ಶ್ರೀನಿವಾಸ ಪ್ರಭು ಅಂಕಣ: ಬದುಕಿತು ಬಡ ಜೀವ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

103
———————

ಆ ಗೆಳೆಯ ಮಾತಾಡುತ್ತಾ ಹೋದಂತೆ ನಿಧಾನವಾಗಿ ಒಂದೊಂದೇ ಗಂಟು ಬಿಡಿಸಿಕೊಳ್ಳತೊಡಗಿ ಏನಾಗಿದೆಯೆಂಬುದರ ಖಚಿತ ಚಿತ್ರ ದೊರೆಯತೊಡಗಿತು.

ಹಿಂದಿನ ದಿನ ನನ್ನನ್ನೂ ಸಿಬಿಐ ಬಲೆಗೆ ಕೆಡವಲು ಸಕಲ ಸಿದ್ಧತೆಗಳೂ ನಡೆದಿವೆ; ನನ್ನ ಮೇಲೆ ಲಂಚದ ಆರೋಪ ಹೊರಿಸಿ ದೂರು ಕೊಟ್ಟಿರುವವನು ರಘವೀರ! ನನಗೆ ಸಂಭಾವನೆಯಾಗಿ ಕೊಡಬೇಕಾಗಿದ್ದ ಹಣವನ್ನು ಕೊಟ್ಟು, ಅದಕ್ಕೆ ಲಂಚದ ಬಣ್ಣ ಬಳಿದು ಸಿಬಿಐನವರಿಗೆ ಹಿಡಿಸಿಕೊಡುವ ಹುನ್ನಾರ ನಡೆದಿದೆ; ಅಂತೆಯೇ ಹಿಂದಿನ ರಾತ್ರಿ ಜಿಟಿಜಿಟಿ ಮಳೆಯಲ್ಲಿ ಅಧಿಕಾರಿಗಳ ದಂಡು ನನ್ನನ್ನು ಬಲೆಗೆ ಕೆಡವಲು ಸನ್ನಧ್ಧರಾಗಿ ಮನೆಯ ಬಳಿ ಬಂದು ಕಾರ್‌ನಲ್ಲಿ ಕಾದು ಕೂತಿದ್ದಾರೆ; ರಂಜನಿಯ ಅಣ್ಣ ಬಾಬು ಅವರು ಇದನ್ನು ಗಮನಿಸಿದ್ದಾರೆ; ನನಗ ದುಡ್ಡು ಕೊಡಲು ರಘುವೀರ ಮನೆಯ ಬಳಿ ಬಂದಿದ್ದಾನೆ; ಅನಿರುದ್ಧನ ಅನಾರೋಗ್ಯದ ಕಾರಣವಾಗಿ ನಾವು ಅವತ್ತು ನಮ್ಮ ಮನೆಯಲ್ಲಿರದೇ ನಳಿನಿ ಅಕ್ಕನ ಮನೆಗೆ ಹೋಗಿದ್ದೇವೆ; ರಾತ್ರಿ ಸಾಕಷ್ಟು ಹೊತ್ತು ಕಾದರೂ ʻಮಿಕʼ ಬಲೆಗೆ ಬೀಳದೇ ಅಧಿಕಾರಿಗಳು ನಿರಾಶರಾಗಿ ಹಿಂದಿರುಗಿದ್ದಾರೆ!

ಇಷ್ಟು ವಿಷಯ ಸ್ಪಷ್ಟವಾಗಿ ತಿಳಿದುಹೋದರೂ ನನಗೆ ಬಿಡಿಸಲಾಗದ ಒಗಟಾಗಿ ಉಳಿದದ್ದು ರಘುವೀರನ ವರ್ತನೆ. ಯಾವ ಧಾರಾವಾಹಿಯ ಮಂಜೂರಾತಿಗಾಗಿ ನಾನು ಹಣವನ್ನು ಕೇಳುತ್ತಿದ್ದೇನೆಂದು ಅವನು ದೂರಿತ್ತಿದ್ದಾನೋ ಆ ಧಾರಾವಾಹಿ ನಾನು ಆ ವಿಭಾಗಕ್ಕೆ ಬರುವ ಮೊದಲೇ ಮಂಜೂರಾತಿ ಪಡೆದು ಪ್ರಸಾರವೂ ಆಗಿಹೋಗಿತ್ತು! ನನಗೆ ಸಂಬಂಧವೇ ಇಲ್ಲದ, ನನ್ನ ಅಧಿಕಾರಾವಧಿಯಲ್ಲಿ ಪ್ರಸಾರವನ್ನೇ ಕಾಣದ ಧಾರಾವಾಹಿಯ ಮಂಜೂರಾತಿಗೆ ನಾನು ಹಣ ಬೇಡುತ್ತೇನೆಂದರೆ ಏನರ್ಥ? ಇದೆಲ್ಲಿಯ ತರ್ಕ? ಆದರೆ ಈ ಅರ್ಥ – ನ್ಯಾಯ – ತರ್ಕಗಳು ಸಿಬಿಐನವರಿಗೆ ಸಂಬಂಧ ಪಟ್ಟಿದ್ದಲ್ಲ! ಅವರಿಗೆ ಬೇಕಿರುವುದು ಮತ್ತೊಂದು ಕೇಸ್ ಅಷ್ಟೇ! ಹೋಗಲಿ, ಆ ರಘುವೀರನಿಗಾದರೂ ಒಂದು ಮನಸ್ಸಾಕ್ಷಿ ಇರುವುದು ಬೇಡವೇ! ನನ್ನ ನಿರ್ದೇಶನದ ಸಂಭಾವನೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಅವನು ಈ ವಾಮಮಾರ್ಗ ಹಿಡಿದನೇ! ಒಂದು ಮಾತು…

ನೇರವಾಗಿ  ಒಂದೇ ಒಂದು ಮಾತು… “ಪ್ರಭು ಸರ್, ನನ್ನ ಬಳಿ ಹಣ ಇಲ್ಲ… ನಿಮ್ಮ ಸಂಭಾವನೆ ಕೊಡಲಾರೆ” ಎಂದು ಹೇಳಿಬಿಟ್ಟಿದ್ದರೆ ಕಥೆಯೇ ಮುಗಿದು ಹೋಗುತ್ತಿತ್ತು… ಆ ಹಣಕ್ಕೆ ಎಳ್ಳುನೀರು ಬಿಟ್ಟುಬಿಡುತ್ತಿದ್ದೆ. ಆದರೆ ನನ್ನ ವ್ಯಕ್ತಿತ್ವವನ್ನೇ ವಿರೂಪಗೊಳಿಸಿಬಿಡುವ… ನನ್ನನ್ನು ಕ್ಷುದ್ರನನ್ನಾಗಿ ಮಾಡಿಬಿಡುವ – ಅದೂ ವಿನಾಕಾರಣ – ಇಂಥದೊಂದು ಆರೋಪ ಹೊರಿಸುವ ಅಗತ್ಯವಾದರೂ ಏನಿತ್ತು ಅವನಿಗೆ? ಅಕಸ್ಮಾತ್ ನಾನು ಅಂದು ಮನೆಯಲ್ಲೇ ಇದ್ದಿದ್ದರೆ ರಘುವೀರ ನೀಡುವ ಹಣವನ್ನು ಖಂಡಿತ ಸ್ವೀಕರಿಸುತ್ತಿದ್ದೆ! ನನ್ನ ಪ್ರಕಾರ ಅದು ನನಗೆ ಸಲ್ಲಬೇಕಾಗಿದ್ದ ಸಂಭಾವನೆಯ ಹಣ! ಆದರೆ ಸಿಬಿಐನವರ ದೃಷ್ಟಿಯಲ್ಲಿ ಅದು ಲಂಚದ ಹಣ! ನನ್ನದೆಂತಹ ಇಬ್ಬಂದಿ ಸ್ಥಿತಿಯಾಗಿತ್ತೆಂದರೆ ಆ ಹಣ ನನಗೆ ಸಲ್ಲಬೇಕಾದ್ದೆಂದು ಗಟ್ಟಿಯಾಗಿ ಹೇಳುವ ಸ್ಥಿತಿಯಲ್ಲಿಯೂ ನಾನಿಲ್ಲ!

ನಾನು ಮಾಡಿರುವುದೇ ನಮ್ಮ ಕೇಂದ್ರದ ನಿಯಮಗಳ ಚೌಕಟ್ಟನ್ನು ಮೀರಿದ್ದು! ಕೇಂದ್ರದ ನನ್ನ ಯಾವ ಕೆಲಸಗಳನ್ನೂ ಎಂದೂ ನಾನು ಕಡೆಗಣಿಸಿಲ್ಲವೆಂದಾಗಲೀ, ಅತಿಶಯವೆನ್ನಿಸುವಂತಹ ಕಾರ್ಯಕ್ರಮಗಳನ್ನೇ ರೂಪಿಸಿದ್ದೇನೆಂದಾಗಲೀ, ಅಗತ್ಯವಿದ್ದ ಅನೇಕಾನೇಕ ಸಂದರ್ಭಗಳಲ್ಲಿ ಹಗಲು ರಾತ್ರಿಯೆನ್ನದೆ ಆಫೀಸಿನ ನಿಗದಿತ ಕಾರ್ಯಸಮಯದ ಆಚೆಗೂ ತಾಸುಗಟ್ಟಲೆ ಕೆಲಸ ಮಾಡಿದ್ದೇನೆಂದಾಗಲೀ, ಯಾವ ಕೆಲಸಕ್ಕೂ ತೊಂದರೆಯಾಗದಂತೆ ಬಿಡುವಿನ ವೇಳೆಯಲ್ಲಿ ಹೊರಗಡೆ ಕೆಲಸ ಮಾಡಿದ್ದೇನೆಂದಾಗಲೀ ಏನೇ ಸಮಜಾಯಿಷಿ ಕೊಟ್ಟರೂ ಅದು ಕೇಂದ್ರದ ದೃಷ್ಟಿಯಿಂದ ನಿಯಮಬಾಹಿರ ಎಂಬುದಂತೂ ಸಿದ್ಧ! ಇದೇ ಕಾರಣಕ್ಕಾಗಿಯೇ ಅಲ್ಲವೇ ಹಿಂದೆ ರುಕ್ಮಿಣಿಯಮ್ಮ ನನ್ನ ಅನುಪಸ್ಥಿತಿಯನ್ನು ʻಡೈಸ್ ನಾನ್ʼ ಎಂದು ಪರಿಗಣಿಸಿ ಕಪ್ಪುಚುಕ್ಕೆ ಇಟ್ಟದ್ದು! ಒಟ್ಟಿನಲ್ಲಿ ರಘುವೀರ ನನಗೆ ಕೊಟ್ಟದ್ದು ನನಗೆ ಸಲ್ಲಬೇಕಾದ ಸಂಭಾವನೆಯ ಹಣ ಎಂದು ನಾನು ತಾರ್ಕಿಕವಾಗಿ ಸಾಬೀತುಪಡಿಸಲಾಗದೇ ಹೋದಾಗ ಸಿಬಿಐನವರು ಅದನ್ನು ಪರಿಗಣಿಸುವುದೇ ಲಂಚವೆಂದು! ದೇವಾ ದೇವಾ!!! ಒಂದು ಕ್ಷಣ ಏನೆಲ್ಲಾ ಅನಾಹುತ ಆಗಿಬಿಡಬಹುದಿತ್ತು ಎಂಬುದನ್ನು ನೆನೆಸಿಕೊಂಡೇ ಮೈ ಕಂಪಿಸಿಬಿಟ್ಟಿತು.

ಆ “ಕದ್ದಿಂಗಳ ಕಗ್ಗತ್ತಲ ಕಾರ್ಗಾಲದ ರಾತ್ರಿ”ಯಲ್ಲಿ ಮಗ ಅನಿರುದ್ಧನಿಗೆ ಅನಾರೋಗ್ಯವಾದದ್ದೇ ನಿಮಿತ್ತವಾಗಿ ನಾನು ಮನೆಯಿಂದ ಹೊರಗಿದ್ದದ್ದೇ ನನಗೆ ವರವಾಯಿತೇ? ಇಂತಹ ʻನಿಮಿತ್ತʼಗಳು ಕೇವಲ ಕಾಕತಾಳೀಯವೇ… ಪೂರ್ವನಿರ್ಧರಿತವೇ… ದೈವೇಚ್ಛೆಯೇ… ಅಥವಾ ನನ್ನ ಹಿರಿಯರ ಸತ್ಕರ್ಮದ ಪುಣ್ಯ ಸಂಚಯನದ ಫಲವೇ… ಹೀಗೆ ಮನಸ್ಸು ನೂರು ದಿಕ್ಕುಗಳಲ್ಲಿ ಓಡುತ್ತಿತ್ತು. ಎಷ್ಟು ಯೋಚಿಸಿದರೂ ಯಾವ ಪ್ರಶ್ನೆಗೂ ಸಮಾಧಾನಕರ ಉತ್ತರ ಮಾತ್ರ ದೊರೆಯುತ್ತಲೇ ಇರಲಿಲ್ಲ. ಯೋಚಿಸಿ ಯೋಚಿಸಿ ಹಣ್ಣಾಗಿ ಕೊನೆಗೆ ಏನೂ ಮಾಡಲು ತೋಚದೇ ಮನೆಗೆ ಹೊರಟುಹೋದೆ.

ರಂಜನಿಗೆ ಎಲ್ಲಾ ವಿಷಯವನ್ನೂ ಹೇಳಿದಾಗ ಅವಳು ಗರಬಡಿದವಳಂತೆ ಕುಳಿತುಬಿಟ್ಟಳು. ಅಕ್ಕ – ಭಾವಂದಿರೊಂದಿಗೂ ಎಲ್ಲಾ ಸಂಗತಿಗಳನ್ನೂ ಹಂಚಿಕೊಂಡೆ. ಭಾವಂದಿರು ತಮ್ಮ ಎಂದಿನ ಉತ್ಸಾಹಭರಿತ ಶೈಲಿಯಲ್ಲಿ ಮನಸ್ಸಿಗೆ ಧೈರ್ಯ ತುಂಬಿದರು. “ಅಳುಕಿಲ್ಲದವನಿಗೆ ಅಂಜಿಕೆಯೂ ಇರಬಾರದು; ಹೆದರಬೇಡ… ಯಾವ ಮಟ್ಟದಲ್ಲಿ ಬೇಕಾದರೂ ಯಾರನ್ನು ಬೇಕಾದರೂ ಎದುರಿಸೋಣ… ಧೃತಿಗೆಡಬೇಡ” ಎಂದು ಧೈರ್ಯ ತುಂಬಿದರು.

ಮರುದಿನ ಆಫೀಸಿಗೆ ಹೋದರೆ ಮತ್ತೊಂದು ಬಗೆಯ ಆಘಾತ ಕಾದಿತ್ತು: ಸಿಬಿಐ ಬಲೆಗೆ ಬಿದ್ದಿದ್ದ ನನ್ನ ಸಹೋದ್ಯೋಗಿ ಅಧಿಕಾರಿಗಳು ʻಇಡೀ ಪ್ರಸಂಗದ ಸೂತ್ರಧಾರಿಯೇ ನಾನುʼ ಎಂದು ತೀರ್ಮಾನಕ್ಕೆ ಬಂದುಬಿಟ್ಟಿದ್ದರು! ವಾಣಿಜ್ಯ ವಿಭಾಗದಿಂದ ಹೊರಬಂದ ಸಿಟ್ಟಿಗೆ ಹಾಗೂ ನನ್ನ ಜಾಗಕ್ಕೆ ಬಂದ ಅವರ ಮೇಲಿನ ಅಸೂಯೆಯಿಂದ ನಾನೇ ಹೊರಗಿನ ಕೆಲ ನಿರ್ಮಾಪಕರಿಗೆ ಹೇಳಿಕೊಟ್ಟು ದೂರು ಕೊಡಿಸಿ ಅವರನ್ನು ಹಿಡಿಸಿಕೊಟ್ಟಿದ್ದೇನೆಂಬುದು ಅವರ ಖಚಿತ ನಂಬಿಕೆಯಾಗಿತ್ತು! ಅವರಷ್ಟೆ ಅಲ್ಲ, ಕೇಂದ್ರದ ಮತ್ತೂ ಕೆಲವು ಸಹೋದ್ಯೋಗಿಗಳಿಗೂ ಇದೇ ಅನುಮಾನ ಕಾಡತೊಡಗಿತ್ತು! ಆ ವಿಭಾಗಗಳನ್ನು ನಾನೇ ಸ್ವಇಚ್ಛೆಯಿಂದ ಬಿಟ್ಟು ಹೋದದ್ದೆಂದೂ, ಅವರಂತೆಯೇ ನಾನೂ ಬಲೆಗೆ ಬೀಳುವ ಎಲ್ಲಾ ಸಾಧ್ಯತೆಗಳೂ ಇದ್ದು, ಅದೃಷ್ಟವಶಾತ್ ಪಾರಾದದ್ದೆಂದೂ ವಿವರಿಸಿದ ಮೇಲೆಯೂ ಅವರ ಅಭಿಪ್ರಾಯಗಳೇನೂ ಬದಲಾದಂತೆ ಕಾಣಲಿಲ್ಲ.

ಅಥವಾ ಹಾಗೊಂದು ಒಳಸಂಚಿನ ಕಾರಣವನ್ನು ಹೊಸೆದುಬಿಟ್ಟರೆ ತಮ್ಮ ತಪ್ಪಿನ ತೀವ್ರತೆ ಕಡಿಮೆಯಾಗಬಹುದೆಂಬ ಭ್ರಮೆಯಲ್ಲಿ ನನ್ನ ಮೇಲೆ ಗೂಬೆ ಕೂರಿಸುವ ಗುರಾಣಿಯನ್ನು ಎತ್ತಿಹಿಡಿದರೋ ಕಾಣೆ.. ಒಟ್ಟಿನಲ್ಲಿ ಕೇಂದ್ರದ ವಾತಾವರಣದಲ್ಲಿ ಮಾತ್ರ ಮೊದಲಿದ್ದ ವಿಶ್ವಾಸ – ಆತ್ಮೀಯತೆಗಳು ದೂರವಾಗಿ ಒಂದು ಬಗೆಯ ಬಿಗುವು – ಸೆಡವುಗಳು… ಅನುಮಾನ – ಅಪನಂಬಿಕೆಗಳು ಸಂಬಂಧಗಳ ನಡುವೆ ಮೂಡಿದ್ದು ಸುಳ್ಳಲ್ಲ. ಅಲ್ಲಿಯೂ ನನಗೆ ಬೆಂಬಲವಾಗಿ ನಿಂತು ಧೈರ್ಯ ತುಂಬಿದವರೆಂದರೆ ಗೆಳೆಯ ಮೋಹನರಾಮ್ ಹಾಗೂ ರಾಜೇಂದ್ರ ಕಟ್ಟಿ. “ಇಂಥ ಸೆನ್ಸಿಟೀವ್ ಕ್ಷೇತ್ರದಲ್ಲಿ ಕೆಲಸ ಮಾಡೋವಾಗ ದಪ್ಪ ಚರ್ಮ ಬೆಳಸ್ಕೋಬೇಕಯ್ಯಾ… ನೀನು ಇಷ್ಟು ಸೆನ್ಸಿಟೀವ್ ಆಗಿ ಇದ್ರೆ ತುಂಬಾ ಒದ್ದಾಡ್ತೀಯಾ… ಯಾವುದಕ್ಕೂ ಟೆನ್ಶನ್ ಮಾಡಿಕೋಬೇಡ… ಎಂಥಾ ಸಂದರ್ಭ ಬಂದರೂ ನಾವಿದೀವಿ ಜೊತೇಲಿ” ಎಂದು ಮೋಹನರಾಮ ಆಶ್ವಾಸನೆ ನೀಡಿದ್ದು ಎಷ್ಟೋ ಸಮಾಧಾನ ತಂದಿತು. ಕಟ್ಟಿಯಂತೂ ಯಾವಾಗಲೂ ಕಷ್ಟ ಸುಖ ಹಂಚಿಕೊಳ್ಳುವ ಆತ್ಮೀಯ ಗೆಳೆಯನೇ ಆಗಿದ್ದ.

ಅಕ್ಷರಶಃ ನನ್ನನ್ನು ಕಂಗೆಡಿಸಿದ ಪ್ರಸಂಗ ಇದು. ಮನಸ್ಸಿನ ನೆಮ್ಮದಿಯಂತೂ ಸಂಪೂರ್ಣವಾಗಿ ಕದಡಿಹೋಯಿತು. ಒಂದು ವೇಳೆ ನಾನು ಅವರುಗಳ ಬಲೆಗೆ ಬಿದ್ದೇಬಿಟ್ಟಿದ್ದರೆ ಆಗಬಹುದಾಗಿದ್ದ ಆಘಾತ – ಅನಾಹುತಗಳ ಸರಮಾಲೆಯನ್ನು ನೆನೆನೆನೆದು ಮನಸ್ಸು ಖಿನ್ನತೆಯತ್ತ ಜಾರತೊಡಗಿತು. ಕಾರಣವೇ ಇಲ್ಲದೆ ಭ್ರಷ್ಟತೆಯ ಹಣೆಪಟ್ಟಿ ಹಚ್ಚಿಕೊಳ್ಳಬೇಕಾಗಿ ಬಂದುಬಿಟ್ಟರೆ… ಯಾರದೋ, ಯಾವುದೋ ಕುಟಿಲ ಸಂಚಿಗೆ ಬಲಿಪಶುವಾಗಿ ನರಳುವುದೆಂದರೆ ಏನರ್ಥ? ಕುಟುಂಬದ ಸದಸ್ಯರೆಲ್ಲರಿಗೂ ಎಂಥ ಮುಜುಗರವನ್ನೂ ಲಜ್ಜೆಯನ್ನೂ ಉಂಟುಮಾಡುವ ಸನ್ನಿವೇಶ ಎದುರಾಗಿಬಿಡುತ್ತಿತ್ತು ಎಂಬುದನ್ನು ಕಲ್ಪಿಸಿಕೊಂಡೇ ಹತಾಶೆಯ ಮಡುವಿಗೆ ಜಾರತೊಡಗಿದ್ದೆ. ನಿದ್ದೆ ಅನ್ನುವುದೇ ಕನಸಿನ ಮಾತಾಗಿ ಹೋಗಿತ್ತು. ಆ ನಾಲ್ಕಾರು ದಿನಗಳು ನಾನು ಅನುಭವಿಸಿದ ಸಂಕಟ – ಯಾತನೆಗಳು ಅಷ್ಟಿಷ್ಟಲ್ಲ.

ಇದ್ದಕ್ಕಿದ್ದ ಹಾಗೆ, ಇಂಥದೊಂದು ವಾತಾವರಣದಲ್ಲಿ, ವಿನಾಕಾರಣ ಬಲಿಪಶುವಾಗಿಬಿಡಬಹುದಾದ ಕತ್ತಿಯಲಗಿನ ಸನ್ನಿವೇಶಗಳನ್ನೆದುರಿಸುತ್ತಾ ಇರುವ ಅಗತ್ಯವಾದರೂ ಏನಿದೆ? ಹೇಗೂ ವರ್ಗಾವಣೆಯ ತೂಗುಕತ್ತಿ ತಲೆಯ ಮೇಲೆ ತೂಗುತ್ತಲೇ ಇದೆ… ಇಂದಲ್ಲ ನಾಳೆ ಬಹುಶಃ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರನಡೆಯಲೇ ಬೇಕು; ಇಂದೇ ಏಕಾಗಬಾರದು? ಹೇಗೂ ಈಗಾಗಲೇ ಉದಯ ಟಿವಿ ಪ್ರಾರಂಭವಾಗಿದೆ; ಇನ್ನೂ ಒಂದೆರಡು ವಾಹಿನಿಗಳು ಆರಂಭವಾಗುವ ಹಂತದಲ್ಲಿವೆ; ಪೂರ್ಣಪ್ರಮಾಣದ  ವೃತ್ತಿಪರ ನಟ – ನಿರ್ದೇಶಕನಾಗಿ ತೊಡಗಿಕೊಂಡರೆ ನನಗೆ ಒಂದಿಷ್ಟು ಕೆಲಸ ಸಿಗದೇ ಹೋದೀತೇ? ಹೇಗೂ ರಂಜನಿ ಕೆಲಸಕ್ಕೆ ಹೋಗುತ್ತಿರುವುದರಿಂದ ಒಂದು ಖಚಿತ ವರಮಾನವಿದೆ… ವರ್ಗಾವಣೆಯಾಗಿ ಬೇರೆ ಊರಿಗೆ ಹೋದರೂ ಒಬ್ಬರ ದುಡಿಮೆಯೇ ಆಧಾರ ಎಂಬಂತಹ ಪರಿಸ್ಥಿತಿಯೇ! ಜೊತೆಗೆ ಊರೂರು ತಿರುಗುತ್ತಿದ್ದರೆ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ…

ಹೀಗೆಲ್ಲಾ ಯೋಚಿಸಿದ ಮೇಲೆ ಕೆಲಸಕ್ಕೆ ರಾಜೀನಾಮೆ ಕೊಟ್ಟೇ ಬಿಡುವುದೆಂದು ತೀವ್ರವಾಗಿ ಅನ್ನಿಸಿಬಿಟ್ಟಿತು. ಆ ವೇಳೆಗೆ ನಾನು ಕೇವಲ ಹದಿನಾಲ್ಕು ವರ್ಷಗಳ ಸೇವೆಯನ್ನಷ್ಟೇ ಪೂರೈಸಿದ್ದರಿಂದ ಸ್ವಯಂನಿವೃತ್ತಿ ಪಡೆಯುವ ಅರ್ಹತೆ ನನಗಿನ್ನೂ ಪ್ರಾಪ್ತವಾಗಿರಲಿಲ್ಲ. ರಾಜೀನಾಮೆಯೊಂದೇ ನನಗಿದ್ದ ಆಯ್ಕೆ. ರಂಜನಿಯೊಂದಿಗೆ ಚರ್ಚಿಸದೇ ಆ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ ಅನ್ನಿಸಿತು. ಇದು ನಮ್ಮೆಲ್ಲರ ಭವಿಷ್ಯದ ಪ್ರಶ್ನೆ… ಒಟ್ಟಿಗೇ ಕುಳಿತು ಮಾತಾಡಿ ನಂತರ ಒಂದು ನಿರ್ಧಾರಕ್ಕೆ ಬರುವುದೆಂದು ಯೋಚಿಸಿ ಅಂದೇ ಮಧ್ಯಾಹ್ನ ರಂಜನಿಯ ಕಾಲೇಜ್ ಮುಗಿಯುವ ವೇಳೆಗೆ ಅಲ್ಲಿಗೇ ಹೋದೆ. “ನಾವಿಬ್ಬರೂ ಕುಳಿತು ಆಲೋಚಿಸಿ ಮಾತಾಡಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ… ಬಾ” ಎಂದು ಹೇಳಿ ಅವಳೊಟ್ಟಿಗೆ ಮಲ್ಲೇಶ್ವರದ ಕೃಷ್ಣಭವನಕ್ಕೆ ಹೋದೆ. ಅಲ್ಲಿ ಸುಮಾರು ಎರಡು ತಾಸಿನಷ್ಟು ಹೊತ್ತು ಕುಳಿತು ಮಾತಾಡಿದೆವು. ರಾಜೀನಾಮೆ ನೀಡಲು ಯೋಚಿಸಿದ್ದೇನೆಂದು ಹೇಳಿದಾಗ ಮೊದಲಿಗೆ ಅವಳಿಗೆ ಆಘಾತವೇ ಆಯಿತು. ಕೇಂದ್ರ ಸರ್ಕಾರದ ಖಾಯಂ ಕೆಲಸ… ಗೆಜೆ಼ಟೆಡ್ ಆಫೀಸರ್ ಹುದ್ದೆ… ನಿವೃತ್ತಿಯ ನಂತರವೂ ಪಿಂಚಣಿ… ಯಾರೇ ಆದರೂ ಹತ್ತು ಬಾರಿ ಆಲೋಚಿಸಿ ತೀರ್ಮಾನಿಸಬೇಕಾದ ಸಂದರ್ಭ ಅನ್ನುವುದು ಸಂದೇಹಾತೀತ! ಕೆಲಕ್ಷಣಗಳ ಕಾಲ ರಂಜನಿ ಏನೂ ಮಾತಾಡಲಿಲ್ಲ. ನಂತರ ಇಬ್ಬರೂ ರಾಜೀನಾಮೆಯ ನಂತರದ ಸಾಧಕಬಾಧಕಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದೆವು.

ಆಗ ರಂಜನಿಗೆ ಕಾಲೇಜಿನಲ್ಲಿ ಹೆಚ್ಚು ಸಂಬಳವೇನೂ ಬರುತ್ತಿರಲಿಲ್ಲ. ಇಬ್ಬರು ಮಕ್ಕಳು… ರಾಧಿಕಾಳ ಸ್ಕೂಲ್ ವಿದ್ಯಾಭ್ಯಾಸ ಆಗಲೇ ಆರಂಭವಾಗಿದೆ… ಅನಿರುದ್ಧನದೂ ಸಧ್ಯದಲ್ಲೇ ಆರಂಭವಾಗಲಿದೆ… ಒಬ್ಬಳ ಸಂಬಳದಲ್ಲಿ ಸಂಸಾರ ನಿರ್ವಹಣೆ ಆಗಬೇಕು! ನನಗೆ ಸಿನೆಮಾ – ಧಾರಾವಾಹಿಗಳಲ್ಲಿ ನಟನೆಯ – ನಿರ್ದೇಶನದ ಅವಕಾಶಗಳು ಬಂದರೇನೋ ಅಡ್ಡಿಯಿಲ್ಲ… ಆದರೆ ಅವಕಾಶ ಬಂದೇ ಬರುತ್ತದೆ ಎಂಬುದು ಖಚಿತವಿಲ್ಲ! ಇದು ಒಂದು ಮಗ್ಗುಲ ವಿಚಾರವಾದರೆ, ಕೆಲಸದಲ್ಲೇ ಮುಂದುವರಿದರೆ ಸದ್ಯದಲ್ಲೇ ಬಡ್ತಿಯೊಂದಿಗೆ ವರ್ಗಾವಣೆಯಾಗುವ ಸಾಧ್ಯತೆಗಳು ದಟ್ಟವಾಗಿವೆ… ಹಾಗೇನಾದರೂ ಆದರೆ ಮತ್ತೆ ಹೊಸ ಸಮಸ್ಯೆಗಳ ಹೊಸ್ತಿಲಲ್ಲಿ ನಿಲ್ಲುತ್ತೇವೆ! ವರ್ಗಾವಣೆಯಾದರೆ ಬೇರೆ ಬೇರೆ ಇರುವುದು ಸಾಧ್ಯವೇ ಇಲ್ಲ ಎಂದು ರಂಜನಿ ಹಿಂದೆಯೇ ಖಡಾಖಂಡಿತವಾಗಿ ಹೇಳಿದ್ದಳು. ಅವಳು ಕೆಲಸ ಬಿಟ್ಟು ನನ್ನೊಂದಿಗೆ ಮಕ್ಕಳನ್ನೂ ಕಟ್ಟಿಕೊಂಡು ಊರೂರಿಗೆ ಸುತ್ತುವುದಾಗಬೇಕು; ಇಲ್ಲವೇ ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಇಲ್ಲೇ ಉಳಿಯಬೇಕು! ಹೀಗೆ ಎಲ್ಲಾ ನಿಟ್ಟಿನಿಂದಲೂ ವಿಚಾರ ಮಾಡಿದ ಮೇಲೆ ರಂಜನಿ ದೃಢಸ್ವರದಲ್ಲಿ ನುಡಿದಳು:

“ನನಗೆ ಎಲ್ಲಕ್ಕಿಂತ ಮುಖ್ಯ ನಿಮ್ಮ ಮನಸ್ಸಿನ ನೆಮ್ಮದಿ. ಅದಕ್ಕೇ ಧಕ್ಕೆಯೊದಗುವಂತಹ ವಾತಾವರಣದಲ್ಲಿ ಯಾವ ಕಾರಣಕ್ಕೂ ನೀವು ಮುಂದುವರಿಯಬೇಕಿಲ್ಲ. ನನ್ನೊಬ್ಬಳ ಸಂಬಳದಲ್ಲಿ ಸಂಸಾರ ತೂಗಿಸಿಕೊಂಡು ಹೋಗುವುದು ಕಷ್ಟವಾಗಬಹುದು… ಅಡ್ಡಿಯಿಲ್ಲ. ನಿಮ್ಮ ನೆಮ್ಮದಿಯ ಮುಂದೆ ಆ ಕಷ್ಟಗಳು ಖಂಡಿತಾ ದೊಡ್ಡವಲ್ಲ. ಜೊತೆಗೆ ನಿಮಗೆ ಅವಕಾಶಗಳು ದೊರೆಯುವುದಿಲ್ಲ ಎಂದೇಕೆ ನಾವು ಭಾವಿಸಬೇಕು? ಒಮ್ಮೆ ನಿಮ್ಮ ಪ್ರತಿಭೆ – ಸಾಮರ್ಥ್ಯಗಳು ಬೆಳಕಿಗೆ ಬಂದರೆ ಸಾಕು, ಅವಕಾಶಗಳು ತಾವಾಗಿಯೇ ಅರಸಿಕೊಂಡು ಬಂದು ಕದ ತಟ್ಟುತ್ತವೆ. ಬಹುಶಃ ಈಗಿರುವುದಕ್ಕಿಂತಲೂ ಒಳ್ಳೆಯ ಸ್ಥಿತಿಗೆ ನಮ್ಮನ್ನು ದಾಟಿಸಲು ಒದಗಿಬಂದಿರುವ ಸುವರ್ಣಾವಕಾಶ ಇದು ಎಂದೇಕೆ ನಾವು ಭಾವಿಸಬಾರದು? ಮೊದಲು ಹೋಗಿ ರಾಜೀನಾಮೆ ಕೊಟ್ಟು ಬನ್ನಿ. ನಿಮ್ಮ ತೀರ್ಮಾನಕ್ಕೆ ನನ್ನ ಸಹಮತವಿದೆ. ಏನೇ ಆಗಲಿ ಬಂದದ್ದನ್ನು ಧೈರ್ಯವಾಗಿ ಎದುರಿಸೋಣ… ಆದರೆ ಜೊತೆಯಾಗಿರೋಣ ಅಷ್ಟೇ”. ಅವಳ ಧ್ವನಿಯಲ್ಲಿ ಅಳುಕು – ಅಪನಂಬಿಕೆ ಇರಲಿಲ್ಲ… ಬದಲಿಗೆ ದೃಢತೆ ಇತ್ತು… ವಿಶ್ವಾಸವಿತ್ತು… ಛಲವಿತ್ತು… ನನಗಷ್ಟು ಸಾಕಿತ್ತು! ʻವೆಚ್ಚಕ್ಕೆ ಹೊನ್ನಿʼಲ್ಲದಿದ್ದರೂ ʻಇಚ್ಛೆಯನರಿವ ಸತಿ ಇದ್ದರೆ ಸ್ವರ್ಗಕ್ಕೇ ಕಿಚ್ಚು ಹಚ್ಚಬಹುದಂತೆ…ʼ ಇನ್ನು ಜುಜುಬಿ ರಾಜೀನಾಮೆಯದೊಂದು ಲೆಕ್ಕವೇ!! ರಂಜನಿಯೊಂದಿಗೆ ಮಾತಾಡಿದ ಮೇಲೆ ನಿರ್ಧಾರ ಮತ್ತಷ್ಟು ಗಟ್ಟಿಯಾಯಿತು.

ಅಕ್ಕ – ಭಾವಂದಿರೊಂದಿಗೂ ಈ ವಿಷಯ ಚರ್ಚಿಸಿದೆ. ಅವರೂ ಸಹಾ, “ಎಲ್ಲಕ್ಕಿಂತ ನೆಮ್ಮದಿ ಮುಖ್ಯ… ಸವಾಲುಗಳನ್ನು ಸ್ವೀಕರಿಸಿ ಎದುರಿಸಿ ಬದುಕೋದೇ ಸಾರ್ಥಕ ಅನ್ನಿಸಿಕೊಳ್ಳೋದು… ಬರೀ ತಿಂಗಳ ಸಂಬಳದ ಸೆಕ್ಯೂರಿಟಿಗೆ ಜೋತುಬಿದ್ರೆ ಏನನ್ನೂ ಸಾಧಿಸೋಕಾಗಲ್ಲ… ಈ ʻತಿಂಗಳ ಸಂಬಳʼ ಅನ್ನೋದು ಎಲ್ಲಕ್ಕಿಂತ ದೊಡ್ಡ ಚಟ… ಬಿಟ್ಟು ಹಾಕು… ಒಬ್ಬ ನಟನಾಗಿ ನಿನ್ನ ಪೂರ್ತಿ ತಾಕತ್ತನ್ನ ತೋರಿಸೋಕೆ ನಿನಗೆ ಬೇಕಾದಷ್ಟು ಅವಕಾಶಗಳನ್ನ ಒದಗಿಸಿಕೊಡೋದಕ್ಕೆ ಅಂತಾನೇ ಇಂಥದೊಂದು ಸಂದಿಗ್ಧ ಸ್ಥಿತಿ ಎದುರಾಗಿದೆ ಅಂತ ಕಾಣುತ್ತೆ… ನಿನಗನ್ನಿಸಿದ ನಿರ್ಧಾರ ನೀನು ತೊಗೋ… ನಾವೆಲ್ಲರೂ ನಿನ್ನ ಜೊತೇಗಿರ್ತೀವಿ” ಎಂದು ಧೈರ್ಯ ತುಂಬಿ ಸ್ಫೂರ್ತಿ ನೀಡಿದರು. ಕುಮಾರಣ್ಣಯ್ಯನೂ ಸಹಾ ಸಕಾರಾತ್ಮಕವಾಗಿ ಸ್ಪಂದಿಸಿ “ನಿನ್ನ ಕುಟುಂಬ ನಿನ್ನ ಜೊತೇಗಿರೋವಾಗ ನೀನು ಚಿಂತೆ ಮಾಡೋ ಅಗತ್ಯವಿಲ್ಲ” ಎಂದು ವಿಶ್ವಾಸ ತುಂಬಿದ. ಅಲ್ಲಿಗೆ ಕೆಲಸಕ್ಕೆ ರಾಜೀನಾಮೆ ನೀಡುವ ನನ್ನ ನಿರ್ಧಾರ ಹರಳುಗಟ್ಟಿಕೊಂಡುಬಿಟ್ಟಿತು!

ಆದರೆ ಅದಕ್ಕೆ ಮುನ್ನ ಮಾಡಲೇಬೇಕಾದ ಒಂದೆರಡು ಅತಿ ಮುಖ್ಯ ಕೆಲಸಗಳಿವೆ! ಯಾವುದೇ ಕಾರಣಕ್ಕೂ ನಾನು ಈ ಧೂರ್ತರಿಗೆ ಹೆದರಿಕೊಂಡಾಗಲೀ ಅಳುಕು – ತಪ್ಪಿತಸ್ಥ ಭಾವನೆಯಿಂದಾಗಲೀ ಕೆಲಸ ಬಿಡುತ್ತಿದ್ದೇನೆಂದು ಯಾರೂ ನಾಲಗೆ ಹರಿಯಬಿಡಬಾರದು! ಅದಕ್ಕೆ ಅಗತ್ಯವಾದ ವೇದಿಕೆಯನ್ನು ಮೊದಲು ಸಿದ್ಧಪಡಿಸಿಡಬೇಕು! ಒಂದೆರಡು ಪೀತಪತ್ರಿಕೆಗಳಲ್ಲಿ ದೂರದರ್ಶನದ ಕರ್ಮಕಾಂಡವೆಂದು ಟೀಕಿಸುತ್ತಾ ನನ್ನ ಬಗ್ಗೆ ಹರಡಿದ್ದ ಗಾಳಿಸುದ್ದಿಗಳನ್ನೂ ವಿಜೃಂಭಿಸಿ ಬರೆದು ತೇಜೋವಧೆ ಮಾಡುವ ಪ್ರಯತ್ನ ನಡೆಯಿತು. ಯಾವ ಸಾಕ್ಷ್ಯಾಧಾರಗಳೂ ಇಲ್ಲದೆ ಆ ಆರೋಪ ಮಾಡಿದವರ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವ ವಿಚಾರವೂ ಬಂತಾದರೂ, “ಆಗುವ ಹಾನಿ ಆಗಿಹೋಗಿದೆ; ತಡೆಯಲಾಗದು… ಇನ್ನು ಇದರ ಬಗ್ಗೆ ಗುದ್ದಾಡುತ್ತಾ ವರ್ಷಗಟ್ಟಲೆ ಕೋರ್ಟು ಕಛೇರಿ ಎಂದು ಅಲೆಯುವ ಹಿಂಸೆಯನ್ನು ಏಕೆ ಮೈಮೇಲೆ ಎಳೆದುಕೊಳ್ಳಬೇಕು” ಎಂದು ಭಾವನವರು ತಿಳಿಹೇಳಿದ್ದರಿಂದ ಸುಮ್ಮನಾದೆ. ಆದರೂ ಒಂದೆರಡು ಅತಿ ಮುಖ್ಯ ಕೆಲಸಗಳು ಆಗಲೇಬೇಕು! ನನ್ನ ಮನಸ್ಸಮಾಧಾನಕ್ಕಾಗಿ… ಒಂದು ಖಚಿತ ಆಧಾರವಾಗಿ! ಸಾಕಷ್ಟು ಯೋಚಿಸಿ ಒಂದು ತೀರ್ಮಾನಕ್ಕೆ ಬಂದೆ. ಹಾಗೆ ಮಾಡಿದರೆ ನಡೆದದ್ದೇನೆಂಬುದು ಖಚಿತವಾಗಿ ತಿಳಿಯುವುದರ ಜತೆಗೆ ಅದು ಒಂದು ದಾಖಲೆಯೂ ಆಗಿಬಿಡುತ್ತದೆ!

ಹಾಗಾಗಿ ಈಗ ಮೊದಲಿಗೆ ಬೇಕಾಗಿರುವುದು ರಘುವೀರನ ತಪ್ಪೊಪ್ಪಿಗೆಯ ದಾಖಲೆ!!

‍ಲೇಖಕರು admin j

July 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: