ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂತ ಫ್ರಾಸಿಸ್ಸ್ ಜೇವಿಯರನ ಅಳಲು…

ಚಂದ್ರಪ್ರಭ ಕಠಾರಿ

ಬೊಮ್ ಜೀಸಸ್ ಬೆಸಿಲಿಕದಲ್ಲಿ

ಹಗಲಲ್ಲಿ ಜನವೋ ಜನ……

 

ಕೌತುಕದಿ ಮುಗಿಬೀಳುತ್ತ ನನ್ನ ಶವದ ಸುತ್ತ

ಕೊರಡಿನ ಮುಖ  ಸುರುಟಿದ ಕೈಕಾಲು

ತುಂಡರಿಸಿದ ಕಾಲ್ಬೆರಳಿನ ಹಸಿರಕ್ತದ ಚಿಹ್ನೆಗಾಗಿ

ತಡಕಾಡುವ ಅರಳಿದ ಕಣ್ಣುಗಳು.

 

ವರುಷ ನಾಲ್ಕುನೂರು ಕಳೆದರೂ

ನಾನು ಕೊಳೆತೇಯಿಲ್ಲವೆಂದು

ನಿಬ್ಬೆರಗಾಗುವ ಮುಗ್ಧ ಮನಸ್ಸುಗಳು.

 

ಕಪ್ಪು ಸುರಿವ ಇರುಳವರೆಗು

ಉಸಿರುಗಟ್ಟಿ ಕಾದರೆ

ಚಿನ್ನ ಲೇಪಿತ ಪೆಟ್ಟಿಗೆಯಿಂದ ಎನಗೆ ಮುಕ್ತಿ-

ಯಾದರೆ ಏನು?

ಮೈಮನಗಳಲ್ಲಿ ಇತಿಹಾಸದ

ರಕ್ತಸಿಕ್ತ ಕೊಳೆತು ನಾರುವ ನೆನಪುಗಳು

ದೇಹವ್ಯಾಪ್ತಿ ಹರಿದು ತಿನ್ನುವ ಹುಳುಗಳು.

ಇಗರ್ಜಿಯ ಸುತ್ತ ದೇಕುತ್ತ ಸುತ್ತಾಡಿ

ಕೊನೆಯಿರದ ಇಹಲೋಕಕ್ಕೆ

ಮುಮ್ಮಲ ಮರುಗುವ ನನ್ನಾತ್ಮವು.

.

ಸಂಚಿಯನ್ ದ್ವೀಪದಲಿ

ಬರಬಾರದ ಕಾಯಿಲೆ ಬಂದು

ಮಲಗಿದಾಗ ಶವಪೆಟ್ಟಿಗೆಗೆ

ಹೊಡೆದ ಮೊಳೆಯ ಹೊಡೆತ

ಸ್ವರ್ಗದ ಗಂಟೆಯ ನಿನಾದ.

 

ಸಾವಿರ ಸಾವಿರ ಮೆಟ್ಟಿಲ ಸಲೀಸಾಗಿ ಏರಿ

ಸ್ವರ್ಗದ ಬಾಗಿಲ ಬಡಿದೇ ಎನ್ನುವಾಗ

ಮಾಡದ ಅದ್ಯಾವ ನನ್ನ ಪಾಪಕೆ

ಕಾಣದ ಕರಿಕೈಗಳು ನನ್ನ ಹೊರದೂಕಿದವು !

 

ಸೈತಾನನನ್ನು ದೈವವೆಂದು ನಂಬಿದವಗೆ

ಸತ್ಯದ ದಾರಿ ತೋರಿದ್ದೆನಷ್ಟೆ!

ಧರ್ಮದ ವಿಚಾರಣೆಯಲ್ಲಿ ಸತ್ತವರು

ಅಸಲಿಗೆ ಸ್ವರ್ಗ ಹೊಂದಿದಾದ್ದರು ಹೇಗೆ?

ಅದು ಹೋಗಲಿ…

ನನ್ನವರಾದರು ತಿಳಿಯಬೇಕಿತ್ತು.

ಧರ್ಮ ಪ್ರಚಾರಕ್ಕೆ ದೇವರ ಮಾತುಗಳು ಸಾಲದ್ದೆಂದು

ನನ್ನನ್ನೇ ಗೊಂಬೆಯಂತೆ ಪ್ರದರ್ಶನಕ್ಕಿಟ್ಟು

ದೇವರ ಸತ್ಯ ಹೇಳಬೇಕೆ?

 

ಇನ್ನೆಂದಿಗೆ ಬಿಡುಗಡೆ?

ಅಂತಿಮ ವಿದಾಯಕೆ ಇನ್ನೆಷ್ಟು ಕಾಲ ?

 

ಬೊಮ್ ಜೀಸಸ್ ಬೆಸಿಲಿಕ = ೪೦೦ ವರ್ಷಗಳಿಂದ ಕಾಪಿಟ್ಟ ಸಂತ ಫ್ರಾಸಿಸ್ಸ್ ಜೇವಿಯರನ ಶವ ಇರುವ ಇಗರ್ಜಿ.

ಸಂಚಿಯನ್ ದ್ವೀಪ ( ಚೀನಾದ ಅಂಚು ) – ೧೫೫೨ ರಲ್ಲಿ ಸಂತ ಫ್ರಾಸಿಸ್ಸ್ ಜೇವಿಯರ ಮರಣಿಸಿದ ಜಾಗ.

ಧರ್ಮದ ವಿಚಾರಣೆ = inquisition – ಅನ್ಯ ಧರ್ಮದ ಅಥವಾ ದೇವರನ್ನು ನಂಬಿದವರಿಗೆ ಮಾಡುವ ಕಠಿಣ ವಿಚಾರಣೆ ಮತ್ತು ಶಿಕ್ಷೆ.

‍ಲೇಖಕರು avadhi

29 June, 2019

4 Comments

  1. T S SHRAVANA KUMARI

    ಚಿಂತನೀಯ ಕವಿತೆ

    • ಚಂದ್ರಪ್ರಭ ಕಠಾರಿ

      ಧನ್ಯವಾದಗಳು.. ಮೇಡಂ

  2. Vijaykumar Kalyan

    ಸಂತ ಜೇವಿಯರ್ ಶವವನ್ನು ನೋಡಿ ಕಾವ್ಯ ಶೈಲಿಯಲ್ಲಿ ಪ್ರತಿಕ್ರಿಯಿಸುವುದೇ ಧರ್ಮಾಚರಣೆ ? ಪುಸ್ತಕದ ಬುಕ್ ಮಾರ್ಕ್ ರಂತೆ ಇಡುವುದೇ ಲೇಸು ! ವಿಜಯ್ ಕುಮಾರ್ ಕಲ್ಯಾಣ್

    • ಚಂದ್ರಪ್ರಭ ಕಠಾರಿ

      ಸಾರ್..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. ಅಷ್ಟಾಗಿ ತಿಳಿಯಲಿಲ್ಲ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading