ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಜೆಮಲ್ಲಿಗೆ ಹೂಕಂಪನ್ನ ನೆನೆಪಿಗಾಗಿ ಬಿಟ್ಟು ಹೋದಳು…

ಒಂದು ವಿದಾಯ ಗೀತೆ..

ಟಿ.ಎಚ್‌. ಲವಕುಮಾರ್ 

ಈಗ ನಿರಾಳವಾಗಿರಬಹುದು ಆ ಜೀವ
ಎಷ್ಟೊಂದು ಬದುಕನ್ನ ಒಂದೇ ಜೀವನದಲಿ ಬದುಕಿದಳು
ಎಷ್ಟೊಂದು ಬಾರಿ ಸತ್ತು ಹುಟ್ಟಿದಳು
ಅದಮ್ಯ ಜೀವಬಯಕೆಯ ಈಕೆಗೆ
ಅದೆಷ್ಟು ಕನಸಿದ್ದವೋ?

ಏನಿತ್ತು ಬೆಳೆಯಲು ಏನಿತ್ತು ಉಳಿಯಲು
ಸೌತೆ, ಸೀಗೆ, ಅಲಸಂದೆ, ದಾಸವಾಳ, ಕಲ್ಲಂಗಡಿ,
ಸಂಜೆಮಲ್ಲಿಗೆ ಹೂಕಂಪನ್ನ ನೆನೆಪಿಗಾಗಿ ಬಿಟ್ಟು ಹೋದಳು…

ಕೆಂಪು ಬಸ್ಸಿನ ತುಂಬೆಲ್ಲ
ಘಮ್ಮೆನಿಸುವಂತ ಕುಂಬಳ ಪಲ್ಯೆ, ಜೋಳದ ರೊಟ್ಟಿ
ಬೆಳ್ಳುಳ್ಳಿ ಗೊಜ್ಜು, ಮಸ್ಸೊಪ್ಪು ಬಸ್ಸಾರು, ಗಿಣ್ಣು
ಅಮ್ಮ ಅಂದರೆ ಎಣ್ಣೆಯಲ್ಲಿ ಸಿಡಿದ ಸಾಸಿವೆ
ಕರಿದು ಕಪ್ಪಗಾದ ಕರಿಬೇವು, ಈಗ ತಟ್ಟೆ ನೋಡಿದರೆ
ಪ್ರತಿ ಅಗುಳಲ್ಲೂ ಅವಳದೇ ಚಿತ್ರ, ಅವಳದೇ ವಾಸನೆ.

ಮಾತು ಮಾತು ಮಾತು
ತಲೆ ರೋಸಿ ಹೋಗುವಷ್ಟು ಮಾತು
ಅದೇಕಷ್ಟು ಮಾತಾಡುತ್ತಿದ್ದಳೋ
ಈಗ ಗಾಳಿ ಬೀಸಿದ ಕಡೆ ಎಲ್ಲಾ ನೋಡುತ್ತೇನೆ
ಮೌನವನೇ ಇರಿದು ಕೊಲ್ಲುವಷ್ಟು ಮೌನ.

ಇಲ್ಲವಾದ ಎಲ್ಲ ತಾಯಂದಿರ ಆಸಯೇ ಅವಳಿಗೂ ಇದ್ದದ್ದು , ಎಲ್ಲರಂತೆಯೇ ಇವಳಿಗೂ ಮಕ್ಕಳ ಕಕ್ಕುಲಾತಿ
ಕಂಡ ಕಂಡವರೆಲ್ಲಾ ಕಿತ್ತುಕೊಂಡಾರೆಂದು
ಹಳಸಿನ ಮರದ ಕೆಳಗೆ ಕಾವಲು ಮಲಗಿದ್ದಾಳೆ.

ಆ ನೆರಳಲ್ಲಿ , ಆ ಘಮಲಲ್ಲಿ , ಗಾಳಿಯಲಿ
ಊರಾಚೆ ಕೆರೆಯಲಿ ಅವಳನ್ನೇ ಕಾಣುತ್ತೇನೆ.

 

‍ಲೇಖಕರು avadhi

7 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading