ಡಾ ಲಕ್ಷ್ಮಣ ವಿ ಎ
ಕಡಲ ತೀರಗಳೆಂದರೆ
ನಿನಗೆ
ಯಾಕೆ ಇಷ್ಟೊಂದು ಹುಚ್ಚು
ಎಂದು ಕೇಳಿದಳವಳು
ತೀರದ ಉಪ್ಪು ಗಾಳಿಗೆ
ಗುಳಿ ಕೆನ್ನೆಯ ಮೇಲೆ ತೊನೆದಾಡುವ
ಮುಂಗುರಳ ಸರಿಸಿ
ಸುಮ್ಮನೆ ಒಂದು ಮುತ್ತಿಟ್ಟೆ
ಅವಳ ಗುಳಿ ಕೆನ್ನೆಯ ಮೇಲೆ
ಈಗಷ್ಟೇ ಗ್ರಹಣ ಬಿಟ್ಟ ಸೂರ್ಯ
ಎಂದಿನಂತೆ ರಂಗಿನೋಕುಳಿಯಾಡಿ
ಕಡಲಿಗಿಳಿಯುತ್ತಿದ್ದ
ಕಡಲೆಂದರೆ
ನಿನ್ನ ಒಡಲಿನಂತೆ
ಬೆಚ್ಚನೆಯ
ಮಡಿಲಿನಂತೆ-
ಎತ್ತರದ ಕಾಡು ಕಣಿವೆಯ ನಾಡಿನ
ನೀನು
ರಣ ಬಿಸಿಲಿನ ಒಣ ಭೂಮಿಯ ನಾನು
ಇಲ್ಲಿ ತೀರದಲಿ ನಾವಿಬ್ಬರೂ
ಒಂದೇ ಎಚ್ಚರದಲಿ
ಒಂದೇ ಕನಸಿನಲಿ
ನಮ್ಮಿಬ್ಬರ ಊರು ಬೇರೆ
ಊರಿನ ಎತ್ತರ ಬೇರೆ -ಬೇರೆ
ತೀರದ ಸಮಪಾತಳಿಯಲಿ ನಾವಿಬ್ಬರೂ ಒಂದೆ
ನನ್ನ ಕಣ್ಣ ಕಡಲಿನೊಳಗಿನ ಗಾಯ
ನಿನ್ನ ಗುಳಿ ಕೆನ್ನೆಯ ಆಳ
ಅಳೆತೆಗೆ ಸಿಗಲಿಲ್ಲ ಲೋಕದ ಇಂಚು
ಪಟ್ಟಿಯಲಿ
ಜಗತ್ತು ಅಳೆಯಲಿ
ನಮ್ಮಿಬ್ಬರ ಎತ್ತರವನು
ಈಗ ಸಮುದ್ರ ಮಟ್ಟದಿಂದ
0 ಪ್ರತಿಕ್ರಿಯೆಗಳು