ಎಲ್ಲರ ಕಣ್ಣಿಗೆ ಮಣ್ಣು ತೂರುತ್ತಿರುವ ಬಾಲಗಂಗಾಧರ್ – ಜಿ ಎನ್ ನಾಗರಾಜ್ ಬರೀತಾರೆ

ಭಾಗ ೪

(ಭಾಗ ೩ ಓದಲು ಇಲ್ಲಿ ಕ್ಲಿಕ್ಕಿಸಿ)

‘ ಕಾಯಕವೇ ಕೈಲಾಸ ‘, ಅದೇ ಯಾತ್ರೆ , ಜಾತ್ರೆ ಎನ್ನುವ ವಚನ ಧರ್ಮ ಕಾಯಕಕ್ಕೆ ಆಧಾರವಾದ ಕಾಯಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತದೆ. ಕಾಯವೇ ಕೈಲಾಸ-ದೇಹವೇ ದೇಗುಲ ಎನ್ನುತ್ತದೆ. ಈ ವಿಚಾರವನ್ನು ಹೇಳುವ ಅನೇಕ ವಚನಗಳಿವೆ . ಅದನ್ನು ಲೆಕ್ಕ ಹಾಕಿ ಹತ್ತಿಪ್ಪತ್ತು ಮಾತ್ರ ಎಂದು ಹೇಳಬಹುದು. ಆದರೆ ಇಷ್ಟ ಲಿಂಗ ಕಲ್ಪನೆಯ ಮೂಲವೇ ಈ ದೇಹ ತತ್ವ ಎಂದು ಈ ತಂಡಕ್ಕೆ ಅರಿವಾಗದೇ ಹೋದದ್ದು , ಜಾತಿ ವ್ಯವಸ್ಥೆಯ ವಿರೋಧಕ್ಕೂ ಈ ದೇಹ ತತ್ವಕ್ಕೂ ಬಿಡಿಸಲಾಗದ ಸಂಬಂಧವಿದೆ ಎಂಬ ಬಗ್ಗೆ ಅನ್ವೇಷಣೆ ಮಾಡದೇ ಇದ್ದದ್ದು ಜಾಣ ಕುರುಡೋ ಅಥವಾ ನಿಜವಾದ ಕುರುಡೋ ಎನ್ನುವದನ್ನೂ ಸಂಶೋಧನೆಗೆ ಒಳಪಡಿಸಬೇಕಾಗಿದೆ.

ಕಾಯವೇ ಕೈಲಾಸ ಎಂಬ ವಿಷಯ ವಚನ ಧರ್ಮದ ಪ್ರಧಾನ ‘ ಆಧ್ಯಾತ್ಮಿಕ ‘ ತತ್ವವಾದ ಲಿಂಗಾಂಗ ಸಾಮರಸ್ಯದ ಆಧಾರವಾಗಿದೆ. ಈ ತತ್ವವನ್ನು ಪ್ರಸ್ತಾಪಿಸುವ ವಚನಗಳು ಎಷ್ಟು ಸಾವಿರ ಸಂಖ್ಯೆಯಲ್ಲಿ ಇವೆ ಎಂಬುದನ್ನು ಈ ಸಂಶೋಧಕರ ತಂಡ ಲೆಕ್ಕ ಹಾಕಲಿ. ಈ ಬಗ್ಗೆ ಲಿಂಗ ಮತ್ತು ಅಂಗದ ನಡುವೆ ಸಾಮರಸ್ಯ ಎಂಬುದೇ, ಈ ಮಾನವ ದೇಹ ಮೈಲಿಗೆಯದು, ಅದನ್ನು ಜಪ,ತಪ ವ್ರತ ಉಪವಾಸಗಳಿಂದ ದಂಡಿಸಿ, ಸೊರಗಿಸಿ ದೈಹಿಕ ಬಯಕೆಗಳನ್ನು ಅಣಗಿಸಬೇಕು ಅದುವೇ ಮುಕ್ತಿಯ ಮಾರ್ಗ ಎಂಬ ಅಂದಿನ ಸಂದರ್ಭದಲ್ಲಿ ಅತ್ಯಂತ ಮಹತ್ವದ ವಿಷಯ. ಅದೇ ಸಮಯದಲ್ಲಿ ಕಾಯಕವೇ ಕೈಲಾಸ ಎಂಬ ವಚನಗಳ ಮೂಲ ತತ್ವಕ್ಕೆ ಅತಿ ಅಗತ್ಯವಾದ ವಿಚಾರ.

ಈ ಲಿಂಗಾಂಗ ಸಾಮರಸ್ಯ ಎಂಬ ತತ್ವಕ್ಕೆ ಮೂಲಾಧಾರ 36 ತತ್ವ ಅಥವಾ ಷಟ್ .. ಎಂಬ ತತ್ವ ಸಮೂಹ . ಇವುಗಳಲ್ಲಿ ಅಂಗ ತತ್ವಗಳು 24 ಲಿಂಗ ತತ್ವ 12 ಸೇರಿ 36 ತತ್ವಗಳು. ಇವು ಹಲವು ಬಾರಿ ನೇರವಾಗಿ ಅಥವಾ ಬೆಡಗಿನ ವಚನಗಳಲ್ಲಿ ಪ್ರಸ್ತಾಪಿಸಲ್ಪಟ್ಟ ತತ್ವಗಳು. ಅಂಗ ತತ್ವಗಳು ಲಿಂಗ ತತ್ವಗಳೊಡನೆ ಬೆರೆಯುವುದೇ ವಚನಗಳು ಪದೇ ಪದೇ ವಿವರಿಸುವ ಐಕ್ಯ ಸ್ಥಿತಿ , ಇದೇ ಷಟ್ಸ್ಥಲ ಮಾರ್ಗದ ಗುರಿ, ಅದರ ಅಂತಿಮ ಹಂತವಾದ ಐಕ್ಯ ಸ್ಥಲ. ಇದನ್ನೇ ವಚನಗಳ ಆಧ್ಯಾತ್ಮ , ಅವುಗಳ ಮೂಲ ಆಶಯ, ಜಾತಿ ವ್ಯವಸ್ಥೆಯ ವಿರೋಧವಲ್ಲ ಎಂದು ಬಾಲಗಂಗಾಧರ್ ವಿವರಿಸುತ್ತಾ ಎಲ್ಲರ ಕಣ್ಣಿಗೆ ಮಣ್ಣು ತೂರಲು ಬಳಸುತ್ತಿರುವುದು.
ಲಿಂಗಾಂಗ ಸಾಮರಸ್ಯವೆಂಬ ತತ್ವಕ್ಕೂ ,ಈ 36 ತತ್ವಗಳಿಗೂ, ಲಿಂಗೈಕ್ಯ ಸ್ಥಿತಿಗೂ ಇರುವ ಸಂಬಂಧದ ವಿಷಯ ವಚನಗಳ ಬಗ್ಗೆ, ಅವುಗಳ ಸಾಮಾಜಿಕ ಕಾಳಜಿಯ ಬಗ್ಗೆ ವಿಪುಲವಾಗಿ ಬರೆದಿರುವ ಸಾಹಿತಿಗಳ ಬರಹದಲ್ಲಿಯೂ ಕಾಣುವುದಿಲ್ಲ. ವೀರಶೈವ ಧಾರ್ಮಿಕ ಸಿದ್ಧಾಂತಗಳ ಕೆಲ ಪರಿಣತರು ಮಾತ್ರ ಈ ವಿಷಯದ ಬಗ್ಗೆ ಅಧ್ಯಯನ ಮಾಡಿದ್ದರೂ ಅವರು ವಚನಗಳ ಸಾಮಾಜಿಕ ಅಂಶಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಈ ತತ್ವಗಳಿಗೂ ವಚನಗಳ ಜಾತಿ ವ್ಯವಸ್ಥೆಯ ಬಗೆಗಿನ ತೀವ್ರ ವಿರೋಧಕ್ಕೂ ಹಾಗೂ ಮಹಿಳಾ ಸಮಾನತೆಯ ಪ್ರತಿಪಾದನೆಗೂ ಇರುವ ಗಾಢ ಸಂಬಂಧದ ಬಗ್ಗೆ ಸಂಶೋಧನೆ ನಡೆದೇ ಇಲ್ಲವೆನ್ನಬಹುದು. ಈ ಬಗ್ಗೆ ಸ್ವಲ್ಪ ಗಮನ ನೀಡಿದ್ದವರು ಅಪರೂಪದ ವಿದ್ವಾಂಸ ಎಲ್ ಬಸವರಾಜ್ ರವರು. ಅವರು ಮರೆಯಾಗಿ ಈ ತೆರನ ವಿದ್ವಾಂಸ ಪರಂಪರೆಯೇ ನಷ್ಟವಾಯಿತೇನೋ ಎಂಬಂತಾಗಿದೆ. ಹೀಗಾಗಿ ಬಾಲಗಂಗಾಧರ್ ತಂಡವೂ ಅಜ್ಞಾನ ಜನ್ಯವಾದ ಮೊಂಡು ಧೈರ್ಯದಿಂದ ಜಾತಿ ವ್ಯವಸ್ಥೆ ಎಂಬುದು ಅಸ್ತಿತ್ವದಲ್ಲಿಯೇ ಇರಲಿಲ್ಲ ಎಂದು ಸಮರ್ಥಿಸಿಕೊಳ್ಳಲು ಇಂತಹ ಕಳಪೆ ವಾದಗಳನ್ನು ಮಂಡಿಸಲು ಸಾಧ್ಯವಾಗಿದೆ.

ಅಂಗ ತತ್ವಗಳೆಂಬ 24 ತತ್ವಗಳು ಐದು ಪಂಚೇಂದ್ರಿಯಗಳು ಅಥವಾ ಜ್ಞಾನೇಂದ್ರಿಯಗಳಾದ ನಯನ,ಶ್ರೋತ್ರ, ಘ್ರಾಣ,ಜಿಹ್ವೆ, ತ್ವಕ್ಕು ಅವುಗಳ ವಿಷಯಗಳಾದ ರೂಪ, ರಸ, ಗಂಧ,ಶಬ್ದ, ಸ್ಪರ್ಶ ಎಂಬ ತನ್ಮಾತ್ರಗಳು, ಪಂಚ ಕರ್ಮೇಂದ್ರಿಯಗಳೆಂದು ಹೆಸರಿಸಲ್ಪಟ್ಟ ವಾಕ್, ಪಾಣಿ, ಪಾದ ಗುದ, ಗುಹ್ಯ ; ಪಂಚ ಭೂತಗಳಾದ ಪೃಥ್ವಿ, ಅಪ್ಪು , ತೇಜಸ್, ಮರುತ, ಆಕಾಶ ; ಚತುರ್ವಿಧ ಕರಣಗಳಾಧ ಮನ,ಬುದ್ಧಿ, ಚಿತ್ತ ಅಹಂಕಾರ ಇವೆಲ್ಲವೂ ಜೀವದ,ಇಹ ಜೀವನದ ಅಂಗಗಳು. ಪಂಚೇಂದ್ರಯಗಳ ಬಗ್ಗೆ ವಚನಗಳ ಭಾಷೆಯಲ್ಲಿಯೇ ಹೇಳುವುದಾದರೆ ‘ ಈ ಐದರಿಂದೆ ನಡೆವುದು ಲೋಕಂಗಳೆಲ್ಲ .’ ಈ ತತ್ವಗಳ ಬಗ್ಗೆ ವಚನಗಳು ಅನೇಕ ಬಾರಿ ಒಟ್ಟಾಗಿಯೂ, ಪ್ರತ್ಯೇಕ ಐದು ಗುಂಪುಗಳಾಗಿಯೂ ಪ್ರಸ್ತಾಪಿಸುತ್ತವೆ.
ಈ ಅಂಗ ತತ್ವಗಳು ಜಾತಿ, ಲಿಂಗ ಬೇಧಗಳನ್ನು ಮೀರಿ ಮಾನವ ಜೀವಿಗಳೆಲ್ಲರಿಗೂ ಸಮಾನವೆಂಬುದನ್ನು ವಚನಗಳು ಗುರುತಿಸುತ್ತವೆ. ಇದೇ ಜಾತಿ ವ್ಯವಸ್ಥೆಯನ್ನು , ಲಿಂಗ ಬೇಧವನ್ನು ವಚನ ಧರ್ಮ ವಿರೋಧಿಸಲು ತಾತ್ವಿಕ ಆಧಾರ.
ಅವುಗಳಲ್ಲಿ ಒಂದು ಚೆನ್ನಬಸವಣ್ಣನವರ ವಚನ ಹೇಳುವಂತೆ
ಧರೆಗೆ ಸೂತಕವುಂಟೇ ? ವಾರಿಧಿಗೆ ಹೊಲೆಯುಂಟೇ ?
ಉರಿವ ಅನಲಂಗೆ ಜಾತಿಬೇಧವುಂಟೇ ?
ಹರಿದು ಚರಿಸುವ ಅನಿಲಂಗೆ ಸೀಮೇಯುಂಟೇ ?
ಆಕಾಶಕ್ಕೆ ದರಿ ಮೇರೆಯುಂಟೇ ?
ಇನಿತರಿಂದಲೊದಗಿದ ಘಟವನು ಆರು ಹೊಲ್ಲೆಂಬರು ?
ಹೀಗೆ ಯಾವ ಪಂಚಭೂತಗಳಿಗೂ ಜಾತಿ ಬೇಧವಿಲ್ಲದಿರುವಾಗ ಈ ಪಂಚ ಭೂತಗಳಿಂದಾದ ಶರೀರಕ್ಕೆ ಜಾತಿ ಬೇಧ ಎತ್ತಣದು ? ಇದಕ್ಕಿಂತ ಸಮರ್ಥವಾದ ಪ್ರೂಫ್ ಬೇರೆ ಬೇಕೆ ?
ಅಂಗದಲ್ಲಿ ಲಿಂಗವೇ ಪ್ರಕಾಶಿಸುತ್ತಿದೆ
ಈ ದೇಹ ಪಂಚ ಭೂತಗಳಿಂದಾದುದು. ಈ ಪಂಚ ಭೂತಗಳೇ ಮುಂದೆ ವಿವಿಧ ಅಂಗ ತತ್ವಗಳ ಬೆಳವಣಿಗೆಯನ್ನು ಮಾಡಿದವು . ಅಂದರೆ ಜ್ಞಾನೇಂದ್ರಿಯ,ಕರ್ಮೇಂದ್ರಿಯ, ಅವುಗಳ ವಿಷಯಗಳಾದ ತನ್ಮಾತ್ರೆಗಳ ಬೆಳವಣೆಗೆಗೆ ಕೊನೆಗೆ ಮನ, ಬುದ್ಧ, ಚಿತ್ತ, ಅಹಂಕಾರಗಳ ಬೆಳವಣಿಗೆಗೆ ಕಾರಣವಾದುವು ಈ ಎಲ್ಲದರಲ್ಲಿಯೂ ಪ್ರಕಾಶಿಸುತ್ತರುವುದು ಲಿಂಗವೇ .ಈ ಎಲ್ಲ ಕೆಲಸಗಳ ಮೂಲಕ ಈ ಜೀವನವನ್ನು ಅನುಭವಿಸುತ್ತಿರುವುದು ಲಿಂಗವೇ .
ವಿವಿಧ ಭಕ್ಷ್ಯ ಭೋಜನಗಳಿಂದ ಸುಖ ಪಡುವುದು ಲಿಂಗವೇ. ಆದ್ದರಿಂದಲೇ ವಚನಗಳು ಊಟವನ್ನು ಪ್ರಸಾದವೆಂದು ಕರೆದು ಅದಕ್ಕೆ ಬಹಳ ಮಹತ್ವವನ್ನು ನೀಡಿವೆ. ಇದರ ಬಗ್ಗೆಯೇ ಅನೇಕ ವಚನಗಳು ಮೀಸಲಾಗಿವೆ. ಬೇರೆಲ್ಲ ಸಂಪ್ರದಾಯಗಳಲ್ಲಿಯೂ ಪ್ರಸಾದ ವೆಂಬ ಮಾತಿದೆ. ಅದು ದೇವರಿಗೆಂದು ಅರ್ಪಿಸಿದ ಊಟದ ಪದಾರ್ಥಗಳಿಗೆ ಸಂಬಂಧಿಸಿದ್ದು. ಅದನ್ನ ಭಕ್ತಿಯಿಂದ ಕಣ್ಣಿಗೊತ್ತಿ ತಿಂದರಾಯಿತು. ಇನ್ನುಳಿದಂತೆ ನೀವು ಊಟ ಮಾಡುತ್ತೀರಿ. ಆದರೆ ವಚನಗಳಲ್ಲಿ ನೀವು ತಿನ್ನುವುದೆಲ್ಲವೂ ಪ್ರಸಾದವೇ ಏಕೆಂದರೆ ನೀವು ಊಟ ಮಾಡುವ ಮೂಲಕ ನಿಮ್ಮ ಶರೀರದಲ್ಲಿ ಅಡಗಿರುವ ಲಿಂಗಕ್ಕೆ ತಿಂದುದೆಲ್ಲವನ್ನೂ ಸಮರ್ಪಿಸುತ್ತೀರಿ. ಆದ್ದರಿಂದ ಐದು ಸ್ಥಲಗಳಲ್ಲಿ ಪ್ರಸಾದಿ ಸ್ಥಲ ಮೂರನೇ ಸ್ಥಲವಾಗಿ ಬಹಳ ಮಹತ್ವವನ್ನು ಪಡೆಯುತ್ತದೆ. ಇದು ಕೂಡ ಕಾಯಕ ಜೀವಿಗಳಿಗೆ ಸ್ವಾಭಾವಿಕವೇ. ಕಾಯಕಕ್ಕೆ ಕಾಯ ಗಟ್ಟಿ ಮುಟ್ಟಾಗಿರುವುದು ಬಹಳ ಮುಖ್ಯವಲ್ಲವೇ. ಕಾಯಕವೇ ಕೈಲಾಸವಾದರೆ ತಿನ್ನುವ ಊಟವೆಲ್ಲಾ ಪ್ರಸಾದವಾಗುತ್ತದೆ. ಆದ್ದರಿಂದ ಊಟವನ್ನು ಮಾಡಬೇಕು. ಊಟವನ್ನು ನೀಡಬೇಕು. ದಾಸೋಹ ಎಂಬ ತತ್ವಕ್ಕೆ ಪ್ರಾಮುಖ್ಯತೆ ಬಂದದ್ದು ಅದರಿಂದಲೇ.
ಈ ಅಂಗತತ್ವಗಳು ಮಾತ್ರವಲ್ಲ ಶರೀರವನ್ನು ರಚಿಸಿರುವ ಮಾಂಸಖಂಡಗಳು, ಮೂಳೆ. ಹರಿಯುವ ರಕ್ತ, ನರಜಾಲ ಹೀಗೆ ಎಲ್ಲ ಭಾಗಗಳೂ ಲಿಂಗವೇ. ಎಲ್ಲವೂ ವಿವಿಧ ಪಂಚಭೂತಗಳ ಸೃಷ್ಠಿಯೇ. ಉದಾಹರಣೆಗೆ ಮಾಂಸ, ಮೂಳೆ ಪೃಥ್ವಿಯ ಅಂಶವಾದರೆ ರಕ್ತ ಮತ್ತಿತರ ದ್ರವಗಳು ಅಪ್ಪು (ನೀರು ) ತತ್ವದಿಂದಾದುದು. ಈ ಎಲ್ಲವೂ ಲಿಂಗವೇ ಯಾವುದೂ ನೀಚವಲ್ಲ, ಹೊಲೆಯಲ್ಲ. ಹೀಗೆ ಮಾನವ ಪ್ರಕೃತಿಯನ್ನೇ ಪ್ರಧಾನ ಮಾಡಿದ, ಅಂಗವೇ ಲಿಂಗವಾದ ಆದ್ದರಿಂದ ಅಂಗವನ್ನು ಗೌರವಿಸಿ ಅದರ ಮೇಲೆ ಲಿಂಗವನ್ನು ಪ್ರತéಿಷ್ಠಾಪನೆ ಮಾಡಿದ್ದು ವಚನಗಳ ಚಿಂತನೆಯ ಶ್ರೇಷ್ಟತೆ.
ಚೆನ್ನಬಸವಣ್ಣನವರ ಈ ವಚನದ ಭಾವವನ್ನು ಗಮನಿಸಿ.:
ಶ್ರೋತೃಕ್ಕೂ ವಾಕ್ಕಿಗೂ, ಶಬ್ದಕ್ಕೂ ವಚನಕ್ಕೂ , ತ್ವಕ್ಕಿಗೂ ಪಾಣಿಗೂ , ಸ್ಪರ್ಶನಕ್ಕೂ ಆದಾನಕ್ಕೂ , ನೇತ್ರಕ್ಕೂ ಪಾದಕ್ಕೂ , ರೂಪಿಗೂ ಗಮನಕ್ಕೂ , ಜಿಹ್ವೆಗೂ ಗುಹ್ಯಕ್ಕೂ , ಘ್ರಾಣಕ್ಕೂ ಗುದಕ್ಕೂ ಬೇಧವಿಲ್ಲ.
ದೇಹದ ಅನಿವಾರ್ಯ ಕ್ರಿಯೆಗಳಲ್ಲಿ ಯಾವುದೂ ಮೇಲಲ್ಲ ಯಾವುದೂ ಕೀಳಲ್ಲ ಎಂಬೀ ಭಾವ ಉತ್ತಮಾಂಗ, ಅಧಮಾಂಗ, ಅಧೀನಾಂಗ ಎಂಬ ಬೇಧ ಭಾವಕ್ಕೂ ಎಂತಹ ಅಪಾರ ವ್ಯತ್ಯಾಸ.
ಅಂಗತತ್ವಗಳನ್ನು ಗಮನಿಸಿದರೆ ಯಾರಿಗಾದರೂ ಗೊತ್ತಾಗುವ ವಿಷಯ ಎಲ್ಲ ಜಾತಿಗಳ ಮನುಷ್ಯರಿಗೂ ಈ ಅಂಶಗಳು ಸಮಾನವಾಗಿ ಅನ್ವಯಿಸುತ್ತವೆ. ಎಲ್ಲರಿಗೂ ಈ ಇಂದ್ರಿಯಗಳು ಅವುಗಳಿಂದ ಜಗತ್ತಿನಿಂದ ಗ್ರಹಿಸುವ ವಿಷಯಗಳಾದ ರೂಪ,ರಸ ಮೊದಲದ ತನ್ಮಾತ್ರೆಗಳೂ ಸಮಾನವೇ. ಹೀಗಾಗಿ ಈ ಯಾವ ತತ್ವದ ಪ್ರಸ್ತಾಪ ಮಾಡುವ ವಚನಗಳಲ್ಲಿಯೂ ವಿವಿಧ ಜಾತಿಯ ವ್ಯಕ್ತಿಗಳ ನಡುವೆ ಬೇಧವೆಣಿಸುವುದಿಲ್ಲ. ಹಾಗೆಯೇ ಗಂಡು , ಹೆಣ್ಣು ಬೇಧವೂ ಇಲ್ಲ. ಅವರೆಲ್ಲರ ಕಾಯಕವೂ ಸಮಾಜಕ್ಕೆ ಅಗತ್ಯ. ಈ ಎಲ್ಲ ಕಾಯಕಗಳಿಗೂ ಅಂಗ ತತ್ವಗಳೆಂಬುವೆಲ್ಲಾ ಅತಿ ಅಗತ್ಯವಾದುವು. ಈ ಅಂಗ ತತ್ವಗಳು ಚುರುಕಾಗಿಲ್ಲದೆ ಈ ಯಾವ ಕಾಯಕವೂ ಸರಿಯಾಗಿ ಸಾಗಲಾರದು. ಆದ್ದರಿಂದ ಈ ಅಂಗತತ್ವಗಳ ನಡುವೆ ಬೇಧ ಮಾಡುವುದಿಲ್ಲ. ಕಾಯಕಗಳು ಭಿನ್ನಭಿನ್ನವಾದರೂ ಅವುಗಳ ಹಿಂದಿನ ಅನುಭವ ಒಂದೇ ಎಂದು ವಚನಗಳು ಬಿಂಬಿಸಿವೆ. ಆದ್ದರಿಂದ ಎಲ್ಲ ಕಾಯಕಗಳ ಮೂಲಕವೂ ತಮ್ಮ ಆಧ್ಯಾತ್ಮಿಕ ಗಮ್ಯವನ್ನು ಮುಟ್ಟುವುದು ಸಾಧ್ಯ ಎಂಬ ಭಾವನೆ ಅನೇಕ ವಚನಗಳ ಮತಿತಾರ್ಥ. ಕಾಯಕಗಳ ನಡುವೆ ಸಮಾನತೆ ಹಾಗೂ ಅನುಭವ ಸಾಮ್ಯತೆಯನ್ನು ಗುರುತಿಸಿದ್ದರಿಂದಲೇ ವಿವಿಧ ಜಾತಿ, ಕಾಯಕಗಳ ವ್ಯಕ್ತಿಗಳ ನಡುವೆ ಸಂವಾದ ಸಾಧ್ಯವಾಯಿತು. ಈ ಸಂವಾದವೇ ಎಂತಹ ಅಪೂರ್ವ ಸನ್ನಿವೇಶವನ್ನು ಸೃಷ್ಠಿಸಿದೆಯೆಂದರೆ ಅದೇ ವಚನಗಳ ಚಿಂತನೆ, ಭಾಷೆ, ಶೈಲಿ, ಪದ ಸಂಪತ್ತು, ಪರಿಕಲ್ಪನೆಗಳಲ್ಲಿ ವೈವಿಧ್ಯತೆಯನ್ನೂ ಅವುಗಳ ನಡುವೆ ಸಮಾನವಾದ ಅನುಭವದ ಶೋಧದಲ್ಲಿ ಅರಿವಿನ ಹೊಸ ಮಜಲನ್ನೂ ಮುಟ್ಟುತ್ತವೆ. ಇಂತಹ ಈ ಬೆಳಗು , ಸಾಮರ್ಥ್ಯ ಎಷ್ಟು ಆಧ್ಯಾತ್ಮ ಪರಂಪರೆಗಳಿಗೆ ಸಾಧ್ಯವಾಗಿದೆ ?
(ಮುಂದುವರೆಯುವುದು…)

 

‍ಲೇಖಕರು avadhi

July 19, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

59 ಪ್ರತಿಕ್ರಿಯೆಗಳು

  1. ಸಹನಾ

    ಹೆಣ್ಣು-ಗಂಡು ಜೈವಿಕ ಭಿನ್ನತೆ,
    ಕನ್ನಡಿಗ-ತಮಿಳಿಗ-ಮಲಯಾಳಿಗ ಇತ್ಯಾಧಿಗಳು ಭಾಷಾ ಬಿನ್ನತೆ,
    ಕ್ರಿಶ್ಚಿಯನ್- ಮುಸ್ಲೀಂ ಇತ್ಯಾಧಿ ರಿಲಿಜಸ್ ಭಿನ್ನತೆ,
    ಮಲೆನಾಡಿನವರು-ಬಯಲುಸೀಮೆಯವರ;ಉತ್ತರದವರು-ಧಕ್ಷಿಣದವರು ಪ್ರಾದೇಶಿಕ ಭಿನ್ನತೆ,
    ಈಡಿಗರು-ಮಲೆಕುಡಿಯರು-ಗಾಣಿಗರು-ಕುರುಬರು ಜಾತಿಗಳ ಭಿನ್ನತೆ,
    ಎಂದಾದರೆ ಶಿವಸಾಯುಜ್ಯದಲ್ಲಿ ಈ ಭಿನ್ನತೆಗಳನ್ನು ಎಣಿಸಬಾರದೆಂದು ಶರಣರು ಹೇಳುತ್ತಾರೆ ಎಂದಿಟ್ಟುಕೊಳ್ಳಿ. ಅದರ ಅರ್ಥ ಈ ಪ್ರಭೇಧಗಳೇ ನಾಶ ಮಾಡಬೇಕೆಂದು ಹೇಳಿದಂತಾಗುವುದೇ?
    ಅಂದರೆ ಭಾಷಗಳನ್ನು ವಿರೋಧಿಸಿ ನಾಶ ಮಾಡಬೇಕೆಂದಾಗುತ್ತದೆಯೇ? ರಿಲಿಜನ್ನುಗಳನ್ನು ವಿರೋಧಿಸಿ ನಾಶಮಾಡಬೇಕೆಂದಾಗುತ್ತದೆಯೇ? ಈ ಪ್ರದೇಶಗಳನ್ನೆಲ್ಲಾ ಮಲೆನಾಡು, ಬಯಲುಸೀಮೆಗಳನ್ನೆಲ್ಲಾ ನಾಶಮಾಡಬೇಕೆಂದಾಗುತ್ತದೆಯೇ? ಹಾಗೆಯೇ ಈ ಪ್ರಪಂಚದಲ್ಲಿ ಹೆಣ್ಣುಗಂಡುಗಳೇ ಇರಕೂಡದು (ಇದಂತೂ ಬಹಳ ವಿಚಿತ್ರವಾಗಿದೆ) ಅವನ್ನು ನಾಶಮಾಡಬೇಕೆಂದಾಗುತ್ತದೆಯೇ? ಅಲ್ಲವೆಂದಾದಮೇಲೆ ಜಾತಿಗಳ ಭಿನ್ನತೆಯ ಆಧಾರದಲ್ಲಿ ಶರಣರಲ್ಲಿ ಲಿಂಗದಮುಂದೆ ಜಾತಿಭೇದಗಳನ್ನು ಮಾಡಬಾರದು ಎನ್ನುವುದು ಜಾತಿವಿರೋಧ ಮತ್ತು ಜಾತಿಗಳಿರಬಾರದೆಂದು ಅವನ್ನು ನಾಶಮಾಡಬೇಕೆಂದು ವಚನಕಾರರು ಹೇಳಿದ್ದಾರೆ ಎಂದು ಯಾವ ತರ್ಕದ ಮೇಲೇ ಹೇಳುತ್ತೀರಿ ನಾಗರಾಜ್ ಸರ್???
    ಜಾತಿಗಳು ಇರಬೇಕೋ ಬಿಡಬೇಕೋ ಅದು ಬೇರೆಯದೇ ವಿಷಯ ವಚನಗಳನ್ನು ನಿಮ್ಮ ಹಾಗೆ interpret ಮಾಡಿದರೆ ಈ ಹೀಗೆ ಎಲ್ಲವನ್ನೂ ವಿರೋಧಿಸಿ ನಾಶಮಾಡಬೇಕಾಗುತ್ತದಲ್ಲಾ, ಏನು ಮಾಡುತ್ತೀರಿ?
    ಇನ್ನು ಜಾತಿವ್ಯವಸ್ಥೆಯ ಬಗ್ಗೆ ಹಿಂದಿನ ನಿಮ್ಮ ಲೇಖನಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಒಂದು ಲಿಂಕ್ ನೀಡಿದ್ದೇನೆ. ಅದನ್ನು ಓದಿ ಜಾತಿವ್ಯವಸ್ಥೆಯ (ಅಂದು ಮತ್ತು ಇಂದಿನ) ಅಸ್ತಿತ್ವದ ಕುರಿತು ತಮ್ಮ ವಾದಗಳನ್ನು ತರ್ಕಬದ್ದವಾಗಿ ವಿವರಿಸಿ. ವಚನಗಳನ್ನು ಉಲ್ಲೇಖಿಸಿ ಉಪದೇಶ ಕೊಡುವುದರಿಂದ ಒಂದು ಸಮಾಜದ ಬಗ್ಗೆ ವೈಜ್ಞಾನಿಕ ಜ್ಞಾನ ಬೆಳೆಯದು. ಅದಕ್ಕೆ ತರ್ಕಬದ್ದವಾದ ವಿಶ್ಲೇಷಣೆ ಬೇಕು ಯಾವುದೇ ವೈರುಧ್ಯಗಳಿಲ್ಲದೆ. ಮೊದಲು ಮೇಲೇ ನಾನು ಉಲ್ಲೇಖಿಸಿದ ನಿಮ್ಮ ವಾದದಲ್ಲಿರುವ ವೈರುಧ್ಯದ ಕಡೆ ಗಮನ ಕೊಡಿ.. ಯಾರದ್ದೋ ಹೆಸರು ಮತ್ತು ಗುಂಪಿನ ಹೆಸರು ಹೇಳಿ ಅವರ ವಿಮರ್ಶೆ ಎಂದು ಪ್ರಚಾರಕೊಟ್ಟು ಹೆಸರು ಸಂಪಾದಿಸಿ ಬೇಡ ಎನ್ನುವುದಿಲ್ಲ. ಮೊದಲು ಅವರದ್ದನ್ನು ಓದಿ,- ವಿಮರ್ಶೆಮಾಡಿ.

    ಪ್ರತಿಕ್ರಿಯೆ
    • Anonymous

      This is ridiculous and unwise interpretation. Sahana has no knowledge of how to understand and comprehend a sociao-political and literary work. There is no use in stating that scientific attitude in necessary. It has to be lived. Basava and his fellow vachanakaras lived the principle of equality and scientific perception. What Mr. Darga, Mr.GNN are telling is a simple truth. When we say caste should go means the element of discrimination based on caste, colour, religion, region, gender should go. Caste system is based on inequality and discrimination. The hierarchical structure is impeding development. The vedic philosophy is hierarchical and based on the practice of clean and unclean, pure and pollution etc. They are divisive. Those who argue that caste is not the essential feature of Indian society are living in unreal world or they are trying to be dishonest to themselves. The vedas and Madara Chennaiah cannot go together. It practices the priciple of social exclusion. UIt excludes some people from social participation. The Sri Krishna Matha in Udupi never allow even Bhramin women. let alone SC/ST/OBC to perform pooja by touching the statue of god. If this is the position of Bhramin women, then one can only speculate what is the perception of Bhramins about the dalit, OBCs etc. Basava has rejected this system. My sincere advise to the followers of S.N.B., RRH, DJ etc is that not to make any attempt to hurt people like Ramjan Darga by raising the issue of his religion/caste/belief etc. He is basically a humane human being. And he is a sincere Basava follower. He ha no caste, religion. He is a anubhavi. He is a mystic. Do not hurt the feeling of such proplr.
      TRC

      ಪ್ರತಿಕ್ರಿಯೆ
      • ಸಹನಾ

        @ prof. TRC, then you should say it is your belief and sentiments. don’t put it as a scientific argument when you are not open for public debates and scientific queries.

        ಪ್ರತಿಕ್ರಿಯೆ
      • ಕೃಷ್ಣಪ್ರಕಾಶ ಬೊಳುಂಬು

        “Those who argue that caste is not the essential feature of Indian society are living in unreal world or they are trying to be dishonest to themselves. ”
        ~ These are not the premises of Mr. Balagangadhara’s argument. Whether caste system can be named a social theory is their line of argument. What matters is whether Balagangadhara has endorsed Vedas or not. He is not talking in favour of Vedas or whatever one may assume to define the cruelty of social system of those times.
        “The Sri Krishna Matha in Udupi never allow even Bhramin women. let alone SC/ST/OBC to perform pooja by touching the statue of god.”
        ~ Is Sri Krishna Matha not allowing even Brahmin women a fact? From this an outsider may assume that it is a norm to perform pujas by touching the statue in all temples whereas the fact is the reverse.

        ಪ್ರತಿಕ್ರಿಯೆ
        • Ramjan Darga

          ‘ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೆ? ಎಂದು ಜಾತಿ ವ್ಯವಸ್ಥೆ ಕುರಿತು ಎಸ್.ಎನ್. ಬಾಲಗಂಗಾಧರ ಮತ್ತು ಅವರ ಸಂಶೋಧಾನ ತಂಡದ ವಿಚಾರಗಳನ್ನು ಡಂಕಿನ್ ಝಳಕಿ ಎಂಬವರು ಸಂಪಾದಿಸಿ ನಿರೂಪಿಸಿದ್ದಾರೆ.
          “Those who argue that caste is not the essential feature of Indian society are living in unreal world or they are trying to be dishonest to themselves.” ಎಂದು ತಾವು ಪ್ರತಿಪಾದಿಸಿದ್ದೀರಿ.
          ಜಾತಿಗಳು ಮನುವಾದಿಗಳ ಸಮಾಜದಲ್ಲಿನ ವಾಸ್ತವ. ಅವುಗಳನ್ನು ಕಳಚಿಕೊಳ್ಳುವುದರ ಮೂಲಕ ನವ ಸಮಾಜ ನಿರ್ಮಾಣವಾಗಿಬೇಕೆಂಬುದು ನನ್ನಂಥವರ ಆಶಯ. ನಿರ್ಜಾತಿ ವಿವಾಹಗಳು ಆಗುತ್ತಲೇ ಇವೆ. ಸಮಾಜ ಸ್ವಲ್ಪಮಟ್ಟಿಗಾದರೂ ಬದಲಾಗುತ್ತಲೇ ಇದೆ.

          ಪ್ರತಿಕ್ರಿಯೆ
          • Amaresh

            ದರ್ಗಾ ಅವರೇ, ಏಕೆ ನಾಗರಾಜ್ ಅವರ ಲೇಖನ ಸರಣಿಯನ್ನು ನಿಮ್ಮ ಐದಿಯಾಳಜಿ ಪ್ರತಿಪಾದನೆಗೆ ಬಳಸಿಕೊಳ್ಳುತ್ತಿದ್ದೀರಿ? ನಿಮಗೆ ಈಗಾಗ್ಲೇ ಅವಕಾಶ ನೀಡಲಾಗಿದೆ ಅಲ್ಲವೇ? ನಿಮ್ಮ ಐಡಿಯಾಲಜಿ ಕುರಿತ ಎಲ್ಲಾ ಟಿಪ್ಪಣಿ ಅಡಿ ಟಿಪ್ಪಣಿಗಳನ್ನು ಆ ಲೇಖನಮಾಲೆಯಲ್ಲೇ ಕೊಡಿ, ಇಲ್ಲಿ ಬೇಡ. ಇಲ್ಲಿ ನಾಗರಾಜ್ ಅವರ ಐಡಿಯಾಲಜಿಯ ಚರ್ಚೆಗೆ ಮಾತ್ರ ಅವಕಾಶ.

      • Amaresh

        [He is a anubhavi. He is a mystic.]
        I never knew that mystics tell lies and hate Brahmins.

        ಪ್ರತಿಕ್ರಿಯೆ
        • Ramjan Darga

          ಅಮರೇಶ್ ಅವರೇ “ವಿಪ್ರರು ಕೀಳು ನೋಡಾ ಜಗವೆಲ್ಲ ಅರಿಯಲು” ಎಂದು ಹೇಳಿದವನು ನಾನೋ ಬಸವಣ್ಣನವರೋ?
          “ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ
          ಮಟ್ಟಿಯನಿಟ್ಟ ದ್ವಿಜರ ಮಾತೇಕೆ?
          ಹಗಲುಗಾಣದೆ ಗೂಗೆ ಇರುಳಾಯಿತ್ತೆಂದಡೆ
          ಜಗಕೆ ಇರುಳಪ್ಪುದೆ ಮರುಳೆ?”
          ಎಂದು ಪ್ರಶ್ನಿಸಿದವರು ನಾನೋ, ಬ್ರಾಹ್ಮಣ್ಯವನ್ನು ತೊರೆದು ಲಿಂಗವಂತ ಧರ್ಮ ಸ್ಥಾಪನೆ ಮಾಡಿದ ಬಸವಣ್ಣನವರೋ?
          ನಿಮಗೆ ಸತ್ಯ ಹೇಳುವ ಧೈರ್ಯವಿದ್ದರೆ ಉತ್ತರಿಸಿ. ಸುಳ್ಳಿನ ಕಂತೆ ಬಿಚ್ಚಬೇಡಿರಿ. ನಿಮ್ಮ ಗುಂಪಿನ ಪ್ರಶ್ನೆ ಮತ್ತು ನನ್ನ ಉತ್ತರಗಳನ್ನು ಪ್ರಕಟಿಸಲು ಪ್ರಕಾಶಕರು ಮುಂದೆ ಬಂದಿದ್ದಾರೆ. ಆಗ, ಯಾರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದನ್ನು ಓದುಗರು ನಿರ್ಧರಿಸುವರು.

          ಪ್ರತಿಕ್ರಿಯೆ
          • Amaresh

            ಇಲ್ಲಿ ದಯವಿಟ್ಟು ನಾಗರಾಜ್ ಅವರ ವಿಚಾರಗಳ ಬಗ್ಗೆ ಚರ್ಚೆ ಮಾಡಿ. ಬ್ರಾಹ್ಮಣ್ಯದ ಬಗ್ಗೆ ನಿಮಗಿರುವ ದ್ವೇಷವನ್ನು ಇಲ್ಲಿ ಕಾರಬೇಡಿ.

          • Ramjan Darga

            ಬ್ರಾಹ್ಮಣ್ಯವನ್ನು ವಿರೋಧಿಸಿ ಮನೆಬಿಟ್ಟು ಬಂದ ಬಸವಣ್ಣನವರು ಬ್ರಾಹ್ಮಣರ ಬಗ್ಗೆ ಹೇಳಿದ್ದನ್ನು ಮಾತ್ರ ಹೇಳುತ್ತಿರುವೆ. ಅಷ್ಟೂ ಗೊತ್ತಾಗುವುದಿಲ್ಲವೆ?

          • ಕಟ್ಟಿಮನಿ

            ಬ್ರಾಹ್ಮಣರು ಹಸಿವೆಯೇ ಇಲ್ಲದೆ ಇರುತ್ತಿದ್ದರು ಅಂತೆಲ್ಲ ಬಸವಣ್ಣ ಎಲ್ಲಿ ಹೇಳಿದ್ದಾರೆ ದರ್ಗಾ?

          • Anonymous

            “ನಮ್ಮ ದೈವನಂಬಿಕೆ, ಅಧ್ಯಾತ್ಮ, ಮೌಲ್ಯಗಳು ಮತ್ತು ಸಂಸ್ಕೃತಿ ಭೌತಿಕ ಜಗತ್ತಿನ ಸ್ಥಿತಿಗತಿಗಳ ಮೇಲೆ ನಿಂತಿರುತ್ತವೆ. ಹಸಿದವನಿಗೆ ರೊಟ್ಟಿಯೇ ಎಲ್ಲಕ್ಕಿಂತ ಮುಖ್ಯವಾಗುತ್ತದೆ. ಮನುಷ್ಯನ ಎಲ್ಲ ಬೇಡಿಕೆಗಳಲ್ಲಿ ಊಟ, ಬಟ್ಟೆ ಮತ್ತು ವಸತಿ ಬಹುಮುಖ್ಯವಾದುವು. ಈ ಭೂಮಿಯು ವೈವಿಧ್ಯಮಯವಾದ ಸಂಪನ್ಮೂಲಗಳಿಂದ ಕೂಡಿದ್ದು ಪ್ರತಿಯೊಂದು ಜೀವದ ಅವಶ್ಯಕತೆಯನ್ನು ಪೂರೈಸುವ ಶಕ್ತಿಯನ್ನು ಹೊಂದಿದೆ. ಆದರೆ ಶೋಷಕರ ಸ್ವಾರ್ಥದಿಂದಾಗಿ ಶೋಷಿತರು ಸಹಸ್ರ ಸಹಸ್ರ ವರ್ಷಗಳಿಂದ ಊಟ ಬಟ್ಟೆ ಮತ್ತು ವಸತಿಯಂಥ ಜೀವನಾವಶ್ಯಕ ವಸ್ತುಗಳ ಕೊರತೆಯಿಂದ ನರಳುತ್ತಲೇ ಸಾಗಿದ್ದಾರೆ. ಸೂಕ್ಷ್ಮಮತಿಯಾದ ಜೇಡರ ದಾಸಿಮಯ್ಯನವರು ಬಡವರ ಈ ದಯನೀಯ ಸ್ಥಿತಿಯನ್ನು ಗಮನಿಸಿದರು. ಈ ಕಾಯಕಜೀವಿಗಳೇಕೆ ಬಳಲಬೇಕು ಎಂಬುದು ಅವರ ಪ್ರಶ್ನೆಯಾಗಿತ್ತು. ದುಡಿಯುವ ವರ್ಗ ಎಲ್ಲ ಕೊರತೆಗಳಿಂದ ಬಳಲುತ್ತಿದೆ. ದುಡಿಯದ ವರ್ಗದ ಸಕಲ ಸೌಕರ್ಯಗಳಿಂದ ಬದುಕುತ್ತಿದೆ. ಹಸಿಯುವ ವರ್ಗ ಮತ್ತು ಹಸಿವು ಏನೆಂಬುದು ಗೊತ್ತೇ ಇರದ ವರ್ಗದ ಮಧ್ಯದ ಅಂತರವನ್ನು ಅವರು ಅರಿತರು. ಬ್ರಾಹ್ಮಣರು, ರಾಜರು ಮತ್ತು ಶ್ರೀಮಂತರು ಭೂಸುರರೇ ಆಗಿದ್ದರು. ಹಸಿವಿನ ದೃಷ್ಟಿಯಿಂದ ಇವರೆಲ್ಲ ’ಒಡಲಿಲ್ಲದವರು’ ಎಂಬ ರೀತಿಯಲ್ಲಿ ಊಟ, ಬಟ್ಟೆ ಮತ್ತು ವಸತಿಯ ಚಿಂತೆ ಇಲ್ಲದೆ ಬದುಕುತ್ತಿದ್ದರು. ಈ ಜನ ದೇವರ (ದೇವಸ್ಥಾನದ ವ್ಯವಸ್ಥೆ) ಜೊತೆ ಸದಾ ಸಲುಗೆಯಿಂದ ಇರುವವರಾಗಿದ್ದರು. ಬಡವರು ದೇವಸ್ಥಾನದಲ್ಲಿ ಬಿಟ್ಟಿ ಕೆಲಸ ಮಾಡುವ ಸ್ಥಿತಿ ಇತ್ತು. ’ಹಸಿವು’ ಎಂದರೆ ಮರ್ಯಾದೆಯುತವಾಗಿ ಜೀವನ ಸಾಗಿಸಲು ಬೇಕಾದ ವಸ್ತುಗಳ ಕೊರತೆಯಿಂದಾಗಿ ಅವರು ಬಳಲುವಂಥ ಸ್ಥಿತಿಯನ್ನು ಮೇಲ್ವರ್ಗ ಮತ್ತು ಮೇಲ್ಜಾತಿಯ ಜನ ನಿರ್ಮಿಸಿದ್ದರು.” ಎಂಬ ನನ್ನ ವಾದಕ್ಕೆ ಬದ್ಧನಾಗಿದ್ದೇನೆ.
            ಬ್ರಾಹ್ಮಣರಿಗೆ “ಆಪದ್ಧರ್ಮ” ಎಂಬುದಿದೆ. ಅವರು ಹಸಿದಾಗ ಕಳ್ಳತನವನ್ನೂ ಮಾಡಬಹುದು. ನಾಯಿಯ ಮಾಂಸವನ್ನೂ ತಿನ್ನಬಹುದು. ಅಂಥ ಬ್ರಾಹ್ಮಣರು ನಾನು ಹೇಳುವ ಹಸಿದವರ ವರ್ಗದಲ್ಲೇ ಬರುತ್ತಾರೆ. ಅದೇನು ವಿಶೇಷವಾಗಿ ಹೇಳಬೇಕಿಲ್ಲ. ಐತಿಹಾಸಿಕವಾಗಿ ಬ್ರಾಹ್ಮಣರು,ಕ್ಷತ್ರಿಯರು ಮತ್ತು ವೈಶ್ಯರು ಶೂದ್ರರನ್ನು ಮತ್ತು ಅತಿಶೂದ್ರರಾದ ದಲಿತರ ಶೋಷಣೆ ಮಾಡುತ್ತಲೇ ಬಂದಿದ್ದಾರೆ. “Monks and Sanyasins and Brahmins of a certain type have thrown the country into ruin” (Vol.VI. 318) ಎಂದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಹೇಳಿದರೂ ನಿಮಗೆ ಅರ್ಥವಾಗುವುದಿಲ್ಲವೆ?

          • Anonymous

            ಮೇಲಿನದು ನನ್ನ ಅಭಿಪ್ರಾಯ- ರಂಜಾನ್ ದರ್ಗಾ

          • ಕಟ್ಟಿಮನಿ

            ಮತ್ತದೇ ಬ್ರಾಹ್ಮಣದ್ವೇಷ! ಈ ರೀತಿ ಬಸವಣ್ಣನವರ ಹೆಸರು ಹೇಳಿಕೊಂಡು ಜಾತಿನಿಂದನೆ ಮಾಡುವುದು ಎಲ್ಲಿಯ ಬಸವತತ್ವ?!! ಬಸವಣ್ಣನವರು ಖಂಡಿತ ಬ್ರಾಹ್ಮಣದ್ವೇಷಿ ಆಗಿರಲಿಲ್ಲ. ಬ್ರಾಹ್ಮಣ್ಯದ ಬಗ್ಗೆ ಅವರಿಗೆ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು ನಿಜ. ಆ ಕಾರಣಕ್ಕೆ ಅವರ ಕೆಲವು ಪ್ರಾರಂಭದ ವಚನಗಳಲ್ಲಿ ಬ್ರಾಹ್ಮಣರನ್ನು ಟೀಕಿಸಿದ್ದೂ ನಿಜ. ಶರಣರೂ ಮನುಷ್ಯರೇ ಅಲ್ಲವೇ? ಮನುಷ್ಯರೆಂದ ಮೇಲೆ ಸಿಟ್ಟು ರೋಷ ಇದ್ದದ್ದೇ. ಆದರೆ ಬ್ರಾಹ್ಮಣದ್ವೇಷವನ್ನೇ ಅಜೆಂಡಾ ಮಾಡಿಕೊಂಡು ಅವರು ಅನುಭವಮಂಟಪವನ್ನು ಕಟ್ಟಲಿಲ್ಲ. ಬಸವಣ್ಣನವರು ಶರಣಮಾರ್ಗದಲ್ಲಿ ಮಾಗಿದ ಬಳಿಕ ಅವರ ವಚನಗಳಲ್ಲಿ ಆಧ್ಯಾತ್ಮಿಕ ವಿಚಾರವೇ ಸಂಪೂರ್ಣವಾಗಿ ತುಂಬಿಕೊಂಡಿತು. ಅದಕ್ಕೆ ಅಲ್ಲವೇ ಅವರು “ಪರಚಿಂತೆ ಎಮಗೇಕಯ್ಯ ? ನಮ್ಮ ಚಿಂತೆ ಎಮಗೆ ಸಾಲದೆ ?ಕೂಡಲಸಂಗಯ್ಯ ಒಲಿದಾನೋ ಒಲಿಯನೋ | ಎಂಬ ಚಿಂತೆ |ಹಾಸಲುಂಟು ಹೊದಿಯಲುಂಟು!” ಅಂತ ಹೇಳಿದ್ದು! ಆಧ್ಯಾತ್ಮ ಸಾಧನೆಗೆ ಕಾಮವು ಎಲ್ಲದ್ದಕ್ಕಿಂತ ದೊಡ್ಡ ಅಡ್ಡಿ ಅಂತ ಬಸವಣ್ಣನವರಿಗೆ ಅರಿವಾಗಿ ಅಲ್ಲವೇ ಅವರು ಹೇಳಿದ್ದು “ನೋಡಲಾಗದು, ನುಡಿಸಲಾಗದು ಪರಸ್ತ್ರೀಯರ; ಬೇಡ ಕಾಣಿರೋ! ತಗರ ಬೆನ್ನಲಿ ಹರಿವ ಸೊಣಗನಂತೆ; ಬೇಡ ಕಾಣಿರೋ! ಒಂದಾಸೆಗೆ ಸಾಸಿರ ವರುಷ | ನರಕದಲದ್ದುವ ಕೂಡಲಸಂಗಮದೇವ.” ಅಂತ?
            ಶರಣರ ಅಧ್ಯಾತ್ಮಿಕ ಚಿಂತನೆಯಲ್ಲಿ ಬ್ರಾಹ್ಮಣ ನಿಂದನೆಗೆ ಜಾಗವಿಲ್ಲ. ವಚನ ವಿದ್ವಾಂಸರಾದ ದರ್ಗಾ ಅವರಿಗೆ ಇದು ತಿಳಿದಿಲ್ಲವೇ? ಅಥವಾ ಗೊತ್ತಿದ್ದೋ ಬೇಕೆಂದೇ ಬಸವಣ್ಣನವರನ್ನು ಬಳಸಿಕೊಂಡಿದ್ದಾರಾ?
            ಬಸವಣ್ಣನವರನ್ನು ಬ್ರಾಹ್ಮಣದ್ವೇಷಿ ಎಂದು ತೋರಿಸುವ ಪ್ರಯತ್ನವನ್ನು ಬಿಡಿ ದರ್ಗಾ ಸಾಬ್. ಅದು ನಿಮಗೆ ಒಳ್ಳೆಯದ್ದನ್ನು ಮಾಡುವುದಿಲ್ಲ. ಬಸವಣ್ಣನವರದ್ದು ಶರಣರದ್ದು ಸಜ್ಜನಿಕೆಯ ಮಾರ್ಗ:
            ಕಟ್ಟಿ ಬಿಡುವನೇ ಶರಣನು ?
            ಬಿಟ್ಟು ಹಿಡಿವನೇ ಶರಣನು ?
            ನಡೆದು ತಪ್ಪುವನೇ ಶರಣನು ?
            ನುಡಿದು ಹುಸಿವನೇ ಶರಣನು ?
            ಸಜ್ಜನಿಕೆ ತಪ್ಪಿದರೆ
            ಕೂಡಲಸಂಗಯ್ಯ ಮೂಗ ಹಲುದೋರ ಕೊಯ್ವ!
            ಬ್ರಾಹ್ಮಣದ್ವೇಷ ಹಾಗೂ ಜಾತಿನಿಂದನೆ ಖಂಡಿತ ಸಜ್ಜನಿಕೆ ಅಲ್ಲ. ಸಜ್ಜನಿಕೆ ತಪ್ಪಿದರೆ ಕೂಡಲಸಂಗಯ್ಯ ಮೂಗ ಹಲುದೋರ ಕೊಯ್ವ. ತಮ್ಮದೂ.

          • ಕಟ್ಟಿಮನಿ

            ಬ್ರಾಹ್ಮಣ್ಯ ಬಿಡಲು ಬಸವಣ್ಣನವರಿಗೆ ಅವರದೇ ಆದ ವೈಯಕ್ತಿಕ ಕಾರಣಗಳು ಇದ್ದಿರಬಹುದು. ಬ್ರಾಹ್ಮಣ್ಯ ಬಿಟ್ಟು ಬಂದ ಕಾರಣದಿಂದ ಅವರು ಬ್ರಾಹ್ಮಣರ ಬಗ್ಗೆ ಒಂದೆರಡು ನಿಂದನೆಯ ಮಾತುಗಳನ್ನು ಆಡಿರಬಹುದು. ಮನುಷ್ಯ ಅಂದ ಮೇಲೆ ಇಂಥದ್ದೆಲ್ಲ ಇದ್ದದ್ದೇ. ಆದರೆ ಅದನ್ನೇ ತಾವು ದೊಡ್ಡದು ಮಾಡಿ ಬಸವಣ್ಣನವರು ಬ್ರಾಹ್ಮಣವಿರೋಧಿ ಅಂತ ಪ್ರಚಾರ ಮಾಡಿ ಅವರನ್ನು ಗುರಾಣಿಯಾಗಿಸಿಕೊಂಡು ಬ್ರಾಹ್ಮಣನಿಂದನೆ ಮಾಡುವುದು ತಪ್ಪು.

          • Anonymous

            ಒಂದು ದರ್ಶನವನ್ನು ಜಗತ್ತಿಗೆ ನೀಡಿದ ಬಸವಣ್ಣನವರು ವೈಯಕ್ತಿಕ ಕಾರಣಗಳಿಂದ ಬ್ರಾಹ್ಮಣರ ಬಗ್ಗೆ ನಿಂದೆಯ ಮಾತುಗಳನ್ನಾಡಿದ್ದಾರೆಯೆ? ಅವರ ತಂದೆ ತಾಯಿಗಳು ಬ್ರಾಹ್ಮಣರೇ ಆಗಿದ್ದರಲ್ಲವೆ? ನಾನು ಯಾವುದನ್ನು ಸೈದ್ಧಾಂತಿಕವಾಗಿ ಹೇಳುತ್ತಿರುವೆನೊ ಅದನ್ನು ನೀವು ಎಷ್ಟೊಂದು ಹಗುರವಾಗಿ ನೋಡುತ್ತಿರುವಿರಲ್ಲ?
            ಜಾತಿ, ಕುಲ ಮತ್ತು ವರ್ಣವ್ಯವಸ್ಥೆಯಿಂದ ಬಹುಪಾಲು ಶೂದ್ರರನ್ನು ಧಾರ್ಮಿಕವಾಗಿ ಸುಲಿಗೆ ಮಾಡಿದ್ದರ ಹಿನ್ನೆಲೆಯಲ್ಲಿ ಈ ಚರ್ಚೆ ನಡೆಯುತ್ತಿದೆ. ನೀವೆಲ್ಲ ಸೇರಿ ಸೈದ್ಧಾಂತಿಕ ಚರ್ಚೆಯನ್ನು ಹದಗೆಡಿಸುವ ಪ್ರಯತ್ನ ಮಾಡುತ್ತಿರುವಿರಿ. ಈ ದೇಶದ ತುಳಿತಕ್ಕೊಳಗಾದ ಜನರಿಗೆ ನಿಮ್ಮ ಷಡ್ಯಂತ್ರದ ಅರಿವಾಗುವುದರಲ್ಲಿ ಸಂಶಯವಿಲ್ಲ.

          • ವಿಶ್ವಾರಾಧ್ಯ ಸತ್ಯಂಪೇಟೆ

            ಸಹೋದರರೆ,
            ಖಂಡಿತವಾಗಿಯೂ ಬಸವಣ್ಣನವರು ಮನುಷ್ಯನಲ್ಲಿರುವ ಬಾಹ್ಮಣ್ಯ(ಕುತಂತ್ರ)ದ ಕುರಿತು ಸಿಡಿದೆದ್ದಿರುವ ಮೊಟ್ಟ ಮೊದಲ ದಾರ್ಶನಿಕ. ಅವರ ತಂದೆತಾಯಿಗಳ ಜಾತಿಯಿಂದ ಬ್ರಾಹ್ಮಣರು ಆಗಿದ್ದರು. ಆದರೆ ಬಸವಣ್ಣನವರು ಮಾತ್ರ ತಮ್ಮನ್ನು ತಾವು ಬ್ರಾಹ್ಮಣ ಎಂದು ಕರೆದುಕೊಳ್ಳಲು ಎಂದೂ ಸಂಭ್ರಮ ಪಟ್ಟವರಲ್ಲ. ಬದಲಾಗಿ ಆನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯ’ ಎಂದಿದ್ದಾರೆ.

          • Anonymous

            ಇದು ಕೂಡ ನನ್ನ ವಾದವೇ ಆಗಿದೆ – ರಂಜಾನ್ ದರ್ಗಾ

          • ಕಟ್ಟಿಮನಿ

            ಹೌದು, ಬಸವಣ್ಣನವರ ಕೆಲವು ವಚನಗಳಲ್ಲಿ ಬ್ರಾಹ್ಮಣರ ಬಗ್ಗೆ ಕಟು ಉಕ್ತಿಗಳು ಇರುವುದ್ದಕ್ಕೆ ವೈಯಕ್ತಿಕ ಕಾರಣಗಳಿದ್ದವು, ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು. ಆದರೆ ಬಸವಣ್ಣನವರು ಎಂದಿಗೂ ಬ್ರಾಹ್ಮಣರ ಜೊತೆಗೆ ದ್ವೇಷ ಹಗೆ ಸಾಧಿಸಲಿಲ್ಲ. ನೀವು ಶರಣ ವಚನಾಮೃತಕ್ಕೆ ಸಿದ್ಧಾಂತವನ್ನು ಬೆರೆಸಿದರೂ ಅಜೆಂಡಾವನ್ನು ಬೆರಸಿದರೂ ವಚನಾಮೃತವು ಹಾಲಾಹಲವಾಗದು, ಬ್ರಾಹ್ಮಣದ್ವೇಷವನ್ನು ಒಪ್ಪಲಾಗದು. ಬಸವಣ್ಣನವರ ಕೆಲವು ವಚನಗಳನ್ನು ಬ್ರಾಹ್ಮಣದ್ವೇಷಕ್ಕೆಂದು ಬಳಸಿಕೊಳ್ಳುವ ತಮ್ಮ ಹುನ್ನಾರವನ್ನು ಜೀವವಿರೋಧಿ ಎಂದು ಖಂಡಿಸಿ ವಿರೋಧಿಸಲೇ ಬೇಕಾಗುತ್ತದೆ.

          • ವಿಶ್ವಾರಾಧ್ಯ ಸತ್ಯಂಪೇಟೆ

            ಕಟ್ಟೀಮನಿಯವರೆ, ಬಸವಣ್ಣನವರು ಎಂದಿಗೂ ಬ್ರಾಹ್ಮಣ ವಿರೋಧಿಯಾಗಿರಲಿಲ್ಲ. ಬ್ರಾಹ್ಮಣ್ಯ ದ ವಿರೋಧಿಯಾಗಿದ್ದರು. ಅವರು ಒಂದೆರಡು ನಿಂದೆಯ ಮಾತುಗಳನ್ನು ಆಡಲಿಲ್ಲ. ಇಡೀ ಸಾಮಾಜಿಕ ,ರಾಜಕೀಯ, ಸಾಹಿತ್ಯಿಕವಾದ ವಾತಾವರಣವನ್ನು ತಮ್ಮ ಮೂಗಿನ ನೇರಕ್ಕೆ ಇಟ್ಟು ಜನ ಸಾಮಾನ್ಯರನ್ನು ದಿಕ್ಕುಗೆಡಿಸಿದ್ದರು. ಬಸವಣ್ಣನವರು ಇಂಥವರ ವಿರುದ್ಧ ಸ್ಫೋಟಕ ಶಕ್ತಿಯಾಗಿ ಸಿಡಿದು ನಿಂತರು.

          • ಕಟ್ಟಿಮನಿ

            ಬಸವಣ್ಣನವರು ಬ್ರಾಹ್ಮಣ್ಯದ ವಿರೋಧಿ ಆಗಿದ್ದರು ಎಂಬುದು ತಮ್ಮ ಅಭಿಪ್ರಾಯ. ಅದು ತಪ್ಪು ಎಂಬುದು ನನ್ನ ಭಾವನೆ. ಬಸವಣ್ಣನವರು ಬ್ರಾಹ್ಮಣ್ಯವನ್ನು ಸರಿಯಾಗಿ ಪಾಲಿಸದೆ ಹೆಣ್ಣು ಹೊನ್ನು ಮಣ್ಣುವಿನಲ್ಲಿ ಮುಳುಗಿದ್ದ ಕೆಲವು ಬ್ರಾಹ್ಮಣರ ದುರಾಚಾರದ ವಿರೋಧಿಯಾಗಿದ್ದರು. ಬ್ರಾಹ್ಮಣ್ಯವನ್ನು ವ್ರತನಿಷ್ಠೆಯಿಂದ ಪಾಲಿಸುತ್ತಿದ್ದ ಮಿಕ್ಕ ಬ್ರಾಹ್ಮಣರ ಬಗ್ಗೆ ಅವರಿಗೆ ಸದ್ಭಾವವೇ ಇತ್ತು. ಆದುದರಿಂದಲೇ ಅವರು
            “ಹೊನ್ನು-ಹೆಣ್ಣು-ಮಣ್ಣೆಂಬ
            ಕರ್ಮದ ಬಲೆಯಲ್ಲಿ ಸಿಲುಕಿ
            ವೃಥಾ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.
            ಹಾರುವೆನಯ್ಯ ಭಕ್ತರ ಬರವ ಗುಡಿಗಟ್ಟಿ!
            ಹಾರುವೆನಯ್ಯ ಶರಣರ ಬರವ ಗುಡಿಗಟ್ಟಿ!
            ಕೂಡಲಸಂಗಮದೇವನು
            ವಿಪ್ರಕರ್ಮವ ಬಿಡಿಸಿ
            ಅಶುದ್ಧನ ಶುದ್ಧನ ಮಾಡಿದನಾಗಿ.”
            ಎಂದು ಬರೆದದ್ದು.
            ಇದಕ್ಕೆ ಪೂರಕವಾಗಿ ಇನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾರೆ:
            “ಊರ ಸೀರೆಗೆ ಅಸಗ ಬಡಿವಡೆದಂತೆ
            ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು,
            ಎಂದು ಮರುಳಾದೆ.
            ನಿಮ್ಮನರಿಯದ ಕಾರಣ,
            ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವ.”
            ಹೊನ್ನು ಹೆಣ್ಣು ಮಣ್ಣು ಎಂದು ಮರುಳಾಗಿ ತಾನೂ ಕೆಟ್ಟೆ ಅಂತಲ್ಲವೇ ಬಸವಣ್ಣನವರು ಹೇಳಿರುವುದು? ಬಸವಣ್ಣನವರೂ ಬ್ರಾಹ್ಮಣ್ಯವನ್ನು ಸರಿಯಾಗಿ ಪಾಲಿಸಿರಲಿಲ್ಲ. ಇದರ ಅರಿವು ಅವರಿಗೂ ಇತ್ತು.

          • ಸಹನಾ

            “ಬಸವಣ್ಣನವರು ಎಂದಿಗೂ ಬ್ರಾಹ್ಮಣ ವಿರೋಧಿಯಾಗಿರಲಿಲ್ಲ. ಬ್ರಾಹ್ಮಣ್ಯದ ವಿರೋಧಿಯಾಗಿದ್ದರು”
            ಈ ತೌಡನ್ನು ಇಂದಿನ ಬಹುತೇಕ ವಿಚಾರವಾಧಿ ಚಿಂತಕರೆಂದು ಕೊಂಡಿರುವವರು (ಹಾಗೆ ಕರೆಸಿಕೊಳ್ಳಲು) ಕುಟ್ಟಿಯಾಗಿದೆ. ಇದನ್ನು ಅನುಭಾವಿಗಳಾದ ಬಸವಣ್ಣನವರಿಗೆ ಯಾಕೆ ಮೆತ್ತುತ್ತೀರಿ? ಹೀಗೆ ಬಸವಣ್ಣನವರಾಗಲೀ ಇತರ ಯಾವುದಾದರೂ ಶರಣರಾಗಲೀ ಹೇಳಿರುವ ವಚನಗಳು ತಮಗೆ ರಹಸ್ಯವಾಗಿ ಲಭ್ಯವಾಗಿದೆಯೇ? ಇದ್ದರೆ ಸ್ವಲ್ಪ ಇಲ್ಲಿ ಸ್ವಲ್ಪ ಕಾಪಿ ಪೇಸ್ಟ್ ಮಾಡುತ್ತೀರಾ…!!!

          • ಕಟ್ಟಿಮನಿ

            ಸಹನಾ ಅವರೇ, ಬಸವಣ್ಣನವರು ಖಂಡಿತ ಬ್ರಾಹ್ಮಣ್ಯದ ವಿರೋಧಿ ಆಗಿರಲಿಲ್ಲ. ಅಷ್ಟೇ ಅಲ್ಲ ಅವರು ದೇವಾಲಯದ ವಿರೋಧಿಯೂ ಆಗಿರಲಿಲ್ಲ. ಬಸವಣ್ಣನವರು ದೇವಾಲಯ ವಿರೋಧಿಸಿದ್ದಾರೆ ಅಂತ ಆರಾಧ್ಯ ಅವರು ಹೇಳಿದ್ದಾರೆ. ಬಸವಣ್ಣನವರು ದೇವಾಲಯದ ವಿರೋಧಿ ಎಂಬುದು ಅವರ ಗೃಹೀತ. ಅವರ ವಚನಗಳು ಬೇರೆಯನ್ನೇ ಹೇಳುತ್ತಿವೆ. ದೇವಾಲಯ ತತ್ವವನ್ನು ಬಸವಣ್ಣ ವಿರೋಧಿಸಿಲ್ಲ. ವಿರೋಧಿಸಿದ್ದರೆ ತನ್ನ ದೇಹವೇ ದೇವಾಲಯ ಎಂದು ಹೇಳುತ್ತಿರಲಿಲ್ಲ. ಸ್ಥಾವರ ದೇವಾಲಯವಷ್ಟೇ ಸಾಲದು ಜಂಗಮ ದೇವಾಲಯವೂ ಬೇಕು ಅಂತ ಅಲ್ವೇ ಅವರು ಹೇಳಿದ್ದು? ಕಟ್ಟಡವು ಮುರಿದು ಹೋಗಬಹುದು ಕಾಲದ ಹೊಡೆತಕ್ಕೆ ಸಿಕ್ಕಿ. ಅಥವಾ ತುರುಕರ ಮಂಗೋಲರ ಧಾಳಿಗೆ ಸಿಕ್ಕಿ ನಾಶವಾಗಬಹುದು (ಬಸವಣ್ಣನವರ ಕಾಲದಲ್ಲೇ ಅಲ್ಲವೇ ಮುಸ್ಲಿಂ ಧಾಳಿಕೋರರ ವಿಧ್ವಂಸ ಕ್ರಿಯೆಗಳು ಮುಂಚೂಣಿಗೆ ಬಂದದ್ದು). ಅದೆಷ್ಟೋ ದೇವಸ್ಥಾನಗಳು ಧಾಳಿಕೋರರಿಂದ ಲೂಟಿಗೆ ಒಳಪಟ್ಟು ಧ್ವಂಸವಾದವಲ್ಲವೇ! ಆಗ ಭಕ್ತರು ಏನು ಮಾಡಬೇಕು? ನಂಬಿದ ದೇವಾಲಯಗಳೇ ನಾಶವಾದಾಗ ಭಕ್ತಿಗೆ ನೆಲೆ ಎಲ್ಲಿ? ಈ ಎಲ್ಲ ಸಮಸ್ಯೆಗಳ ಗಹನವಾದ ಅರಿವು ಬಸವಣ್ಣನವರಿಗೆ ಇತ್ತು. ಕಾಲ ಹಾಗೂ ಧಾಳಿಕೋರರ ಹಾವಳಿಗೆ ದೇವಾಲಯಗಳು ನಾಶವಾದರೂ ಭಕ್ತಿಗೆ ನೆಲೆಯೊಂದು ಇರಬೇಕು ಎಂದು ಅವರು ತಿಳಿದರು. ಎಂತಹ ಉನ್ನತ ಹಾಗೂ ಮುಂದಾಲೋಚನೆ ಅವರದ್ದಾಗಿತ್ತು ನೋಡಿ! ಆದುದರಿಂದಲೇ ಅವರು ಇಷ್ಟ ಲಿಂಗ ಹಾಗೂ ಜಂಗಮಕ್ಕೆ ಮಹತ್ವ ನೀಡಿದ್ದು. ಭಕ್ತರು ಸ್ಥಾವರವಾದ ದೇವಾಲಯವು ಶಿಥಿಲ ಅಥವಾ ಧಾಳಿಗೆ ಒಳಗಾದರೂ ಕೂಡ ಇಷ್ಟಲಿಂಗದ ಮುಖೇನ ಭಕ್ತಿರತರಾಗಿರುವ ಏರ್ಪಾಡನ್ನು ಬಸವಣ್ಣನವರು ಮಾಡಿಕೊಟ್ಟರು. ಅಷ್ಟೇ ಅಲ್ಲ ಭಕ್ತಿಯು ಜಂಗಮದ ಮೂಲಕವೂ ನಿರಂತವಾಗಿ ಕಾಲದ ಹೊಡೆತಕ್ಕೆ ಧಾಳಿಕೋರರ ವಿಧ್ವಂಸಕತೆಗೆ ಸೆಡ್ಡು ಹೊಡೆದು ನಿಲ್ಲಲಿ ಎಂದು ಅವರು ಬಯಸಿದರು.

    • Amaresh

      I had requested Ranjan Darga to show me some Vachanas that say either explicitly or implicitly that caste must be eliminated. Despite repeated requests for such Vachanas, Ranjan Darga has not furnished even one such vachana. I now make the same request to Nagaraj. I hope he will heed to my request.

      ಪ್ರತಿಕ್ರಿಯೆ
      • Ramjan Darga

        ಅಮರೇಶ್ ಅವರೇ ನಿಮಗೆ ಉತ್ತರ ಕೊಟ್ಟ ಜಾಗವನ್ನು ಬಿಟ್ಟು ಬೇರೆ ಕಡೆ ಹುಡುಕಿದರೆ ಸಿಗುವುದೆ? “ಕುಲವನರಸುವರೆ ಶರಣರಲ್ಲಿ, ಜಾತಿಸಂಕರವಾದ ಬಳಿಕ?” ಎಂದು ಬಸವಣ್ಣನವರು ಪ್ರಶ್ನಿಸಿದ್ದಕ್ಕೆ ಏನು ಉತ್ತರ ಕೊಡುವಿರಿ?
        ನೀವು ಪ್ರಶ್ನೆ ಕೇಳಿದ ಸ್ಥಳದಲ್ಲಿ ಅನೇಕ ವಚನಗಳೊಂದಿಗೆ ಉತ್ತರಿಸಿರುವೆ ಓದಿ ನೋಡಿ.

        ಪ್ರತಿಕ್ರಿಯೆ
        • ಸಹನಾ

          again and again mis interpretations!!! ” once jaatis are mixed does anyone search for kula?” do not mean that jaatis must be eradicated. any one can say anything unrelated to the question and yet assume it is the answer to the question by simply distorting the question itself. I think Darga sir is well trained in this tactics. But, the irony is such tactics received as an authority on the said subject.

          ಪ್ರತಿಕ್ರಿಯೆ
          • Amaresh

            exactly! and another noteworthy point is that this vachana hasn’t said jaati sankara is desirable. it only says don’t search for kula when jaati sankara has happened.

          • Ramjan Darga

            ಎಂಥ ವಿತಂಡವಾದ ನಿಮ್ಮಂಥವರ ಜೊತೆ ಚರ್ಚಿಸುವುದು ಅಸಹ್ಯವಾದುದು.

          • Amaresh

            ಅನುಭಾವಿಗಳು ಚರ್ಚೆ ಮಾಡಲು ಅಸಹ್ಯ ಪಡುತ್ತಾರೆ ಅಂತ ಗೊತ್ತಿರಲಿಲ್ಲ. ಅಸಹ್ಯ ಪಟ್ಟರೆ ನಿಮ್ಮ ವಾದ ನೆಟ್ಟಗಾಗಿ ಬಿಡುವುದಿಲ್ಲ.

          • ವಿಶ್ವಾರಾಧ್ಯ ಸತ್ಯಂಪೇಟೆ

            ಬಲ್ಲವರೊಡನೆ ಬವರವಾದರೆ ಸೋಲಲುಂಟು ಗೆಲಲುಂಟು ‘ ಎಂದು ಶರಣರೇ ಹೇಳಿಲ್ಲವೆ ? ದರ್ಗಾ ಅವರೆ !?

  2. Amaresh

    ನಾಗರಾಜ್ ಸರ್,
    ಇಲ್ಲಿ ತಾವು ವಚನಕಾರರಿಗೇ ವಿಶಿಷ್ಟ ಎಂದು ಹೇಳುತ್ತಿರುವ ಬಹುತೇಕ ವಿಚಾರಗಳು ಸ್ವಲ್ಪ ಕಣ್ಣಗಲಿಸಿ ನೋಡಿದರೆ ವಿಶಿಷ್ಟವಲ್ಲ ಅಂತ ಸ್ಪಷ್ಟವಾಗುತ್ತದೆ. ಉದಾಹರೆಣೆಗೆ ಶ್ರೀ ವಿಜಯದಾಸರ “ಸಾಧನಕೆ ಬಗೆಗಾಣೆನೆನ್ನಬಹುದೆ” ಎಂಬ ಪದವನ್ನು ತೆಗೆದುಕೊಳ್ಳಿ.
    ಸಾಧನಕೆ ಬಗೆಗಾಣೆನೆನ್ನಬಹುದೆ
    ಸಾದರದಿ ಗುರುಕರುಣ ತಾ ಪಡೆದ ಬಳಿಕ || ಪ ||
    ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ
    ಉಂಡು ಉಟ್ಟದ್ದೆಲ್ಲ ವಿಷ್ಣುಪೂಜೆ
    ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ
    ಹಿಂಡು ಮಾತುಗಳೆಲ್ಲ ಹರಿಯ ನಾಮ || ೧ ||
    ವಾಗತ್ಯಪಡುವುದೆ ವಿಧಿನಿಷೇಧಾಚರಣೆ
    ರೋಗಾನುಭವವೆಲ್ಲ ಉಗ್ರತಪವು
    ಆಗದವರಾಡಿಕೊಂಬುದೆ ಆಶೀರ್ವಾದ
    ಬೀಗರುಪಚಾರವೇ ಭೂತದಯವು || ೨ ||
    ಮೈಮರೆತು ಮಲಗುವುದೆ ಧರಣಿಗೆ ನಮಸ್ಕಾರ
    ಕೈಮೀರಿ ಹೋದದ್ದೆ ಕೃಷ್ಣಾರ್ಪಣ
    ಮೈಮನೋವೃತ್ತಿಗಳೆ ವಿಷಯದಲಿ ವೈರಾಗ್ಯ
    ಹೊಯ್ಮಾಲಿತನವೆಲ್ಲ ಹರಿಯ ವಿಹಾರ || ೩ ||
    ಹಿಡಿದ ಹಟ ಪೂರೈಸಲದು ಹರಿಯ ಸಂಕಲ್ಪ
    ನಡೆದಾಡುವೋದೆಲ್ಲ ತೀರ್ಥಯಾತ್ರೆ
    ಬಡತನ ಬರಲದೇ ಭಗವದ್ಭಜನೆಯೋಗ
    ಸಡಗರದಲಿಪ್ಪುದೆ ಶ್ರೀಶನಾಜ್ಞೆ || ೪ ||
    ಬುದ್ಧಿಸಾಲದೆ ಸುಮ್ಮನಿರುವುದೇ ಸಮ್ಮತವು
    ಯದೃಚ್ಛಾಲಾಭವೇ ಸುಖವು ಎನಲು
    ಮಧ್ವಾಂತರ್ಗತ ಶ್ರೀವಿಜಯವಿಠ್ಠಲರೇಯ
    ಹೃದ್ಗತಾರ್ಥವ ತಿಳಿದು ಒಪ್ಪಿಸಿಕೊಳನೆ || ೫ ||

    ಪ್ರತಿಕ್ರಿಯೆ
    • Ramjan Darga

      ಶರಣರು ಯಾವ ಕಾಲದವರು? ವಿಜಯದಾಸರು ಯಾವ ಕಾಲದವರು?

      ಪ್ರತಿಕ್ರಿಯೆ
      • Amaresh

        I understand your tactics very well. But I won’t let this debate be scuttled by you. I’ll respond only to Nagaraj Sir’s questions.

        ಪ್ರತಿಕ್ರಿಯೆ
  3. ಚೈತನ್ಯ

    ನಾಗರಾಜ್, ನಿಮಗೆ ಕಂಡಂತೆ ನೀವು ಅರ್ಥೈಸಿದ್ದೀರಿ; ಬಾಲಗಂಗಾಧರ ಅವರ ಸಂಶೋಧನೆಗೆ ತಕ್ಕಂತೆ ಅವರು ಅರ್ಥೈಸಿದ್ದಾರೆ. ತಮ್ಮತಮಗೆ ತೋಚಿದ ವಾದಗಳಷ್ಟೇ ಇವು. ಇತಿಹಾಸವನ್ನು ನಾವ್ಯಾರೂ ಕಂಡಿಲ್ಲದಿರುವುದರಿಂದ ಮತ್ತು ಭಾರತದಲ್ಲಿ ಇತಿಹಾಸವನ್ನು ದಾಖಲಿಸುವ ಕ್ರಮವೇ ಇಲ್ಲದ್ದರಿಂದ ಇವೆಲ್ಲವೂ ನಮ್ಮ ನಮ್ಮ ಅರ್ಥೈಕೆಗಳಲ್ಲಿ ಕೊನೆಗೊಳ್ಳುತ್ತವೆ. ಹಾಗಿರುವಾಗ ಯಾವುದು ಸರಿ ಯಾವುದು ತಪ್ಪು ಎಂದು ಖಡಾಖಂಡಿತವಾಗಿ ಹೇಳಲಾಗುತ್ತದೆಯೇ? ವಿಷಯ ಹಾಗಿರುವಾಗ ಬಾಲಗಂಗಾಧರರ ವ್ಯಾಖ್ಯಾನ ನಿಮ್ಮದ್ದಕ್ಕೆ ಹೊಂದಿಕೆಯಾಗಲಿಲ್ಲ ಎಂದೊಡನೆ ‘ಕಣ್ಣಿಗೆ ಮಣ್ಣು ತೂರುತ್ತಿದ್ದಾರೆ’ ಎಂದು ಏಕೆ ಅರ್ಥೈಸುತ್ತಿದ್ದೀರಿ? ಬಾಲಗಂಗಾಧರರ ತರ್ಕವನ್ನು ಒಪ್ಪುವವರಿಗೆ ನಿಮ್ಮ ತರ್ಕವೂ ಹಾಗೆಯೇ, ಕಣ್ಣಿಗೆ ಮಣ್ಣು ತೂರಿದಂತೆ, ಕಾಣುತ್ತದೆ ಅಲ್ಲವೇ? ನೀವು ಒಪ್ಪದಿರಬಹುದು ಆದರೆ ಅವಹೇಳನ ಮಾಡುವಂತಿಲ್ಲ. ಬೇರೊಬ್ಬರ ದೃಷ್ಟಿಕೋನವನ್ನು ಅವಹೇಳನ ಮಾಡುವವರು ಎಂದಿಗೂ ಪಂಡಿತರಾಗಲಾರರು.
    – ಚೈತನ್ಯ

    ಪ್ರತಿಕ್ರಿಯೆ
    • ವಿಶ್ವಾರಾಧ್ಯ ಸತ್ಯಂಪೇಟೆ

      ಚೈತನ್ಯ ಅವರೆ,
      ಡಂಕಿನ ಝಳಕಿಯವರು ಹಾಗೂ ಬಾಲಗಂಗಾಧರ ಮಹಾಶಯರು ಸುಳ್ಳುಗಳ ಸುರುಳಿಯನ್ನು ಹೇಗೆ ಬಿಚ್ಚಿ ನಮ್ಮೆಲ್ಲರನ್ನು ಬೆಕ್ಕಸಬೆರಗಾಗುವಂತೆ ಮಾಡುತ್ತಿದ್ದಾರೆ ಎಂಬುದನ್ನು ಕೇವಲ ಅವರ ವಿಚಾರ ಸರಣಿ ಓದಿದರೆ ಮಾತ್ರ ಅರ್ಥವಾಗುವಂಥದ್ದಲ್ಲ. ಈ ವೈದಿಕ ವೈರಸಗಳ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮ ಭಾರತದ ಇತಿಹಾಸವನ್ನು ಹಲವಾರು ಜನ ದಾರ್ಶನಿಕರ ವಿಚಾರವಾದಿಗಳ ಅನುಭವ ಹಾಗೂ ಗ್ರಂಥಗಳನ್ನು ಅಭ್ಯಸಿಸಬೇಕು. ಆಗಲೂ ಈ ಮಹಾಶಯ ದ್ವಯರುಗಳು ಕಣ್ಣಿಗೆ ಮಣ್ಣು ತೂರುತ್ತಿಲ್ಲ ಎಂದು ನಿಮಗೆ ಅನಿಸಿದರೆ ನಾನು ಆಗ ನಿಮ್ಮೊಂದಿಗೆ ಮಾತಾಡುತ್ತೇನೆ.

      ಪ್ರತಿಕ್ರಿಯೆ
  4. ವಿಜಯ್

    [What Mr. Darga, Mr.GNN are telling is a simple truth.]
    ಸರಳ ಸತ್ಯವನ್ನು ಸರಳ ದಾರಿಯಲ್ಲಿಯೇ ಹೇಳಿದರೆ ಚೆನ್ನಾಗಿರುತ್ತೆ..ಸ್ವಂತ ಅಜೆಂಡಗಳನ್ನು ತುರುಕದೆ.
    [The Sri Krishna Matha in Udupi never allow even Bhramin women. let alone SC/ST/OBC to perform pooja by touching the statue of god. If this is the position of Bhramin women, then one can only speculate what is the perception of Bhramins about the dalit, OBCs etc. Basava has rejected this system.]
    ಸರ್..ನೀವು ಏಕೆ ಚಿಂತೆ ಮಾಡುತ್ತೀರಿ ಶ್ರೀಕೃಷ್ಣ ಮಠದವರ ಬಗ್ಗೆ? ಏಕದೇವೋಪಾಸಕರ, ದೇವಾಲಯ ಸಂಸ್ಕೃತಿ ತಿರಸ್ಕರಿಸುವವರ ಈ ಕಳಕಳಿ ನನಗೆ ಆಶ್ಚರ್ಯವುಂಟುಮಾಡುತ್ತದೆ. ಶ್ರೀಕೃಷ್ನ ಮಠದವರಿಗೆ, ಅಲ್ಲಿಯ ಸ್ವಾಮಿಗಳಿಗೆ ತಮ್ಮದೇ ಆದ ಪದ್ಧತಿಗಳಿವೆ. ಅವನ್ನವರು ಮಾಡಿಕೊಂಡು ಹೋದರೆ ನಮಗಾಗುವ ತೊಂದರೆ ಎಂತದ್ದು? ಅಷ್ಟಕ್ಕೂ ಅವು ನಮಗೆ ಹಿಡಿಸುವುದಿಲ್ಲವೆಂದರೆ ಆ ಜಾಗಕ್ಕೆ ಹೋಗದಿದ್ದರಾಯಿತು ಅಷ್ಟೆ..ದಾರಿ ಸರಳವಿಲ್ಲವೆ?. ಬ್ರಾಹ್ಮಣ ಹೆಂಗಸರಿಗೆ ಮೂರ್ತಿ ಮುಟ್ಟಲು ಕೊಡುವುದಿಲ್ಲ ಎನ್ನುವುದು, ಯಾವುದೇ ಬ್ರಾಹ್ಮಣ ಗಂಡಸರಿಗೆ ಮುಟ್ಟಲು ಅವಕಾಶ ಕೊಡುತ್ತಾರೆ ಎಂಬ ಅರ್ಥ ಕೊಡುತ್ತದೆ..ಆದರೆ ಇದು ಸತ್ಯವೆ?. ಬಸವಣ್ಣನವರು ಪ್ರತಿಪಾದಿಸಿದ ಆದರ್ಶ ಧರ್ಮ ಈಗಲೂ ಇದ್ದರೆ, ಅದರ ವರ್ತಮಾನದಲ್ಲಿನ ಪ್ರತಿಪಾದಕರು ಸುಮ್ಮನೆ ಪುಸ್ತಕ/ಲೇಖನ ಬರೆದು ಆದರ್ಶಗಳನ್ನು ಜನರ ಮುಂದಿಡುವ ಬದಲು ಶೋಷಿತರನ್ನು ತಮ್ಮ ತೆಕ್ಕೆಗೆ ಏಕೆ ತೆಗೆದುಕೊಳ್ಳಬಾರದು? ಸಾಧ್ಯವಾಗದ ಕೆಲಸವದು, ತೀರ ಆದರ್ಶ ಹೊಂದಿದ್ದಕ್ಕೆ ಆಯುಸ್ಸು ಕಡಿಮೆ ಎಂಬ ಸತ್ಯದರ್ಶನವೆ? ಅಥವಾ ಈಗಿರುವ ತೆಗಳುವ ಸುಖದಿಂದ,ತಪ್ಪುಗಳನ್ನು ಮತ್ತೊಬ್ಬರ ಮೇಲೆ ಹೊರಿಸುವ ಸುಖದಿಂದ ವಂಚಿತರಾಗುತ್ತೀರಿ ಎಂಬ ಚಿಂತೆಯೊ?
    [My sincere advise to the followers of S.N.B., RRH, DJ etc is that not to make any attempt to hurt people like Ramjan Darga by raising the issue of his religion/caste/belief etc. He is basically a humane human being. And he is a sincere Basava follower. He ha no caste, religion. He is a anubhavi. He is a mystic. Do not hurt the feeling of such proplr.]
    ದಯವಿಟ್ಟು ದರ್ಗಾರವರಿಗೂ ಕೂಡ ಇದೇ ಮಾತನ್ನು ಹೇಳಿ. ಅವರಿಗೆ ಇನ್ನೊಂದು ಧರ್ಮದ/ಮತದ ಭಾವನೆಗಳನ್ನು ತಮ್ಮ ಕಪೋಲಕಲ್ಪಿತ ಕತೆಗಳ (ಬಸವಣ್ಣನವರು ಕೂಡ ಹೀಗೇಯೇ ಹೇಳುತ್ತಿದ್ದರು ಎಂದು ಕೊನೆಗೊಳಿಸುವುದು ಬೇರೆ!) ಮೂಲಕ ಹಾನಿಮಾಡದಂತೆ. ನಾನು ಒಳ್ಳೆಯವನು ಅಂತ ಹೇಳಿಕೊಳ್ಳಲು ನನ್ನ ಅರ್ಹತೆಗಳನ್ನಷ್ಟೇ ಹೇಳಿಕೊಂಡರೆ ಸಾಕು..ನಂಬುವವರು ನಂಬುತ್ತಾರೆ…ಇದು ಸರಳ ಸತ್ಯ!. ಮತ್ತೊದೆನೆಂದರೆ ಇಲ್ಲಿ ವಿಷಯ ಮುಖ್ಯ..ನಮ್ಮ ಜಾತಿಯೊ,ಧರ್ಮವೊ..ದರ್ಗಾರ ಜಾತಿ, ಧರ್ಮವೊ ಅಲ್ಲ. ದರ್ಗಾರ ಸ್ಥಾನದಲ್ಲಿ ನೀವಿದ್ದರೂ ಇದರಲ್ಲಿ ಬದಲಾವಣೆ ಇರುತ್ತಿರಲಿಲ್ಲ. ದಯವಿಟ್ಟು ಚರ್ಚೆಯ ಹಾದಿಯನ್ನು ತಪ್ಪಿಸಬೇಡಿ.

    ಪ್ರತಿಕ್ರಿಯೆ
    • Ramjan Darga

      ನೀವು ಬೇರೊಂದು ಕಡೆ ನನ್ನ ಹೆಸರು ಬಳಸುವ ಅವಶ್ಯಕತೆ ಇಲ್ಲ. ನಾನು ಉತ್ತರ ಕೊಡುವಲ್ಲಿ ಪ್ರಶ್ನಿಸಿ. ನಾನೂ ನಿಮಗೆ ಅಲ್ಲಿಯೇ ಪ್ರಶ್ನಿಸುವೆ. ಜಿ.ಎನ್. ನಾಗರಾಜ್ ಅವರ ಯೋಚನಗಳ ಬಗ್ಗೆ ಓದುಗರಿಗೆ ದಾರಿ ತಪ್ಪಿಸುವ ಪ್ರಯತ್ನ ಮಾಡಬೇಡಿ. ವಿಜಯ್, ಅಮರೇಶ್ ಮತ್ತು ಸಹನಾ ಅವರೆ.

      ಪ್ರತಿಕ್ರಿಯೆ
      • ವಿಜಯ್

        ದರ್ಗಾ ಸರ್..
        ನಿಮ್ಮ ಹೆಸರನ್ನು ಇಲ್ಲಿ ಎತ್ತಿದ್ದು ಟಿ.ಆರ್.ಸಿ ಯವರು. ಕೆಳಗೆ ಅವರ ಕಮೆಂಟ್ ಇದೆ..ದಾರಿ ತಪ್ಪಿಸುವ ಪ್ರಯತ್ನ ನಡೆದಿದ್ದರೆ ಅದು ಟಿ.ಆರ್.ಸಿ ಯವರಿಂದ. ವೈಯುಕ್ತಿಕ ಸೆಂಟಿಮೆಂಟಗಳನ್ನು ತಂದು..ಅದಕ್ಕೆ ದಯವಿಟ್ಟು ದಾರಿ ತಪ್ಪಿಸಬೇಡಿ ಎಂದು ಕೇಳಿಕೊಂಡಿದ್ದು.

        ಪ್ರತಿಕ್ರಿಯೆ
      • ಸಹನಾ

        Avadhi readers are intelligent enough to choose the better way(arguments) for themselves Darga sir, you don’t worry about them and also don’t underestimate Nagaraj sir too. its better you concentrate on the criticism and questions that you are facing.

        ಪ್ರತಿಕ್ರಿಯೆ
      • Amaresh

        ಓದುಗರ ದಾರಿ ತಪ್ಪಿಸುತ್ತಾ ಬಂದಿರುವವರು ಯಾರು ಅಂತ ಓದುಗರಿಗೆ ಚೆನ್ನಾಗಿ ಗೊತ್ತಿದೆ ದರ್ಗಾ ಸರ್. ಅವಧಿಯ ಓದುಗರು ನೀವು ಅಂದುಕೊಂಡ ಹಾಗೆ ಪೆದ್ದರೇನಲ್ಲ ಎಮಾರಿಸಿಕೊಳ್ಳಲು. ಇಲ್ಲಿ ನಿಮ್ಮ ಬಗ್ಗೆ ಚರ್ಚೆ ಮಾಡಲು ನನಗಂತೂ ಸುತಾರಾಂ ಇಷ್ಟವಿಲ್ಲ. ನಿಮ್ಮ ಲೇಖನಗಳ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗಳಿಗೆ ನೀವು ಅಲ್ಲಿಯೇ ಉತ್ತರ ಕೊಡುವುದು ಉತ್ತಮ.

        ಪ್ರತಿಕ್ರಿಯೆ
        • ವಿಶ್ವಾರಾಧ್ಯ ಸತ್ಯಂಪೇಟೆ

          ವಚನ ಸಾಹಿತ್ಯ ಅಭ್ಯಾಸಗಳನ್ನು ಹಾಗೂ ಅವುಗಳನ್ನು ಓದಿ ಅಂತರ್ಗತ ಮಾಡಿಕೊಂಡವರನ್ನು ಯಾರೂ – ಎಂಥವರು ದಾರಿತಪ್ಪಿಸಲಿಕ್ಕೆ ಸಾಧ್ಯವಿಲ್ಲ.

          ಪ್ರತಿಕ್ರಿಯೆ
  5. Ramjan Darga

    ನಾನು ಅನೇಕ ವಚನಗಳನ್ನು ದಾಖಲಿಸಿದ್ದೇನೆ ಅಮರೇಶ್ ಓದಿ ನೋಡಿ.
    “ಕುಲವನರಸುವರೇ ಶರಣರಲ್ಲಿ, ಜಾತಿ ಸಂಕರವಾದ ಬಳಿಕ?” ಎಂದು ಬಸವಣ್ಣನವರು ಪ್ರಶ್ನಿಸಿದ್ದು ಸಾಕಲ್ಲವೆ? ಹೆಚ್ಚಿನ ವಚನಗಳೊಂದಿಗೆ ನಿಮಗೆ ಉತ್ತರಿಸಿದ್ದೇನೆ. ಓದಿ ನೋಡಿ.

    ಪ್ರತಿಕ್ರಿಯೆ
    • Amaresh

      ದರ್ಗಾ ಸರ್, ನಿಮ್ಮೊಡನೆ ಇಲ್ಲಿ ಚರ್ಚೆ ಮಾಡುವುದು ಔಚಿತ್ಯಪೂರ್ಣ ಅಂತ ಅನ್ನಿಸುತ್ತಿಲ್ಲ ನನಗೆ. ಏಕೆಂದರೆ ನಿಮ್ಮೊಡನೆ ಸುದೀರ್ಘ ಚರ್ಚೆಯನ್ನು ನಿಮ್ಮ ಲೇಖನಗಳ ಸಂದರ್ಭದಲ್ಲೇ ಮಾಡಿದ್ದೇನೆ. ಇಲ್ಲಿ ಏನಿದ್ದರೂ ಜಿ. ಏನ್. ನಾಗರಾಜ್ ಸರ್ ಅವರ ಲೇಖನಗಳ ಬಗ್ಗೆ ಚರ್ಚೆ. ಅವರು ಈಗಾಗಲೇ ತಮ್ಮ ಬಗ್ಗೆ “ವಚನಗಳ ಮೌಲ್ಯಗಳು ಪೂರ್ಣವಾಗಿ ಸಾಕಾರಗೊಳ್ಳದಿರುವುದಕ್ಕೆ ಕಾರಣಗಳನ್ನು ವಸ್ತು ನಿಷ್ಠವಾಗಿ ಅಧ್ಯಯನಕ್ಕೊಳಪಡಿಸದೇ ವೈಭವೀಕರಿಸುವುದು, ಅದರಲ್ಲಿ 20ನೆಯ ಶತಮಾನದ ಬೆಳವಣಿಗೆಗಳನ್ನು ವಿಶ್ವ ಸಂಸ್ಥೆ, ಸಂವಿಧಾನ, ಸಂಸತ್ತು , ಮಾರ್ಕ್ಸ್ ವಾದಗಳನ್ನು ಕಾಣುವುದು ಮತ್ತೊಂದು ವೈಪರೀತ್ಯದ ಬೆಳವಣಿಗೆಯಾಗಿದೆ. ಇದು ಈಗ್ಗೆ ಕೆಲವು ದಶಕಗಳ ಹಿಂದೆಯೇ ಆರಂಭವಾಗಿರುವ ಪ್ರವೃತ್ತಿಯಾಗಿದೆ. ವಚನಗಳ ಸತ್ವಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತವೆ ಎಂಬುದನ್ನು ಗಮನಿಸಬೇಕು.” ಅಂತ ಬರೆದಿರುವುದನ್ನು ತಾವು ಗಮನಿಸಿಲ್ಲ ಅಂತ ಕಾಣುತ್ತದೆ.

      ಪ್ರತಿಕ್ರಿಯೆ
  6. Amaresh

    Prof TRC has stated that “The vedas and Madara Chennaiah cannot go together”. This is not factually correct. The Vedas and Madara Channaiah coexisted. Neither tried to undermine or eliminate the other. Even today they co-exist. Indian traditions admit multiple routes to enlightenment. Vedas are the route for some, Madara Channaiah’s is for some others. There is no need to impose a uniform monolithic system on the entire population. If Prof. TRC has problems of any kind with Udupi Krishna temple, he should simply stop going to the temple. No one is forcing him or any one to come to the temple! If he has so much concern about Brahmin women, he is welcome to construct a new Krishna temple that allows Brahmin women to touch the idol of Krishna.

    ಪ್ರತಿಕ್ರಿಯೆ
  7. ಕಟ್ಟಿಮನಿ

    ನೆಚ್ಚಿನ ಕವಿ ಜಿ. ಎಸ್. ಶಿವರುದ್ರಪ್ಪನವರು ಒಂದು ಕಡೆ ಶರಣಧರ್ಮದ ಬಗ್ಗೆ ಹೀಗೆ ಬರದಿದ್ದಾರೆ: “ದೇವಸ್ಥಾನಗಳನ್ನು ನಿರಾಕರಿಸಿ, ದೇವರ ಕಲ್ಪನೆಯನ್ನು ಮನುಷ್ಯನ ಶರೀರಕ್ಕೆ ಸ್ಥಳಾಂತರಗೊಳಿಸಿ, ದೇಹವನ್ನೇ ದೇವಾಲಯವನ್ನಾಗಿ ಮಾಡಿದ,”. ಇಲ್ಲಿ ಒಂದು ವೈರುಧ್ಯವಿದೆ:
    “ದೇವಸ್ಥಾನಗಳನ್ನು ನಿರಾಕರಿಸುವವರು ದೇಹವನ್ನೇ ದೇವಾಲಯವನ್ನಾಗಿಸಿದರು”. ದೇವಸ್ಥಾನವನ್ನು ನಿರಾಕರಿಸುವವರು ದೇಹವನ್ನೇಕೆ ದೇವಾಲಯವಾಗಿಸುವವರು?! ಶಿವರುದ್ರಪ್ಪನವರು ಹೇಳುವ ಪ್ರಕಾರ ದೇವಸ್ಥಾನವು ನಿರಾಕರಿಸುವಂಥದ್ದು ಆಗಿದ್ದರೆ ದೇಹವೂ ದೇವಾಲಯ ಆದ ಮೇಲೆ ನಿರಾಕರಿಸಲ್ಪಡುತ್ತದೆ. ಅಲ್ಲವೇ?

    ಪ್ರತಿಕ್ರಿಯೆ
    • ವಿಶ್ವಾರಾಧ್ಯ ಸತ್ಯಂಪೇಟೆ

      ದೇವಾಲಯಗಳಿಂದ ಜನ ಸಾಮಾನ್ಯರ ಶೋಷಣೆ ಸುಲಿಗೆ ನಡೆದಿತ್ತು. ಸಚರಾಚರ ವಸ್ತುಗಳಲ್ಲಿ ಅಡಗಿರುವನೆಂದು ಹೇಳಲಾಗುವ ದೇವರನ್ನು ಕೇವಲ ಗುಡಿಗಳಲ್ಲಿ ಬಂಧಿಸಿ ಜನ ಸಾಮಾನ್ಯರ ಮತಿಯನ್ನು ತಿಥಿ ಮಾಡಿಟ್ಟಿದ್ದರು. ಆದ್ದರಿಂದಲೇ ಬಸವಣ್ಣ ದೇಹವನ್ನು ದೇವಾಲಯ ಮಾಡಿದರು. ಅಂದರೆ ಸ್ಥಾವರವನ್ನು ಅಲ್ಲಗಳೆದು ಪ್ರತಿಯೊಬ್ಬರೂ ದೇವನನ್ನು ತಮ್ಮ ದೇಹದ ಮೂಲಕ ಕಾಣಲು ಸಾಧ್ಯವೆಂದು ತಿಳಿಸಿದರು. ಬಹುತೇಕರು ದೇಹವನ್ನು ತಿರಸ್ಕರಿಸಿದರು ಶರಣರು ಮಾತ್ರ ತಮ್ಮ ಪರಿಶುದ್ಧವಾದ ಕಾಯಕದ ಮೂಲಕ ಕೈಲಾಸ ಕಂಡರು. ಸ್ಥಾವರವಾಗಿರುವ ಯಾವುದೇ ವಸ್ತುವು ಅವಿನಾಸಿ ಆದರೆ ವಿಚಾರಗಳು ಎಂದೆಂದಿಗೂ ನಮ್ಮನ್ನು ಜಾಗೃವಾಗಿರುವಂತೆ ಬದುಕಿಸುತ್ತವೆ.

      ಪ್ರತಿಕ್ರಿಯೆ
      • ಕಟ್ಟಿಮನಿ

        ದೇವಾಲಯವು ಶೋಷಣೆಯ ಕೇಂದ್ರ ಅಂದ ಮೇಲೆ ದೇಹವನ್ನು ದೇವಾಲಯವಾಗಿಸುವುದರಲ್ಲಿ ಅರ್ಥವಿಲ್ಲ ಆರಧ್ಯರೆ! ನೀವು ವೈರುಧ್ಯವನ್ನು ಅರ್ಥಮಾಡಿಕೊಳ್ಳದೆ ಹಳೆಯ ಜಪವನ್ನು ಹೊಸದು ಎಂಬ ರೀತಿಯಲ್ಲಿ ಹಾಡುತ್ತಿದ್ದೀರಿ. ಕಮೆಂಟಿಸುವ ಮೊದಲು ಏನು ಹೇಳಿದ್ದಾರೆ ಅಂತ ಒಂದೆರಡು ನಿಮಿಷ ಆದರೂ ನೀವು ಯೋಚಿಸಬೇಕಲ್ಲವೇ?

        ಪ್ರತಿಕ್ರಿಯೆ
        • ವಿಶ್ವಾರಾಧ್ಯ ಸತ್ಯಂಪೇಟೆ

          ಕಟ್ಟಿಮನಿಯವರೆ,
          ಕುವೆಂಪು ಕವಿತೆ ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದೆಮಗೆ ಕಟ್ಟೇನು ? ಮನು ನಿನಗೆ ನೀನು ! ಎಂಬ ಮಾತುಗಳನ್ನು ಮರೆಯಲಾದೀತೆ ? ದೇಹ ದೇವಾಲಯವೆಂದರೆ ಅಲ್ಲಿಯೂ ಮತ್ತದೇ ಕರ್ಮಠತನದ ಗುಡಿ ಕಟ್ಟುವುದಲ್ಲ. ವಚನದ ಭಾವಾರ್ಥಕ್ಕಿಂತ ಸೂಚ್ಯಾರ್ಥವನ್ನು ನೋಡಿದರೆ ಇದು ಗೊತ್ತಾಗುತ್ತದೆ. ದೇವಾಲಯಗಳನ್ನು ತಿರಸ್ಕರಿಸಿದ ಬಸವಣ್ಣನವು ನಿರ್ಮಲವಾದ ಮನಸ್ಸನ್ನು ದೇಗುಲವೆಂದು ಕರೆದಿದ್ದಾರೆ. ಇದನ್ನು ಸಾರಾ ಸಾರಾ ವಿಚಾರ ಮಾಡಿಯೇ ಹೇಳಿದ್ನೇನೆ.

          ಪ್ರತಿಕ್ರಿಯೆ
          • ಕಟ್ಟಿಮನಿ

            ಕುವೆಂಪು ಅವರ ಈ ಕವಿತೆ ನನಗೂ ಪ್ರಿಯವಾದದ್ದೇ ಆಗಿದೆ. ಆದರೆ ದೇವಾಲಯವು ಶೋಷಣೆಯ ಕೇಂದ್ರವಾಗಿರುವುದರಿಂದ ದೇಹವನ್ನು ದೇವಾಲಯವಾಗಿಸುವುದರಲ್ಲಿ ಅರ್ಥವಿಲ್ಲ. ಆದರೆ ಬಸವಣ್ಣನವರು ದೇಹವನ್ನು ದೇವಾಲಯವಾಗಿಸಿದ್ದಾರೆ. ಇದರರ್ಥ ಅವರಿಗೆ ದೇವಾಲಯ ಎಂಬ ತತ್ವದ ಬಗ್ಗೆ ವಿರೋಧವಿರಲಿಲ್ಲ ಅಂತಾಯಿತು. ದೇವಾಲಯ ತತ್ವದಲ್ಲಿ ಶೋಷಣೆ ಅಡಗಿದ್ದರೆ ದೇಹವನ್ನು ದೇವಾಲಯವಾಗಿಸುತ್ತಿದ್ದರೆ ಅವರು? ಇದರರ್ಥ ಬಸವಣ್ಣನವರು ದೇವಾಲಯ ತತ್ವದಲ್ಲಿ ಶೋಷಣೆ ಅಡಗಿದೆ ಎಂದು ತಿಳಿದಿರಲಿಲ್ಲ ಅಂತಾಯಿತು.

          • ವಿಶ್ವಾರಾಧ್ಯ ಸತ್ಯಂಪೇಟೆ

            ಕಟ್ಟಿಮನಿಯವರೆ ( ಬಹುಶಃ ಈ ಹೆಸರಿನಿಂದ ಬರೆಯುತ್ತಿರುವವರೆ)
            ನಮಸ್ಕಾರಗಳು.
            ದೇವಾಲಯಗಳನ್ನು ವಿರೋಧಿಸಿದ್ದರಿಂದಲೇ ಬಸವಣ್ಣನವರು ಇಷ್ಟಲಿಂಗ ಧಾರಣೆ ಮಾಡಿಕೊಳ್ಳಲು ಹೇಳಿದರೂ ಇಲ್ಲದೆ ಇದ್ದರೆ ಅವರೂ ಕೂಡ ಆ ಗುಡಿಗಳ ಮುಂದೆ ಕ್ಯೂನಿಲ್ಲುತ್ತಿದ್ದರು. ವಚನ ಸಾಹಿತ್ಯದ ಓ ನಾಮ ಕೂಡ ತಮಗೆ ಗೊತ್ತಿಲ್ಲವೆಂದು ಒಂದು ಕಡೆ ಅನಿಸಿದರೆ ಇನ್ನೊಂದ ಕಡೆ ಎಲ್ಲಾ ಗೊತ್ತಿದ್ದೂ ಹೀಗೆ ಆಟ ಆಡುತಿರಬಹುದೆನಿಸುತ್ತದೆ.

          • ಕಟ್ಟಿಮನಿ

            ಆರಾಧ್ಯ, ವಚನ ಸಾಹಿತ್ಯ ತಮ್ಮೊಬ್ಬರ ಸ್ವತ್ತಲ್ಲ. ಅದು ಎಲ್ಲರ ಪಾಲಿನ ಅಮೃತ. ಅಮೃತವನ್ನು ಸವಿಯಲು ದೊಣ್ಣೆನಾಯಕನ ಅಪ್ಪಣೆ ಬೇಕೇ??! ವಚನಾಮೃತಕ್ಕೆ ಅಜೆಂಡಾ ಎಂಬ ಹಾಲಾಹಲವನ್ನು ಬೆರೆಸಿ ಸ್ವಾರ್ಥ ಸಾಧಿಸಲು ಹೊರಟಿರುವವರನ್ನು ಕೂಡಲಸಂಗಮದೇವ ಮೆಚ್ಚ.
            ಬಸವಣ್ಣನವರು ದೇವಾಲಯ ವಿರೋಧಿಸಿದ್ದಾರೆ ಅಂತ ನೀವು ಹೇಳುತ್ತಿದ್ದೀರಿ. ಬಸವಣ್ಣನವರು ದೇವಾಲಯದ ವಿರೋಧಿ ಎಂಬುದು ತಮ್ಮ ಗೃಹೀತ. ಅವರ ವಚನಗಳು ಬೇರೆಯನ್ನೇ ಹೇಳುತ್ತಿವೆ. ದೇವಾಲಯ ತತ್ವವನ್ನು ಬಸವಣ್ಣ ವಿರೋಧಿಸಿಲ್ಲ. ವಿರೋಧಿಸಿದ್ದಾರೆ ತನ್ನ ದೇಹವೇ ದೇವಾಲಯ ಎಂದು ಹೇಳುತ್ತಿರಲಿಲ್ಲ. ಸ್ಥಾವರ ದೇವಾಲಯವಷ್ಟೇ ಸಾಲದು ಜಂಗಮ ದೇವಾಲಯವೂ ಬೇಕು ಅಂತ ಅಲ್ವೇ ಅವರು ಹೇಳಿದ್ದು? ಕಟ್ಟಡವು ಮುರಿದು ಹೋಗಬಹುದು ಕಾಲದ ಹೊಡೆತಕ್ಕೆ ಸಿಕ್ಕಿ. ಅಥವಾ ತುರುಕರ ಮಂಗೋಲರ ಧಾಳಿಗೆ ಸಿಕ್ಕಿ ನಾಶವಾಗಬಹುದು (ಬಸವಣ್ಣನವರ ಕಾಲದಲ್ಲೇ ಅಲ್ಲವೇ ಮುಸ್ಲಿಂ ಧಾಳಿಕೋರರ ವಿಧ್ವಂಸ ಕ್ರಿಯೆಗಳು ಮುಂಚೂಣಿಗೆ ಬಂದದ್ದು). ಅದೆಷ್ಟೋ ದೇವಸ್ಥಾನಗಳು ಧಾಳಿಕೋರರಿಂದ ಲೂಟಿಗೆ ಒಳಪಟ್ಟು ಧ್ವಂಸವಾದವಲ್ಲವೇ! ಆಗ ಭಕ್ತರು ಏನು ಮಾಡಬೇಕು? ನಂಬಿದ ದೇವಾಲಯಗಳೇ ನಾಶವಾದಾಗ ಭಕ್ತಿಗೆ ನೆಲೆ ಎಲ್ಲಿ? ಈ ಎಲ್ಲ ಸಮಸ್ಯೆಗಳ ಗಹನವಾದ ಅರಿವು ಬಸವಣ್ಣನವರಿಗೆ ಇತ್ತು. ಕಾಲ ಹಾಗೂ ಧಾಳಿಕೋರರ ಹಾವಳಿಗೆ ದೇವಾಲಯಗಳು ನಾಶವಾದರೂ ಭಕ್ತಿಗೆ ನೆಲೆಯೊಂದು ಇರಬೇಕು ಎಂದು ಅವರು ತಿಳಿದರು. ಎಂತಹ ಉನ್ನತ ಹಾಗೂ ಮುಂದಾಲೋಚನೆ ಅವರದ್ದಾಗಿತ್ತು ನೋಡಿ! ಆದುದರಿಂದಲೇ ಅವರು ಇಷ್ಟ ಲಿಂಗ ಹಾಗೂ ಜಂಗಮಕ್ಕೆ ಮಹತ್ವ ನೀಡಿದ್ದು. ಭಕ್ತರು ಸ್ಥಾವರವಾದ ದೇವಾಲಯವು ಶಿಥಿಲ ಅಥವಾ ಧಾಳಿಗೆ ಒಳಗಾದರೂ ಕೂಡ ಇಷ್ಟಲಿಂಗದ ಮುಖೇನ ಭಕ್ತಿರತರಾಗಿರುವ ಏರ್ಪಾಡನ್ನು ಬಸವಣ್ಣನವರು ಮಾಡಿಕೊಟ್ಟರು. ಅಷ್ಟೇ ಅಲ್ಲ ಭಕ್ತಿಯು ಜಂಗಮದ ಮೂಲಕವೂ ನಿರಂತವಾಗಿ ಕಾಲದ ಹೊಡೆತಕ್ಕೆ ಧಾಳಿಕೋರರ ವಿಧ್ವಂಸಕತೆಗೆ ಸೆಡ್ಡು ಹೊಡೆದು ನಿಲ್ಲಲಿ ಎಂದು ಅವರು ಬಯಸಿದರು.

          • ವಿಜಯ್

            [ಕುವೆಂಪು ಕವಿತೆ ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದೆಮಗೆ ಕಟ್ಟೇನು ? ಮನು ನಿನಗೆ ನೀನು ! ಎಂಬ ಮಾತುಗಳನ್ನು ಮರೆಯಲಾದೀತೆ ? ]
            ವಿಶ್ವಾರಾಧ್ಯರವರೆ.. ಇದನ್ನೆಲ್ಲ ಓದಿದ ಮೇಲೂ, ಇಷ್ಟೆಲ್ಲಾ ಗೊತ್ತಿದ್ದ ಮೇಲೂ ರಂಜಾನ ದರ್ಗಾರವರು, ನೀವು, ನಿಮ್ಮ ಉಳಿದ ಗ್ಯಾಂಗ್ ಎಲ್ಲ ಮನುಜಪ ಮಾಡುತ್ತಿರಲು ಕಾರಣವೇನು? ಕುವೆಂಪುರವರೇ ..’ಮನು ನಿನಗೆ ನೀನು’ ಬರೆದಿದ್ದಾರೆ ಎಂದಿದ್ದಾಗ, ನಿಮಗೆ ಅದರ ಬಗ್ಗೆ ಒಪ್ಪಿಗೆ ಇದೆ ಎಂದಾಗ, ಇನ್ನೂ ನೀವು ..ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ. ೪ರಷ್ಟಿರುವ ಬ್ರಾಹ್ಮಣರ ಗುಮ್ಮ ತೋರಿಸಿ ನಿಮ್ಮ ಬೇಳೆ ಬೇಯಿಸಿಕೊಳ್ಳುವ ಉತ್ಸುಕತೆಯ ಹಿಂದಿನ ಕಾರಣವೇನು? ಇವರನ್ನು ಬಿಟ್ಟು ನಿಮ್ಮ ಸಮಾನತೆಯ ಸುಂದರ ಸಾಮ್ರಾಜ್ಯ ಕಟ್ಟೋಣ ಎಂದೇಕೆ ನಿಮಗೆ ಅನಿಸುತ್ತಿಲ್ಲ?

  8. ಕಟ್ಟಿಮನಿ

    ರಂಜಾನ್ ದರ್ಗಾ ಹಾಗೂ ನಾಗರಾಜ್ ಅವರು ಶರಣರು ಸಮಾನತೆಯ ಹರಿಕಾರರು ಅಂತ ಕೊಂಡಾಆಡಿದ್ದಾರೆ. ಆದರೆ ವಚನಕಾರರೂ ಸೇರಿದಂತೆ ಶರಣರಲ್ಲಿ ಸ್ತ್ರೀ ಪುರುಷ ಸಮಾನತೆಯ ಭಾವ ಇರಲಿಲ್ಲ ಎಂಬುದಕ್ಕೆ ಈ ಕೆಳಗಿನ ವಚನ ಪುರಾವೆ:
    ಹೊನ್ನು ಬಿಟ್ಟು ಲಿಂಗವನೊಲಿಸಬೇಕೆಂಬರು
    ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?
    ಮಣ್ಣಬಿಟ್ಟು ಲಿಂಗವನೊಲಿಸಬೇಕೆಂಬರು
    ಮಣ್ಣಿಂಗೂ ಲಿಂಗಕ್ಕೂ ವಿರುದ್ಧವೇ?
    ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು
    ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?

    ಪ್ರತಿಕ್ರಿಯೆ
    • ವಿಶ್ವಾರಾಧ್ಯ ಸತ್ಯಂಪೇಟೆ

      ಕಟ್ಟೀಮನಿಯವರೆ,
      ಬಸವಣ್ಣನವರು ಕಲ್ಪಿಸಿದ ಅನುಭವ ಮಂಟಪದಲ್ಲಿ ನೂರಕ್ಕೆ ನೂರು ಸ್ವ್ರೀ- ಪುರುಷರ ಸಮಾನತೆ ಇತ್ತು. ಇಲ್ಲದೆ ಹೋಗಿದ್ರೆ ಕಾಳವ್ವೆ, ಸೂಳೆಸಂಕವ್ವೆ, ಕದಿರೆಯ ರೆಮ್ಮವ್ವೆ ಮುಂತಾದ ಶರಣೆಯರು ಮಹತ್ವವಾದ ವಚನಗಳ ರಚನೆಗೆ ಕೈಹಾಕುತ್ತಿರಲಿಲ್ಲ. ಬಸವಣ್ಣನವರು ಬರುವುದಕ್ಕಿಂತ ಪೂರ್ವದಲ್ಲಿ ನಮ್ಮ ದೇಶದ ಪರಿಸ್ಥಿತಿ ನಿಜಕ್ಕೂ ಹೆಣ್ಣನ್ನು ನಿಕೃಷ್ಟವಾಗಿ ಕಾಣಲಾಗುತ್ತಿತ್ತು. ಆಗ ಮಹಿಳೆಯನ್ನು ತಿರಸ್ಕರಣಿಯ ವಸ್ತವೆಂದೆ ಪರಿಗಣಿಸಲಾಗುತ್ತಿತ್ತು. ಇಂಥ ಸಂದರ್ಭದಲ್ಲಿ ಬಸವಣ್ಣನವರು ಆ ಮಹಾತ್ಮರನ್ನು ಕುರಿತು ಆಡಿದ ಮಾತಗಳೇ ಹೊರತು, ಶರಣ- ಶರಣಯರ ಕುರಿತಾಗಿ ಆ ಡಿದಮಾತುಗಳಲ್ಲ !

      ಪ್ರತಿಕ್ರಿಯೆ
      • ಕಟ್ಟಿಮನಿ

        ಇಲ್ಲ, ಇದು ಶರಣರನ್ನು ಉದ್ದೇಶಿಸಿ ಹೇಳಿದ ಮಾತು ಎಂಬುದು ದಿಟ.

        ಪ್ರತಿಕ್ರಿಯೆ
        • ವಿಶ್ವಾರಾಧ್ಯ ಸತ್ಯಂಪೇಟೆ

          ಶರಣ ಸ್ಥಲಕ್ಕೆ ಏರಿದ್ದಾರೆಂದಿದ್ದರೆ ಅವರು ನಡುವೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣು ಅಲ್ಲ ಎಂಬ ಮಾತಿಗೆ ಬದ್ಧರಾಗಿರಬೇಕಾಗುತ್ತದೆ. ಉಣಲೆಂದು ಬಂದ ಸುಖವ ಉಂಡಲ್ಲದೆ ಹರಿಯದು. ಕಾಣಲೆಂದು ಬಂದ ಸುಖವ ಕಂಡಲ್ಲದೆ ಹರಿಯದು ಎಂದು ಹೇಳುತ್ತಿರಲಿಲ್ಲ.

          ಪ್ರತಿಕ್ರಿಯೆ
    • Anonymous

      ಇಂಥ ಚರ್ಚೆಗಳ ಮೂಲಕವೇ ಸಮಾನತೆ ಸಾಧ್ಯವಾಗುವುದು. 12ನೇ ಶತಮಾನದಲ್ಲಿ ಶರಣೆ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀಯ ವಚನವಿದು. ಈ ಅಭಿವ್ಯಕ್ತಿ ಸ್ವಾತಂತ್ರ್ಯ ವಚನ ಚಳವಳಿಯ ಬಹುದೊಡ್ಡ ಕೊಡುಗೆಯಾಗಿದೆ. ಹೀಗೆ ಶರಣರಲ್ಲಿ ‘ಜನರಲ್ ವಿಲ್’ ಎಂಬದು ರೂಪಗೊಂಡಿದೆ. ಇದೇ ಸಮಾನತೆಗೆ ತಳಹದಿ. ಇಂಥ ಅನೇಕ ವಾಗ್ವಾದಗಳು ವಚನಗಳಲ್ಲಿ ಕಾಣ ಸಿಗುತ್ತವೆ. ಶರಣರು ಸಮಾನತೆಯ ಹರಿಕಾರರು ಎನ್ನವುದಕ್ಕೆ ಈ ವಚನವೂ ಸಾಕ್ಷಿಯಾಗಿದೆ.

      ಪ್ರತಿಕ್ರಿಯೆ

Trackbacks/Pingbacks

  1. ’ಶಂಕರಾಚಾರ್ಯರು ಪ್ರತಿಗಾಮಿಯೇ’ – ಜಿ ಎನ್ ನಾಗರಾಜ್ « ಅವಧಿ / avadhi - [...] (ಭಾಗ ೪ ಓದಲು ಇಲ್ಲಿ ಕ್ಲಿಕ್ಕಿಸಿ) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: