ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ– ನಾವೂ ಸಂಸನ ಬೆನ್ನು ಹತ್ತಿದೆವು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.

ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 165
—————
ಮೂರ್ತಿಯವರ ಮಾತನ್ನು ಪೂರ್ತಿಯಾಗಿ ಗ್ರಹಿಸಲು ಸ್ವಲ್ಪ ಸಮಯವೇ ಹಿಡಿಯಿತು ನನಗೆ. ನನ್ನ ಮೌನವನ್ನೂ ಗೊಂದಲವನ್ನೂ ಅರ್ಥ ಮಾಡಿಕೊಂಡವರಂತೆ ಮೂರ್ತಿಯವರೇ ಮುಂದುವರಿಸಿದರು: “ನಾನು ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದೇನೋ ನಿಜ; ಆದರೆ ನಿಮಗೇ ಆ ಒಂದು ಇರಾದೆ ಇದ್ದರೆ ಹಾಗೂ ಆಗಬಹುದು. ನೀವು ಹೇಗೆ ಹೇಳಿದರೆ ಹಾಗೆ. ಒಟ್ಟಿನಲ್ಲಿ ನಿಮ್ಮ ಈ ನಾಟಕ ಸಿನೆಮಾ ಆಗಲೇಬೇಕು ಪ್ರಭುಗಳೇ.”

ನಾನು ಕೊಂಚ ಯೋಚನೆ ಮಾಡುವುದಾಗಿ ಹೇಳಿ ಸ್ವಲ್ಪ ಸಮಯಾವಕಾಶವನ್ನು ಬೇಡಿದೆ. ಆಗಲಿ ಎಂದರು ಮೂರ್ತಿಗಳು.

ಮುಂದಿನ ಭೇಟಿಯ ಸಮಯದಲ್ಲಿ ನಾನು ಮೂರ್ತಿಯವರ ಮುಂದೆ ಒಂದೆರಡು ಸಲಹೆಗಳನ್ನಿಟ್ಟೆ: ” ಈಗಿರುವ ರೀತಿಯಲ್ಲೇ ಸಿನೆಮಾ ಮಾಡುವುದು ಅಸಾಧ್ಯ; ನಾವು ಸಂಸರ ಬದುಕನ್ನೇ ಆಧಾರವಾಗಿಟ್ಟುಕೊಂಡು ಒಂದು ಪೂರ್ಣ ಪ್ರಮಾಣದ ಚಲನಚಿತ್ರವನ್ನೇ ಏಕೆ ಮಾಡಬಾರದು? ಏಕವ್ಯಕ್ತಿ ಸಿನೆಮಾ ಎಂದರೆ ನಾವೇ ಮಿತಿಗಳನ್ನು ಹಾಕಿಕೊಂಡಂತೆ ಆಗುವುದಿಲ್ಲವೇ? ಮೇಲಾಗಿ ಒಂದು ಒಳ್ಳೆಯ ಚಲನಚಿತ್ರವನ್ನು ಕಟ್ಟಿಕೊಡಲು ಬೇಕಾದ ಕಥನಸಾಮಗ್ರಿ ಸಂಸರ ಬದುಕಿನ ಕಥೆಯಲ್ಲಿ ವಿಪುಲವಾಗಿದೆ. ಕಲಾತ್ಮಕ ಚಿತ್ರಗಳ ಚೌಕಟ್ಟಿನಲ್ಲಿಯೇ ಒಂದು ಅರ್ಥಪೂರ್ಣ ಹಾಗೂ ಸ್ವಾರಸ್ಯಕರ ಚಿತ್ರವನ್ನೇಕೆ ರೂಪಿಸುವ ಪ್ರಯತ್ನ ಮಾಡಬಾರದು? “—ಇದಿಷ್ಟೂ ನನ್ನ ವಿಚಾರಗಳಾಗಿದ್ದವು.

ತಾಳ್ಮೆಯಿಂದ ಕೇಳಿಸಿಕೊಂಡ ಮೂರ್ತಿಯವರು ತಮ್ಮ ವಾದಸರಣಿ ಮಂಡಿಸಿದರು: “ಕಥೆ ಸಿನೆಮಾ ಮಾಡಲು ಅದ್ಭುತವಾಗಿದೆ ಅನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಹೇಳಿ ಕೇಳಿ ಇದು ಸ್ವಾತಂತ್ರ್ಯ ಪೂರ್ವದ ಸಮಯದ ಕಥೆ. ಬ್ರಿಟಿಷರ ಆಳ್ವಿಕೆಯ ಸಮಯದ ಮೈಸೂರು ಪ್ರಾಂತ ಹೆಚ್ಚಿನಂಶ ಕಥೆ ನಡೆಯುವ ಸ್ಥಳ. ಬರ್ಮಾ, ಕ್ವೆಟ್ಟಾ ಮುಂತಾದ ಕಡೆಗಳಿಗೂ ಸಂಸರು ಹೋಗಿಬಂದ ಪ್ರಸ್ತಾಪವಿದೆ. ಒಂದು ನಿರ್ದಿಷ್ಟ ಕಾಲಮಾನದ ಚಿತ್ರವನ್ನು ಮಾಡಬೇಕೆಂದರೆ ಹೆಚ್ಚು ಬಂಡವಾಳದ ಅಗತ್ಯವಿದೆ. ಆ ಕಾಲದ ರಸ್ತೆಗಳು, ಮನೆಗಳು, ವಾತಾವರಣ, ಉಡುಗೆತೊಡುಗೆ, ಪರಿಕರಗಳು…ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಬೇಕು..ಅದು ಅಸಾಧ್ಯವೇನಲ್ಲ…ಖಂಡಿತ ಮಾಡಬಹುದು…ಆದರೆ ಪೂರ್ವತಯಾರಿಗೆ ಹೆಚ್ಚು ಸಮಯವೂ ಬೇಕು..ಬಂಡವಾಳವೂ ಜಾಸ್ತಿ ಬೇಕು..ಅಷ್ಟು ದೊಡ್ಡ ಮೊತ್ತ ತೊಡಗಿಸುವಷ್ಟು ಆರ್ಥಿಕ ಕ್ಷಮತೆ ನನಗಿಲ್ಲ. ಬೇರೆ ಯಾರಾದರೂ ದೊಡ್ಡ ನಿರ್ಮಾಪಕರನ್ನೇ ಕೇಳಬೇಕು. ಕೇಳಿದರೂ ಇಂಥದೊಂದು ಬೇರೆ ರೀತಿಯ ಕಲಾತ್ಮಕ ಚಿತ್ರಕ್ಕೆ ಬಂಡವಾಳ ಹಾಕಲು ಯಾವ ನಿರ್ಮಾಪಕರು ತಾನೇ ಮುಂದೆ ಬರುತ್ತಾರೆ? ನಾನು ಈ ಹಿಂದೆ ಮಾಡಿರುವುದೆಲ್ಲಾ ಆರ್ಟ್ ಫಿಲ್ಮ್ ಗಳೇ! ಆದರೆ ತುಂಬಾ ಕಡಿಮೆ ಬಂಡವಾಳದಲ್ಲಿ ಮುಗಿಯಬಹುದಾದಂತಹ ಕಥಾಚಿತ್ರಗಳನ್ನೇ ನಾನು ಆರಿಸಿಕೊಳ್ಳುತ್ತಿದ್ದೆ. ಅದಕ್ಕೇ ಆಗಲೇ ಹೇಳಿದ್ದು—ಇದು ನನ್ನ ಮಿತಿಗಳನ್ನು ಮೀರಿದ ಸಿನೆಮಾ ಎಂದು!”

ಮೂರ್ತಿಯವರ ವಾದಸರಣಿ ಸಮಂಜಸವಾಗಿಯೇ ಇದ್ದರೂ ನನಗೊಂದು ದೂರದ ಆಸೆ: ಅಕಸ್ಮಾತ್ ಯಾರಾದರೂ ಸದಭಿರುಚಿಯ ಸಾಹಿತ್ಯಪ್ರೇಮಿ ನಿರ್ಮಾಪಕ ದೊರೆತೇಬಿಟ್ಟರೆ ಅದ್ಭುತವಾದ ಚಿತ್ರವನ್ನೇ ಮಾಡಬಹುದಲ್ಲಾ ಎಂದು! ಮೂರ್ತಿಯವರು ನನ್ನ ಚಡಪಡಿಕೆಯನ್ನು ನೋಡಿ ನಸುನಕ್ಕು, “ಆಯ್ತು..ಬನ್ನಿ ನಾಳೆ ನನ್ನ ಜೊತೆ. ಕೆಲವು ನಿರ್ಮಾಪಕರನ್ನು ಭೇಟಿ ಮಾಡಿಸ್ತೀನಿ.. ನೀವೇ ಖುದ್ದಾಗಿ ಅವರುಗಳ ಜೊತೆ ಮಾತಾಡಿ ಸಮಾಧಾನ ಮಾಡಿಕೊಳ್ಳುವಿರಂತೆ” ಎಂದರು.

ಮರುದಿನದಿಂದ ಶುರುವಾಯಿತು ನಿರ್ಮಾಪಕರ ಬೇಟೆ.

ಮೂರ್ತಿಯವರು ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಹಾಕುವ ದುಡ್ಡನ್ನು ಒಂದಷ್ಟು ಪಟ್ಟು ಹೆಚ್ಚಿಸಿಕೊಡುವ ತಾಕತ್ತಿರುವ ವ್ಯಾಪಾರೀ ಅಂಶಗಳ ಕಥೆ ಕೇಳಲು ಮಾತ್ರವೇ ಉತ್ಸಾಹ ತೋರುತ್ತಿದ್ದ ನಿರ್ಮಾಪಕರು ನಾನು ಸಂಭ್ರಮದಿಂದ ಸಂಸರ ಕಥೆ ಹೇಳಲು ಶುರು ಮಾಡಿದೊಡನೆ ತಣ್ಣಗಾಗಿಬಿಡುತ್ತಿದ್ದರು! ಎಷ್ಟು ಫೈಟು, ಎಷ್ಟು ಡಾನ್ಸು…ಹೀರೋ ಯಾರು? ಇತ್ಯಾದಿ ರೂಢಿಗತ ಚರ್ಚೆಗೆ ಧುಮುಕುತ್ತಿದ್ದ ಅವರ ಮನಸ್ಸಿಗೆ ಒಗ್ಗುವ ಕಥೆ ನನ್ನ ಬತ್ತಳಿಕೆಯಲ್ಲಿರಲಿಲ್ಲ! ಒಂದು ವಾರದ ಇಂಥ ವ್ಯರ್ಥ ಪ್ರಯತ್ನಗಳ ನಂತರ ನಾನು ಸೋತು ಹೋದೆ. ಮೂರ್ತಿಯವರಿಗೆ ಇದಾವುದೂ ಹೊಸ ಸಂಗತಿಯಲ್ಲವಾದ್ದರಿಂದ ಅವರು ಸ್ಥಿತಪ್ರಜ್ಞನಂತೆ ನನ್ನ ಮುಖವನ್ನೇ ನೋಡುತ್ತಾ ನಸುನಗುತ್ತಾ ಕುಳಿತಿದ್ದರು!

“ಈ ಸಮಸ್ಯೆಗಳೆಲ್ಲಾ ನನಗೆ ಚಿರಪರಿಚಿತ ಪ್ರಭುಗಳೇ..ಆ ಕಾರಣಕ್ಕೇ ಅಲ್ಲವೇ ಇರುವ ಹಾಗೇ ಸಿನೆಮಾ ಮಾಡಿಬಿಡೋಣ ಎಂದು ನಾನು ಹೇಳಿದ್ದು?” ಎಂದರು ಮೂರ್ತಿಗಳು. “ಆಗಲಿ ಮೂರ್ತಿಗಳೇ..ನೀವು ಹೇಳಿದಂತೇ ಆಗಲಿ…ಆದರೆ ತೀರಾ ನಾಟಕ ಇರುವ ರೀತಿಯಲ್ಲಿಯೇ ಅದನ್ನು ಚಿತ್ರೀಕರಿಸುವುದು ಬೇಡ..ಯಾಕೆಂದರೆ ಎರಡೂ ಮಾಧ್ಯಮಗಳು ಸಂಪೂರ್ಣವಾಗಿ ಬೇರೆ ಬೇರೆ. ನಾಟಕದಲ್ಲಿ ಸಹಜವೆನ್ನಿಸುವ ಸಂಗತಿಗಳು ಸಿನೆಮಾದಲ್ಲಿ ಆಭಾಸಗಳಾಗಿಬಿಡಬಹುದು! ಅದರಲ್ಲೂ ಕಾಲ—ಸ್ಥಳಗಳಿಗೆ ಸಂಬಂಧಪಟ್ಟಂತಹ ವಿವರಗಳನ್ನು ಒಬ್ಬನೇ ಪಾತ್ರಧಾರಿಯ ಒಂದೇ ಶಾಟ್ ನ ಚಿತ್ರದಲ್ಲಿ ಅಳವಡಿಸಿಕೊಳ್ಳಬೇಕಾದರೆ ಚಿತ್ರಕಥೆಯನ್ನು ಸಂಪೂರ್ಣವಾಗಿ ಬದಲಾಯಿಸಿ ಸಿದ್ಧಪಡಿಸಬೇಕು! ಒಂದೆರಡು ತಿಂಗಳು ಕಾಲಾವಕಾಶ ಕೊಡಿ.. ಎಲ್ಲ ಸಾಧ್ಯತೆಗಳನ್ನೂ ಪರಾಮರ್ಶಿಸಿ ಒಂದು ಓಟಕ್ಕೆ ಒಗ್ಗುವ ರೀತಿಯಲ್ಲಿ ಚಿತ್ರಕಥೆ ಸಿದ್ಧಪಡಿಸುತ್ತೇನೆ..ಚಿತ್ರಕಥೆ ಸಿದ್ಧವಾಗಿಬಿಟ್ಟರೆ ಅರ್ಧ ಸಿನೆಮಾ ಆದಹಾಗೇ ಲೆಕ್ಕ” ಎಂದೆ ನಾನು. ಅವಶ್ಯವಾಗಿ ಆಗಲಿ ಎಂದರು ಮೂರ್ತಿಗಳು. ಸರಿ, ಅಲ್ಲಿಗೆ ಮತ್ತೊಮ್ಮೆ ಸಂಸರನ್ನು ಆವಾಹಿಸಿಕೊಳ್ಳುವುದಾಯಿತು!

ಈ ಸಮಯದಲ್ಲಿ ನಾನು ಅಭಿನಯಿಸಿದ ಮತ್ತೊಂದು ಧಾರಾವಾಹಿ ‘ನಂದಿನಿ’ ಒಂದೆರಡು ಕಾರಣಗಳಿಗೆ ನಾನು ಸದಾ ನೆನೆಸುವಂಥದ್ದು. ಈ ಧಾರಾವಾಹಿಯ ನಿರ್ಮಾಪಕರು ರಮೇಶ್ ಅರವಿಂದ್ ಅವರ ಹತ್ತಿರದ ಸಂಬಂಧಿ ರವಿ ಜೋಶಿ ಅವರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯ ಒಂದು ಮುಖ್ಯ ಖಳ ಪಾತ್ರಕ್ಕೆ ನನ್ನನ್ನು ಕೇಳಿದ್ದರು. ನಾನೂ ಆಗಲಿ ಎಂದು ಒಪ್ಪಿಗೆಯನ್ನೂ ಕೊಟ್ಟಿದ್ದೆ. ಅನಂತರ ತಕ್ಷಣ ನನಗೆ ಜ್ಞಾನೋದಯವಾಯಿತು—ಉದಯ ಟಿ ವಿ ಯ ಧಾರಾವಾಹಿ ಎಂದರೆ ಡಬ್ಬಿಂಗ್ ಇರುತ್ತದೆ! ಅಂದರೆ ಪ್ರತಿ ಕಂತಿನ ಪ್ರಸಾರದ ಮುನ್ನವೇ ಹೋಗಿ ನಮ್ಮ ಪಾತ್ರವಿರುವ ದೃಶ್ಯಗಳ ಡಬ್ಬಿಂಗ್ ಅನ್ನು ಮುಗಿಸಿಕೊಡಬೇಕು! ಶೂಟಿಂಗ್ ಗೆ ದಿನಗಳನ್ನು ಹೊಂದಿಸಿಕೊಳ್ಳುವುದು ಅಷ್ಟು ಕಷ್ಟವಾಗದಿದ್ದರೂ ಡಬ್ಬಿಂಗ್ ಗೋಸ್ಕರ ಪದೇಪದೇ ಡಬ್ಬಿಂಗ್ ಸ್ಟುಡಿಯೋಗಳಿಗೆ ಹೋಗುವುದು ಮಾತ್ರ ಹಿಂಸೆಯ ಕೆಲಸ. ಒಡನೆಯೇ ನಾನು ನಿರ್ವಾಹಕರಿಗೆ ಕರೆಮಾಡಿ ಡಬ್ಬಿಂಗ್ ಇರುವುದೇ ಆದರೆ ನಾನು ಈ ಪಾತ್ರ ನಿರ್ವಹಿಸಲಾರೆ; ನೀವು ಬೇರೆ ಯಾರನ್ನಾದರೂ ನೋಡಿಕೊಳ್ಳಿ ಎಂದುಬಿಟ್ಟೆ.

ಯಾಕೋ ಆ ತಂಡದವರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಎಂದು ತೋರುತ್ತದೆ..”ಇಲ್ಲವೇ ಇಲ್ಲ ಸರ್..ನೀವು ಆಗಲಿ ಅಂತ ಒಪ್ಪಿಕೊಂಡಿದ್ದೀರಿ..ಈಗ ಇಲ್ಲ ಎಂದರೆ ಕಷ್ಟವಾಗುತ್ತದೆ..ಮೇಲಾಗಿ ಅದು ನಿಮಗೇ ಹೇಳಿ ಮಾಡಿಸಿದ ಪಾತ್ರ (ಶಿವ ಶಿವಾ! ಖಳನ ಪಾತ್ರ ಅದು!!) ನೀವೇ ಮಾಡಬೇಕು” ಎಂದು ದುಂಬಾಲು ಬಿದ್ದುಬಿಟ್ಟರು. ನಾನು ಎಷ್ಟೇ ಕೊಸರಾಡಿದರೂ ಅವರು ಬಗ್ಗುವ ಹಾಗೆ ಕಾಣಲಿಲ್ಲ. ಕೊನೆಗೆ ನನ್ನ ಬತ್ತಳಿಕೆಯಲ್ಲಿ ಉಳಿದಿದ್ದ ಕಡೆಯ ಬ್ರಹ್ಮಾಸ್ತ್ರದ ಪ್ರಯೋಗಕ್ಕೆ ನಾನು ಮುಂದಾದೆ…ಈ ಅಸ್ತ್ರದ ಮುಂದೆ ಅವರು ಸೋತೇ ಸೋಲುತ್ತಾರೆ ಎಂದು ನನಗೆ ಖಾತ್ರಿಯಿತ್ತು! ನಾನು ಹೇಳಿದೆ: “ಆಯಿತು..ನಾನು ಪಾತ್ರ ಮಾಡುತ್ತೇನೆ…ಆದರೆ ನೀವು ಬೇರೆಯವರಿಂದ ನನಗೆ ಡಬ್ಬಿಂಗ್ ಮಾಡಿಸಿ..ನನಗದು ಸಾಧ್ಯವಿಲ್ಲ.” ನಾನೆಣಿಸಿದಂತೆಯೇ ಅವರು ಆ ಸಲಹೆಯನ್ನು ಒಪ್ಪಿಕೊಳ್ಳಲಿಲ್ಲವಾದರೂ ಪಟ್ಟು ಸಡಿಲಿಸಲಿಲ್ಲ! “ನಿಮ್ಮದು ನೋಟೆಡ್ ವಾಯ್ಸ್ ಸರ್…ನಿಮಗೆ ಬೇರೆಯವರು ಕಂಠದಾನ ಮಾಡಿದರೆ ವೀಕ್ಷಕರು ಒಪ್ಪುವುದು ಕಷ್ಟ” ಎಂದು ತರ್ಕ ಹೂಡಿದರು.

ನಾನೇ ಅವರಿಗೆ ಉಪಾಯವನ್ನೂ ಸೂಚಿಸಿದೆ: “ಸುದರ್ಶನ್ ಎಂಬ ಒಬ್ಬ ಅದ್ಭುತ ಕಂಠದಾನ ಕಲಾವಿದರಿದ್ದಾರೆ..ಅನಂತನಾಗ್ , ಮುಖ್ಯಮಂತ್ರಿ ಚಂದ್ರು ಅಂತಹ ಕಲಾವಿದರಿಗೇ ಅವರು ಕಂಠದಾನ ಮಾಡಿದ್ದಾರೆ ಆದರೆ ಹೇಳದ ಹೊರತು ವ್ಯತ್ಯಾಸ ಗೊತ್ತಾಗುವುದೇ ಇಲ್ಲ..ನೀವು ದಯವಿಟ್ಟು ಅವರನ್ನು ಕೇಳಿನೋಡಿ..ಒಪ್ಪಿಕೊಂಡರೆ ಮಾತ್ರ ಅವರು ಪೂರ್ಣ ನ್ಯಾಯ ಒದಗಿಸುತ್ತಾರೆ” ಎಂದೆ ನಾನು. ಹೇಗೂ ನಾನು ಬಗ್ಗುವವನಲ್ಲ ಎಂದು ಖಾತ್ರಿಯಾದ ಮೇಲೆ ತಂಡದವರು ಸುದರ್ಶನ್ ಅವರನ್ನು ಸಂಪರ್ಕಿಸಿ ನನಗೆ ಕಂಠದಾನ ಮಾಡಲು ಸಾಧ್ಯವೇ ಎಂದು ಕೇಳಿದಾಗ ಅವರು ತುಂಬು ಸಂತೋಷದಿಂದ ಒಪ್ಪಿಕೊಡರಂತೆ! ಹಾಗಾಗಿ ‘ನಂದಿನಿ’ ಧಾರಾವಾಹಿಯಲ್ಲಿ ನನ್ನ ಖಳಪಾತ್ರ ಪ್ರಾರಂಭವಾಗಿಯೇ ಬಿಟ್ಟಿತು. ನಂದಿನಿ ಧಾರಾವಾಹಿಯಲ್ಲಿ ಎಪಿಸೋಡ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದವರು ಗಣೇಶ್ ಶಾಸ್ತ್ರಿ. ಈ ಗಣೇಶ ನಾಕುತಂತಿ ಧಾರಾವಾಹಿಯಲ್ಲಿ ಸಹ ನಿರ್ದೇಶಕನಾಗಿ ವೃತ್ತಿ ಬದುಕನ್ನು ಆರಂಭಿಸಿದ್ದವನು. ಉತ್ಸಾಹೀ ತರುಣ. ಪಾತ್ರವನ್ನು ಹೊಸ ರೀತಿಯಲ್ಲಿ ರೂಪಿಸಿ ಬೆಳೆಸಲು ಅಪಾರ ಸ್ವಾತಂತ್ರ್ಯವನ್ನು ನೀಡುತ್ತಿದ್ದ ಗಣೇಶನ ಸಹಕಾರದಿಂದಾಗಿ ನನ್ನ ಖಳಪಾತ್ರ ಕೊಂಚ ಹಾಸ್ಯದ ಲೇಪದೊಂದಿಗೆ ಬೇರೆಯ ಆಯಾಮವನ್ನೇ ಗಳಿಸಿಕೊಂಡುಬಿಟ್ಟಿತು!

ಇನ್ನು ಸುದರ್ಶನ್ ಅವರ ಸಾಮರ್ಥ್ಯ—ಸೃಜನಶೀಲತೆಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ! ನಾನಂತೂ ಅವರ ಅದ್ವಿತೀಯ ಪ್ರತಿಭೆಗೆ ಮಾರುಹೋಗಿದ್ದೇನೆ. ನಾನೇ ಡಬ್ಬಿಂಗ್ ಮಾಡಿದ್ದರೂ ಕೂಡಾ ಅವರಷ್ಟು ಸೊಗಸಾಗಿ ಮಾಡುತ್ತಿದ್ದೆನೋ ಇಲ್ಲವೋ! ಒಟ್ಟಿನಲ್ಲಿ ಆ ಸಮಯದಲ್ಲಿ ನಾನು ಅಭಿನಯಿಸಿದ ಧಾರಾವಾಹಿಗಳಲ್ಲಿ ಹೆಸರು ತಂದುಕೊಡುವುದರ ಜತೆಗೆ ಅಪಾರ ತೃಪ್ತಿಯನ್ನೂ ತಂದುಕೊಟ್ಟ ಪಾತ್ರ ನಂದಿನಿ ಧಾರಾವಾಹಿಯ ತುಸು ವಿಜೃಂಭಿತ ಹಾಸ್ಯ ಖಳನ ಈ ಪಾತ್ರ!!

ಒಂದು ದಿನ ಶ್ಯಾಮಲಾ ಭಾವೆ ಅಕ್ಕನಿಂದ ಕರೆ ಬಂತು: “ಅಪ್ಪಣ್ಣಾ,ಒಂಚೂರು ಬಿಡುವು ಮಾಡಿಕೊಂಡು ಮನೇಗೆ ಬಾರೋ…ಮಾತಾಡಬೇಕು”. ಅಕ್ಕ ಕರೆದ ಮೇಲೆ ತಡಮಾಡುವುದುಂಟೇ? ಅಂದೇ ಸಂಜೆ ಅಕ್ಕನನ್ನು ಭೇಟಿಯಾಗಲು ಸರಸ್ವತಿ ಸಂಗೀತ ವಿದ್ಯಾಲಯಕ್ಕೆ ಹೋದೆವು. ಅಕ್ಕ ನಮ್ಮ ದಾರಿಯನ್ನೇ ಎದುರು ನೋಡುತ್ತಿದ್ದರು. ಉಭಯಕುಶಲೋಪರಿಯ ನಂತರ ಅಕ್ಕ ನೇರವಾಗಿ ವಿಷಯ ಪ್ರವೇಶ ಮಾಡಿದರು.” ಅಪ್ಪಣ್ಣಾ, ನೀನು ಸಂಸರ ಬಗ್ಗೆ ಏಕ ವ್ಯಕ್ತಿ ಪ್ರದರ್ಶನ ಮಾಡಿದ್ದೆಯಲ್ಲಾ, ರಂಗಶಂಕರದಲ್ಲಿ ಮಾಡಿದ್ದಾಗ ನಾನೂ ನೋಡಿದ್ದೆ..ನನಗೆ ತುಂಬಾ ಅಂದ್ರೆ ತುಂಬಾ ಇಷ್ಟವಾಗಿತ್ತು ಆ ನಾಟಕ. ಈಗ ಈ ನಿನ್ನ ಅಕ್ಕನದೊಂದು ರಿಕ್ವೆಸ್ಟು…ಇಲ್ಲ ಅನ್ನಬಾರದು ನೀನು..”

“ನಿಮಗಿಲ್ಲ ಅಂದು ಯಾವ ನರಕಕ್ಕೆ ಹೋಗಲಿ ನಾನು? ಅದೇನು ಹೇಳಿ ಅಕ್ಕಾ” ಎಂದೆ ನಾನು ನಗುತ್ತಾ. “ನನ್ನ ತಂದೆಯವರು—ಅಂದರೆ ಗೋವಿಂದ ವಿಠಲ ಭಾವೆಯವರು—ಅವರ ಬದುಕಿನ ಬಗ್ಗೆ ಅದೇ ಥರಾ ಒಂದು ನಾಟಕ ಬರೆದು ಮಾಡಿಸ್ತೀಯಾ ಅಪ್ಪಣ್ಣಾ?” ಎಂದರು ಅಕ್ಕ. ಇದು ಖಂಡಿತವಾಗಲೂ ನಾನು ಕನಸಲ್ಲೂ ಊಹಿಸಲಾರದಂಥ ಕೋರಿಕೆಯಾಗಿತ್ತು! ನನ್ನ ಮೌನವನ್ನು ಗಮನಿಸಿದ ಅಕ್ಕ , “ನಿಂಗೆ ತುಂಬಾ ಕಷ್ಟ ಆಗೋದಾದರೆ ಬೇಡ ಬಿಡು..ಅಪ್ಪಾಜೀ ಅಷ್ಟು ಕೆಲಸ ಮಾಡಿದಾರಲ್ಲಾ, ಈ ಥರಾ ಒಂದು ಶ್ರದ್ಧಾಂಜಲಿ ಅರ್ಪಿಸೋಣ ಅಂತ ಅಂದುಕೊಂಡೆ…ಪರವಾಗಿಲ್ಲ ಬಿಡು” ಎಂದು ನಿರಾಸೆಯ ದನಿಯಲ್ಲಿ ನುಡಿದಾಗ ನನಗೆ ತುಂಬಾ ಕಸಿವಿಸಿಯಾಗಿಹೋಯಿತು.

“ಅಯ್ಯಯ್ಯೋ ಹಾಗೆಲ್ಲಾ ಏನೂ ಇಲ್ಲ ಅಕ್ಕಾ. ತಂದೆಯವರ ಬಗ್ಗೆ ನನಗೆ ಏನೂ ಅಂದರೆ ಏನೂ ಗೊತ್ತಿಲ್ಲವಲ್ಲ, ಆ ಕಾರಣಕ್ಕೆ ಕೊಂಚ ಯೋಚನೆ ಮಾಡ್ತಿದ್ದೆ ಅಷ್ಟೇ” ಎಂದು ಅವರಿಗೆ ಕೊಂಚ ಸಮಾಧಾನ ಹೇಳಿ ಮುಂದುವರಿಸಿದೆ: “ಒಂದು ಕೆಲಸ ಮಾಡೋಣ ಅಕ್ಕಾ. ನಾಳೆಯಿಂದ ಒಂದು ನಾಲಕ್ಕು ದಿನ ನಾನು ಬಂದು ನಿಮ್ಮ ಜೊತೆ ಕೂತ್ಕೋತೇನೆ. ನೀವೂ ತಂದೆಯವರ ಬದುಕಿನ ಕಥೆಯನ್ನ ಆಮೂಲಾಗ್ರವಾಗಿ ನನಗೆ ಹೇಳಿ. ನಾನು ಎಲ್ಲಾನೂ ರೆಕಾರ್ಡ್ ಮಾಡಿಕೋತೀನಿ. ಅಪ್ಪಾಜೀ ಅವರ ಬದುಕಲ್ಲಿ ಒಂದಷ್ಟು ನಾಟಕೀಯವಾದ ಪ್ರಸಂಗಗಳಿದ್ದರೆ, ಅಥವಾ ಸ್ವಾರಸ್ಯಕರವಾದ ಪ್ರಸಂಗಗಳಿದ್ದು ನಾಟಕಕ್ಕೆ ಸುಲಭವಾಗಿ ಒಗ್ಗಿಸಿಕೋಬಹುದಾದರೆ ಖಂಡಿತ ನಾಟಕ ಮಾಡ್ತೀನಿ. ಆದರೆ ನಾವು ಈಗಲೇ ತೀರ್ಮಾನ ಮಾಡೋದು ಬೇಡ..ಪೂರ್ತಿ ಕಥೆ ಕೇಳಿದ ಮೇಲೆ ಆ ಬಗ್ಗೆ ಯೋಚನೆ ಮಾಡ್ತೀನಿ” ಎಂದೆ. ಅಕ್ಕನಿಗೂ ನನ್ನ ಮಾತು ಸರಿ ಅನ್ನಿಸಿತು. ಮರು ದಿನದಿಂದಲೇ ಅಕ್ಕನ ಸಂಗೀತ ವಿದ್ಯಾಲಯದಲ್ಲಿ ಗೋವಿಂದ ವಿಠಲ ಭಾವೆ ಅವರ ಬದುಕಿನ ಕಥಾಶ್ರವಣ—ಮುದ್ರಣ ಕಾರ್ಯಕ್ರಮ ಆರಂಭವಾಯಿತು!

ನನ್ನ ಭಾವಕೋಶದ ಒಂದು ಮೂಲೆಯಲ್ಲಿ ಅದಾಗಲೇ ಸಂಸರು ಪ್ರತಿಷ್ಠಾಪಿಸಿ ಅವರ ಸಂಭಾಷಣೆಗಳನ್ನು ಗುಡುಗುತ್ತಿದ್ದರೆ ಈಗ ಗೋವಿಂದ ವಿಠಲ ಭಾವೆಯವರು ಸದ್ದಿಲ್ಲದೆ ಮತ್ತೊಂದು ಮೂಲೆಯನ್ನಾಕ್ರಮಿಸಿಕೊಂಡು ಹಿತವಾಗಿ ಶೃತಿ ಹಿಡಿಯತೊಡಗಿದರು!!

| ಮುಂದಿನ ವಾರಕ್ಕೆ |

‍ಲೇಖಕರು avadhi

3 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading