ಜಯಶ್ರೀನಿವಾಸ ರಾವ್ ಅನುವಾದಿಸಿದ ಆರು ಕವನಗಳು

ಎಸ್ಟೋನಿಯಾ ದೇಶದ ಕವಿ ಯುರ್ಗೆನ್ ರೂಸ್ತ ಅವರ (Jürgen Rooste) ಆರು ಕವನಗಳು

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

ಯುರ್ಗೆನ್ ರೂಸ್ತ ಅವರನ್ನು ಪ್ರಸಿದ್ಧವಾಗಿಸಿದ ಒಂದು ʻಕೈಪದವೆಂದರೆ ಅದು ʻಟ್ಯಾನಿಲಿನ್ʼ (ಡೇನಿಶ್ ಟೌನ್) ಅಥವಾ ಟ್ಯಾಲಿನ್, ಎಸ್ಟೋನಿಯಾ ದೇಶದ ರಾಜಧಾನಿ. ಅವರು ತಮ್ಮ ಕವಿತೆಗಳಲ್ಲಿ ಸಮಾನವಾಗಿ ಪ್ರೀತಿಯಿಂದ ಮತ್ತು ದ್ವೇಷದಿಂದ ಸಂಬೋಧಿಸುವ ನಗರದ ಹೆಸರು; ಅವರಿಗೆ ಈ ನಗರ ಒಂದು ಉಸಿರಾಡುವ ಜೀವ. ಯುರ್ಗೆನ್ ರೂಸ್ತ ಅವರ ಜೀವನ ಮತ್ತು ಎಸ್ಟೋನಿಯನ್ ರಾಜಧಾನಿ ಟ್ಯಾಲಿನ್ ನಡುವೆ ನಿಕಟ ಸಂಪರ್ಕವಿದೆ. ಅವರ ಸ್ವಂತ ಜೀವನ ಸಂಪೂರ್ಣವಾಗಿ ಟ್ಯಾಲಿನ್-ಕೇಂದ್ರಿತವಾಗಿದೆ: ಅವರು 1979ರಲ್ಲಿ ಈ ನಗರದಲ್ಲಿ ಜನಿಸಿದರು, ಶಾಲೆಗೆ ಹೋದರು ಮತ್ತು ಟ್ಯಾಲಿನ್ ಪೆಡಗಾಜಿಕಲ್ ಯೂನಿವರ್ಸಿಟಿಯಲ್ಲಿ (ಈಗ ಟ್ಯಾಲಿನ್ ಯೂನಿವರ್ಸಿಟಿ) ಎಸ್ಟೋನಿಯನ್ ಭಾಷಾಶಾಸ್ತ್ರದ ಅಧ್ಯಯನ ಮಾಡಿದರು. ಅಲ್ಲಿನ ಒಂದು ಶಾಲೆಯಲ್ಲಿ ಸಾಹಿತ್ಯವನ್ನು ಕಲಿಸಿದರು; ರೂಸ್ತ ಅವರು ಸುಮಾರು ವರ್ಷ ಸಾಹಿತ್ಯ ಸಂಪಾದಕರಾಗಿ ಮತ್ತು ಎಸ್ಟೋನಿಯನ್ ರೈಟರ್ಸ್ ಯೂನಿಯನ್‌ಗಾಗಿ ಕೆಲಸ ಮಾಡಿದ್ದಾರೆ.1998ರ ವಸಂತದಲ್ಲಿ ಟ್ಯಾಲಿನ್ ಪೆಡಗಾಜಿಕಲ್ ಯೂನಿವರ್ಸಿಟಿಯ ಭಾಷಾಶಾಸ್ತ್ರದ ವಿದ್ಯಾರ್ಥಿಗಳ ಗುಂಪೊಂದು ʻಟ್ಯಾಲಿನ್ ಯಂಗ್ ಕ್ರಿಯೇಟರ್ಸ್ʼ ಎಂಬ ಸೃಜನಶೀಲ ಸಮೂಹವಾಗಿ ಒಟ್ಟುಗೂಡಿದರು. ಈ ಸಮೂಹದಿಂದ ಉದಿಸಿದ ಗಮನಾರ್ಹ ಕವಿಯೆಂದು ರೂಸ್ತರನ್ನು ಪರಿಗಣಿಸಲಾಗಿದೆ.

1999ರಲ್ಲಿ  ರೂಸ್ತ ಅವರ ಮೊದಲ ಕವನಸಂಕಲನ ʻಸಾನೆಟ್ಸ್ʼ (Sonnets) ಪ್ರಕಟವಾಯಿತು ಹಾಗೂ ಅತ್ಯುತ್ತಮ ಮೊದಲ ಸಂಕಲನಕ್ಕಾಗಿ ʻಬೆಟಿ ಆಲ್ವರ್ʼ (Betti Alver) ಪ್ರಶಸ್ತಿಯನ್ನು ಪಡೆಯಿತು. ಸೋಜಿಗವೆಂದರೆ ಈ ಸಂಕಲನದಲ್ಲಿ ʻಸಾನೆಟ್ʼ ರೂಪದ ಒಂದು ಪದ್ಯ ಕೂಡ ಇಲ್ಲ.  1917ರಲ್ಲಿ ಎಸ್ಟೋನಿಯನ್ ಸಾಹಿತ್ಯದ ಗಮನಾರ್ಹವಾದ ಮೊದಲ ಕೃತಿಗಳಲ್ಲಿ ಒಂದಾದ ʻಮರೀ ಅಂಡರ್‌ʼರ (Marie Under) ಸಂಕಲನ ʻಸಾನೆಟ್ಸ್ʼನ ಹೆಸರನ್ನು ರೂಸ್ತ ಅವರು ಒಂದು ತರಹದ ಅಹಂಕಾರದ ಭಾವನೆಯಿಂದ ಎರವಲು ಪಡೆದು ತಮ್ಮ ಸಂಕಲನಕ್ಕೆ ಅದೇ ಹೆಸರನ್ನು ಇಟ್ಟರು. ರೂಸ್ತರ ಈ ವರ್ತನೆ ಸಂಪ್ರದಾಯದೊಂದಿಗಿನ ಅವರ ಸಂಬಂಧವನ್ನು ಸೂಚಿಸುತ್ತದೆ. 1917ರಲ್ಲಿ ಸ್ಥಾಪಿಸಲಾದ ʻಸಿಯುರುʼ (Siuru) ಸಾಹಿತ್ಯ ಕೂಟಕ್ಕೆ ದೊರೆತ ಉತ್ಸಾಹಭರಿತ ಸ್ವಾಗತವನ್ನು ಈ ಮೂಲಕ ರೂಸ್ತರು ಉಲ್ಲೇಖಿಸುತ್ತಾರೆ. ಈ ʻಸಿಯುರುʼ ಸಾಹಿತ್ಯ ಕೂಟ ಎಸ್ಟೋನಿಯನ್ ಸಾಹಿತ್ಯದ ಹೊಸ ಪೀಳಿಗೆಯು ಪ್ರಕಾಶಮಾನವಾಗಿ ಹೊಳೆಯುವ ಸ್ವಯಂಅಭಿವ್ಯಕ್ತಿಯಾಗಿ 1917ರಲ್ಲಿ ಸ್ಥಾಪಿಸಲಾಯಿತು.  ತನ್ನ ಮೊದಲ ಸಂಕಲನಕ್ಕೆ ʻಸಿಯುರುʼ ಕೂಟದ ಪ್ರಮುಖ ಮೊದಲ ಕೃತಿಗಳಲ್ಲಿ ಒಂದಾದ ಮರೀ ಅಂಡರ್‌ರ ʻಸಾನೆಟ್ಸ್ʼ ಹೆಸರನ್ನೇ ಇಟ್ಟು, ಆದರೆ ಅದರಲ್ಲಿ ಒಂದೇ ಒಂದು ʻಸಾನೆಟ್ʼ ಕೂಡ ಸೇರಿಸದೆ, ರೂಸ್ತ ಅವರು ಅವರ ಪೀಳಿಗೆಯ ʻಹೊಸ ಕ್ರಾಂತಿʼಯೊಂದರ ಘೋಷಣೆ ಮಾಡಿದರು ಎಂದು ಅರ್ಥೈಸಿಕೊಳ್ಳಬಹುದು. ರೂಸ್ತ ಅವರ ನಂತರದ ಸಂಕಲನಗಳ ಹೆಸರುಗಳಲ್ಲೂ ಅಂಡರ್‌ರ ಕವನಸಂಕಲನಗಳ ಹೆಸರುಗಳ ಪ್ರತಿಧ್ವನಿಗಳು ಸ್ವಲ್ಪ ಸಮಯದವರೆಗೆ ಕೇಳಿಬರುತ್ತಿತ್ತು. 2005ರಲ್ಲಿ ಪ್ರಕಟವಾದ ಅವರ ಸಂಕಲನ ʻಇಲುಸಾಕ್ಸ್ ಇನಿಮೆಸೆಕ್ಸ್ʼರಿಂದ (Ilusaks Inimeseks – To Be a Beautiful Person), ರೂಸ್ತ ಈ ವಿಧಾನವನ್ನು ಬಿಟ್ಟುಬಿಟ್ಟರು.
ಯುರ್ಗೆನ್ ರೂಸ್ತ ಅವರು ಮಕ್ಕಳಿಗಾಗಿಯೂ ಬರೆದಿದ್ದಾರೆ ಹಾಗೂ ಕೆಲವು ಸಣ್ಣ ಕಥೆಗಳನ್ನೂ ಬರೆದಿದ್ದಾರೆ. ರೂಸ್ತ ಅವರ ಕವನಗಳ ಭಾಷೆ ಮತ್ತು ಶೈಲಿಯು ಮುಕ್ತವಾಗಿ, ಶಕ್ತಿಯುತವಾಗಿ ಹರಿಯುವ ಆಡುಮಾತಿನ ಮುಕ್ತ ಪದ್ಯದಿಂದ ನಿರೂಪಿಸಲ್ಪಟ್ಟಿದೆ.  ಅವರ ಕಾವ್ಯದ ಸ್ವರವು ʻಕಾವ್ಯಾತ್ಮಕವಾಗಿʼ ಭಾವಗೀತಾತ್ಮಕ ಹಾಗೂ ಚಿಂತನಾತ್ಮಕವಾಗಿರುವುದಕ್ಕಿಂತ ಹೆಚ್ಚಾಗಿ ಘೋಷಣಾತ್ಮಕ ಹಾಗೂ ಭಾವಪರವಶವಾಗಿದೆ. ರೂಸ್ತ ಅವರು ʻಪ್ರೀತಿʼಯಂತಹ ಹೆಸರಿಡಲಾಗದ ಭಾವನೆಯನ್ನು ಹೇಗೆ ಪ್ರಸ್ತಾವಿಸುತ್ತಾರೆ ಎಂಬುದು, ಉದಾಹರಣೆಗೆ, ಅವರ ಕವಿತೆ – “ಅನಂತದ ಅಂಚಿನವರೆಗೂ ನನ್ನನ್ನು ಪ್ರೀತಿಸುವೆಯಾ ನೀನು”ವಿನಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಇದು ಕಾಲ್ಪನಿಕ ಮಹಿಳಾ ಸ್ಟೇಷನ್ ಅಟೆಂಡೆಂಟ್ ಒಬ್ಬಳನ್ನು ಉದ್ದೇಶಿಸಿ ಬರೆದ ಕವನ: “ಅನಂತದ ಅಂಚಿನವರೆಗೂ, ಅದರ ನಂತರವೂ/ನನ್ನನ್ನು ಪ್ರೀತಿಸುವೆಯಾ ನೀನು/ನಾವು ಅನಂತದ ಅಂಚನ್ನು ದಾಟಿ/ಮುಂದೆ ಹೋಗಿ ಕೆಲವು ತಾಸುಗಳು ಕಳೆದಿವೆ”. 
ರೂಸ್ತ ಅವರ ಕವನಗಳು ಒಂದು ಸ್ವಯಂಪ್ರೇರಿತ ಸಂಬಂಧಗಳ ಹರಿವು ಹಿಂಬಿಟ್ಟ ಅನಿಸಿಕೆಗಳಂತೆ ಕಾಣುತ್ತವೆ. ಆತಂಕ ಮತ್ತು ಮಾದಕತೆಯ ನಡುವೆ ತೀವ್ರವಾಗಿ ಓಲಾಡುತ್ತಿರುವ ಒಂದು ಸ್ಥಿರವಾದ ಸ್ವಯಂಚಿತ್ರಣ ಮತ್ತು ಸ್ಥಿರವಾದ ಭಾವನಾತ್ಮಕ ಸ್ವರವು ಈ ಹರಿವನ್ನು ಹತೋಟಿಯಲ್ಲಿಡುತ್ತೆ. ಈ ಸ್ವರದಲ್ಲಿ ʻಸರಳʼ ದುಃಖ ಮತ್ತು ಸಂತೋಷವೂ ಒಳಗೊಂಡಿರುತ್ತೆ. ಎಸ್ಟೋನಿಯನ್ ಕಾವ್ಯದಲ್ಲಿ ರೂಸ್ತ ನಿಸ್ಸಂಶಯವಾಗಿ ಒಬ್ಬ ವಿಶಿಷ್ಟ ಕವಿ. ಅವರ ಕಾವ್ಯವನ್ನು ಒಂದು ʻವಿಶಿಷ್ಟ ಕಾವ್ಯಾತ್ಮಕ ಶೈಲಿʼಎಂದು ಕರೆಯಲಾಗುವುದಿಲ್ಲ. ಏಕೆಂದರೆ ಇದು ಯಾವಾಗಲೂ ಲಕ್ಷಣಗಳು, ʻಕೀವರ್ಡ್‌ʼಗಳು ಮತ್ತು ಸ್ವರಗಳನ್ನು ಎರವಲು ಪಡೆಯಲು ಉತ್ಸುಕವಾಗಿದ್ದು, ಅವೆಲ್ಲವನ್ನೂ ದಟ್ಟವಾದ, ಸರಾಗವಾಗಿ ಹರಿಯುವ ಮಿಶ್ರಲೋಹವಾಗಿ ಸಂಯೋಜಿಸುವ ಸಾಕಷ್ಟು ಸಂಶ್ಲಿಷ್ಟ ರೀತಿಯ ಕಾವ್ಯಾತ್ಮಕ ಭಾಷೆಯಾಗಿದೆ.
ರೂಸ್ತ ಅವರ ಕವನ ವಾಚನ ಕಾರ್ಯಕ್ರಮಗಳು ಹೆಚ್ಚಾಗಿ ಸಂಗೀತದ ವಾದ್ಯಗಳೊಂದಿಗೆ ನಡೆಯುತ್ತವೆ. ರೂಸ್ತ ತನ್ನ ಕವನಗಳನ್ನು ʻಪಂಕ್-ರಾಕ್ʼ ಶೈಲಿಯ ಸಂಗೀತದೊಂದಿಗೆ ಪ್ರಸ್ತುತಪಡಿಸುತ್ತಾರೆ. ಕೆಲ ಸಲ ಕವನವನ್ನು ಓದುತ್ತಾರೆ, ಕೆಲ ಸಲ ಕವನವನ್ನು ಹಾಡುತ್ತಾರೆ; ಕೆಲ ಸಲ ಹಾಡಿನ ಜತೆ ʻಗುಂಯ್ಗುಡುವುದುʼ, ʻಘೀಳಿಡುವುದುʼ, ʻಗೊರಗುಟ್ಟುವುದುʼ, ʻಕೂಗುವುದುʼ, ʻಒದರುವುದುʼ, ಹೀಗೆ ಹಲವು ತರಹದ ಶಬ್ಧೋಚ್ಛಾರಣೆಯ ಮೂಲಕ ಭಾವನೆಗಳ ಪ್ರಕಟಿಸುವ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆʼ.
ಇಪ್ಪತ್ತಕ್ಕೂ ಹೆಚ್ಚು ಕವನಸಂಕಲನಗಳನ್ನು ರಚಿಸಿರುವ ರೂಸ್ತ ಅವರು ಎಸ್ಟೋನಿಯನ್ ಕಲ್ಚರಲ್ ಎಂಡೋವ್ಮೆಂಟ್ ಪ್ರಶಸ್ತಿಯನ್ನು ಕಾವ್ಯಕ್ಕಾಗಿ ಮೂರು ಬಾರಿ (2005, 2013, 2023) ಪಡೆದಿದ್ದಾರೆ. ಈ ಪ್ರಶಸ್ತಿಗಳ ಜತೆಗೆ ಬೆಟಿ ಆಲ್ವರ್ ಪ್ರಶಸ್ತಿ (2000), ಸಣ್ಣ-ಕಥೆಗಾಗಿರುವ ಫ್ರಾಯಿಡ್‌ಬರ್ಟ್ ಟಗ್ಲಸ್ ಪ್ರಶಸ್ತಿ (2007) ಹಾಗೂ ಟಾಲಿನ್ ಯೂನಿವರ್ಸಿಟಿ ಲಿಟರರಿ ಪ್ರಶಸ್ತಿಯನ್ನು (2012) ಸಹ ಪಡೆದಿದ್ದಾರೆ. ಇಂಗ್ಲಿಷ್ ಅಲ್ಲದೆ ರೂಸ್ತ ಅವರ ಕವನಗಳನ್ನು ಅರೇಬಿಕ್, ಕ್ರೊಯೇಶಿಯನ್, ಫಿನ್ನಿಶ್, ಜರ್ಮನ್, ಗ್ರೀಕ್, ಹೀಬ್ರೂ, ಹಂಗೇರಿಯನ್, ನಾರ್ವೇಜಿಯನ್, ರೊಮೇನಿಯನ್, ರಷ್ಯನ್, ಸ್ಪ್ಯಾನಿಷ್, ಸ್ವೀಡಿಷ್, ಹಾಗೂ ಯುಕ್ರೇನಿಯನ್ ಭಾಷೆಗಳಿಗೂ ಅನುವಾದಿಸಲಾಗಿದೆ.   

ರೂಸ್ತ ಅವರ ಕಾವ್ಯದ ಧ್ವನಿ ಬದಲಾಗುವ ಪ್ರಕ್ರಿಯೆಯಲ್ಲಿದೆ. ಅವರ ಕವನಗಳಲ್ಲಿ ಈ ಹಿಂದೆ ಕಂಡುಬರುತ್ತಿದ್ದ ಸ್ವಯಂಅತಿಅಂದಾಜಿನ ಮತ್ತು ಸ್ವಯಂವ್ಯಂಗ್ಯದ ತಮಾಷೆಯ ಸಾಲುಗಳು, ಉದಾಹರಣೆಗೆ, “ನಾನು ಕಾರ್ಲ್ ಮಾರ್ಕ್ಸ್/ಅರ್ನಾಲ್ಡ್ ಶ್ವಾರ್ಜ಼ನೆಗರ್‌ನ ದೇಹದೊಂದಿಗೆ/ಇಮ್ಯಾನ್ಯುಯೆಲ್ ಕಾಂಟ್‌ನ ಮಿದುಳಿನೊಂದಿಗೆ” ಈಗ ವಿರಳವಾಗಿವೆ.  ನ್ಯೂನತೆಗಳು, ವಿಷಣ್ಣತೆ, ಅನುಮಾನ – ಈ ವಿಷಯಗಳನ್ನು ಹೊತ್ತ ಸಾಲುಗಳು ಹೆಚ್ಚುಹೆಚ್ಚಾಗಿ ಕಂಡು ಬರುತ್ತಿವೆ. ಅದೇ ಸಮಯದಲ್ಲಿ, ಅವರ ಕಾವ್ಯದ ಸ್ವರ ಹೆಚ್ಚು ನಿಖರ, ಪಾರದರ್ಶಕ ಮತ್ತು ತೀವ್ರವಾಗುತ್ತಿದೆ.

ನಾನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ರೂಸ್ತರ ಆರು ಕವನಗಳಲ್ಲಿ ಮೊದಲ ಐದು ಕವನಗಳನ್ನು ಆ್ಯಡಮ್ ಕಲನ್‌ರವರು (Adam Cullen) ಹಾಗೂ ಆರನೆಯ ಕವನವನ್ನು ಎರಿಕ್ ಡಿಕೆನ್ಸ್‌ರವರು (Eric Dickens) ಎಸ್ಟೋನಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

ನಾನೊಂದು ಹಾಡುವ ಅಸ್ಥಿಪಂಜರ

ಮೂಲ: I’m a singing skeleton

ಹಾಡುವ ಅಸ್ಥಿಪಂಜರ ನಾನು,

ಹುಣ್ಣಿಮೆ ರಾತ್ರಿಯ ಒಡೆಯ ನಾನು,

ನಾನು ಭೀಕರ, ನಾನು ಪಿಶಾಚಿ.

ಮುಸ್ಸಂಜೆಯ ಹೊತ್ತು ನಿಂತಿರುವೆ ನಾನು

ಬಲವಂತವಾಗಿ, ಕಡ್ಡಾಯವೆಂಬಂತೆ, ಕತ್ತಲಿನಲಿ,

ನಿನ್ನ ತೆರೆದ ಕಿಟಕಿಯ ಮುಂದೆ.

ಕೆಟ್ಟಕನಸೊಂದನ್ನು ನೋಡುತ್ತಿರುವೆಯೆಂದು

ನಿನಗನಿಸುತದೆ,

ಆದರೆ ನಿಜವೇನೆಂದರೆ,

ಆ ಕೆಟ್ಟ ಕನಸು

ನಿನ್ನನ್ನು

ನೋಡುತ್ತಿದೆ.

ಪರದೆಗಳ ಮಧ್ಯದಿಂದ ನಿನ್ನನ್ನು

ಇಣುಕಿ ನೋಡುತ್ತೆ,

ಅದರ ಖಾಲಿ ಕಣ್ಣುಗುಳಿಗಳಲ್ಲಿ

ಉದ್ವೇಗದ ಮಿಂಚೊಂದು ಸುಳಿದಾಡುತಿದೆ.

ಅದರ ತಲೆಬುರುಡೆ ಮನತಣಿಸುವ

ದುಂಡಾಕಾರ.

ಅದರ ಎಲುಬೆಲುಬಾದ

ಉಸಿರುಕೊಳವೆಯಿಂದ ಮೇಲೆ ಹೊಮ್ಮುತ್ತೆ

ಒಂದು ತಿರಸ್ಕೃತ ಪ್ರೇಮ-ಮರ್ಮರ.

ಹಾಡುವ ಅಸ್ಥಿಪಂಜರ ನಾನು,

ದೆವ್ವಗಳ ಅಸಹ್ಯ ಹುಟ್ಟಿಸುವ ಕಾವಲುಗಾರ.

ನಿನ್ನ ರೇಶಿಮೆ ಪರದೆಗಳ ಹೊದ್ದು

ಕತ್ತಲಲ್ಲಿ ನಿಂತಿರುವೆ.

ಆದರೆ ಈಗ ನನ್ನನ್ನು

ಪ್ರೇಮವೆಂಬ ಹೆಸರಿನಿಂದ ಕರೆಯುತ್ತಾರೆ.

ಬೇರೆ ಯಾವ ಹೆಸರೂ ಸಿಕ್ಕುತ್ತಿಲ್ಲ.


ಡಾರ್ವಿನ್ ಮತ್ತು ಚಂದ್ರ

ಮೂಲ: Darwin and the Moon

ಡಾರ್ವಿನ್ ಚಂದ್ರನನ್ನು ನೋಡಿದಾಗ

ನಾವು ಕಂಡು ಅರಿತದ್ದನ್ನೇ

ಅವನೂ ಕಂಡು ಅರಿತಾಗ,

ಅವನ ನೋಟ ಅಲ್ಲಿ ಹುಡುಕಿರಬಹುದೇ

ಚಂದ್ರ-ಸಾಗರಗಳ, ಚಂದ್ರ-ಮಲೆಗಳ ನಡುವೆ

ಚಂದ್ರ-ನಗರಗಳಿಗಾಗಿ, ಚಂದ್ರ-ಗ್ರಾಮಗಳಿಗಾಗಿ?

ಆಗ ಈ ಯೋಚನೆಗಳು ಹೊಳೆದಿರಬಹುದೇ ಅವನಿಗೆ –

ಚಂದ್ರ-ವಿಕಾಸ ಹೇಗಾಯಿತು,

ಆ ಕಲ್ಲು-ಬಂಡೆ ತುಂಬಿದ ನಿಸರ್ಗ ಏನನ್ನು ಆಯ್ದುಕೊಂಡಿತು,

ಅಲ್ಲಿ ಮೇಲೆ ದೇವರುಗಳಿದ್ದಾರೆಯೆ,

ಒಂದು ಒಳ್ಳೆಯ ಭವಿಷ್ಯಕ್ಕಾಗಿ ಭರವಸೆ ಇದೆಯೆ? 

ಗಲಾಪಗೊಸ್ ದ್ವೀಪದಿಂದ ಮೇಲೆ

ನೆತ್ತರುಗೆಂಪು ಚಂದ್ರನನ್ನು ನೋಡಿದಾಗ

ಡಾರ್ವಿನ್‌ಗೆ ಏನನಿಸಿರಬಹುದು?


ಟ್ಯಾಲಿನ್ ನಗರದ ಪೇಟೆ ಬಲು ಸುಂದರ

ಮೂಲ: Downtown Tallinn is Beautiful

ಟ್ಯಾಲಿನ್ ನಗರದ ಪೇಟೆ ಬಲು ಸುಂದರ.

ಅಲ್ಲಿ ನೋಡಿ, ಎಸ್ಟೋನಿಯಾ ಥಿಯೇಟರ್,

ಹಳೆಯ ದಂಡೆಯ ಪಕ್ಕದಲ್ಲಿ

(ಅಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಘೋಷಿಸಲಾಯಿತು),

ಅಲ್ಲಿ ನೋಡಿ ಮಾಧ್ಯಮಿಕ ಶಾಲೆ.

ಒಂದೇ ಒಂದು ಶಾಪಿಂಗ್ ಸೆಂಟರ್

ಬಾಂಬು-ಸಿಡಿಸಿದ ಹಳ್ಳದ ಹಾಗೆ ರಸ್ತೆಗೆ ಅಡ್ಡಲಾಗಿ ಚಾಚಿದೆ.

ಅಲ್ಲಿ ನೋಡಿ, ಆ ಶಾಲೆ, ಅಲ್ಲೇ ನಾವೆಲ್ಲ ಓದಿದ್ದು.

ನನ್ನಜ್ಜ ʻ47ರಲ್ಲಿ USSRನಲ್ಲಿ ಪದವೀಧರನಾದ.

ʻ42ರಲ್ಲಿ, ಜರ್ಮನರು ನಮ್ಮನ್ನು ಅಕ್ರಮಿಸಿದಾಗ,

ಅವನು ಕಾಲೇವಿಪೊಗ್* ಧ್ವಜಪೀಠವನ್ನು ಕೊಂಡ:

ಎಸ್ಟೋನಿಯಾದ ತ್ರಿವರ್ಣ ಧ್ವಜ ಇವತ್ತಿಗೂ ಅದರಲ್ಲಿ ನೆಟ್ಟಿದೆ. 

ನಾನು ಸೋವಿಯತ್ ಆಡಳಿತದ ಸಮಯದಲ್ಲಿ

ಶಾಲೆ ಕಲಿತೆ, ಪುಕ್ಕಟ್ಟೆಯಾಗಿ ಕಲಿತೆ.

ನನ್ನ ಮಗಳು ಆ ತರದ ನಿರಂಕುಶಪ್ರಭುತ್ವವನ್ನು ನೋಡಿಲ್ಲ.

ಸ್ವಾತಂತ್ರ್ಯ ಸಮಯದ, ಶಾಲೆಗೆ ಹೋಗುವ ಹುಡುಗಿಯವಳು.

ಈಗ ಅತಿ ಭಯಾನಕವಾದ ವಸ್ತುವೆಂದರೆ

ರಸ್ತೆಗೆ ಅಡ್ಡಲಾಗಿ ನಿಂತಿರುವ ಶಾಪಿಂಗ್ ಸೆಂಟರ್.

*”ಕಾಲೇವಿಪೊಗ್” ಎಂಬ ಕೃತಿಯು ಎಸ್ಟೋನಿಯನ್ ದೇಶದ ರಾಷ್ಟ್ರೀಯ ಮಹಾಕಾವ್ಯವೆಂದು ಪರಿಗಣಿಸಲಾಗಿದೆ. ಈ ಮಹಾಕಾವ್ಯದಲ್ಲಿ ಬರುವ ಕಾಲೇವಿಪೋಗ್ ಎಂಬ ದೈತ್ಯಾಕಾರದ ಧೀರ ಎಸ್ಟೋನಿಯಾ ದೇಶದ ರಾಷ್ಟ್ರೀಯ ಸಂಕೇತವಾಗಿದ್ದಾನೆ.  ಈ ಕೃತಿಯನ್ನು ಫ್ರೆಡ್ರಿಕ್ ರೆನ್‌ಹೋಲ್ಡ್ ಕ್ರೂಟ್ಜ್ವಾಲ್ಡ್‌ರು ಎಸ್ಟೋನಿಯನ್ ಜಾನಪದ ಕತೆಗಳು ಹಾಗೂ ದಂತಕತೆಗಳಲ್ಲಿ ಬರುವ ದೈತ್ಯಾಕಾರದ ಧೀರನ ಕತೆಗಳಿಂದ ಪ್ರೇರಿತರಾಗಿ 19ನೇ ಶತಮಾನದಲ್ಲಿ ಬರೆದರು. 
ಎಸ್ಟೋನಿಯನ್ (ಮುಖ್ಯವಾಗಿ ಪೂರ್ವ ಎಸ್ಟೋನಿಯನ್) ದಂತಕಥೆಗಳಲ್ಲಿ, ಕಾಲೇವಿಪೊಗ್ ಎಂಬ ಧೀರನು ಕಲ್ಲುಗಳನ್ನು ಒಯ್ಯುತ್ತಾನೆ, ಶತ್ರುಗಳ ಮೇಲೆ ಎಸೆಯುತ್ತಾನೆ. ಮತ್ತು ಒಂದು ಮುಳ್ಳುಹಂದಿಯ ಸಲಹೆಯನ್ನು ಅನುಸರಿಸಿ ಹಲಗೆಗಳನ್ನು ಆಯುಧಗಳಾಗಿ ಬಳಸುತ್ತಾನೆ. ಅವನು ನೀರಿನ ಮೇಲೆ, ನೆಲದ ಮೇಲೆ ನಗರಗಳನ್ನು ನಿರ್ಮಿಸುತ್ತಾನೆ. ಅವನು ನೀರಿನ ಮೇಲೆ ನಡೆಯುತ್ತಾನೆ. ಕೊನೆಗೆ, ಕಾಲೆವಿಪೊಯೆಗ್ ತನ್ನ ಯೌವನದಲ್ಲಿ ನಡೆದ ಒಂದು ಘಟನೆಯ ಶಾಪದಿಂದಾಗಿ ಅವನ ಸ್ವಂತ ಕತ್ತಿಯಿಂದ ಅವನ ಪಾದಗಳನ್ನು ಕತ್ತರಿಸಿಕೊಂಡು ಸಾಯುತ್ತಾನೆ.


ಬೀದಿಗಾಯಕರು

ಮೂಲ: Street corner Musicians

ಕಡೆಗೆ, ನಾವೆಲ್ಲರೂ ಬೀದಿಗಾಯಕರೇ,

ಕೆಲವರ ಟೋಪಿ ದೊಡ್ಡದಾಗಿರುತ್ತೆ ಅಷ್ಟೇ,

ಹೃದಯವೂ ಹೆಚ್ಚು ವಿಶಾಲವಾಗಿರಬಹುದು

ಮತ್ತೂ ವಿಶಾಲವಾಗಿರಬಹುದು…

ಕಡೆಗೆ, ಅಸಹ್ಯ ಸೂರ್ಯಕಾಂತಿ ಹೂಗಳು

ನಮ್ಮನ್ನು ಚಿತ್ರಿಸುತ್ತವೆ

ನಾವು ಅವನ್ನಲ್ಲ.

ಬೆಳಗ್ಗೆ ಚಾ ಕುಡಿವ ಕಪ್ಪು

ತನ್ನ ಕಿವಿಯನ್ನೇ ಕೊಯ್ದುಕೊಳ್ಳುತ್ತೆ.

ಆದರೆ, ಅದನ್ನು ಎಲ್ಲೂ ಕಳಿಸಲಿಕ್ಕಾಗಲ್ಲ.

ಪೊಸ್ಟಾಫೀಸು ಮುಚ್ಚಿದೆ.

ಸೋ, ಅದು ಅದನ್ನು ತನ್ನ

ಫೇಸ್‌ಬುಕ್ ಚಿತ್ರವನ್ನಾಗಿಸುತ್ತೆ.

ಕಡೆಗೆ, ನಾವೆಲ್ಲರೂ ಬೀದಿಗಾಯಕರೇ.

ಜಗತ್ತಿನ ಸಕ್ಯೂರಿಟಿ-ಕ್ಯಾಮರಾದ ಫೆಲಿನಿಗಳು

ನಮ್ಮನ್ನು ಚಲನಚಿತ್ರಿಸುತ್ತದೆ,

ಕಾವಲುಗಾರನೊಬ್ಬ ಒಂದು ಹನಿ

ಪವಿತ್ರ ತೈಲದ ಅಶ್ರುವನ್ನು ಉದುರಿಸಿ

ʻಆಮೆನ್ʼ ಅನ್ನುತ್ತಾನೆ.

ಅಸಹ್ಯ ಸೂರ್ಯಕಾಂತಿ ಹೂಗಳು

ಕೈಬಿಟ್ಟ ಪ್ರೇಮಿಯ ಅಳಲನ್ನು

ಬಿಕ್ಕಿಬಿಕ್ಕಿ ಅಳುತ್ತವೆ.

ಗೋರಿಬರಹ ಹೀಗನ್ನುತ್ತದೆ:

ಬದುಕೊಂದು ಹೂವು

ಅದನ್ನು ನಿನ್ನ ಫೇಸ್‌ಬುಕ್ ಗೋಡೆಯ

ಮೇಲೆ ಪೋಸ್ಟ್ ಮಾಡು.


ನನ್ನ ಮುತ್ತತ್ತೆಯ ನಿಧನದ ಮರುದಿನದಿಂದ ಯೋಚಿಸಲಾರಂಭಿಸಿದ ಒಂದು ವಿಷಯ

ಮೂಲ: One thing I started thinking about a day after my great-aunt’s death

ಎಸ್ಟೋನಿಯನ್‌ರು ಯಾಕೆ ವಿಶಿಷ್ಟರು

ಅಂತ ನೀವು ತಿಳಯಲಿಷ್ಟಪಡುವಿರಾ?

ಪಕ್ಕಪಕ್ಕ ಇದ್ದುಕೊಂಡೇ ಜೀವನವೆಲ್ಲಾ ಕಳೆಯುತ್ತಾರೆ,

ಆದರೆ, ಪ್ರೀತಿ ಇದೆ ಒಬ್ಬರಿನ್ನೊಬ್ಬರಲ್ಲಿ ಅಂತ ಹೇಳಲಾರರು,

ಇದನ್ನು ನಾನು ನಿಮಗೆ ಹೇಳಲಾ?

ಮತ್ತೆ, ಅವರಲ್ಲಿ ಯಾರೊಬ್ಬರಾದರೂ ತೀರಿಕೊಂಡಾಗ

ಬಂಧುಗಳಿಗೆ ಫೋನ್ ಮಾಡಿ,

ತಮ್ಮ ಮೂಕಾಶ್ರುಗಳನ್ನು ಫೋನಿನೊಳಗೆ ಸುರಿಯುತ್ತಾರೆ.

ಪ್ರೀತಿ ಇದೆ ಒಬ್ಬರಿನ್ನೊಬ್ಬರಲ್ಲಿ ಅಂತ ಹೇಳಲು ಬಯಸುತ್ತಾರೆ,

ಆದರೆ, ಹೇಳಲಾರರು.

ಐವತ್ತು ವರ್ಷಕ್ಕೂ ಹೆಚ್ಚಿನ ಕಾಲ

ವಿದೇಶ ರಾಷ್ಟ್ರವೊಂದರ ಕೈಯಡಿಯಲ್ಲಿ ಜೀವಿಸುತ್ತಾರೆ.

ಹಾಗಿದ್ದೂ, ಅವರು ತಮ್ಮ ತಿಕ್ಕಲ

ಭಾಷೆಯಲ್ಲಿ ಕವನಗಳನ್ನು ಬರೆಯುತ್ತಿದ್ದರು.

ಅದಕ್ಕೇ ಅವರು ಎಸ್ಟೋನಿಯನ್‌ರು.

ಕೆಲವೊಮ್ಮೆ ಅವರನ್ನು ಸಹಿಸಲಿಕ್ಕಾಗಲ್ಲ ನನ್ನಿಂದ,

ಅದಕ್ಕೇ ನಾನವರನ್ನು ಪ್ರೀತಿಸುತ್ತೇನೆ.

ಅನಂತದ ಅಂಚಿನವರೆಗೂ ನನ್ನನ್ನು ಪ್ರೀತಿಸುವೆಯಾ ನೀನು

ಮೂಲ: Will you love me until the edge of eternity?

ಅನಂತದ ಅಂಚಿನವರೆಗೂ, ಅದರ ನಂತರವೂ,
ನನ್ನನ್ನು ಪ್ರೀತಿಸುವೆಯಾ ನೀನು.

ನಾವು ಅನಂತದ ಅಂಚನ್ನು ದಾಟಿ

ಮುಂದೆ ಹೋಗಿ ಕೆಲವು ತಾಸುಗಳು ಕಳೆದಿವೆ,
ಏನಾಗುತ್ತಿದೆ, ಯಾವ ಲೋಕವ

ಸೇರಿದ್ದೇವಂತ ಅರಿಯದೇ.

ಇವೆಲ್ಲವನ್ನು ನಾನು ನಿಭಾಯಿಸಲಾಗದಿದ್ದರೂ

ನನ್ನನ್ನು ಪ್ರೀತಿಸುವೆಯಾ ನೀನು.
ನನಗೆ ಮತ್ತೊಮ್ಮೆ ಮತ್ತೇರಿ,

ಲೋಕಾಂತ್ಯದ ಒಂದು ಚಣದ ಮುಂಚೆ,

ಕೋಣೆಯ ಮೂಲೆಯಲ್ಲಿ

ಮಗುವಿನಂತೆ ನನ್ನ ಹೇಲಿನಲ್ಲೇ

ಸುಖವಾಗಿ ನಿದ್ದೆ ಮಾಡುತ್ತಿರುವಾಗಲೂ.

ನನ್ನನ್ನು ಪ್ರೀತಿಸುವೆಯಾ ನೀನು,

ರಾತ್ರಿ ಕವಿದಾಗ, ಹವೆ ಕಡು ಥಂಡಿಯಾದಾಗ,
ನಮಗೆ ಹೋಗಲಿಕ್ಕೆ ಬೆಚ್ಚನೆಯ ಜಾಗವೆಲ್ಲೂ ಇಲ್ಲದಾಗಲೂ,
ಬೆಳಕು ಅಥವಾ ಉದ್ದೇಶ ಯಾವುದೂ ಗೋಚರಿಸದಾಗಲೂ.

ನನ್ನನ್ನು ಪ್ರೀತಿಸುವೆಯಾ ನೀನು,
ನಮ್ಮಿಬ್ಬರ ಜತೆ ಮಾತ್ರ ಸಮಯವನ್ನು ತಡೆಯಬಲ್ಲುದು,

ಮತ್ತೆ ಇದರ ಗುಟ್ಟೆನೆಂದರೆ ನಮ್ಮಿಬರ ವಿನಾ ಈ ಲೋಕ

ಎಂದೆಂದಿಗೂ ಮುಗಿದ ಹಾಗೆಂದು ನಿನಗೆ ಹೇಳಿದಾಗಲೂ.

ನನ್ನನ್ನು ಪ್ರೀತಿಸುವೆಯಾ ನೀನು,
ಕೊನೆಗೆ ಒಂದು ಅದ್ಭುತ ಲೋಕ

ಇರಬಹುದೋ (ಅಥವಾ ಇರಲಿಕ್ಕಿಲ್ಲವೋ)

ಎಂಬ ಊಹೆಯ ಮಾತ್ರಕ್ಕೆ.

ನನ್ನನ್ನು ಪ್ರೀತಿಸುವೆಯಾ ನೀನು,

ಈ ಹುಚ್ಚು ಮೃಗವನ್ನು,

ಈ ಸ್ವಾರ್ಥಿಯನ್ನು,

ಮುರಿದ ರೆಂಬೆಯ ಮೇಲೆ ಅಡ್ಡಲಾಗಿ,

ಬೆಚ್ಚನೆಯ, ನರಕದಂತಹ ಆಳವಾದ

ಹಾಡೊಂದನ್ನ ಪರಗುಟ್ಟುತ್ತಿರುವ

ಈ ಭಾರಿ ಗಂಡು ಬೆಕ್ಕನ್ನು.


ನರಕದಂತಹ ಆಳವಾದ ಕರಾಳ ರಾತ್ರಿ

ನಮ್ಮ ಮೇಲೆ ಇಳಿದು ಬಂದಾಗ,
ಯಾರಿಗೂ ಗೊತ್ತಿಲ್ಲ ಬೆಳಕು

ಬಂದಾಗ ಏನಾಗುತ್ತದೋ ಎಂದು,
ಯಾರಿಗೂ ಗೊತ್ತಿಲ್ಲ.

ನನ್ನನ್ನು ಪ್ರೀತಿಸುವೆಯಾ ನೀನು,

ನಿನ್ನ ಬಿಸಿರಕ್ತವ ಹಾತೊರೆಯುವವನನ್ನು,
ಅದನ್ನು ಸೇವಿಸುವ ನಿರೀಕ್ಷೆಯಲ್ಲಿ ಬದುಕಿರುವವನನ್ನು.

ನನ್ನನ್ನು ಪ್ರೀತಿಸುವೆಯಾ ನೀನು, ಡಾರ್ಲಿಂಗ್.

ನನ್ನನ್ನು ಪ್ರೀತಿಸುವೆಯಾ ನೀನು,

ಅನಂತದ ಅಂಚಿನವರೆಗೂ,

ದೂರದವರೆಗೂ,
ಈ ಅಂಚಿನಿಂದ ಬಹುದೂರದವರೆಗೂ.

*****

‍ಲೇಖಕರು avadhi

August 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Jürgen Rooste

    I’m really greatful to Jayasrinivasa Rao for the translations. These poems were created (or just born, they happened to me rather than “I wrote them”) during a tumultuous and stormy period in my life and still resonate with the way I feel and wonder, dwell. Also: Kannada language is crazy beautiful! Started listening to some of Y’r music I could find. All the love! All the rock’n’roll!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: