ಸಂತೋಷ್ ಅನಂತಪುರ ಲಹರಿ- ಪೌರ್ಣಮಿ

ಸಂತೋಷ್ ಅನಂತಪುರ

ನಿನ್ನ ಹರಡಿದ ಮುಡಿ ನನ್ನ ಮುಖ ತುಂಬಾ ಹೊದ್ದು ಮಲಗಿತ್ತು. ಬಟ್ಟಲು ಕಣ್ಣುಗಳ ಹೊತ್ತ ವದನವು ನನ್ನೆದೆಗೊರಗಿತ್ತು. ನನ್ನ ತೋಳನ್ನೇ ದಿಂಬಾಗಿಸಿ ಸುಖದ ನಿದ್ರೆಯಲ್ಲಿ ನೀನಿದ್ದೆ. ಆದರೆ ಚಂದಿರನೆಸೆದದ್ದು ಪ್ರೇಮದ ನಗೆಯೋ, ಸಂತಾಪದ ನಗುವೋ ಅಥವಾ ನಿನ್ನ ಸ್ನಿಗ್ಧ ಚೆಲುವನ್ನು ಕಂಡು ಅಸೂಯೆಗೊಂಡ ಬಗೆಯೋ ಏನದು ಎಂಬ ಲೆಕ್ಕಾಚಾರದಲ್ಲಿ ನಾನಿದ್ದೆ. ನನ್ನೆದೆಯ ಉರಿಗೆ ನಿನ್ನುಸಿರೇ ಔಷಧವಾದದ್ದು ಸಮಾಧಾನ. ಲಂಬ ರೇಖೆಯಲ್ಲಿ ಕಿಟಕಿಯ ಸರಳಿನೆಡೆಯಿಂದ ನುಸುಳಿದ ಚಂದ್ರಿಕೆ ಬಾಳ ಕೊರತೆಗಳನ್ನು ನೀಗಿಸಿತೆಂಬ ಸೌಖ್ಯ ಸಂಧಾನ.

ಕಡೆಯುವ ಭಾವೀ ಹಾದಿಯಲ್ಲಿ ಗತದ ನೆನಪುಗಳ ಸುಳಿ. ಬೆರಳುಗಳ ಸಂಧಿಗಳೊಳಕ್ಕೆ ಬೆರಳುಗಳು ಬೆರೆತ ಕ್ಷಣ. ವರ್ತಮಾನದ ಬದುಕು ಸಹ್ಯವಿರಲಿಲ್ಲ. ಒಡಲ ಬುಟ್ಟಿ ತುಂಬಾ ಪ್ರೀತಿಯನ್ನು ತುಂಬು ಎಂದು ಸೆರಗೊಡ್ಡಿದರೆ, ಹಿಡಿಯಷ್ಟನ್ನೂ ಸುರಿಯದ ಅಸಹಾಯಕತೆ. ಇರುವ ಪ್ರೀತಿಯನ್ನೇ ಬರಿದಾಗಿಸಿದೆನೆಂಬ ನಿನ್ನ ಅಳಲು. ಬೆಂದು ನೊಂದ ಎದೆಯೊಳಗೋ ಹೆಣಭಾರ. ಮಗ್ಗುಲು ಬದಲಾಯಿಸುತ್ತಲಿರುವ ನಯನಗಳು. ಆಸೆಗಳ ಹೊತ್ತ ಬಟ್ಟಲು ಕಣ್ಣುಗಳಲ್ಲಿ ಮಧು ಹರಿದು ಮಧುರವಾಗಿಸಿದ್ದೇ ಮಧುಶಾಲೆಯೊಳಗೆ ಮಧುಪಾತ್ರೆ ಹಿಡಿದು ನಾ ನಿಂತು ಬಿಟ್ಟಿದ್ದೆ. ನೆಟ್ಟ ದೃಷ್ಟಿಯು ಏನೊಂದನ್ನೂ ಸೃಷ್ಟಿಸದಾಯಿತಲ್ಲ ಎಂಬ ನಿತ್ಯ ಸಂಕಟದ ಕ್ಷಣ- ಬರಿಗೈ ದಾಸನಾಗಿ ಬಗಲಲ್ಲಿ ನಾನು.

ಸಂಗತಿಗಳು ಬದಲಾದಾಗ ಖುಷಿಯಾಗಿರುತ್ತೇವೆ ಎಂಬ ತಿಳುವಳಿಕೆ. ಆದರೆ ಅದು ನಿಜವಲ್ಲ. ನಾವು ಸಂತೋಷದಿಂದಿರುವಾಗ ಸಂಗತಿಗಳು ಬದಲಾಗುತ್ತವೆ ಎನ್ನುವುದೇ ನಿಜ. ನೀ ಅನುಭವಿಸಿಯೂ ತೋರಿದೆ. ಸಂತಸವನ್ನು ನೀಡುವ ಸಂಗತಿಗಳಿಗೆ ಕಾಯಲಿಲ್ಲ. ಖುದ್ದು ಸಂತಸದಿಂದಿರಲು ಕಲಿತೆ, ಕಲಿಸಿದೆ. ಮರದೆಲೆಗಳ ನಡುವಿನಿಂದ ಇಣುಕು ಹಾಕಿ ಛೇಡಿಸುವ ಚಂದಿರನನ್ನು ಕಂಡದ್ದೇ ನೀ ಹಗುರವಾಗಿ ಮಧುರವಾಗಿಸಿದೆ.

ಮಾತಿನ ಮೊದಲು ಕ್ಷೇಮವನ್ನು ವಿಚಾರಿಸುವ ಮಮತೆ ನಿನ್ನದು. ಒರಟಾಕಾರವನ್ನು ಕುಟ್ಟಿ, ತಟ್ಟಿ ಮೃದುವಾಗಿಸಿದ ನೆನಪು ಸಹೃದಯದೊಳಗೆ ಭದ್ರ. ಮೋಡ ತುಂಬಿದ ಆಷಾಢದ ಆಕಾಶದಂತೆ ನಾನಿದ್ದೆ. ಆಕಾಶದೊಳಗಿಂದ ತಿಂಗಳ ಬೆಳಕು ಮಂದ ಮಂದವಾಗಿ ಸೂಸಿ ಬರುವಂತೆ ನೀನಿದ್ದೆ. ನಿನ್ನ ಸೆರಗಿನಡಿಯಲ್ಲಿ ಮಲಗಿದ ಅನುಭವ ತಣ್ಣಗಿನ ಮರದ ನೆರಳ ಕೆಳಗೆ ಮಲಗಿದಾಗ.

ಪೌರ್ಣಮೆ ಚೆಲ್ಲಿದ ಬೆಳಕನ್ನು ಕಟ್ಟಿಕೊಂಡ ಹೊತ್ತಿನ ಗಮ್ಮತ್ತು ನಿಬಿಡ ಕಾನನವನ್ನು ಹೊಕ್ಕಿದ್ದೇ ಥಟ್ಟನೆ ಮರೆಯಾಯಿತು. ಎದೆಯೊಳಗೆ ಅಕ್ಷರಗಳು ಮೂಡುತ್ತಿಲ್ಲ. ದಟ್ಟಣೆಯೊಳಗಡೆ ದಿಟ್ಟೈಸಿದಷ್ಟೂ ಕುರುಡು ಕತ್ತಲೆಯೇ ಆವರಿಸಿತು. ಹೆಜ್ಜೆ ಎತ್ತಲೂ ಭೀತಿ. ಉಸಿರು ನಿಂತೇ ಹೋಗಿದೆ ಎಂಬಂತೆ ಸತ್ತು ಮಲಗಿದ ಅಡವಿ. ಕತ್ತೆತ್ತಿ ಬೆಳದಿಂಗಳ ಹುಡುಕಿದರೂ ದಟ್ಟೈಸಿದ ಹಸಿರನ್ನು ಸೀಳಿ ಬರಲಾಗದಂತಹ ಕರಾಮತ್ತು. ಉಸಿರೇ ನಿಂತು ಹೋಗುವ ಹೊತ್ತು. ಕೊನೆಯ ಬಾರಿ ಮಂಡಿಯೂರಿ ಮುಖವೆತ್ತಿ ನಿನ್ನ ಅರಸಿದೆನಷ್ಟೆ… ಹಸಿದವನ ಹರಸುವಂತೆ ಜೀವ ಕಳಕೊಂಡ ಕಾನನವು ಥಟ್ಟನೆ ಉಸಿರಾಡತೊಡಗಿತು. ಪೂರ್ಣಿಮೆ, ನೀ ಹಸಿರನ್ನು ಸೀಳಿಕೊಂಡು ಇಳಿದು ಬಂದಿ. ಗುಟುಕು ಜೀವಕ್ಕೆ ಬೆಳಕಿನ ಬೆರಳನ್ನು ಹಿಡಿಯಲು ಅಷ್ಟೇ ಸಾಕಿತ್ತು.

ನೆನೆಯಲೆಂದು ನಿನ್ನ ದೀಪ ಬೆಳಗಿಸಿದರೆ ಜ್ಯೋತಿಯೂ ತೂಕಡಿಸುತ್ತಿದೆ. ಬೆಳಕಿಲ್ಲದ ಹೊತ್ತೊಳಗಿನ ಹೆಜ್ಜೆ. ಇಲ್ಲವಾದ ಲಜ್ಜೆ. ಹೃದಯದೊಳಗೆ ಮಡುಗಟ್ಟಿದ ಮೌನ. ಮನದ ಮೂಲೆ ಮೂಲೆಯಲ್ಲೂ ಕನವರಿಕೆಗಳದ್ದೇ ಗಾನ. ನನ್ನೆದೆಯ ಬಲೆಯೊಳಗೆ ನೀ ಬಂಧಿ. ನಲಿದು ಕುಪ್ಪಳಿಸಿದ ಸುಗಂಧಿ – ‘ಮೊಹೆ ಛೇಡೊನಾ ನಂದ್ ಕೆ ಲಾಲಾ.. ಕಿ ಮೇಹಿ ಬೃಜ್ ಬಾಲಾ.. ನಹೀ ಮೇ ತೇರಿ ರಾಧಾ..’- ಗೆಜ್ಜೆ ಬಿಗಿದು ಹೆಜ್ಜೆ ಹಾಕಿದ ಪಾದಗಳು. ಮೃದು ಹೆಜ್ಜೆಯ ವಜ್ಜೆಗೆ ಮಣಭಾರಯಿತು ಎದೆ. ಕಣ ಕಣದೊಳಗೂ ನೆನಹುಗಳ ಉಸಿರಾಟ. ಬಸಿರ ಕಟ್ಟುವ ಹಂಬಲ. ಸರಿದು ಹೋಗುತ್ತಿರುವ ನೆನವರಿಕೆಗಳ ಮೆರವಣಿಗೆ. ದೇಹದ ಬಯಕೆಗಳಿಗೆ ಆತ್ಮದ ಬಂಧನ.

ಜಪಮಾಲೆಯ ಮಣಿಗಳು ಹಿಂದೆ ಹಿಂದೆ ಸರಿಯುವಂತೆ ದಿನಗಳು ಉರುಳುತ್ತಿವೆ. ಬದುಕೆಂದರೆ ಹಣ್ಣಿನಂತೆ ಸುಂದರವೂ, ಮಧುರವೂ ಆಗಿರುತ್ತದೆ. ಆದರೆ ಅದಕ್ಕೆ ಯಾವಾಗ ಎಲ್ಲಿಂದ ಹುಳು ಹಿಡಿದುಕೊಂಡೀತು ಎಂದು ಹೇಳಲಾಗುವುದಿಲ್ಲ. ಉಪಭೋಗಕ್ಕಿಂತಲೂ ಹೆಚ್ಚಿನದಾದ ಒಂದು ಆನಂದ ಈ ಲೋಕದಲ್ಲಿದ್ದರೆ ಅದು ತ್ಯಾಗದ್ದು ಎಂದು ತೋರಿದ್ದು – ಎಲ್ಲವನ್ನೂ ಕಳಚಿಟ್ಟು ಹಿಂದೆಯೂ ತಿರುಗಿ ನೋಡದೆ ನಡೆದು ಹೋದ ನಿನ್ನ ನಡೆ. ನೀ ಬಡಿಸಿದ ಅಡುಗೆಯಲ್ಲಿ ಸಿಹಿಗಿಂತಲೂ ಉಪ್ಪಿನ ಮಹತ್ತು ಹೆಚ್ಚು.

ಅಮಾವಾಸ್ಯೆಯ ಕತ್ತಲನ್ನು ಓಡಿಸಲು ಮಿನುಗು ತಾರೆಗಳಿಗೆ ಸಾಧ್ಯವೇ? ಆ ಒಂದು ಕ್ಷಣ..ಒಂದೇ ಒಂದು ಕ್ಷಣ ನೀ ನೋಟವನ್ನು ಮೇಲಕ್ಕೆತ್ತಿದೆಯಲ್ಲ- ನಿರಭ್ರವಾದ ಆಕಾಶದಲ್ಲಿ ಮಿಂಚು ಹೊಳೆದಂತೆನಿಸಿತು. ಪೌರ್ಣಮಿಯಂದು ನಿನ್ನ ನೆನೆಯುವುದು ತಪ್ಪಿಲ್ಲ. ನಾ ಮರೆತರೂ ಪೂರ್ಣಿಮೆ ಮರೆತಿಲ್ಲ. ಶರದೃತವಿನಲ್ಲಿ ನಲಿದ ಬೆಳದಿಂಗಳು ತುಂಬಿದ ರಾತ್ರಿಗಳತ್ತ ಮನಸ್ಸು ಓಡಿತಲ್ಲ.. ಅಷ್ಟಕ್ಕೇ ಇಷ್ಟೆಲ್ಲವನ್ನೂ ಪೋಣಿಸಬೇಕಾಯಿತು. ಹೃದಯ ನಿನಗಾಗಿ ಹಾತೊರೆದದ್ದು, ಬೆಳದಿಂಗಳಾಗಿ ಹಬ್ಬಿದ್ದು ನನಗೆ ಮಾತ್ರ ಗೊತ್ತು.

‍ಲೇಖಕರು Avadhi

June 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: