ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ – ಯಾರಿಗೂ ಅಂಥ ಉತ್ತರ ಕೊಡುವ ಪ್ರಸಂಗವೇನೂ ಬರಲಿಲ್ಲ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

70

1984— ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದ ಕುಮಾರಣ್ಣಯ್ಯ ಬಿಳಿಛೋಡಿಗೆ ವರ್ಗವಾಗಿ ಹೋಗಿದ್ದ ಸಮಯ.ಆ ವೇಳೆಗಾಗಲೇ ಅಕ್ಕಂದಿರು ಹಾಗೂ ಭಾವಂದಿರು ಜಯನಗರದಲ್ಲೇ ಮತ್ತೊಂದು ಮನೆಗೆ ಸ್ಥಳಾಂತರಿಸಿದ್ದರು. ನಾನು ಅಣ್ಣ ಅಮ್ಮಂದಿರೊಂದಿಗೆ ಭೈರಸಂದ್ರದ, ಒಂದು ಕೋಣೆಯ ಒಂದು ಬಾಡಿಗೆ ಮನೆಗೆ ಹೋಗಿ ನೆಲೆಸಿದ್ದೆ. ನಿಧಾನವಾಗಿ ಕಂತುಗಳಲ್ಲಿ ಮಿಕ್ಸರ್—ಗ್ರೈಂಡರ್, ಕಪ್ಪು ಬಿಳುಪು ಟಿ ವಿ ಮುಂತಾದ ವಸ್ತುಗಳನ್ನು ಖರೀದಿಸುತ್ತಾ ಮನೆಯನ್ನು ಸಜ್ಜುಗೊಳಿಸುತ್ತಿದ್ದೆ. ಈ ಸಮಯದಲ್ಲೇ ನನಗೆ ಜಿಗಣೆಯಂತೆ ಅಂಟಿಕೊಂಡ ಚಟ ಇಸ್ಪೀಟ್! ಒಂದು ರೀತಿಯಲ್ಲಿ ಅಡುಗೆ—ಸಂಗೀತ—ವೇದ ವಿದ್ವತ್ತುಗಳಂತಹ ಧನಾತ್ಮಕ ಅಸ್ಮಿತೆಗಳ ಜತೆಜತೆಗೇ ನಮ್ಮ ಕುಲಬಾಂಧವರಿಗೆ ಈ ಆಟದ ನಂಟೂ ಅಂಟಿಕೊಂಡಿದ್ದು ನನ್ನನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡೇ ಬಿಟ್ಟಿತು! ಸೆಳೆತವೆಂದರೆ ಅಂತಿಂಥ ಸೆಳೆತವಲ್ಲ..ಹೊತ್ತುಗೊತ್ತಿನ ಪರಿವೆಯಿಲ್ಲದೇ ಊಟ ತಿಂಡಿ ನಿದ್ದೆಗಳತ್ತಲೂ ಧ್ಯಾನವಿಲ್ಲದೆ ಬಿಡುವು ಸಿಕ್ಕಾಗಲೆಲ್ಲಾ ಆಟದಲ್ಲಿ ಮುಳುಗಿಬಿಡುತ್ತಿದ್ದೆ.ವಾರಾಂತ್ಯಗಳಲ್ಲಿ—ರಜೆಯ ದಿನಗಳಲ್ಲಿ ಹತ್ತಾರು ಸ್ನೇಹಿತರು ಮೆಜೆಸ್ಟಿಕ್ ನ ರಾಮಕೃಷ್ಣ ಲಾಡ್ಜ್ ನಲ್ಲಿ ಸೇರಿಬಿಟ್ಟರೆ ರಜೆಗಳು ಮುಗಿಯುವವರೆಗೂ ಎಲೆ ಎಣಿಸುವ—ಜೋಡಿಸುವ ಕೆಲಸ ಬಿಡುವಿಲ್ಲದೇ ಸಾಗುತ್ತಿತ್ತು.

ನಮ್ಮ ಹಿರಿಯರೊಬ್ಬರ ಮಾತಿನಲ್ಲಿ ಹೇಳುವುದಾದರೆ ಇದು ‘ತುಂಡು ಪುಸ್ತಕದ ಪಾರಾಯಣ’! ಮನೆಯಲ್ಲಿ ಅಣ್ಣಯ್ಯ ಹಾಗೂ ಭಾವಂದಿರೊಂದಿಗೆ, ಟಿ ಬ್ಲಾಕ್ ನ ಗೆಳೆಯರೊಂದಿಗೆ ಮೊದಲೆಲ್ಲಾ ಬ್ರಿಡ್ಜ್ —ಜಾಕಿ ಆಟ ಮೊದಲಾದ ಆಟಗಳನ್ನು ಆಡುತ್ತಿದ್ದರೂ ಅವಕ್ಕೆ ಎಂದೂ ಜೂಜಿನ ಲೇಪನವಾಗಿರಲಿಲ್ಲ. ಒಮ್ಮೆ ಈ ಜೂಜಾಟದ ಕಪಿಮುಷ್ಠಿಗೆ ಸಿಕ್ಕಿಬಿಟ್ಟರೆ ಬಿಡಿಸಿಕೊಳ್ಳುವುದು ಕಡು ಕಷ್ಟದ ಮಾತು ಎನ್ನುವುದನ್ನು ನನಗಿಂತ ಗಟ್ಟಿಯಾಗಿ ಯಾರು ತಾನೇ ಹೇಳಲು ಸಾಧ್ಯ!? ಆಗಿನ ದಿನಗಳಲ್ಲಂತೂ ಬಹು ಬೇಗ ನನ್ನ ಮನಸ್ಸು ಚಟಗಳಿಗೆ ಪಕ್ಕಾಗಿಬಿಡುತ್ತಿದ್ದುದು ನನಗೇ ಅರಿವಾಗಿದ್ದರೂ ಅದರಿಂದ ಸುಲಭವಾಗಿ ಹೊರಬರಲಾಗದೇ ಒದ್ದಾಡುತ್ತಿದ್ದೆ. ಯಾವುದಾದರೊಂದು ಬಲವತ್ತರವಾದ ಕಾರಣವೋ ಪ್ರೇರಣೆಯೋ ಒದಗುವವರೆಗೆ ಚಟದ ಬಲೆಯಲ್ಲಿ ನರಳುತ್ತಿದ್ದೆ..ನಾಟಕದಲ್ಲಿ ಪಾತ್ರ ಮಾಡಲು ತೊಂದರೆಯಾಗುತ್ತದೆ ಅನ್ನುವ ಅರಿವು—ಎಚ್ಚರ ಮೂಡುವ ತನಕ ಸಿಗರೇಟನ್ನು ಬಿಡಲಾಗಿರಲಿಲ್ಲವಲ್ಲಾ..ಹಾಗೆ!

ಅಣ್ಣ ಬರಬರುತ್ತಾ ಹೆಚ್ಚು ಅಂತರ್ಮುಖರಾಗಿರುತ್ತಿದ್ದರು. ಬೆಳಗಿನ ಜಾವ ನಾಲ್ಕರ ಸುಮಾರಿಗೇ ಏಳುತ್ತಿದ್ದ ಅವರು ದಿನದ ಹೆಚ್ಚಿನ ಸಮಯ ಅಧ್ಯಯನ—ಬರವಣಿಗೆಗಳಲ್ಲೇ ಕಳೆಯುತ್ತಿದ್ದರು.ಮಕ್ಕಳೆಲ್ಲರೂ ಬದುಕಿನಲ್ಲಿ ಒಂದು ನೆಲೆ ಕಂಡುಕೊಂಡಂತಾಗಿರುವುದು—ವಿಶೇಷವಾಗಿ ನಾನು— ಅವರಿಗೆ ಅಪಾರ ನೆಮ್ಮದಿಯನ್ನು ತಂದಿತ್ತು. ನಾನು ಮೊದಲಿನಿಂದಲೂ ಹೊತ್ತುಹೊತ್ತಿಗೆ ಮನೆಗೆ ಬಂದವನೇ ಅಲ್ಲವಾದ್ದರಿಂದ ತಡರಾತ್ರಿಯಲ್ಲಿ ಬರುವ ನನ್ನ ಅಭ್ಯಾಸವಾಗಲೀ ಅಥವಾ ಮನೆಯಿಂದ ಹೊರಗೇ ಉಳಿದುಬಿಡುವುದಾಗಲೀ ಅಣ್ಣ—ಅಮ್ಮನಿಗೆ ರೂಢಿಯೇ ಆಗಿಹೋಗಿತ್ತು.

ಆದರೆ ಅಣ್ಣ ಇಸ್ಪೀಟ್ ಆಟ ಎಂದರೆ ಕೆಂಡವಾಗಿಬಿಡುತ್ತಿದ್ದರು! ಮದುವೆ—ಮುಂಜಿ ಸಮಾರಂಭಗಳಲ್ಲಿ ಗುಂಪು ಗುಂಪುಗಳಲ್ಲಿ ಇಸ್ಪೀಟ್ ಆಡುವವರನ್ನು ಕಂಡು ‘ಸಮಯದ ಬೆಲೆಯೇ ಗತ್ತಿಲ್ಲದ ಮೂರ್ಖರು’ ಎಂದು ಸಿಡಿಮಿಡಿಗೊಳ್ಳುತ್ತಿದ್ದರು. ಹಾಗಾಗಿ ನಾನು ನನ್ನ ಆಟದ ತೊಡಗುವಿಕೆಯ ನ್ನು ಬಹಳ ಜತನದಿಂದ ಗೌಪ್ಯವಾಗಿಯೇ ಇಟ್ಟಿದ್ದೆ! ಆಫೀಸ್ ಕೆಲಸದ ‘ಗುರಾಣಿ’ಯನ್ನೂ ಬಹಳಷ್ಟು ಸಲ ಇಸ್ಪೀಟ್ ಆಟಕ್ಕೆಂದು ಹೋದ ಸಂದರ್ಭದಲ್ಲಿ ಯಶಸ್ವಿಯಾಗಿ ಬಳಸಿದ್ದುಂಟು.

ಇದೇ ಸಂದರ್ಭದಲ್ಲಿಯೇ ಶಂಕರ್ ನಾಗ್ ರಿಂದ ಅವರ ‘accident’ ಚಿತ್ರದಲ್ಲಿ ಅಭಿನಯಿಸಲು ಕರೆ ಬಂತು! ಈ ಚಿತ್ರದ ಕಥೆ—ಚಿತ್ರಕಥೆಯನ್ನು ಸಿದ್ಧಪಡಿಸಿದ್ದವನು ಆತ್ಮೀಯ ಗೆಳೆಯ ವಸಂತ ಮೊಕಾಶಿ ಪುಣೇಕರ್—ಶಂಕರ್ ಮೊಕಾಶಿಯವರ ಸುಪುತ್ರ. ಒಂದಷ್ಟು ತಿಂಗಳುಗಳ ಹಿಂದೆ ನಾನು ಬಿಜಾಪುರದಲ್ಲಿ ಶ್ರೀನಿವಾಸ ತಾವರಗೇರಿಯವರ ತಂಡಕ್ಕೆ ನಾಟಕ ಶಿಬಿರವನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ವಸಂತನೂ ಬಿಜಾಪುರಕ್ಕೆ ಬಂದು ಶೀನಣ್ಣನ ಮನೆಯಲ್ಲೇ ತಂಗಿದ್ದ. ಆಗಲೇ ತಾನು ಸಿದ್ಧ ಪಡಿಸಿಟ್ಟುಕೊಂಡಿದ್ದ ‘accident’ ಚಿತ್ರಕಥೆಯನ್ನು ಸವಿಸ್ತಾರವಾಗಿ ನನಗೆ ವಿವರಿಸಿ ಹೇಳಿದ್ದ. ಡ್ರಗ್ಸ್ ವ್ಯಸನಿಗಳಿಬ್ಬರು ನಶೆಯಲ್ಲಿ ಫುಟ್ ಪಾತ್ ಮೇಲೆ ಮಲಗಿದ್ದ ಹಲ ಕೂಲಿ ಕಾರ್ಮಿಕರ ಮೇಲೆ ಕಾರ್ ಹತ್ತಿಸಿ ಹಲವಾರು ಜನರ ದಾರುಣ ಸಾವಿಗೆ ಕಾರಣರಾಗುತ್ತಾರೆ;ಈ ಘಟನೆಯ ನಂತರ ನಡೆಯುವ ರಾಜಕೀಯ ದೊಂಬರಾಟ—ಕೇಸ್ ಅನ್ನು ಮುಚ್ಚಿಹಾಕಲು ಯತ್ನಿಸುವ ಪ್ರಭಾವಿಗಳ ಕಸರತ್ತುಗಳು—ಅಪರಾಧಿಗಳನ್ನು ಬಯಲಿಗೆಳೆಯಲು ಪ್ರಾಮಾಣಿಕ ಇನ್ಸ್ ಪೆಕ್ಟರ್ ಹಾಗೂ ದಿಟ್ಟ ಪತ್ರಕರ್ತರು ನಡೆಸುವ ವ್ಯರ್ಥ ಪ್ರಯತ್ನಗಳು.. ಇವೆಲ್ಲವನ್ನೂ ಅತ್ಯಂತ ಸಮರ್ಥವಾಗಿ, ಪರಿಣಾಮಕಾರಿಯಾಗಿ, ಮಾರ್ಮಿಕವಾಗಿ ತನ್ನ ಚಿತ್ರಕಥೆಯಲ್ಲಿ ಹಿಡಿದಿಟ್ಟಿದ್ದ ವಸಂತ ಮೊಕಾಶಿ.

ಇಂಥದೊಂದು ಯಾವುದೇ ಸಿದ್ಧ ಸೂತ್ರಗಳಿಲ್ಲದ, ಅರ್ಥಪೂರ್ಣ—ಸಂವೇದನಾಶೀಲ ಚಿತ್ರವೊಂದರ ನಿರ್ಮಾಣಕ್ಕೆ ಅಷ್ಟು ಸುಲಭಕ್ಕೆ ನಿರ್ಮಾಪಕರು ಮುಂದೆ ಬರುವುದಾದರೂ ಉಂಟೇ!?ಮೆಲ್ಲಗೆ ನಿರಾಶೆ ಕವಿದುಕೊಳ್ಳುತ್ತಿದ್ದ ಸಮಯಕ್ಕೇ ಬಂದು ವಸಂತನ ಬೆಂಬಲಕ್ಕೆ ನಿಂತವರು ಶಂಕರ್ ನಾಗ್.ಯಾವಾಗಲೂ ‘ಹೊಸತನ’ಕ್ಕಾಗಿ, ಸದಭಿರುಚಿಯ ಅರ್ಥಪೂರ್ಣ ಚಿತ್ರ ನಿರ್ಮಾಣಕ್ಕೆ ತುಡಿಯುತ್ತಿದ್ದ ಶಂಕರ್ ‘accident’ ಚಿತ್ರಕಥೆ ದೊರೆಯುತ್ತಲೇ ಚಿತ್ರನಿರ್ಮಾಣವನ್ನು ಆರಂಭಿಸಿಯೇ ಬಿಟ್ಟರು! ದೆಹಲಿಯ ನಾಟಕ ಶಾಲೆಯಲ್ಲಿಯೇ ಕಲಿತು ಇಂಗ್ಲೀಷ್ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಅಶೋಕ್ ಮಂದಣ್ಣ ಹಾಗೂ ನಾನು ಡ್ರಗ್ ವ್ಯಸನಿಗಳ ಎರಡು ಪ್ರಮುಖ ಪಾತ್ರಗಳಿಗೆ ಆಯ್ಕೆಯಾದೆವು. ಅರುಂಧತಿ ನಾಗ್ ಅವರದು ನನ್ನ ತಾಯಿಯ ಪಾತ್ರವಾದರೆ ಅನಂತನಾಗ್ ಅವರದು ಅಶೋಕ್ ಮಂದಣ್ಣನ ಪ್ರಭಾವಶಾಲೀ ರಾಜಕಾರಣಿ ತಂದೆಯ ಪಾತ್ರ.ರಮೇಶ್ ಭಟ್ಟ ಪ್ರಾಮಾಣಿಕ ಇನ್ಸ್ ಪೆಕ್ಟರ್ ; ಶಂಕರ್ ನಾಗ್ ದಿಟ್ಟ ಪತ್ರಕರ್ತ.

ಜೊತೆಗೆ ಮೇಕಪ್ ನಾಣಿಯವರು,ನಾಗಾಭರಣ,ಬಿ.ವಿ.ರಾಜಾರಾಂ,ಶ್ರೀನಿವಾಸ ತಾವರಗೇರಿ, ಸುಮನ್ ರಾವ್ ಮೊದಲಾಗಿ ಅನೇಕ ರಂಗಭೂಮಿ ಕಲಾವಿದರು ಪೋಷಕ ಪಾತ್ರಗಳನ್ನು ನಿರ್ವಹಿಸುವವರಿದ್ದರು. ಛಾಯಾಗ್ರಾಹಕರಾಗಿ ಕೆಲಸ ಮಾಡಲು ಬಂಗಾಳದಿಂದ ದೇವಧರ್ ಅವರು ಆಗಮಿಸಿದ್ದರು. ಪ್ರಸಾಧನದ ಹೊಣೆ ಹೊತ್ತಿದ್ದವನು ನಮ್ಮ ಬೆನಕ ತಂಡದ ಎನ್ ಕೆ ರಾಮಕೃಷ್ಣ. ಚಿತ್ರದಲ್ಲಿ ಹಾಡುಗಳಿಲ್ಲದಿದ್ದರೂ ಹಿನ್ನೆಲೆ ಸಂಗೀತ ನೀಡಲು ಶಂಕರ್ ಇಳಯರಾಜಾ ಅವರನ್ನು ಆಹ್ವಾನಿಸಿದ್ದರು.

ವಾಸ್ತವವಾಗಿ ನಾನು ದೂರದರ್ಶನ ಕೇಂದ್ರದ ನೌಕರನಾಗಿದ್ದುದರಿಂದ ಹೊರಗಡೆಯ ಯಾವುದೇ ಇಂತಹ ಸಂಭಾವನೆಯನ್ನು ಸ್ವೀಕರಿಸಿ ಮಾಡುವಂತಹ ಕೆಲಸವನ್ನು ಒಪ್ಪಿಕೊಳ್ಳುವಂತೆ ಇರಲಿಲ್ಲ.ಕಂಠದಾನ ಮಾಡುವ ಕೆಲಸವನ್ನೇನೋ ಯಾರ ಗಮನಕ್ಕೂ ಬರದಂತೆ ಮಾಡಬಹುದಾಗಿದ್ದರೂ ಅಭಿನಯ ಹಾಗಲ್ಲವಲ್ಲಾ! ಕೊನೆಗೆ ಗೆಳೆಯ ಮೋಹನ ರಾಮ್ ನ ಸಲಹೆಯ ಮೇರೆಗೆ,”ನಾನು ಯಾವುದೇ ಸಂಭಾವನೆಯನ್ನು ಸ್ವೀಕರಿಸದೆ ಒಂದು ಕಲಾತ್ಮಕ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ; ದಯವಿಟ್ಟು ಅನುಮತಿ ನೀಡಿ ಸಹಕರಿಸಿ” ಎಂದು ದೆಹಲಿಯ ಮೇಲಧಿಕಾರಿಗಳಿಗೆ ಒಂದು ಪತ್ರವನ್ನು ಬರೆದು ಹಾಕಿ ಚಿತ್ರೀಕರಣದಲ್ಲಿ ಭಾಗವಹಿಸತೊಡಗಿದೆ! “ಯಾವುದೇ ಚಿತ್ರೀಕರಣದಲ್ಲಿ ಭಾಗವಹಿಸಲು ನಿಮಗೆ ಅನುಮತಿ ನೀಡಲಾಗದು” ಎಂಬ ಒಕ್ಕಣೆಯ ದೆಹಲಿ ದೊರೆಗಳ ಮಾರುತ್ತರ ಬರುವ ವೇಳೆಗೆ ನನ್ನ ಭಾಗದ ಚಿತ್ರೀಕರಣ ಮುಗಿದೇಹೋಗಿತ್ತು! ಇರಲಿ.

ಕೇಂದ್ರದ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ, ಸಾಧ್ಯವಾದಷ್ಟೂ ನನ್ನ ಅನುಕೂಲಕ್ಕೆ ತಕ್ಕಂತೆ ನನ್ನ ಭಾಗದ ಚಿತ್ರೀಕರಣವನ್ನು ನಿಗದಿ ಮಾಡಿಕೊಂಡು ಸಹಕರಿಸಿದರು ನಿರ್ದೇಶಕ ಶಂಕರ್. ಹತ್ತು—ಹನ್ನೆರಡು ದಿನಗಳಲ್ಲಿ ನನ್ನ ಭಾಗದ ಚಿತ್ರೀಕರಣ ಮುಗಿದರೂ ನಾನು ಬಿಡುವಾದಾಗಲೆಲ್ಲಾ ಚಿತ್ರೀಕರಣ ನೋಡಲು ಹೋಗುತ್ತಿದ್ದೆ. ನಿಜಕ್ಕೂ ಅದೊಂದು ಅಪೂರ್ವ ಅನುಭವ. ಶಂಕರ್ ಅವರ ಸೃಜನಶೀಲತೆ— ಉತ್ಸಾಹ— ತನ್ಮಯತೆ— ಸ್ನೇಹಪರತೆಗಳನ್ನು ಕಂಡು ನಾನು ಮೂಕವಿಸ್ಮಿತನಾಗಿ ಹೋಗಿದ್ದೆ. ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಶಂಕರ್ ಅವರದು. ಒಂದು ಸ್ವಾರಸ್ಯಕರ ಪ್ರಸಂಗ ನೆನಪಾಗುತ್ತಿದೆ:

ಆಗಲೇ ಹೇಳಿದಂತೆ ನಾನು ನಿರ್ವಹಿಸುತ್ತಿದ್ದ ಪಾತ್ರದ ಹೆಸರು ರಾಹುಲ್; ಆತ ಒಬ್ಬ ಡ್ರಗ್ ವ್ಯಸನಿ. ವಸಂತ ಮೊಕಾಶಿಯ ಚಿತ್ರಕಥೆಯಲ್ಲಿ ಸಾಕಷ್ಟು ಪ್ರಾಮುಖ್ಯತೆ ಗಳಿಸಿಕೊಂಡಿದ್ದ ಪಾತ್ರವಾದ ರಾಹುಲ್ ನಲ್ಲಿ ಇದ್ದ ಒಂದೇ ಧನಾತ್ಮಕ ಅಂಶವೆಂದರೆ, ವಸಂತನೇ ಹೇಳಿದ್ದಂತೆ “ಆತ ಬಹಳ ಒಳ್ಳೆಯ ಡಾನ್ಸರ್”! ‘ಒಂದು ದೃಶ್ಯದಲ್ಲಿ ಎಲ್ಲ ಗೆಳೆಯರ ಸಮ್ಮುಖದಲ್ಲಿ ರಾಹುಲ್ ಒಬ್ಬನೇ ಒಂದು ಹಾಡಿಗೆ ಅಮೋಘವಾಗಿ ನರ್ತಿಸಿ ಎಲ್ಲರ ಮೆಚ್ಚುಗೆ ಗಳಿಸುತ್ತಾನೆ’ ಎಂದು ಅತ್ಯಂತ ಸ್ಪಷ್ಟವಾಗಿ ವಸಂತ ಚಿತ್ರಕಥೆಯಲ್ಲಿ ಬರೆದುಬಿಟ್ಟಿದ್ದ! ಚಿತ್ರಿಕರಣಕ್ಕೆ ಮುನ್ನ ಶಂಕರ್ ನನ್ನನ್ನು ಕೇಳಿದರು: “ಶ್ರೀನಿವಾಸ್, ಡಾನ್ಸ್ ಮಾಡ್ತೀಯಾ ತಾನೇ?”. ನಾನು, ಅದು ಯಾವ ಮಹಾ ದೊಡ್ಡ ವಿಷಯ ಎನ್ನುವಂತೆ ಒಮ್ಮೆ ಕತ್ತು ಕುಣಿಸಿ ‘ಓಹೋ’ ಎಂದುಬಿಟ್ಟಿದ್ದೆ! ವಾಸ್ತವವಾಗಿ ಡಾನ್ಸ್ ಗೂ ನನಗೂ ನೂರಾರು ಮೈಲಿಗಳ ಅಂತರ! ‘ನನಗಿರುವುದು ಎರಡು ಎಡ ಪಾದಗಳು’ ಎಂದು ನಾನೇ ಹಿಂದೆ ಒಂದೆರಡು ಸಂದರ್ಭಗಳಲ್ಲಿ ನನ್ನನ್ನೇ ಗೇಲಿ ಮಾಡಿಕೊಂಡು ಹೇಳಿದ್ದುಂಟು. ಡಾನ್ಸ್ ವಿಷಯದಲ್ಲಿಯೂ ನನ್ನನ್ನು ಮುಖ್ಯವಾಗಿ ಬಾಧಿಸುತ್ತಿದ್ದುದು ಮತ್ತದೇ ಅಳುಕು..ಅದೇ ನಾಚಿಕೆ—ಸಂಕೋಚಗಳು. ಆದರೆ ಹಾಗೆಂದು ಶಂಕರ್ ಅವರ ಮುಂದೆ ಹೇಳಲುಂಟೇ!ಮತ್ತೆ ಅದೇ ಕಾರಣವಾಗಿ ಅಂಥದೊಂದು ಅದ್ಭುತ ಪಾತ್ರವನ್ನು ಕಳೆದುಕೊಳ್ಳಬೇಕಾಗಿ ಬಂದುಬಿಟ್ಟರೆ! ಅದಾಗಲೇ ನನ್ನ ಗೆಳೆಯರ ಬಳಗದಲ್ಲೇ ಕೆಲವರು ಆ ಪಾತ್ರದ ಮೇಲೆ ಕಣ್ಣಿಟ್ಟಿರುವ ವಿಷಯ ನನಗೆ ತಿಳಿದುಬಂದಿತ್ತು! ಇಲ್ಲ..ಸಾಧ್ಯವೇ ಇಲ್ಲ! ಯಾವುದೇ ಕಾರಣಕ್ಕೂ ಈ ಪಾತ್ರವನ್ನು ಕಳೆದುಕೊಳ್ಳಬಾರದು! ಚಿತ್ರೀಕರಣ ಆರಂಭವಾಧ ಮೇಲೆ ಎರಡು ಮೂರು ದಿನ ಬಿಟ್ಟು,ಅಂದರೆ ಮರುಚಿತ್ರೀಕರಣದ ಬಗ್ಗೆ ಯೋಚಿಸಲಾರದಷ್ಟು ಸಮಯ ಕಳೆದ ಮೇಲೆ ಶಂಕರ್ ಅವರಿಗೆ ವಿಷಯ ತಿಳಿಸಿದರಾಯಿತು; ಅದೊಂದು ಡಾನ್ಸ್ ದೃಶ್ಯವನ್ನು ಬೇರೆ ರೀತಿಯಾಗಿ ಯೋಜಿಸಿ ಚಿತ್ರಿಸುವುದು ಶಂಕರ್ ಅವರ ಅಗಾಧ ಪ್ರತಿಭೆಗೆ ಸಾಧ್ಯವಾಗದ್ದೇ? ಹೀಗೆಲ್ಲಾ ನನ್ನ ಆಲೋಚನಾ ಲಹರಿ ಸಾಗಿತ್ತು.

ಅಂದುಕೊಂಡಂತೆಯೇ ಮೂರು ನಾಲ್ಕು ದಿನಗಳ ಚಿತ್ರೀಕರಣ ಮುಗಿದ ನಂತರ ಒಂದು ಸಂಜೆ ನಿಧಾನವಾಗಿ ಶಂಕರ್ ಅವರ ಬಳಿ ಕುಳಿತು ಮಾತು ಶುರು ಮಾಡಿದೆ: “ಶಂಕರ್, ಒಂದು ಮುಖ್ಯ ವಿಷಯ ನಿಮಗೆ ಹೇಳಬೇಕು…ಹೇಳೋದಕ್ಕೆ ಮೊದಲೇ ‘sorry’ಹೇಳಿಬಿಟ್ಟು ಶುರು ಮಾಡ್ತೀನಿ..ದಯವಿಟ್ಟು ಬೇಜಾರು ಮಾಡಿಕೋಬೇಡಿ…ಸಿಟ್ಟೂ ಮಾಡಿಕೋಬೇಡಿ..ನನಗೆ..ನನಗೆ ಒಂಚೂರೂ ಡಾನ್ಸ್ ಮಾಡೋಕೆ ಬರೋಲ್ಲ”.

ಒಂದು ಕ್ಷಣ ಶಂಕರ್ ಗರ ಬಡಿದವರಂತೆ ನನ್ನನ್ನೇ ನೋಡುತ್ತಾ ಕುಳಿತುಬಿಟ್ಟರು.ನಂತರ ಸಾವರಿಸಿಕೊಂಡು ತುಸು ದೂರದಲ್ಲಿ ಕುಳಿತಿದ್ದ ಅರುಂಧತಿ ಅವರಿಗೆ ಕೂಗಿ ಹೇಳಿದರು: “ಅರೂ,look at this fellow…now he says he can’t dance!” ಅರು ಅವರಿಗೂ ಆ ಮಾತು ಕೇಳಿ ಆಶ್ಚರ್ಯವಾಯಿತು.ನಾನು ಅಪರಾಧಿ ಪ್ರಜ್ಞೆಯ ಬಾಧೆಯಿಂದ ನರಳುತ್ತಾ ತಲೆ ತಗ್ಗಿಸಿ ಕುಳಿತುಬಿಟ್ಟಿದ್ದೆ. ಶಂಕರ್ ಅವರ ಮುಖ ನೋಡಲೂ ನನಗೆ ಧೈರ್ಯವಾಗಿರಲಿಲ್ಲ. ತಪ್ಪೊಪ್ಪಿಗೆಯ ಇದೊಂದು ಕ್ಷಣ ಕಳೆದುಹೋದರೆ ಸಾಕು, ಎಲ್ಲಾ ಸರಿಹೋಗುತ್ತದೆ.. ಶಂಕರ್ ಏನಾದರೂ ಒಂದು ದಾರಿ ಹುಡುಕುತ್ತಾರೆ ಎಂದು ನಾನು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿಕೊಳ್ಳುತ್ತಿದ್ದೆ. ನನ್ನ ನಿರೀಕ್ಷೆಯಂತೆಯೇ ಶಂಕರ್ ಹೊಸ ದಾರಿಯನ್ನೇನೋ ಹುಡುಕಿದರು.. ಆದರೆ ಅದು ನಾನು ಬಯಸಿದ್ದಂತಹ ದಾರಿಯಾಗಿರಲಿಲ್ಲ! ಶಂಕರ್ ತಮ್ಮ ಸ್ವಭಾವಕ್ಕೆ ವ್ಯತಿರಿಕ್ತವೆನಿಸುವಷ್ಟು ನಿಧಾನಗತಿಯಲ್ಲಿ ಹೇಳಿದರು: “Allright..ಇನ್ನೆರಡು ದಿನಕ್ಕೆ ನಿನ್ನ dance scene shooting ಇಟ್ಟುಕೊಂಡಿದ್ದೆ..ಈಗ ಅದನ್ನ ಸ್ವಲ್ಪ ಮುಂದಕ್ಕೆ ಹಾಕ್ಕೋತೀನಿ…ಬಹುಶಃ ಈ ಷೆಡ್ಯೂಲ್ ನ ಕೊನೇಗಿಟ್ಟುಕೋತೀನಿ..ಅಷ್ಟರಲ್ಲಿ ಬ್ರಿಗೇಡ್ ರೋಡ್ ನಲ್ಲಿ ಒಂದು ಡಿಸ್ಕೋ ಡ್ಯಾನ್ಸ್ ಸ್ಕೂಲ್ ಇದೆ..ಅಲ್ಲಿಗೆ ಹೋಗಿ ಸೇರಿಕೊಂಡು ಒಂದಿಷ್ಟು ಡಾನ್ಸ್ ಕಲಿತುಕೋ..ಕೊನೇಪಕ್ಷ ನಿನಗೆ ಒಂದಿಪ್ಪತ್ತು ದಿವಸ ಸಮಯಾವಕಾಶ ಇದೆ ಡಾನ್ಸ್ ಕಲಿಯೋಕೆ”.

ಶಂಕರರ ಮಾತು ಕೇಳಿ ನನಗೆ ಹೃದಯವೇ ಬಾಯಿಗೆ ಬಂದಂತಾಗಿ ಹೋಯಿತು. ಗಂಟೆ ಬಾರಿಸಲು ಹೋಗಿ ಗುಡಿಯೇ ಮೈಮೇಲೆ ಬಿದ್ದಿತೇ! ನಾನೂ ಇನ್ನೊಂದು ಮಾತೂ ಆಡುವ ಸ್ಥಿತಿಯಲ್ಲಿರಲಿಲ್ಲವಾದ್ದರಿಂದ ಪೆದ್ದುಪೆದ್ದಾಗಿ ನಕ್ಕು ಆಗಲೆಂಬಂತೆ ತಲೆಯಾಡಿಸಿದೆ.ನನ್ನನ್ನು ಡಾನ್ಸ್ ಕ್ಲಾಸ್ ಗೆ ಕರೆದುಕೊಂಡು ಹೋಗಿ ಸೇರಿಸುವ ಜವಾಬ್ದಾರಿಯನ್ನು ಶಂಕರ್ ಸಂಕೇತ್ ಕಾಶಿಗೆ ಒಪ್ಪಿಸಿದರು.ಮರುದಿನದಿಂದಲೇ ಪ್ರಾರಂಭವಾಯಿತು ನನ್ನ ಡಿಸ್ಕೋ ಡಾನ್ಸ್ ಕಲಿಕೆ.ನನ್ನ ಡಾನ್ಸ್ ಗುರುವಿನ ಹೆಸರು ಪುರುಷನಾಥ್ ಎಂದು. ಮುಂದೆ ಕಿರುತೆರೆಯಲ್ಲಿ ನಿರ್ದೇಶಕನಾಗಿಯೂ ದುಡಿದ ಈ ಪುರುಷನಾಥ್ ಹಲವಾರು ಧಾರಾವಾಹಿಗಳ ಸಂಚಿಕೆಗಳನ್ನು ನಿರ್ದೇಶಿಸಿದರೂ ಆತನ ನೃತ್ಯ ಪ್ರಾವೀಣ್ಯತೆಯ ಪರಿಚಯವಿದ್ದುದು ಕೆಲವೇ ಕೆಲವರಿಗೆ ಮಾತ್ರ. ಆ ಕೆಲವರಲ್ಲಿ ಶಿಷ್ಯೋತ್ತಮನಾದ ನಾನೂ ಒಬ್ಬ! ಪುರುಷ್ ನಾಥ್ ನಿಜಕ್ಕೂ ಒಬ್ಬ ಒಳ್ಳೆಯ ನೃತ್ಯಪಟುವಷ್ಟೇ ಅಲ್ಲ, ಒಳ್ಳೆಯ ಗುರುವೂ ಆಗಿದ್ದ. ಬಲು ನಿಷ್ಠೆಯಿಂದ ನನಗೆ ಡಿಸ್ಕೋ ಡ್ಯಾನ್ಸ್ ಹೆಜ್ಜೆಗಳನ್ನು ಕಲಿಸಲು ಯತ್ನಿಸುತ್ತಿದ್ದ. ಆದರೆ ಏನು ಮಾಡಿದರೂ ಯಾಕೋ ಈ ಡಾನ್ಸ್ ವಿದ್ಯೆ ನನ್ನ ಶರೀರಕ್ಕೆ ಒಗ್ಗುತ್ತಲೇ ಇರಲಿಲ್ಲ! ಕೈಗಳ ಚಲನೆ ಸರಿಯಾಗಿ ಬಂದರೆ ಕಾಲಗಳು ತಡವರಿಸುತ್ತಿದ್ದವು.. ಕಾಲುಗಳನ್ನು ಸರಿಯಾಗಿ ಚಲಿಸಿದರೆ ಸೊಂಟದ ಬಳುಕು ನಾಪತ್ತೆಯಾಗಿರುತ್ತಿತ್ತು! ಹತ್ತು ದಿನಗಳ ಅಭ್ಯಾಸದ ನಂತರವೂ ನನ್ನಲ್ಲಿ ಹೆಚ್ಚಿನ ಪ್ರಗತಿಯನ್ನೇನೂ ಕಾಣದೇ ಪುರುಷನಾಥ್ ಹತಾಶನಾಗಿ ನಿಟ್ಟುಸಿರಿಟ್ಟು, “ಒಂದಾರು ತಿಂಗಳು ರೆಗ್ಯುಲರ್ ಆಗಿ ಕ್ಲಾಸ್ ಗೆ ಬಂದುಬಿಡಿ ಸರ್.. ಫಸ್ಟ್ ಕ್ಲಾಸ್ ಡಾನ್ಸರ್ ಆಗಿ ನಿಮ್ಮನ್ನ ರೆಡಿ ಮಾಡಿಬಿಡ್ತೀನಿ” ಎಂದ! ಓಹೋ! ಇನ್ನೂ ಆರು ತಿಂಗಳು ಬೇಕು! ಅಂದರೆ ಈವರೆಗಿನ ಕಲಿಕೆಯ ಫಲಿತಾಂಶ ಶೂನ್ಯ ಅನ್ನುವುದು ಅವನ ಮಾತಿನ ಅಂತರ್ಗತ ಭಾವವಾಗಿತ್ತು! ಇದೇ ಸಂದೇಶ ಶಂಕರ್ ರಿಗೂ ರವಾನೆಯಾಯಿತೆಂದು ಕಾಣುತ್ತದೆ.. ಬೇರೆ ದಾರಿಯಿಲ್ಲದೆ ನನ್ನೊಬ್ಬನ ನೃತ್ಯಭಾಗ ಎಂದಿದ್ದದ್ದನ್ನು ಗುಂಪು ನೃತ್ಯವಾಗಿ ಮಾರ್ಪಡಿಸಿದರು ಶಂಕರ್. ಹತ್ತಾರು ಮಿತ್ರರೊಂದಿಗೆ ಒಂದು ಮೂಲೆಯಲ್ಲಿ ನಿಂತು ನಾಲ್ಕಾರು ಬಾರಿ ಕೈಕಾಲು ಒದರುವಷ್ಟಕ್ಕೆ ನನ್ನ ನೃತ್ಯ ಪ್ರಾವೀಣ್ಯತೆ ಸೀಮಿತಗೊಂಡಿತು!

ಇದರ ಹೊರತಾಗಿ ನನ್ನ ಪಾತ್ರವನ್ನು ಶಂಕರ್ ರೂಪಿಸಿದ ರೀತಿ ಅನನ್ಯವಾಗಿತ್ತು.ರಾಹುಲ್ ಮಹಾ ಅಂಜುಕುಳಿ ಸ್ವಭಾವದವನು; ಬಲುಬೇಗ ಒತ್ತಡಗಳಿಗೆ ಪಕ್ಕಾಗಿ ಕುಸಿದು ಸೋಲೊಪ್ಪಿಕೊಂಡು ಬಿಡುವಂಥವನು. ಆ ಪಾತ್ರದ ಭಯ..ಹೇಡಿತನ.. ಅಸ್ಥಿರತೆಗಳನ್ನ ಬಿಂಬಿಸಲು ಆಗಾಗ್ಗೆ ಉಗುರು ಕಚ್ಚುವ, ಬೆದರುಗಣ್ಣಿಂದ ಸುತ್ತಮುತ್ತ ನೋಡುವ ಕೆಲ ಮ್ಯಾನರಿಸಂಗಳನ್ನು ಅಳವಡಿಸಿಕೊಂಡಿದ್ದೆ.ನರ್ತನದ ಹೆಜ್ಜೆ ಹಾಕುವಲ್ಲಿ ಸೋತರೂ ಉಗುರುಕಚ್ಚಿ ಉಗುಳು ನುಂಗಿ ಗದಗುಟ್ಟುವಲ್ಲಿ ಗೆದ್ದಿದ್ದೆ! ಶಂಕರನಿಗೂ ನನ್ನ ಪಾತ್ರನಿರ್ವಹಣೆ ತುಂಬಾ ಇಷ್ಟವಾಗಿ ಬೆನ್ನುತಟ್ಟಿದ ಮೇಲೇ ಕೊಂಚ ಮಟ್ಟಿಗೆ ನನ್ನ ತಪ್ಪಿತಸ್ಥ ಭಾವನೆ ದೂರಾದದ್ದು ಎನ್ನಿ.

84 ರ ಅಕ್ಟೊಬರ್ ತಿಂಗಳ ವೇಳೆಗೆ ‘accident’ ಚಿತ್ರದ ಚಿತ್ರೀಕರಣ ಪೂರ್ತಿ ಮುಗಿದು ನಂತರದ ಸಂಕಲನವೇ ಆದಿ ಚಿತ್ರೀಕರಣಾನಂತರದ ಕಾರ್ಯಗಳೆಲ್ಲವೂ ಪೂರ್ಣಗೊಂಡು ಚಿತ್ರ ಬಹುತೇಕ ಸಿದ್ಧವಾಗಿಹೋಗಿತ್ತು. ಆದಷ್ಟು ಶೀಘ್ರವಾಗಿ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಶಂಕರ್ ಚಿಂತಿಸುತ್ತಿದ್ದರು. ಬಹುಶಃ ನವೆಂಬರ್ ಮೊದಲ ವಾರದಲ್ಲೇ, ರಾಜ್ಯೋತ್ಸವದ ಸಮಯಕ್ಕೇ ಬಿಡುಗಡೆಯ ದಿನಾಂಕವೂ ನಿಗದಿಯಾದಂತೆ ನೆನಪು.

ಇತ್ತ ನಮ್ಮ ದೂರದರ್ಶನ ಕೇಂದ್ರದಲ್ಲಿಯೂ 1984 ರ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭಕ್ಕಾಗಿ ‘ಕನ್ನಡ ರಂಗ ಶ್ರೀರಂಗ’ ಎಂಬೊಂದು ವಿಶೇಷ ಕಾರ್ಯಕ್ರಮವೊಂದನ್ನು ನಾನು ಆಯೋಜಿಸಿದ್ದೆ. ಆ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಡುವ ಹೊಣೆಯನ್ನು ನಳಿನಿ ಅಕ್ಕನಿಗೆ ವಹಿಸಿದ್ದೆ. ನಿರೂಪಣಾ ಸಾಹಿತ್ಯವನ್ನೂ ನಳಿನಿ ಅಕ್ಕನೇ ಸಿದ್ಧಪಡಿಸಿಕೊಂಡಿದ್ದಳು.ಅಕ್ಟೋಬರ್ 31 ರಂದು ನಮ್ಮ ಸ್ಟುಡಿಯೋದಲ್ಲಿಯೇ ನಿರೂಪಣಾ ಭಾಗವನ್ನು ಚಿತ್ರೀಕರಿಸಲು ವ್ಯವಸ್ಥೆ ಮಾಡಿಕೊಂಡಿದ್ದೆ. ಎಲ್ಲಾ ಪೂರ್ವಸಿದ್ಧತೆಗಳನ್ನೂ ಮುಗಿಸಿ ಇನ್ನೇನು ಚಿತ್ರೀಕರಣ ಆರಂಭಿಸಬೇಕು, ಅಷ್ಟರಲ್ಲಿಯೇ ಕೆಟ್ಟಸುದ್ದಿಯೊಂದು ಬಂದಪ್ಪಳಿಸಿತು: ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾಗಿದೆ! ಆ ತಕ್ಷಣವೇ ಎಲ್ಲಾ ಚಿತ್ರೀಕರಣಗಳನ್ನೂ ನಿಲ್ಲಿಸಬೇಕೆಂದು ಮೇಲಧಿಕಾರಿಗಳ ಸೂಚನೆ ಬಂದು ನಮ್ಮ ಸ್ಟುಡಿಯೋ ಚಿತ್ರೀಕರಣವನ್ನೂ ನಿಲ್ಲಿಸಲಾಯಿತು. ಒಂದು ವಾರ ಕಾಲ ಯಾವುದೇ ಮನರಂಜನಾತ್ಮಕ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡುವಂತಿರಲಿಲ್ಲ. ಸ್ಟುಡಿಯೋ ಚಿತ್ರೀಕರಣವನ್ನು ನಿಲ್ಲಿಸಿ ನಳಿನಿ ಅಕ್ಕನನ್ನು ಮನೆಗೆ ಕಳಿಸಿಕೊಟ್ಟು ನನ್ನ ಕೋಣೆಗೆ ಮರಳುತ್ತಿದ್ದಂತೆಯೇ ನಿರ್ದೇಶಕರಿಂದ ಬುಲಾವ್ ಬಂದಿತು.”ಈ ಕೂಡಲೇ ಒಂದು ಕ್ಯಾಮರಾ ಯೂನಿಟ್ ತೆಗೆದುಕೊಂಡು ರಾಜಭವನಕ್ಕೆ ಹೋಗಿ ರಾಜ್ಯಪಾಲರ ಶೋಕ ಸಂದೇಶವನ್ನು ರೆಕಾರ್ಡ್ ಮಾಡಿಕೊಂಡು ಬಾ” ಎಂದು ನಿರ್ದೇಶಕ ಗುರುನಾಥ್ ಆದೇಶ ನೀಡಿದರು! ನನಗೋ ಈ ಬಗೆಯ ಕಾರ್ಯಕ್ರಮಗಳನ್ನು ರೆಕಾರ್ಡ್ ಮಾಡಿಕೊಂಡು ಬರುವುದರಲ್ಲಿ ಕೊಂಚವೂ ಪರಿಶ್ರಮವಿರಲಿಲ್ಲ. ಆದರೆ ಈಗ ವಿಧಿಯಿಲ್ಲ..ನನ್ನ ವಿಭಾಗವಲ್ಲದಿದ್ದರೂ ಸಿಬ್ಬಂದಿ ವರ್ಗದ ಕೊರತೆ ಇರುವುದರಿಂದ ಈ ಕೆಲಸ ಮಾಡಲೇಬೇಕಿದೆ! ಸರಿ,ಒಬ್ಬ ಕ್ಯಾಮರಾಮನ್ ಹಾಗೂ ಒಬ್ಬ ಧ್ವನಿ ಮುದ್ರಣಕಾರರ ಜತೆ ರಾಜಭವನದತ್ತ ಹೊರಟೆ.ಆಗ ಇದ್ದದ್ದು ನಮ್ಮದೊಂದೇ ವಾಹಿನಿಯಾದುದರಿಂದ ನಮಗೆ ಹೋದಲ್ಲೆಲ್ಲಾ ವಿಶೇಷ ಮರ್ಯಾದೆ! ರಾಜಭವನಕ್ಕೆ ಹೋಗಿ ರಾಜ್ಯಪಾಲರ ಸಂದೇಶದ ಚಿತ್ರೀಕರಣಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು ರಾಜ್ಯಪಾಲರ ಬರವಿಗಾಗಿ ಕಾಯುತ್ತಾ ನಿಂತಿದ್ದೆವು.ಐದೇ ನಿಮಿಷಗಳಲ್ಲಿ ತರಾತುರಿಯಿಂದ ಬಂದ ರಾಜ್ಯಪಾಲ ಅಶೋಕ್ ನಾಥ್ ಬ್ಯಾನರ್ಜಿಯವರು, “make it fast..i have to catch a flight to delhi” ಎಂದು ಅವಸರ ಪಡಿಸಿದರು.ನಾನು ನಮ್ಮ ತಂತ್ರಜ್ಞರಿಗೆ ರೆಕಾರ್ಡಿಂಗ್ ಶುರುಮಾಡಲು ಸೂಚಿಸಿದೆ. ಇನ್ನೇನು ರೆಕಾರ್ಡಿಂಗ್ ಪ್ರಾರಂಭಿಸಬೇಕು,ನಮ್ಮ ಧ್ವನಿ ಮುದ್ರಣಕಾರ ತನ್ನ ಧ್ವನಿ ಮುದ್ರಣ ಯಂತ್ರವನ್ನು ಕುಟ್ಟತೊಡಗಿದ! ಕೇಳಿದರೆ ‘voice record ಆಗ್ತಿಲ್ಲ’ ಎನ್ನುತ್ತಾ ಇದ್ದಬದ್ದ ಕೇಬಲ್ ಗಳನ್ನೆಲ್ಲಾ ಕಿತ್ತುಹಾಕಿ ಮತ್ತೆ ಚುಚ್ಚಿ ತಟ್ಟಿ ಕುಟ್ಟಿ ಏನೇ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ.ಕೆಲ ನಿಮಿಷ ಕಾದು ನೋಡಿದ ರಾಜ್ಯಪಾಲರು ಕೊನೆಗೆ ಸಿಡಿಮಿಡಿಗೊಂಡು,”if you keep on meddling with your useless equipment’s like this i simply can not wait.. sorry” ಎನ್ನುತ್ತಾ ಹೊರಡಲನುವಾದರು!

ನನಗಂತೂ ವಿಪರೀತ ಗಾಬರಿಯಾಗಿ ಹೋಯಿತು.”ಅದು ಹೇಗೆ ಬರುತ್ತೋ ಹಾಗೆ ತೊಗೊಂಡು ಮುಗಿಸೋ ಮಾರಾಯ..ಇಲ್ಲದಿದ್ರೆ ಕುತ್ತಿಗೇಗೆ ಬರುತ್ತೆ” ಎಂದು ನಮ್ಮ ತಂತ್ರಜ್ಞನ ಕಿವಿಯಲ್ಲಿ ಉಸುರಿದೆ.ಸರಿ ಎಂದು ತಲೆಯಾಡಿಸಿ ‘we are ready sir’ ಎಂದು ರಾಜ್ಯಪಾಲರಿಗೆ ಹೇಳಿ ಚಿತ್ರೀಕರಣ ಪ್ರಾರಂಭಿಸಿಯೇ ಬಿಟ್ಟರು ನಮ್ಮ ವೀರಾಧಿವೀರ ತಂತ್ರಜ್ಞರು! ರಾಜ್ಯಪಾಲರು ಮೂರು ನಿಮಿಷಗಳ ತಮ್ಮ ಸಂದೇಶವನ್ನು ನೀಡಿ ಸರಸರ ಹೊರಟೇಬಿಟ್ಟರು. ನಾವೂ ನಮ್ಮ ಉಪಕರಣಗಳನ್ನೆಲ್ಲಾ ಹೊತ್ತುಕೊಂಡು ನಮ್ಮ ಕೇಂದ್ರಕ್ಕೆ ಮರಳಿ ಬಂದು ನೋಡುತ್ತೇವೆ—ರಾಜ್ಯಪಾಲರು ಕೇವಲ ತುಟಿಯಾಡಿಸುತ್ತಿರುವುದು ಕಾಣುತ್ತಿದೆ..ಆದರೆ ಅವರ ಧ್ವನಿಯ ಮುದ್ರಣ ಆಗಿಯೇ ಇಲ್ಲ! ಉಪಕರಣಗಳೇ ಸರಿ ಇಲ್ಲದಿದ್ದರೆ ನಾವಾದರೂ ಏನು ಮಾಡಲು ಸಾಧ್ಯ?”ಅದು ಇರುವಂತೆಯೇ ಪ್ರಸಾರ ಮಾಡಲಿ,ಹಿನ್ನೆಲೆಯಲ್ಲಿ ಅವರ ಮಾತಿನ ಸಾರಾಂಶವನ್ನು ವಾರ್ತಾವಾಚಕರು ಹೇಳಿಬಿಡಲಿ” ಎಂದು ನಾನೇ ಒಂದು ಅಪೂರ್ವವಾದ ಸಲಹೆಯನ್ನು ಮುಂದಿಟ್ಟೆ! ಅಕಸ್ಮಾತ್ ಈ ವಿದ್ಯಮಾನಗಳು ಹಾಗೂ ನಾವು ಮಾಡಹೊರಟಿದ್ದ ‘ಮಹಾನ್ ಬುದ್ಧಿವಂತಿಕೆ’ಯ ಕೆಲಸ ಗೆಳೆಯ ಮೋಹನ ರಾಮ್ ನ ಗಮನಕ್ಕೆ ಬಂತು.ಮೋಹನ ರಾಮ್ ಈ ಸುದ್ದಿ ಕ್ಷೇತ್ರದಲ್ಲಿ ಸಾಕಷ್ಟು ನುರಿತವನು; ಪರಿಶ್ರಮ ಇರುವವನು.ನನ್ನನ್ನು ಬಳಿಗೆ ಕರೆದು, “ಲೋ ದಡ್ಡಾ,ಅವರು ರಾಜ್ಯಪಾಲರು ಕಣೋ! ಅವರ ಧ್ವನಿಯೇ ಬರದ ಹಾಗೆ ಅವರ ಸಂದೇಶವನ್ನೇನಾದರೂ ಪ್ರಸಾರ ಮಾಡಿ ಅದು ಏನಾದ್ರೂ ಅವರ ಗಮನಕ್ಕೆ ಬಂದರೆ ನೀವು ಮೂರು ಜನಾನೂ ಮನೇಗೆ ಹೋಗ್ತೀರಾ” ಎಂದು ಹೆದರಿಸುವ ಧಾಟಿಯಲ್ಲೇ ಹೇಳಿದ! “ಅಯ್ಯೋ ಗ್ರಹಚಾರವೇ! ಸಂಬಂಧವೇ ಇಲ್ಲದ ವಿಭಾಗದ ಕೆಲಸ ಮಾಡೋದಕ್ಕೆ ಹೋಗಿ ಆಪತ್ತನ್ನ ಮೈಮೇಲೆ ಎಳಕೊಂಡ ಹಾಗಾಯ್ತಲ್ಲಾ” ಎಂದು ಹಳಹಳಿಸುತ್ತಾ,”ಈಗ ಏನು ಮಾಡಲೋ ಅಣ್ಣಾ? ನೀನೇ ಏನಾದ್ರೂ ದಾರಿ ತೋರಿಸು” ಎಂದು ಅಲವತ್ತುಕೊಂಡೆ.”ಏನಾದ್ರೂ ಮಾಡ್ತೀನಿ ಸುಮ್ಮನಿರು” ಎಂದವನೇ ತುಸುಹೊತ್ತು ಆಲೋಚನೆ ಮಾಡಿ ನಂತರ ಆಕಾಶವಾಣಿಗೆ ಫೋನ್ ಮಾಡಿ ರಾಜ್ಯಪಾಲರು ಆಕಾಶವಾಣಿಗಾಗಿ ನೀಡಿದ್ದ ಸಂದೇಶದ ಧ್ವನಿಮುದ್ರಣದ ಟೇಪ್ ಅನ್ನು ತರಿಸಿಕೊಂಡ! ಅದರಲ್ಲಿದ್ದ ರಾಜ್ಯಪಾಲರ ಧ್ವನಿಯನ್ನು ನಾವು ಚಿತ್ರೀಕರಿಸಿಕೊಂಡು ಬಂದಿದ್ದ ಚಿತ್ರಿಕೆಯ ರಾಜ್ಯಪಾಲರ ತುಟಿಚಾಲನೆಗೆ ಹೊಂದಿಸಿದ! ದೇವರಾಣೆ ಒಂದೇ ಒಂದು ಅಕ್ಷರವೂ ಹೊಂದಿಕೆಯಾಗದಿದ್ದರೂ ಅವರದೇ ಮುಖ—ಅವರದೇ ಧ್ವನಿ ಎಂಬಷ್ಟರ ಮಟ್ಟಿಗೆ ಹೊಂದಾಣಿಕೆ ಸಿದ್ಧಿಸಿತ್ತು! ‘ಯಾಕೆ ಹೀಗಾಯ್ತು?’ ಅಂತ ಯಾರಾದರೂ ಕೇಳಿದರೆ ನಮಗೇನೂ ಗೊತ್ತಿಲ್ಲ,ಪ್ರಸಾರದ ಸಮಯದಲ್ಲಿ ಏನೋ ತೊಂದರೆ ಆಗಿರಬೇಕು ಅಂತ ಹೇಳಿಬಿಡಿ ಎಂದು ಇನ್ನಷ್ಟು ಜ್ಞಾನದಾನ ಮಾಡಿದ ಮೋಹನ ರಾಮ! ಸಧ್ಯ ಯಾರಿಗೂ ಅಂಥ ಉತ್ತರ ಕೊಡುವ ಪ್ರಸಂಗವೇನೂ ಬರಲಿಲ್ಲ ಅನ್ನುವುದೇ ಸಮಾಧಾನದ ಸಂಗತಿ!

ಈ ಪೇಚಿನ ಪ್ರಸಂಗ ತಂದೊಡ್ಡಿದ ಒತ್ತಡ—ಆತಂಕಗಳಿಂದ ಚೇತರಿಸಿಕೊಳ್ಳುತ್ತಿದ್ದಂತೆ ಸಂಕೇತ್ ಕಾಶಿ ಫೋನ್ ಮಾಡಿ ಮತ್ತಷ್ಟು ಆತಂಕಕ್ಕೆ ದೂಡುವ ಸಂಗತಿಯೊಂದನ್ನು ಅರುಹಿದ: ” Accident ಚಿತ್ರದ ಕೆಲ ಭಾಗಗಳ ಮರು ಚಿತ್ರೀಕರಣ ಆಗಬೇಕಾಗಿದೆ ; ಅದೂ ನಾಳೆಯಿಂದಲೇ! ಸಿದ್ಧರಾಗಿ”!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

27 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading