ಪರಿಮಳ
-ಶಿವಯೋಗಿ ಕಳ್ಳಿಮಠ
ಕಡ್ಲೆ ಗಿಡ ಮಾರುವ
ಹುಡುಗ
ಒಂದು ಕಾಳನ್ನು ತಿನ್ನುವುದಿಲ್ಲ.
ಅವ್ವ ತಾಕೀತು ಮಾಡಿ ಕಳಿಸಿದ್ದಾಳೆ.
ಅಕ್ಕನ ಮದುವೆಗೆ
ರೊಕ್ಕ ಕೂಡಿಡಲು.
ಬಿರುಸು ಕಣ್ಣಿನ
ಚಾಲಾಕಿ ಮಾತಿನ
ಇವ
ಯಾರಾದರೂ
ಜಾಗ ಖಬ್ಜಾ ಮಾಡಿ
ಜಬರ್ದಾಸ್ತ್ ಮಾಡಿದರೆ
ಮುಗಿಬಿಳುತ್ತಾನೆ
ಹರಕು ಬಾಯಿಯಲ್ಲಿ.
ನಮ್ಮದೆ ಹೊಲದ್
ಕಡ್ಲಿ ತಗೊರಿ
ಮಸ್ತ್ ಅದ
ಎಕ್ಕಾ, ಎಣ್ಣಾ, ಚಿಕ್ಕಿ ಎಂದು ಪುಸಲಾಯಿಸುತ್ತಾನೆ
ಗೇಣು ಜಾಗವಿಲ್ಲದ ಫಕೀರ.
ಬಾಗುವಾಗೊಮ್ಮೆ
ಕಿಸೆಯ ಅವಚಿ ಹಿಡಿಯತ್ತಾನೆ
ಜತನದಿಂದ,
ಕಾಸು ಬೀಳದಿರಲೆಂದು
ಸಂತೆಯ ಹೆಂಗಸರ
ಬುಟ್ಟಿಗಂಟುಗಳ ಇಳಿಸುವ,
ಅವರಿಲ್ಲದ ಸಮಯದಲ್ಲಿ
ಅವರ ಅಂಗಳದಂಗಡಿಗಳ ದೇಖರೇಕಿ
ಹೊತ್ತುಕೊಳ್ಳುವ ಇವನಿಗೆ ಆಗಾಗಾ
ಸಿಗುತ್ತದೆ ಪುಕ್ಕಟೆ ಚಾ.
ಯಾರಾದರೂ ಶಾಲೆಗೆ ಹೋಗಲ್ವಾ
ಅಂತ ಮುತುವರ್ಜಿ ಮಾಡಿದರೆ..
ಕಡ್ಲೇ ಗಿಡ ಹಿಡಿದು ಹೇಳುತ್ತಾನೆ
ನಮ್ದು ಬಿಜನೆಸ್ ಇದೆ …ಕಾಕಾ
ಪಾರ್ಟನರ್ಶಿಪ್ ದೆದೂ ಕ್ಯಾ..ಅಂತ.
ಗೊಳ್ಳ್.. ಎಂದು
ಹುಯ್ಯಲೆಬ್ಬಿಸುತ್ತಾರೆ
ಸಂತೆಯ ಹೆಂಗಸರು.
ಹೂವಿಗೆ ಮಾಲಿಯ ಕಾವಲಿದೆ.
ಪರಿಮಳಕ್ಕೆ.
ಯಾತರ ಹಂಗು.






0 Comments