ಶ್ರೀನಿವಾಸ ಪ್ರಭು ಅಂಕಣ: ನಾಳೇನೇ ಹೋಗಿ ರಾಜೀನಾಮೆ ಕೊಟ್ಟು ಬಾ…

ಅಂಕಣ 104

ಮರುದಿನವೇ ರಘುವೀರನಿಗೆ ಫೋನ್ ಮಾಡಿ “ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿರುವ ಭಾವನವರ ಮನೆಗೆ ಬಂದುಹೋಗಲು ಸಾಧ್ಯವೇ?” ಎಂದು ವಿನಂತಿಸಿಕೊಂಡೆ. ಒಪ್ಪಿಕೊಳ್ಳುತ್ತಾನೆಂಬುದರ ಬಗ್ಗೆ ನನಗೇ ಕೊಂಚ ಅನುಮಾನವಿದ್ದರೂ ಬಹುಶಃ ಅವನಿಗೂ ತಪ್ಪಿತಸ್ಥ ಭಾವನೆ ಒಳಗಿಂದೊಳಗೇ ಕಾಡುತ್ತಿದ್ದಿರಬೇಕು… ಬರುತ್ತೇನೆಂದು ಒಪ್ಪಿಕೊಂಡ. ʻನಾನು ಶ್ರೀನಿವಾಸ ಪ್ರಭು ಅವರ ಮೇಲೆ ಹೊರಿಸಿದ್ದು ಸುಳ್ಳು ಆರೋಪʼ ಎಂಬ ಅವನ ತಪ್ಪೊಪ್ಪಿಗೆಯ ಹೇಳಿಕೆಯನ್ನು ಹೇಗಾದರೂ ದಾಖಲು ಮಾಡಿಕೊಂಡುಬಿಟ್ಟರೆ ಅದು ಎಂದಾದರೂ ನನ್ನ ಸಮಯಕ್ಕೆ ಒದಗಬಹುದು! ನಾನದನ್ನು ಕೂಡಲೇ ಬಹಿರಂಗಪಡಿಸದಿದ್ದರೂ ಅದು ನನ್ನನ್ನು ರಕ್ಷಿಸುವ ವಜ್ರಕವಚವಾಗಿ ನನ್ನೊಂದಿಗಿರುತ್ತದಲ್ಲಾ, ಅಷ್ಟು ಸಾಕು!

ಇಷ್ಟು ಯೋಚಿಸಿಕೊಂಡು ತಕ್ಷಣವೇ ಕಾರ್ಯೋನ್ಮುಖನಾದೆ. ಕೂಡಲೇ ಬರ್ಮಾ ಬಜಾ಼ರಿಗೆ ಹೋಗಿ 800 ರೂಪಾಯಿಗೆ ಒಂದು ಡಿಕ್ಟಾಫೋನ್ ಅನ್ನು ಖರೀದಿ ಮಾಡಿಕೊಂಡು ಬಂದೆ. ಭಾವನವರ ಬಳಿಯೂ ಒಂದು ಡಿಕ್ಟಾಫೋನ್ ಹಾಗೂ ಒಂದು ವಾಯ್ಸ್ ರೆಕಾರ್ಡರ್ ಇತ್ತು. ರಘುವೀರ ಬರುವ ವೇಳೆಗೆ ತುಸು ಮೊದಲು ರಂಜನಿಯ ಬ್ಯಾಗ್‌ನಲ್ಲಿ ಒಂದು, ಕೂರುವ ಸೋಫಾಗಳ ಮುಂದಿದ್ದ ಟೀಪಾಯಿಯ ಮೇಲಿದ್ದ ಹೂಕುಂಡದಲ್ಲಿ ಒಂದು ಹಾಗೂ ಅಲ್ಲೇ ಪಕ್ಕದಲ್ಲಿದ್ದ ದಟ್ಟ ಎಲೆಗಳು ಹಬ್ಬಿದ್ದ ಪಾಟ್‌ನಲ್ಲಿ ಒಂದು – ಹೀಗೆ ಮೂರೂ ಉಪಕರಣಗಳನ್ನು ಅಡಗಿಸಿ ಇಟ್ಟುಬಿಟ್ಟೆವು! ಒಂದು ಉಪಕರಣ ಕೈಕೊಟ್ಟರೆ ಇನ್ನೊಂದು ಬೆಂಗಾವಲಿಗೆ ಇರುತ್ತದಲ್ಲಾ!

ಹೇಳಿದ ಸಮಯಕ್ಕೆ ಸರಿಯಾಗಿ ಬಂದ ರಘುವೀರ, “ಬನ್ನಿ ಸರ್… ಹೊರಗಡೆ ಹೋಗಿ ಮಾತಾಡೋಣ… ಇನ್‌ಸ್ಟಿಟ್ಯೂಟ್‌ನಲ್ಲಿ ಓಡಾಡೋದೇ ಒಂದು ಸುಖ” ಎಂದುಬಿಡುವುದೇ!

“ಅಯ್ಯಾ ಪುಣ್ಯಾತ್ಮಾ… ಸುಖಪಡೋದಕ್ಕಾಗಿ ನಿನ್ನನ್ನ ಇಲ್ಲಿ ಕರೆಸಿಲ್ಲಪ್ಪಾ” ಎಂದು ಮನಸ್ಸಿನಲ್ಲೇ ಅಂದುಕೊಂಡು, “ಬನ್ನಿ.. ಒಳಗೆ ಕೂತುಕೊಳ್ಳಿ… ಹತ್ತು ನಿಮಿಷ ಮಾತಾಡಿಕೊಂಡು ಆಮೇಲೆ ಸುತ್ತಾಡೋಕೆ ಹೋಗೋಣ” ಎಂದು ಅವನನ್ನು ಒಳ ಕರೆತಂದು ನಮಗೆ ಬೇಕಾದ ಜಾಗದಲ್ಲಿ ಕೂರಿಸಿದೆ. ಅವನು ಒಳಬರುವಷ್ಟರಲ್ಲಿ ಧ್ವನಿಮುದ್ರಣದ ಟೇಪ್‌ಗಳು ಆಗಲೇ ಕರ್ತವ್ಯ ನಿರತವಾಗಿದ್ದವು! ಸುಮಾರು ಅರ್ಧ ತಾಸು ನಾನು ಪ್ರಶ್ನೆಗಳನ್ನು ಕೇಳುತ್ತಲೇ ಹೋದೆ; ರಘುವೀರ ಮೊದಲು ಕೊಂಚ ತಡಬಡಾಯಿಸಿದರೂ ಅನಂತರ ಉತ್ತರಿಸುತ್ತಾ ಹೋದ. ಆ ಮಾತುಕತೆಯಲ್ಲಿ ಒಟ್ಟಾರೆ ಹೊರಬಂದ ವಿಷಯಗಳಿಷ್ಟು:

ನನ್ನ ಮೇಲೆ ಸಿಬಿಐಗೆ ದೂರು ಕೊಡುವ ಯಾವ ದುರುದ್ದೇಶವೂ ಮೊದಲಿಗೆ ಆ ತಂಡಕ್ಕಿರಲಿಲ್ಲ. ಆ ತಂಡದಲ್ಲಿದ್ದ ಪ್ರಮುಖರು ಯಾರು ಯಾರೆಂದರೆ – ಮಾಧವ, ಜಗತ್ ಬಾಬು, ಕಮಲೇಶ, ಸೈಯದ್ ಹಾಗೂ ರಘುವೀರ. ನಾನು ಬಳ್ಳಾರಿಯಿಂದ ಮರಳಿ ಬಂದ ಮೇಲೆ ಹಾಸಿಗೆ ಹಿಡಿದು ಮಲಗಿ ಚೇತರಿಸಿಕೊಂಡು ಬಂದಾಗ ಕಮಲೇಶನೆದುರಿಗೆ ನಿರ್ಮಾಪಕರ ಸಮಯಸಾಧಕತನದ ಬಗ್ಗೆ ಕಟುವಾಗಿ ಮಾತಾಡಿದ್ದೆನಲ್ಲಾ, ಅದರ ಫಲಶ್ರುತಿಯೇ ಅವರ ಈ ಅಸಮಾಧಾನದ ನಡೆ! “ನಮ್ಮನ್ನೆಲ್ಲಾ ಬಾಯಿಗೆ ಬಂದ ಹಾಗೆ ನಿಂದಿಸಿರುವ ಅವನನ್ನು ಸುಮ್ಮನೆ ಬಿಡಬಾರದು, ಪಾಠ ಕಲಿಸಲೇಬೇಕು” ಎಂದು ತೀರ್ಮಾನಿಸಿ ತೆಗೆದುಕೊಂಡ ನಿರ್ಧಾರವೇ ಈ ಸಿಬಿಐ ಪ್ರಸಂಗ!

ಹಿಡಿಸಿಹಾಕಬೇಕು ಎಂದು ತೀರ್ಮಾನವನ್ನೇನೋ ಮಾಡಿದರು ಸರಿ; ಆದರೆ ಲಂಚವೆಂದು ದಾಖಲಿಸಲು ನನಗೆ ಹಣ ಕೊಡುವವರು ಯಾರು? ಸುಮ್ಮನೇ ಬಂದು ಹಣ ಕೊಟ್ಟರೆ ನಾನೆಲ್ಲಿ ತೆಗೆದುಕೊಳ್ಳುತ್ತೇನೆ!? ಹಾಗೆ ನಾನು ಹಣ ತೆಗೆದುಕೊಳ್ಳುವುದೇ ಆದರೆ ಇಬ್ಬರಿಂದ ಮಾತ್ರ: ಒಬ್ಬ ಸೈಯದ್; ಇನ್ನೊಬ್ಬ ರಘುವೀರ! ಸೈಯದ್‌ನನ್ನು ನನಗೆ ಪರಿಚಯ ಮಾಡಿಕೊಟ್ಟವರು ಅನೀಸ್ ಉಲ್ ಹಕ್ ಸಾಹೇಬರು. ಆಗಾಗ್ಗೆ ಮನೆಗೂ ಬಂದು ಹೋಗಿ ಮಾಡುತ್ತಿದ್ದ ಸೈಯದ್ ಎಷ್ಟೋ ಬಾರಿ ನಮ್ಮ ಮನೆಯಲ್ಲೇ ಊಟ ಮಾಡಿಕೊಂಡು ಹೋಗಿದ್ದ. ಅದೇನೋ ರಂಜನಿಗೂ ಅವನಲ್ಲಿ ಒಂದು ಬಗೆಯ ಸೋದರ ವಾತ್ಸಲ್ಯ. ಅನೇಕ ಬಾರಿ ನನ್ನಿಂದ ಐನೂರು – ಸಾವಿರ ರೂಪಾಯಿಗಳನ್ನು ಸಾಲವಾಗಿ ತೆಗೆದುಕೊಂಡಿದ್ದ. ಹಾಗೆ ಅವನು ತೆಗೆದುಕೊಂಡ ಸಾಲದ ಮೊತ್ತ ಏಳೆಂಟು ಸಾವಿರ ದಾಟಿತ್ತು. ಹಾಗಾಗಿ ನನ್ನನ್ನು ʻಬೇಟೆʼಯಾಡಲು ಆಮಿಷದ ಎಡೆಯಾಗುವ ಮೊದಲ ಸುವರ್ಣಾವಕಾಶ ಸೈಯದ್‌ನ ಹೆಗಲೇರಿತ್ತು! ಸಾಲದ ಹಣ ಹಿಂದಿರುಗಿಸಿದರೆ ಬೇಡ ಎಂದೇಕೆ ಹೇಳುತ್ತೇನೆ ನಾನು? ತೆಗೆದುಕೊಂಡೇ ತೆಗೆದುಕೊಳ್ಳುತ್ತೇನೆ… ಅಲ್ಲಿಗೆ ಮಿಕ ಬಲೆಗೆ ಬಿದ್ದ ಹಾಗೆ!

ಎಲ್ಲರೂ ಬಲವಂತ ಮಾಡಿ ಈ ಹೊಣೆ ಹೊರಲು ಸೈಯದ್‌ನನ್ನು ಹುರಿದುಂಬಿಸಿದರೂ, ಅವನಾಡಿದ್ದೆಂದು ರಘುವೀರ ಹೇಳಿದ ಮಾತು ನನ್ನನ್ನು ದಂಗುಬಡಿಸಿಬಿಟ್ಟಿತು: “ಇದೊಂದು ಕೆಲಸ ಮಾತ್ರ ನನಗೆ ಹೇಳಬೇಡಿ ಸರ್… ಅವರ ಮನೆ ಉಪ್ಪು ತಿಂದಿದ್ದೀನಿ ನಾನು… ಪ್ರಭು ಸರ್ ಮತ್ತೆ ಮೇಡಂ ಅವರು ನನ್ನನ್ನ ಅವರ ಮನೆಯವನ ಹಾಗೆ ನೋಡಿಕೊಂಡಿದ್ದಾರೆ… ಅವರ ಮನೇಲಿ ಮಾಡೋ ಅಕ್ಕ – ತಮ್ಮನ ಹಬ್ಬದಲ್ಲಿ ನನ್ನನ್ನ ಕರೆದು ಊಟ ಹಾಕಿ ಶರ್ಟ್ ಕೊಟ್ಟು ಪ್ರೀತಿಯಾಗಿ ನೋಡಿಕೊಂಡಿದ್ದಾರೆ ರಂಜನಿ ಮೇಡಂ… ಅಂಥವರಿಗೆ ಮೋಸ ಮಾಡಿದರೆ ಯಾವ ದೇವರೂ ಮೆಚ್ಚೋಲ್ಲ… ಇಂಥಾ ನಮಕ್ ಹರಾಮ್ ಕೆಲಸ ಖಂಡಿತ ಮಾಡೋಲ್ಲ ನಾನು!” ಎಂದವನೇ ಗೋಷ್ಠಿಯನ್ನೇ ಬಿಟ್ಟು ಹೊರಟುಹೋದನಂತೆ! ಅಬ್ಬಾ! ಆಗಬಹುದಾಗಿದ್ದ ಕೆಡುಕು ಯಾವಯಾವುದೋ ಬಗೆಯಲ್ಲಿ ನಿವಾರಣೆಯಾಗಿಬಿಟ್ಟಿದೆ ಎಂಬುದನ್ನು ತಿಳಿದೇ ಸೋಜಿಗವಾಗತೊಡಗಿತು. ಸೈಯದ್ ನಿರಾಕರಿಸಿದ ಮೇಲೆ ಅನಿವಾರ್ಯವಾಗಿ ರಘುವೀರ ನನ್ನನ್ನು ಬಲೆಗೆ ಕೆಡವುವ ವ್ಯೂಹದ ಹೊಣೆ ಹೊರಲೇಬೇಕಾಗಿ ಬಂತು.

“ಹಾಗೆ ಮಾಡುತ್ತೇನೆಂದು ಒಪ್ಪಿಕೊಳ್ಳಲು ನಿನಗೆ ಮನಸ್ಸಾದರೂ ಹೇಗೆ ಬಂತು ರಘೂ? ನಾನು ನನ್ನ ಸಂಭಾವನೆಯ ಹಣವನ್ನಷ್ಟೇ ಅಲ್ಲವೇ ನಿನ್ನನ್ನು ಕೇಳಿದ್ದು? ಅದಕ್ಕೇಕೆ ಲಂಚದ ಕಪ್ಪು ಬಣ್ಣ ಬಳಿದೆ? ನಿನ್ನ ಮನಸ್ಸಾಕ್ಷಿ ಅನ್ನುವುದು ಸತ್ತೇಹೋಗಿದೆಯೇ?” ಎಂದು ನಾನು ಕೊಂಚ ಆಕ್ರೋಶದಿಂದಲೇ ಕೇಳಿದಾಗ ರಘು ಮರುನುಡಿದ: “ಇಲ್ಲ ಪ್ರಭು ಸರ್… ದೇವರಾಣೆ ನಿಮ್ಮನ್ನ ನಾನು ಸಿಕ್ಕಿಹಾಕಿಸ್ತಿರಲಿಲ್ಲ… ಆದರೆ ಈ ಕೆಲಸ ಮಾಡೋದಕ್ಕೆ ನಾನು ಒಪ್ಪಿಕೊಳ್ಳದೇ ಹೋಗಿದ್ರೆ ಉಳಿದವರು ಬಿಡ್ತಿರಲಿಲ್ಲ… ಬೇರೆ ಏನಾದರೂ ಯೋಚಿಸಿ ನಿಮ್ಮನ್ನ ಟ್ರ್ಯಾಪ್ ಮಾಡಿರೋರು… ಅದಕ್ಕೇ ನಾನೇ ಒಪ್ಪಿಕೊಂಡೆ… ಅವತ್ತು ರಾತ್ರಿ ನಿಮಗೆ ಒಂದು ಹಿಂಟ್ ಕೊಟ್ಟು ಇವತ್ತು ರಾತ್ರಿ ಮನೇಲಿರಬೇಡಿ ಅಂತ ಹೇಳೋದಕ್ಕೋಸ್ಕರಾನೇ ಯಾರಿಗೂ ಗೊತ್ತಾಗದ ಹಾಗೆ ನಿಮಗೆ ಫೋನ್ ಮಾಡಿದೆ… ನೀವು ಯಾವಾಗ ʻಮಗನಿಗೆ ಹುಷಾರಿಲ್ಲ… ಇವತ್ತು ಮನೇಲೇ ಇರೋಲ್ಲ, ಅಕ್ಕನ ಮನೇಗೆ ಹೋಗ್ತಿದೀವಿʼ ಅಂದಿರೋ ಆವಾಗ ನನ್ನ ಮನಸ್ಸಿಗೂ ನಿರಾಳವಾಗಿ ಹೋಯಿತು… ಅದಕ್ಕೇ ಆಗ ಇನ್ನೇನೂ ಹೇಳೋದಕ್ಕೆ ಹೋಗಲಿಲ್ಲ… ಧೈರ್ಯವಾಗಿ ಸಿಬಿಐ ಅಧಿಕಾರಿಗಳನ್ನ ಮನೆ ಬಳಿಗೆ ಕರಕೊಂಡು ಬಂದೆ… ನೀವು ಅಕಸ್ಮಾತ್ ಮನೇಲಿದ್ದಿದ್ದರೂ ನಾನು ನಿಮಗೆ ದುಡ್ಡು ಕೊಡ್ತಿರಲಿಲ್ಲ ಸರ್… ಸಿಬಿಐನವರಿಗೆ ಏನಾದ್ರೂ ಸುಳ್ಳು ಹೇಳ್ತಿದ್ದೆನೇ ಹೊರತು ದೇವರಾಣೆ ನಿಮ್ಮನ್ನ ಸಿಕ್ಕಿಹಾಕಿಸ್ತಿರಲಿಲ್ಲ ಸರ್… ನನ್ನನ್ನ ನಂಬಿ ಸರ್…” ಎಂದು ಅಲವತ್ತುಕೊಂಡ ರಘುವೀರ. ನಾನು ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಸಂಕೀರ್ಣವಾಗಿದೆ ಈ ಪ್ರಸಂಗ ಅನ್ನಿಸಿತು.

ಕಮಲೇಶ, ಜಗತ್ ಬಾಬು ಹಾಗೂ ಮಾಧವರು ಮಾತ್ರ ನನ್ನ ಬೈಗುಳಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ನನ್ನ ಮೇಲೆ ಕತ್ತಿ ಮಸೆಯುತ್ತಿದ್ದಾರೆಂಬ ಸಂಗತಿಯನ್ನೂ ರಘು ಹೇಳಿದ. ಸೋಜಿಗದ ಸಂಗತಿಯೆಂದರೆ ಆ ಮೂವರಿಗೂ ನಾನು ವಾಣಿಜ್ಯ ವಿಭಾಗದಲ್ಲಿದ್ದಾಗ ದೊಡ್ಡ ದೊಡ್ಡ ಸಹಾಯವನ್ನೇ ಮಾಡಿದ್ದೆ. ಮಾಧವನ ಒಂದು ಧಾರಾವಾಹಿಗೆ ಸಂಬಂಧಪಟ್ಟ ಹಾಗೆ ಲಕ್ಷಾಂತರ ರೂಪಾಯಿಗಳ ವಾಣಿಜ್ಯ ವಹಿವಾಟು ದೆಹಲಿಯಲ್ಲಿ ಸ್ಥಗಿತಗೊಂಡಿದ್ದಾಗ ನಾನೇ ಖುದ್ದಾಗಿ ದೆಹಲಿಗೆ ಹೋಗಿ ಅಲ್ಲಿ ನನಗೆ ಪರಿಚಿತರಾಗಿದ್ದ ಓಗ್ರಾ ಅವರ ಬಳಿ ಮಾತಾಡಿ ಸಮಸ್ಯೆ ಬಗೆಹರಿಸಿದ್ದೆ! ಕಮಲೇಶನಂತೂ ಒಬ್ಬ ನಿರ್ಮಾಪಕನೆನಿಸಿಕೊಂಡದ್ದೇ ನಾನು ಮಾಡಿಕೊಟ್ಟ ಅವಕಾಶಗಳಿಂದ! ಇನ್ನು ಜಗತ್ ಬಾಬುವಿಗೂ ಸಹಾ ನನ್ನ ಮಿತಿಯೊಳಗೇ ಒಂದಿಷ್ಟು ಸಹಾಯ ಮಾಡಿದ್ದೆ. ಅದೆಲ್ಲವನ್ನೂ ಸಾರಾಸಗಟಾಗಿ ಬದಿಗೆ ಸರಿಸಿ ಕೊತಕೊತ ಸಿಟ್ಟು ಕುದಿಯುವಂತೆ ಮಾಡಿದ್ದು ನನ್ನ ಬೈಗುಳ! ವಾಹ್! ಅದೆಂಥ ತಾಕತ್ತಿದೆ ನನ್ನ ಬೈಗುಳಗಳಿಗೆ ಎಂದು ನೆನೆದು ನಗು ಬಂತು! ಮನುಷ್ಯ ಸ್ವಭಾವದ ಹಲವು ಹತ್ತು ಮುಖಗಳ ಅನಾವರಣ ಹೀಗೆ ಒಂದೇ ಪ್ರಸಂಗದಲ್ಲಿ ಆಗುವುದೆಂದರೆ ಅದೇನು ಸಾಮಾನ್ಯ ಸಂಗತಿಯೇ! ಒಟ್ಟಿನಲ್ಲಿ ರಘುವೀರ ನನಗೆ ಕೊಡಲು ಬಂದದ್ದು ಲಂಚದ ಹಣವಲ್ಲ ಎಂಬುದು ಅವನ ಮಾತಿನಲ್ಲೇ ಸ್ಪಷ್ಟವಾಗಿ ಹೊರಬಂದದ್ದಲ್ಲದೇ ಅದೊಂದು ಕುಟಿಲ ಸಂಚೆಂಬುದೂ ದಾಖಲಾಗಿ ಹೋಯಿತು.
(ಆ ಧ್ವನಿ ದಾಖಲೆ ಇನ್ನೂ ಭದ್ರವಾಗಿ ನನ್ನ ತಿಜೋರಿಯಲ್ಲಿದೆ!!)

ರಘುವೀರನ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡ ಮೇಲೆ ಒಂದು ಮುಖ್ಯ ಕೆಲಸ ಪೂರೈಸಿದಂತಾಯಿತು. ಇನ್ನೊಂದು ಬಹುಮುಖ್ಯವಾದ ಕೆಲಸವಿದೆ; ನಾಳೆ ಅಲ್ಲಿಗೆ ಹೋಗಿ ಒಂದಷ್ಟು ಸ್ಪಷ್ಟೀಕರಣಗಳನ್ನು ನೀಡಿ ಬರಬೇಕು! ಅನಂತರ ರಾಜೀನಾಮೆ ನೀಡುವ ಮುಹೂರ್ತವನ್ನು ನಿರ್ಧರಿಸಬಹುದು. ಅಲ್ಲಿಗೆ ನನ್ನ ಮುಂದಿನ ಹೆಜ್ಜೆ –
ಸಿಬಿಐ ಕಛೇರಿ!

ಮರುದಿನ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಯ ಸುಮಾರಿಗೆ ಸಿಬಿಐ ಕಛೇರಿಗೆ ಹೋದೆ. ಹೋಗುವುದೇನೋ ಹೋಗಿಬಿಟ್ಟೆ, ಆದರೆ ಅಲ್ಲಿ ಯಾರನ್ನು ಏನೆಂದು ವಿಚಾರಿಸುವುದು? ಯಾರು ಬೇಕೆಂದು ಕೇಳಿದರೆ ಏನೆಂದು ಉತ್ತರಿಸುವುದು? ಗೊಂದಲಕ್ಕೆ ಬಿದ್ದು ಅಲ್ಲೇ ಚಿಂತಿಸುತ್ತಾ ನಿಂತೆ. ಅದೇ ವೇಳೆಗೆ ಸರಿಯಾಗಿ ಎದುರಿನಿಂದ ಅಧಿಕಾರಿಯೊಬ್ಬರು ಬಂದರು. ನನ್ನನ್ನೇ ಪ್ರಶ್ನಾರ್ಥಕವಾಗಿ ನೋಡುತ್ತಾ, “ಹಲೋ ಸರ್, ಕೆನ್ ಐ ಹೆಲ್ಪ್ ಯೂ?” ಎಂದರು. “ಯೆಸ್ ಸರ್, ನಾನು ಶ್ರೀನಿವಾಸ ಪ್ರಭು ಅಂತ… ದೂರದರ್ಶನದಲ್ಲಿ ಪ್ರೊಡ್ಯೂಸರ್ ಆಗಿ ಕೆಲಸ ಮಾಡ್ತಿದೀನಿ… ನನಗೆ ಯಾರಾದರೂ ಒಬ್ಬ ಆಫೀಸರ್ ಜತೆ ಮಾತಾಡಬೇಕಿತ್ತು” ಎಂದೆ. ಅವರು ಒಂದು ಕ್ಷಣ ನನ್ನನ್ನೇ ದಿಟ್ಟಿಸಿ ನೋಡಿ, “ಪ್ಲೀಸ್ ಕಮ್ ವಿತ್ ಮಿ” ಎಂದು ನುಡಿದು ತಮ್ಮ ಛೇಂಬರ್ ಗೆ ಕರೆದುಕೊಂಡು ಹೋಗಿ ಕೂರಿಸಿ, “ನಾನು ಗೋಪಾಲ್ ಅಂತ… ಇಲ್ಲಿ ಆಫೀಸರ್ ಆಗಿ ಕೆಲಸ ಮಾಡ್ತಿದೀನಿ” ಎಂದು ತಮ್ಮ ಪರಿಚಯ ಮಾಡಿಕೊಂಡು, “ಹೇಳಿ ಸರ್, ಏನಾಗಬೇಕಿತ್ತು?” ಎಂದರು. ನಾನು ಒಂದು ಕ್ಷಣ ಸುಮ್ಮನಿದ್ದು ನಂತರ ನಿಧಾನವಾಗಿ ಮಾತಾಡತೊಡಗಿದೆ: “ಸರ್, ಎಲ್ಲಿಂದ ಪ್ರಾರಂಭಿಸಬೇಕು ಅಂತ ಸರಿಯಾಗಿ ಗೊತ್ತಾಗ್ತಿಲ್ಲ… ನೇರವಾಗಿ ವಿಷಯಕ್ಕೆ ಬಂದುಬಿಡ್ತೀನಿ… ಈಗ ಮೂರು ನಾಲ್ಕು ದಿವಸಗಳ ಹಿಂದೆ ನಿಮ್ಮ ಕಛೇರಿಯ ಕೆಲವು ಅಧಿಕಾರಿಗಳು ಒಬ್ಬ ದೂರುದಾರನ ಜೊತೆಯಲ್ಲಿ ನನ್ನನ್ನು ಬಲೆಗೆ ಕೆಡವುವ ಉದ್ದೇಶದಿಂದ ನಮ್ಮ ಮನೆಯ ಬಳಿ ಬಂದಿದ್ದರು… ನನ್ನ ಅದೃಷ್ಟ… ನಾನು ಅವತ್ತು ರಾತ್ರಿ ಮನೆಯಲ್ಲಿ ಇರಲಿಲ್ಲವಾದ್ದರಿಂದ ಅವರ ಕೈಗೆ ಸಿಕ್ಕಿಬೀಳಲಿಲ್ಲ…” ಎನ್ನುತ್ತಿದ್ದಂತೆ ಗೋಪಾಲ್ ಅವರು, “ನಿಮ್ಮ ಅದೃಷ್ಟವೋ ಅಥವಾ ನಮ್ಮ ದುರಾದೃಷ್ಟವೋ!?” ಎಂದರು! ನಾನು ಚಕಿತನಾಗಿ ಅವರ ಮುಖವನ್ನೇ ದಿಟ್ಟಿಸುತ್ತಾ, “ಏನು ಹೇಳ್ತಿದೀರಿ ಸರ್…?” ಎಂದೆ. ಗೋಪಾಲ್ ಅವರ ಮುಖದಲ್ಲಿ ತುಂಟನಗು ಮಿನುಗುತ್ತಿತ್ತು. “ಹೌದು ಮಿ. ಪ್ರಭು, ನಿಮ್ಮ ಮನೆ ಹತ್ತಿರ ಬಂದಿದ್ದ ನಾಲ್ಕು ಜನ ಅಧಿಕಾರಿಗಳಲ್ಲಿ ನಾನೂ ಒಬ್ಬ! ಇರಲಿ… ಅದೆಲ್ಲಾ ವಿವರಗಳನ್ನ ನಾನು ನಿಮ್ಮ ಜೊತೆ ಚರ್ಚೆ ಮಾಡಬಾರದು… ಹೇಳಿ, ಏನಾಗಬೇಕಿತ್ತು ನಮ್ಮಿಂದ? ಯಾವ ಕಾರಣಕ್ಕೆ ಇಲ್ಲಿಗೆ ಬಂದಿದೀರಿ?” ಎಂದರು ಗೋಪಾಲ್. ಅವರು ನೀಡಿದ ಶಾಕ್‌ನಿಂದ ಚೇತರಿಸಿಕೊಂಡಮೇಲೆ ನಾನು ನಿಧಾನವಾಗಿ ಮಾತು ಪ್ರಾರಂಭಿಸಿ ಇಡೀ ಪ್ರಸಂಗವನ್ನು ಎಲ್ಲ ಹಿನ್ನೆಲೆ – ಪೂರ್ವಕಥೆಗಳೊಂದಿಗೆ ವಿವರಿಸಿದೆ. ಹೇಗೆ ವಿನಾಕಾರಣ ಬಲಿಪಶುವಾಗಿ ಬಿಡಬಹುದಾಗಿದ್ದ ಅಪಾಯದಿಂದ ಪವಾಡಸದೃಶವಾಗಿ ನಾನು ಪಾರಾದೆ ಎಂಬುದನ್ನು ಸಾಕಷ್ಟು ದೀರ್ಘವಾಗಿಯೇ ಬಣ್ಣಿಸಿದೆ.

ತನ್ಮಯತೆಯಿಂದ ನನ್ನ ಕಥೆಯನ್ನು ಆಲಿಸಿದ ಗೋಪಾಲ್ ಅವರು ನಿಜಕ್ಕೂ ಚಕಿತರಾದವರಂತೆ ಕಂಡರು. ತುಸು ಹೊತ್ತು ಏನೂ ಮಾತಾಡಲಿಲ್ಲ. ನಂತರ, “ನಾನೂ ಬೇಕಾದಷ್ಟು ಕೇಸ್‌ಗಳನ್ನು ನೋಡಿದ್ದೀನಿ… ಬೇಕಾದಷ್ಟು ಭ್ರಷ್ಟರನ್ನ ಟ್ರ್ಯಾಪ್ ಮಾಡಿದೀನಿ… ಆದರೆ ನಿಮ್ಮದು ಭಾಳ ವಿಶಿಷ್ಟವಾದ ಕೇಸ್ ಮಿ. ಪ್ರಭು… ಹಾಗೆ ನೋಡಿದರೆ ಇದುವರೆಗೆ ನನ್ನ ಹತ್ತಿರ ಹೀಗೆ ಬಂದು ಯಾರೂ ಮಾತಾಡಿರಲಿಲ್ಲ… ನನಗೆ ಗೊತ್ತಿರೋಮಟ್ಟಿಗೆ ನಾನು ಯಾವ ನಿರಪರಾಧೀನೂ ಅನ್ಯಾಯವಾಗಿ ಸಿಕ್ಕಿಹಾಕಿಸಿಲ್ಲ… ನೀವು ಅವತ್ತು ಬಚಾವಾದದ್ದು ನಿಮ್ಮ ಜೊತೆಗೆ ನನ್ನ ಅದೃಷ್ಟಾನೂ ಹೌದು… ಇಲ್ಲದಿದ್ದರೆ ʻಅಪರಾಧಿಗೆ ಮಾತ್ರ ಖೆಡ್ಡಾʼ ಅನ್ನೋ ನನ್ನ ರೆಕಾರ್ಡ್ ಹಾಳಾಗಿಬಿಡೋದು! ಏನೇ ಆಗಲಿ, ಈಗ ನೀವು ನಮ್ಮಲ್ಲಿಗೆ ಯಾಕೆ ಬಂದಿದ್ದೀರಿ ಅಂತ ನನಗೆ ಅರ್ಥವಾಗ್ತಿಲ್ಲ” ಎಂದರು ಗೋಪಾಲ್.

ಎರಡು ಕಾರಣ ಸರ್ ನಾನಿಲ್ಲಿ ಬರೋದಕ್ಕೆ. ಮೊದಲನೇದು ನಿಮಗೆ ದೂರು ಬಂದಾಗ ಸಾಧ್ಯವಾದರೆ ದಯವಿಟ್ಟು ಇನ್ನೊಂದು ಮಗ್ಗುಲಿನಿಂದಾನೂ ಯೋಚನೆ ಮಾಡಿ ಅಂತ ಪ್ರಾರ್ಥಿಸಿಕೊಳ್ಳೋದಕ್ಕೆ. ಈ ಮಾತು ಹೇಳೋಕೆ ನನಗೆ ಯಾವ ಅಧಿಕಾರಾನೂ ಇಲ್ಲ ಅಂತ ನಾನು ಬಲ್ಲೆ… ಇದು ಕೇವಲ ಒಂದು ಸಲಹೆ ಮತ್ತು ಪ್ರಾರ್ಥನೆ ಅಷ್ಟೇ… ಯಾಕೆ ಅಂದರೆ ನಿರಪರಾಧಿ ಅನ್ಯಾಯವಾಗಿ ಸಿಕ್ಕಿಹಾಕಿಕೊಂಡರೆ ಅದರ ಪರಿಣಾಮ ಏನು ಬೇಕಾದರೂ ಆಗಬಹುದು… ನನ್ನ ಉದಾಹರಣೇನೇ ತೊಗೊಳ್ಳಿ. ಅವತ್ತು ನೀವೇನಾದರೂ ನನ್ನನ್ನ ಹಿಡಿದಿದ್ದರೆ ಬಹುಶಃ ಈ ಹೊತ್ತಿನ ತನಕ ಆ ಅವಮಾನದ ಭಾರ ಹೊತ್ತುಕೊಂಡು ನಾನು ಉಳೀತಿರಲಿಲ್ಲ… ಇನ್ನೊಂದು ಕಾರಣ ಏನಂದರೆ ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋಗ್ತಿದೀನಿ ಸರ್… ರಾಜೀನಾಮೆ ಕೊಡೋದಕ್ಕೆ ಇದೊಂದೇ ಅಲ್ಲ… ಬೇರೆ ಕಾರಣಗಳೂ ಇವೆ ಅಂತಿಟ್ಟುಕೊಳ್ಳಿ… ಆದರೆ ಒಂದು ವಿಷಯ ಸ್ಪಷ್ಟವಾಗಿ ಹೇಳ್ತಿದೀನಿ; ನಾನು ನಿಮಗೋ ಮತ್ತೆ ಯಾರಿಗೋ ಹೆದರಿಕೊಂಡು ಕೆಲಸ ಬಿಡ್ತಿಲ್ಲ… ನಾನು ಅಂತಿಮವಾಗಿ ಉತ್ತರ ಕೊಡಬೇಕಾಗಿರೋದು ನನ್ನ ಮನಸ್ಸಾಕ್ಷಿಗೆ ಮಾತ್ರ ಅಂತ ನಂಬಿರೋನು ನಾನು. ಈಗ ಇಬ್ಬರು ಅಧಿಕಾರಿಗಳು ಸಿಕ್ಕಿಹಾಕಿಕೊಂಡಿರೋದರಿಂದ ನೀವು ಆ ವಿಭಾಗಗಳ ದಾಖಲೆಗಳನ್ನು ಪರಿಶೀಲಿಸ್ತೀರಿ ಅಂತ ಕಾಣುತ್ತೆ. ಆಗ ಒಂದು ವೇಳೆ ನಿಮಗೆ ನನ್ನ ಇಂದಿನ – ಹಿಂದಿನ ವಿಭಾಗಗಳಿಗೆ ಸಂಬಂಧಪಟ್ಟ ಹಾಗೆ ಏನೇ ಮಾಹಿತಿ – ವಿವರಗಳು ಬೇಕಿದ್ರೂ ನೀವು ಯಾವಾಗ ಬೇಕಾದರೂ ನನ್ನನ್ನು ನೇರವಾಗಿ ಸಂಪರ್ಕಿಸಬಹುದು… ನಾನು ಕೆಲಸ ಬಿಟ್ಟು ಹೊರಟುಹೋಗಿದ್ದರೂ ನಾನು ನಿಮಗೆ ಸಹಾಯ ಮಾಡ್ತೀನಿ. ಇಷ್ಟನ್ನ ನಿಮಗೆ ಹೇಳಿಬಿಟ್ಟು ಹೋಗೋಣಾಂತ ಬಂದೆ ಸರ್… ಹಾಂ… ಇನ್ನೂ ಒಂದು ವಿಷಯ… ನಾನು ನಿರಪರಾಧಿ ಅಂತ ಸಾಬೀತು ಮಾಡೋದಕ್ಕೆ ಅಗತ್ಯವಿರೋ ಅಂಥ ಸಾಕ್ಷ್ಯಾಧಾರಗಳನ್ನ ನನಗೆ ತೋಚಿದ ರೀತಿಯಲ್ಲಿ ದಾಖಲು ಮಾಡಿಕೊಂಡು ಸಂಗ್ರಹಿಸಿ ಇಟ್ಟುಕೊಂಡಿದೀನಿ ಸರ್… ಇದು ಯಾರ ಮೇಲೂ ಸೇಡು ತೀರಿಸಿಕೊಳ್ಳೋದಕ್ಕೆ ಖಂಡಿತ ಅಲ್ಲ… ಇದು ಏನಿದ್ರೂ ನನ್ನ ಹಿತರಕ್ಷಣೆಗಾಗಿ ಅಷ್ಟೇ” ಎಂದು ನುಡಿದು ಅವರ ಮುಖವನ್ನೇ ನೋಡಿದೆ.

ನನ್ನ ಮಾತು ಕೇಳಿ ಗೋಪಾಲ್ ಮತ್ತಷ್ಟು ಚಕಿತರಾದಂತೆ ಕಂಡರು. “ನೀವು ಪೋಲೀಸ್ ಇಲಾಖೇಲಿ ಇರಬೇಕಾಗಿತ್ತು ಸರ್! ನೀವು ಯೋಚನೆ ಮಾಡೋ ಧಾಟೀನೇ ಹಾಗಿದೆ!” ಎಂದು ಗೋಪಾಲ್ ಮೆಚ್ಚಿ ನುಡಿದಾಗ ಆ ಒತ್ತಡದ ಸಂದರ್ಭದಲ್ಲೂ ಖುಷಿಯಾಯಿತು! “ನಾನು ಶೆರ್ಲಾಕ್ ಹೋಮ್ಸ್‌ನ ದೊಡ್ಡ ಅಭಿಮಾನಿ ಸರ್!” ಎಂದು ನಗುತ್ತಾ ನುಡಿದು, ʻನಾನಿನ್ನು ಹೊರಡಲೇ ಸರ್?ʼ ಎಂದೆ. ಗೋಪಾಲ್ ಅವರು ಆತ್ಮೀಯವಾಗಿ ಕೈಕುಲುಕಿ, “ಕೆಲಸದಲ್ಲಿ ಮುಂದುವರಿಯೋದು ಅಥವಾ ರಾಜೀನಾಮೆ ಕೊಡೋದು ನಿಮ್ಮ ವೈಯಕ್ತಿಕ ನಿರ್ಧಾರ… ಏನೇ ಆದರೂ, ನೀವು ಎಲ್ಲೇ ಇದ್ದರೂ ನಿಮಗೆ ಒಳ್ಳೇದಾಗಲಿ ಅಂತ ಹಾರೈಸ್ತೀನಿ… ಆಲ್ ದಿ ಬೆಸ್ಟ್!” ಎಂದು ನುಡಿದು ಕಳಿಸಿಕೊಟ್ಟಾಗ ಮಿತ್ರನೊಬ್ಬ ದೊರೆತ ಸಂತಸ ನನ್ನಲ್ಲಿ ತುಂಬಿತ್ತು. ಅವರಿಂದ ಬೀಳ್ಕೊಂಡು ಬೈಕ್ ಹತ್ತಿ ಮನೆಯತ್ತ ಹೊರಟೆ. ಮನಸ್ಸು ಎಷ್ಟೋ ಹಗುರಾಗಿತ್ತು. ಎದೆ ಭಾರವೂ ಕಡಿಮೆಯಾಗಿತ್ತು. ಇನ್ನುಳಿದಿರುವುದು ರಾಜೀನಾಮೆಪತ್ರವನ್ನು ಕೊಟ್ಟು ಬರುವುದಷ್ಟೇ! ಅಂದು ರಾತ್ರಿ ರಂಜನಿಯೊಂದಿಗೆ ಮತ್ತೊಂದು ಸುತ್ತು ಮಾತುಕತೆ ನಡೆಸಿದೆ.
ರಾಜೀನಾಮೆ ಕೊಡುವ ವಿಚಾರ ಮನಸ್ಸು ಬುದ್ಧಿಯ ಆಳಕ್ಕೆ ಇಳಿಯುತ್ತಾ ಹೋದಂತೆ ರಂಜನಿ ವಿಚಲಿತಳಾಗಬಹುದೇನೋ ಎಂಬ ಅಳುಕು ನನ್ನನ್ನು ಕಾಡುತ್ತಿತ್ತು. ಆದರೆ ಹಾಗೇನೂ ಆಗದೆ ರಂಜನಿ ಮತ್ತಷ್ಟು ಮನೋಬಲವನ್ನು ಮೈಗೂಡಿಸಿಕೊಂಡವಳಂತೇ ಕಂಡಳು! “ನನ್ನದೊಂದೇ ಕೋರಿಕೆ: ರಾಜೀನಾಮೆಪತ್ರ ನೀಡುವ ಮುನ್ನ ಒಮ್ಮೆ ಹೆಬ್ಬೂರಿಗೆ ಹೋಗಿ ಕಾಮಾಕ್ಷಿ ಅಮ್ಮನನ್ನು ಕಂಡು ಅಪ್ಪಣೆ ಪಡೆದು ಬಂದುಬಿಡೋಣ” ಎಂದಳು ರಂಜನಿ.

ಕುಣಿಗಲ್ ಬಳಿಯ ಹೆಬ್ಬೂರಿನಲ್ಲಿರುವ ಕಾಮಾಕ್ಷಿ ದೇವಾಲಯ ಅಪೂರ್ವ ವಿನ್ಯಾಸದಲ್ಲಿ ನಿರ್ಮಿತವಾಗಿದೆ. ಅಲ್ಲಿ ಗುರುಪೀಠವನ್ನು ಅಲಂಕರಿಸಿ ಮಾರ್ಗದರ್ಶನ ಮಾಡುತ್ತಿದ್ದ ಸ್ವಾಮೀಜೀ ಅವರು ಹೈಸ್ಕೂಲ್‌ನಲ್ಲಿ ನನಗೆ ಕನ್ನಡ ಪಾಠ ಕಲಿಸಿ ಸಾಹಿತ್ಯದ ಒಲವು ಬೆಳೆಸಿದ ಮೇಷ್ಟ್ರು! ಅವರ ಪೂರ್ವಾಶ್ರಮದ ಹೆಸರು ಗಣಪತಿ ಸೋಮಯಾಜಿಗಳು. ದೇವಿಯ ದರ್ಶನದೊಂದಿಗೆ ಗುರುಗಳ ಆಶೀರ್ವಾದವನ್ನೂ ಪಡೆದೇ ಬಂದು ಬಿಡೋಣ ಎಂದು ತೀರ್ಮಾನಿಸಿ ಅಂದು ಸಂಜೆಯೇ ಹೆಬ್ಬೂರಿಗೆ ಹೊರಟೇಬಿಟ್ಟೆವು. ದೇಗುಲದ ಪ್ರಶಾಂತ ವಾತಾವರಣದಲ್ಲಿ ಧ್ಯಾನಸ್ಥಿತಿಯಲ್ಲಿ ಕೊಂಚ ಹೊತ್ತು ಕಣ್ಮುಚ್ಚಿ ಕುಳಿತೆ. ಮೈಯಲ್ಲಿ ಹೊಸ ರಕ್ತ ಸಂಚಾರವಾದಂತೆ… ಸಂತಸದ ಬುಗ್ಗೆ ಚಿಮ್ಮಿ ಚಿಮ್ಮಿ ಉಕ್ಕಿದಂತೆ… ಅಲೆಅಲೆಯಾಗಿ ಮೈಯ ನರನಾಡಿಗಳಲ್ಲೆಲ್ಲಾ ಉತ್ಸಾಹ ಖುಷಿಗಳು ಅರಳಿದಂತೆ ಅಪೂರ್ವ ಅನುಭವ! ನನ್ನ ನಿರ್ಧಾರ ಸರಿಯಾಗಿದೆ ಎನ್ನುವುದಕ್ಕೆ ದೇವಿ ಹಾಗೆ ಸೂಚನೆಯನ್ನು ನೀಡುತ್ತಿದ್ದಾಳೆ ಎಂದು ತೀವ್ರವಾಗಿ ಅನ್ನಿಸಿಬಿಟ್ಟಿತು. ಅದು ನನಗೆ ನಾನೇ ಕೊಟ್ಟುಕೊಳ್ಳುತ್ತಿರುವ ಸಮಾಧಾನ ಎಂದು ನನ್ನ ವೈಚಾರಿಕಬುದ್ಧಿ ಕೆಣಕಿದರೂ ತುಂಬು ಸಂತಸ ಹಾಗೂ ನೆಮ್ಮದಿಯ ಭಾವವನ್ನು ನಾನು ಅನುಭವಿಸಿದ್ದು ಮಾತ್ರ ಸುಳ್ಳಲ್ಲ. ರಂಜನಿಗೂ ದೇವಿಯ ಸನ್ನಿಧಿಯಲ್ಲಿ ಅಂಥದೇ ಪರಮ ಶಾಂತಿ – ನೆಮ್ಮದಿಯ ಅನುಭವವಾಯಿತಂತೆ. ಗುರುಗಳನ್ನು ಭೇಟಿಯಾಗಿ ನಡೆದದ್ದೆಲ್ಲವನ್ನೂ ಅವರ ಮುಂದೆ ನಿವೇದಿಸಿಕೊಂಡು ರಾಜೀನಾಮೆಯ ನನ್ನ ನಿರ್ಧಾರವನ್ನು ಕೊನೆಗೆ ಹೇಳಿದೆ. ಒಂದು ಕ್ಷಣ ಕಣ್ಮುಚ್ಚಿ ಧ್ಯಾನಸ್ಥರಾಗಿ ಕುಳಿತ ಗುರುಗಳು ನಿಧಾನವಾಗಿ ಕಣ್ಣು ತೆರೆದು, “ಬಿಟ್ಟುಬಿಡಯ್ಯಾ… ಒಲ್ಲದ ಕೆಲಸವನ್ನು ಬೇತಾಳನ ಹಾಗೆ ಬೆನ್ನಿಗೆ ಕಟ್ಟಿಕೊಂಡು ಯಾಕೆ ಒದ್ದಾಡ್ತೀಯಾ? ಬಿಟ್ಟುಬಿಡು… ಒಂದು ಬಾಗಿಲು ಮುಚ್ಚಿದರೆ ತಾಯಿ ನೂರು ಬಾಗಿಲು ತೆಗೆದು ನೂರು ದಾರಿ ತೋರಿಸ್ತಾಳೆ… ದಾರಿಯುದ್ದಕ್ಕೂ ಬೆಳಕಿನ ಹೊನಲನ್ನೇ ಹರಿಸ್ತಾಳೆ… ನಾಳೇನೇ ಹೋಗಿ ರಾಜೀನಾಮೆ ಕೊಟ್ಟು ಬಾ… ಕೆಲಸ ಬಿಟ್ಟ ಮೇಲೆ ಮುಂದೆ ಇನ್ನೂ ಒಳ್ಳೇದಾಗುತ್ತೆ. ಇತೋಪ್ಯತಿಶಯವಾಗಿ ಅಭಿವೃದ್ಧಿ ಹೊಂದ್ತೀಯಾ. ಏನೂ ಚಿಂತೆ ಮಾಡಬೇಡ” ಎಂದು ಆಶ್ವಾಸನೆ ನೀಡಿ ಆಶೀರ್ವದಿಸಿದರು. ತಾಯಿಯ ಕೃಪೆ… ಗುರುಗಳ ಶುಭಹಾರೈಕೆ! ಮನಸ್ಸು ಗರಿಬಿಚ್ಚಿ ಕುಣಿಯಲು ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕು? ರಾತ್ರಿ ಅಲ್ಲೇ ಆಶ್ರಮದಲ್ಲೇ ಪ್ರಸಾದವನ್ನು ಸ್ವೀಕರಿಸಿ ಗುರುಗಳ ಅಪ್ಪಣೆ ಪಡೆದು ಹಗುರಾತಿಹಗುರ ಮನಸ್ಕರಾಗಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆವು.

‍ಲೇಖಕರು avadhi

July 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: