೇಕು ಅನ್ಕೊಂಡ ಹಲವು ಪುಸ್ತಕಗಳ ಪಟ್ಟಿ ಮಾಡ್ಕೊಂಡು ಬೆಂಗಳೂರು ಕಡೆ ಯಾವಾಗ ಬಂದರೂ ಪಟ್ಟಿಯಲ್ಲಿನ ಒಂದೆರಡು ಪುಸ್ತಕಗಳನ್ನು ಕೊಂಡು ಬಂದು ಓದಲು ಶುರು ಮಾಡಿದ್ದೇನೆ. ಎರಡು ಕಾದಂಬರಿಗಳ ವಸ್ತು ಸ್ಥಿತಿ ಮತ್ತು ಸಾಮ್ಯತೆಗಳ ಕುರಿತಾಗಿ ಬಹಳ ಚೆಂದದ ಪರಿಚಯ ಮಾಡಿ ಕೊಟ್ರಿ.. ಪಟ್ಟಿಯಲ್ಲಿ ಈ ಎರಡು ಪುಸ್ತಕಗಳನ್ನೂ ಸೇರಿಸಿಕೊಂಡೆ..
ಬಹಳ ಚೆಂದನೆಯ ಬರಹ 🙂