ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಗೀತ ರವಿರಾಜ್ ಬರೆದ ’ಕೃಷ್ಣಸುಂದರಿಯ ಕಥನ'

ಸಂಗೀತ ರವಿರಾಜ್

ಬಣ್ಣ ಎಂದಿಗು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವುದಿಲ್ಲ. ನಮ್ಮ ಗುಣ ನಡವಳಿಕೆ, ವಿಧ್ಯೆ, ಬುದ್ಧಿ ಇವುಗಳು ನಮ್ಮ ವ್ಯಕ್ತಿತ್ವದ ಕನ್ನಡಿಯೆ ಹೊರತು ಬಣ್ಣವಲ್ಲ. ಆದರೂ ವಾಸ್ತವವಾಗಿ ಒಂದು ಕಟುಸತ್ಯವಿದೆ. ಅದೇನೆಂದರೆ ಅಂತರಂಗದ ಚೆಲುವು ಅತಿ ಮುಖ್ಯ ಎಂದೆಲ್ಲಾ ಆಲೋಚಿಸುವ ವ್ಯಕ್ತಿಯು ಆಶಿಸುವುದು ಬಿಳಿ ಚರ್ಮವನ್ನು! ಸೌಂದರ್ಯಕ್ಕೆ ಒತ್ತು ಕೊಡುವ ಪ್ರಸ್ತುತ ಜಮಾನದಲ್ಲಿ ಕಪ್ಪು ಬಣ್ಣವೆಂದರೆ ಚೆಲುವು ಕಡಿಮೆ ಎಂಬುದಾಗಿ ಭಾವಿಸುವವರೆ ಹೆಚ್ಚು. ನಾವು ಭಾವಿಸದಿದ್ದರು ನಮ್ಮ ಸಮಾಜ ಅದನ್ನೆ ಬೊಟ್ಟು ಮಾಡಿ ತೋರಿಸಿ ನಮ್ಮಲ್ಲಿ ಕೀಳರಿಮೆ ಉಂಟು ಮಾಡಲು ಹೇಸುವುದಿಲ್ಲ. ಮದುವೆಯ ಪ್ರಾಯಕ್ಕೆ ಬಂದ ಹೆಣ್ಮಕ್ಕಳಿಗೆ ಇದರ ಅನುಭವ ಕೊಂಚ ಹೆಚ್ಚಾಗಿ ಅಗಿರುತ್ತದೆ. ಕಪ್ಪಗಿದ್ದರೆ ವರ ಹುಡುಕುವ ತ್ರಾಸ ಹೆಚ್ಚು ಎಂಬುದು ಲೋಕಾಭಿರಾಮದ ಮಾತು. ಇದನ್ನು ರೂಢಿಗೆ ತಂದವರು ಯಾರು? ಬಾಹ್ಯ ಬಣ್ಣವನ್ನು ನೋಡುವ ನಮ್ಮ ಸಮಾಜದ ದೃಷ್ಟಿಕೋನದಿಂದ ಕಪ್ಪಿದ್ದರೆ ಕೀಳು ಎಂಬ ಭಾವನೆ ತಲೆದೋರಿದೆ. ಮಗು ಹುಟ್ಟಿದ ತಕ್ಷಣ ಬಣ್ಣ ಯಾವುದೆಂದು ಕೇಳುವ ಪರಿಪಾಠ ಚಾಲ್ತಿಯಲ್ಲಿದೆ. ಹೆಣ್ಣು ಮಗು ಕಪ್ಪು ಎಂದಾದರೆ ಅಮ್ಮನಾದವಳಿಗೆ ಆಗಲೆ ಚಿಂತೆ ತಲೆದೋರುತ್ತದೆ. ಆಗಿಂದಲೆ ಮಗುವನ್ನು ಬೆಳ್ಳಗೆ ಮಾಡುವ ತಯಾರಿಯು ನಡೆಯುತ್ತದೆ.! ಅಲ್ಲಿಂದಲೇ ಮಗುವಿನ ಮನಪಟಲದಲ್ಲಿ ತಾನು ಕಪ್ಪು ಅನ್ನುವ ವಿಚಾರ ಜಾಗೃತವಾಗುತ್ತದೆ.
ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಅಪ್ಡೇಟ್ ಆಗುವುದೆಂದರೆ ಬಿಳಿ ಆಗುವುದಲ್ಲ ಎಂಬ ಅರಿವು ಭಾರತೀಯರಿಗೆ ಮೊದಲು ಮೂಡಬೇಕು. ಬಿಳಿ ಮಾಡುವ ಫೇರ್ನೆಸ್ ಕ್ರೀಮ್ಗಳ ಮಾರುಕಟ್ಟೆ ವಹಿವಾಟು ಅತಿ ಹೆಚ್ಚು ನಮ್ಮ ದೇಶ ಭಾರತದಲ್ಲಿ ಎಂದರೆ ನಂಬಲೇಬೇಕು . 2010 ರಲ್ಲಿ 2,800 ಕೋಟಿ ರೂಪಾಯಿಗಳಷ್ಟು ವಹಿವಾಟು ಈ ಕ್ರೀಮುಗಳಿಂದ ನಡೆದಿತ್ತು. ಅದೀಗ ವರ್ಷಕ್ಕೆ ಶೇಕಡ 18ರ ವೇಗದಲ್ಲಿ ಬೆಳೆಯುತ್ತಿದೆ. 2012ರಲ್ಲಿ ಭಾರತೀಯರು 233ಟನ್ ಫೇರ್ನೆಸ್ ಕ್ರೀಮ್ ಬಳಿದುಕೊಂಡ ದಾಖಲೆಯಾಗಿದೆ. ದೂರದರ್ಶನ ಮತ್ತು ಪತ್ರಿಕೆಗಳಲ್ಲಿ ಇಂತಹ ಕ್ರೀಮುಗಳ ಜಾಹೀರಾತು ಭರಾಟೆಯಿಂದ ತುಂಬಿಹೋಗಿದೆ. ನಾವು ಹೆಂಗಸರು ಬೆಳ್ಳಗಾಗುತ್ತೇವೆ ಎಂಬ ಭ್ರಮೆಯಿಂದ ಮುಗಿಬಿದ್ದು ಅದನ್ನು ಕೊಂಡುಕೊಳ್ಳುತ್ತೇವೆ. ಬಿಸಿಲಿಗೆ ಹೊರಟೊಡನೆ ಛತ್ರಯಿಲ್ಲದೆ ನಡೆಯುವುದಿಲ್ಲ. ತ್ವಚೆಯ ರಕ್ಷಣೆಯ ನೆಪದಲ್ಲಿ ತಾನು ಕಪ್ಪಗಾಗಬಾರದೆಂಬ ಆಸೆಯೆ ಆಕೆಗೆ ಹೆಚ್ಚಾಗಿರುತ್ತದೆ. ಭಾವಚಿತ್ರಗಳನ್ನು ತೆಗೆಸಿದ ಮೇಲೆ ಫೊಟೋಶಾಪ್ಗಳಲ್ಲಿ ಬೆಳ್ಳಗೆ ಮಾಡಿದ ಫೊಟೋಗಳೇ ಬೇಕೆಂದು ಆಶಿಸುತ್ತೇವೆ. ಬ್ಯೂಟಿಪಾರ್ಲರ್ ಸಹವಾಸದಿಂದ ಇನ್ನೂ ಬೆಳ್ಳಗಾಗಲು ಪ್ರಯತ್ನಿಸುತ್ತೇವೆ. ಇಂತಹ ಮೋಹ ಅತಿಯಾದರೆ ಅದು ನಮ್ಮ ಸರ್ವತೋಮುಖ ಬೆಳವಣಿಗೆಗೆ ಮಾರಕವಾಗಲುಬಹುದು.

ನಮ್ಮ ಸಾಧನೆಗೆ ಪೂರಕವಾದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಇಂತಹ ಗಿಮಿಕ್ಗಳು ನಮ್ಮ ಮನಸ್ಸಿಗೆ ತಟ್ಟುವುದಿಲ್ಲ. ಕಪ್ಪಗಿದ್ದ ಮಹಿಳೆಯರು ಯಾವುದೇ ಕೀಳರಿಮೆಯನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಗುರಿಯನ್ನು ತಲುಪಿ ಸಾಧನೆಗೈದಿದ್ದಾರೆ. ಹಲವಾರು ಹೆಸರಾಂತ ನಟನಟಿಯರು ಇದ್ದಾರೆ. ಆದರೆ ಪತ್ರಿಕೆಯವರು ಅವರನ್ನು ಬ್ಲ್ಯಾಕ್ ಬ್ಯೂಟಿ ಎಂದೇ ಸಂಬೋದಿಸಿ ಬರೆಯುವುದು ವಿಪರ್ಯಾಸ! ಬ್ರಿಟನ್ , ಅಮೆರಿಕ ಇನ್ನಿತರ ದೇಶಗಳ ಬಿಳಿಯರು ಹೇಗಾದರು ಮಾಡಿ ಕೊಂಚ ಕಪ್ಪಗಾಗಬೇಕೆಂದು ಬೀಚ್ಗಳಲ್ಲಿ ಮೈಯೊಡ್ಡಿ ಬಿಸಿಲಿಗೆ ಮಲಗುತ್ತಾರಂತೆ. ಆದರೆ ನಾವು ಭಾರತೀಯರು ಅತ್ತ ಕಪ್ಪು ಅಲ್ಲದ , ಇತ್ತ ಬಿಳಿಯು ಅಲ್ಲದ ಬಣ್ಣ ಹೊಂದಿದ್ದರು ನಮಗೆ ಸಮಾಧಾನವಿಲ್ಲ. ಟಿವಿ ಚಾನೆಲ್ಗೆ ನಿರೂಪಕಿಯರು ಬೇಕೆಂದರು ಜಾಹೀರಾತಿನಲ್ಲಿ ಬಿಳಿಯ ಬಣ್ಣಕ್ಕೆ ಆದ್ಯತೆ ಎಂದು ನೀಡಿರುತ್ತಾರೆ . ಇನ್ನು ವೈವಾಹಿಕ ಜಾಹೀರಾತುಗಳಲ್ಲಿ ಇದು ಸರ್ವೇಸಾಮಾನ್ಯ.
ನಮ್ಮ ಭಾರತೀಯರಲ್ಲಿ ಕೇವಲ ಬಣ್ಣದ ಚರ್ಮದಲ್ಲಷ್ಟೆ ಅಳೆದು ನೋಡುವ ಮನೋಧರ್ಮ. ಆದರೆ ಇದು ಜಾಗತಿಕ ಮಟ್ಟದಲ್ಲಿ ವರ್ಣತಾರತಮ್ಯ ( ರೇಸಿಸಂ) ಎಂಬುದಾಗಿ ಬೇರುಬಿಟ್ಟ ಕಹಿಸತ್ಯ. ಕರಿಯನೆಂಬ ಕಾರಣಕ್ಕೆ ಗಾಂಧೀಜಿಯನ್ನು ರೈಲ್ವೆ ಭೋಗಿಯಿಂದ ದಬ್ಬಿದ ಘಟನೆ ನಡೆದಿದೆ. ಒಬಾಮಾ ಅಧ್ಯಕ್ಷರಾದಾಗ ಅಮೆರಿಕದ ಇತಿಹಾಸದಲ್ಲೆ ಪ್ರಥಮ ಕರಿಯ ಅಧ್ಯಕ್ಷ ಎಂಬುದಾಗಿ ಪ್ರಚಾರ ಗಿಟ್ಟಿಸಿಕೊಂಡರು. ಅಮೆರಿಕಾದಲ್ಲಿ ಕರಿಯರು ಸಮಾನ ಹಕ್ಕಿಗಾಗಿ ನೂರಾ ವರುಷಗಳ ಕಾಲ ಹೋರಾಟ ನಡೆಸಿದ್ದಾರೆ. ಮತದಾನ ಸೇರಿದಂತೆ ಅಲ್ಲಿ ಎಲ್ಲಾ ರೀತಿಯ ಹಕ್ಕುಗಳು ಬಿಳಿಯರಿಗೆ ಮಾತ್ರ. ವರ್ಣಬೇಧ ನೀತಿಯ ಇಂತಹ ಉದಾಹರಣೆಗಳು ಸಾವಿರಾರು ಸಿಗುತ್ತವೆ.
ಚೆನ್ನೈನಲ್ಲೊಂದು ” ವಿಮೆನ್ ಆಫ್ ವರ್ಥ್” ಎನ್ನುವ ಸಂಘಟನೆಯಿದೆ. ಈ ಸಂಘಟನೆತ ಉದ್ದೇಶ ಕಪ್ಪಗಿರುವವರಲ್ಲಿ ಕೀಳರಿಮೆಯನ್ನು ಹೋಗಲಾಡಿಸುವುದು. ಡಾರ್ಕ ಈಸ್ ಬ್ಯೂಟಿಫುಲ್ ಎಂಬ ಆಂದೋಲನವನ್ನು ಪ್ರಾರಂಭ ಮಾಡಿ ಕಪ್ಪು ಚರ್ಮದ ಬಗ್ಗೆ ಸಮಾಜದಲ್ಲಿರುವ ತಪ್ಪು ದೃಷ್ಟಿಕೋನ ಇನ್ನಿಲ್ಲದಂತಾಗಬೇಕು ಎಂದು ಈ ಸಂಘಟನೆ ಶ್ರಮಿಸುತ್ತಿದೆ. ಇದಕ್ಕೆ ಪ್ರತಿಷ್ಠಿತ ಹುದ್ದೆಯಲ್ಲಿರುವ ಕಪ್ಪಗಿರುವವರನ್ನು ರಾಯಾಬಾರಿಗಳನ್ನಾಗಿ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.
ಪ್ರತಿಭೆ ಮತ್ತು ಉತ್ತಮ ನಡವಳಿಕೆ ಇವೆರಡು ಬಣ್ಣವನ್ನು ಮೀರಿದ್ದು. ಇವೆರಡು ಇರುವ ವ್ಯಕ್ತಿಗೆ ಕಪ್ಪು ವಿಷಯವೆ ಅಲ್ಲ. ಪ್ರತಿಭೆಗೆ ತಕ್ಕಂತೆ ನಮ್ಮಲ್ಲಿ ಅದೆಷ್ಟೋ ಕಪ್ಪಗಿರುವ ಗಗನ ಸಖಿಯರು, ಕಲಾವಿದರು, ಸಾಹಿತಿಗಳು’ ಕ್ರೀಡಾಪಟುಗಳು ಕಾಣಸಿಗುತ್ತಾರೆ. ಇವರು ಕಪ್ಪು ಬಣ್ಣದ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರೆ ಏನಾದರು ಸಾಧನೆ ಮಾಡಲು ಸಾಧ್ಯವತ್ತೇ? ಹುಡುಗಿ ಕಪ್ಪು ಎಂಬ ಕಾರಣಕ್ಕೆ ಮದುವೆ ಮುಂದೂಡಲ್ಪಡುತ್ತಾ ಹೋದರು ಭವಿಷ್ಯದಲ್ಲಿ ಆಕೆಗೆ ಮದುವೆ ಆಗಿಯೆ ತೀರುತ್ತದೆ. ಆದರಿಂದ ಈ ಲೋಕದಲ್ಲಿ ಕಪ್ಪು ಬಣ್ಣವೆಂದು ಅನಗತ್ಯ ಚಿಂತಿಸುವ ಪ್ರಮೇಯವೆ ಬೇಡ.
 

‍ಲೇಖಕರು G

18 October, 2014

1 Comment

  1. mmshaik

    nija..appata chinnada maatugaLu..sangeeta avare….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading