
’ಯಾವ ಸಂಬಂಧಕ್ಕೆ ಒಂದು ತಾರ್ಕಿಕ ಅಂತ್ಯ ಕೊಡಲು ಸಾಧ್ಯವಿಲ್ಲವೋ ಅದನ್ನು ಒಂದು ಸುಂದರ ತಿರುವಿನಲ್ಲಿ ನಿಲ್ಲಿಸಿಬಿಡಬೇಕು..’, ಈ ಸಾಲನ್ನು ನಾನು ಮೊದಲು ಓದಿದ್ದು ಯಂಡಮೂರಿ ವೀರೇಂದ್ರನಾಥರ ಯಾವುದೋ ಕಾದಂಬರಿಯಲ್ಲಿ. ಆಗಿನ್ನೂ ನಾನು ಹೈಸ್ಕೂಲು ಮುಗಿಸಿ, ಕನಸು ಕಣ್ಣುಗಳಲ್ಲೇ ಜಗತ್ತನ್ನು ನೋಡುತ್ತಿದ್ದೆ. ಆ ವಯೋಮಾನಕ್ಕೆ ನನಗೆ ಈ ವಾಕ್ಯ ಪರ್ಫೆಕ್ಟ್ ಅನ್ನಿಸಿತ್ತು. ಭಾವುಕತೆ ಇಷ್ಟ ಆದರೆ ವೈಚಾರಿಕತೆ ಬೆಸ್ಟು ಅನ್ನಿಸುತ್ತಿದ್ದ ವಯಸ್ಸು ಅದು. ನಿರ್ಧಾರ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಿದ್ದ ಮನಸ್ಸು. ನನ್ನ ಜಗತ್ತಿನ ಬಣ್ಣದ ಪೆಟ್ಟಿಗೆಯಲ್ಲಿದ್ದದ್ದು ಬರೀ ಗಾಢ ಬಣ್ಣಗಳೇ. ಬಣ್ಣಗಳ ನಡುವಿನ ಯಾವುದೇ ಶೇಡ್ ಇನ್ನೂ ಅರಿವಿಗೆ ಬಂದಿರಲಿಲ್ಲ. ಎಲ್ಲವನ್ನೂ ಕಪ್ಪು ಅಥವಾ ಬಿಳಿ ಬಣ್ಣದಲ್ಲೇ ನೋಡುವ ಮುಗ್ಧತೆ ಆಗ ಇತ್ತು. ಹಾಗಾಗಿ ತಾರ್ಕಿಕ ಅಂತ್ಯ ಕಾಣದ ಸಂಬಂಧವನ್ನು ಒಂದು ಸುಂದರ ತಿರುವು ನೋಡಿ ನಿಲ್ಲಿಸಿಬಿಡುವುದು ಅತ್ಯಂತ ಸರಳ ಹಾಗು ಸಮರ್ಪಕ ಮಾರ್ಗ ಅನ್ನಿಸಿಬಿಟ್ಟಿತ್ತು.
ಆಗ ಇದು ಹಾಡಿನ ಒಂದು ಸಾಲು ಅನ್ನುವುದು ಗೊತ್ತಿರಲಿಲ್ಲ. ಅದು ಗೊತ್ತಾಗಿದ್ದು ನಾನು ಡಿಗ್ರಿಗೆ ಹೋದಾಗ. ಅಲ್ಲಿಯವರೆಗೆ ನನ್ನ ಪಾಲಿಗಿದ್ದಿದ್ದು ಕನ್ನಡ ಪುಸ್ತಕಗಳು ಮತ್ತು ಕಾಲೇಜಿನ ಪುಸ್ತಕಗಳಲ್ಲಿ ಇಂಗ್ಲಿಷ್ ಅಷ್ಟೆ. ಹಿಂದಿ ಅಥವಾ ಉರ್ದು ಇನ್ನೂ ನನ್ನ ಕಡೆ ಕೃಪಾದೃಷ್ಟಿ ಬೀರಿರಲಿಲ್ಲ. ಅದಾಗಲು ಒಂದು ಸ್ವಾರಸ್ಯಕರ ಹಿನ್ನಲೆ ಇದೆ!
ಕಾಲೇಜಿನಲ್ಲಿ ನಮ್ಮ ಸೀನಿಯರ್ ಒಬ್ಬ ಗಂಧರ್ವನಂತೆ ಹಾಡುತ್ತಿದ್ದ. ಕಾಲೇಜಿನ ಯಾವುದೇ ಕಾರ್ಯಕ್ರಮದಲ್ಲೂ ಅವನ ದನಿ ಕೇಳಲೇಬೇಕು. ಅವನು ನಮ್ಮ ಗುಂಪಿನ ಕಡೆಗೇ ನೋಡಿ ಹಾಡುತ್ತಾನೆ ಎನ್ನುವುದು ನಮ್ಮ ಗುಮಾನಿ! ಅವನು ಭಾವ ಪೂರಿತವಾದ ಹಾಡುಗಳನ್ನೇ ಆಯ್ದುಕೊಂಡು ಹಾಡುತ್ತಿದ್ದರೆ, ಹುಡುಗ ಏನೋ ಹೇಳ್ತಿದ್ದಾನೆ ಅಂತ ನಮಗೆ ಖಾತ್ರಿಯಾಗುತ್ತಿತ್ತು ಆದರೆ ಏನು ಹೇಳ್ತಿದ್ದಾನೆ ಎಂತ ಯಾರಿಗೂ ಅರ್ಥವಾಗುತ್ತಿರಲಿಲ್ಲ! ಹೀಗಾಗಿ ರಾತ್ರೋರಾತ್ರಿ ಪಣ ತೊಟ್ಟು ಹಿಂದಿ ಕಲಿಯಲೇಬೇಕಾದ ತುರ್ತುಪರಿಸ್ಥಿತಿ ನಿರ್ಮಾಣ ಆಗಿಹೋಯ್ತು! ಆದರೆ ಹುಡುಗನ ಹಾಡು ಅರ್ಥ ಆಗ್ತಿಲ್ಲ, ಹಿಂದಿ ಕಲಿಸಿ ಅಂತ ಯಾರನ್ನಾದರೂ ಕೇಳೋಕ್ಕಾಗುತ್ತಾ?! ಹಾಗಾಗಿ, ಹಿಂದಿ ಹಾಡುಗಳ ಮೊರೆ ಹೋದೆವು. ಅದೇ ಸಮಯದಲ್ಲಿ ನನ್ನ ಕಸಿನ್ ಸಿಲೋನ್ ಸ್ಟೇಷನ್ ನ ಬಿನಾಕ ಗೀತಮಾಲ ಪರಿಚಯಿಸಿದ, ಒಂದು ರಾಶಿ ಹಿಂದಿ ಹಾಡುಗಳ ಕ್ಯಾಸೆಟ್ ಇತ್ತು ಅವನಲ್ಲಿ. ಹೀಗೆ ಹಾಡು ಕೇಳಿ ಕೇಳಿ ಕಲಿತ ಭಾಷೆ ಹಿಂದಿ ಮತ್ತು ಉರ್ದು. ಹೀಗಾಗೇ ಆ ಭಾಷೆಗಳ ಜೊತೆ ನನ್ನದು ಭಾವನಾತ್ಮಕ ಸಂಬಂಧ. ಹಾಗೆ ಕೇಳುತ್ತಿರುವಾಗ ಒಂದು ರಾತ್ರಿ ಹಠಾತ್ತಾಗಿ ಈ ಹಾಡು ನನ್ನ ಬಾಗಿಲು ತಟ್ಟದೆಯೇ ಒಳಗೆ ಬಂದುಬಿಟ್ಟಿತ್ತು.
’ಚಿತ್ರ ಗುಂ ರಾಹ್.’ ನಾನು ಸುಮ್ಮನೆ ಕೇಳುತ್ತಿದ್ದೆ. ಆದರೆ ಬರೆದದ್ದು ಸಾಹಿರ್ ಲೂಧಿಯಾನ್ವಿ ಅಂದರು ನೋಡಿ, ನಾನು ಹಾಡಿಗೆ ಮನಸ್ಸು ತೆರೆದಿಟ್ಟುಕೊಂಡು ಕುಳಿತುಬಿಟ್ಟಿದ್ದೆ. ಹಾಡು ಕೇಳುತ್ತಾ ಕೇಳುತ್ತಾ ನಾನು ಮೊದಲು ಓದಿದ ಆ ಸಾಲು ಈ ಹಾಡಿನಲ್ಲಿ ಬಂದು ನನಗೆ ಮಹಾನ್ ಥ್ರಿಲ್ ಅನ್ನಿಸಿಬಿಟ್ಟಿತ್ತು. ಎಲ್ಲೋ ಕಾಣದ ಊರಿನಲ್ಲಿ ಪರಿಚಿತ ಮುಖವೊಂದು ಎದುರಾದ ಹಾಗೆ. ಆ ಒಂದು ಸಾಲು ಇಡೀ ಹಾಡನ್ನು ನನ್ನದಾಗಿಸಿಬಿಟ್ಟಿತ್ತು. ಆಗೆಲ್ಲಾ ಗೂಗಲ್ ಅಣ್ಣಾ ಇರಲಿಲ್ಲ, ನಾನಿದ್ದ ಆ ತಾಲೂಕು ಕೇಂದ್ರದ ಕ್ಯಾಸೆಟ್ ರಿಕಾರ್ಡಿಂಗ್ ಅಂಗಡಿಗಳಿಗೆ ಅಲೆದು ಅಲೆದು, ಹುಡುಕಿ, ಈ ಹಾಡು ಸಿಕ್ಕ ಖುಶಿಗೆ ಕ್ಯಾಸೆಟ್ ನ ಮಿಕ್ಕ ಜಾಗದಲ್ಲಿ ಯಾವ್ದಾದ್ರೂ ರಫೀ ಹಾಡು ಹಾಕಿ ಪರವಾಗಿಲ್ಲ ಅಂತ ಹೇಳಿ ಬಂದಿದ್ದೆ. ( ಆ ಕ್ಯಾಸೆಟ್ ಅಂಗಡಿಯ ಆ ಎಲ್ಲಾ ಎಲ್ ಪಿ ರಿಕಾರ್ಡುಗಳು, ಕ್ಯಾಸೆಟ್ ಗಳು ಈಗ ಏನಾದವು ಪಾಪ….?) ಆಮೇಲೆ ಹಾಡು ಕೇಳುತ್ತಾ ಕೇಳುತ್ತಾ ಬರೆದಿಟ್ಟುಕೊಂಡಿದ್ದೆ.
Chalo ek bar phir se, ajnabee ban jaye ham dono
ಬಾ ಇನ್ನೊಮ್ಮೆ ಅಪರಿಚಿತರಾಗೋಣ ನಾನು – ನೀನು
ಇಲ್ಲ ನಿನ್ನ ಬಗ್ಗೆ ನಾನು ಯಾವುದೇ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ
ಇಲ್ಲ, ನೀನು ಸಹ ಪ್ರೀತಿ ತುಂಬಿದ ಕಣ್ಣಲ್ಲಿ ನನ್ನೆಡೆಗೆ ನೋಡುವುದು ಬೇಡ
ನನ್ನ ಮಾತುಗಳಲ್ಲಿ ನನ್ನ ಹೃದಯದ ಏರಿಳಿತ ಕಂಪಿಸುವುದು ಬೇಡ
ನಿನ್ನ ಮನದಲ್ಲಿ ಆಗುತ್ತಿರುವ ತೊಯ್ದಾಟ ನಿನ್ನ ನೋಟದಲ್ಲಿ ತುಳುಕುವುದು ಬೇಡ
ಬಾ ಮತ್ತೆ ಅಪರಿಚಿತರಾಗಿ ಬಿಡೋಣ ನಾನು–ನೀನು…
ಅಷ್ಟರಲ್ಲಿ ನನ್ನ ಜಗತ್ತಿನ ಬಣ್ಣಗಳಲ್ಲಿ ಕೆಲವು ಕಲಸುಮೇಲೋಗರವಾಗಿದ್ದವು, ಕೆಲವು ಬಣ್ಣಗಳು ಬಿಸಿಲನ್ನು ತಾಳದೆ ಮಂಕಾಗಿದ್ದವು, ಬಣ್ಣಗಳಲ್ಲಿಯೂ ಗಾಢತೆ, ತೆಳುವು ಸಾಧ್ಯ ಅನ್ನುವ ಅರಿವಾಗಿತ್ತು. ಹಾಗಿರುವಾಗಲೇ ದೂರದರ್ಶನದಲ್ಲಿ ಆ ಹಾಡು ನೋಡಿದ್ದೆ. ಸುನಿಲ ದತ್ತ್ ಪಿಯಾನೋ ನುಡಿಸುತ್ತಾ ಹಾಡುತ್ತಿರುತ್ತಾನೆ, ಅಶೋಕ್ ಕುಮಾರ್ ಸಿಗರೇಟು ಸೇದುತ್ತಾ, ಈ ಹಾಡು ತನ್ನ ಭಾವ ಮಟ್ಟವನ್ನು ತಾಕದು ಎನ್ನುವ ಒಂದು ನಿರ್ಲಕ್ಷ್ಯದಲ್ಲಿ ಓಡಾಡುತ್ತಿರುತ್ತನೆ. ಅದೇ ಫ್ರೇಮಿಗೆ ಮಾಲಾಸಿನ್ಹ ಬರುತ್ತಾಳೆ. ಅವಳ ಕಣ್ಣಲ್ಲಿ ಒಂದು ಸಣ್ಣ ಗಿಲ್ಟ್, ಒಂದು ನೋವು, ಅದನ್ನು ಅಶೋಕ್ ಕುಮಾರ್ ಗಮನಿಸಬಹುದೇನೋ ಅನ್ನುವ ಸಣ್ಣ ಆತಂಕ ಕಾಣುತ್ತಿರುತ್ತದೆ. ಹಾಡಿಗೆ ಮಾಲಾ ಸಿನ್ಹಾಳ ಪ್ರತಿಕ್ರಿಯೆ ಅಶೋಕ್ ಕುಮಾರ್ ನಲ್ಲಿ ಹುಟ್ಟಿಸುವುದು ಒಂದು ಸಣ್ಣ ಪ್ರಶ್ನೆಯನ್ನು ಮಾತ್ರ. ಆದರೆ ಯಾಕೋ ನನಗೆ ಆ ಸಿನಿಮಾ ನೋಡಬೇಕು ಅಂತ ಅನ್ನಿಸಲೇ ಇಲ್ಲ, ದೂರದರ್ಶನದಲ್ಲಿ ಬಂದಾಗಲೂ ಟಿ ವಿ ಎದುರಿಂದ ಎದ್ದು ಬಂದುಬಿಟ್ಟಿದ್ದೆ. ನನ್ನ ಮಟ್ಟಿಗೆ ಆ ಹಾಡು ಮತ್ತು ಆ ದೃಶ್ಯ ಮಾತ್ರ ಒಂದು ಚಿತ್ರ ಕಟ್ಟಿಕೊಟ್ಟಿತ್ತು, ಅಪೂರ್ಣವಾಗಿರುವ ಆ ದೃಶ್ಯವೇ ಹಾಡನ್ನು ಸಮರ್ಪಕವಾಗಿ ಕಟ್ಟಿಕೊಡುತ್ತದೆ ಅಂತ ಅನ್ನಿಸಿಬಿಟ್ಟಿತ್ತು. ಆ ದೃಶ್ಯ ಮತ್ತು ಆ ಹಾಡು ಅಪೂರ್ಣವಾಗಿದ್ದರೇನೇ ಅದರ ಸಾರ್ಥಕತೆ ಅನ್ನುವ ಹಾಗೆ…

ಹಾಡು ಮುಂದುವರೆಯುತ್ತದೆ…
ಯಾವುದೋ ಗೊಂದಲ ನಿನ್ನನ್ನು ಮುಂದೆ ಹೆಜ್ಜೆ ಇಡದಂತೆ ತಡೆಯುತ್ತಿದೆ
’ಆ ಪ್ರೀತಿ ಬೇರೊಬ್ಬರ ಪಾಲಿನದು’ ಅಂತ ಜನ ನನಗೂ ಹೇಳುತ್ತಾರೆ
ನನ್ನ ಪಯಣದಲ್ಲಿ ನನಗೆ ಜೊತೆಯಾದದ್ದು ಬರೀ ಅಪವಾದಗಳೇ
ನಿನ್ನ ಜೊತೆಯಲ್ಲೂ ನೀನು ಕಳೆದ ಆ ಎಲ್ಲಾ ರಾತ್ರಿಗಳ ಛಾಯೆ
ಬಿಡು, ಮತ್ತೆ ಅಪರಿಚಿತರಾಗಿ ಬಿಡೋಣ ನಾನು – ನೀನು
ಒಟ್ಟಿಗೆ ನಡೆದ ಹಾದಿಯನ್ನು ತುಂಡರಿಸುವುದು ಎಷ್ಟು ಕಷ್ಟ. ಒಂದು ಹಾಡನ್ನು ಸೀಳಿದರೆ ಅದು ಎರಡು ಹಾಡೇ ಆಗಬೇಕು ಅಂತಿಲ್ಲ ಅಲ್ಲವಾ? ಅಲ್ಲಿ ಎರಡು ಅಪಶೃತಿಗಳಾಗಿಬಿಟ್ಟರೆ?? ಆಕೆ ಇನ್ನೊಬ್ಬರಿಗೆ ಸೇರಿದವಳು ಅಂತ ಗೊತ್ತು, ಅವರಿಬ್ಬರೂ ಈಗಾಗಲೇ ಬೇರೆ ಆಗಿದ್ದಾರೆ, ಆದರೂ…. ಆತ ತನ್ನ ಮಟ್ಟಿಗೆ ಬೇರೆ ಆಗುವ ಕಾರಣಗಳನ್ನು ಕಟ್ಟಿಕೊಳ್ಳುತ್ತಿದ್ದಾನೆ ಇಲ್ಲಿ ಅನ್ನಿಸಿಬಿಡುತ್ತದೆ. ಅವಳ ಜೊತೆಯಲ್ಲಿ ಅವಳ ನಿನ್ನೆಗಳ ಭಾರ ಇದೆ ಎಂದು ಗೊತ್ತು, ಆದರೆ ಆ ನಿನ್ನೆಗಳಲ್ಲಿ ತಾನೂ ಇದ್ದೆ ಅಲ್ಲವಾ, ಹೀಗಾಗಿ ಅದು ತನ್ನದೂ ಅಲ್ಲವಾ ಎನ್ನುವುದು ಇವನ ಅಳಲು. ಇಲ್ಲಿ ಆತ ಹಾಡುತ್ತಿರುವುದು ಅವಳನ್ನು ಒಪ್ಪಿಸಲೋ ಅಥವಾ ತನ್ನನ್ನು ನಂಬಿಸಿಕೊಳ್ಳಲೋ ಅನ್ನುವುದು ನಮ್ಮನ್ನು ಕಾಡುತ್ತಲೇ ಇರುತ್ತದೆ.
ಹಾಡು ಕೊನೆಯಾಗುತ್ತಾ ಬರುತ್ತದೆ…
ಒಂದು ಪರಿಚಯ ನಮ್ಮನ್ನು ಕಾಡುವ ಖಾಯಿಲೆ ಆದಾಗ ಅದನ್ನು ಮರೆತುಬಿಡಬೇಕು
ಒಂದು ಸಂಬಂಧ ಹೊರೆ ಅನ್ನಿಸಿದಾಗ ಅದನ್ನು ಕಳಚಿಕೊಂಡುಬಿಡಬೇಕು
ಯಾವ ಕಥೆಯನ್ನು ಒಂದು ತಾರ್ಕಿಕ ಅಂತ್ಯದವರೆಗೂ ಕೊಂಡೊಯ್ಯಲಾಗುವುದಿಲ್ಲವೋ
ಅದನ್ನು ಒಂದು ಸುಂದರ ತಿರುವು ನೋಡಿ ನಿಲ್ಲಿಸಿಬಿಡಬೇಕು …..
ಹಾ ನಿಲ್ಲಿಸಿಬಿಡಬೇಕು?? ಆದರೆ ಎಲ್ಲಾ ಕಥೆಗಳೂ ಒಂದು ತಾರ್ಕಿಕ ಅಂತ್ಯದ ಗ್ಯಾರೆಂಟಿಯ ಹಣೆಬರಹ ಹೊತ್ತು ಹುಟ್ಟಿರಬೇಕಲ್ಲಾ? ಎಲ್ಲಾ ಸಂಬಂಧಗಳೂ ಒಂದು ಚೌಕಟ್ಟಿನ ಭದ್ರತೆಯ ಖಾತ್ರಿಯಲ್ಲಿ ಬೆಸೆದುಕೊಂಡಿರಬೇಕಲ್ಲ? ಸ್ವರವಾದ ಎಲ್ಲಾ ರಾಗಗಳೂ ಹಾಡಾಗುವ ಹಟ ಹಿಡಿಯಬಹುದು ಆದರೆ ಆ ನಿಯತಿ ಬೇಕಲ್ಲವಾ? ನಮ್ಮನ್ನು ಕಾಡುವ ಹಂತ ತಲುಪಿದ ಮೇಲೆ ಪರಿಚಯ ಕೇವಲ ಪರಿಚಯವಾಗಿ ಉಳಿದಿರುವುದಿಲ್ಲ, ಅದು ಒಂದು ಸಂಬಂಧವಾಗಿಬಿಟ್ಟಿರುತ್ತದೆ. ಆದರೆ ಹೊರೆ ಅನ್ನಿಸಿದ ಸಂಬಂಧಗಳನ್ನೆಲ್ಲಾ ಕಳಚಿಟ್ಟುಬಿಡಲು ಸಾಧ್ಯವಾ? ಬದುಕು ಒಂದು ಬ್ಯಾಲೆನ್ಸ್ ಶೀಟ್ ಅಲ್ಲವಲ್ಲಾ, ಸಂಬಂಧಗಳನ್ನು ಕ್ರೆಡಿಟ್ ಅಥವಾ ಡೆಬಿಟ್ ಎಂದು ವರ್ಗೀಕರಿಸಿ, ಆ ಆ ಕಾಲಂಗಳಲ್ಲಿ ಕೂರಿಸಿ, ಬ್ಯಾಲೆನ್ಸ್ ಟ್ಯಾಲಿ ಮಾಡಲು?
ಹೆಸರಿಲ್ಲದ, ಚೌಕಟ್ಟಿಲ್ಲದ, ಬಂಧವಿಲ್ಲದ ಸಂಬಂಧಗಳನ್ನು ಅಷ್ಟು ಸುಲಭವೇ ಕಳಚಿ ಮುನ್ನಡೆಯುವುದು?
ಒಂದು ಸುಂದರ ತಿರುವು ನೋಡಿ ಅಲ್ಲಿಗೆ ಕಥೆಗೊಂದು ಮುಕ್ತಾಯ ಹಾಡಿಬಿಡಬೇಕು … ಕೈ ಬಿಡಿಸಿಕೊಳ್ಳುವ ತಿರುವು ಯಾವುದು ಬದುಕಿನಲ್ಲಿ? ಯಾವ ತಿರುವಿನಲ್ಲಿ ಬೆಸೆದ ಕೈಯಿಂದ ಕೈ ಎಳೆದುಕೊಂಡರೆ ಕಡಿಮೆ ನೋವಾದೀತು? ಸಂಬಂಧದ ಕುರೂಪ ಮುಖಗಳನ್ನೇ ಸಹಿಸಿ, ಕಾದಾಡಿ, ಬಡಿದಾಡಿ ಉಳಿಸಿಕೊಳ್ಳುವ ಮನಸ್ಸುಗಳಿಗೆ ಅದನ್ನು ಸುಂದರ ತಿರುವಿನಲ್ಲಿ ಬಿಟ್ಟುಬರುವ ಪಾಠ ಹೇಳುವವರು ಯಾರು? ಆದರೂ ಹಾಗೆ ಬಿಟ್ಟು ಬಂದ ಮೇಲೆ ಅದು ಸುಂದರವಾಗಿ ಉಳಿಯಲು ಸಾಧ್ಯವೇ?
ವಿದಾಯ ಹೇಳುವಾಗ ಒಂದು ಖುಷಿಯೊಂದಿಗೆ, ಒಂದು ನೆಮ್ಮದಿಯೊಂದಿಗೆ, ಒಂದು ಗೌರವದೊಂದಿಗೆ ವಿದಾಯ ಹೇಳುವುದು ಸರಿ. ನಿಜ, ಆದರೆ ವಿದಾಯದ ಹಾಡು ಎರಡೂ ಹೃದಯಗಳಲ್ಲೂ ಇದ್ದರೆ ಇದು ಸಾಧ್ಯ, ಆದರೆ ವಿದಾಯ ಒಬ್ಬರಿಗೆ ಬಂಧನವಾಗಿ, ಇನ್ನೊಬ್ಬರಿಗೆ ಬಿಡುಗಡೆಯಾಗಿ ಕಂಡರೆ…?
ಈ ಹಾಡು ಎತ್ತಿದ ಪ್ರಶ್ನೆಗಳಿಗೆ ನನಗಿನ್ನೂ ಉತ್ತರ ಸಿಕ್ಕಿಲ್ಲ…
ಅಷ್ಟರಲ್ಲೇ ಇನ್ನೊಂದು ಗಜಲ್ ಸಾಲು ಬಂದು ನನ್ನ ಸೆರಗ ಹಿಡಿದು ನಿಲ್ಲಿಸಿತು, ’ಯಹಾ ಹರ್ ಶಕ್ಸ್ ರಿಹಾಯಿ ಮಾಂಗ್ ತಾ ಹೈ ಔರ್ ರಿಹಾ ಹೋನೇ ಸೆ ಡರ್ ತಾ ಹೈ…’. ಇಲ್ಲಿ ಪ್ರತಿಯೊಬ್ಬರಿಗೂ ಬಿಡುಗಡೆ ಬೇಕು, ಆದರೆ ಪ್ರತಿಯೊಬ್ಬರಿಗೂ ಬಿಡುಗಡೆ ಹೆದರಿಕೆ ಹುಟ್ಟಿಸುತ್ತದೆ…. ಹೀಗೆ ಬಿಡುಗಡೆಯ ಆಸೆ ಮತ್ತು ಆಧಾರ ಕಳೆದುಕೊಳ್ಳುವ ಹೆದರಿಕೆಯಲ್ಲಿ ಸಾಧ್ಯವೇ ಸಂಬಂಧಗಳ ಕೈ ಕೊಡವಿಕೊಳ್ಳುವುದು?
ಸಂಧ್ಯಾರಾಣಿ ಕಾಲಂ : ಹೀಗೊಂದು ಹಾಡಿನ ಬೆನ್ನು ಹಿಡಿದು…
ನಿಮಗೆ ಇವೂ ಇಷ್ಟವಾಗಬಹುದು…

ತುಂಬಾನೇ ಚೆನ್ನಾಗಿದೆ
ಸಾಹಿರ್ ಲುಧಿಯಾನ್ವಿ ಎಂತಹ ಚೆಂದದ ಕವಿ, ಗೀತ ರಚನೆಕಾರ. ಒಳ್ಳೆಯ ಹಾಡನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು ಮೇಡಂ.
ನನ್ನನ್ನೂ ಕಾಡಿದ ಗೀತೆ ಅದು.
Pade pade ade haadanne keluttiddene….
Awesome sandhya.We saw that movie along with ur father ( our Annaiah) in punganur.U reminded me those days that we spent togetherly.U wove the essay very nicely around the song. Great!
laya bharita hindhi bhaasheya kampu haagene…sumne aa gale lag jaa antha andaruu adondu haadagi biduttade…
Enu helali anthle gottagtilla sandhya …
ಒಂದು ಪರಿಚಯ ನಮ್ಮನ್ನು ಕಾಡುವ ಖಾಯಿಲೆ ಆದಾಗ ಅದನ್ನು ಮರೆತುಬಿಡಬೇಕು, mareyalaagadu karana
ಯಹಾ ಹರ್ ಶಕ್ಸ್ ರಿಹಾಯಿ ಮಾಂಗ್ ತಾ ಹೈ ಔರ್ ರಿಹಾ ಹೋನೇ ಸೆ ಡರ್ ತಾ ಹೈ… sathya. Chennagide madam
tumba chennagide sandhya. ondu adhbutha hadannu nenapisiddakke thanks,
There is a slight correction. Please use this one instead of the one sent earlier
ಇದು “ಅಫಸಾನ”.ಒಂದು ಪ್ರೆಮ ಕಥೆ.ಆತ ತುಂಡರಿಸುವ ಬಗ್ಗೆ ಮಾತನಾಡುತ್ತಿಲ್ಲ ಅನ್ನಿಸುತ್ತದೆ .ಇಂಥಹದೊಂದು ಪ್ರೇಮ ಕಥೆಗೆ ಯಾವುದೇ ತಾರ್ಕಿಕ ಅಂತ್ಯ ಕಾಣಿಸಲು (ನಮ್ಮಿಬ್ಬರಿಂದ)ಯಾವಾಗ ಸಾಧ್ಯವಿಲ್ಲವೋ ಆಗ ಇದಕ್ಕೊಂದು ಸುಂದರ ತಿರುವು ಕೊಟ್ಟು ಸಾಧ್ಯವಾದರೆ ಅಲ್ಲಿಗೇ ಬಿಟ್ಟು ಬಿಡುವದು ಒಳ್ಳೆಯದು ಅನ್ನುತ್ತಾನೆ(“ಛೋಡನಾ ಅಚ್ಚಾ” ಬಿಡುವದೇ ಒಳ್ಳೆಯದು ಅಂತಾನೆ ಆತ.)ಇಬ್ಬರಿಗೂ ಗೊತ್ತು ಅದು ಸಾಧ್ಯವಿಲ್ಲ ಅಂತ.ಹಾಡಿನ ಪೂರ್ತಿ ಈ ಧ್ವನಿ ಇದೆ.ಆಕೆಗೆ ತಿಳಿಸಿ ಹೇಳಿ ವಿದಾಯ ಹೇಳುವ ಪ್ರೇಮಿ ಹತಾಶನಾಗಿದ್ದಾನೆ. ಈಗಾಗಲೇ ನನ್ನ ಜೊತೆ ಸಂಗಾತಿಯಾಗಿ ನನ್ನ (ಹೆಸರಿಗೆ ತಗುಲಿದ) ಕಳಂಕ ಇದೆ.(ಮೆರೆ ಹಮರಾಹ ಭಿ ರುಸವಾಯಿಯಾನ್ ಹೈನ್ ಮೇರೆ ಮಾಜಿ ಕೀ.) ನಿನ್ನಲ್ಲಿ (ನಾವಿಬ್ಬರೂ)ಕಳೆದ ರಾತ್ರಿಗಳ ನೆರಳುಗಳಿವೆ.ಇದು ಆಕೆಯ ಗಂಡನ ಎದುರಿನಲ್ಲಿಯೇ ಚಿತ್ರಿತವಾಗಿದ್ದರಿಂದ ಸ್ವಲ್ಪ ಅಭಾಸವೆನ್ನಿಸುತ್ತದೆ.ಆದರೆ ಇಂಥ ಒಳ್ಳೇ ಸಿನೆಮೆಟಿಕ್ ಸನ್ನಿವೇಷವನ್ನ ಯಾವ ಸ್ಕ್ರಿಪ್ಟ್ ರೈಟರ್ ಬಿಡಲು ಇಷ್ಟಪಡುತ್ತಾನೆ? ನೇರವಾಗಿ ನಾಜೂಕಾದ ಭಾವನೆಗಳನ್ನು ಈ ರೀತಿ ವ್ಯಕ್ತಪಡಿಸುವಾತ ಆ ಇನ್ನೊಬ್ಬ ಗಂಡಸಿಗೆ ಅದು ಅರ್ಥವಾಗುತ್ತಿಲ್ಲ ಅಂತ ಅಂದುಕೊಳ್ಳುವದು ಸಾಧ್ಯವೇ ? ನೀನು ನನ್ನ ಕಡೆ ನೋಡುವಾಗ,ನಾನು ಮಾತನಾಡುವಾಗ ಇಂಥಿಂತಹದ್ದು ವ್ಯಕ್ತವಾಗದಿರಲಿ ಅಂತಾನೆ ಆತ. ಹೆಜ್ಜೆ ಮುಂದಿರಿಸಲು ನಿನಗೆ ಅನೇಕ ಅಡಚಣೆಗಳಿವೆ. ನನಗೆ ಜನ ಅಂತಾರೆ ಇದು(ಈ ಹೆಣ್ಣು)ಬೇರೆಯವರಿಗೆ ಸೇರಿದ್ದು. ಅಸಫಲ ಪ್ರೇಮದ ಕವಿತೆಯಾಗಿ ಇದು ಸಾಹಿರ್ ಬರೆದ ಒಂದು ಸುಂದರ ಅಫಸಾನ.ನನ್ನ ಮೆಚ್ಚಿನ ಹಾಡಿದು. ರವಿ ಸಂಗೀತ,ಮಹೇಂದ್ರ ಕಪೂರ್ ಕಂಠ ಮರೆಯುವದು ಅಸಾಧ್ಯ.
ತರ್ಕ ಎಂಬುದು ಕಷ್ಟದ್ದು
ಸ್ನೇಹ-ಸಂಬಂಧಗಳೂ ಕಷ್ಟ.
ಇನ್ನು ಅಂತ್ಯ ಮತ್ತು ತಿರುವುಗಳು ಉಸಿರುಗಟ್ಟಿಸುವಷ್ಟು ಕ್ಲಿಷ್ಟ.
ನನಗಂತೂ ಎಷ್ಟು ಸಂಕೀರ್ಣ ಎನಿಸುತ್ತವೆಂದರೆ..
ಸಂಧ್ಯಾ..
ಬರೆಯಲೇ ಹೆದರುವಷ್ಟು.
ಅಂಥ ವಸ್ತುವನ್ನು ಆಪ್ತವಾಗಿ,ಎಡಬಲ,ಅಕ್ಕಪಕ್ಕ ಎಲ್ಲ ತಗೊಂಡು ವಿವರಿಸಿದ್ದೀರಿ.
ಅಭಿನಂದನೆ ನಿಮಗೆ.
Aa haadannu nenepisidakke Thanks Sandhya akka 🙂
ತುಂಬಾ ಚೆನ್ನಾಗಿದೆ.
ಹೆಸರಿಲ್ಲದ, ಚೌಕಟ್ಟಿಲ್ಲದ, ಬಂಧವಿಲ್ಲದ ಸಂಬಂಧಗಳನ್ನು ಅಷ್ಟು ಸುಲಭವಲ್ಲ, ನಿಜ.
Madam,tumba ishta aaytu.
ನನ್ನದೂ ನಿಮ್ಮ ಪ್ರಶ್ನೆಗಳೇ. 🙂 ಚೆಂದ ಬರೆದಿದ್ದೀರ.
ಸುಂದರವಾದ ಲೇಖನ..
ಸಾಹೀರ್ ಲೂಧಿಯನ್ವಿಯವರು ಎರಡು ಪ್ರೇಮ ವೈಫಲ್ಯಗಳನ್ನು ಅನುಭವಿಸಿದ್ದರು…ಖ್ಯಾತ ಕವಿಯತ್ರಿ ಅಮೃತಾ ಪ್ರೀತಮ ಮತ್ತು ಹಾಡುಗಾರ್ತಿ ಸುಧಾ ಮಲ್ಹೊತ್ರ ಜೊತೆ.. ಮದುವೆ ಆಗುವ ಹಂತಕ್ಕೆ ಬಂದಿದ್ದ ಸಂಬಂಧಗಳು ಮುರಿದು ಬಿದ್ದಿದ್ದವು. ಗುರುದತ್ತ ನಿರ್ಮಿಸಿದ ‘ಪ್ಯಾಸಾ’, ಯಶ್ ಚೊಪ್ರಾ ನಿರ್ಮಾಣದ ‘ಕಭಿ ಕಭಿ’ ಇವೆರಡೂ ಚಿತ್ರಗಳಲ್ಲಿ ಬರುವ ಶಾಯರ ಪಾತ್ರ ಲೂದಿಯಾನ್ವಿಯವರ ಛಾಯೆ ಹೊಂದಿತ್ತು..ಅವರದೇ ಕಥೆಯಾಗಿತ್ತು ಎನ್ನುತ್ತಾರೆ. ಇಂಥ ಕವಿ ‘ಸುಂದರ ತಿರುವಿನಲ್ಲಿ ನಿಲ್ಲಿಸುವ’ ಮಾತನಾಡಿದ್ದು ತಮ್ಮ ಜೀವನದ ಅನುಭವದಿಂದಲೇ ಇರಬೇಕು.
ಈ ಲೇಖನ ಓದಿದಾಗ ನನಗೆ ಇನ್ನೊಬ್ಬ ಮೆಚ್ಚಿನ ಗುಲ್ಞಾರರು ಬರೆದ..ಖಾಮೋಶಿ ಚಿತ್ರದ
ಹಮ್ ನೆ ದೇಖಿ ಹೈ ಉನ್ ಆಂಕೊಂ ಕಿ ಮೆಹಕತಿ ಖುಷಬೂ,,
ಹಾಥ್ ಸೆ ಛೂಕೆ ಇಸೆ ರಿಸ್ತೊಂಕಾ ಇಲ್ಙಾಮ್ ನ ದೊ.
ಸಿರ್ಫ ಎಹಸಾಸ್ ಹೈ ಎ ರೂಹ ಸೆ ಮೆಹಸೂಸ ಕರೊ
ಪ್ಯಾರ ಕೊ ಪ್ಯಾರ ಹಿ ರಹನೆ ದೊ
ಕೊಯಿ ನಾಮ ನ ದೊ
ಹಾಡು ನೆನಪಿಗೆ ಬಂತು..ಇದು ಕನ್ನಡದ ‘ಮುಂಗಾರು ಮಳೆ’ಯ
ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ ಪ್ರೇಮದ ಬಂಧನದಲ್ಲಿ
ಮನಸಲ್ಲಿ ಇರಲಿ ಭಾವನೆ
ಮಿಡಿಯುತಿರಲಿ ಮೌನ ವೀಣೆ ಹೀಗೆ ಸುಮ್ಮನೆ..
ಹಾಡಿಗೆ ಸ್ಪೂರ್ತಿಯಾಯಿತೇನೊ ಅಂತ ನನಗನಿಸುತ್ತದೆ. ಸಂಬಂಧ, ಭಾವನೆಗಳ ಸಂಗಡ ಹೀಗೂ ಕೂಡ ರಾಜಿ ಮಾಡಿಕೊಳ್ಳಬಹುದೇನೊ..ಅದಷ್ಟು ಸುಲಭವಲ್ಲದಿದ್ದರೂ..
ಲೇಖನ ಓದಿ ಮೆಚ್ಚಿಕೊಂಡ ನಿಮಗೆ ಧನ್ಯವಾದಗಳು. ಈ ಲೇಖನ ಓದಿ ಸ್ನೇಹಿತ ಸಂವರ್ಥ ಫರಾಜ಼್ ನ ಮತ್ತೊಂದು ಸಾಲು ವಿದಾಯದ ಇನ್ನೊಂದು ಮಗ್ಗುಲನ್ನು ಹೇಳುತ್ತದೆ ಎಂದರು. ಆ ಸಾಲು ನಿಮಗಾಗಿ..
Faraaz:
iss sey pehale ki bewafaa ho jaaye,
kyun na aye dost hum judaa ho jaaye.
too bhi heere se ban gaya hai paththar,
hum bhi kal jaane kya se kya ho jaaye.
bandagi humne chod dee ‘Faraaz’,
kya kare log jab khudaa ho jaaye.
ಸಂಧ್ಯಾರಾಣಿ
Dear Sandhya,
I want to say that you have a very nice and lively style of writing. I also read your other article about the movie, ‘ ye jawani hai diwani’. I had seen that movie and had liked it but after reading your write up, I appreciated the movie more.
And I enjoyed reading this write up about one of Sahir Ludhiyanwi’s many other gems, ‘ chalo ek bar phir se….’, which was my favorite too at one point, when we were just opening our eyes to see the romantic world! May be because of that beautiful first line I guess. You made this article more interesting by sharing what forced you to learn the language Hindi.☺
Vidya Gadagkar
NANTIGE HESARE BEDA ALLAVE.BAHALA ISHTAVAYTU.
ತುಂಬಾ ಇಷ್ಟವಾಯಿತು . ಆ ಹಾಡು ಅದರ ಭಾವ ,ನೀವು ಅರ್ಥ ಮಾಡಿಕೊಂಡ ರೀತಿ ಎಲ್ಲವೂ . ನನ್ನ ಪ್ರಿಯವಾದ ಹಾಡು ಅದು . ಅದರ ಜೊತೆಗೆ ಮತ್ತೊಂದು ಹಾಡು ಸದಾ ನನ್ನ ನೆನಪಲ್ಲಿ ಉಳಿದಿದ್ದು ‘ಆ ಲೌಟ್ಕೆಆಜಾ ಮೇರೆ ಮೀತ್.. ತುಝೆ ಮೇರೆ ಗೀತ್ ಬುಲಾತೆ ಹೈ’
ಆ ಸುಂದರ ತಿರುವಿಗೆ ತಿರು ತಿರುಗಿ ಹೊಗುತ್ತಲಿರುವದೆ ಇನ್ನೂ ಚೆಂದ. ತುಂಬಾ ಒಳ್ಳೆಯ ಲೇಖನ,