
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 116
——————
ಗೃಹಪ್ರವೇಶದ ಕಾರ್ಯಕ್ರಮವೇನೋ ಸಾಂಗವಾಗಿ ನೆರವೇರಿತು ; ಆದರೆ ಮದ್ರಾಸ್ ನಿಂದ ತಂದು ನೀರು ತುಂಬಿದ ಬಕೆಟ್ ಗಳಿಗೆ ಹಾಕಿ ಗ್ಯಾರೇಜ್ ನಲ್ಲಿಟ್ಟಿದ್ದ ಮೀನುಗಳು ‘ನಮ್ಮ ಮುಂದಿನ ಗತಿಯೇನು?’ ಎಂದು ಪ್ರಶ್ನಿಸುತ್ತಾ ಇದ್ದ ತುಸು ಜಾಗದಲ್ಲೇ ರಭಸದಿಂದ ಸರಿದಾಡುತ್ತಿದ್ದವು!
ಹೆಚ್ಚು ಸಮಯ ಬಕೆಟ್ ನಲ್ಲಿ ಮುಚ್ಚಿಡುವಂತಿಲ್ಲ; ಗಾಳಿಯಾಡದೇ ಅವಕ್ಕೆ ಉಸಿರು ಕಟ್ಟಿಬಿಡುತ್ತದೆ! ಮುಚ್ಚಳ ತೆಗೆದಿಟ್ಟರೆ ಮತ್ತೊಂದು ಅಪಾಯ: ಆತ್ಮಹತ್ಯಾ ಪ್ರವೃತ್ತಿಯ ಮೀನುಗಳು ಇದ್ದಕ್ಕಿದ್ದಂತೆ ಹಾರಿ ಬಕೆಟ್ ನಿಂದ ಹೊರಗೆ ಬಿದ್ದು ಅದು ನಮ್ಮ ಗಮನಕ್ಕೆ ಬಾರದೇ ಹೋಗಿಬಿಟ್ಟರೆ? ಒಂದು ಪ್ರಸಂಗದಲ್ಲಿ ಅದಾಗಲೇ ಅವುಗಳ ಚೇಷ್ಟೆಯನ್ನು ನೋಡಿ ಅದರ ಪರಿಣಾಮವನ್ನು ಅನುಭವಿಸಿಯಾಗಿದೆ! ಮೊದಲಿನ ಹಾಗೆ ಮುಂಭಾಗಕ್ಕೆ ಮಾತ್ರ ಗಾಜು ಅಳವಡಿಸಿ ಮತ್ತೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಮೂರ್ಖತನವಾಗುತ್ತದೆ! ಆ ಜಾಗದ ಅಳತೆಗೆ ಹೊಂದುವಂತಹ ಅಳತೆಯ ಒಂದು ಹೊಸ ಅಕ್ವೇರಿಯಂ ಅನ್ನು ಮಾಡಿಸಿ ಅಲ್ಲಿ ಇಟ್ಟುಬಿಡುವುದೇ ಅತ್ಯಂತ ಸೂಕ್ತ ವಾದ ಮಾರ್ಗ ಅನ್ನಿಸಿತು.
ಒಡನೆಯೇ ಸನಿಹದ ಅಕ್ವೇರಿಯಂ ಅಂಗಡಿಗೆ ಹೋಗಿ ಹೊಸ ಅಕ್ವೇರಿಯಂ ಅನ್ನು ಸಿದ್ಧಪಡಿಸಲು ಸೂಚನೆ ಕೊಟ್ಟು ಬಂದೆ. ಅಂದು ಸಂಜೆಗೇ ಹೊಸ ಅಕ್ವೇರಿಯಂ ಸಿದ್ಧವಾಗಿ ಮನೆಗೆ ಬಂದುಬಿಟ್ಟಿತು. ಅದರೊಳಗೆ ಸಾಕಷ್ಟು ಮರಳು—ಬಣ್ಣಬಣ್ಣದ ಕಲ್ಲುಗಳನ್ನು ತುಂಬಿ ಗಿಡಗಳನ್ನು ಮರಳಲ್ಲಿ ಹುದುಗಿಸಿ, ಸದಾ ಗಾಳಿಯಾಡುವಂತೆ ಮಾಡುವ ಪುಟ್ಟ ಯಂತ್ರವನ್ನು ಜೋಡಿಸಿ, ಮೀನಿನ ಉಚ್ಛಿಷ್ಟ ಹಾಗೂ ಸಣ್ಣಪುಟ್ಟ ಕಸಗಳನ್ನು ಹೀರಿಕೊಳ್ಳುವ ಶುದ್ಧೀಕರಣ ಯಂತ್ರವನ್ನೂ ಅಳವಡಿಸಿ, ಒಳ್ಳೆಯ ದೀಪದ ವ್ಯವಸ್ಧೆ ಮಾಡಿ ಲಕಲಕನೆ ಹೊಳೆಯುತ್ತಿದ್ದ ಅಕ್ವೇರಿಯಂಗೆ ಮೀನುಗಳನ್ನು ವರ್ಗಾಯಿಸಿದೆ. ಆನಂದದಿಂದ ಅಕ್ವೇರಿಯಂ ತುಂಬಾ ಸಂಭ್ರಮದಿಂದ ಓಡಾಡತೊಡಗಿದ ಮೀನುಗಳನ್ನು ಕಂಡು ಮನಸ್ಸು ಎಷ್ಟೋ ಹಗುರಾಯಿತು.
ರಾತ್ರಿಯ ನೀರವತೆಯಲ್ಲಿ ಕೆಲವೊಮ್ಮೆ ಮಂದಗತಿಯಲ್ಲಿ— ಕೆಲವೊಮ್ಮೆ ವೇಗವಾಗಿ ಚಲಿಸುತ್ತಾ, ಕೆಲವೊಮ್ಮೆ ಪರಸ್ಪರ ಮುದ್ದಿಸಿಕೊಳ್ಳುತ್ತಾ, ಕೆಲವೊಮ್ಮೆ ಗಂಭೀರವಾಗಿ ನಿಶ್ಚಲವಾಗಿಬಿಡುತ್ತಾ, ಮಗುದೊಮ್ಮೆ ಅಕ್ವೇರಿಯಂನಲ್ಲಿದ್ದ ಆಟಿಕೆಗಳ ಒಳಹೋಗಿ ಮರೆಯಾಗಿ ಮತ್ತೆ ಹೊರಬಂದು ಜೂಟಾಟವಾಡುತ್ತಿದ್ದ ಮೀನುಗಳ ಆಟಗಳನ್ನು ತದೇಕಚಿತ್ತನಾಗಿ ನೋಡುತ್ತಾ ತಾಸುಗಟ್ಟಲೆ ಕೂತುಬಿಡುತ್ತಿದ್ದೆ! ಅದೊಂದು ಬಗೆಯ ತನ್ಮಯತೆಯ ಧ್ಯಾನಸ್ಥ ಸ್ಥಿತಿ! ಹೀಗೆ ಈ ಮೀನುಗಳು ಮನಸ್ಸನ್ನು ಮುದಗೊಳಿಸುತ್ತಿದ್ದಂತೆಯೇ ಅನೇಕ ಬಾರಿ ಹೊಸ ಹೊಸ ಸಮಸ್ಯೆಗಳನ್ನು ಒಡ್ಡಿ ಆತಂಕಗಳನ್ನು ಸೃಷ್ಟಿಸಿದ್ದೂ ಉಂಟು!

ಒಮ್ಮೆ ಹೀಗಾಯಿತು:
ಒಂದು ಬೆಳಿಗ್ಗೆ ಶಾಲೆಗೆ ಹೊರಡುವ ಮುನ್ನ ಎಂದಿನಂತೆ ಒಮ್ಮೆ ಮೀನುಗಳನ್ನು ಮಾತಾಡಿಸಿ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದ ನನ್ನ ಮಗ ಅನಿರುದ್ಧ ಇದ್ದಕ್ಕಿದ್ದ ಹಾಗೆ ಜೋರಾಗಿ ಕೂಗಿದ: ಡ್ಯಾಡಿ..ಬೇಗ ಬಾ ಇಲ್ಲಿ”. ಮಹಡಿಯ ರೂಂನಲ್ಲಿದ್ದ ನಾನು ಧಾವಿಸಿ ಕೆಳಬಂದೆ.
“ಈ ಗೋಲ್ಡ್ ಫಿಷ್ ನೋಡು ಡ್ಯಾಡಿ, ಅದರದ್ದೊಂದು ಕಣ್ಣೇ ಹೊರಟುಹೋಗಿದೆ” ಎಂದು ಸಂಕಟದಿಂದ ನುಡಿದ ಮಗರಾಯ. ಅದನ್ನು ನೋಡಿ ನನಗೂ ಸಖೇದಾಶ್ಚರ್ಯವಾಯಿತು. ಇದು ಹೇಗಾಗಲು ಸಾಧ್ಯ? ಆ ಗೋಲ್ಡ್ ಫಿಷ್ ನ ಕಣ್ಣು ಹೊರಟುಹೋಗಿದ್ದರೂ ಅದು ಮಾಮೂಲಿನಂತೆ ಓಡಾಡಿಕೊಂಡಿದೆ! ಏನಾಗಿದ್ದಿರಬಹುದು? ನಮ್ಮ ಅಕ್ವೇರಿಯಂನಲ್ಲಿ ಆರೆಂಟು ಬಗೆಯ ಗೋಲ್ಡ್ ಫಿಷ್ ಗಳಿದ್ದವು.ಕಿತ್ತಳೆ ಬಣ್ಣದ ದುಂಡು ಹೊಟ್ಟೆಯ ಉಬ್ಬುಗಣ್ಣಿನ ಅತಿ ತೆಳು ಹಾಗೂ ಮೃದುವಾದ ಎಸಳಿನಂತಹ ಬಾಲದ ಹೊಂಬಣ್ಣದ ಮೀನುಗಳದು ಒಂದು ಬಗೆಯಾದರೆ ಮುಖದ ಮೇಲೆ ಟೆಲಿಸ್ಕೋಪ್ ಅನ್ನು ಲಗತ್ತಿಸಿಕೊಂಡಂತೆ ಕಾಣುತ್ತಿದ್ದ ಕಪ್ಪು ಹಾಗೂ ಕೆಂಪು ಬಣ್ಣದ ಟೆಲಿಸ್ಕೋಪ್ ಗೋಲ್ಡ್ ಫಿಷ್ ಗಳದು ಮತ್ತೊಂದು ಬಗೆ. ಅಕ್ವೇರಿಯಂಗೆ ಶೋಭೆ ಬರುತ್ತಿದ್ದುದೇ ಈ ವರ್ಣರಂಜಿತ ಗೋಲ್ಡ್ ಫಿಷ್ ಗಳ ವಯ್ಯಾರದ ಒನೆದಾಟದಿಂದ! ಅಂಥದೊಂದು ಮೀನಿನ ಕಣ್ಣು ಹೊರಟೇಹೋಗಿದೆ ; ಕಣ್ಣಿನ ಜಾಗ ಕುಳಿಬಿದ್ದಿದೆ! ಅಂದು ಸಂಜೆಯ ವೇಳೆಗೆ ಮತ್ತೊಂದು ಗೋಲ್ಡ್ ಫಿಷ್ ಕಣ್ಣು ಕಳೆದುಕೊಂಡಿತ್ತು! ಮರುದಿನ ಮತ್ತೆರಡರ ಕಣ್ಣು ಮಾಯ! ನನಗಂತೂ ತಲೆಯೇ ಕೆಟ್ಟುಹೋಯಿತು.
ಕೂಡಲೇ ಅಕ್ವೇರಿಯಂ ಅಂಗಡಿಗೆ ಹೋಗಿ ಒಂದು ಪುಟ್ಟು ಅಕ್ವೇರಿಯಂ ಅನ್ನು ಖರೀದಿಸಿ ಅಲ್ಲಿದ್ದ ಮೇಲ್ವಿಚಾರಕನಿಗೆ ವಿಷಯ ತಿಳಿಸಿ ಮನೆಗೆ ಕರೆದುಕೊಂಡು ಬಂದೆ. ಮನೆಗೆ ಬಂದು ಅಕ್ವೇರಿಯಂ ಅನ್ನು ಪರಿಶೀಲಿಸಿದ ಆತ ಬೆಳ್ಳಿಯ ಬಣ್ಣದ ಅತಿ ಚಟುವಟಿಕೆಯ ಮೀನುಗಳ ಜೋಡಿಯೊಂದನ್ನು ತೋರಿಸಿ, “ಈ ಮೀನು ಎಲ್ಲಿಂದ ತಂದ್ರಿ ಸರ್? ನಾನಂತೂ ನಿಮಗೆ ಕೊಟ್ಟಿಲ್ಲ.. ನೀವು ಬೇರೆ ಎಲ್ಲಿಂದಲೋ ತಂದಿರಬೇಕು. ಇವು ಭಾಳ ಡೇಂಜರ್ ಫಿಷ್ ಸರ್.. ಇವನ್ನೆಲ್ಲಾ ಪ್ರತ್ಯೇಕವಾಗಿ ಇಡಬೇಕು..ಗೋಲ್ಡ್ ಮೀನಿನ ಜೊತೆಗಂತೂ ಇಡಲೇಬಾರದು. ಇಟ್ಟರೆ ಹೀಗಾಗುತ್ತೆ ನೋಡಿ! ಅವಕ್ಕೆ ಗೋಲ್ಡ್ ಫಿಷ್ ಗಳ ಕಣ್ಣು ತಿನ್ನೋದೇ ಒಂದು ಚಟ ಸರ್” ಎಂದು ನುಡಿದು ಅವೆರಡೂ ಮೀನುಗಳನ್ನು ಉಪಾಯವಾಗಿ ನೆಟ್ ನ ಸಹಾಯದಿಂದ ಹಿಡಿದು ಒಂದು ಕವರ್ ಗೆ ಹಾಕಿಕೊಂಡ. “ಇನ್ನುಮೇಲೆ ನನ್ನನ್ನ ಕೇಳದೇ ಯಾವ ಹೊಸ ಮೀನನ್ನೂ ತರಬೇಡಿ ಸರ್” ಎಂದು ಬುದ್ಧಿಮಾತು ಹೇಳಿ ಹೊರಟುಹೋದ. “ಅಯ್ಯೋ! ಹೀಗೆಲ್ಲಾ ಆಗುವುದುಂಟೇ? ಇನ್ನು ಮುಂದೆ ಮೀನುಗಳ ಆಯ್ಕೆಯ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಬೇಕು” ಎಂದುಕೊಳ್ಳುತ್ತಾ ಕಣ್ಣು ಕಳೆದುಕೊಂಡಿದ್ದ ಮೀನುಗಳನ್ನು ಹೊಸದಾಗಿ ತಂದಿದ್ದ ಅಕ್ವೇರಿಯಂಗೆ ವರ್ಗಾಯಿಸಿದೆ.
ಎಲ್ಲ ಮೀನುಗಳ ಜೊತೆಯಲ್ಲೇ ಇದ್ದರೆ ಅವಕ್ಕೆ ಊಟ ಸಿಗುತ್ತದೋ ಇಲ್ಲವೋ? ಪ್ರತ್ಯೇಕವಾಗಿಟ್ಟು ಅವಕ್ಕೆ ಊಟ ಹಾಕುವುದು ಒಳ್ಳೆಯದು ಎಂಬುದು ಮಗ ಅನಿರುದ್ಧನ ವಿಚಾರವಾಗಿತ್ತು. ಅಂದಿನಿಂದ ಪ್ರತಿ ದಿನ ಶುಶ್ರೂಷಾ ಗೃಹದ ಮೀನುಗಳಿಗೆ ಕಾಳುಗಳನ್ನು ಹಾಕುವ ಜವಾಬ್ದಾರಿಯನ್ನು ಅವನೇ ವಹಿಸಿಕೊಂಡ. ಒಮ್ಮೆ ಅಕ್ವೇರಿಯಂ ಅನ್ನು ಹೋರಗಿನಿಂದ ತಟ್ಟಿ, “ಊಟ ಬಡಿಸುತ್ತಿದ್ದೇನೆ” ಎಂಬ ಸೂಚನೆಯನ್ನು ಮೀನುಗಳಿಗೆ ನೀಡಿ ಅನಂತರ ಕಾಳು ಹಾಕುತ್ತಿದ್ದ!
ಈ ತರಹದ ಹಲವಾರು ಪ್ರಸಂಗಗಳು ನಮ್ಮ ಮತ್ಸ್ಯ ಪುರಾಣದಲ್ಲಿ ಅಡಕವಾಗಿವೆ! ಸಧ್ಯಕ್ಕೆ ಇಷ್ಟು ಸಾಕು.
ಹೊಸ ಮನೆಯಲ್ಲಿ ಆರಂಭವಾದ ಹೊಸ ಬದುಕಿನ ಕಥೆಯನ್ನು ಆರಂಭಿಸುವ ಮುನ್ನ ದಾಖಲಿಸಲು ಮರೆತಿದ್ದ ಕೆಲ ಹಳೆಯ ಸಂಗತಿಗಳನ್ನು ನೆನಪಿಸಿಕೊಳ್ಳುತ್ತೇನೆ.
ರವಿಚಂದ್ರನ್ ಅವರಿಗೆ ಸಾಕಷ್ಟು ಚಿತ್ರಗಳಲ್ಲಿ ಕಂಠದಾನ ಮಾಡಿದ್ದ ವಿಚಾರವನ್ನು ಈಗಾಗಲೇ ಹಂಚಿಕೊಂಡಿದ್ದೇನಷ್ಟೇ.ಕಂಠದಾನ ನನ್ನ ಅತ್ಯಂತ ಪ್ರೀತಿಯ—ಮೊದಲ ಆಯ್ಕೆಯ ಕ್ಷೇತ್ರವಲ್ಲವಾದರೂ ಅನೇಕ ಅವಕಾಶಗಳು ನನ್ನನ್ನು ಅರಸಿಕೊಂಡು ಬಂದದ್ದೇನೋ ನಿಜ. ಹಾಗೆ ನಾನು ಕಂಠದಾನ ಮಾಡಿದ ಇನ್ನೊಂದಿಬ್ಬರು ಕಲಾವಿದರೆಂದರೆ ಶಿವರಾಮ್ (IAS), ಸುನಿಲ್ , ಕುಮಾರ್ ಗೋವಿಂದು ಹಾಗೂ ಅನಿಲ್. ಶಿವರಾಮ್ ಅವರಿಗೆ ‘ಬಾ ನಲ್ಲೆ ಮಧುಚಂದ್ರಕೆ’ ಹಾಗೂ ಪ್ರತಿಭಟನೆ’ ಎಂಬ ಎರಡು ಚಿತ್ರಗಳಲ್ಲಿ ಧ್ವನಿದಾನ ಮಾಡಿದ್ದೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಬಾ ನಲ್ಲೆ ಮಧುಚಂದ್ರಕೆ’ ಚಿತ್ರ ಆ ಕಾಲಮಾನದ ಒಂದು ಅತ್ಯಂತ ಯಶಸ್ವೀ ಚಿತ್ರವೆನಿಸಿಕೊಂಡಿತ್ತು. ಯಶಸ್ಸಿನ ಸಿಂಹಪಾಲು ಚಂದ್ರು ಅವರ ಕಥೆ—ಚಿತ್ರಕಥೆಗೆ ಸಂದಿತ್ತು.
ಉತ್ತಮ ತಂತ್ರಜ್ಞ ಹಾಗೂ ನಿರ್ದೇಶಕರೆಂದು ಖ್ಯಾತರಾಗಿರುವ ಶಿವಮಣಿ ಅವರ ನಿರ್ದೇಶನದ ‘ಮಿನುಗುತಾರೆ’ ಚಿತ್ರದಲ್ಲಿ ಕುಮಾರ್ ಗೋವಿಂದು ಅವರಿಗೆ ಧ್ವನಿಯಾಗಿದ್ದೆ. ಮತ್ತೊಬ್ಬ ಜನಪ್ರಿಯ ನಿರ್ದೇಶಕ ಬಿ.ರಾಮಮೂರ್ತಿಯವರ ‘ಮನ ಮೆಚ್ಚಿದ ಸೊಸೆ’ ಚಿತ್ರದಲ್ಲಿ ಸುನಿಲ್ ಅವರಿಗೆ ಕಂಠದಾನ ಮಾಡಿದ್ದೆ. ಇವರುಗಳಿಗೆ ಕಂಠದಾನ ಮಾಡುವ ವೇಳೆಗಾಗಲೇ ರವಿಚಂದ್ರನ್ ಅವರಿಗೆ ಧ್ವನಿದಾನ ಮಾಡುವುದನ್ನು ನಿಲ್ಲಿಸಿಯಾಗಿತ್ತು. ‘ರಾಮಾಚಾರಿ’ ಚಿತ್ರದಿಂದ ರವಿಯವರು ತಮ್ಮ ಪಾತ್ರಗಳಿಗೆ ತಾವೇ ಮಾತಾಡಲು ಆರಂಭಿಸಿದ್ದರು. ಅವರಿಗೆ ನಾನು ಧ್ವನಿಯಾಗಿರುವ ತನಕ ಬೇರೆಯವರಿಗೆ ಕಂಠದಾನ ಮಾಡಬಾರದು ಎಂಬ ಅಲಿಖಿತ ಕರಾರು ಬೇರೆ ಆಗಿತ್ತಲ್ಲಾ! ‘ಅಭಿಮನ್ಯು’ ನಾನು ರವಿ ಅವರಿಗೆ ಕಂಠದಾನ ಮಾಡಿದ ಕೊನೆಯ ಚಿತ್ರ. ಈ ಡಬ್ಬಿಂಗ್ ಸಮಯದ ಒಂದು ಸ್ವಾರಸ್ಯಕರ ಪ್ರಸಂಗ ನೆನಪಾಗುತ್ತಿದೆ:

ರವಿಯವರು ನಾಯಕರಾಗಿದ್ದ ಒಂದು ದೊಡ್ಡ ಬಜೆಟ್ ನ ಚಿತ್ರದ ಡಬ್ಬಿಂಗ್ ಗಾಗಿ ನನಗೆ ಕರೆ ಬಂದಿತು. ಮಾಮೂಲಿನ ಹಾಗೆ ನಾನು ಹೋಗಿ ಎರಡು ದಿನಗಳಲ್ಲಿ ಡಬ್ಬಿಂಗ್ ಕೆಲಸವನ್ನು ಮುಗಿಸಿಕೊಟ್ಟು ಬಂದೆ. ಡಬ್ಬಿಂಗ್ ಮೇಲ್ವಿಚಾರಣೆಗೆ ನಿರ್ದೇಶಕರು ಬಂದಿರಲಿಲ್ಲವಾಗಿ ಸಹಾಯಕ ನಿರ್ದೇಶಕರೇ ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಡಬ್ಬಿಂಗ್ ಮುಗಿಸಿ ಹೋದ ಎರಡು ದಿನಕ್ಕೆ ಸಹಾಯಕ ನಿರ್ದೇಶಕರಿಂದ ತಕ್ಷಣವೇ ಸ್ಟುಡಿಯೋಗೆ ಬರಲು ಕರೆ ಬಂದಿತು.ಬಹುಶಃ ಸಣ್ಣ ಪುಟ್ಟ ಸಂಭಾಷಣೆಗಳಾವುವೋ ಬಿಟ್ಟುಹೋಗಿರಬೇಕೆಂದು ಎಣಿಸಿ ನಾನು ಸ್ಟುಡಿಯೋಗೆ ಹೋದೆ. ಅಲ್ಲಿ ನನಗೊಂದು ಅಚ್ಚರಿ ಕಾದಿತ್ತು. ಸಹಾಯಕ ನಿರ್ದೇಶಕರು ಹೇಳಿದರು: “ಸರ್ , ಡಬ್ಬಿಂಗ್ ಸರಿಯಾಗಿ ಆಗಿಲ್ಲವಂತೆ. ಮಾತಾಡಿರುವ ಟ್ರೆಂಡ್ ಸರಿಯಾಗಿಲ್ಲ ಅಂತ ನಿರ್ದೇಶಕರು ಹೇಳ್ತಿದಾರೆ.” “ಸರಿ, ಈಗೇನು ಮಾಡಬೇಕು?” ಎಂದು ನಾನು ಕೇಳಿದೆ. “ಇನ್ನೊಂದು ಸಲ ಡಬ್ಬಿಂಗ್ ಮಾಡಬೇಕಂತೆ” ಎಂದರು ಅವರು.
ನಾನು: “ಯಾವ ದೃಶ್ಯಗಳಿಗೆ”?
ಆತ: “ಇಡೀ ಪಿಕ್ಚರ್ ಸರ್!”
ಈ ಮಾತು ಕೇಳಿ ನನಗೆ ನಖಶಿಖಾಂತ ಉರಿದುಹೋಯಿತು! ಇಡೀ ಚಿತ್ರಕ್ಕೆ ಮತ್ತೊಮ್ಮೆ ಕಂಠದಾನ ಮಾಡುವುದೆಂದರೇನು ಹುಡುಗಾಟವೇ? ‘ಟ್ರೆಂಡ್’ ಬಗ್ಗೆ ಅಷ್ಟು ಕಾಳಜಿ ಇರುವ ನಿರ್ದೇಶಕರಾದರೆ ತಾವೇ ಖುದ್ದು ಸ್ಟುಡಿಯೋದಲ್ಲಿದ್ದು ಡಬ್ಬಿಂಗ್ ಮಾಡಿಸಬೇಕಿತ್ತು. ಅದು ಬಿಟ್ಟು ಸಹಾಯಕ ನಿರ್ದೇಶಕರಿಗೆ ಜವಾಬ್ದಾರಿ ವರ್ಗಾಯಿಸಿ ಈಗ ಕ್ಯಾತೆ ತೆಗೆದರೆ? ನಾನು ಸಹಾಯಕರನ್ನು ಕೇಳಿದೆ: “ನಿಮಗೆ ನಾನು ಮಾಡಿರುವ ಡಬ್ಬಿಂಗ್ ಸಮಾಧಾನ ತಂದಿದೆಯೇ”? “ಖಂಡಿತ ಸರ್. ಅನುಮಾನವೇ ಇಲ್ಲ” ಎಂದರವರು. “ಸರಿ ಹಾಗಾದರೆ. ನಿಮ್ಮ ನಿರ್ದೇಶಕರಿಗೆ ಹೋಗಿ ಹೇಳಿ—’ನಾನೂ ಒಬ್ಬ ನಟ; ಸನ್ನಿವೇಶ—ನಟನ ಭಾವಾಭಿವ್ಯಕ್ತಿ ಎಲ್ಲವೂ ನನಗೂ ಚೆನ್ನಾಗಿ ಅರ್ಥವಾಗುತ್ತದೆ; ಅದಕ್ಕನುಗುಣವಾಗಿಯೇ ಡಬ್ಬಿಂಗ್ ಮಾಡಿದ್ದೇನೆ; ಇನ್ನು ಒಂದು ಸಲವಲ್ಲ, ನೂರು ಸಲ ಡಬ್ಬಿಂಗ್ ಮಾಡಿಸಿದರೂ ನಾನು ಮಾತಾಡುವುದು ಅದೇ ಟ್ರೆಂಡ್ ನಲ್ಲಿಯೇ; ಮತ್ತೊಮ್ಮೆ ಇಡೀ ಚಿತ್ರಕ್ಕೆ ಡಬ್ಬಿಂಗ್ ಮಾಡುವ ಪ್ರಶ್ನೆಯೇ ಇಲ್ಲ; ಯಾವುದಾದರೂ ಒಂದೆರಡು ದೃಶ್ಯಗಳ ಬಗ್ಗೆ ಆಕ್ಷೇಪ ಇದ್ದರೆ ಮಾತ್ರ ಮತ್ತೊಮ್ಮೆ ಡಬ್ಬಿಂಗ್ ಮಾಡಬಹುದಷ್ಟೇ. ಇಡೀ ಚಿತ್ರಕ್ಕೇ ಮತ್ತೆ ಡಬ್ಬಿಂಗ್ ಮಾಡಬೇಕೆಂದು ಹಠ ಹಿಡಿದರೆ ಎರಡರಷ್ಟು ಸಂಭಾವನೆಯನ್ನು ನೀಡಿ ನಂತರ ಡಬ್ಬಿಂಗ್ ಮಾಡಿಸಿ ಕೊಳ್ಳಬಹುದು.’
ಸಹಾಯಕರು ನಿರ್ದೇಶಕರಿಗೆ ನಾನು ಹೇಳಿದ್ದನ್ನು ಹಾಗೆಯೇ ಮುಟ್ಟಿಸಿದರು. ಎರಡರಷ್ಟು ಸಂಭಾವನೆಯ ಪ್ರಸ್ತಾಪವನ್ನು ಕೇಳುತ್ತಿದ್ದಂತೆ ನಿರ್ದೇಶಕರ ಮಾತಿನ ‘ಟ್ರೆಂಡ್’ ಬದಲಾಗಿ ಬಿಡುವುದೇ! “ಅಯ್ಯಯ್ಯೋ! ಬೇಡ ಬಿಡ್ರಿ..ಇರೋ ಹಾಗೇ ಇದ್ದುಕೊಳ್ಳಲಿ..ಒಂದೆರಡು ದೃಶ್ಯಗಳಿಗೆ ಮಾತ್ರ ಮತ್ತೆ ಡಬ್ಬಿಂಗ್ ಮಾಡಿಸಿಬಿಡಿ” ಎಂದು ಎರಡು ದೃಶ್ಯಗಳನ್ನು ಗುರುತು ಮಾಡಿ ಕಳಿಸಿದರು. ನಿಜವಾಗಿ ಟ್ರೆಂಡ್ ಸರಿಯಿಲ್ಲದಿದ್ದರೆ ಅವರು ಸುಮ್ಮನಿರುವ ಪೈಕಿಯೇ? ಎರಡಲ್ಲ, ನಾಲ್ಕರಷ್ಟಾದರೂ ಸಂಭಾವನೆ ಕೊಟ್ಟು ತಮಗೆ ಬೇಕಾದಂತೆ ಮಾಡಿಸಿಕೊಳ್ಳುತ್ತಿದ್ದರು!
ಸ್ಟುಡಿಯೋಗೆ ಹೋಗಿ ನೋಡಿದ ನನಗೆ ಆ ದೃಶ್ಯಗಳಿಗೂ ಮತ್ತೆ ಡಬ್ಬಿಂಗ್ ಮಾಡುವ ಅಗತ್ಯವಿಲ್ಲವೆನ್ನಿಸಿತು. ಕೇವಲ ತಮ್ಮ ದೊಡ್ಡಸ್ತಿಕೆಯ ಪ್ರದರ್ಶನಕ್ಕಾಗಿ ನಿರ್ದೇಶಕರು ಹೀಗೆ ಮಾಡುತ್ತಿದ್ದಾರೆಂಬುದು ನನಗೆ ಖಾತ್ರಿಯಾಗಿಹೋಯಿತು. ಅರ್ಧತಾಸಿನಲ್ಲಿ ಆ ದೃಶ್ಯಗಳಿಗೆ ಮತ್ತೆ ಡಬ್ಬಿಂಗ್ ಮಾಡುವುದೇನೂ ದೊಡ್ಡ ಸಮಸ್ಯೆಯಾಗಿರಲಿಲ್ಲ. ಆದರೆ ಯಾಕೋ ನನ್ನ ಕೀಟಲೆಯ ಬುದ್ಧಿ ಜಾಗೃತವಾಗಿಬಿಟ್ಟಿತು!
ಸಹಾಯಕ ನಿರ್ದೇಶಕರನ್ನು ಕರೆದು ಹೇಳಿದೆ: ” ನೋಡಿ ಸ್ವಾಮಿ, ನಾನು ಮತ್ತೆ ಡಬ್ಬಿಂಗ್ ಮಾಡಿದರೂ ಅದು ಈಗಿರುವುದಕ್ಕಿಂತ ಖಂಡಿತ ಭಿನ್ನವಾಗಿರುವುದಿಲ್ಲ.ಒಂದು ಕೆಲಸ ಮಾಡಿ—ಈಗ ಇರುವುದನ್ನೇ ನಿರ್ದೇಶಕರಿಗೆ ಮತ್ತೆ ತೋರಿಸಿ ‘ಇದು ಹೊಸದಾಗಿ ಡಬ್ಬಿಂಗ್ ಮಾಡಿರುವುದು’ ಎಂದು ಹೇಳಿ; ಆಗಲೂ ಅವರು ಸರಿಯಿಲ್ಲ ಅಂದರೆ ನಾನು ಮತ್ತೆ ಡಬ್ಬಿಂಗ್ ಮಾಡಿಕೊಡುತ್ತೇನೆ. ಯಾವುದಕ್ಕೂ ನಿರ್ದೇಶಕರಿಗೆ ಈ ದೃಶ್ಯಗಳನ್ನು ತೋರಿಸಿದ ಮೇಲೆ ಅವರ ಪ್ರತಿಕ್ರಿಯೆ ಏನು ಎಂದು ನನಗೆ ಫೋನ್ ಮಾಡಿ ತಿಳಿಸಿ” ಎಂದು ಹೇಳಿ ಹೊರಟುಹೋದೆ. ಒಂದು ತಾಸಿನಲ್ಲೇ ಸಹಾಯಕರ ಫೋನ್ ಬಂದಿತು. ಅವರ ಧ್ವನಿಯಲ್ಲಿ ಉತ್ಸಾಹ—ಆಶ್ಚರ್ಯ ತುಂಬಿ ತುಳುಕುತ್ತಿತ್ತು. “ಸರ್ , ನೀವು ಹೇಳಿದ್ದೇ ಸರಿ ಸರ್! ನೀವು ಹೇಳಿಕೊಟ್ಟ ಹಾಗೇ ಇದು ಹೊಸದಾಗಿ ಡಬ್ಬಿಂಗ್ ಮಾಡಿರೋದು ಅಂತ ಹಳೇದನ್ನೇ ತೋರಿಸಿದೆ. ಖುಷಿಯಾಗಿ ಬಿಟ್ರು ಸರ್! ‘ನೋಡಿದ್ರಾ? ಇದು ಕಣ್ರೀ ಕರೆಕ್ಟ್ ಡಬ್ಬಿಂಗ್ ಅಂದರೆ! ಇದು ಕಣ್ರೀ ಪರ್ ಫೆಕ್ಟ್ ಟ್ರೆಂಡ್ ಅಂದ್ರೆ! ಶಭಾಷ್!’ ಅಂತ ಭಾರೀ ಖುಷಿ ಪಟ್ಟುಬಿಟ್ರು ಸರ್!”
ಇಂಥವರೂ ಇರುತ್ತಾರೆ! ಅಥವಾ ಇಂಥವರೇ ಹೆಚ್ಚಿರುತ್ತಾರೆ!! ತಮ್ಮ ‘ಹಿರಿತನ’ವನ್ನು ಹೇಗೆಲ್ಲಾ ತೋರಿಸಿಕೊಳ್ಳಲು ಯತ್ನಿಸುತ್ತಾರೆಂದರೆ ಹಿರಿತನವೆನ್ನುವುದು ಸಹಜವಾಗಿ ತಮ್ಮ ನಡವಳಿಕೆಯಲ್ಲಿ ಪ್ರಕಾಶಕ್ಕೆ ಬರಬೇಕೆಂ’ಬುದನ್ನೇ ಮರೆತುಬಿಡುತ್ತಾರೆ! ಈ ಪುನರ್ ಡಬ್ಬಿಂಗ್ ನ ಪ್ರಹಸನದಲ್ಲಿ ಸಣ್ಣ ಗೆಲುವೇನೋ ನನಗೆ ದಕ್ಕಿದ್ದು ನಿಜ; ಆದರೆ ಅದರ ಜತೆಜತೆಗೇ ಹಿರಿಯರೆನಿಸಿಕೊಂಡವರ ಸಣ್ಣತನವನ್ನೂ ಅನಗತ್ಯ ಮುಖವಾಡಗಳ ಪ್ರದರ್ಶನವನ್ನೂ ಕಂಡು ಮನಸ್ಸು ಮುದುಡಿಹೋದದ್ದೂ ಅಷ್ಟೇ ನಿಜ.
0 ಪ್ರತಿಕ್ರಿಯೆಗಳು