ಶ್ರೀನಿವಾಸ ಪ್ರಭು ಅಂಕಣ- ಸ್ನೇಹಿತರೇ ನಾನು ಬದುಕಿನಲ್ಲಿ ಸಂಪಾದಿಸಿರುವ ದೊಡ್ಡ ಆಸ್ತಿ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

47

ಉದ್ಭವ ಹಾಗೂ ಹ್ಯಾಮ್ಲೆಟ್ ನಾಟಕಗಳ ಕುರಿತಾಗಿ ಅಶೋಕ ಹಾಗೂ ರಾಜು ಅವರೊಂದಿಗೆ ಆದ ಅನಗತ್ಯ ತಪ್ಪು ತಿಳುವಳಿಕೆಗಳ ಸರಪಳಿ, ಕೊಂಡಿಗೆ ಕೊಂಡಿ ಸೇರಿಕೊಳ್ಳುತ್ತಾ ಬೆಳೆಯುತ್ತಲೇ ಹೋದದ್ದು ಒಂದು ನೋವಿನ ಸಂಗತಿಯೇ ಆಗಿತ್ತು. ಆ ವಿವರಗಳನ್ನು ಮತ್ತೆ ಮುಂದಿನ ಪುಟಗಳಲ್ಲಿ ನಿಮ್ಮ ಮುಂದೆ ಸಾದರ ಪಡಿಸುತ್ತೇನೆ. ಇವೆಲ್ಲಾ ಘಟನೆಗಳು ನಡೆದದ್ದು 1981—82ರ ಆಜುಬಾಜಿನಲ್ಲಿ. ದೆಹಲಿಯಲ್ಲಿದ್ದಾಗಲೇ ಸತ್ಯನಾರಾಯಣ ಭಟ್ಟರ ನೇತೃತ್ವದ ಗೋಕರ್ಣ ಬಳಗ ಎನ್ನುವ ಸ್ಥಳೀಯ ಸಂಸ್ಥೆಗಾಗಿ ‘ಸಿಕ್ಕು’ ನಾಟಕವನ್ನು ಮಾಡಿಸಲು ಶುರು ಮಾಡಿದ್ದೆನಲ್ಲಾ, ಅದನ್ನು ಪೂರ್ಣಗೊಳಿಸಲು 81 ನೇ ಇಸವಿ ಜನವರಿಯಲ್ಲಿ ಮತ್ತೆ ದೆಹಲಿಗೆ ಹೋದೆ.

ಶಾಲೆ ಮುಗಿಸಿ ಬಂದ ಮೇಲೆ ಅದು ನನ್ನ ಮೊದಲ ದೆಹಲಿ ಪ್ರವಾಸ. ಆ ಸಮಯದಲ್ಲೇ ದೆಹಲಿಯಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕೂಡಾ ಆಯೋಜನೆಗೊಂಡಿತ್ತು. ಬೇರೆ ಬೇರೆ ದೇಶಗಳ ಶ್ರೇಷ್ಠ ನಿರ್ದೇಶಕರ ಹಲವಾರು ಅತ್ಯುತ್ತಮ ಚಲನಚಿತ್ರಗಳನ್ನು ನೋಡಲು ಒದಗಿಬಂದ ಸುವರ್ಣಾವಕಾಶ ಕೂಡಾ ಅದಾಗಿತ್ತು. ಹಗಲೆಲ್ಲಾ ಒಂದಷ್ಟು ಚಿತ್ರಗಳನ್ನು ನೋಡುವುದು, ಸಂಜೆ ಸಿಕ್ಕು ನಾಟಕದ ತಾಲೀಮು,ರಾತ್ರಿ ಗೆಳೆಯರೊಂದಿಗೆ ಗೋಷ್ಠಿ…ಗೋಷ್ಠಿಯಲ್ಲೂ ಸಹಾ ರಂಗಭೂಮಿ—ಸಿನೆಮಾಗಳನ್ನು ಕುರಿತ ಸಾರ್ಥಕ ಚರ್ಚೆ—ವಿಚಾರ ವಿನಿಮಯ. ಆಗಿನ್ನೂ ನಾಟಕಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜಯತೀರ್ಥ ಜೋಶಿ, ಗೋಪಾಲಕೃಷ್ಣ ನಾಯರಿ, ಜಂಬೆ ಚಿದಂಬರ ರಾವ್, ಬಿ.ಎಸ್.ಪಾಟೀಲ ಹಾಗೂ ಸುರೇಶ್ ಶೆಟ್ಟಿ ‘ಸಿಕ್ಕು’ ನಾಟಕದಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಅವರ ಜೊತೆಗೆ ಸತ್ಯನಾರಾಯಣ ಭಟ್ಟರು—ಹೋಟಲ್ ಮಾಲೀಕನ ಪಾತ್ರದಲ್ಲಿ.ದೆಹಲಿಯ ಆತ್ಮೀಯ ಮಿತ್ರ ಸುಬ್ಬಣ್ಣ ಹಾಗೂ ಗುರುದತ್ತನ ಅಣ್ಣ ರಾಮಚಂದ್ರರಾವ್ ಅಲಿಯಾಸ್ ರಾಮಣ್ಣ ಕೂಡಾ ಪುಟ್ಟ ಪಾತ್ರಗಳಿಗಾಗಿ ಬಣ್ಣ ಹಚ್ಚಿದ್ದರು. ನಾಟಕದಲ್ಲಿ ನೇಪಥ್ಯದಲ್ಲಿ ನನಗೆ ನೆರವಾಗುವ ಏಕೈಕ ಉದ್ದೇಶದಿಂದ ಗುರುದತ್ತ ಹಾಗೂ ರಿಚರ್ಡ್ ಜಿ.ಲೂಯಿಸ್ ಬೆಂಗಳೂರಿನಿಂದ ದೆಹಲಿಗೆ ಬಂದಿದ್ದರು! ಇಂಥ ಅಪರೂಪದ ಸ್ನೇಹಿತರೇ ಬಹುಶಃ ನಾನು ಬದುಕಿನಲ್ಲಿ ಸಂಪಾದಿಸಿರುವ ಬಲು ದೊಡ್ಡ ಆಸ್ತಿ!

ಒಂದು ಸಂಜೆ ರಿಹರ್ಸಲ್ ಮಾಡುತ್ತಿದ್ದಾಗ ಜಯತೀರ್ಥ ಜೋಶಿ ಹೇಳಿದ: “ಪ್ರಭಣ್ಣಾ, ಕಾರಂತ ಮೇಷ್ಟ್ರು ನಾಳೆ ರಾತ್ರಿ ಅವರ ಮನೇಗೆ ಬರೋದಕ್ಕೆ ಹೇಳಿದಾರೆ” ಎಂದ. ನಾನೂ ಒಮ್ಮೆ ಹೋಗಿ ಮೇಷ್ಟ್ರನ್ನು ಕಂಡುಬರಬೇಕೆಂದು ಯೋಚಿಸುತ್ತಿದ್ದೆ..ತಾನಾಗೇ ಅವಕಾಶ ಒದಗಿ ಬಂದಿದ್ದು ಖುಷಿಯಾಯಿತು. ಮರುದಿನ ರಿಹರ್ಸಲ್ ಮುಗಿದ ಮೇಲೆ ನಾನು ಜಯತೀರ್ಥನನ್ನೂ ಕರೆದುಕೊಂಡು ಮೇಷ್ಟ್ರ ಮನೆಗೆ ಹೋದೆ. ಅಲ್ಲಿ ನೋಡಿದರೆ ಹಿರಿಯ ನಿರ್ದೇಶಕ ಜಿ.ವಿ.ಅಯ್ಯರ್ ಅವರು ತಮ್ಮ ನೀಳ್ಗಡ್ಡವನ್ನು ಸವರಿಕೊಂಡು ಆಸೀನರಾಗಿದ್ದಾರೆ! ಜಿ.ವಿ.ಅಯ್ಯರ್ ಅವರು ಗುಬ್ಬಿ ಕಂಪನಿಯಲ್ಲಿ ಕಾರಂತ ಮೇಷ್ಟ್ರೊಟ್ಟಿಗೆ ಇದ್ದವರು.. ಕನ್ನಡ ಚಲನಚಿತ್ರ ರಂಗದ ಪ್ರಾರಂಭದ ದಿನಗಳಿಂದ ಆ ಕ್ಷೇತ್ರದಲ್ಲಿ ತೊಡಗಿಕೊಂಡು ನಟನಾಗಿ,ಚಿತ್ರಸಾಹಿತಿಯಾಗಿ, ನಿರ್ದೇಶಕನಾಗಿ ತಮ್ಮ ಛಾಪು ಮೂಡಿಸಿದವರು. ಅವರ ‘ಹಂಸಗೀತೆ’ ಚಿತ್ರವನ್ನು ನೋಡಿದ ದಿನದಿಂದ ನಾನು ಅವರ ಪರಮ ಅಭಿಮಾನಿಯೇ ಆಗಿಹೋಗಿದ್ದೆ. ನಿಸರ್ಗವನ್ನೇ ಪಾತ್ರವಾಗಿಸುತ್ತಾ, ಕೆಲವೊಮ್ಮೆ ಪ್ರತಿಮೆಯಾಗಿಸುತ್ತಾ ಚಿತ್ರದ ಅರ್ಥವಂತಿಕೆಯನ್ನು ಶ್ರೀಮಂತಗೊಳಿಸುವ ಅವರ ಅದ್ಭುತ ಕಲೆಗಾರಿಕೆಗೆ, ಸಂಗೀತವನ್ನು ಕೇವಲ ಸುಶ್ರಾವ್ಯತೆಯ ತೊಡುಗೆಗೆ ಸೀಮಿತಗೊಳಿಸದೆ ಒಂದೊಂದು ಸ್ವರವನ್ನೂ ಭಾವಾಭಿವ್ಯಕ್ತಿಯ ಸಮರ್ಥ ವಾಹಕವಾಗಿ ಬಳಸಿಕೊಂಡ ಕೌಶಲ್ಯಕ್ಕೆ ನಾನು ಮಾರು ಹೋಗಿದ್ದೆ.ಅಂತೆಯೇ ಅನಂತನಾಗ್ ಅವರ ಅಪೂರ್ವ ಅಭಿನಯ ಪ್ರತಿಭೆಯನ್ನು ಅನನ್ಯ ರೀತಿಯಲ್ಲಿ ಅನಾವರಣಗೊಳಿಸಿದ ‘ಹಂಸಗೀತೆ’ ಚಿತ್ರ ಇಂದಿಗೂ ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದು. ಅಂಥಾ ಶ್ರೇಷ್ಠ ನಿರ್ದೇಶಕ ಅಯ್ಯರ್ ಅವರು ಮೇಷ್ಟ್ರ ಮನೆಯಲ್ಲಿ ನನಗೆ ಪರಿಚಯವಾದದ್ದು ನನ್ನ ಸುಯೋಗವಲ್ಲದೆ ಮತ್ತೇನು?! ಅಂದಿನ ಗೋಷ್ಠಿಯಲ್ಲಿ ನಾನು,ಜೋಶಿ,ಅಯ್ಯರ್ ಅವರು ಹಾಗೂ ಮೇಷ್ಟ್ರ ಹೊರತು ಮತ್ತಾರೂ ಇರಲಿಲ್ಲ.ಮೇಷ್ಟ್ರು ವಿಶೇಷವಾಗಿ ನನಗೇಕೆ ಬರಲು ಹೇಳಿದ್ದಾರೆನ್ನುವುದೂ ನನ್ನ ಮಟ್ಟಿಗೆ ಒಂದು ನಿಗೂಢ ಪ್ರಶ್ನೆಯೇ ಆಗಿತ್ತು. ಹಾಗೇ ಮಾತಿನ ನಡುವೆ ಅಯ್ಯರ್ ಅವರು ನಮಗೆ ನಯವಾಗಿ ಕೆತ್ತಿದ ಪ್ರಸಂಗವೂ ನಡೆಯಿತು! ನಾನು ಹಾಗೂ ಜೋಶಿ ನಾವು ಅಂದು ನೋಡಿದ ಅಕಿರೋ ಕುರೋಸಾವಾ ಎಂಬ ಜಪಾನೀ ನಿರ್ದೇಶಕನ ‘ದೆರ್ಸು ಉಜಾ಼ಲಾ’ ಅನ್ನುವ ಚಿತ್ರದ ಬಗ್ಗೆ ಮಾತಾಡುತ್ತಿದ್ದೆವು. ಮಾತು ಹಾಗೇ ಬರ್ಗ್ ಮನ್, ಫೆಲಿನಿ ಇತ್ಯಾದಿ ಪಾಶ್ಚಾತ್ಯ ನಿರ್ದೇಶಕರತ್ತ ಹೊರಳಿತು. ‘ನಮಗೂ ಚಿತ್ರಮಾಧ್ಯಮದ ಬಗ್ಗೆ ಒಂದಿಷ್ಟು ತಿಳುವಳಿಕೆಯಿದೆ’ ಎಂದು ಆ ಹಿರಿಯರ ಮುಂದೆ ಪ್ರದರ್ಶಿಸುವ ಒಂದು ಬಾಲಿಶ ಪ್ರಯತ್ನವೂ ನಮ್ಮದಾಗಿದ್ದಿರಬಹುದು! ನಮ್ಮ ಮಾತುಗಳನ್ನು ತದೇಕಚಿತ್ತರಾಗಿ ಆಲಿಸುತ್ತಿದ್ದ ಅಯ್ಯರ್ ಅವರು ಗಡ್ಡ ನೀವಿಕೊಳ್ಳುತ್ತಾ ಮೆಲ್ಲಗೆ ಮಾತು ಆರಂಭಿಸಿದರು: “ಅಲ್ರಯ್ಯಾ..ಮಾತೆತ್ತಿದರೆ ವಿದೇಶೀ ನಿರ್ದೇಶಕರ ಹೆಸರುಗಳನ್ನು ಉರುಳಿಸಿಕೊಂಡು ಅವರ ಗುಣಗಾನ ಮಾಡ್ತೀರಲ್ಲಾ, ನಮ್ಮವರು ಯಾರೂ ನಿಮಗೆ ಕಾಣಿಸೋದೇ ಇಲ್ಲವಾ? ನಮ್ಮಲ್ಲಿ ಯಾರೂ ಒಳ್ಳೇ ನಿರ್ದೇಶಕರೇ ಇಲ್ಲವಾ? ಪಥೇರೋ ಪಾಂಚಾಲಿ ನೋಡಿದೀರಾ? ಹಂಸಗೀತೆ ನೋಡಿದೀರಾ?ಚೋಮ…ವಂಶವೃಕ್ಷ ನೋಡಿದೀರಾ? ಗುರುದತ್ ಸಿನೆಮಾಗಳನ್ನ ನೋಡಿದೀರಾ? ಮೊದಲು ಅವನ್ನ ನೋಡಿ ಅರ್ಥ ಮಾಡಿಕೊಳ್ಳಿ…ಭಾರತೀಯ ಪ್ರಜ್ಞೆ ಯಾವ ರೀತಿ ಕೆಲಸ ಮಾಡುತ್ತೆ ಅನ್ನೋದನ್ನ ಮೊದಲು ತಿಳಕೊಂಡು ಆಮೇಲೆ ನಿಮ್ಮ ವಿದೇಶೀ ನಿರ್ದೇಶಕರಿಗೆ ಮಣೆ ಹಾಕಿ ಕೂರಿಸಿ..ಯಾರು ಬೇಡಾಂತಾರೆ? ಫೆಲಿನಿ ಅಂತೆ..ಕುರೋಸಾವಾ ಅಂತೆ..ನಿಮ್ಮ ತಲೆ !” ಅವರ ಮಾತುಗಳನ್ನು ಕೇಳಿ ಪಿಚ್ಚೆನಿಸಿದರೂ ಸಾವರಿಸಿಕೊಂಡು, “ನೋಡಿದೀವಿ ಸರ್ …ನಮ್ಮ ಸಿನೆಮಾಗಳನ್ನು ಸಾಕಷ್ಟು ನೋಡಿ ಖುಷಿಪಟ್ಟಿದೀವಿ..ಹಂಸಗೀತೆಯಂತೂ ನನ್ನ ಅತ್ಯಂತ ಮೆಚ್ಚಿನ ಚಿತ್ರಗಳಲ್ಲಿ ಒಂದು” ಎಂದೆಲ್ಲಾ ಒಂದಷ್ಟು ಹೇಳಿದ ಮೇಲೇ ಅಯ್ಯರ್ ಅವರು ಶಾಂತರಾದದ್ದು. ಕಾರಂತರ ಮುಖದಲ್ಲಂತೂ ಗಡ್ಡದಂಚಿನಿಂದ ನಗು ಚಿಮ್ಮುತ್ತಿತ್ತು!

ಕೊಂಚ ಸಮಯದ ನಂತರ ಕಾರಂತರು ಅಯ್ಯರ್ ಅವರನ್ನು ಒಳಗಿನ ಕೋಣೆಗೆ ಏನೋ ಮಾತುಕತೆಗಾಗಿ ಕರೆದುಕೊಂಡು ಹೋದರು. ಕಾರಂತರ ಬಲಗೈ ಬಂಟ ಹೊಳ್ಳ ಬಂದು ನಮ್ಮ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಅಂದಿನ ಅಡುಗೆಯ ವಿವರಗಳನ್ನು ನೀಡಿ ಹೋದ.ಬಾತ್ ರೂಂಗೆಂದು ಎದ್ದು ಹೋಗುತ್ತಿದ್ದ ನನಗೆ ಅಸ್ಪಷ್ಟವಾಗಿ ಮೇಷ್ಟ್ರ ಹಾಗೂ ಅಯ್ಯರ್ ಅವರ ಮಾತುಗಳು ಅಸ್ಪಷ್ಟವಾಗಿ ಕೇಳಿದವು:
ಮೇಷ್ಟ್ರು: “ನನಗೇನೋ ತುಂಬಾ ಸರಿಹೋಗ್ತಾನೆ ಅನ್ನಿಸುತ್ತೆ..ಯೋಚನೆ ಮಾಡಿ. “ಅಯ್ಯರ್:” ಮುಖಚಹರೆ ಏನೋ ಅಡ್ಡಿ ಇಲ್ಲ ಕಣಯ್ಯಾ..ನಿನ್ನ ಗರಡಿಯಲ್ಲಿ ಪಳಗಿದವನು ಅಂದಮೇಲೆ ಪ್ರತಿಭಾವಂತ ಅನ್ನೋದರಲ್ಲೂ ಅನುಮಾನವೇನೂ ಇಲ್ಲ..ಆದರೆ ಪೀಚು ಕಣಯ್ಯಾ..ಪೃಷ್ಠದಲ್ಲಿ ಕಾಲು ಕೆ ಜಿ ಚರ್ಬೀನೂ ಇಲ್ಲವಲ್ಲಯ್ಯಾ!”(ಅವರು ಈ ಮಾತು ಹೇಳಿದ್ದು ಅಪ್ಪಟ ದೇಸಿ ಭಾಷೆಯಲ್ಲಿ!) ನನಗಂತೂ ಅವರ ಮಾತುಗಳ ತಲೆಬುಡ ಅರ್ಥವಾಗಲಿಲ್ಲ. ಅಂತೂ ಮತ್ತಷ್ಟು ಚರ್ಚೆ—ಮಾತುಕತೆಗಳ ನಂತರ ಪೊಗದಸ್ತಾಗಿ ಊಟಮಾಡಿ ನಾನು ಹಾಗೂ ಜೋಶಿ ಹಿರಿಯರಿಬ್ಬರಿಗೂ ನಮಸ್ಕರಿಸಿ ಅಲ್ಲಿಂದ ಹೊರಟೆವು.ಇದು ಕನ್ನಡ ಚಿತ್ರರಂಗದ ಒಬ್ಬ ಶ್ರೇಷ್ಠ ನಿರ್ದೇಶಕರಾದ ಜಿ.ವಿ.ಅಯ್ಯರ್ ಅವರೊಂದಿಗಿನ ನನ್ನ ಪ್ರಪ್ರಥಮ ಭೇಟಿ.

ದೆಹಲಿಯಲ್ಲಿ ‘ಸಿಕ್ಕು’ ನಾಟಕದ ಪ್ರದರ್ಶನಗಳಾದದ್ದು ಶ್ರೀರಾಮ ಆರ್ಟ್ ಸೆಂಟರ್ ನ ಬೇಸ್ ಮೆಂಟ್ ಥಿಯೇಟರ್ ನಲ್ಲಿ. ಇದೇ ವೇದಿಕೆಯಲ್ಲೇ ನಮ್ಮ ‘ಎನಿಮಿ ಆಫ್ ದಿ ಪೀಪಲ್’ ನಾಟಕದ ಪ್ರದರ್ಶನಗಳಾಗಿದ್ದು;ನಾನು ಒಬ್ಬ ನಟನಾಗಿ ಗುರುತಿಸಲ್ಪಟ್ಟಿದ್ದು! ‘ಎನಿಮಿ ಆಫ್ ದಿ ಪೀಪಲ್’ ನಾಟಕದ ಮಾದರಿಯಲ್ಲೇ ‘ಸಿಕ್ಕು’ನಾಟಕಕ್ಕೂ ವೃತ್ತಾಕಾರದಲ್ಲಿ ರಂಗಸಜ್ಜಿಕೆಯನ್ನು ವಿನ್ಯಾಸ ಗೊಳಿಸಿ ಪ್ರೇಕ್ಷಕರು ನಡುವೆ ಆಸೀನರಾಗಿ, ದೃಶ್ಯ ನಡೆಯುವತ್ತ ಹೊರಳಿ ನಾಟಕವನ್ನು ವೀಕ್ಷಿಸುವಂತೆ ಯೋಜಿಸಿದ್ದೆ.

ನಾಟಕ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಒಳ್ಳೆಯ ಪ್ರಚಾರವನ್ನು ನೀಡಿದ್ದರಿಂದ ದೆಹಲಿ ಕನ್ನಡಿಗರು ನಾಟಕ ನೋಡಲು ಅತ್ಯುತ್ಸಾಹದಿಂದ ಮುಂದೆ ಬಂದಿದ್ದರು. ಹಾಗಾಗಿ ಮೊದಲು ಆಯೋಜಿಸಿದ್ದ ಎರಡು ಪ್ರದರ್ಶನಗಳ ಜತೆಗೆ ವಿಶೇಷ ಪ್ರದರ್ಶನವೊಂದನ್ನೂ ಏರ್ಪಡಿಸಬೇಕಾಯಿತು! ಕಲಾವಿದರೆಲ್ಲರ ಅತ್ಯುತ್ತಮ ಅಭಿನಯ,ವಸ್ತು ಹಾಗೂ ಪ್ರಸ್ತುತಿಯ ನಾವೀನ್ಯತೆಯಿಂದಾಗಿ ‘ಸಿಕ್ಕು’ ನಾಟಕ ದೆಹಲಿ ಕನ್ನಡಿಗರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.ದೆಹಲಿ ನಾಟಕಶಾಲೆಯ ನಮ್ಮ ಕನ್ನಡ ಹುಡುಗರು ಮುಖ್ಯ ಪಾತ್ರಗಳಲ್ಲಿ ಮಿಂಚಿದರೆ ಸತ್ಯನಾರಾಯಣ ಭಟ್ಟರು ಮಂಗಳೂರಿನ ಹಳ್ಳಿಯ ಹೋಟಲ್ ಸಾವ್ಕಾರನ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದರು. ಧ್ವನಿ ನಿರ್ವಹಣೆಯಲ್ಲಿ ರಿಚರ್ಡ್ ಸಹಕರಿಸಿದರೆ ಗುರುದತ್ತ ರಂಗಸಜ್ಜಿಕೆಯ ನಿರ್ವಹಣೆಯ ಹೊಣೆ ಹೊತ್ತಿದ್ದ. ಒಟ್ಟಾರೆ ಯಶಸ್ವೀ ಪ್ರದರ್ಶನಗಳನ್ನು ನೀಡಿ ದೆಹಲಿ ಪ್ರೇಕ್ಷಕರ ಕೈಲಿ ಬೆನ್ನು ತಟ್ಟಿಸಿಕೊಂಡು ಸಂತೃಪ್ತಿಯ ಭಾವದೊಂದಿಗೆ ನಾನು,ದತ್ತ ಹಾಗೂ ರಿಚಿ ಬೆಂಗಳೂರಿಗೆ ಮರಳಿದೆವು.

ಅಂದೇ ಸಂಜೆ ರವೀಂದ್ರಕಲಾಕ್ಷೇತ್ರಕಕ್ಕೆ ಹೋಗಿದ್ದಾಗ ಪ್ರೇಮಾ ಕಾರಂತರ ಭೇಟಿಯಾಯಿತು. ಕಾರಂತ ಮೇಷ್ಟ್ರ ಧರ್ಮಪತ್ನಿ ಪ್ರೇಮಾ ಹವ್ಯಾಸೀ ರಂಗಭೂಮಿಯಲ್ಲಿ ,ಅದರಲ್ಲೂ ಮಕ್ಕಳ ನಾಟಕಗಳಿಗೆ ಸಂಬಂಧ ಪಟ್ಟಹಾಗೆ ಬಹಳಷ್ಟು ಸಾರ್ಥಕ ಕೆಲಸ ಮಾಡಿದವರು; ‘ಫಣಿಯಮ್ಮ’ದಂತಹ ಅರ್ಥಪೂರ್ಣ ಚಿತ್ರ ನಿರ್ದೇಶಿಸಿ ಅನೇಕ ಪ್ರಶಸ್ತಿಗಳಿಗೆ ಭಾಜನರಾದವರು. ಹ್ಯಾಮ್ಲೆಟ್ ನಾಟಕಕ್ಕೆ ಅವರು ಮಾಡಿದ್ದ ವಸ್ತ್ರ ವಿನ್ಯಾಸ ಕೂಡಾ ಎಲ್ಲರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂದು ಸಂಜೆ ನನ್ನನ್ನು ನೋಡಿದವರೇ ಬಳಿಗೆ ಕರೆದು, ‘congrats’ ಎಂದರು. ನಾನು,ದೆಹಲಿ ನಾಟಕದ ಯಶಸ್ಸಿಗೆ ಅಭಿನಂದನೆ ಹೇಳುತ್ತಿದ್ದಾರೆಂದು ಭಾವಿಸಿ, “thank you madam” ಎಂದೆ. “ನಾನು ಯಾಕೆ ನಿಮಗೆ ಅಭಿನಂದನೆ ಹೇಳಿದೆ ಅಂತ ನಿಮಗೆ ಅರ್ಥವಾಯಿತಾ?” ಎಂದರು ಪ್ರೇಮಾ. “ದೆಹಲಿಯಲ್ಲಿ ಸಿಕ್ಕು ಯಶಸ್ವಿಯಾಗಿ ಪ್ರದರ್ಶಿತವಾದದ್ದಕ್ಕಲ್ಲವೇ?” ಎಂದು ನಾನು ಮರು ಪ್ರಶ್ನಿಸಿದೆ. ಅಲ್ಲವೆಂಬಂತೆ ತಲೆಯಾಡಿಸಿದರು ಪ್ರೇಮಾ! ನಾನು ಏನೊಂದೂ ಅರ್ಥವಾಗದೆ ಯಾವ ಸುಳಿವೂ ಸಿಗದೆ ಗೊಂದಲದಲ್ಲಿ ಅವರ ಮುಖವನ್ನೇ ನೋಡಿದೆ. ಅವರೇ ಮುಂದುವರಿಸಿದರು: “ಜಿ.ವಿ.ಅಯ್ಯರ್ ಅವರು ಸಂಸ್ಕೃತದಲ್ಲಿ ‘ಆದಿ ಶಂಕರ’ ಅನ್ನೊ ಸಿನೆಮಾ ಮಾಡ್ತಿದಾರೆ. ಅದರಲ್ಲಿ ಶಂಕರರ ಪಾತ್ರಕ್ಕೆ ಮೇಷ್ಟ್ರು ನಿಮ್ಮ ಹೆಸರನ್ನ ಸೂಚಿಸಿದಾರೆ. ಅಯ್ಯರ್ ಅವರೂ ಯೋಚನೆ ಮಾಡ್ತಿದಾರಂತೆ” ಎಂದರು ಪ್ರೇಮಾ! ನನಗೆ ಖುಷಿ—ಆಶ್ಚರ್ಯದಿಂದಾಗಿ ಮಾತೇ ಹೊರಡದಂತಾಗಿ ಹೋಯಿತು. ಆ ತಕ್ಷಣವೇ ದೆಹಲಿಯಲ್ಲಿ ಮೇಷ್ಟ್ರ ಮನೆಯಲ್ಲಿ ಅಕಸ್ಮಾತ್ತಾಗಿ ನನ್ನ ಕಿವಿಗೆ ಬಿದ್ದಿದ್ದ ಮೇಷ್ಟ್ರು ಹಾಗೂ ಅಯ್ಯರ್ ಅವರ ಮಾತುಕತೆಯ ತುಣುಕುಗಳು ನೆನಪಿಗೆ ಬಂದವು! “ಮುಖಚಹರೆ ಏನೋ ಅಡ್ಡಿಯಿಲ್ಲ ಕಣಯ್ಯಾ..ನಿನ್ನ ಗರಡಿಯಲ್ಲಿ ಪಳಗಿದವನು ಅಂದಮೇಲೆ ಹುಡುಗ ಪ್ರತಿಭಾವಂತ ಅನ್ನೋದರಲ್ಲೂ ಅನುಮಾನವೇನೂ ಇಲ್ಲ..ಆದರೆ ಹುಡುಗ ಪೀಚು ಕಣಯ್ಯಾ! ಪೃಷ್ಠದಲ್ಲಿ ಕಾಲು ಕೆ ಜಿ ಚರ್ಬೀನೂ ಇಲ್ಲವಲ್ಲಯ್ಯಾ..”

ಅಂದರೆ ಅಯ್ಯರ್ ಅವರು ಆ ಮಾತುಗಳನ್ನು ಹೇಳಿದ್ದು ನನ್ನ ಕುರಿತಾಗಿಯೇ! ಪೀಚು ಹುಡುಗ…ಕಾಲು ಕೆ ಜಿ ಚರ್ಬಿ ಇಲ್ಲದವನು ನಾನೇ! ಏನೇ ಆಗಲಿ, ಆ ಪಾತ್ರಕ್ಕೆ ನಾನೂ ಒಬ್ಬ ಪ್ರಬಲ ಸ್ಪರ್ಧಿಯಾಗಿದ್ದೇನೆ ಎನ್ನುವುದು ಖಾತ್ರಿಯಾಗಿ ಹೋಯಿತು! ಚರ್ಬಿ ಇಲ್ಲದ ಕಾರಣಕ್ಕೆ ಪಾತ್ರ, ಅದೂ ಶಂಕರರಂತಹ ಪಾತ್ರ ಕಳೆದುಕೊಳ್ಳಬಾರದು ಎಂದು ತೀವ್ರವಾಗಿ ಅನ್ನಿಸತೊಡಗಿತು.

ಮೊಟ್ಟಮೊದಲಬಾರಿಗೆ ನನ್ನ ಪೀಚು ಶರೀರ ಪ್ರಕೃತಿಯ ಬಗ್ಗೆ ನನಗೇ ಅನುಕಂಪ ಮೂಡಿ ಚರ್ಬಿ ಹೆಚ್ಚಿಸಿಕೊಳ್ಳುವುದು ಹೇಗೆಂಬ ಜಿಜ್ಞಾಸೆಗೆ ತೊಡಗಿದೆ.ನನ್ನ ಚಿಂತೆ-ಸಂಕಟ ಪರಬ್ರಹ್ಮನಿಗೆ ತಲುಪಿಯೇ ಬಿಟ್ಟಿತೋ ಅನ್ನುವಂತೆ ಮರುದಿನ ಪ್ರಜಾವಾಣಿ ಪತ್ರಿಕೆಯ ಕೊನೆಯ ಪುಟದಲ್ಲಿ ಒಂದು ದೊಡ್ಡ ಜಾಹೀರಾತು: “ದ್ರಾಕ್ಷಾಕಲ್ಪವನ್ನು ಸೇವಿಸಿ..ಅತ್ಯುತ್ತಮ ದೇಹದಾರ್ಢ್ಯವನ್ನು ಪಡೆದುಕೊಳ್ಳಿ!” ಭರ್ಜರಿ ಮೈಕಟ್ಟಿನ ಯುವಕನೊಬ್ಬ ಹುರಿಗಟ್ಟಿದ ಮಾಂಸಖಂಡಗಳನ್ನು ತೋರುತ್ತಾ ತನ್ನ ಬೈಸೆಪ್ಸ್ ಅನ್ನು ಝಳಪಿಸುತ್ತಿರುವ ಚಿತ್ರ ಬೇರೆ! ಓಹೋ! ನನ್ನ ಸಮಸ್ಯೆಯ ಪರಿಹಾರಕ್ಕಾಗಿಯೇ ಈ ಜಾಹೀರಾತು ಇಂದು ಪ್ರಕಟವಾಗಿದೆ, ಅಷ್ಟೇ ಅಲ್ಲ ನನ್ನ ಕಣ್ಣಿಗೆ ಬಿದ್ದು ನನ್ನ ಗಮನ ಸೆಳೆದಿದೆ! ಅಂದೇ ಸಂಜೆ ಸಿಲ್ವರ್ ಜ್ಯೂಬಿಲಿ ಪಾರ್ಕ್ ರಸ್ತೆಯಲ್ಲಿದ್ದ ಆ ಅಂಗಡಿಯನ್ನು ಹುಡುಕಿಕೊಂಡು ಹೋದೆ.

ನಲವತ್ತು ರೂಪಾಯಿಗಳನ್ನು ತೆತ್ತು ದ್ರಾಕ್ಷಾಕಲ್ಪದ ಒಂದು ಬಾಟಲ್ ಖರೀದಿಸಿ ತಂದೆ. ಖರೀದಿ ಮಾಡುತ್ತಿದ್ದಂತೆಯೇ ಏನೋ ಒಂದು ನಮೂನೆಯ ವಿಶೇಷ ಅನುಭವ…ಮಾಂಸಖಂಡಗಳೆಲ್ಲಾ ಬಿಗಿಯಾದ ಹಾಗೆ..ಬೈಸೆಪ್ಸ್ ತೋಳುಗಳಲ್ಲಿ ಮೂಡತೊಡಗಿದ ಹಾಗೆ..! ಪರಮ ನಿಷ್ಠೆಯಿಂದ ಎರಡು ಬಾಟಲ್ ದ್ರಾಕ್ಷಾಕಲ್ಪ ಖಾಲಿ ಮಾಡಿದೆ. ಆದರೆ ಬರೀ ನನ್ನ ಭಾವನೆಯಲ್ಲಷ್ಟೇ ಮಾಂಸಖಂಡಗಳು ಹುರಿಯಾಗಿ ವಾಸ್ತವದಲ್ಲಿ ಮೊದಲಿನಂತೆಯೇ ಸೊರಗಿಯೇ ಇದ್ದವು! ಒಮ್ಮೆ ಏಕಾಂತದಲ್ಲಿ ನಾನು ನನ್ನ ತೋಳು ಮಡಿಸಿ ಬೈಸೆಪ್ಸ್ ಏನಾದರೂ ಕುಡಿಯೊಡೆದಿದೆಯೋ ಎಂದು ನೋಡಿಕೊಳ್ಳುತ್ತಿದ್ದೆ. ಅಚಾನಕ್ಕಾಗಿ ಅಲ್ಲಿಗೆ ಬಂದ ಕುಮಾರಣ್ಣಯ್ಯ ನಾನು ತನ್ಮಯನಾಗಿ ತೊಡಗಿಕೊಂಡಿದ್ದ ಕ್ರಿಯೆಯನ್ನು ಗಮನಿಸುತ್ತಾ ನನ್ನ ಬಳಿ ಬಂದು ನನ್ನ ತೋಳನ್ನು ಸವರುತ್ತಾ,”ಇದು ಬೈಸೆಪ್ಸ್ ಇರಬೇಕಾದ ಜಾಗ” ಎಂದು ನುಡಿದು ನಕ್ಕು ಹೊರಟುಹೋದ! ಅಲ್ಲಿಗೆ ಎರಡು ಬಾಟಲ್ ದ್ರಾಕ್ಷಾಕಲ್ಪ ಸುಖಾಸುಮ್ಮನೆ ಗೊಬ್ಬರವಾಗಿ ಹೋದದ್ದು,ನಲವತ್ತೆರಡಲ ಎಂಬತ್ತು ರೂಪಾಯಿಗಳು ಬೂದಿಯಾಗಿಹೋದದ್ದು ಖಾತ್ರಿಯಾಗಿ ಅಳುವೇ ಬಂದುಬಿಟ್ಟಿತು. ಛೆ! ಎಂಬತ್ತು ರೂಪಾಯಿಗಳು! ಕನಿಷ್ಠ 50 ಸಿನೆಮಾಗಳನ್ನು ನೋಡಬಹುದಿತ್ತು ಅನ್ನುವ ಯೋಚನೆಯೇ ನನ್ನನ್ನು ಇನ್ನಷ್ಟು ವ್ಯಾಕುಲನನ್ನಾಗಿ ಮಾಡಿಬಿಟ್ಟಿತು.

ಇಷ್ಟು ಸಾಲದೆಂಬಂತೆ ಗಾಯದ ಮೇಲೆ ಮೆಣಸಿನ ಪುಡಿಯನ್ನೇ ಸುರಿದಷ್ಟು ಯಾತನಾಮಯ ಸುದ್ದಿಯೊಂದು ಬಂದಪ್ಪಳಿಸಿತು!
ಅಂದು ಸಂಜೆ ಕಲಾಕ್ಷೇತ್ರದಲ್ಲಿ ಭೇಟಿಯಾದ ಪ್ರೇಮಾ ಕಾರಂತರು, “sorry ಪ್ರಭೂ..ಶಂಕರರ ಪಾತ್ರಕ್ಕೆ ಅಯ್ಯರ್ ಅವರು ಸರ್ವದಮನ ಬ್ಯಾನರ್ಜಿ ಅನ್ನೋ ಬೆಂಗಾಲಿ ಹುಡುಗನ್ನ ಆಯ್ಕೆ ಮಾಡಿದಾರಂತೆ..ಅವನೂ film institute ನಲ್ಲಿ acting course ಮಾಡಿದಾನಂತೆ” ಎಂದರು. ಅವರ ಮಾತುಗಳನ್ನು ಕೇಳುತ್ತಿದ್ದಂತೆ ನಿಗಿನಿಗಿ ಉರಿಯುತ್ತಿರುವ ಕೆಂಡವನ್ನು ಕಿವಿಗೆ ಸುರಿದಂತಾಯಿತು! ಛೇ! ಎಂಥಾ ಅನ್ಯಾಯ! ಕುಲಗುರುಗಳಾದ ಶಂಕರ ಭಗವತ್ಪಾದರು ಕೈಹಿಡಿಯಲೇ ಇಲ್ಲ! ಯಾರೋ ಬ್ಯಾನರ್ಜಿ ಅಂತೆ! ವಾನರ್ ಜೀ!! ಮಾಡುವುದಾದರೂ ಎನಿದೆ!? ಕೊನೆಯ ಪಕ್ಷ ನನ್ನ ಹೆಸರನ್ನು ಸೂಚಿಸಿದ್ದಾರಲ್ಲಾ,ಅದೇ ದೊಡ್ಡ ವಿಷಯ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಅಷ್ಟರಲ್ಲೇ ಮತ್ತಷ್ಟು ಸಮಾಧಾನ ನೀಡುವಂತಹ ಮತ್ತೊಂದು ಸುದ್ದಿ ಬಂದು ಇನ್ನಷ್ಟು ನಿರಾಳವಾಯಿತು: ಸಮುದಾಯ ರಂಗತಂಡ ಕುಂಬಳಗೋಡಿನಲ್ಲಿ ನಡೆಸಲು ಯೋಜಿಸಿದ್ದ ರಂಗ ತರಬೇತಿ ಶಿಬಿರದ ನಿರ್ದೇಶಕನಾಗಿ ಜವಾಬ್ದಾರಿ ಹೊತ್ತುಕೊಳ್ಳಲು ಆಹ್ವಾನ ಬಂದಿತ್ತು!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

April 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: