ಶ್ರೀನಿವಾಸ ಪ್ರಭು ಅಂಕಣ- ಮತ್ತೊಬ್ಬ ನಾಟಕಕಾರನ ‘ಉದ್ಭವ’ಕ್ಕೆ ನಾನು ಕಾರಣೀಭೂತ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

46

ದೊಡ್ಡಬಳ್ಳಾಪುರ ಕಾಲೇಜಿನ ವಿಷಯವನ್ನು ಮನೆಯಲ್ಲಿ ತಿಳಿಸುವ ಗೋಜಿಗೇ ಹೋಗಲಿಲ್ಲ.ನಾನು ಮೊದಲು ಏನು ಮಾಡುವುದೆಂದು ಒಂದು ನಿರ್ಧಾರಕ್ಕೆ ಬರಬೇಕು;ಅನಂತರ ಮನೆಯವರಿಗೆ ತಿಳಿಸುವುದೋ ಬೇಡವೋ ಎಂದು ಯೋಚಿಸಿದರಾಯಿತು ಎಂದುಕೊಂಡೆ. ಯಾಕೋ ಎಷ್ಟು ಯೋಚಿಸಿದರೂ ಮನಸ್ಸು ರಂಗಭೂಮಿಯತ್ತಲೇ ವಾಲುತ್ತಿತ್ತು.ಕಾಲೇಜಿನಲ್ಲಿ ಎಷ್ಟೇ ಪ್ರೋತ್ಸಾಹದಾಯಕ ವಾತಾವರಣವಿದ್ದರೂ ವರ್ಷವಿಡೀ ನಾಟಕ ಮಾಡಿಸಿಕೊಂಡಿರಲಾದೀತೇ? ಪಠ್ಯ ಬೋಧನೆಗೆ ಪ್ರತಿನಿತ್ಯದ ತಯಾರಿ.. ಊರಿಂದ ಊರಿಗೆ ಪ್ರತಿನಿತ್ಯದ ಓಡಾಟ..ಮೌಲ್ಯಮಾಪನ ಇತ್ಯಾದಿ ಜವಾಬ್ದಾರಿಗಳು…ಇವೆಲ್ಲದರ ನಡುವೆ ನಾಟಕ ಕಳೆದೇ ಹೋಗುತ್ತದೆ…ಹಾಗಾಗಲು ಬಿಡಬಾರದು ಎಂದು ನನಗೆ ಬೇಕಾದ ಉತ್ತರಗಳನ್ನೆಲ್ಲಾ ನಾನೇ ಹೇಳಿಕೊಂಡು ಖಾತ್ರಿ ಮಾಡಿಕೊಂಡು ‘ಕೆಲಸಕ್ಕೆ ಸೇರುವುದು ಬೇಡ’ ಎಂದು ತೀರ್ಮಾನ ಮಾಡಿಬಿಟ್ಟೆ! ಆದರೆ ಈ ವಿಷಯವನ್ನು ದೇನಾಶ್ರೀ ಅವರಿಗೆ ಮುಟ್ಟಿಸುವುದಾದರೂ ಹೇಗೆ? ನನ್ನ ಮೇಲೆ ಅಷ್ಟು ಅಭಿಮಾನ—ವಿಶ್ವಾಸವನ್ನಿಟ್ಟು ತಾವಾಗಿ ಹುಡುಕಿಕೊಂಡು ಬಂದು ಅಧ್ಯಾಪಕ ಹುದ್ದೆಯನ್ನು ನೀಡಲು ಮುಂದಾಗಿದ್ದಾರೆ!

ಒಂದು ಕ್ಷಣ ಎಂ ಎ ಮುಗಿಸಿದ ಹೊಸತರಲ್ಲಿ ಒಂದು ಕೆಲಸ ಪಡೆದುಕೊಳ್ಳಲು ನಾನು ಅನುಭವಿಸಿದ ಬವಣೆ, ಪಟ್ಟ ಸಂಕಟಗಳ ನೆನಪುಗಳೆಲ್ಲವೂ ಧುಮುಕಿಬಂದವು. ಆದರೆ ಈಗ ಗುರಿ ಬದಲಾಗಿದೆ; ಮಾರ್ಗ ಬದಲಾಗಿದೆ;ಕನಸುಗಳು ಬದಲಾಗಿವೆ;ಹೊರಳಿ ಬರುವುದರಲ್ಲಿ ಅರ್ಥವಿಲ್ಲ..ದೇನಾಶ್ರೀ ಅವರಿಗೆ ಒಮ್ಮೆ ನನ್ನ ಬಗೆಗಿನ ಕಾಳಜಿಗಳಿಗಾಗಿ ವಂದಿಸಿ ನನ್ನ ನಿರ್ಧಾರವನ್ನು ತಿಳಿಸಿಬಿಡಬೇಕು ಎಂದು ತೀರ್ಮಾನಿಸಿದೆ. ಅವರಿಗೆ ವಿಷಯ ತಿಳಿಸಿದರೆ ನನ್ನ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡಿಕೊಳ್ಳಲಾದರೂ ಅವರಿಗೆ ಅನುಕೂಲವಾಗುತ್ತದೆ.ಆದರೆ ಆಗ ಈಗಿನ ಹಾಗೆ ಸಂಪರ್ಕಕ್ಕೆ ಮೊಬೈಲ್ ನಂತಹ ಸುಲಭ —ಅನುಕೂಲಕರ ಸಾಧನಗಳಿರಲಿಲ್ಲ. ಮಾಡುವುದಾದರೂ ಏನು? ಖುದ್ದಾಗಿ ದೊಡ್ಡಬಳ್ಳಾಪುರಕ್ಕೇ ಹೋಗಿ ದೇನಾಶ್ರೀ ಅವರನ್ನು ಕಂಡು ವಿಷಯ ತಿಳಿಸಿ ಬಂದುಬಿಡುವುದೆಂದು ತೀರ್ಮಾನಿಸಿ ಮರು ದಿನವೇ ಬಸ್ ಹತ್ತಿಕೊಂಡು ದೊಡ್ಡಬಳ್ಳಾಪುರಕ್ಕೆ ಹೋದೆ. ನಾನು ಕಾಲೇಜ್ ಬಳಿ ಹೋಗುವ ವೇಳೆಗಾಗಲೇ ಸಂದರ್ಶನ ಪ್ರಾರಂಭವಾಗಿ ಹೋಗಿತ್ತು.ದೇನಾಶ್ರೀಯವರು ಅದಾಗಲೇ ಸಂದರ್ಶನ ಕೊಠಡಿಯೊಳಗೆ ಹೋಗಿಬಿಟ್ಟಿದ್ದರು.

ತಾಸುಗಟ್ಟಲೆ ಅಲ್ಲಿ ಕಾಯುತ್ತಾ ನಿಲ್ಲಲು ಮನಸ್ಸಾಗದೆ ಸಿಬ್ಬಂದಿ ವರ್ಗದವರ ಮುಖಾಂತರ ನಾನು ಬಂದಿರುವ ಸುದ್ದಿಯನ್ನು ಅವರಿಗೆ ಮುಟ್ಟಿಸಿ ತುರ್ತಾಗಿ ಮಾತಾಡಬೇಕಾಗಿರುವುದರಿಂದ ಒಂದೇ ಕ್ಷಣದ ಮಟ್ಟಿಗೆ ಹೊರಬರಬೇಕೆಂದು ಸಂದೇಶ ಕಳಿಸಿದೆ. ನನ್ನ ಸಂದೇಶ ತಲುಪಿದ ತಕ್ಷಣವೇ ದೇನಾಶ್ರೀ ಹೊರಬಂದರಾದರೂ ಮುಖದಲ್ಲಿ ಕೊಂಚ ಕಸಿವಿಸಿ—ಮುಜುಗರವಿದ್ದುದು ಸ್ಪಷ್ಟವಾಗಿ ಕಾಣುತ್ತಿತ್ತು. ಸಹಜವೇ! ಸಂದರ್ಶನಕ್ಕೆಂದು ಬಂದಿರುವ ಅಭ್ಯರ್ಥಿ ಹಾಗೆ ಹೊರಬರುವಂತೆ ಹೇಳಿಕಳಿಸುವುದೆಂದರೆ ಏನರ್ಥ!? “intervews ಈಗ ಪ್ರಾರಂಭಿಸ್ತಿದೇವೆ ಶ್ರೀನಿವಾಸ ಪ್ರಭು..ನಿಮ್ಮ ಸರದಿ ಬಂದ ತಕ್ಷಣ ಕರೀತೇವೆ..ಇನ್ನೂ ಮೂರು ಜನ ಸಂದರ್ಶನ ಸಮಿತಿಯಲ್ಲಿದ್ದಾರೆ..ಅವರ ಅಭಿಪ್ರಾಯ—ಒಪ್ಪಿಗೇನೂ ತೊಗೋಬೇಕಾಗುತ್ತೆ” ಎಂದು ಚೂರು ಬೇಸರದಿಂದಲೇ ನುಡಿದರು ದೇನಾಶ್ರೀ. “ದಯವಿಟ್ಟು ಕ್ಷಮಿಸಿ ಸರ್..ನಿಮ್ಮನ್ನ ಬಂದು ಕಾಣೋದಕ್ಕೆ ಇದು ಸೂಕ್ತ ಸಮಯವಲ್ಲ..ಗೊತ್ತು. ಆದರೆ ಅನಿವಾರ್ಯವಾದ್ದರಿಂದ ಬಂದಿದೇನೆ..ದಯವಿಟ್ಟು ನೀವು ಬೇರೆ ಒಬ್ಬ ಒಳ್ಳೇ ಅಭ್ಯರ್ಥಿಯನ್ನು ಕನ್ನಡ ಅಧ್ಯಾಪಕರ ಹುದ್ದೇಗೆ ಆರಿಸಿಕೊಳ್ಳಿ ಸರ್. ಕೆಲಸಕ್ಕೆ ಸೇರಿಕೊಳ್ಳೋದಕ್ಕೆ ಯಾಕೋ ನನಗೆ ಮನಸ್ಸಾಗ್ತಿಲ್ಲ..ನನ್ನ ತೀರ್ಮಾನವನ್ನ ನಿಮಗೆ ತಿಳಿಸಿದರೆ ನಿಮಗೆ ಒಂದಿಷ್ಟು ಸಹಾಯವಾಗಬಹುದು ಅನ್ನೋ ಉದ್ದೇಶದಿಂದ ಇಲ್ಲಿಗೆ ಬಂದೆ ಅಷ್ಟೇ ಸರ್..ಅನ್ಯಥಾ ಭಾವಿಸಬೇಡಿ”. ದೇನಾಶ್ರೀ ಅವರು ನನ್ನ ಮಾತುಗಳನ್ನು ಕೇಳಿ ಚಕಿತರಾಗಿಹೋದರು.

“ಚೆನ್ನಾಗಿ ಯೋಚನೆ ಮಾಡಿದೀರಾ ಶ್ರೀನಿವಾಸ ಪ್ರಭೂ? ಈಗ ಹೆಚ್ಚು ಮಾತಾಡೋದಕ್ಕೆ ನನ್ನ ಬಳಿ ಸಮಯ ಇಲ್ಲ..ನೀವು ಇಲ್ಲಿಗೆ ಅಧ್ಯಾಪಕರಾಗಿ ಬರೋದಕ್ಕೆ ಒಪ್ಪಿಕೊಂಡಿದ್ದರೆ ವೈಯಕ್ತಿಕವಾಗಿ ನನಗೆ ತುಂಬಾ ಸಂತೋಷವಾಗ್ತಿತ್ತು. ಆದರೆ ನನಗೆ ನಿರಾಸೆ ಆಗುತ್ತೆ ಅನ್ನೋ ಕಾರಣಕ್ಕೆ ನಿಮ್ಮ ಮೇಲೆ ಒತ್ತಡ ಹೇರೋದಕ್ಕೂ ಇಷ್ಟ ಇಲ್ಲ ನನಗೆ. ನೀವಿಲ್ಲಿ ಬಂದರೆ ನಿಮ್ಮ ಯಾವ ಸೃಜನಶೀಲ ಚಟುವಟಿಕೆಗೂ ಅಡ್ಡಿಯಾಗದ ಹಾಗೆ ನೋಡಿಕೊಳ್ಳೋ ಹೊಣೆ ನನ್ನದು ಅಂತಷ್ಟೇ ಹೇಳಬಲ್ಲೆ. ನಾನಿನ್ನು ಒಳಗೆ ಹೋಗ್ತೀನಿ. ಸಂದರ್ಶನಕ್ಕೆ ಒಳಗೆ ಬರ್ತೀರೋ ಅಥವಾ ಬಸ್ ಸ್ಟ್ಯಾಂಡ್ ಕಡೆ ಹೊರಳ್ತೀರೋ ಯೋಚನೆ ಮಾಡಿ” ಎಂದು ನುಡಿದು ದೇನಾಶ್ರೀ ಅವರು ಒಳ ಹೊರಟುಹೋದರು. ಒಂದಷ್ಟು ಹೊತ್ತು ಅಲ್ಲೇ ಸುಮ್ಮನೆ ನಿಂತಿದ್ದೆ.ತುಸುಹೊತ್ತು ಅಲ್ಲಿದ್ದ ಕಲ್ಲು ಬೆಂಚೊಂದರ ಮೇಲೆ ಕುಳಿತು ದೇನಾಶ್ರೀ ಅವರ ಮಾತುಗಳನ್ನು ಮತ್ತೆ ಮತ್ತೆ ಮೆಲುಕುಹಾಕಿದೆ. ಯಾಕೋ ಕಾಲುಗಳುಯಾವುದೋ ಮಾಯೆಗೆ ಒಳಗಾದಂತೆ ಅಪ್ರಯತ್ನಪೂರ್ವಕವಾಗಿ ಬಸ್ ಸ್ಟ್ಯಾಂಡ್ ಹಾದಿಯನ್ನೇ ತುಳಿದುಬಿಟ್ಟವು!

ಉದ್ಭವ ಹಾಗೂ ಹ್ಯಾಮ್ಲೆಟ್ ನಾಟಕಗಳು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿದ್ದಲ್ಲದೆ ರಾಜ್ಯಾದ್ಯಂತ ಅನೇಕ ಪ್ರದರ್ಶನಗಳ ಭಾಗ್ಯವನ್ನೂ ಕಂಡವು.ದಾವಣಗೆರೆ, ತುಮಕೂರು ಹಾಗೂ ಬೆಳಗಾವಿಗಳಲ್ಲಿ ಆದ ಉದ್ಭವ ನಾಟಕದ ಪ್ರದರ್ಶನಗಳಂತೂ ಇಂದಿಗೂ ನನ್ನ ನೆನಪಿನಲ್ಲಿ ಹಸಿರಾಗಿ ಉಳಿದಿರುವಂಥವು.ದಾವಣಗೆರೆಯಲ್ಲಿ ಜಿ.ಎನ್.ಸತ್ಯಮೂರ್ತಿ ಅಲಿಯಾಸ್ ಸತ್ಯಣ್ಣ ಹಾಗೂ ಹಾಲಪ್ಪನವರು ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದುದೇ ಅಲ್ಲದೆ ದಾವಣಗೆರೆಯಲ್ಲಿ ರಂಗಚಳುವಳಿ ರೂಪುಗೊಳ್ಳಲು ಕಾರಣಕರ್ತರಾದವರು. ರೋಟರಿ ಕ್ಲಬ್ ಆಶ್ರಯದಲ್ಲಿ ದಾವಣಗೆರೆಯಲ್ಲಿ ಆಯೋಜನೆಗೊಂಡ ಉದ್ಭವ ನಾಟಕ ಪ್ರದರ್ಶನಕ್ಕೆ ಸಂಪೂರ್ಣ ನೆರವು ನೀಡಿ ಸಹಕರಿಸಿದವರು ಸತ್ಯಣ್ಣ ಹಾಗೂ ಹಾಲಪ್ಪ.

ರೋಟರಿ ಕ್ಲಬ್ ವತಿಯಿಂದ ನಮಗೆ ನೆರವಾಗುತ್ತಿದ್ದವರು ಉಲ್ಲಾಸ್ ವರ್ಣೀಕರ್.ವೃತ್ತಿಯಿಂದ ಪೋಲೀಸ್ ಅಧಿಕಾರಿಯಾಗಿದ್ದ ಉಲ್ಲಾಸ್ ಅವರು ನನ್ನ ಗೆಳೆಯ ಗುರುದತ್ತನ ಆತ್ಮೀಯ ಗೆಳೆಯರ ಬಳಗಕ್ಕೆ ಸೇರಿದವರಾಗಿದ್ದು ಬಹು ಬೇಗ ನಮಗೂ ಹತ್ತಿರದವರಾಗಿಬಿಟ್ಟರು.

ಮುಂದಿನ ಕೆಲ ದಿನಗಳಲ್ಲಿ ಈ ಉಲ್ಲಾಸ್ ಗೆ ಸಂಬಂಧಿಸಿದ ಹಾಗೆ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ಇಲ್ಲಿಯೇ ನೆನಪಿಸಿಕೊಂಡುಬಿಡುತ್ತೇನೆ. ಅದು ಕುಮಾರಣ್ಣಯ್ಯನ ಮದುವೆಯ ಸಂದರ್ಭದಲ್ಲಿ ನಡೆದ ಪ್ರಸಂಗ. ಮದುವೆ ನಡೆದದ್ದು ಮೈಸೂರಿನಲ್ಲಿ; ಚಿಲಕುಂದದ ನರಸಿಂಹಮೂರ್ತಿಗಳ ಸುಪುತ್ರಿ ವತ್ಸಲಾ ನಮ್ಮ ಮನೆಗೆ ಸೊಸೆಯಾಗಿ,ನನಗೆ ವಾತ್ಸಲ್ಯಮಯಿ ಅತ್ತಿಗೆಯಾಗಿ ಬಂದು ನಮ್ಮ ಕುಟುಂಬಕ್ಕೆ ಸೇರ್ಪಡೆಯಾದವರು. ನಮ್ಮ ಸಂಕೇತಿ ಪಂಗಡದ ಬಗ್ಗೆ ಈಗಾಗಲೇ ಕೆಲ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನಷ್ಟೇ. ವೇದಾಧ್ಯಯನದಲ್ಲಿ ನುರಿತ ಅನೇಕ ವಿದ್ವನ್ಮಣಿಗಳು, ಸಂಗೀತಕ್ಷೇತ್ರಕ್ಕೆ ಅನುಪಮ ಕೊಡುಗೆಗಳನ್ನು ನೀಡಿದ ಅನೇಕಾನೇಕ ಸಂಗೀತ ವಿದ್ವಾಂಸರು—ವಿದುಷಿಯರು, ಗಮಕವಾಚನ—ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಅನೇಕ ಮಹಾನ್ ಸಾಧಕರು ನಮ್ಮ ಈ ಪುಟ್ಟ ಪಂಗಡದ ಹಿರಿಮೆ—ಗರಿಮೆಗಳನ್ನು ಉತ್ತುಂಗಕ್ಕೇರಿಸಿದ್ದಾರೆ. ಇದಷ್ಟೇ ಅಲ್ಲದೆ ರಸವತ್ತಾದ ಅಡುಗೆ ಮಾಡುವುದರಲ್ಲಿಯೂ ಪುಷ್ಕಳವಾಗಿ ಊಟ ಮಾಡುವುದರಲ್ಲಿಯೂ ಸಹಾ ಸಂಕೇತಿಗಳು ನಿಷ್ಣಾತರು. ಅಂತೆಯೇ ಇವರ ಇಸ್ಪೀಟ್ ಆಟದ ಹುಚ್ಚು—ಪ್ರಾವೀಣ್ಯತೆಗಳೂ ಸಹಾ ಅಷ್ಟೇ ಜನಜನಿತವಾಗಿರುವ ಸಂಗತಿಯೇ! “ಆಹಹಹಹಾ..ಶಾನುಭೋಗರ ಮನೆ ಮದುವೆ ತುಂಬಾ ಅದ್ದೂರಿಯಾಗಿ ಆಯಿತು…ಒಟ್ಟು 12 ಪಟ್ಟೇಲಿ ಜನ ಸೇರಿ ಆಡಿದ್ದು(ಇಸ್ಪೀಟ್ ) ನ ಭೂತೋ ನ ಭವಿಷ್ಯತಿ” ಎಂಬಂತಹ ತಮಾಷೆಯ ಉದ್ಗಾರಗಳು ಆಗಾಗ್ಗೆ ಇಸ್ಪೀಟ್ ಪ್ರಿಯರ ವಲಯಗಳಲ್ಲಿ ಹರಿದಾಡುವುದು ಸಾಮಾನ್ಯವಾಗಿತ್ತು. ಕುಮಾರಣ್ಣಯ್ಯನ ಮದುವೆಯಲ್ಲೂ ಈ ‘ವೈಭವ’ಕ್ಕೇನೂ ಕೊರತೆಯಿರಲಿಲ್ಲ! ಅನೇಕ ನುರಿತ ಆಟಗಾರರು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು ಬಂದು ವರಪೂಜೆಯ ಸಮಯದಿಂದಲೇ ತಂಡತಂಡವಾಗಿ ಸೇರಿಕೊಂಡು ಆಟದಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದರು. ಹೊತ್ತುಹೊತ್ತಿಗೆ ಆಟದ ಪಟ್ಟೆಗಳಿಗೆ ಕಾಫಿ—ಟೀ—ತಿನಿಸುಗಳ ಸರಬರಾಜು ಆಗುತ್ತಿತ್ತು.ಸಮಯದ ಪರಿವೆಯೇ ಇಲ್ಲದೆ ಹೀಗೆ ಆಟದಲ್ಲಿ ಪಟುಗಳು ತನ್ಮಯರಾಗಿ ತೊಡಗಿರುವಾಗಲೇ ಅವರ ಧೃತಿಗೆಡಿಸಿ ಕಂಗಾಲಾಗುವಂತೆ ಮಾಡಿದ ಘಟನೆ ಘಟಿಸಿಯೇಬಿಟ್ಟಿತು. ನಮ್ಮ ಆತ್ಮೀಯ ಮಿತ್ರ ಇನ್ಸ್ ಪೆಕ್ಟರ್ ಉಲ್ಲಾಸ್ ವರ್ಣೀಕರ್ ವಧೂವರರಿಗೆ ಶುಭ ಹಾರೈಸುವ ಸಲುವಾಗಿ ಮದುವೆಯ ಛತ್ರಕ್ಕೆ ಬಂದರು. ಅವರು ಅಲ್ಲಿಗೆ ಬಂದದ್ದು ಪೋಲೀಸ್ ಸಮವಸ್ತ್ರದಲ್ಲಿ! ಹೆಚ್ಚು ಸಮಯವಿಲ್ಲದಿದ್ದ ಕಾರಣ ತಮ್ಮ ಕೆಲಸದ ನಡುವೆಯೇ ತುಸುಹೊತ್ತು ಬಿಡುವು ಮಾಡಿಕೊಂಡು ಉಲ್ಲಾಸ್ ಬಂದಿದ್ದರು. ಮುಂದೆ ನಡೆದದ್ದು ಒಂದು ಸೊಗಸಾದ ಸಿನೆಮಾ ದೃಶ್ಯದಂತೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ! ಮಹಡಿಯ ಮೇಲಿನ ವಿಶಾಲ ಪ್ರಾಂಗಣದಲ್ಲಿ ಇಸ್ಪೀಟ್ ಪಟುಗಳು ಮೈಮರೆತು ಆಟದಲ್ಲಿ ತೊಡಗಿದ್ದಾರೆ; ಠಕ್ ಠಕ್ ಠಕ್ ಠಕ್ ಬೂಟುಕಾಲಿನ ಸದ್ದು.. ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿ ಮೆಟ್ಟಿಲೇರಿ ಬರುತ್ತಿದ್ದಾರೆ; ಬೂಟುಕಾಲಿನ ಸದ್ದು ಬಂದತ್ತ ಹೊರಳಿ ನೋಡಿದ ಆಟಗಾರರಿಗೆ ದಿಗ್ಭ್ರಮೆಯಾಗಿಹೋಗಿದೆ; ” ಇದಥ್ಥಾದೋಡೋ ಇದು..ಇಂತೀಕೂ ವಂದು ಚಾವಿಚ್ಕನ್ಯೇ”(ಇದೇನಯ್ಯಾ ಇದು! ಇಲ್ಲಿಗೂ ಬಂದು ಜೀವ ತೆಗೀತಿದಾರಲ್ಲಾ) ಎಂದವರೇ ಎದುರಿಗಿದ್ದ ಎಲೆ—ದುಡ್ಡು ಎಲ್ಲವನ್ನೂ ಬದಿಗೆ ತಳ್ಳಿ ಎದ್ದು ತಪ್ಪಿಸಿಕೊಂಡು ಓಡಲು ಯತ್ನಿಸುತ್ತಿದ್ದಾರೆ;ಕೆಲವೇ ಕ್ಷಣಗಳಲ್ಲಿ ರಂಗುರಂಗಿನ ಆಟದ ಪಟ್ಟೆ ಗೊಂದಲ ತಲ್ಲಣಗಳ ಗೂಡಾಗಿಹೋಗಿದೆ;ಎಲ್ಲರ ಮುಖದಲ್ಲಿ ಅಚ್ಚೊತ್ತಿದ್ದ ಭಯ! “ರಮ್ಮಿ ಆಡೋರನ್ನೆಲ್ಲಾ ಅರೆಸ್ಟ್ ಮಾಡೋಕಾಗಲ್ಲ..ನಂಗೂ ಕಾನೂನು ಗೊತ್ತು” ಎಂದೊಬ್ಬರು ಉದ್ಗರಿಸಿದರೆ “ನಾನು ಸುಮ್ಮನೆ ನೋಡ್ತಾ ಕೂತಿದ್ದೆ ಕಣ್ರೀ..ಆಡ್ತಿರಲಿಲ್ಲ ಅಂದುಬಿಡ್ತೀನಿ! ಆಗೇನು ಮಾಡ್ತಾರೆ?!” ಎಂದು ಮತ್ತೊಬ್ಬರು ಜಾಣತನ ಮೆರೆಯುತ್ತಿದ್ದಾರೆ! ಇದೆಲ್ಲವನ್ನೂ ನೋಡಿದ ಉಲ್ಲಾಸ್ ಅವರಿಗೆ ಆದ ಅನಾಹುತದ ಅರಿವಾಗಿ ಹೋಯಿತು! ಕೂಡಲೇ ಎಲ್ಲರಿಗೂ ಸಮಾಧಾನವಾಗಿರುವಂತೆ ವಿನಂತಿಸಿಕೊಂಡು, “ದಯವಿಟ್ಟು ತಪ್ಪು ತಿಳೀಬೇಡಿ..ನಾನು ವಧೂವರರಿಗೆ ಶುಭ ಹಾರೈಸೋದಕ್ಕೆ ಬಂದಿರೋ ಒಬ್ಬ ಸ್ನೇಹಿತ..ಬನ್ನಿ..ಕೂತ್ಕೊಳಿ..ಆಟ ಮುಂದುವರಿಸಿ” ಎಂದು ಹೇಳಿದರೂ ನಮ್ಮ ಆಟಗಾರರಿಗೆ ಅನುಮಾನ ನಿವಾರಣೆಯಾಗದು! “ಡ್ಯೂಟೀಲಿದೀನಿ..ಇಲ್ಲದಿದ್ರೆ ನಾನೂ ಒಂದು ವರಸೆ ನೋಡೇಬಿಡ್ತಿದ್ದೆ” ಎಂದು ಉಲ್ಲಾಸ್ ನಗುನಗುತ್ತಾ ಹೇಳಿದ ಮೇಲೆ,ನಾವೂ ಎಲ್ಲರೂ ಹೋಗಿ ಆದ ಅಚಾತುರ್ಯಕ್ಕೆ ಕ್ಷಮೆ ಯಾಚಿಸಿ ಸಮಾಧಾನ ಪಡಿಸಿದ ಮೇಲೆ ಆಟಗಾರರು ನೆಮ್ಮದಿಯಿಂದ ಆಟದ ಪಟ್ಟೆಗೆ ಮರಳಿದರು.

ತುಮಕೂರಿನಲ್ಲಿ ಉದ್ಭವ ನಾಟಕ ಆಯೋಜನೆ ಗೊಂಡಿದ್ದು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ.ಆಗ ಅಲ್ಲಿ ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕನಾಗಿದ್ದವನು ನನ್ನ ಆತ್ಮೀಯ ಮಿತ್ರ, ಎಂ.ಎ. ಸಹಪಾಠಿ ದಕ್ಷಿಣಾಮೂರ್ತಿ. ಎಂಎ ಓದುತ್ತಿದ್ದ ಸಂದರ್ಭದಲ್ಲಿ ನಾನುಹಾಗೂ ದಕ್ಷಿಣಾಮೂರ್ತಿ ಪ್ಯಾಲೇಸ್ ರಸ್ತೆಯಲ್ಲಿದ್ದ ಪೆಟ್ಟಿಗೆ ಅಂಗಡಿಯ ಮುಂದೆ ಬೈಟು ನೇವಿ ಬ್ಲೂ ಸಿಗರೇಟ್ ಸೇದುತ್ತಿದ್ದುದು ನನಗಿನ್ನೂ ನೆನಪಿದೆ! ದಕ್ಷ ,ಪ್ರಾಮಾಣಿಕ ಅಧಿಕಾರಿಯೆಂದು ಹೆಸರು ಪಡೆದಿದ್ದ ದಕ್ಷಿಣಾಮೂರ್ತಿ ಅನೇಕ ಸಂದರ್ಭಗಳಲ್ಲಿ ನನ್ನ ಜತೆಯಾಗಿ ನಿಂತವನು,ನೆರವೂ ನೀಡಿದವನು. ಅವನ ನೇತೃತ್ವದಲ್ಲಿ ಹಾಗೂ ಇಲಾಖೆಯವರ ಸಹಕಾರದಿಂದ ತುಮಕೂರಿನಲ್ಲಿ ಉದ್ಭವ ನಾಟಕದ ಪ್ರದರ್ಶನ ತುಂಬಾ ಚೆನ್ನಾಗಿ ಆಯಿತು.

ಇನ್ನು ಬೆಳಗಾವಿ ನಾಟಕೋತ್ಸವದಲ್ಲಿ ಉದ್ಭವ ಹಾಗೂ ಹ್ಯಾಮ್ಲೆಟ್ ಎರಡೂ ನಾಟಕಗಳು ಪ್ರದರ್ಶನಗೊಂಡು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾದ ಬಗ್ಗೆ ಈಗಾಗಲೇ ಪ್ರಸ್ತಾಪಿಸಿದ್ದೇನೆ. ಆ ಪ್ರಶಂಸೆ—ಮೆಚ್ಚುಗೆಗಳ ಜತೆಜತೆಗೆ ಒಂದಿಷ್ಟು ಅಸಮಾಧಾನದ ಹೊಗೆಯಾಡತೊಡಗಿದ್ದು ನನ್ನನ್ನು ಸಾಕಷ್ಟು ವಿಚಲಿತನನ್ನಾಗಿ ಮಾಡಿಬಿಟ್ಟಿತು. ಹ್ಯಾಮ್ಲೆಟ್ ನಾಟಕದ ಬಗ್ಗೆ ವಿಮರ್ಶಿಸುತ್ತಾ ಬೆಳಗಾವಿಯ ಸ್ಥಳೀಯ ಪತ್ರಿಕೆಯೊಂದರಲ್ಲಿ ಒಬ್ಬ ವಿಮರ್ಶಕರು,”ಹ್ಯಾಮ್ಲೆಟ್—ಪ್ರಭು=0 ” ಎಂದು ತಲೆಬರಹವನ್ನೇ ನೀಡಿಬಿಟ್ಟರು. ಪ್ರಸಿದ್ಧ ಅಸಂಗತ ನಾಟಕಕಾರ ಚಂದ್ರಕಾಂತ ಕುಸನೂರರು , “ಶ್ರೀನಿವಾಸ ಪ್ರಭುವಿನ ಅಭಿನಯವಿಲ್ಲದಿದ್ದರೆ ಹ್ಯಾಮ್ಲೆಟ್ ಆಮ್ಲೆಟ್ ಆಗುತ್ತಿದ್ದುದರಲ್ಲಿ ಅನುಮಾನವೇ ಇಲ್ಲ” ಎಂದು ಸೂತ್ರಧಾರ ವಾರ್ತಾಪತ್ರದಲ್ಲಿ ಬರೆದುಬಿಟ್ಟರು. ಸಹಜವಾಗಿಯೇ ಈ ವಿಮರ್ಶೆಗಳು ಅಶೋಕನ ಕಣ್ಣು ಕೆಂಪಾಗಿಸಿದ್ದಷ್ಟೇ ಅಲ್ಲ, ನನ್ನ ಬಗ್ಗೆಯೂ ಒಂದು ಸಣ್ಣ ಅಸಮಾಧಾನವೋ ಅಸೂಯೆಯೋ ಮೂಡಲು ಕಾರಣವಾಗಿಹೋಯಿತು.

ಅದೂ ಸಹಜವೇ.ಅಶೋಕನ ಜಾಗದಲ್ಲಿ ಯಾವ ನಿರ್ದೇಶಕನೇ ಇದ್ದರೂ ‘ನಿರ್ದೇಶಕನ ಸೃಜನಶೀಲತೆ’ಯನ್ನು ಗುರುತಿಸದ ಇಂಥ ವಿಮರ್ಶೆಗಳ ಬಗ್ಗೆ ಕಿಡಿಕಾರುವುದು ಸಹಜ ಪ್ರತಿಕ್ರಿಯೆಯೇ ಆಗಿರುತ್ತಿತ್ತು. ನಂತರ ಈ ಕುರಿತಾಗಿ ನಾನು ಆಳವಾಗಿ ಯೋಚಿಸಿದಾಗ ನನ್ನ ಬುದ್ಧಿಗೆ ಹೊಳೆದದ್ದು ಇದು: ವಾಸ್ತವವಾಗಿ ಹ್ಯಾಮ್ಲೆಟ್ ನಾಟಕದ ಪ್ರಥಮ ಪ್ರದರ್ಶನಗಳಾದಾಗ ಅನೇಕ ವಿಮರ್ಶಕರು ಅಶೋಕನ ಸೃಜನಶೀಲತೆಯನ್ನು ಶ್ಲಾಘಿಸಿಯೇ ಬರೆದಿದ್ದರು.ಈಗ ಅಪಸ್ವರವೆದ್ದಿರುವುದುನಂತರದ ಯಾವುದೋ ಒಂದು ಪ್ರದರ್ಶನವನ್ನು ನೋಡಿದ ಮೇಲೆ. ವಾಸ್ತವವಾಗಿ ಆ ಪ್ರದರ್ಶನ ಮೊದಲಿನ ಪ್ರದರ್ಶನಗಳಷ್ಟು ಪ್ರಭಾವಿಯಾಗಿರಲಿಲ್ಲ ಅನ್ನುವುದೂ ಸತ್ಯಸಂಗತಿಯೇ ಆಗಿತ್ತು. ಕಾರಣ ಕೆಲ ಮುಖ್ಯ ಪಾತ್ರಧಾರಿಗಳ ಬದಲಾವಣೆಯಾಗಿ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ತಾಲೀಮು ದೊರಕದೇ ಇದ್ದದ್ದು! ಒಂದು—ಒಂದೂವರೆ ತಿಂಗಳು ತಾಲೀಮು ನಡೆಸಿ ಪಾತ್ರ ನಿರ್ವಹಿಸುವ ನಟರ ಬದಲಿಗೆ ನಾಲ್ಕಾರು ದಿನಗಳಲ್ಲಿ ಪಾತ್ರನಿರ್ವಹಣೆಗೆ ಸಿದ್ಧರಾದ ನಟರು ಬಂದರೆ ಗುಣಮಟ್ಟ ಮುಕ್ಕಾಗದೇ ಇರುತ್ತದೆಯೇ? ಮುಖ್ಯ ಪಾತ್ರ ನಿರ್ವಹಿಸಲು ಅಗತ್ಯವಾದ ಪೂರ್ವಸಿದ್ಧತೆಗಳಿಲ್ಲದೆ ರಂಗವನ್ನೇರುವ ನಟ ಎಷ್ಟರಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ? ಯಾವುದೇ ಅನಿವಾರ್ಯಗಳಿರಲಿ,ಯಾವುದೇ ಒತ್ತಡವಿರಲಿ, ಯಾವುದೇ ಸಮಸ್ಯೆ ಇರಲಿ ಅದು ಪ್ರೇಕ್ಷಕ ಪ್ರಭುವಿಗೆ ಸಂಬಂಧಿಸಿದ್ದಲ್ಲ! ಪ್ರೇಕ್ಷಕರಿಗೆ ಬೇಕಿರುವುದು ಒಳ್ಳೆಯ ಪ್ರದರ್ಶನವೇ ಹೊರತು ನಮ್ಮ ಸಬೂಬು—ಸಮಜಾಯಿಷಿಗಳಲ್ಲ! ಅಂದರೆ ಒಂದು ನಾಟಕದ ಎಷ್ಟೇ ಪ್ರದರ್ಶನಗಳಾಗಲೀ ಒಂದೇ ಗುಣಮಟ್ಟವನ್ನು ಕಾಯ್ದುಕೊಂಡು ಬರುವುದು ತಂಡದ ಪ್ರಾಥಮಿಕ ಜವಾಬ್ದಾರಿ! ಕಾರಂತ ಮೇಷ್ಟ್ರ ಮಾತುಗಳು ನೆನಪಿನ ಗಣಿಯಿಂದ ಜಿಗಿದೆದ್ದು ಬಂದವು: ” ನಾಟಕದ ಪ್ರತಿ ಪ್ರಯೋಗವನ್ನೂ ಪ್ರಥಮ ಪ್ರದರ್ಶನದಂತೆಯೇ ಭಾವಿಸಬೇಕು! ಹತ್ತಾರು ಬಾರಿ ಮಾಡಿದ್ದೇವೆಂಬ ಉದಾಸೀನವಾಗಲೀ ಅತಿಯಾದ ಆತ್ಮವಿಶ್ವಾಸವಾಗಲೀ ರಂಗಭೂಮಿಯಲ್ಲಿ ಎಷ್ಟು ಮಾತ್ರಕ್ಕೂ ಸಲ್ಲ!” ಹೀಗೆ ಚಿಂತಿಸುತ್ತಿದ್ದಾಗಲೇ ನಾನು ನಾಲ್ಕಾರು ಬಾರಿ ನೋಡಿದ ಜಬ್ಬಾರ್ ಪಟೇಲ್ ರ ಘಾಶೀರಾಂ ಕೊತ್ವಾಲ್ ನಾಟಕ ನೆನಪಾಯಿತು. ನಾನು ಆ ನಾಟಕದ ಪ್ರಾರಂಭದ ದೆಸೆಯ ಒಂದು ಪ್ರದರ್ಶನವನ್ನೂ 80-90 ರ ಆಜುಬಾಜಿನ ಒಂದು ಪ್ರದರ್ಶನವನ್ನೂ ನೂರಾರು ಪ್ರದರ್ಶನಗಳ ನಂತರ ಒಮ್ಮೆಯೂ ನೋಡಿದ್ದೆ. ಒಂದು ಸೂಜಿಮೊನೆಯಷ್ಟೂ ಪ್ರದರ್ಶನಗಳ ನಡುವೆ ವ್ಯತ್ಯಾಸವಿರಲಿಲ್ಲ.ಚಿಕ್ಕ ಚಿಕ್ಕ ಪಾತ್ರಗಳ ನಟರೂ ಬದಲಾದಂತೆ ಅನ್ನಿಸಲಿಲ್ಲ…ಬದಲಾಗಿದ್ದರೂ ಗಮನಕ್ಕೆ ಬರುವಂತಿರಲಿಲ್ಲ! ‘ನಖಶಿಖಾಂತ’ ಅಭಿನಯಿಸುತ್ತಿದ್ದ ಮೋಹನ್ ಅಗಾಶೆಯವರಾಗಲೀ ಘಾಶೀರಾಂ ಪಾತ್ರಧಾರಿಯಾಗಲೀ ಅದೇ ತನ್ಮಯತೆಯಿಂದ ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ಮೇಳದವರಾದರೂ ಅಷ್ಟೆ: ಒಂದು ಹೆಜ್ಜೆ ಎಲ್ಲಿಯೂ ತಪ್ಪುತ್ತಿರಲಿಲ್ಲ..ಒಂದು ಅಪಸ್ವರವೂ ಕಿವಿಗಪ್ಪಳಿಸುತ್ತಿರಲಿಲ್ಲ! ಈ ವೃತ್ತಿಪರತೆ ರಂಗಭೂಮಿಯಂತಹ ಜೀವಂತ ಪ್ರಕ್ರಿಯೆಯ ಜೀವಧಾತು! ನಮ್ಮ ಹವ್ಯಾಸೀ ರಂಗಭೂಮಿ ಈ ಒಂದು ವಿಚಾರದಲ್ಲಿ ಇನ್ನೂ ರೂಢಿಸಿಕೊಳ್ಳಬೇಕಾದ್ದು ಸಾಕಷ್ಟಿದೆ ಅನ್ನಿಸತೊಡಗಿತು.ಕೇವಲ ಎರಡು—ಮೂರು ಪ್ರದರ್ಶನಗಳಾಗುತ್ತಿದ್ದಂತೆ ಮುಖ್ಯ ಪಾತ್ರಧಾರಿಗಳೇ ಬದಲಾಗಿಬಿಟ್ಟರೆ ಪ್ರದರ್ಶನ ಪ್ರಭಾವಿಯಾಗುವುದಾದರೂ ಹೇಗೆ? …
ಇಷ್ಟೆಲ್ಲವನ್ನೂ ಅಶೋಕನಿಗೆ ವಿವರಿಸಿ ಹೇಳಿದೆ ಕೂಡಾ. ಆದರೂ ಯಾಕೋ ಅವನಿಗೆ ಸಮಾಧಾನವಾದಂತೆ ಕಾಣಲಿಲ್ಲ.ವಿಮರ್ಶಕರದು ಅವರ ಸ್ವಂತ ಅಭಿಪ್ರಾಯವೇ ಹೊರತು ಅದಕ್ಕೆ ನಾನು ಬಾಧ್ಯನಾಗಲೀ ಕಾರಣಕರ್ತನಾಗಲೀ ಅಲ್ಲವಾದ್ದರಿಂದ ನಾನೂ ತಲೆ ಕೆಡಿಸಿಕೊಳ್ಳದೇ ಸುಮ್ಮನಾಗಿಬಿಟ್ಟೆ.

ಇದು ಒಂದು ಬದಿಯಲ್ಲಿ ಹೊತ್ತಿದ ಅಸಮಾಧಾನದ ಕಿಡಿಯಾದರೆ ಮತ್ತೊಂದೆಡೆ ಮತ್ತೊಂದು ಪತ್ರಿಕಾ ವಿಮರ್ಶೆ ನನ್ನ ಪಾಲಿಗೆ ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡಿತು! ಉದ್ಭವ ನಾಟಕದ ಪ್ರಥಮ ಪ್ರದರ್ಶನಗಳ ವೇಳೆಯಲ್ಲೇ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಒಂದು ವಿಮರ್ಶೆ ಪ್ರಕಟವಾಯಿತು. ಉದ್ಭವ ಕಾದಂಬರಿ—ನಾಟಕಗಳ ಕೇಂದ್ರದಲ್ಲಿರುವುದು ಒಂದು ರಸ್ತೆ ಅನ್ನುವುದನ್ನು ಈಗಾಗಲೇ ನಿಮ್ಮ ಗಮನಕ್ಕೆ ತಂದಿದ್ದೇನಷ್ಟೇ. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಆ ವಿಮರ್ಶಕರು, “the original novel is as bald as the road itself but prabhu’s dramatization is brilliant” ಎಂದು ಬರೆದುಬಿಟ್ಟರು! ವೈಕುಂಠರಾಜು ಅವರು ಸ್ವಭಾವತಃ ಸ್ವಲ್ಪ ಮುಂಗೋಪಿಗಳು..ಈ ತರಹದ ಟೀಕೆಗಳನ್ನು ಎಷ್ಟುಮಾತ್ರಕ್ಕೂ ಸಹಿಸುವವರಲ್ಲ. ಆದರೆ ಅವರ ಈ ಸಿಟ್ಟಿಗೆ ಪರೋಕ್ಷವಾಗಿ ಗುರಿಯಾದವನು ನಾನು! “ನೋಡೋ..ಹ್ಯಾಗೆ ಬರೆದುಬಿಟ್ಟಿದಾನೆ! ಎಲ್ಲಾ ನಿಂದೇ ಅಂತೆ! ನನ್ನ ಕಾದಂಬರಿ ಬೋಳಂತೆ! ಎಂಥಾ ತಲೆಹರಟೆ ಮಾತು ನೋಡು…ಅಲ್ವೋ..ನನ್ನ ಕಾದಂಬರಿ ಇಲ್ಲದಿದ್ರೆ ನೀನು ನಾಟಕ ಮಾಡೋಕ್ಕಾಗ್ತಿತ್ತೇನೋ?.ಕಚ್ಚಾ ಸಾಮಗ್ರಿ ನಾನು ತಾನೇ ಕೊಟ್ಟವನು? ಅಷ್ಟೂ ಅರ್ಥವಾಗೋದು ಬೇಡವಾ ಆ ಮೂರ್ಖನಿಗೆ?” ಎಂದು ಮೊದಲಾಗಿ ಕಿಡಿ ಕಾರತೊಡಗಿದರು. ನಾನೂ ನನಗೆ ತೋಚಿದಂತೆಲ್ಲಾ ಸಮಾಧಾನ ಹೇಳಿದೆ…”ಆ ವಿಮರ್ಶೆಯನ್ನು ಅಷ್ಟು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ, ಉದ್ಭವ ಒಂದು ಮೌಲಿಕ ಕಾದಂಬರಿಯಾದ್ದರಿಂದಲೇ ನಾನು ನಾಟಕ ಮಾಡಿರುವುದು, ಒಂದೇ ಒಂದು ಸಾಲು ವಿಮರ್ಶೆಯಿಂದ ಕಾದಂಬರಿಯ ಘನತೆ ಕುಗ್ಗುವುದಿಲ್ಲ..”ಎಂದೆಲ್ಲಾ ಸಮಜಾಯಿಷಿ ನೀಡಿದೆ. ಆದರೂ ಯಾಕೋ ಅವರಿಗೆ ಸಮಾಧಾನವಾದಂತೆ ತೋರಲಿಲ್ಲ..ಅವರ ಸಿಟ್ಟಿನ ಬೆಂಕಿಗೆ ಮತ್ತೆರಡು ಸಿಗರೇಟ್ ಗಳು ಆಹುತಿಯಾದವು. ಒಂದು ಕ್ಷಣ ಬಿಟ್ಟು ಮತ್ತೆ ಕೆರಳಿ ನುಡಿದರು ರಾಜು: ” ಇರಲಿ ಬಿಡು..ನೀನೇನು ನನ್ನ ಕಾದಂಬರೀನ ನಾಟಕ ಮಾಡೋದು..ನಾನೇ ನೇರವಾಗಿ ನಾಟಕಾನೇ ಬರೆದುಬಿಡ್ತೀನಿ! ಏನಂತೀಯಾ? ಆಗೋಲ್ವೇನೋ? ನನ್ನ ಕೈಲಿ ನಾಟಕ ಬರೆಯೋಕೆ ಆಗಲ್ಲವೇನೋ?”

ನಾನು:
“ಚೆನ್ನಾಗಿ ಹೇಳಿದ್ರಿ! ನಿಮಗೆ ನಾಟಕ ಬರೆಯೋಕೆ ಆಗದೇ ಏನು ಸರ್? ಎಷ್ಟು ವರ್ಷದಿಂದ ರಂಗಭೂಮಿ ಜತೆ ಸಂಪರ್ಕ ಇಟ್ಟುಕೊಂಡಿರೋರು ನೀವು! ನೀವು ಇದುವರೆಗೆ ಆ ಕಡೆ ಗಮನ ಕೊಟ್ಟಿರಲಿಲ್ಲ ಅಷ್ಟೇ..ಬರೀರಿ ಸರ್..ನೀವು ನಾಟಕ ಬರೀರಿ” ಎಂದು ನಾನೂ ಅವರಲ್ಲಿ ವಿಶ್ವಾಸ ತುಂಬುವಂತೆ ಒಂದೆರಡು ಮಾತು ಹೇಳಿದೆ. ಅವರ ಮುಖದಲ್ಲಿ ವ್ಯಂಗ್ಯ—ತಿರಸ್ಕಾರ—ಹಮ್ಮುಗಳೆಲ್ಲವೂ ಬೆರೆತ ಒಂದು ನಗು ಮೂಡಿ ಮಾಯವಾಯಿತು. ಹಾಗೆ ನಕ್ಕು ಸುಮ್ಮನಾಗಲಿಲ್ಲ ರಾಜು! ಇದಾದ ಕೆಲವೇ ದಿನಗಳಲ್ಲಿ ಅವರ ಪ್ರಥಮ ನಾಟಕ ‘ಸಂದರ್ಭ’ ಸಿದ್ಧವಾಗಿ ಹೋಯಿತು! ಅದರ ಬೆನ್ನಿಗೇ ಮತ್ತೂ ನಾಲ್ಕಾರು ನಾಟಕಗಳು ಅವರಿಂದ ರಚಿತವಾಗಿ ಹೊರಬಂದವು! ಹೀಗೆ ಮತ್ತೊಬ್ಬ ನಾಟಕಕಾರನ ‘ಉದ್ಭವ’ಕ್ಕೆ ಪರೋಕ್ಷವಾಗಿ ನಾನು ಕಾರಣೀಭೂತನಾದರೂ ನನ್ನ ಮೇಲೆ ಇದರಿಂದಾದ್ದು ಮಾತ್ರ ವಿಪರೀತ ಪರಿಣಾಮ!ಆ ಎಲ್ಲಾ ವಿವರಗಳನ್ನು ಮುಂದೆ ದಾಖಲಿಸುತ್ತೇನೆ. ಏನೇ ಆಗಲಿ, ಹೊಗಳಿಕೆ—ಮೆಚ್ಚುಗೆಗಳು ಈ ಪರಿಯಾಗಿಯೂ ಒಬ್ಬನ ಮೇಲೆ ಪರಿಣಾಮ ಬೀರಬಲ್ಲುದೇ ಎಂದು ನೆನೆದು ತುಂಬಾ ಸೋಜಿಗವಾಯಿತು.ಈ ಹೊಗಳಿಕೆಯೂ ಕೂಡಾ ಎರಡಲಗಿನ ಖಡ್ಗವೇ ಸರಿ! ಕೆಲವೊಮ್ಮೆ ಒಳಗಿನಿಂದ ‘ಒಳಗ’ನ್ನು ಕತ್ತರಿಸುತ್ತದೆ;ಕೆಲವೊಮ್ಮೆ ಹೊರಗಿನಿಂದಲೇ ನಮ್ಮನ್ನು ತುಂಡರಿಸಿ ಬಿಸಾಕುತ್ತದೆ! ಹೀಗಿರುವಾಗ “ಹೊಗಳಿ ಹೊಗಳಿ ಎನ್ನ ಹೊನ್ನಶೂಲಕ್ಕೇರಿಸದಿರಿ” ಎಂದು ಅಲವತ್ತುಕೊಳ್ಳದೆ ಬೇರೆ ಮಾರ್ಗವಾದರೂ ಏನಿದೆ ನನಗೆ?!!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

April 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: