ಶ್ರೀನಿವಾಸ ಪ್ರಭು ಅಂಕಣ: ಬಾಳೊಂದು ಭಾವಗೀತೆ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 106

ದೂರದರ್ಶನ ಬಿಟ್ಟು ಹೊರಬರುತ್ತಿದ್ದಂತೆ ಅಭಿನಯಿಸಿದ ಹಲವಾರು ಧಾರಾವಾಹಿಗಳಲ್ಲಿ ʻಚಿಗುರುʼ ಪ್ರಮುಖವಾದುದು. ʻಚಿಗುರುʼ ಸಾಪ್ತಾಹಿಕ ಧಾರಾವಾಹಿಯನ್ನು ಬರೆದು ನಿರ್ದೇಶಿಸಿದವರು ಬಿ. ಸುರೇಶ. ಇಂದು ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ನಮ್ಮ ಪೀಳಿಗೆಯ ಅನೇಕ ರಂಗಕರ್ಮಿಗಳಿಗೆ – ಬರಹಗಾರರಿಗೆ ಸದಾ ಒಂದಲ್ಲ ಒಂದು ರೀತಿಯ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿ, ನೆರವಾಗುತ್ತಾ ಬಂದಿರುವ ವಿಜಯಮ್ಮ ಅವರ ಸುಪುತ್ರ ಬಿ. ಸುರೇಶ ತುಂಬಾ ಪ್ರತಿಭಾವಂತ ನಟ, ನಿರ್ದೇಶಕ, ಸಂವೇದನಾಶೀಲ ಬರಹಗಾರ.

ಇವರು ʻಅಭಿನಯ ತರಂಗʼ ನಾಟಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳಿಂದಲೇ – ಅಂದರೆ 80ರ ದಶಕದಿಂದಲೇ ನನಗೆ ಪರಿಚಿತರು ಹಾಗೂ ನನ್ನ ವಿದ್ಯಾರ್ಥಿ ಕೂಡಾ. ʻಅಭಿನಯ ತರಂಗʼ ವಿದ್ಯಾರ್ಥಿಗಳಿಗೆ ಆ ದಿನಗಳಲ್ಲಿ ನಾನು ಮಾಡಿಸಿದ ʻಬಂದಾ ಬಂದಾ ಸರದಾರʼ ನಾಟಕದಲ್ಲಿ ಕೇಂದ್ರ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದರು ಕೂಡಾ. ಪ್ರಾರಂಭದ ದಿನಗಳಲ್ಲಿ ರಂಗಭೂಮಿಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ತೊಡಗಿಕೊಂಡು ನಾಟಕಗಳನ್ನು ರಚಿಸಿ ರಂಗಕ್ಕೆ ಅಳವಡಿಸಿಕೊಳ್ಳುತ್ತಾ ನಂತರ ನಿಧಾನವಾಗಿ ತಮ್ಮ ಕಾರ್ಯಕ್ಷೇತ್ರವನ್ನು ಕಿರುತೆರೆ – ಸಿನೆಮಾ ರಂಗಕ್ಕೂ ವಿಸ್ತರಿಸಿಕೊಂಡು ಅನೇಕ ಅರ್ಥಪೂರ್ಣ ಧಾರಾವಾಹಿಗಳನ್ನೂ ಚಲನಚಿತ್ರಗಳನ್ನೂ ನಿರ್ಮಿಸಿ – ನಿರ್ದೇಶಿಸಿ ಕನ್ನಡ ಜನತೆಗೆ ಅರ್ಪಿಸಿದ್ದಾರೆ.

ಸುರೇಶರ ಪತ್ನಿ ಶೈಲಜಾ ನಾಗ್ ಅವರೂ ಸಹಾ ಪ್ರತಿಭಾವಂತ ನಟಿ, ಸಂಘಟನಾ ಚತುರೆ. ಇವರ ಅನೇಕ ಧಾರಾವಾಹಿಗಳಲ್ಲಿ ಹಾಗೂ ಚಲನಚಿತ್ರಗಳಲ್ಲಿ ಮುಖ್ಯಪಾತ್ರಗಳನ್ನು ನಿರ್ವಹಿಸಿರುವುದು ನನಗೆ ಅತೀವ ಸಂತಸದ ಸಂಗತಿ. ಆ ಧಾರಾವಾಹಿಗಳ ದೊಡ್ಡ ಪಟ್ಟಿಯಲ್ಲಿ ಬರುವ ಮೊದಲ ಹೆಸರು ʻಚಿಗುರುʼ – 1998ರಲ್ಲಿ ದೂರದರ್ಶನದಲ್ಲಿ ಪ್ರಸಾರಗೊಂಡ ಸಾಪ್ತಾಹಿಕ ಧಾರಾವಾಹಿ. ಸದಾ ʻಹೊಸತನʼಕ್ಕಾಗಿ ತುಡಿಯುವ ಸುರೇಶರಿಗೆ ಚರ್ವಿತಚರ್ವಣ ಕಥಾ ಹಂದರಗಳ ಜಾಡಿನಿಂದ ಹೊರಬಂದು ಅರ್ಥಪೂರ್ಣ ಪ್ರಸ್ತುತಿಗಳನ್ನು ಕಟ್ಟಿಕೊಡುವುದರಲ್ಲೇ ವಿಶೇಷ ಆಸಕ್ತಿ.

ಅವರೇ ನೆನಪಿಸಿಕೊಂಡಂತೆ, ʻಚಿಗುರುʼ ಧಾರಾವಾಹಿಯನ್ನು ʻಟು ಕಿಲ್ ಎ ಮಾಕಿಂಗ್ ಬರ್ಡ್ʼ ಎಂಬ ಕಾದಂಬರಿಯ ಸ್ಛೂರ್ತಿಯಿಂದ – ಹಲವಾರು ಅಗತ್ಯ ಬದಲಾವಣೆಗಳೊಂದಿಗೆ ಕನ್ನಡದಲ್ಲಿ ಕಟ್ಟಲಾಗಿತ್ತು. ಮಕ್ಕಳ ಸಾಹಸವೇ ಕತೆಯ ಹೂರಣವಾಗಿದ್ದು ʻಏಕ ಪೋಷಕಿʼ ಅನುಭವಿಸುವ ಸಂಕಷ್ಟಗಳು ಕತೆಯ ಬೆನ್ನುಹುರಿ ಆಗಿತ್ತುʼ. ಈ ಧಾರಾವಾಹಿಯಲ್ಲಿ ಮಕ್ಕಳನ್ನು ಹುಡುಕಿಕೊಂಡು ಬರುವ ತಂದೆಯ ಪಾತ್ರವನ್ನು ನಾನು ನಿರ್ವಹಿಸಿದ್ದೆ. ನನ್ನ ಪತ್ನಿಯ ಪಾತ್ರವನ್ನು ಪ್ರತಿಭಾವಂತ ನಟಿ ತಾರಾ ನಿರ್ವಹಿಸಿದ್ದರು. ಬಾಲಕಲಾವಿದರಾದ ಕೀರ್ತನಾ ಹಾಗೂ ಸಂತೋಷ್ ನಮ್ಮ ಮಕ್ಕಳಾಗಿ ಅಭಿನಯಿಸಿದ್ದರು. (ಮಹಾ ಮಾತುಗಾರ್ತಿ – ಚಿನಕುರುಳಿ – ಅಭಿನಯ ಚತುರೆ ಕೀರ್ತನಾ ಈಗ ಮಂಡ್ಯ ಜಿಲ್ಲೆಯ ಡಿಸಿ ಆಗಿರುವ ಸಂಗತಿಯನ್ನು ಸುರೇಶ ನೆನಪಿಸಿಕೊಂಡರು!) ಚಿಕ್ಕ ಸುರೇಶ ಹಾಗೂ ʻಮೂಗುʼ ಸುರೇಶ ಕೂಡಾ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದರು. ಆ ಸಮಯದ ಒಂದು ಅತ್ಯಂತ ಜನಪ್ರಿಯ ಧಾರಾವಾಹಿಯಾಗಿದ್ದ ʻಚಿಗುರುʼ ಆ ಕಾರಣಕ್ಕಾಗಿಯೇ ಎರಡು ಬಾರಿ ʻವಿಸ್ತರಣಾ ಪ್ರಸಾರʼದ ಹೆಮ್ಮೆಯ ಅವಕಾಶವನ್ನೂ ಗಳಿಸಿಕೊಂಡಿತು! ಬಿ. ಸುರೇಶರ ಅಗಾಧ ಪ್ರತಿಭೆ ಹೀಗೆ ʻಚಿಗುರಿʼನಲ್ಲೇ ಪ್ರಕಾಶಕ್ಕೆ ಬಂದು ಅವರು ಮುಂದೆ ಒಂದು ದೊಡ್ಡ ಶಕ್ತಿಯಾಗಿ ಬೆಳೆಯಲೂ ಕಾರಣವಾಯಿತು.

ಪ್ರೀತಿಯ ʻಅಕ್ಕʼ ಶ್ಯಾಮಲಾ ಜಿ. ಭಾವೆ ಅವರಿಗಾಗಿ ʻನಾದಲೋಕʼ ಧಾರಾವಾಹಿಯನ್ನು ಸಿದ್ಧಪಡಿಸಿಕೊಡುವ ವೇಳೆಯಲ್ಲಿಯೇ ಇನ್ನೂ ಒಂದಷ್ಟು ಬೇರೆ ಬೇರೆ ಚಿತ್ರೀಕರಣದ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದರಿಂದ ʻನಾದಲೋಕʼದ ʻಸಂಕಲನʼ ಕಾರ್ಯಕ್ಕೆ ಸಮಯ ಹೊಂದಿಸಿಕೊಳ್ಳುವುದೇ ಕಷ್ಟವಾಗಿತ್ತು. ನಿಗದಿತ ಸಮಯದೊಳಗೆ ಸಂಕಲನ ಮುಗಿಸಿ ಕೊಡಬೇಕಾದ ಒತ್ತಡ ಬೇರೆ ಕಾಡುತ್ತಿತ್ತು! ನಾನು ಚಿತ್ರೀಕರಣ ಮುಗಿಸಿಕೊಂಡು ರಾತ್ರಿ ಬರುವ ವೇಳೆಗೆ ಸಂಕಲನಕಾರರು ಹೊರಟುಹೋಗಿರುತ್ತಿದ್ದರು. ಹೀಗಾಗಿ ವಿಧಿಯಿಲ್ಲದೆ ನಾನೇ ಸಂಕಲನವನ್ನೂ ಮಾಡಲು ಪ್ರಾರಂಭಿಸಿದೆ. ಆ ಸಂದರ್ಭದಲ್ಲಿ ರಾಜಾಜಿನಗರದ ಶಶಿಕಾಂತ್ ಸ್ಟುಡಿಯೋದಲ್ಲಿ ಅಕಸ್ಮಾತ್ತಾಗಿ ನನಗೆ ಪರಿಚಯವಾದ ತಿಮ್ಮನಗೌಡ ಹಾಗೂ ಅವನ ಮೂಲಕ ಪರಿಚಯವಾದ ಅಶೋಕ್ ಜೈನ್ ಎಂಬ ಹುಡುಗರು ಮುಂದಿನ ದಿನಗಳಲ್ಲಿ ನಮ್ಮ ಕುಟುಂಬಕ್ಕೆ ಪರಮಾಪ್ತರಾಗಿ ಬಿಟ್ಟರು.

ಕಂಚಿನ ಕಂಠದ ಈ ಉತ್ಸಾಹೀ ತರುಣ ತಿಮ್ಮಣ್ಣ ಮಾಜಿ ಎಂಎಲ್‌ಎ ಭೂಪತಿಯವರ ತಮ್ಮ. ಆ ಕಾಲಕ್ಕೆ ತಮ್ಮ ಸಮಾಜಮುಖಿ, ಪ್ರಗತಿಪರ ಧೋರಣೆಗಳಿಂದ ಗಮನ ಸೆಳೆದಿದ್ದ ಭೂಪತಿಯವರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದವರು. ಅವರ ಪತ್ನಿ ಡಾ. ವಸುಂಧರಾ ಭೂಪತಿಯವರೂ ಸಹಾ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅಂತೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಕೃಷಿ ನಡೆಸಿರುವಂಥವರು… ʻನಾದಲೋಕʼದ ಸಂಕಲನದ ಸಂದರ್ಭದಲ್ಲಿ ನನ್ನ ಸಂಪರ್ಕಕ್ಕೆ ಬಂದ ತಿಮ್ಮಣ್ಣ ಮುಂದಿನ ದಿನಗಳಲ್ಲಿ ನನ್ನ ಬಲಗೈ ಬಂಟನೇ ಆಗಿಬಿಟ್ಟ.

ʻನಾದಲೋಕʼ ಧಾರಾವಾಹಿಯ ನಿರ್ಮಾಣದ ಸಂದರ್ಭದಲ್ಲೇ ಕರ್ನಾಟಕ ಸಂಗೀತ ಕ್ಷೇತ್ರದ ಹಲವಾರು ಪ್ರತಿಭಾವಂತ ಕಲಾವಿದರ ಪರಿಚಯವಾಯಿತು. ಇವರ ಯಾದಿಯಲ್ಲಿ ಬರುವ ಮೊದಲ ಹೆಸರುಗಳು ವಿದುಷಿ ನಾಗಮಣಿ ಶ್ರೀನಾಥ್ ಹಾಗೂ ವಿದುಷಿ ಎಂ.ಎಸ್‌. ಶೀಲಾ. ಆ ಕಾಲದಲ್ಲಿ ನಾಗಮಣಿ ಶ್ರೀನಾಥ್ ಹಾಗೂ ಶ್ಯಾಮಲಾ ಜಿ. ಭಾವೆಯವರು ನಡೆಸಿಕೊಡುತ್ತಿದ್ದ ನಮ್ಮ ಎರಡೂ ಸಂಗೀತ ಪದ್ಧತಿಗಳ ಜುಗಲ್ ಬಂದಿ ಕಾರ್ಯಕ್ರಮ ಬಹುಜನಪ್ರಿಯವಾಗಿತ್ತು.

ನಾಗಮಣಿ ಶ್ರೀನಾಥ್ ಅವರಿಗೆ ಕರ್ನಾಟಕದ ವಾಗ್ಗೇಯಕಾರರನ್ನು ಪರಿಚಯಿಸಿಕೊಡುವಂತಹ ಧಾರಾವಾಹಿಯೊಂದನ್ನು ನಿರ್ಮಿಸಿಕೊಡಲು ದೂರದರ್ಶನದವರು ಪರವಾನಗಿ ನೀಡಿದ್ದರು. ಅದನ್ನು ನಿರ್ದೇಶಿಸಿ ಕೊಡಲು ಸಾಧ್ಯವೇ? ಎಂದು ನಾಗಮಣಿಯವರು ನನ್ನನ್ನು ಕೇಳಿಕೊಂಡಾಗ ಸಂತೋಷದಿಂದ ಒಪ್ಪಿಕೊಂಡೆ. ವಾಗ್ಗೇಯಕಾರರೆಂದರೆ ʻಮಾತುʼ – ʻಧಾತುʼ – ಎರಡನ್ನೂ ರಚಿಸುವವರು ಎಂದರ್ಥ. ಅಂದರೆ ಸಂಯೋಜನೆಯ ಸಾಹಿತ್ಯ ಹಾಗೂ ಆ ಸಾಹಿತ್ಯಕ್ಕೆ ಸಂಗೀತದ ಲಿಪಿ – ಎರಡನ್ನೂ ಸಿದ್ಧಪಡಿಸಿಕೊಡುವವರು ವಾಗ್ಗೇಯಕಾರರು.

ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಮೈಸೂರು ಅರಸು ಮನೆತನದ ಜಯಚಾಮರಾಜ ಒಡೆಯರ್ ಅವರು, ಆಸ್ಥಾನ ಕಲಾವಿದರಾಗಿದ್ದ ಮೈಸೂರು ವಾಸುದೇವಾಚಾರ್ಯರು, ವೀಣೆ ಶೇಷಣ್ಣನವರು, ವೀಣಾ ವೆಂಕಟಸುಬ್ಬಯ್ಯನವರು, ಬಿಡಾರಂ ಕೃಷ್ಣಪ್ಪನವರು, ಟಿ. ಚೌಡಯ್ಯನವರು – ಮೊದಲಾದ ಶ್ರೇಷ್ಠ ವಾಗ್ಗೇಯಕಾರರ ಬದುಕು – ವ್ಯಕ್ತಿತ್ವ ಹಾಗೂ ಕೃತಿಗಳನ್ನು ಪರಿಚಯ ಮಾಡಿಕೊಡುವುದು ಈ ಮಾಲಿಕೆಯ ಮುಖ್ಯ ಉದ್ದೇಶವಾಗಿತ್ತು.

ಕೃತಿಗಳ ಗಾಯನ ಪ್ರಸ್ತುತಿಯನ್ನು ವಿದುಷಿ ನಾಗಮಣಿ ಶ್ರೀನಾಥ್ ಹಾಗೂ ಅವರ ಪತಿ ವಿದ್ವಾನ್ ಶ್ರೀನಾಥ್ ಅವರೇ ನಡೆಸಿಕೊಡುವವರಿದ್ದರು. ವ್ಯಕ್ತಿಚಿತ್ರಗಳು ಎಂದು ಕೇವಲ ಮಾತಿನ ಮಂಟಪ ಕಟ್ಟಿ ನೀರಸ ಪ್ರಸ್ತುತಿಯನ್ನು ನೀಡುವ ಬದಲು ವಾಗ್ಗೇಯಕಾರರ ಬದುಕಿನ ಪ್ರಮುಖ ಘಟ್ಟಗಳನ್ನು, ಅವರು ಬೆಳೆದುಬಂದ ಪರಿಯನ್ನು ಕೊಂಚ ನಾಟಕೀಯವಾಗಿ, ದೃಶ್ಯಗಳನ್ನು ಕಟ್ಟಿಕೊಡುತ್ತಾ ಪ್ರಸ್ತುತಪಡಿಸಿದರೆ ಹೆಚ್ಚು ಸ್ವಾರಸ್ಯಕರವಾಗಿರುತ್ತದೆಂದು ನಾನು ನಾಗಮಣಿಯವರಿಗೆ ಸೂಚಿಸಿದೆ. ಅವರೂ ಸಹಾ ಇದಕ್ಕೆ ಸಂತೋಷವಾಗಿ ಒಪ್ಪಿಕೊಂಡರು.

ವಾಗ್ಗೇಯಕಾರರುಗಳಿಗೆ ಸಂಬಂಧಪಟ್ಟ ಹಲವಾರು ಕೃತಿಗಳನ್ನು ಸಂಗ್ರಹಿಸಿಕೊಂಡು ರೂಪಕಗಳ ಚಿತ್ರಕಥೆಯನ್ನು ಸಿದ್ಧಪಡಿಸಿಕೊಂಡೆ. ಮೇಲುಕೋಟೆ ಹಾಗೂ ಮೈಸೂರುಗಳಲ್ಲಿ ಹಲವಾರು ದಿನಗಳ ಚಿತ್ರೀಕರಣ ನಡೆಯಿತು. ರಂಗಭೂಮಿಯ ಪ್ರತಿಭೆಗಳಾದ ಬಿ.ವಿ. ರಾಜಾರಾಂ, ನಳಿನಿ ಅಕ್ಕ, ಸಾಯಿಪ್ರಕಾಶ್ ಮೊದಲಾದವರು ಪ್ರಮುಖಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಇನ್ನು ನಾಗಮಣಿ ಶ್ರೀನಾಥ್ ಅವರ ಅಪೂರ್ವ ಗಾಯನ ಈ ಪ್ರಸ್ತುತಿಗಳ ಪ್ರಮುಖ ಆಕರ್ಷಣೆಯಾಗಿತ್ತು. ನಾಡಿನ ಹೆಮ್ಮೆಯ ಸಂಗೀತಗಾರ ವಿದ್ವಾನ್ ಆರ್.ಕೆ. ಪದ್ಮನಾಭ ಅವರೂ ಸಹಾ ಒಂದು ವಿಶೇಷ ಕೃತಿಯನ್ನು ಪ್ರಸ್ತುತಪಡಿಸಿದ್ದರು. ವೀಣೆ ಶೇಷಣ್ಣ ಅವರ ಕುರಿತ ರೂಪಕವನ್ನು ಸಿದ್ಧಪಡಿಸಲು ನಮಗೆ ವಿಶೇಷ ನೆರವು ನೀಡಿದವರು ಶೇಷಣ್ಣನವರ ಮರಿಮಗ ಮೈಸೂರು ವಿ. ಸುಬ್ರಹ್ಮಣ್ಯ ಅವರು; ಕನ್ನಡ ಆನರ್ಸ್ ಓದುವಾಗ ನನ್ನ ಸಹಪಾಠಿಯಾಗಿದ್ದವರು. ಕರ್ನಾಟಕದ ವಾಗ್ಗೇಯಕಾರರನ್ನು ಕುರಿತ ಈ ರೂಪಕ ಮಾಲಿಕೆ ಪಂಡಿತ ಪಾಮರರೆಲ್ಲರ ಮೆಚ್ಚುಗೆಗೆ ಪಾತ್ರವಾದುದಷ್ಟೇ ಅಲ್ಲ, ನನಗೂ ಅಪಾರ ಸಂತಸವನ್ನು ನೀಡಿತು.

ನಮ್ಮ ನಾಡಿನ ಮತ್ತೋರ್ವ ಶ್ರೇಷ್ಠ ಗಾಯಕಿ ಎಂ.ಎಸ್‌. ಶೀಲಾ ಅವರಿಗಾಗಿ ಕನ್ನಡ ರಾಜ್ಯೋತ್ಸವದ ಸಂದರ್ಭಕ್ಕಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ರೂಪಿಸಿಕೊಟ್ಟಿದ್ದೆ. ಈ ಕಾರ್ಯಕ್ರಮವನ್ನು ನಾವು ಚಿತ್ರೀಕರಿಸಿದ್ದು ಮಲ್ಲೇಶ್ವರದ ʻಅನನ್ಯʼ ಸಭಾಂಗಣದಲ್ಲಿ; ಆಗ ನಮಗೆ ಎಲ್ಲ ರೀತಿಯ ಸಹಕಾರ ನೀಡಿ ಪ್ರೋತ್ಸಾಹಿಸಿದವರು ʻಅನನ್ಯʼ ರಾಘವೇಂದ್ರರಾವ್ ಅಲಿಯಾಸ್ ರಾಘಣ್ಣ! ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಬಹುದೊಡ್ಡ – ಪರಿಚಿತ ಹೆಸರು ಅನನ್ಯ ರಾಘಣ್ಣ. ವಿಶೇಷವಾಗಿ ಸಂಗೀತ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ಪ್ರಯೋಗಶೀಲತೆಗೆ  ಸಂಬಂಧಿಸಿದಂತೆ ಹಾಗೂ ಯುವ ಪ್ರತಿಭಾವಂತ ಕಲಾವಿದರನ್ನು ಪ್ರೋತ್ಸಾಹಿಸಿ, ಬೆಳೆಸುವಲ್ಲಿ ರಾಘಣ್ಣನವರ ಪಾತ್ರ ಬಹು ದೊಡ್ಡದು. ಎಲೆಮರೆಯ ಕಾಯಂತೆ ತಮ್ಮ ಪಾಡಿಗೆ ತಾವು ಕಲಾಸೇವೆಯನ್ನು ನಡೆಸಿಕೊಂಡು ಬರುತ್ತಿರುವ ರಾಘಣ್ಣನವರ ವ್ಯಕ್ತಿತ್ವವೇ ʻಅನನ್ಯʼ!

ಈ ವೇಳೆಗಾಗಲೇ ಕನ್ನಡದಲ್ಲಿ ದೈನಂದಿನ ಮಹಾಧಾರಾವಾಹಿಗಳ ಯುಗ ಪ್ರಾರಂಭವಾಗಿ ಹೋಗಿತ್ತು. ಶ್ಯಾಂಸುಂದರ್ – ಗುರುದತ್ ಸೋದರರ ʻಮನೆತನʼ, ಆರ್‌.ಎನ್‌. ಜಯಗೋಪಾಲ್ ಅವರ ನಿರ್ದೇಶನದ ʻಜನನಿʼ, ಟಿ.ಎನ್. ಸೀತಾರಾಂ ಅವರ ʻಮಾಯಾಮೃಗʼ… ಇವೆಲ್ಲಾ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಟಿ.ಎನ್. ಸೀತಾರಾಂ ಅವರು ʻಮಾಯಾಮೃಗʼ ಮುಗಿಸಿ ʻಮನ್ವಂತರʼ ಧಾರಾವಾಹಿಯನ್ನು ಪ್ರಾರಂಭಿಸುವವರಿದ್ದರು. ʻಮಾಯಾಮೃಗʼ ಧಾರಾವಾಹಿ ಅದಾವ ಪರಿಯಲ್ಲಿ ಕನ್ನಡ ಜನತೆಗೆ ಮೋಡಿ ಮಾಡಿಬಿಟ್ಟಿತ್ತೆನ್ನುವುದು ಊಹೆಗೂ ಮೀರಿದ್ದು! ಇಷ್ಟು ವರ್ಷಗಳ – ದಶಕಗಳ ನಂತರವೂ ಮಾಯಾಮೃಗದ ಜನಪ್ರಿಯತೆ ಕುಗ್ಗಿಲ್ಲ ಎಂದರೆ ಅದು ಬೀರಿರುವ ಪ್ರಭಾವ ಎಷ್ಟು ಗಾಢವಾದದ್ದು ಎನ್ನುವುದರ ಅರಿವಾಗುತ್ತದೆ! ನಮ್ಮ ಮನಸ್ಸುಗಳನ್ನೇ ನಮ್ಮೆದುರು ತೆರೆದಿಡುವ ರೀತಿಯಲ್ಲಿ ಪಾತ್ರಗಳನ್ನು ಸೃಷ್ಟಿಸುವ ಸೀತಾರಾಂ ಅವರ ಕಲೆಗಾರಿಕೆ… ನೇರ ಹೃದಯಕ್ಕೆ ನಾಟುವ ವಿಶಿಷ್ಟ ಶೈಲಿಯ ಮೊನಚು ಸಂಭಾಷಣೆಗಳ ಮಾತುಗಾರಿಕೆ… ರಂಜಿಸುತ್ತಲೇ ಹಗುರಾಗಿ ಚಾಟಿ ಬೀಸಿ ಎಚ್ಚರಿಸುವ ಹೊಣೆಗಾರಿಕೆ… ಸೀತಾರಾಂ ಅವರಿಗೆ  ಸೀತಾರಾಮರೇ ಸಾಟಿ!

ನಾನು ದೂರದರ್ಶನ ಬಿಟ್ಟಿದ್ದೇನೆ ಎಂಬ ಸುದ್ದಿ ಹರಡುತ್ತಿದ್ದಂತೆ ಅನೇಕ ಅವಕಾಶಗಳು ನನ್ನನ್ನು ಅರಸಿಕೊಂಡು ಬರಲಾರಂಭಿಸಿದವು. ಆರ್.ಎನ್. ಜಯಗೋಪಾಲ್ ಅವರ ʻಜನನಿʼಯಲ್ಲಿ ಒಂದು ಮುಖ್ಯಪಾತ್ರ ನಿರ್ವಹಿಸಲು ಕರೆ ಬಂದಿತು. ಪ್ರಸಿದ್ಧ ತಾರೆ ಭಾರತಿ ವಿಷ್ಣುವರ್ಧನ್ ಅವರು ಪ್ರಧಾನ ಭೂಮಿಕೆಯಲ್ಲಿದ್ದ ʻಜನನಿʼ ಆ ವೇಳೆಗಾಗಲೇ ಹಲವಾರು ಕಂತುಗಳ ಪ್ರಸಾರವನ್ನು ಪೂರೈಸಿ ಅಪಾರ ಜನಪ್ರಿಯತೆ ಗಳಿಸಿಕೊಂಡಿತ್ತು. ನೊಂದ ಹೆಣ್ಣೊಬ್ಬಳಿಗೆ ಆಶ್ರಯ ನೀಡಿ ಅವಳ ಕೈಹಿಡಿಯುವ ಆದರ್ಶ ವ್ಯಕ್ತಿಯೊಬ್ಬನ ಪಾತ್ರ ನಿರ್ವಹಣೆಗಾಗಿ ನನ್ನನ್ನು ಆಹ್ವಾನಿಸಿದಾಗ ಸಂತೋಷದಿಂದ ಒಪ್ಪಿಕೊಂಡೆ. ಆರ್‌.ಎನ್‌. ಜಯಗೋಪಾಲರಂತಹ ಹಿರಿಯ ಸಾಹಿತಿ – ನಿರ್ದೇಶಕರ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ದೊರೆತದ್ದು ಒಂದು ಸಂತಸದ ಸಂಗತಿಯಾದರೆ ಮಹಾಧಾರಾವಾಹಿ ಆದುದರಿಂದ, ಹಲವಾರು ತಿಂಗಳು ಅಥವಾ ವರ್ಷ ನಿರಂತರವಾಗಿ ಕೆಲಸ ದೊರೆಯುತ್ತದೆ ಎನ್ನುವ ಖುಷಿ ಮತ್ತೊಂದೆಡೆ!

ಒಂದೆರಡು ದಿನಗಳ ಚಿತ್ರೀಕರಣ ನಡೆಯುತ್ತಿದ್ದಂತೆ ಟಿ.ಎನ್. ಸೀತಾರಾಂ ಅವರ ʻಮನ್ವಂತರʼ ಧಾರಾವಾಹಿಯಲ್ಲಿ ಒಂದು ಮುಖ್ಯಪಾತ್ರ ನಿರ್ವಹಿಸಲು ಆಹ್ವಾನ ಬರಬೇಕೇ! ತಕ್ಷಣಕ್ಕೇ ಎರಡೂ ಧಾರಾವಾಹಿಗಳಿಗೆ ಹಲವಾರು ದಿನಗಳು ಚಿತ್ರೀಕರಣಕ್ಕೆ ಬೇಕಾದ್ದರಿಂದ ಎರಡೂ ಧಾರಾವಾಹಿಗಳಿಗೆ ಒಟ್ಟಿಗೆ ಸಮಯ ಹೊಂದಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ʻಜನನಿʼಯ ಚಿತ್ರೀಕರಣ ಅದಾಗಲೇ ಪ್ರಾರಂಭವೂ ಆಗಿಹೋಗಿದ್ದರಿಂದ ʻಮನ್ವಂತರʼದ ಅವಕಾಶವನ್ನು ಅನಿವಾರ್ಯವಾಗಿ ಕೈಬಿಡಬೇಕಾಗಿ ಬಂದು ಕೊಂಚ ನಿರಾಸೆಯಾಯಿತು. ಆದರೆ ಗೆಳೆಯ ಸೀತಾರಾಂ ಮುಂದೆ ಅದೇ ಧಾರಾವಾಹಿಯಲ್ಲಿ ಲಾಯರ್ ಪಾತ್ರವನ್ನು ನೀಡಿ ಆ ನಿರಾಸೆಯನ್ನು ಮರೆಸಿದರು. ಆ ಲಾಯರ್ ಪಾತ್ರವೂ ಸಹಾ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡು ಕಿರುತೆರೆಯಲ್ಲಿ ನನ್ನನ್ನು ಮುಂಚೂಣಿಯ ನಟನಾಗಿ ಸ್ಥಾಪಿಸಲು ನೆರವಾಯಿತು.

ʻಜನನಿʼಧಾರಾವಾಹಿಯಲ್ಲಿ ನನ್ನ ಪಾತ್ರವೂ ಸಹಾ ಪ್ರಾರಂಭದಿಂದಲೇ ಅಪಾರ ಜನಪ್ರೀತಿ ಗಳಿಸಿಕೊಂಡದ್ದು ಮತ್ತೂ ಒಂದು ಖುಷಿಯ ಸಂಗತಿಯಾಯಿತು. ಬೇರೆ ಕೆಲ ಸಾಪ್ತಾಹಿಕ ಧಾರಾವಾಹಿಗಳ ಚಿತ್ರೀಕರಣಕ್ಕೆಂದು ಗುಲ್ಬರ್ಗಾ – ಧಾರವಾಡ ಮೊದಲಾದ ಜಿಲ್ಲಾ ಪ್ರದೇಶಗಳಿಗೆ ಹೋಗಿದ್ದ ಸಂದರ್ಭದಲ್ಲಿ ನಮ್ಮ ʻಜನನಿʼ ಧಾರಾವಾಹಿ ಹಾಗೂ ನನ್ನ ಪಾತ್ರ ಗಳಿಸಿಕೊಂಡಿದ್ದ ಜನಪ್ರಿಯತೆ ಎಷ್ಟು ದೊಡ್ಡ ಮಟ್ಟದ್ದೆಂಬುದು ಪ್ರತ್ಯಕ್ಷ ಅನುಭವಕ್ಕೆ ಬಂದಿತು! ʻಸಿಂಹ ಸರss, ಆರಾಮಿದ್ದೀರೇನ್ರೀʼ ಎಂದು ನನ್ನ ಪಾತ್ರದ ಹೆಸರು ಹಿಡಿದೇ ಕರೆದು ಮಾತಾಡಿಸಿ ಅಭಿಮಾನ – ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. “ಜನನಿ ಸೀರಿಯಲ್ ಮಸ್ತ್ ಹೊಂಟೈತ್ರೀ” ಎಂದು ತಮ್ಮದೇ ಶೈಲಿಯಲ್ಲಿ ಮೆಚ್ಚಿ ನುಡಿದು ಬೆನ್ನುತಟ್ಟುತ್ತಿದ್ದರು.

ಚಿತ್ರೀಕರಣದ ಸಮಯದಲ್ಲೂ ಅಷ್ಟೇ; ಆರ್.ಎನ್‌. ಜಯಗೋಪಾಲ್ ಅವರು ಸಾಹಿತ್ಯ – ಭಾಷೆಗಳಿಗೆ ಒತ್ತುಕೊಟ್ಟು ಕಲಾವಿದರನ್ನು ತಿದ್ದುತ್ತಿದ್ದ ರೀತಿ ನನಗೆ ತುಂಬಾ ಹಿಡಿಸಿತ್ತು. ಅವರು ರಚಿಸಿರುವ ಅನೇಕಾನೇಕ ಮಧುರಾತಿ ಮಧುರ ಗೀತೆಗಳು ಕನ್ನಡಿಗರ ಹೃದಯಕ್ಕೆ ಲಗ್ಗೆಹಾಕಿ ಮನಸೂರೆಗೊಂಡಿವೆ. ʻಬಾಳೊಂದು ಭಾವಗೀತೆʼಯೆಂದು ಎಂದು ಹಾಡಿದ ಆರ್‌ಎನ್‌ಜೆ ಅವರ ವ್ಯಕ್ತಿತ್ವವಾದರೂ ಹಾಗೆಯೇ… ಭಾವಗೀತಾಸದೃಶ! ಅಬ್ಬರವಿಲ್ಲದ ಮೆಲುಮಾತು… ಎಲ್ಲರೊಂದಿಗೆ ಸೌಜನ್ಯಪೂರ್ಣ ನಡವಳಿಕೆ… ನಗುಮೊಗದ ನಿಗರ್ವಿ… ಅತ್ಯುತ್ತಮ  ಗೀತರಚನಕಾರ! ನಿರ್ದೇಶನದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದವರು ಆರ್‌ಎನ್‌ಜೆ… ಇಡೀ ದೃಶ್ಯವನ್ನು ಒಂದೇ ಶಾಟ್‌ನಲ್ಲಿ ಚಿತ್ರೀಕರಿಸುವ, ಆದರೆ ಏಕತಾನತೆ ನುಸುಳದಂತೆ ಕ್ಯಾಮರಾ ಹಾಗೂ ಕಲಾವಿದರನ್ನು ಸದಾ ಚಲನಶೀಲರಾಗಿಸುವ ಅವರ ಪ್ರಯೋಗಗಳು ಕಲಾವಿದರಿಗೆ ಸವಾಲೊಡ್ಡುತ್ತಾ ಖಷಿ ನೀಡುತ್ತಿದ್ದವು. ಮಂದಸ್ಮಿತೆ ಭಾರತಿ ಅವರೂ ಸಹಾ ಅಷ್ಟೇ ಸರಳ ಸ್ವಭಾವದವರು. ಜೊತೆಗೆ ಶ್ರೀನಾಥ್ ವಶಿಷ್ಟ, ಸಂಗೀತಾ, ದಿಲೀಪ್ ರಾಜ್, ರವಿಪ್ರಕಾಶ್, ಅಭಿನಯ… ಮುಂತಾದವರು ಇತರ ಮುಖ್ಯಪಾತ್ರಗಳಲ್ಲಿದ್ದರು.

ʻಜನನಿʼ ನಾನು ಅಭಿನಯಿಸಿದ ಮೊಟ್ಟಮೊದಲ ಮಹಾ ಧಾರಾವಾಹಿ; ಇದು ಕನ್ನಡಿಗರ ಅಪಾರ ಮೆಚ್ಚುಗೆಗಳಿಸಿ ಸಾವಿರದ ಗಡಿ ದಾಟಿ ವಿಜೃಂಭಿಸಿದ್ದು ನನಗೆ ಬಲು ಹೆಮ್ಮೆಯ ಸಂಗತಿ.

‍ಲೇಖಕರು avadhi

August 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Suresha B

    ನನ್ನ ಕೆಲಸಗಳನ್ನು ನೆನೆಸಿ ಕೆಲಸಾಲು ಬರೆದುದಕ್ಕೆ ಶರಣು ಶರಣೆನ್ನುವೆ, ಗುರುಗಳೇ…
    ನಿಮ್ಮ ಜೀವನಯಾನ ಓದುತ್ತಾ, ನಿಮ್ಮ ಬದುಕಿನ ಹಲವು ಸಂಗತಿ ತಿಳಿಯುತ್ತಾ, ನಮ್ಮ ಈ ಯಾನದಲ್ಲಿ ಬರಬಹುದಾದ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಪಡೆಯುತ್ತಿದ್ದೇನೆ.
    ಧನ್ಯವಾದಗಳು ಎಂಬುದು ತೀರಾ ಸವಕಲು ಪದವಾದೀತು. ನಿಮ್ಮ ಈ ಬರಹ ಸ್ಫೂರ್ತಿದಾಯಕ ಪಾಠವೇ ಆಗಿದೆ.
    – ಬಿ. ಸುರೇಶ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: