ಡಾ ಹೆಚ್ ಗಿರಿಜಮ್ಮ ಇನ್ನಿಲ್ಲ..

ಹಲವು ಮಕ್ಕಳ ತಾಯಿ, ಹಲವು ತಾಯಂದಿರ ಆಶಾಕಿರಣ ಎಂದೇ ಹೆಸರಾಗಿದ್ದ ಡಾ ಎಚ್ ಗಿರಿಜಮ್ಮ ಇನ್ನಿಲ್ಲ.

ದಾವಣಗೆರೆಯಲ್ಲಿ ಅವರು ಇಂದು ನಿಧನ ಹೊಂದಿದರು.

ಅವರ ಆತ್ಮಕಥನ ‘ಕಾಡುತಾವ ನೆನಪುಗಳು’ವನ್ನು ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಇತ್ತೀಚಿಗೆ ತಾನೇ ಪ್ರಕಟಿಸಿದ್ದು ಅತ್ಯಂತ ಜನಪ್ರಿಯವಾಗಿತ್ತು.

‘ಅವಧಿ’ಗಾಗಿ ದಾವಣಗೆರೆಯ ‘ನಗರವಾಣಿ’ಯ ಸಂಪಾದಕ ಬಿ ಎನ್ ಮಲ್ಲೇಶ್ ಅವರು ಎಚ್ ಗಿರಿಜಮ್ಮ ಅವರ ಜೊತೆ ನಡೆಸಿದ ಸಂದರ್ಶನವನ್ನು ಇಲ್ಲಿ ಪುನರ್ ನೀಡುತ್ತಿದ್ದೇವೆ.

ಡಾ ಹೆಚ್ ಗಿರಿಜಮ್ಮ ಅವರೊಂದಿಗೆ ಬಿ ಎನ್ ಮಲ್ಲೇಶ್

ಬಿ.ಎನ್. ಮಲ್ಲೇಶ್

ಕನ್ನಡ ಸಾಹಿತ್ಯ ಸದ್ಯ ಬಂಜೆತನ ಅನುಭವಿಸುತ್ತಿದೆ

ಡಾ|| ಹೆಚ್ ಗಿರಿಜಮ್ಮ ಅವರು ನಮ್ಮ ನಡುವಿನ ಮಹತ್ವದ ಲೇಖಕರು. ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಸಾಹಿತ್ಯ, ಚಲನಚಿತ್ರ, ಸಾಕ್ಷ್ಯಚಿತ್ರ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಹದಿನೇಳು ಕಾದಂಬರಿ, ಒಂಭತ್ತು ಕಥಾ ಸಂಕಲನ, ಹತ್ತೊಂಬತ್ತು ವೈದ್ಯ ವಿಜ್ಞಾನದ ಕೃತಿಗಳನ್ನು ಪ್ರಕಟಿಸಿರುವ ಗಿರಿಜಮ್ಮ ʼಅಂತರಗಂಗೆʼ ಎಂಬ ಚಲನಚಿತ್ರವನ್ನೂ ನಿರ್ದೇಶಿಸಿದ್ದಾರೆ.

ಹದಿನೈದು ಟೆಲಿ ಫಿಲಂಗಳು, ಐದು ಟೆಲಿ ಧಾರಾವಾಹಿಗಳು ಮತ್ತು ಹತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿರುವ ಶ್ರೀಯುತರು ಹದಿನೈದಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಅಪರೂಪದ ಸಾಧಕಿ ಎನ್ನಿಸಿದ್ದಾರೆ.

ಬಾಲ್ಯದಿಂದಲೇ ಬಡತನ ಮತ್ತು ಅವಮಾನಗಳೆಂಬ ಸುಡುವ ಕೆಂಡಗಳನ್ನು ನುಂಗುತ್ತ ಬೆಂಕಿಯಲ್ಲಿ ಅರಳಿದ ಹೂವಿನಂತಾದವರು ಗಿರಿಜಮ್ಮ. ಈಚೆಗಷ್ಟೇ ಬಿಡುಗಡೆಗೊಂಡಿರುವ ಅವರ ಆತ್ಮಕಥನ ʼಕಾಡತಾವ ನೆನಪುʼ ಓದಿದರೆ ಈ ಕ್ರೂರ ವ್ಯವಸ್ಥೆ, ಪುರುಷ ಪ್ರಧಾನ ಸಮಾಜ ಅವರನ್ನು ಹೇಗೆ ನಡೆಸಿಕೊಂಡಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ.

ʼಹೆಚ್. ಗಿರಿಯಮ್ಮ ಅವರ ಒಂದು ಸಂದರ್ಶನ ಮಾಡಿಕೊಡಿʼ ಎಂದು ʼಅವಧಿʼಯ ಈ ವಾರದ ಸಂಪಾದಕಿ, ಕವಯತ್ರಿ ಡಾ|| ಹೆಚ್.ಎಲ್. ಪುಷ್ಪಾ ಅವರು ನನ್ನನ್ನು ಕೇಳಿದಾಗ ಮರು ಮಾತಿಲ್ಲದೆ ಒಪ್ಪಿಕೊಂಡೆ. ಮರುದಿನ ಬೆಳಿಗ್ಗೆ ಗಿರಿಜಮ್ಮ ಅವರ ಮನೆಗೆ ಹೋದರೆ ಬಾಗಿಲು ತೆರೆದೇ ಇತ್ತು. ಒಳಗೆ ಯಾರೂ ಇರಲಿಲ್ಲ! ʼಅಕ್ಕʼ ಎಂದು ಕರೆದೆ, ಉತ್ತರವಿಲ್ಲ. ವಾಪಾಸ್ ತಿರುಗಿದರೆ ಸೊಂಟದ ಮೇಲೆ ಕೈ ಇಟ್ಟುಕೊಂಡು ಕಿತ್ತೂರು ಚೆನ್ನಮ್ಮನ ಹಾಗೆ ಬಾಗಿಲಲ್ಲೇ ನಿಂತಿದ್ದರು!

ಗಿರಿಜಕ್ಕ ಎಂದರೆ ಹಾಗೆಯೇ. ಬದುಕಿನುದ್ದಕ್ಕೂ ತಮ್ಮನ್ನು ಇನ್ನಿಲ್ಲದಂತೆ ಕಾಡಿದ ಅನೇಕರಿಗೆ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವನ ಹಾಗೆ ಪಾಠ ಕಲಿಸಿದ ಗಟ್ಟಿಗಿತ್ತಿ. ಆದರೆ ಅವ್ವನ ಹೆಸರೆತ್ತಿದರೆ ಸಾಕು ಕಣ್ಣೀರಾಗುವ, ಆಕೆಯ ಪ್ರೀತಿಗೆ ಕೊನೆಯವರೆಗೂ ಹಂಬಲಿಸಿದ ಜೀವ ಅದು.

ʼಏನಪ, ಇಂಟ್ರೂ ಮಾಡ್ತೀಯ?ʼ ಅಂದರು. ʼಪುಕ್ಸಟ್ಟೆ ಅಲ್ಲ, ಚಾ ಮಾಡುʼ ಅಂದೆ.

ಚಹಾ ಕುಡಿಯುತ್ತ ಗಿರಿಜಕ್ಕ ಅವರನ್ನು ಮಾತಿಗೆಳೆದೆ ʼನಿಮಗೆ ಸಾಹಿತ್ಯದ ಈ ಗೀಳು ಶುರವಾದದ್ದು ಹೇಗೆ?

ಗಿರಿಜಮ್ಮ: ನಾನು ಆರು, ಏಳನೇ ತರಗತಿಯಲ್ಲಿ ಓದುವಾಗಲೇ ಪತ್ತೆದಾರಿ ಕಾದಂಬರಿಗಳನ್ನು ಓದುವ ಗೀಳಿಗೆ ಅಂಟಿಕೊಂಡಿದ್ದೆ. ಎನ್. ನರಸಿಂಹಯ್ಯ ಅವರ ಕಾದಂಬರಿಗಳನ್ನು ತುಂಬಾ ಓದಿದ್ದೇನೆ. ನನ್ನ ತಾಯಿಗೆ ಕೂಡ ಓದುವ ಹವ್ಯಾಸವಿತ್ತು. ಅವರು ಅನಕೃ, ತರಾಸು ಮುಂತಾದವರ ಕಾದಂಬರಿಗಳನ್ನು ಮನೆಗೆ ತರುತ್ತಿದ್ದರು. ನಾನೂ ಅವನ್ನೆಲ್ಲ ಓದುವುದರ ಜೊತೆಗೆ ಬರೆಯಲೂ ಶುರುವಿಟ್ಟುಕೊಂಡೆ.

ಕೃಷ್ಣಮೂರ್ತಿ ಪುರಾಣಿಕರ ʼಭಾಗೀರಥʼ ಓದಿ ರಾತ್ರಿಯಿಡೀ ಅತ್ತಿದ್ದೆ. ರಾಮಾಯಣ, ಮಹಾಭಾರತ, ಅರೇಬಿಯನ್ ನೈಟ್ಸ್, ಬುದ್ಧನ ಕತೆಗಳು ಎಲ್ಲವೂ ನನ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದವು.

ವೈದ್ಯಕೀಯ ಕಾಲೇಜಿನಲ್ಲಿ ಓದುವಾಗ ʼಸುಧಾʼ ಪತ್ರಿಕೆಗೆ ಒಂದು ಕತೆ ಕಳಿಸಿದೆ. ಅದು ಪ್ರಕಟವಾಗಿಬಿಟ್ಟಿತ್ತು! ಅಲ್ಲಿಂದ ಶುರುವಾದ ನನ್ನ ಸಾಹಿತ್ಯದ ರಂಗ ಪ್ರವೇಶ ಇಲ್ಲಿಯವರೆಗು ಬಂದು ಮುಟ್ಟಿದೆ. ಈಗಲೂ ಬರಹ ನನಗೆ ಸಾಕು ಎನ್ನಿಸಿಲ್ಲ.

ಬಿ.ಎನ್. ಮಲ್ಲೇಶ್: ನಿಮ್ಮ ಸಾಹಿತ್ಯ ಯಾವ ಬಗೆಯದು?

ಗಿರಿಜಮ್ಮ: ನನ್ನದು ಜನಪ್ರಿಯ ಸಾಹಿತ್ಯ. ಓದಿಸಿಕೊಂಡು ಹೋಗುವಂಥಹುದು, ಅರ್ಥ ಆಗುವಂಥಹುದು. ಜನಪ್ರಿಯ ಸಾಹಿತ್ಯ ಗಟ್ಟಿ ಅಲ್ಲ ಎನ್ನುವವರಿದ್ದಾರೆ. ಜನರೇ ಓದದ ಸಾಹಿತ್ಯ ಇನ್ನೆಂಥದು? ತ್ರೀವೇಣಿ, ಉಷಾ ನವರತ್ನರಾಂ ಮುಂತಾದವರೆಲ್ಲ ಬರೆದದ್ದು ಜನಪ್ರಿಯ ಸಾಹಿತ್ಯವೇ.

ಬಿ.ಎನ್. ಮಲ್ಲೇಶ್: ಮಹಿಳಾ ಸಾಹಿತ್ಯವನ್ನು ನೋಡುವ ದೃಷ್ಠಿಕೋನ ಈಗ ಬದಲಾಗಿದೆಯೇ?

ಗಿರಿಜಮ್ಮ: ಬಹಳಷ್ಟು ಬದಲಾಗಿದೆ. ನಮ್ಮದು ಅಡುಗೆ ಮನೆ ಸಾಹಿತ್ಯ ಅಂತ ಈಗ ಕರೆಯೋ ಹಾಗಿಲ್ಲ. ಈಗಿನ ಲೇಖಕಿಯರು ತುಂಬ ಗಟ್ಟಿತನದಿಂದ ಬರೀತಿದ್ದಾರೆ. ಹೆಚ್. ನಾಗವೇಣಿ, ಹೆಚ್. ಎಸ್. ಅನುಪಮ, ಬಿ.ಯು. ಗೀತಾ, ವಿನಯ ಒಕ್ಕುಂದ, ರೂಪ ಹಾಸನ, ಎಚ್ ಎನ್ ಆರತಿ… ಅಷ್ಟೇ ಯಾಕೆ ನಮ್ಮ ಹೆಚ್.ಎಲ್. ಪುಷ್ಪ ಮುಂತಾದವರೆಲ್ಲ ತುಂಬ ಶಕ್ತಿಶಾಲಿಯಾಗಿ ಬರೀತಿದಾರೆ. ಈ ಸಂಖ್ಯೆ ಇನ್ನೂ ದೊಡ್ಡದಾಗಬೇಕು.

ಬಿ.ಎನ್. ಮಲ್ಲೇಶ್: ಸಾಹಿತ್ಯ ಚಳುವಳಿಗಳು ಈಗ ಸ್ಥಗಿತಗೊಂಡಿವೆ ಎಂಬ ಮಾತಿದೆ. ನೀವೇನು ಹೇಳ್ತೀರ?

ಗಿರಿಜಮ್ಮ: ಕನ್ನಡ ಸಾಹಿತ್ಯ ಈಗ ಬಂಜೆತನ ಅನುಭವಿಸ್ತಾ ಇದೆ ಅನ್ಸುತ್ತೆ. ಬರೆಯುವವರಿದ್ದಾರೆ, ಓದುವವರಿಲ್ಲ, ಓದುವ ಸಂಸ್ಕೃತಿ ಇಲ್ಲವಾಗಿ ಈಗ ನೋಡುವ ಸಂಸ್ಕೃತಿ (ಟಿ.ವಿ., ಮೊಬೈಲ್) ಹೆಚ್ಚಾಗುತ್ತಿದೆ. ಓದುವವರಿಲ್ಲದೆ ಯಾವ ಚಳುವಳಿ ಇದ್ದರೂ ಏನು ಪ್ರಯೋಜನ?

ಬಿ.ಎನ್. ಮಲ್ಲೇಶ್:  ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಗೆ ಮಹಿಳಾ ಅಧ್ಯಕ್ಷರು ಬೇಕು ಎಂಬ ಕೂಗೆದ್ದಿದೆ. ನಿಮ್ಮ ಅಭಿಪ್ರಾಯ?

ಗಿರಿಜಮ್ಮ: ಖಂಡಿತ ಬೇಕು. ಇಲ್ಲಿಯವರೆಗೆ ಬರೀ ಪುರುಷರ ಪಾರುಪತ್ಯ ಆಗಿದೆ. ಇನ್ನಾದರೂ ಅರ್ಹತೆ ಆಧಾರದ ಮೇಲೆ ಮಹಿಳೆಯರು ಆಯ್ಕೆ ಆಗಬೇಕು. ಭಿಕ್ಷೆ ಅಥವ ಬಿಟ್ಟುಕೊಡುವ ಮಾತು ಬೇಕಿಲ್ಲ.

……. ಗಿರಿಜಮ್ಮ ಇದ್ದಕ್ಕಿದ್ದಂತೆ ತಮ್ಮ ಮಾತು ನಿಲ್ಲಿಸಿದರು.

ʼಲೋ ಮಗಾ, ನನಗೆ ಈ ತರ ಸಂದರ್ಶನ ಅಂತೆಲ್ಲ ಮಾತಾಡೋಕೆ ಬರಲ್ಲ. ನನಗೆ ತಿಳಿದದ್ದು ಹೇಳ್ತಾ ಹೋಗ್ತೀನಿ. ನಿನಗೇನು ಬೇಕು, ಅದನ್ನ ಬರೀತಾ ಹೋಗುʼ ಎಂದರು. ʼಸರಿ, ಇನ್ನೊಂದು ಕಪ್ ಚಾʼ ಅಂದೆ.

ಗಿರಿಜಕ್ಕ ಹೇಳ್ತಾ ಹೋದರು. ಬಾಲ್ಯ ಎಂಬುದು ಅವರ ಪಾಲಿಗೆ ಕೇವಲ ಹಸಿವು ಮತ್ತು ಬಡತನ. ಬಾಲ್ಯದಲ್ಲಿ ಅವರು ಆಟವಾಡಿದ್ದಕ್ಕಿಂತ ಹೊಟ್ಟೆಯ ಬಗ್ಗೆ ಯೋಚಿಸಿದ್ದೇ ಹೆಚ್ಚು.

ಗಂಡನ ಸಾವಿನ ನಂತರ ನನ್ನ ತಾಯಿ ಇಬ್ಬರು ಮಕ್ಕಳೊಂದಿಗೆ ಕೊಟ್ಟೂರಿನಿಂದ ದಾವಣಗೆರೆಗೆ ಬಂದರು. ಹೊಟ್ಟೆ ತುಂಬ ಊಟಕ್ಕೆ ಪರದಾಡುತ್ತಿದ್ದ ನಾವು ಅಕ್ಷರಶಃ ಭೂಮಿಗೆ ಬಿದ್ದಿದ್ದೆವು, ಆದರೆ ಹೇಗೆ ಬೆಳೆದೆವೋ ಗೊತ್ತಿಲ್ಲ. ಹಠಕ್ಕೆ ಬಿದ್ದವರಂತೆ ನನ್ನ ತಾಯಿ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿದಳು. ದಾದಿಯಾಗಿದ್ದ ಆಕೆ ನನ್ನನ್ನು ವೈದ್ಯಳನ್ನಾಗಿ ಮಾಡಿದಳು ಎಂದು ನೆನಪಿಸಿಕೊಂಡರು.

ಗಿರಿಜಮ್ಮ ಅವರನ್ನು ಬಡತನಕ್ಕಿಂತ ಹೆಚ್ಚು ಕಾಡಿದ್ದು ಅವರ ಮೈ ಬಣ್ಣ! ಕಪ್ಪು ಬಣ್ಣದವರು ಹುಟ್ಟಲೇಬಾರದು ಎಂದು ಹತ್ತಾರು ಬಾರಿ ತಮ್ಮನ್ನು ತಾವು ಶಪಿಸಿಕೊಂಡಿದ್ದರಂತೆ! ಅಷ್ಟು ಅಪಮಾನ, ಕೀಳರಿಮೆ ಅನುಭವಿಸಿದ್ದೇನೆ ಎನ್ನುವ ಅವರು ಈ ಕೀಳರಿಮೆಯನ್ನು ಹೋಗಲಾಡಿಸಿ ಎಲ್ಲರ ಮುಂದೆ ತಲೆ ಎತ್ತಿ ನಿಲ್ಲುವಂತೆ ಮಾಡಿದ ತಮ್ಮ ಕಾಲೇಜು ಸಹಪಾಠಿ ಶೋಭಾ ಭಟ್ ಅವರನ್ನು ತಮ್ಮ ʼಗುರುʼ ಎಂದು ಕರೆದುಕೊಂಡಿದ್ದಾರೆ.

ವೈದ್ಯಳಾದರೂ ಮಹತ್ವದ್ದನ್ನು ಸಾಧಿಸಲು ಆಗಲಿಲ್ಲ ಎಂಬ ಕೊರಗು ಅವರಿಗೆ ಇಂದಿಗೂ ಇದೆ. ರೋಗಿಗಳ ಸೇವೆಯಲ್ಲಿ ನನಗೆ ಆತ್ಮತೃಪ್ತಿ ಸಿಕ್ಕಿದೆ. ನಾನು ಪ್ರಸೂತಿ ತಜ್ಞೆಯಾಗಿದ್ದರಿಂದ ನೂರಾರು ಹೆರಿಗೆಗಳನ್ನು ಮಾಡಿಸಿದ್ದೇನೆ. ಹೆರಿಗೆ ನಂತರ ಆ ತಾಯಿಗೆ ಎಷ್ಟೋ ನೋವು, ಆಯಾಸವಿದ್ದರೂ ತನ್ನ ನವಜಾತ ಶಿಶುವನ್ನು ತಬ್ಬಿಕೊಂಡು ಕೃತಜ್ಞತೆಯಿಂದ ನನ್ನ ಕಡೆ ನೋಡುತ್ತಾಳಲ್ಲ ಆ ಭಾವವೊಂದೇ ಸಾಕು ನನ್ನಲ್ಲಿ ಸಾರ್ಥಕತೆ ಮೂಡಿಸಲು ಎನ್ನುತ್ತಾರೆ. ವೈದ್ಯಳಾಗಿ ಸಾಧಿಸಿದ್ದಕ್ಕಿಂತ ಸಾಹಿತ್ಯ ಕ್ಷೇತ್ರದಲ್ಲಿ ಸಿಕ್ಕ ಮನ್ನಣೆ ಅವರನ್ನು ನೆಮ್ಮದಿಯಾಗಿ ಇರಿಸಿದೆ.

ಗಿರಿಜಮ್ಮ ವೈದ್ಯರಾದರೂ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮಾಡಿದ್ದಾರೆ. ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪಡೆದಿದ್ದಾರೆ. ಮಕ್ಕಳ ಮನೋವಿಜ್ಞಾನದಲ್ಲಿ ಡಿ.ಲಿಟ್ ಮಾಡಿದ್ದಾರೆ. ಏನಿದು ವಿಚಿತ್ರ ಎಂದರೆ ʼಸುಮ್ನೆ ಮಾಡಿದೆ ಮಗಾʼ ಎಂದು ಮುಗುಳ್ನಗುತ್ತಾರೆ.

ಗಿರಿಜಮ್ಮ ಅವರ ಕತೆ, ಕಾದಂಬರಿ, ನಾಟಕಗಳೆಲ್ಲ ಮಹಿಳೆಯರ ಬದುಕು ಬವಣೆಗಳಿಗೆ ಸಂಬಂಧಿಸಿದುವೇ ಆಗಿವೆ. ʼಈ ಕಾರಣಕ್ಕೆ ನಿಮ್ಮನ್ನು ಸ್ತ್ರೀವಾದಿ ಲೇಖಕಿ ಎನ್ನುಬಹುದೆ?ʼ ಎಂದರೆ ನನಗೆ ಈ ವಾದಗಳಲ್ಲಿ ನಂಬಿಕೆ ಇಲ್ಲ. ಕೇವಲ ನನ್ನ ನೋವುಗಳಷ್ಟೇ ಅಲ್ಲ, ನನ್ನ ಬಳಿ ಚಿಕಿತ್ಸೆಗೆ ಬರುತ್ತಿದ್ದ ನೂರಾರು ಮಹಿಳೆಯರ ನೋವು, ನಲಿವುಗಳೆಲ್ಲ ಕತೆ, ಕಾದಂಬರಿಗಳಾಗಿವೆ. ಆ ಮೂಲಕ ಮಹಿಳೆಯರ ಪರ ಧ್ವನಿ ಎತ್ತಿದ್ದೇನೆ ಎಂಬ ಸಮಾಧಾನ ನನಗಿದೆ ಎನ್ನುತ್ತಾರೆ.

ತಮ್ಮ ಬೆಳವಣಿಗೆಗೆ ಕಾರಣರಾದ ಸಮೂಹ ಮಾಧ್ಯಮದವರು, ಸಾಹಿತ್ಯ ಪರಿಚಾರಕರು, ಪ್ರಕಾಶಕರು, ಕಷ್ಟಕಾಲದಲ್ಲಿ ತಮಗೆ ಧೈರ್ಯ ತುಂಬಿದ, ಕೈ ಹಿಡಿದು ನಡೆಸಿದ ಸ್ನೇಹಿತರನ್ನು ಸದಾ ಸ್ಮರಿಸುವ ಗಿರಿಜಮ್ಮ ಪ್ರಶಸ್ತಿ, ಪ್ರಸಿದ್ಧಿಗಳ ಹಿಂದೆ ಬಿದ್ದವರಲ್ಲ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಸಂಕೋಚದ ಮುದ್ದೆಯಾಗಿದ್ದ ಅವರು ಇಡೀ ದಿನ ಮನೆಯಿಂದ ಹೊರಗೆ ಬಂದಿರಲಿಲ್ಲ.

ಡಾ|| ಬಿ.ಸಿ. ರಾಯ್ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪುಸ್ತಕ ಪ್ರಾಧಿಕಾರದ ಪ್ರಶಸ್ತಿ… ಹೀಗೆ ಹತ್ತಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡರೂ ತಲೆಗೇರಿಸಿಕೊಂಡವರಲ್ಲ. ಅವರು ಹಾಡುಹಕ್ಕಿಯ ಹಾಗೆ.,..

ಹಾಡು ಹಕ್ಕಿಗೇಕೆ ಬಿರುದು ಸನ್ಮಾನ ಎಂಬ ನಿಲುವು ಅವರದು..

‍ಲೇಖಕರು Avadhi

August 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. ಲಲಿತಾ ಸಿದ್ಧಬಸವಯ್ಯ

  ಡಾ. ಗಿರಿಜಕ್ಕನ ನಿಧನವಾರ್ತೆ ನನ್ನನ್ನು ಬಹುವಾಗಿ ಕಲಕಿ ಬಿಟ್ಟಿತು. ಶತಾಬ್ದಿ ವೇಗದಲ್ಲಿ ಮಾತನಾಡುತ್ತ ಒಂದಿನಿತೂ ಕಹಿ ಕಾರದೆ ಸದಾ ನಗುನಗುತ್ತಿದ್ದ ಅವರನ್ನು ಮರೆಯುವುದಾದರೂ ಹೇಗೆ ?

  ತಮ್ಮ ವೈದ್ಯವೃತ್ತಿಯ ಬಹುಭಾಗವನ್ನು ಹಳ್ಳಿಗಳಲ್ಲೇ ಕಳೆದು ಹಳ್ಳಿಗರ ಮನೆಗೆದ್ದಿದ್ದ ಜನಪ್ರಿಯ ಡಾಕ್ಟರಮ್ಮ ಅವರು. ಎಂತೆಂತಹ ಕಠಿಣ ಪ್ರಸವಗಳನ್ನೂ ಕಡಿಮೆ ಸೌಕರ್ಯದ ಹಳ್ಳಿಗಾಡಿನ ಆಸ್ಪತ್ರೆಗಳಲ್ಲಿ ನಿಭಾಯಿಸಿದ ದಿಟ್ಟೆ ಅವರು. ಎಂದೆಂದೂ ಹಣಗಳಿಕೆಯ ಕಡೆಗೆ ಕಣ್ಣೂ ಹೊರಳಿಸದ ನಿಸ್ಪೃಹರು.

  ತಮ್ಮ ವಿಶೇಷ ವಿಷಯವಾದ ಗೈನಕಾಲಜಿಯಲ್ಲಿ ಅವರು ಕನ್ನಡದ ಓದುಗರಿಗೆ ಬರೆದ ವೈದ್ಯಕೀಯ ಪುಸ್ತಕಗಳು ಅದ್ಭುತವಾಗಿವೆ. ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಮೊದಲು‌ ಕನ್ನಡದಲ್ಲಿ ಪಠ್ಯಗಳನ್ನು ಬರೆದವರು. ವಿದ್ಯಾರ್ಥಿಗಳು ಈಗಲೂ ಆ ಪುಸ್ತಕಗಳನ್ನು ರೆಫರೆನ್ಸಾಗಿ ಓದುತ್ತಾರೆ.

  ಸೃಜನಶೀಲ ಸಾಹಿತಿಯಾಗಿ ಯಾವ ಇಸಮಿಗೂ ಗಂಟುಹಾಕಿಕೊಳದೆ ಅವರು ಬರೆದ ಸಣ್ಣ ಕತೆಗಳು ಮತ್ತು ‌ಕಾದಂಬರಿಗಳು ಅವರಿಗೆ ಗಳಿಸಿಕೊಟ್ಟ ಜನಪ್ರಿಯತೆ ಮತ್ತು ಅಪಾರ ಓದುಗ ಸಮೂಹ ಅಪ್ರತಿಮವಾದದ್ದು. ಹಾಗೆಯೇ ಪ್ರಶಸ್ತಿಗಳೂ ತಾವಾಗೇ ಬಂದು ಅವರನ್ನು ಸೇರಿದವು.

  ನಾಟಕ ರಚನೆ , ಸಾಕ್ಷ್ಯಚಿತ್ರ, ಸಿನಿಮಾ ಸ್ಕ್ರಿಪ್ಟ್, ಸಿನಿಮಾ ನಿರ್ದೇಶನ ಎಲ್ಲದರಲ್ಲೂ ತೊಡಗಿಸಿಕೊಂಡು ಯಶಸ್ವಿಯಾದವರು ಗಿರಿಜಕ್ಕ. ಅವರ ಸಾವು ಅನಿರೀಕ್ಷಿತವಾದದ್ದು. ಮೊನ್ನೆ ಮಾತನಾಡಿದಂತಿದೆ.

  ಎಲ್ಲಕ್ಕೂ ಮಿಗಿಲಾಗಿ ನೇರಮಾತಿನ ಸರಳ ಸಹೃದಯಿ ಗಿರಿಜಕ್ಕ. ಅವರನ್ನು ಲೇಖಕಿಯರ ಸಂಘಕ್ಕಾಗಿ ಫೋನಿನಲ್ಲೇ ಮಾತನಾಡಿಸಿದ್ದೆ. ಆಗಲೂ ಅವರದು ಅದೇ ಸರಳತೆ, ಅದೇ ವೇಗ ,ಅದೇ ಕಪಟರಹಿತ ಮಾತು. ಅದನ್ನು ಸಂದರ್ಶನ ಎನ್ನುವದಕ್ಕಿಂತ ಅಕ್ಕನೊಡನೆ ಆಡಿದ ಮಾತೆನ್ನುವುದು ಸೂಕ್ತ.

  ಅವರಿಗೆ ಮಹಾದೇವನು ಸದ್ಗತಿಯನ್ನೀಯಲಿ. ಇಲ್ಲಿ ದಕ್ಕದೆ ಹೋದ ಅವರು ಬಯಸಿದ್ದ ಅನೇಕವು ಅಲ್ಲಿ ದಕ್ಕಿದರೆ ಎಷ್ಟು ಚೆನ್ನ.

  ಲಲಿತಾ ಸಿದ್ಧಬಸವಯ್ಯ 

  ಪ್ರತಿಕ್ರಿಯೆ
 2. Sudha ChidanandGowd

  ತುಂಬ ದುಃಖದ ಸಂಗತಿ.
  ಬದುಕು ಬರಹಗಳೆರಡರಲ್ಲೂ ಮಾದರಿಯಂತಿದ್ದ ಲೇಖಕಿ ಇನ್ನಿಲ್ಲವಾದದ್ದು ಸಾಹಿತ್ಯಲೋಕದ ಬಹುಮುಖ್ಯ ಕೊಂಡಿ ಕಳಚಿದಂತಾಗಿದೆ.
  ಅವರಿಗೆ ಗೌರವಪೂರ್ವಕ ನಮನಗಳು.

  ಪ್ರತಿಕ್ರಿಯೆ
 3. prathibha nandakumar

  ಗಿರಿಜಮ್ಮ ಅವರ ನಿಧನ ನಿಜಕ್ಕೂ ತುಂಬಾ ಬೇಸರದ ಸಂಗತಿ. ಲಂಕೇಶ್ ಪತ್ರಿಕೆ ಕಾಲದಿಂದ ಬಂದ ಸ್ನೇಹ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: