ಬರಗೂರು ಅವರು ‘ಬಿಟ್ಟ ಸ್ಥಾನಗಳ ಸುತ್ತಮುತ್ತ’

ಕನ್ನಡದ ಸಾಕ್ಷಿ ಪ್ರಜ್ಞೆ ಎಂದೇ ಹೆಸರಾದ ಬರಗೂರು ರಾಮಚಂದ್ರಪ್ಪನವರು ತಾವು ನಡೆದು ಬಂದ ಹಾದಿಯ ಬಗ್ಗೆ ಒಂದು ಹಿನ್ನೋಟ ಹರಿಸಿದ್ದಾರೆ.

ಇದು ಆಯ್ದ ಅನುಭವಗಳ ಕಥನ. ‘ ಕಾಗೆ ಕಾರುಣ್ಯದ ಕಣ್ಣು ‘ ಇದೇ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅಂಕಿತ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಆಯ್ದ ಭಾಗ ‘ ಅವಧಿ ‘ ಓದುಗರಿಗಾಗಿ ಇಲ್ಲಿದೆ –

ಸಾಂಸ್ಕೃತಿಕ ಕ್ಷೇತ್ರದವರು ಸರ್ಕಾರದಿಂದ ಯಾವುದಾದರೂ ಹುದ್ದೆಗೆ ನೇಮಕಗೊಂಡಾಗ ಟೀಕಿಸುವವರು ಇರುತ್ತಾರೆ. ತಮ್ಮ ವಿಚಾರಧಾರೆಗೆ ಸ್ವಲ್ಪವಾದರೂ ಸಮೀಪವಿರುವ ಸರ್ಕಾರದ ನೇಮಕಾತಿಗಳನ್ನು ಒಪ್ಪಿ, ಪ್ರಾಮಾಣಿಕ, ಪಾರದರ್ಶಕ ನಡೆಯಿಂದ ಸ್ಥಾನ ಗೌರವ ಕಾಪಾಡುವುದು ತಪ್ಪಲ್ಲವೆಂದೇ ನನ್ನ ಭಾವನೆ. ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವ ಪ್ರಕ್ರಿಯೆಯ ಒಂದು ಭಾಗವಾಗಿ ಇದು ಅಪೇಕ್ಷಣೀಯವಾದರೂ ಹುದ್ದೆಗಳಿಗಾಗಿ ಹಪಹಪಿಸುವುದು ತಪ್ಪು. ವಿಶೇಷವಾಗಿ ಸಾಂಸ್ಕೃತಿಕ ಕ್ಷೇತ್ರದವರಿಗೆ ಸಂಕೋಚ ಇರಬೇಕು. ಇಷ್ಟವಾಗದ್ದನ್ನು ನಿರಾಕರಿಸಿ ನಿಲ್ಲುವ ನೈತಿಕತೆ ಇರಬೇಕು. ಇಷ್ಟಾಗಿಯೂ ಟೀಕಿಸುವವರು ಇದ್ದರೆ ಅವರಲ್ಲಿ ಅಸಹನೆ ಇದೆಯೋ, ತಮಗೆ ಸ್ಥಾನ ದಕ್ಕಲಿಲ್ಲವೆಂಬ ದುರಾಸೆಯ ನಿರಾಶೆ ಇದೆಯೋ ಎಂಬುದೂ ಪರಿಶೀಲನಾರ್ಹವಾದುದು. ಕೆಲವೊಮ್ಮೆ ವ್ಯಕ್ತಿ ದ್ವೇಷವೂ ಇಂಥ ಟೀಕಾಕಾರರಲ್ಲಿ ಕೆಲಸ ಮಾಡುತ್ತದೆ. ಇಂಥ ಸಂಕುಚಿತವಲ್ಲದ ಸೈದ್ಧಾಂತಿಕ ವಿಮರ್ಶೆಗಳಿದ್ದರೆ ಅದನ್ನು ಸ್ವೀಕರಿಸುವ, ಪರಿಶೀಲಿಸುವ ಪ್ರಜಾಸತ್ತಾತ್ಮಕ ನಡೆ ನಮ್ಮದಾಗಬೇಕು. ಇಷ್ಟು ಮಾತುಗಳನ್ನು ಹೇಳಲು ಕಾರಣವಿದೆ.

ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದೆ. ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗಳ ಸರ್ವಾಧ್ಯಕ್ಷನಾಗಿದ್ದೆ. ಸಾಂಸ್ಕೃತಿಕ ನೀತಿ ನಿರೂಪಣಾ ಸಮಿತಿಗೆ ಅಧ್ಯಕ್ಷನಾಗಿದ್ದೆ. ಗಡಿನಾಡು ಅಧ್ಯಯನ ಆಯೋಗದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೆ. ಕೆಲವು ಪ್ರಮುಖ ರಾಜಕಾರಣಿಗಳ ಸಂಪರ್ಕವಿದ್ದದ್ದೂ ನಿಜ. ಹಾಗೆಂದು ಸರ್ಕಾರದವರು ಕೊಡಲು ಬಂದ ಸ್ಥಾನಗಳನ್ನೆಲ್ಲ ಒಪ್ಪಿಕೊಂಡಿಲ್ಲ. ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿಲ್ಲ. ಇದು ಅಹಂಕಾರದ ಮಾತಲ್ಲ. ವಿನಯದ ನಿವೇದನೆ;
ಅದು ಶ್ರೀ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯವರಾಗಿದ್ದ ಕಾಲ.
ಶ್ರೀ ಜೀವರಾಜ ಆಳ್ವ ಅವರು ಸಚಿವರಾಗಿದ್ದರು; ಇವರು ನನಗೆ ಹಿಂದಿನಿಂದ ಪರಿಚಯಸ್ಥರು. ನನ್ನ ಬಗ್ಗೆ ವಿಶೇಷ ವಿಶ್ವಾಸವುಳ್ಳವರು. ಎಷ್ಟರಮಟ್ಟಿಗೆ ವಿಶ್ವಾಸವೆಂದರೆ, ಒಮ್ಮೆ ನನ್ನ ಹೆಸರು ಹೇಳಿಕೊಂಡು ಹೋದವರಿಗೆ ನಾನು ಹೇಳದೇ ಇದ್ದರೂ ಕೆಲಸ ಕೊಡಿಸಿದ್ದರು. ಇಬ್ಬರು ಸೋದರಿಯರಲ್ಲಿ ಒಬ್ಬರಿಗೆ ಒಂದು ಹುದ್ದೆಗೆ ಸಂದರ್ಶನ ಪತ್ರ ಬಂದಿದೆ. ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರಂತೆ. ನಾನು ಲಭ್ಯವಾಗಲಿಲ್ಲವಂತೆ. ಸೀದಾ ಜೀವರಾಜ ಆಳ್ವ ಅವರ ಬಳಿ ಹೋಗಿದ್ದಾರೆ. ʻಸಾರ್ ನಾವು ಬರಗೂರರ ಸೋದರಿಯರು. ಸಂದರ್ಶನ ಪತ್ರ ಬಂದಿದೆ. ದಯವಿಟ್ಟು ಸಹಾಯ ಮಾಡಿʼ ಎಂದಿದ್ದಾರೆ. ಆಳ್ವ ಅವರು ಕೂಡಲೇ ಸಂಬಂಧಿಸಿದವರಿಗೆ ಫೋನ್ ಮಾಡಿದ್ದಾರೆ. ಮುಂದೆ ಕೆಲಸವೂ ಸಿಕ್ಕಿದೆ. ವಾಸ್ತವವೆಂದರೆ ಹೀಗೆ ಕೆಲಸ ಪಡೆದವರ ಪರಿಚಯವೇ ನನಗಿರಲಿಲ್ಲ! ಮುಂದೊಂದು ದಿನ ಅವರು ನನ್ನ ಮನೆಗೆ ಬಂದು ನಡೆದದ್ದನ್ನು ಹೇಳಿದರು. ʻನಿಮಗೆ ತಿಳಿಸದೆ ಕೆಲಸ ಮಾಡಿಸಿಕೊಂಡದ್ದಕ್ಕೆ ಕ್ಷಮಿಸಿ ಸಾರ್ʼ ಎಂದರು. ಇವರೇನೋ ಉದ್ಯೋಗಕ್ಕೆ ನನ್ನ ಹೆಸರು ಬಳಸಿಕೊಂಡರು; ಬೇರೆ ಯಾರಾದರೂ ದುರುಪಯೋಗ ಮಾಡಿಕೊಂಡರೆ ಕಷ್ಟ ಎಂದು ಜೀವರಾಜ ಆಳ್ವ ಅವರನ್ನು ಭೇಟಿಯಾಗಿ ಹೇಳಿದೆ. ʻಅವರು ನಿಮ್ಮ ಹೆಸರು ಹೇಳಿದ್ರು. ಜೊತೆಗೆ ಉದ್ಯೋಗದ ವಿಷಯ. ಸಹಾಯ ಮಾಡ್ದೆ. ಮುಂದೆ ಯಾರಾದ್ರೂ ನಿಮ್ಮ ಹೆಸರು ಹೇಳಿದ್ರೆ ಮೊದಲು ಪತ್ರ ತನ್ನಿ ಅಥವಾ ಫೋನ್ ಮಾಡ್ಸಿ ಅಂತ ಹೇಳ್ತೇನೆʼ ಎಂದರು.

ಇಷ್ಟು ವಿಶ್ವಾಸದ ಜೀವರಾಜ ಆಳ್ವ ಅವರು ನಾನು ವಿಧಾನಪರಿಷತ್ತಿನ ನಾಮನಿರ್ದೇಶಿತ ಸದಸ್ಯನಾಗಬೇಕೆಂದು ಒತ್ತಾಯಿಸಿದ್ದರು. ಅದು ನಡೆದದ್ದು ಹೀಗೆ; ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಸಮಾರಂಭ. ಜೀವರಾಜ ಆಳ್ವ ಅವರು ಮುಖ್ಯ ಅತಿಥಿ. ನಾನೂ ಸಮಾರಂಭದಲ್ಲಿ ಇದ್ದೆ. ಸಮಾರಂಭ ಮುಗಿದ ನಂತರ ಹೊರಬಂದ ಆಳ್ವ ಅವರು ʻನಿಮ್ಮ ಮನೆ ಎಲ್ಲಿ ಬರಗೂರ್?ʼ ಎಂದು ಕೇಳಿದರು. ʻನೆಟ್ಟಕಲ್ಲಪ್ಪ ಸರ್ಕಲ್ ಹತ್ರ ಕೃಷ್ಣರಾವ್ ಪಾರ್ಕ್ ಇದ್ಯಲ್ಲ, ಅದರ ಹತ್ರ ರಿಸರ್‌ವಾಯರ್ ಸ್ಟ್ರೀಟ್‌ನಲ್ಲಿ ಬಾಡಿಗೆಮನೆʼ ಎಂದೆ. ʻಬನ್ನಿ, ಕಾರ್ ಹತ್ಕೊಳ್ಳಿʼ ಎಂದರು. ಡ್ರೈವರ್‌ಗೆ ʻಕೃಷ್ಣರಾವ್ ಪಾರ್ಕ್ ಕಡೆ ನಡಿಯಪ್ಪʼ ಎಂದರು. ಪಾರ್ಕ್ ಬರೋವರೆಗೆ ಸಾಂಸ್ಕೃತಿಕ ವಿಷಯಗಳನ್ನು ಮಾತಾಡುತ್ತಿದ್ದರು. ಪಾರ್ಕ್ ಬಂದಾಗ ಕಾರಿನಿಂದ ಇಳಿದು ʻಬನ್ನಿ ವಾಕ್ ಮಾಡೋಣʼ ಎಂದು ಪಾರ್ಕ್ ಒಳಗೆ ಕರೆದೊಯ್ದರು. ಆಗ ರಾತ್ರಿ ೯ ಗಂಟೆ. ವಾಕ್ ಮಾಡುತ್ತಾ ವಿಷಯಕ್ಕೆ ಬಂದರು; ʻನೋಡಿ, ನಮ್ಮ ಸರ್ಕಾರದಿಂದ ನಿಮ್ಮನ್ನು ವಿಧಾನಪರಿಷತ್ತಿಗೆ ನಾಮಿನೇಟ್ ಮಾಡಬೇಕು ಅಂತ ಇದ್ದೇವೆ. ನಿಜ ಅಂದ್ರೆ ನಿಮ್ಮನ್ನೇ ಮೊದಲು ಕೇಳ್ತಿಲ್ಲ. ಮೊದಲು ದೇವನೂರು ಮಹಾದೇವ ಅವರನ್ನ ಕೇಳಿದ್ವಿ. ಅವರು ತಮಗೆ ಅದೆಲ್ಲ ಕಷ್ಟ, ಆಗೊಲ್ಲ ಅಂದ್ರು. ನಂತರ ನಮ್ಮ ಆಯ್ಕೆ ನೀವು. ನಮ್ಮ ಸಾಹೇಬ್ರು (ಅಂದ್ರೆ ರಾಮಕೃಷ್ಣ ಹೆಗಡೆಯವರು) – ಬರಗೂರು ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ ಅವ್ರನ್ನ ಎಂಎಲ್‌ಸಿ ಮಾಡೋದಾ? ಅಂತ ಪ್ರಶ್ನೆ ಮಾಡಿದ್ರು. ನಾನು ಕೆಲವು ವಿಷಯದಲ್ಲಿ ಭಿನ್ನಾಭಿಪ್ರಾಯ ಇದ್ರೂ ಅಂಥವರು ವಿಧಾನಪರಿಷತ್ತಿಗೆ ಬೇಕು, ಇಷ್ಟಕ್ಕೂ ಅವರು ಕಾಂಗ್ರೆಸ್ ಸರ್ಕಾರಗಳನ್ನೂ ಟೀಕಿಸ್ತಾ ಬಂದಿದ್ದಾರೆ ಅಂತೆಲ್ಲ ಹೇಳಿ ಒಪ್ಸಿದ್ದೀನಿ. ಎಂ.ಪಿ. ಪ್ರಕಾಶ್ ಕೂಡ ಇದೇ ಮಾತು ಹೇಳಿದ್ರು. ನೀವು ಒಪ್ಪಬೇಕುʼ – ಎಂದು ಸವಿವರವಾಗಿ ಹೇಳಿದರು.

ಹೌದು; ನಾನು ಟೀಕೆ ಮಾಡಿದ್ದೆ. ಅಷ್ಟೇ ಅಲ್ಲ, ಧರಣಿಯಲ್ಲೂ ಭಾಗವಹಿಸಿದ್ದೆ. ಒಂದು ದಿನ ಪಿ. ಲಂಕೇಶ್ ಅವರು ಮನೆ ಹತ್ರ ಬಂದರು. ನಮ್ಮದು ಮಹಡಿಮನೆ. ಕೆಳಗೆ ಕಾರಲ್ಲಿ ಕೂತು ಅವರ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಪ್ಪನವರನ್ನು ನನ್ನ ಬಳಿ ಕಳಿಸಿದರು. ನಾನು ಕೆಳಗೆ ಬಂದೆ. ಲಂಕೇಶ್ ಅವರು ʻಆ ಮುಖ್ಯಮಂತ್ರಿ ಹೆಗಡೆ ಸೌತ್ ಎಂಡ್ ಸರ್ಕಲ್ ಹತ್ರ ಇರೋ ಜಾಗಾನ ರೇವಜೀತು ಕಂಪನೀಗೆ ಕೊಡ್ತಾರೆ ಅಂತ ಸುದ್ದಿ ಆಗಿದ್ಯಲ್ಲ, ಅದನ್ನು ನಾವು ವಿರೋಧಿಸಬೇಕು. ಅದು ಉದ್ಯಾನಕ್ಕೆ ಮೀಸಲಾಗಿಟ್ಟಿರೋ ಜಾಗ. ಉದ್ಯಾನಕ್ಕೇ ಉಳಿಸ್ಬೇಕು. ನೀವೂ ನಾನೂ ಸಂಘಟಿಸಿ ಒಂದು ದಿನ ಧರಣಿ ಸತ್ಯಾಗ್ರಹ ಮಾಡೋಣʼ ಎಂದರು. ʻಆಗ್ಲಿ ಸಾರ್ʼ ಎಂದೆ. ಅವರ ಜೊತೆ ಸೇರಿ ಸಂಘಟಿಸಿದ್ದಾಯಿತು. ಉದ್ಯಾನಕ್ಕೆ ಮೀಸಲಾಗಿದ್ದ ಜಾಗದಲ್ಲೇ ಧರಣಿ ಕುಳಿತಿದ್ದೆವು. ಹೀಗೇ ಅನೇಕ ಕಡೆಯಿಂದ ಪ್ರತಿರೋಧಗಳು ಬಂದವು. ಅದು ಫಲ ನೀಡಿತು. ಮುಖ್ಯಮಂತ್ರಿ ಹೆಗಡೆಯವರು ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಅಷ್ಟೇ ಅಲ್ಲ, ನಾನು ವಿಶ್ವವಿದ್ಯಾಲಯದ ಉದ್ಯೋಗಿಯಾಗಿದ್ದರೂ ಅಂದಿನ ಹೆಗಡೆಯವರ ನೇತೃತ್ವದ ಜನತಾ ಪಕ್ಷದ ಸರ್ಕಾರ ಅದನ್ನೇ ನೆಪ ಮಾಡಿಕೊಂಡು ಕ್ರಮಕ್ಕೆ ಮುಂದಾಗಲಿಲ್ಲ. ಹೆಗಡೆಯವರು ಸೇಡಿಗೆ ಮುಂದಾಗಲಿಲ್ಲ. ಇದಕ್ಕೂ ಮುಂಚೆ ಕಾಂಗ್ರೆಸ್ ಸರ್ಕಾರದ ಕೆಲವು ತೀಮಾರ್ನಗಳನ್ನು ಟೀಕಿಸಿದ್ದರೂ, ಪ್ರತಿಭಟನೆ ಮಾಡಿದ್ದರೂ ಅವರೂ ನನ್ನಂಥವರ ವಿರುದ್ಧ ಕ್ರಮಕ್ಕೆ ಮುಂದಾಗಲಿಲ್ಲ (ಪ್ರಜಾಸತ್ತಾತ್ಮಕವಾಗಿ ವರ್ತಿಸಿದ ಈ ಎರಡು ನಿದರ್ಶನಗಳನ್ನು ಇಲ್ಲಿ ಹೇಳಲು ಕಾರಣವಿದೆ. ಇಂದು ಇಂಥ ಸ್ಥಿತಿ ಇದೆಯೇ ಎಂದು ಕೇಳಿಕೊಳ್ಳುವಂತಾಗಿದೆ. ಆಡಳಿತ ಪಕ್ಷವನ್ನು ಮತ್ತು ಸರ್ಕಾರವನ್ನು ಟೀಕಿಸಿದರೆ ದೇಶವನ್ನೇ ಅವಮಾನ ಮಾಡಿದಂತೆ ಎಂಬ ಸುಳ್ಳಿನ ಅಪವ್ಯಾಖ್ಯಾನವನ್ನು ಮೂಲಭೂತವಾದಿಗಳು ಮಾಡುತ್ತಿದ್ದಾರೆ. ಇದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲಿನ ಕೆಟ್ಟ ಪ್ರವೃತ್ತಿ).

ಶ್ರೀ ರಾಮಕೃಷ್ಣ ಹೆಗಡೆಯವರು ಆಳ್ವ ಅವರಿಗೆ ಹೇಳಿದ ಮಾತಿನಿಂದ ʻರೇವಜೀತು ಹಗರಣʼವನ್ನು ವಿರೋಧಿಸಿದ್ದ ಘಟನೆ ನೆನಪಾಯಿತು. ಆದರೆ ಅದರ ನೆಪದಲ್ಲಿ ನನಗೆ ಅಡ್ಡಿಯಾಗದೆ ಹೆಗಡೆಯವರು ಆಳ್ವ ಅವರ ಒತ್ತಾಯಕ್ಕೆ ನನ್ನನ್ನು ಎಂಎಲ್‌ಸಿ ಮಾಡಲು ಒಪ್ಪಿದ್ದು ಉಲ್ಲೇಖನೀಯ ನಡೆ. ಆಳ್ವ ಅವರು ನನ್ನ ಮೌನವನ್ನು ಮುರಿದು ʻಏನ್ ಯೋಚಿಸ್ತಿದ್ದೀರಿ?ʼ ಎಂದು ಕೇಳಿದರು. ನಾನು ʻರೇವಜೀತು ಹಗರಣ ನೆನಪು ಮಾಡಿಕೊಂಡೆʼ ಎಂದೆ. ʻಅದು ಆಯ್ತಲ್ಲ ಬರಗೂರ್. ಸಾಹೇಬ್ರು ಒಪ್ಪಿಗೇನೂ ಸಿಕ್ಕಿದೆ. ನೀವು ಒಪ್ಪಿದ್ರೆ ನಿಮ್ಮ ಹೆಸರನ್ನು ರಾಜ್ಯಪಾಲರಿಗೆ ಕಳಿಸ್ತೇವೆʼ ಎಂದರು.
ನಾನು ಯೊಚಿಸಿದೆ. ವಿಧಾನಪರಿಷತ್ತನ್ನು ʻಹಿರಿಯರ ಮನೆʼ ಎಂದು ಕರೆಯುತ್ತಾರೆ. ನಾನು ಕಿರಿಯ. ನನಗೆ ನಲವತ್ತು ವರ್ಷವೂ ಆಗಿಲ್ಲ. ೩೬ ವರ್ಷ ಇರಬೇಕು. ಇಷ್ಟು ಚಿಕ್ಕ ವಯಸ್ಸಿಗೇ ಹಿರಿಯರ ಮನೆಯ ಸದಸ್ಯನಾಗಲು ಸಂಕೋಚವಾಯಿತು. ಇದೇ ಕಾರಣವನ್ನು ನೀಡಿದೆ. ʻಹಿರಿಯರ ಮನೆಗೆ ನಾನು ತುಂಬಾ ಕಿರಿಯ ಆಗ್ತೇನೆ. ದಯವಿಟ್ಟು ನನಗೆ ವಿಧಾನಪರಿಷತ್ತಿನ ಸದಸ್ಯ ಆಗೋಕೆ ಸಂಕೋಚ ಕಾಡ್ಸುತ್ತೆ. ಇದರ ಬದಲು ಯಾವುದಾದ್ರೂ ಸಾಂಸ್ಕೃತಿಕ ಸ್ಥಾನ ಕೊಟ್ರೆ ಕೆಲ್ಸ ಮಾಡ್ತೇನೆʼ ಎಂದು ವಿನಯದಿಂದಲೇ ಆಳ್ವ ಅವರ ಆಹ್ವಾನವನ್ನು ನಿರಾಕರಿಸಿದೆ. ಅವರು ಅಲ್ಲಿಗೇ ಸುಮ್ಮನಾಗಲಿಲ್ಲ. ʻಹಾಗೆಲ್ಲ ಯಾಕ್ ಯೋಚಿಸ್ತೀರಿ. ನೀವು ವಿಧಾನಪರಿಷತ್ತಿಗೆ ಗೌರವ ತರೋ ರೀತಿ ನಡ್ಕೋತೀರಿ ಅಂತ ನಮಿಗ್ ಗೊತ್ತು. ಮೂರ್ನಾಲ್ಕು ದಿನ ಸಮಯ ತಗೊಳ್ಳಿ. ಯೋಚ್ನೆ ಮಾಡಿ ತಿಳಿಸಿ. ಆತುರದ ನಿರ್ಧಾರ ಮಾಡ್‌ಬೇಡಿʼ ಎಂದು ತಿಳಿಸಿ ಹೊರಟರು.
ಮೂರ್ನಾಲ್ಕು ದಿನಗಳ ನಂತರ ನಾನು ಶ್ರೀ ಜೀವರಾಜ ಆಳ್ವ ಅವರ ಮನೆಗೆ ಹೋದೆ. ಅಲ್ಲಿ ಜನವೋ ಜನ. ಪೋಲೀಸ್ ಅಧಿಕಾರಿ, ಲೇಖಕ ಶ್ರೀ ವಿಜಯ ಸಾಸನೂರ್ ಮತ್ತು ಪತ್ರಕರ್ತ ಶ್ರೀ ಮಹದೇವ ಪ್ರಕಾಶ್ ಅವರೂ ಆಳ್ವ ಅವರ ಭೇಟಿಗೆ ಬಂದಿದ್ದರು. ನಾವು ಮೂವರನ್ನೂ ಆಳ್ವ ಅವರು ಒಳಕೋಣೆಗೆ ಕರೆದೊಯ್ದರು. ಅವರಿಬ್ಬರಿಗೂ ನನ್ನನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕೆಂದಿರುವುದನ್ನೂ ನನ್ನ ಹಿಂಜರಿಕೆಯನ್ನೂ ತಿಳಿಸಿದರು. ಆನಂತರ ನನ್ನತ್ತ ನೋಡಿ ʻಏನು ತೀರ್ಮಾನಕ್ಕೆ ಬಂದ್ರಿ?ʼ ಎಂದು ಕೇಳಿದರು. ʻನನ್ನ ತೀರ್ಮಾನ ಬದಲಾಗಿಲ್ಲ ಸಾರ್. ಅವತ್ತು ನಾನು ಏನ್ ಹೇಳಿದೆನೋ ಅದೇ ನನ್ನ ತೀರ್ಮಾನ. ದಯವಿಟ್ಟು ತಪ್ಪು ತಿಳ್ಕೋಬೇಡಿ. ಈ ವಯಸ್ಸಿನಲ್ಲಿ ನಾನು ವಿಧಾನಪರಿಷತ್ ಸದಸ್ಯ ಆಗಲಾರೆʼ ಎಂದೆ. ಅವರು ಮೂವರೂ ಇನ್ನೊಮ್ಮೆ ಒತ್ತಾಯ ಮಾಡಿದರು. ನಾನು ಒಪ್ಪಲಿಲ್ಲ. ಕೆಲವು ದಿನಗಳ ನಂತರ ಹಿಂದೊಮ್ಮೆ ನನ್ನ ವಿದ್ಯಾರ್ಥಿಯಾಗಿದ್ದ ಶ್ರೀ ಸಿದ್ಧಲಿಂಗಯ್ಯನವರು ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡರು ಸಂತೋಷ.

ಶ್ರೀ ಎಸ್. ಬಂಗಾರಪ್ಪನವರು ಮುಖ್ಯಮಂತ್ರಿಯವರಾಗಿದ್ದಾಗಲೂ ನನ್ನನ್ನು ವಿಧಾನಪರಿಷತ್ತಿನ ಸದಸ್ಯರಾಗಲು ಆಹ್ವಾನಿಸಿದ್ದರು. ನಾನಾಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದೆ. ಒಂದು ದಿನ ಮುಖ್ಯಮಂತ್ರಿಯವರ ಆಪ್ತಸಹಾಯಕ ಶ್ರೀಧರ್ ಫೋನ್ ಮಾಡಿ ʻಸಾಹೇಬ್ರನ್ನ ನೀವು ಮೀಟ್ ಮಾಡ್ಬೇಕಂತೆ. ಬನ್ನಿʼ ಎಂದರು. ನಾನು ಹೋದೆ. ಮುಖ್ಯಮಂತ್ರಿಯವರ ಗೃಹಕಚೇರಿ ʻಕೃಷ್ಣʼದ ಮಹಡಿಯಲ್ಲಿದ್ದ ಒಂದು ಹಾಲ್‌ನಲ್ಲಿ ಯಾವುದೋ ಮೀಟಿಂಗ್‌ನಲ್ಲಿ ಮಗ್ನರಾಗಿದ್ದ ಬಂಗಾರಪ್ಪನವರು ಪಕ್ಕದಲ್ಲೇ ಇದ್ದ ರೂಮಿನಲ್ಲಿ ಕೂತುಕೊಳ್ಳಲು ಹೇಳಿದರು. ಹತ್ತು ನಿಮಿಷಗಳಲ್ಲಿ ರೂಮಿಗೆ ಬಂದ ಅವರು ನೇರವಾಗಿ ವಿಷಯಕ್ಕೆ ಬಂದರು. ‘‘ನೋಡಿ, ವಿಧಾನಪರಿಷತ್ತಿನಲ್ಲಿ ಒಂದು ಸೀಟು ಖಾಲಿ ಆಗಿದೆ. ನಾಮಿನೇಟ್ ಆಗಿದ್ದ ಬಿ.ಟಿ. ಲಲಿತಾ ನಾಯಕ್ ಅವರ ಅವಧಿ ಮುಗಿದಿದೆ. ಆ ಸ್ಥಾನಕ್ಕೆ ನಿಮ್ಮನ್ನ ನೇಮಕ ಮಾಡ್ಬೇಕು ಅಂತಿದ್ದೇನೆ. ಅದನ್ನ ತಿಳ್ಸೋಕೆ ನಿಮ್ಮನ್ನ ಕರೆದದ್ದು’’ ಎಂದರು.

ನಾನು ಕ್ಷಣಕಾಲ ಯೋಚಿಸಿದೆ. ಈಗಾಗಲೇ ನಾನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ. ಇದರ ಜೊತೆಗೆ ವಿಧಾನಪರಿಷತ್ತಿನ ಸದಸ್ಯ ಆಗೋದು ಸರಿಯೇ? ಅಕಾಡೆಮಿ ಅಧ್ಯಕ್ಷನಾಗಿದ್ದುಕೊಂಡು ವಿಧಾನಪರಿಷತ್ತಿನ ಸದಸ್ಯ ಆಗಲು ನಿಯಮದ ಪ್ರಕಾರ ತಪ್ಪಲ್ಲ. ಆದರೆ ನೈತಿಕತೆ ಪ್ರಶ್ನೆ ಎದುರಾಯಿತು. ʻಇಲ್ಲಿ ಅಧ್ಯಕ್ಷರೂ ಆಗ್ತಾರೆ, ಅಲ್ಲಿ ವಿಧಾನಪರಿಷತ್ತಿನ ಸದಸ್ಯರೂ ಆಗ್ತಾರೆ. ಅಧಿಕಾರದ ದಾಹʼ ಅನ್ನೋ ಕೆಟ್ಟ ಹೆಸರು ಬರಬಹುದು. ಹೀಗೆಲ್ಲ ಯೋಚಿಸಿ ಹಿಂದೆ ಹೆಗಡೆಯವರು ಮುಖ್ಯಮಂತ್ರಿಯವರಾಗಿದ್ದಾಗ ಬಂದ ಆಹ್ವಾನವನ್ನು ನಿರಾಕರಿಸಿದ್ದನ್ನೂ ತಿಳಿಸಿ, ʻನನಗೆ ಎಂಎಲ್‌ಸಿ ಸ್ಥಾನ ಬೇಡ ಸಾರ್ʼ ಎಂದೆ. ಬಂಗಾರಪ್ಪನವರಿಗೆ ಬೇಸರವಾಯಿತು. ʻನಾನು ಅಕಾಡೆಮಿ ಅಧ್ಯಕ್ಷ ಆಗಿದ್ದೇನೆ. ಅಷ್ಟು ಸಾಕು. ನಾವು ಸಾಂಸ್ಕೃತಿಕ ಕ್ಷೇತ್ರದವರು; ದುರಾಸೆ ಪಡಬಾರದು. ಅಲ್ವಾ ಸಾರ್ʼ ಎಂದು ಪ್ರಶ್ನಾರ್ಥಕವಾಗಿ ನೋಡಿದೆ. ʻಇದೇನ್ ದುರಾಸೆ? ನೀವೇನ್ ಕೇಳ್ಕೊಂಡ್ ಬಂದ್ರಾ? ನಾನೇ ಕರೆದು ಕೊಡ್ತಿದ್ದೀನಿʼ ಎಂದರು. ನಾನು ʻಸಾರ್, ಬಜೆಟ್‌ನಲ್ಲಿ ಕರ್ನಾಟಕ ದರ್ಶನ ಕೇಂದ್ರ ಆರಂಭಿಸೋ ವಿಷಯ ಹೇಳಿದ್ದೀರಿ. ಹೆಚ್ಚೆಂದರೆ ಅಕಾಡೆಮಿ ಅಧ್ಯಕ್ಷನಾಗಿ ಅದಕ್ಕೂ ಕೆಲಸ ಮಾಡ್ತೀನಿ. ಎಷ್ಟಾದ್ರೂ ಅದು ಸಾಂಸ್ಕೃತಿಕ ಕೆಲಸʼ ಎಂದು ವಿವರಿಸಿದೆ. ಬಂಗಾರಪ್ಪನವರು ʻಕರ್ನಾಟಕ ದರ್ಶನ ಕೇಂದ್ರದ್ದು ನಿಮ್ಮದೇ ಸಲಹೆ ಅಲ್ವಾ? ಅದರ ಕೆಲಸದಲ್ಲಿ ನಿಮ್ಮನ್ನೂ ಬಳಸ್ಕೊಳ್ಳೋಣ. ಮೊದ್ಲು ಎಂಎಲ್‌ಸಿ ಆಗಿʼ ಎಂದು ತಮ್ಮದೇ ಧಾಟಿಯಲ್ಲಿ ಒತ್ತಾಯಿಸಿದರು.

ನಿಜ; ʻಕರ್ನಾಟಕ ದರ್ಶನ ಕೇಂದ್ರʼ ಸ್ಥಾಪನೆಯ ಸಲಹೆ ನನ್ನದೇ ಆಗಿತ್ತು. ಈಗ ʻಕಲಾಗ್ರಾಮʼವೆಂದು ಹೆಸರಾಗಿರುವ ಜಾಗದಲ್ಲಿ ಈ ಕೇಂದ್ರವನ್ನು ಸ್ಥಾಪಿಸುವುದು. ಸಾಹಿತ್ಯ, ರಂಗಭೂಮಿ, ಸಿನಿಮಾ, ಚಿತ್ರಕಲೆ, ಜನಪದ ಕಲೆ, ಸಂಗೀತ – ಹೀಗೆ ವಿವಿಧ ವಿಭಾಗಗಳ ಮ್ಯೂಜಿಯಂಗಳನ್ನು ರೂಪಿಸುವುದು. ಸಭಾಂಗಣ, ಬಯಲು ರಂಗಮಂದಿರ ಕಟ್ಟುವುದು. ಅದು ಕಲಾಕೇಂದ್ರವೂ ಆಗಿರಬೇಕು; ಪ್ರವಾಸಿ ಕೇಂದ್ರವೂ ಆಗಿರಬೇಕು – ಹೀಗೆ ನಾನು ಒದಗಿಸಿದ ಸ್ಥೂಲ ರೂಪುರೇಷೆಗಳನ್ನು ಆಧರಿಸಿ ಬಂಗಾರಪ್ಪನವರು ತಮ್ಮ ಬಜೆಟ್‌ನಲ್ಲಿ ಯೋಜನೆಯೊಂದನ್ನು ಘೋಷಣೆ ಮಾಡಿದ್ದರು. ನನಗದು ಆಸಕ್ತಿಯ ಸಾಂಸ್ಕೃತಿಕ ಕೆಲಸವಾಗಿತ್ತು. ಬಂಗಾರಪ್ಪನವರಿಗೂ ಅದು ಆಸಕ್ತಿಯ ಕ್ಷೇತ್ರವಾಗಿದ್ದರೂ ನನ್ನನ್ನು ಅವರು ಎಂಎಲ್‌ಸಿ ಮಾಡುವುದಕ್ಕೆ ಆದ್ಯತೆ ನೀಡಿದ್ದರು.

ನಾನು ನನ್ನ ಒಳಗಿನ ದನಿಗೆ ಮಾತಾಗಿ ಎಲ್ಲವನ್ನೂ ವಿವರಿಸಿದೆ. ಸಾಂಸ್ಕೃತಿಕ ಕ್ಷೇತ್ರದವನಾಗಿದ್ದು ಅಕಾಡೆಮಿ ಅಧ್ಯಕ್ಷತೆ ಜೊತೆಗೆ ರಾಜಕೀಯ ಸ್ಥಾನಕ್ಕೆ ಬರಲು ಮನಸ್ಸಾಗ್ತಿಲ್ಲ ಎಂದೆ. ಅವರು ಅಂದು ಹೇಳಿದ ಒಂದು ಮಾತು ಈಗಲೂ ನನ್ನನ್ನು ಕಾಡಿಸುತ್ತಿದೆ. ಅವರು ಹೀಗೆಂದರು; ʻನೋಡಿ, ನೀವು ಹಿಂದುಳಿದೋರು, ನಿಮ್ಮನ್ನ ನೀವು ಸುಟ್ಕೊಂಡು ಸಂತೋಷ ಪಡೋದ್ರಲ್ಲಿ ಪ್ರಸಿದ್ಧರು! ಸರಿ, ಹೋಗಿʼ.

ನಮ್ಮನ್ನು ನಾವು ಸುಟ್ಟುಕೊಂಡು ಸಂತೋಷ ಪಡೋದು! ಅಬ್ಬಾ! ಎಂಥ ಮಾತು! ಅದೆಂಥ ಅರ್ಥ!
ನಾನು ನಮಸ್ಕರಿಸಿ ಹೊರಟು ನಿಂತಾಗ ಬಂಗಾರಪ್ಪನವರು ಇನ್ನೊಂದು ಮಾತು ಹೇಳಿದರು; ʻನೋಡಿ, ನೀವು ಒಪ್ಪದೆ ಇದ್ರೆ ನಾನು ಯಾವ ಸಾಹಿತಿಯನ್ನೂ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡೊಲ್ಲ. ಸಮಾಜಸೇವೆ, ಶಿಕ್ಷಣ ಕ್ಷೇತ್ರ – ಹೀಗೆ ಯಾವ್ದಾದ್ರೂ ಕ್ಷೇತ್ರದ ನನ್ನ ಶಿಷ್ಯ ಒಬ್ರನ್ನ ಗುರುತಿಸಿ ಎಂಎಲ್‌ಸಿ ಮಾಡ್ತೀನಿʼ.

ಶ್ರೀ ಎಸ್. ಬಂಗಾರಪ್ಪನವರು ಆಡಿದಂತೆ ಮಾಡಿದರು. ಡಿ.ಎಂ. ಸಾಲಿ ಎಂಬುವರು ವಿಧಾನಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾದರು.

* *
ಕಾಂಗ್ರೆಸ್ ಸರ್ಕಾರದವರು ವಿಧಾನಪರಿಷತ್ತಿಗೆ ನಾಮನಿರ್ದೇಶನದ ವಿಷಯ ಬಂದಾಗ ನನ್ನ ಹೆಸರನ್ನು ಪ್ರಸ್ತಾಪಿಸುವ ರೂಢಿ ಮಾಡಿಕೊಂಡಂತೆ ಕಾಣುತ್ತದೆ. ನಾನು ಗಾಂಧೀಜಿ, ಡಾ. ಅಂಬೇಡ್ಕರ್, ಕಾರ್ಲ್‌ ಮಾರ್ಕ್ಸ್‌ ಮುಂತಾದವರನ್ನು ಓದಿಕೊಂಡು ಬೆಳೆದವನು. ಎಡಪಂಥೀಯತೆಯು ಜಡಪಂಥೀಯತೆಯಾಗಬಾರದು ಎಂದು ನಂಬಿದವನು. ನನ್ನ ದೃಷ್ಟಿಯಲ್ಲಿ ಎಡಪಂಥೀಯತೆ ಎಂದರೆ ಜನಪಂಥೀಯತೆ; ಜನ ಪಂಥೀಯತೆಯೆಂದರೆ ಸಮಾನತೆ; ಸೌಹಾರ್ದತೆ. ಯಾವುದೇ ಸಿದ್ಧಾಂತವು ನಿಂತಲ್ಲೇ ನಿಲ್ಲುವ ಜಡಬಂಡೆಯಾಗದೆ ಸೃಜನಶೀಲವಾಗಿ ಬೆಳೆಯುತ್ತಿರಬೇಕು ಎನ್ನುವುದು ನನ್ನ ಆಶಯ. ಹಾಗೆಂದು ನಾವು ನಂಬಿದ ಸಿದ್ಧಾಂತದ ಮೂಲ ಆಶಯವನ್ನು ಬಿಟ್ಟು ಕೊಡಬೇಕಾಗಿಲ್ಲ. ಮೂಲ ಆಶಯಗಳನ್ನು ಸಮಕಾಲೀನ ಸಂದರ್ಭಕ್ಕೆ ಅನ್ವಯಿಸಿ, ದೂರಗಾಮಿ ಪರಿಣಾಮಗಳನ್ನು ಚಿಂತಿಸಿ ಹೆಚ್ಚು ಪ್ರಾಯೋಗಿಕಗೊಳಿಸಬೇಕು. ಇದು ಸಂಸದೀಯ ಪ್ರಜಾಪ್ರಭುತ್ವದ ಲಕ್ಷಣ. ಇಂಥ ಚರ್ಚೆಯನ್ನು ಕೆಲವೊಮ್ಮೆ ನಾನು ಎಡಪಕ್ಷಗಳ ನಾಯಕರಾದ ಸೀತಾರಾಂ ಯೆಚೂರಿ, ಬೇಬಿ, ರಾಜ ಮುಂತಾದವರ ಜೊತೆಯೂ ಮಾಡಿದ್ದೇನೆ.

ನನ್ನ ವಿಚಾರಧಾರೆ ಗೊತ್ತಿದ್ದರೂ ಕಾಂಗ್ರೆಸ್‌ನಲ್ಲಿದ್ದ ಸಮಾಜವಾದಿ ಒಲವಿನ ಅಥವಾ ಒಟ್ಟಾರೆ ಸಮಾನತೆಯ ಪರವಾದ ನಾಯಕರು ನನ್ನಲ್ಲಿ ವಿಶ್ವಾಸವಿಟ್ಟಿದ್ದರು. ಜಾಗತೀಕರಣದ ದುಷ್ಪರಿಣಾಮಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಜಂಟಿ ಜವಾಬ್ದಾರರು ಎಂದು ಟೀಕಿಸಿದಾಗಲೂ ಸಹಿಸಿಕೊಂಡಿದ್ದರು. ವಿಶೇಷವಾಗಿ ಆಸ್ಕರ್ ಫರ್ನಾಂಡಿಸ್, ಬಿ.ಕೆ. ಹರಿಪ್ರಸಾದ್, ಪರಮೇಶ್ವರ್, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್, ಸಲೀಂ ಅಹಮದ್ ಮುಂತಾದವರು ಮುಕ್ತವಾಗಿ ನನ್ನ ಅಭಿಪ್ರಾಯಗಳನ್ನು ಕೇಳುತ್ತಿದ್ದರು. ಆಸ್ಕರ್ ಫರ್ನಾಂಡಿಸ್ ಅವರು ಪ್ರೀತಿಯಿಂದ ʻಬ್ರದರ್ʼ ಎಂದೇ ಕರೆಯುತ್ತಿದ್ದರು. ಬಿ.ಕೆ. ಹರಿಪ್ರಸಾದ್ ಯಾವಾಗಲೂ ನನ್ನನ್ನು ‘Prominent Secularistʼ ಎಂದು ಇತರರಿಗೆ ಪರಿಚಯಿಸುತ್ತಿದ್ದರು. ಈ ಎಲ್ಲರೂ ʻನೀವೊಮ್ಮೆ ವಿಧಾನಪರಿಷತ್ತಿಗೆ ಬರಬೇಕುʼ ಎನ್ನುತ್ತಿದ್ದರು.

ಬಂಗಾರಪ್ಪನವರ ನಂತರ ಮತ್ತೊಂದು ಸಾರಿ ನನ್ನ ಹೆಸರು ವಿಧಾನಪರಿಷತ್ತಿನ ಸದಸ್ಯತ್ವಕ್ಕೆ ಪ್ರಸ್ತಾಪವಾಯಿತು. ಅದು ಶ್ರೀ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯವರಾಗಿದ್ದ ಕಾಲ. ಬಂಗಾರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದು ನಿರ್ಗಮಿಸಿದ ನಂತರ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾದರು. ಮೊಯಿಲಿ ಅವರು ಮುಖ್ಯಮಂತ್ರಿಯವರಾದ ಮೇಲೆ ಸ್ವಲ್ಪಕಾಲ ನಾನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ಮುಂದುವರೆದಿದ್ದೆ. ನನ್ನ ಅಧ್ಯಕ್ಷಾವಧಿ ಮುಗಿದ ನಂತರ ಒಂದು ದಿನ ʻಪ್ರಜಾವಾಣಿʼ ಪತ್ರಿಕೆಯ ಮುಖಪುಟದಲ್ಲಿ ಒಂದು ಸುದ್ದಿ ಪ್ರಕಟವಾಯಿತು. ʻವಿಧಾನಪರಿಷತ್ತಿಗೆ ಬರಗೂರು, ಜಯಮಾಲ, ಕಿರ್ಮಾನಿ ಹೆಸರುʼ ಎಂದು ಶೀರ್ಷಿಕೆ ಕೊಡಲಾಗಿತ್ತು. ಸುದ್ದಿ ಓದಿದ ಆತ್ಮೀಯರು ಫೋನ್ ಮಾಡಿ ʻಈಗ ನಿರಾಕರಿಸಲು ನಿಮಗೆ ಹಿಂದಿನಂತೆ ಕಾರಣಗಳಿಲ್ಲ; ದಯವಿಟ್ಟು ಒಪ್ಪಿಕೊಳ್ಳಿʼ ಎಂದು ಹೇಳತೊಡಗಿದರು. ಪತ್ರಿಕೆಯಲ್ಲಿ ಬಂದದ್ದು ನೇಮಕವಾದ ವಿಷಯವಲ್ಲ. ರಾಜ್ಯಪಾಲರಿಗೆ ಈ ಹೆಸರುಗಳನ್ನು ಕಳಿಸಲಾಗುತ್ತಿದೆ ಎಂಬ ವಿಷಯ. ನನಗಂತೂ ಇದು ಅನಿರೀಕ್ಷಿತ. ನನ್ನೊಂದಿಗೆ ಯಾರೂ ಪ್ರಸ್ತಾಪ ಮಾಡಿರಲಿಲ್ಲ. ಆತ್ಮೀಯರಿಗೆ – ಆಹ್ವಾನ ಬಂದಾಗ ತೀರ್ಮಾನಕ್ಕೆ ಬರೋಣ – ಎಂದು ಹೇಳಿದ್ದೆ.

ಅಂದು ಸುಮಾರು ಬೆಳಗ್ಗೆ ಹತ್ತು ಗಂಟೆ ಇರಬಹುದು. ಹಿರಿಯ ಮಿತ್ರ ಪ್ರೊ. ಚಿ. ಶ್ರೀನಿವಾಸರಾಜು ಅವರು ಒಂದು ಹೂಗುಚ್ಚ ಸಮೇತ ಮನೆಗೆ ಬಂದರು. ʻಇದೇನು ಸಾರ್?ʼ ಎಂದೆ. ʻಎಂಎಲ್‌ಸಿ ಆಗ್ತೀರಲ್ಲ ಸಾರ್. ಅಭಿನಂದನೆʼ ಎಂದರು. ʻಅಯ್ಯೋ ಇನ್ನೂ ಏನೂ ಗ್ಯಾರಂಟಿ ಇಲ್ಲ. ಮೊದಲು ಅಧಿಕೃತ ಆಗ್ಲಿ ನೋಡೋಣʼ ಎಂದೆ. ಆಗ ನನ್ನ ಪತ್ನಿ ರಾಜಲಕ್ಷ್ಮಿ, ʻಇವರು ನಿರಾಕರಿಸೋಕೆ ಕಾರಣ ಹುಡುಕ್ತಿರ್ತಾರೆ ಬಿಡಿʼ ಎಂದು ನಸುನಕ್ಕಾಗ ಶ್ರೀನಿವಾಸರಾಜು, ʻಆಗ ನೈತಿಕ ಇಕ್ಕಟ್ಟು ಇದ್ದವು. ಈಗ ಅವೇನೂ ಇಲ್ಲ. ನಾವು ನಿರಾಕರಿಸೋಕ್ ಬಿಡೊಲ್ಲʼ ಎಂದರು. ನಾನೂ ನಸುನಕ್ಕೆ. ʻಅಧಿಕೃತ ಆಹ್ವಾನ ಬಂದ ಮೇಲೆ ನಿಮ್ಮಂಥ ಹಿತೈಷಿಗಳ ಜೊತೆ ಮಾತಾಡಿ ತೀರ್ಮಾನ ತಗೋತೇನೆ. ಬಹುಮುಖ್ಯವಾಗಿ ಬಂಡಾಯ ಸಾಹಿತ್ಯ ಸಂಘಟನೆಯ ಸಂಗಾತಿಗಳ ಅಭಿಪ್ರಾಯ ಕೇಳುವೆ. ಯಾಕೆಂದರೆ ನಾನು ಬಂಡಾಯ ಸಾಹಿತ್ಯ ಸಂಘಟನೆಯ ಭಾವ – ಬುದ್ಧಿಯ ಬದ್ಧ ಬಂಧು. ಅಲ್ಲಿನ ಅಭಿಪ್ರಾಯ ನನಗೆ ಮುಖ್ಯʼ ಎಂದೆ. ಅಷ್ಟರಮಟ್ಟಿಗೆ ನಾನು ಮನಸ್ಸು ಮಾಡಿದ್ದೆ! ಸುಳ್ಳು ಹೇಳಲಾರೆ.

ಆದರೆ ಅಧಿಕೃತ ಆಹ್ವಾನ ಬರಲೇ ಇಲ್ಲ! ವೀರಪ್ಪ ಮೊಯಿಲಿ ಅವರ ಆಡಳಿತಾವಧಿ ಮುಗಿಯುತ್ತಾ ಬಂದಿತ್ತು. ಆದರೂ ವಿಧಾನಪರಿಷತ್ತಿಗೆ ಯಾರ ನಾಮನಿರ್ದೇಶನವೂ ಆಗಲಿಲ್ಲ.
ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿಯವರಾಗಿದ್ದಾಗಲೂ ನನ್ನ ಹೆಸರು ಪ್ರಸ್ತಾಪವಾಗುತ್ತಲೇ ಇತ್ತು. ಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ನನ್ನ ನಾಮನಿರ್ದೇಶನ ಖಚಿತ ಎಂಬ ಸುದ್ದಿಯೂ ಬರುತ್ತಿತ್ತು. ಆದರೆ ನೇಮಕಾತಿಯಾಗಲಿಲ್ಲ! ಬೇರೆಯವರು ವಿಧಾನಪರಿಷತ್ತಿನ ಸದಸ್ಯರಾದರು.

ಆಗ ನನ್ನ ಪತ್ನಿ ರಾಜಲಕ್ಷ್ಮಿ ಹೇಳಿದ ಮಾತು; ʻವಿಧಾನಪರಿಷತ್ ನಲ್ಲಿ ಸ್ಥಾನ ಖಾಲಿ ಆದಾಗ ಮೊದಲು ಪ್ರಸ್ತಾಪ ಆಗೋ ಹೆಸರೂ ನಿಮ್ಮದೇ; ಮೊದಲು ಬಿಟ್ಟು ಹೋಗೋ ಹೆಸರೂ ನಿಮ್ಮದೇ!ʼ

ಒಂದು ದಿನ ರಾತ್ರಿ ೮.೩೦ರ ವೇಳೆಗೆ ದೆಹಲಿಯಿಂದ ಪತ್ರಕರ್ತ ಶ್ರೀ ಉಮಾಪತಿಯವರಿಂದ ಫೋನ್ ಬಂತು. ʻಕಂಗ್ರಾಜ್ಯುಲೇಷನ್ ಸಾರ್ʼ ಎಂದರು. ʻಯಾಕ್ ಸಾರ್?ʼ ಎಂದು ಕೇಳಿದೆ. ʻನೀವು ಎಂಎಲ್‌ಸಿ ಆಗ್ತಿದ್ದೀರಿ. ನಿಮ್ಮನ್ನ ನಾಮಿನೇಟ್ ಮಾಡೋದು ಗ್ಯಾರಂಟಿ ಆಗಿದೆ. ಮೂರು ಸ್ಥಾನ ಖಾಲಿ ಇವೆ. ನಿಮ್ಮ ಹೆಸರು ಮಾತ್ರ ಗ್ಯಾರಂಟಿ ಆಗಿದೆʼ ಎಂದರು. ನಾನು ನಗುತ್ತಾ ನನ್ನ ಪತ್ನಿ ಹೇಳಿದ ಮಾತನ್ನು ಅವರಿಗೆ ಹೇಳಿದೆ. ಅವರು ʻಇಲ್ಲ ಸಾರ್ ನನಗೆ ಅಧಿಕೃತವಾಗಿ ಗೊತ್ತಾಗಿದೆʼ ಎಂದರು. ಉಮಾಪತಿಯವರು ಸುಮ್ಮನೆ ವದಂತಿಗಳನ್ನು ಆಧರಿಸಿ ಮಾತಾಡುವವರಲ್ಲ. ಅವರ ಬರಹಗಳ ಆಳದಲ್ಲಿರುವ ಸಾಮಾಜಿಕ ತುಡಿತ ಸಾಮಾನ್ಯವಾದದ್ದಲ್ಲ. ಪ್ರತಿ ಬರಹದಲ್ಲೂ ಸಾಧಾರ ನಿರೂಪಣೆಯ ಸಂವೇದನೆ ಮತ್ತು ಸಂವಹನೆಯನ್ನು ನಾನು ಕಂಡಿದ್ದೇನೆ; ಮೆಚ್ಚಿದ್ದೇನೆ. ಅವರು ಈ ಮಾಹಿತಿ ನೀಡಿದಾಗ ಅದು ಕೇವಲ ವದಂತಿ ಎಂದು ಭಾವಿಸಲು ಸಾಧ್ಯವಿರಲಿಲ್ಲ. ಆದರೂ ಮತ್ತೆ ಕೆದಕಿ ಕೇಳಿದೆ; ʻನಿಮ್ಮ ಮಾಹಿತಿಯ ಮೂಲ ಯಾವುದು?ʼ. ಅವರು ತಕ್ಷಣವೇ ʻಡಾ. ಜಿ. ಪರಮೇಶ್ವರ್ʼ ಎಂದರು. ಮುಂದುವರೆದು ʻಪರಮೇಶ್ವರ್ ಅವರು ಬರಗೂರರ ಹೆಸರು ಮಾತ್ರ ಈಗ ಫೈನಲ್ ಆಗಿದೆ ಅಂತ ಹೇಳಿದ್ರು. ಹೈಕಮಾಂಡ್ ಓ.ಕೆ. ಮಾಡಿದೆಯಂತೆ. ಸಿದ್ದರಾಮಯ್ಯನವರ ಒಪ್ಪಿಗೇನೂ ಇದೆಯಂತೆʼ ಎಂದು ವಿವರಿಸಿದರು. ಡಾ. ಜಿ. ಪರಮೇಶ್ವರ್ ಅವರು ಆಗ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರೇ ಹೇಳಿದ ಮೇಲೆ ಉಮಾಪತಿಯವರಿಗೆ ಅನುಮಾನ ಇರಲಿಲ್ಲ. ಡಾ. ಪರಮೇಶ್ವರ್ ಅವರು ರಾಜಕೀಯಕ್ಕೆ ಬರುವುದಕ್ಕೆ ಮುಂಚೆಯೇ ನನ್ನ ಗೆಳೆಯರು, ಅವರು ಹೇಳಿದ್ದು ನಿಜವೇ ಆಗಿರಬಹುದು ಎಂದುಕೊಂಡ ನಾನು ಉಮಾಪತಿಯವರಿಗೆ, ʻನೀವು ಸಿದ್ಧರಾಮಯ್ಯನವರಿಂದಲೂ ಮಾಹಿತಿ ಪಡೆದ್ರಾ?ʼ ಎಂದು ಕೇಳಿದೆ. ಅವರು, ʻನನಗೆ ಅವರು ಸಿಕ್ಕಿಲ್ಲ. ನನ್ನ ಸಹೋದ್ಯೋಗಿ ಸಿದ್ಧಯ್ಯ ಹಿರೇಮಠ, ಅವ್ರನ್ನ ಭೇಟಿ ಮಾಡಿದ್ರು. ನಿಮ್ಮ ವಿಷಯ ಕೇಳ್ದಾಗ – ಅವೆಲ್ಲ ಹೇಳೋಕಾಗುತ್ತೇನ್ರಿ ಎಂದರಂತೆ. ಆದ್ರೆ ಅವ್ರ ಜೊತೆ ಇದ್ದವರು ಬರಗೂರ್ ಹೆಸರು ಗ್ಯಾರಂಟಿ ಅಂದ್ರಂತೆʼ ಎಂದು ವಿವರಿಸಿದರು.

ಮಾರನೇ ದಿನ ʻಪ್ರಜಾವಾಣಿʼಯಲ್ಲಿ ನಾನುನಾಮನಿರ್ದೇಶಿತ ಎಂಎಲ್‌ಸಿ ಆಗೋದು ಬಹುಪಾಲು ಖಚಿತವೆಂಬಂತೆ ಸುದ್ದಿ ಪ್ರಕಟವಾಯಿತು. ಡಾ. ಜಿ. ಪರಮೇಶ್ವರ್ ಬೆಂಗಳೂರಿಗೆ ವಾಪಸ್ಸಾಗಿದ್ದಾರೆಂದೂ, ಸಿದ್ದರಾಮಯ್ಯನವರು ದೆಹಲಿಯಲ್ಲೇ ಇದ್ದಾರೆಂದು ಒಮ್ಮೆ ಸಂಪರ್ಕಿಸುವುದು ಒಳಿತೆಂದೂ ಒಂದಿಬ್ಬರು ಸ್ನೇಹಿತರು ನನಗೆ ಹೇಳಿದರು. ನಾನು ಯಾರನ್ನೂ ಸಂಪರ್ಕಿಸುವುದಿಲ್ಲ ಎಂದೆ.
ಕೆಲವು ದಿನಗಳ ನಂತರ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡವರ ಹೆಸರು ಪ್ರಕಟವಾದಾಗ ಅಲ್ಲಿ ನನ್ನ ಹೆಸರು ಇರಲಿಲ್ಲ! ನನ್ನ ಪತ್ನಿಯ ಮಾತು ಮತ್ತೆ ನಿಜವಾಗಿತ್ತು. ಹಾಗೆಂದು ಉಮಾಪತಿಯವರು ಖಂಡಿತ ಇಲ್ಲದ ವಿಷಯ ಹೇಳಿರಲಿಲ್ಲ. ಅವರು ಅಂಥವರೂ ಅಲ್ಲ. ಕೆಪಿಸಿಸಿ ಅಧ್ಯಕ್ಷರೇ ಹೇಳಿದ ಮೇಲೆ ಅವರು ನಂಬಲೇ ಬೇಕಿತ್ತಲ್ಲ? ಸುದ್ದಿ ಪ್ರಕಟವಾದ ಮೇಲೆ ಯಾರ ʻಕೈʼವಾಡ ನಡೆಯಿತೋ ಗೊತ್ತಿಲ್ಲ! ಅದಕ್ಕಾಗಿ ನನಗೆ ಕಿಂಚಿತ್ತು ಕೊರಗೆಂಬುದಿಲ್ಲ. ಆದರೆ ನನ್ನ ಹೆಸರು ಮತ್ತೆ ಮತ್ತೆ ಪ್ರಸ್ತಾಪವಾದ್ದರಿಂದ ಆಗಿರುವ ಮುಜುಗರ ಅಷ್ಟಿಷ್ಟಲ್ಲ! ಇವೆಲ್ಲ ಸಾರ್ವಜನಿಕ ಬದುಕಿನ ಭಾಗ. ಕೈವಾಡ, ಮುಖವಾಡಗಳ ನಡುವೆಯೇ ನಮ್ಮ ನಿಜದ ನಡಿಗೆ ಸಾಗಲೇಬೇಕು.

* *
ಶ್ರೀ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನನ್ನನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನನ್ನಾಗಿ ನೇಮಿಸಿದರು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಬೇಕೆಂಬ ಅಭಿಲಾಷೆ ನನ್ನ ಆತ್ಮೀಯರಲ್ಲಿತ್ತು. ಅದು ಈಡೇರಿತ್ತು. ಕ್ಯಾಬಿನೆಟ್ ಸಚಿವರ ಸ್ಥಾನಮಾನವಿದ್ದ ಈ ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕಾರ ಮಾಡಿದ ಕೂಡಲೇ ಪ್ರಯಾಣಭತ್ಯೆ ಹೊರತಾಗಿ ಇನ್ನಾವ ಆರ್ಥಿಕ ಅನುಕೂಲಗಳನ್ನೂ ಪಡೆಯುವುದಿಲ್ಲವೆಂದು ಬರೆದುಕೊಟ್ಟೆ. ರಚನಾತ್ಮಕವಾಗಿ – ರೋಚಕವಾಗಿ ಅಲ್ಲ – ಕೆಲಸ ಮಾಡಲು ಸಂಕಲ್ಪ ಮಾಡಿದೆ. ಎಸ್.ಎಂ. ಕೃಷ್ಣ ಅವರಿಗೆ ನನ್ನ ಕಾರ್ಯನಿರ್ವಹಣೆ ಇಷ್ಟವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತಿದ್ದರು. ಅಕಾಡೆಮಿಗಳ ನೇಮಕಾತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವಿಷಯದಲ್ಲಿ ನನ್ನನ್ನು ಸಂಪೂರ್ಣ ತೊಡಗಿಸಿದ್ದರು. ಅಂದಿನ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರಾಗಿದ್ದ ಶ್ರೀಮತಿ ರಾಣಿ ಸತೀಶ್ ಅವರು ಪೂರಕವಾಗಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಕಚೇರಿಗಳ ಅಧಿಕಾರಿಗಳನ್ನು ಪ್ರಾಧಿಕಾರದ ಕೆಲಸಗಳಿಗೆ ತೊಡಗಿಸಿಕೊಳ್ಳಲು ಆಗ ಇಲಾಖೆಯ ನಿರ್ದೇಶಕರಾಗಿದ್ದ ಶ್ರೀ ಕೆ.ಸಿ. ರಾಮಮೂರ್ತಿಯವರ ಸಂಪೂರ್ಣ ಸಹಕಾರವಿತ್ತು. ಜಂಟಿ ನಿರ್ದೇಶಕರಾಗಿದ್ದ ಲೇಖಕ ಶ್ರೀ ಕಾ.ತ. ಚಿಕ್ಕಣ್ಣನವರು ಸದಾ ಒತ್ತಾಸೆಯಾಗಿದ್ದರು.

ಶ್ರೀ ಎಸ್.ಎಂ. ಕೃಷ್ಣ ಅವರನ್ನು ನಾನು ಮೊದಲು ನೋಡಿದ್ದು ತುಮಕೂರಿನ ಸರ್ಕಾರಿ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿಯಾಗಿದ್ದಾಗ. ನನ್ನ ಸಹಪಾಠಿ ಚಿಕ್ಕಣ್ಣನಿಂದ ಪ್ರಜಾ ಸೋಷಿಲಿಸ್ಟ್ ಪಾರ್ಟಿಯ ಶ್ರೀ ಕೆ. ಲಕ್ಕಪ್ಪನವರ ಪರಿಚಯವಾಗಿತ್ತು. ಇವರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದಾಗ ನಾನು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವಾಗಿ ಲಕ್ಕಪ್ಪನವರ ಪರವಾಗಿ ಹದಿನೈದು ದಿನಗಳ ಕಾಲ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದೆ; ಭಾಷಣ ಮಾಡಿದ್ದೆ. ಆಗ ತುಮಕೂರು ಸಮೀಪದ ಹೆಬ್ಬೂರಿನಲ್ಲಿ ಒಂದು ಸಭೆ. ಪ್ರಜಾ ಸೋಷಿಲಿಸ್ಟ್ ಪಾರ್ಟಿಯ (ಪಿಎಸ್‌ಪಿ) ಒಬ್ಬ ನಾಯಕರಾಗಿದ್ದ ಶ್ರೀ ಎಸ್.ಎಂ. ಕೃಷ್ಣ ಅವರು ಬಂದಿದ್ದರು. ಅವರ ಜೊತೆ ನನ್ನ ಭಾಷಣವೂ ಇತ್ತು. ಅಂದೇ ನಾನು ಅವರನ್ನು ಮೊದಲು ನೋಡಿದ್ದು. ಕೆಲ ಕಾಲಾನಂತರ ಕಾಂಗ್ರೆಸ್ ಇಬ್ಭಾಗವಾಗಿ ಇಂದಿರಾ ಗಾಂಧಿ ಕಾಂಗ್ರೆಸ್ ಅನ್ನು ಕಾಂಗ್ರೆಸ್ (ಆರ್) ಎಂದೂ (ಆರ್ – ಎಂದರೆ ರೂಲಿಂಗ್ – ಆಡಳಿತ) ಶ್ರೀ ಎಸ್. ನಿಜಲಿಂಗಪ್ಪನವರ ನೇತೃತ್ವದ ಕಾಂಗ್ರೆಸ್ ಅನ್ನು ಕಾಂಗ್ರೆಸ್ (ಓ) ಎಂದೂ (ಓ – ಎಂದರೆ – ಆರ್ಗನೈಸೇಷನ್ – ಸಂಸ್ಥೆ) ಕರೆಯುವುದು ರೂಢಿಯಾಯಿತು. ಕಾಂಗ್ರೆಸ್ (ಆರ್)ಗೆ ರಾಜ್ಯದಲ್ಲಿ ದೇವರಾಜ ಅರಸು ಅವರ ನಾಯಕತ್ವ. ಇಂದಿರಾ ಗಾಂಧಿಯವರು ಜಾರಿ ಮಾಡಿದ್ದ ಬ್ಯಾಂಕ್ ರಾಷ್ಟ್ರೀಕರಣವೇ ಮುಂತಾದ ಕ್ರಮಗಳಿಂದ ಪ್ರಜಾ ಸೋಷಿಲಿಸ್ಟ್ ಪಾರ್ಟಿಯ ಅನೇಕರು ಪ್ರಭಾವಿತರಾಗಿದ್ದರು. ದೇವರಾಜ ಅರಸು ಅವರು ಪಿಎಸ್‌ಪಿಯವರನ್ನು ಸ್ವಾಗತಿಸಲು ಸಿದ್ಧರಾಗಿದ್ದರು. ಈ ಎಲ್ಲದರ ಫಲವಾಗಿ ಕೆ.ಎಚ್. ರಂಗನಾಥ್, ಎಸ್.ಎಂ. ಕೃಷ್ಣ, ಕೆ. ಲಕ್ಕಪ್ಪ, ಹಿಂದೆ ವಿರೋಧಪಕ್ಷದ ನಾಯಕರಾಗಿದ್ದ ಎಸ್. ಶಿವಪ್ಪ ಮುಂತಾದವರು ಕಾಂಗ್ರೆಸ್ (ಆರ್) ಪಕ್ಷಕ್ಕೆ ಸೇರಿದರು. ಅಂದು ಕಾಂಗ್ರೆಸ್ (ಆರ್) ಆಗಿದ್ದದ್ದು ಆಮೇಲೆ ಕಾಂಗ್ರೆಸ್ (ಐ) ಆಯಿತು. (ಐ – ಎಂದರೆ ಇಂದಿರಾ ಗಾಂಧಿ). ಕಾಂಗ್ರೆಸ್ (ಓ) ಪಕ್ಷವು ಜನತಾಪಕ್ಷದ ಭಾಗವಾಯಿತು.

ಮುಂದೆ ನಾನು ಎಸ್.ಎಂ. ಕೃಷ್ಣ ಅವರನ್ನು ವಿಧಾನಸೌಧದ ಕಾರಿಡಾರ್‌ನಲ್ಲಿ ನೋಡಿದ್ದೆ. ಅವರು ಆಗ ದೇವರಾಜ ಅರಸು ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿದ್ದರು. ಒಂದು ಫೈಲ್ ಹಿಡಿದುಕೊಂಡು ಎದುರು ಸಿಕ್ಕವರ ನಮಸ್ಕಾರಗಳಿಗೆ ಪ್ರತಿ ನಮಸ್ಕಾರ ಮಾಡುತ್ತಾ ಹಸನ್ಮುಖರಾಗಿ ಬರುತ್ತಿದ್ದರು. ನನ್ನ ಜೊತೆಗಿದ್ದ ತುಮಕೂರಿನ ಹಿರಿಯರೊಬ್ಬರು ಕೃಷ್ಣ ಅವರ ಉಡುಪಿನ ಬಗ್ಗೆ ಅಸಮಾಧಾನದಿಂದ ಮಾತಾಡಿದರು. ಕೃಷ್ಣ ಅವರು ಮಿರಿಮಿರಿ ಮಿಂಚುವ ಸ್ಲ್ಯಾಗ್, ಪ್ಯಾಂಟು, ಕಾಲಿಗೆ ಕಾನ್‌ಪುರ ಚಪ್ಪಲಿ ತೊಟ್ಟಿದ್ದರು. ಡೇ ಅಂಡ್ ನೈಟ್ ಕೂಲಿಂಗ್ ಗ್ಲಾಸ್ ಹಾಕಿದ್ದರು. ತಲೆ ಮೇಲೆ ಕಾಶ್ಮೀರಿ ಟೋಪಿಯಿತ್ತು. ʻಒಬ್ಬ ಮಿನಿಸ್ಟರಾಗಿ ಇಂಥ ಡ್ರೆಸ್ ಹಾಕೋದಾ?ʼ ಎಂದು ಹಿರಿಯರು ಟೀಕೆ ಮಾಡಿದಾಗ, ʻಏನ್ ತಪ್ಪು ಸಾರ್? ಅವರಿಗೆ ಚನ್ನಾಗೆ ಒಪ್ಪೋ ಡ್ರೆಸ್ ಹಾಕಿದ್ದಾರೆʼ ಎಂದೆ. ಹಿರಿಯರು ಸುಮ್ಮನಿರಲಿಲ್ಲ. ʻಅವ್ರೇನ್ ಕಾಲೇಜ್ ಹುಡುಗಾನಾ?ʼ ಎಂದು ಪ್ರಶ್ನಿಸಿದರು. ಮತ್ತೆ ವಾದ ಬೇಡವೆಂದು ಸುಮ್ಮನಾದೆ. ನಾನಾಗ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದೆ. ಈ ಘಟನೆ ನಡೆದ ಒಂದೇ ವಾರದಲ್ಲಿ ತುಮಕೂರಿನ ಶ್ರೀ ಸಿ.ಎನ್. ಭಾಸ್ಕರಪ್ಪನವರಿಂದ ಒಂದು ಪತ್ರ ಬಂತು. ಅವರು ಸಂಪಾದಕರಾಗಿದ್ದ ʻತುಮಕೂರು ಟೈಮ್ಸ್ʼ ಪತ್ರಿಕೆಯ ವಿಶೇಷಾಂಕ ತರುವುದಾಗಿಯೂ, ಅದಕ್ಕೆ ಒಂದು ಲೇಖನ ಮತ್ತು ಫೋಟೋ ಕಳಿಸಬೇಕೆಂದೂ ಕೇಳಿದ್ದರು. ಲೇಖನ ಬರೆದೆ. ಫೋಟೋ ಬೇಕಿತ್ತಲ್ಲ? ಹೊಸ ಫೋಟೋ ತೆಗೆಸೋಣ ಅಂತ ತೀರ್ಮಾನಿಸಿದೆ. ವಿಧಾನಸೌಧದ ಕಾರಿಡಾರ್‌ನಲ್ಲಿ ಎಸ್.ಎಂ. ಕೃಷ್ಣ ಅವರನ್ನು ಕಂಡಾಗಿನ ಮಾತುಕತೆ ನೆನಪಾಯಿತು. ಕಾನ್‌ಪುರ ಚಪ್ಪಲಿ ಮತ್ತು ಡೇ ಅಂಡ್ ನೈಟ್ ಕೂಲಿಂಗ್ ಗ್ಲಾಸ್, ಮಿರಿಮಿರಿ ಮಿಂಚುವ ಬಣ್ಣದ ಜುಬ್ಬ (ಸ್ಲ್ಯಾಗ್ ಅಲ್ಲ) ಖರೀದಿಸಿ, ತೊಟ್ಟು ಫೋಟೋ ತೆಗೆಸಿಕೊಂಡು ಕಳಿಸಿದೆ. ಇದು ಅಂದಿನ ದಿನದ ಮಾತುಕತೆಗೆ ಮೌನ ಪ್ರತಿಕ್ರಿಯೆಯ ಫೋಟೋ! ʻತುಮಕೂರು ಟೈಮ್ಸ್‌ʼನಲ್ಲಿ ಕೂಲಿಂಗ್ ಗ್ಲಾಸ್ ಹಾಕಿದ್ದ ನನ್ನ ಫೋಟೋ ಪ್ರಕಟವಾಯಿತು. ಅನೇಕರ ಹುಬ್ಬೇರಿತು. ನಾನು ಕಾಲೇಜ್ ಸಮಯ ಹೊರತುಪಡಿಸಿ ಅನೇಕ ಕಾಲ ಕಾನ್‌ಪುರ ಚಪ್ಪಲಿ ಮತ್ತು ಆ ಕೂಲಿಂಗ್ ಗ್ಲಾಸ್ ಧರಿಸಿ ಓಡಾಡುತ್ತಿದ್ದೆ!

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ನಾನು ರಾಜೀನಾಮೆ ಕೊಡುವ ಪ್ರಸಂಗ ಜರುಗಿತು. ಆಗ ಅವರು ನನ್ನೊಂದಿಗೆ ನಡೆದುಕೊಂಡ ರೀತಿಯನ್ನು ವಿವರಿಸುವುದು ಈ ಟಿಪ್ಪಣಿಯ ಮುಖ್ಯ ಉದ್ದೇಶ. ಪೂರಕವಾಗಿ ಒಂದಿಷ್ಟು ಪೀಠಿಕೆ ಹಾಕಿದೆ; ಅಷ್ಟೆ. ರಾಜೀನಾಮೆ ಪ್ರಸಂಗ ನಡೆದದ್ದು ಹೀಗೆ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಕನ್ನಡಕ್ಕೆ ಮತ್ತಷ್ಟು ಕಾನೂನು ಬಲ ತಂದುಕೊಡುವ ಮತ್ತು ಕನ್ನಡಪರ ಪರಿಸರವನ್ನು ವಿಸ್ತರಿಸುವ ರಚನಾತ್ಮಕ ಕೆಲಸಗಳನ್ನು ಮಾಡುವ ಇಚ್ಚೆ ನನ್ನದಾಗಿತ್ತು. ಸರ್ಕಾರದ ಆಡಳಿತದಲ್ಲಿ ಕನ್ನಡ ಬಳಸುವುದು ಕಡ್ಡಾಯ ಎಂಬ ಆದೇಶಗಳಿದ್ದರೂ ಕನ್ನಡವನ್ನು ಬಳಸದಿದ್ದರೆ ಶಾಸನಾತ್ಮಕ ಶಿಸ್ತುಕ್ರಮ ಕೈಗೊಳ್ಳುವ ಕಾನೂನಿನ ಬಲವೇ ಇರಲಿಲ್ಲ! ಇಂಥ ಕೆಲವು ವಿಪರ್ಯಾಸಗಳು ಇದ್ದವು. ಕಾನೂನಾತ್ಮಕ, ಅಧಿಕೃತ
ಹಾಗೂ ಸ್ಪಷ್ಟ ಶಿಸ್ತುಕ್ರಮ ನಿಯಮವಿಲ್ಲದೆ ಬರೀ ಬೆದರಿಸುವುದು ಎಷ್ಟು ಸರಿ ಎಂಬಂಥ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ಹೋಗಲಿ, ಕನ್ನಡ ಕಂಪ್ಯೂಟರೀಕರಣವನ್ನೂ ಒಳಗೊಂಡಂತೆ ಕನ್ನಡಪರ ಪರಿಸರ ನಿರ್ಮಾಣಕ್ಕೆ ಪೂರಕವಾದ ಕ್ರಿಯಾ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಅಗತ್ಯ ಆರ್ಥಿಕ ಅನುದಾನ ಇರಲಿಲ್ಲ. ಬಜೆಟ್‌ನಲ್ಲಿ ಇದ್ದದ್ದು ವಾರ್ಷಿಕ ಐದು ಲಕ್ಷ ರೂಪಾಯಿ ಮಾತ್ರ. ರಚನಾತ್ಮಕ ಮುನ್ನೋಟದ ಕೆಲಸ ಮಾಡದೆ ನಾನು ಅಧ್ಯಕ್ಷನಾಗಿ ಮುಂದುವರಿಯಬಾರದೆಂದು ತೀರ್ಮಾನಿಸಿದೆ. ಎಲ್ಲವನ್ನೂ ವಿವರಿಸಿ ಮುಖ್ಯಮಂತ್ರಿಯವರಿಗೆ ಪತ್ರ ಸಿದ್ಧ ಮಾಡಿದೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಪ್ರೀತಿಯಿಂದ ಕರೆಸಿಕೊಂಡ ನೀವು ಅದೇ ಪ್ರೀತಿಯಿಂದ ರಾಜೀನಾಮೆಯನ್ನು ಅಂಗೀಕರಿಸಿ ಎಂದು ಬರೆದಿದ್ದೆ. ಲಕೋಟೆಗೆ ಹಾಕಿದೆ.

ಒಂದು ದಿನ ಸಂಜೆ, ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿಯವರಿದ್ದ ಒಂದು ಸಮಾರಂಭವಿತ್ತು. ಅಲ್ಲಿಗೆ ಹೋದೆ. ಮುಖ್ಯಮಂತ್ರಿಯವರು ವೇದಿಕೆಯ ಮೇಲಿದ್ದರು. ಲಕೋಟೆಯನ್ನು ಮುಖ್ಯಮಂತ್ರಿಯವರ ವಿಶೇಷಾಧಿಕಾರಿ ಶ್ರೀ ಪ್ರಕಾಶ್ ಅವರ ಕೈಗೆ ಕೊಟ್ಟು ʻಇದನ್ನು ವಾಪಸ್ ಹೋಗುವಾಗ ಮುಖ್ಯಮಂತ್ರಿಯವರಿಗೆ ಕೊಡಿʼ ಎಂದು ಹೇಳಿ ಬಂದೆ.

ರಾತ್ರಿ ಒಂಬತ್ತು ಗಂಟೆಗೆ ಪ್ರಕಾಶ್ ಅವರಿಗೆ ಕರೆ ಮಾಡಿ ʻಪತ್ರ ತಲುಪಿಸಿದಿರಾ?ʼ ಎಂದು ಕೇಳಿದೆ. ಅವರು ʻಕೊಟ್ಟೆ ಸಾರ್. ಕಾರ್‌ನಲ್ಲೇ ಪೂರ್ತಿ ಓದಿ ಜೇಬಿನಲ್ಲಿ ಇಟ್ಕೊಂಡರು ಸಾರ್. ಸಾಮಾನ್ಯವಾಗಿ ಓದಿ ನಮ್ಮ ಕೈಗೆ ವಾಪಸ್ ಕೊಡ್ತಾರೆ. ನಾವು ಫೈಲ್‌ಗೆ ಹಾಕ್ತೀವಿ. ನಿಮ್ಮ ಪತ್ರಾನ ವಾಪಸ್ ಕೊಡಲಿಲ್ಲʼ ಎಂದರು.

ರಾತ್ರಿ ಹತ್ತೂವರೆಗೆ ಶ್ರೀ ಎಸ್.ಎಂ. ಕೃಷ್ಣ ಅವರಿಂದ ಫೋನ್ ಬಂತು. ʻಊಟ ಆಯ್ತಾ ಬರಗೂರ್?ʼ ಎಂದು ಕೇಳಿದರು. ʻಆಯ್ತು ಸಾರ್. ತಮ್ಮ ಊಟ ಆಯ್ತಾ ಸಾರ್?ʼ ಎಂದೆ. ʻನಾವ್ ರಾಜಕಾರಣಿಗಳು ಇಷ್ಟು ಬೇಗ ಊಟ ಮಾಡೋಕ್ ಎಲ್ ಆಗುತ್ತೆʼ ಎಂದವರು ಕೂಡಲೇ ʻನಾಳೆ ಬೆಳಗ್ಗೆ ಬಿಡುವಾಗಿದ್ದೀರಾ?ʼ ಎಂದು ಕೇಳಿದರು. ʻಹೇಳಿ ಸಾರ್, ಏನ್ ಕೆಲ್ಸ?ʼ ಎಂದೆ. ನಾಳೆ ನಮ್ಮ ಮನೇಗೆ ತಿಂಡೀಗ್ ಬರ್ತೀರಾ?ʼ ಎಂದರು. ʻಖಂಡಿತ ಬರ್ತೀನಿ. ಎಷ್ಟು ಗಂಟೆಗೆ ಸಾರ್?ʼ – ಎಂದು ಕೇಳಿದೆ. ʻಎಂಟೂವರೆಗೆ ಓಕೇನಾ?ʼ ಎಂದು ಕೃಷ್ಣ ಕೇಳಿದರು. ʻಬರ್ತೀನಿ ಸಾರ್ʼ ಎಂದೆ. ಅವರು ಬೇರೇನೂ ಹೇಳಲಿಲ್ಲ.

ಬೆಳಗ್ಗೆ ಎಂಟೂವರೆಗೆ ಹೋದೆ. ಹೊರಗಡೆಯೇ ನಿಂತಿದ್ದ ಮುಖ್ಯಮಂತ್ರಿಯವರ ಸಿಬ್ಬಂದಿ ʻಸಾಹೇಬ್ರು ಕಾಯ್ತಾ ಇದ್ದಾರೆ ಸಾರ್, ಬನ್ನಿʼ ಎಂದು ಕರೆದುಕೊಂಡು ಹೋದರು. ಎಸ್.ಎಂ. ಕೃಷ್ಣ ಅವರು ʻಬನ್ನಿ ಕೂತ್ಕೊಳ್ಳಿʼ ಎಂದು ಸ್ವಾಗತಿಸಿದರು. ʻಮೊದಲು ತಿಂಡಿ ತಿನ್ನಿ ಆಮೇಲ್ ಮಾತಾಡೋಣʼ ಎಂದರು. ತಿಂಡಿ ತಿನ್ನುವಾಗ ಲೋಕಾಭಿರಾಮದ ಮಾತು ಅಷ್ಟೆ. ಆಮೇಲೆ ನನ್ನ ಪತ್ರದ ವಿಷಯ ಪ್ರಸ್ತಾಪಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಲು ಆಸೆಪಟ್ಟವರ ಪಟ್ಟಿ ಕೊಟ್ಟರು. ಶಿಫಾರಸುಗಳ ವಿವರ ಹೇಳಿದರು. ʻಡಾ. ಎಚ್. ನರಸಿಂಹಯ್ಯನವರು, ಆಮೇಲೆ ನನ್ನ ರಿಲೇಟಿವ್ ಟಿ. ಶಿವಣ್ಣ ನಿಮ್ಮ ಬಗ್ಗೆ ಹೇಳಿದ್ರು. ಬೇರೆ ಎಲ್ಲಾ ಒತ್ತಡ ಒತ್ತಟ್ಟಿಗಿಟ್ಟು ನಿಮ್ಮನ್ನು ನೇಮಕ ಮಾಡಿದ್ರೆ, ನೀವ್ ಬಿಟ್ ಹೋಗ್ತೀನಿ ಅಂತೀರಲ್ಲಾ? ಈ ಕಾಲ್ದಲ್ಲಿ ಹೀಗೆ ಬಿಟ್ಟು ಹೋಗೋದು ತುಂಬಾ ಅಪರೂಪ. ನೋಡಿ ಈಗ ನನ್ನ ಮನಸ್ಥಿತೀನೇ ಹೇಳ್ತೀನಿ ಕೇಳಿ. ನಾನು ಸಮಾಜವಾದಿ ಹಿನ್ನೆಲೇಲಿ ಬಂದವನು. ಈಗ ಸಮಾಜವಾದಕ್ಕೆ ವಿರುದ್ಧವಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದೀನಿ. ರಾಜಕಾರಣಿಯಾಗಿ ನಮಗೂ ಆಸೆ ಇರುತ್ತಲ್ಲ, ಮುಖ್ಯಮಂತ್ರಿ ಆದೆ. ಆದ್ರೆ ನಾನು ಸಂಭ್ರಮದಲಿಲ್ಲ. ಒಳಗೇ ದುಃಖದಿಂದ ಆಡಳಿತ ನಡೆಸ್ತಿದ್ದೇನೆʼ ಎಂದು ತುಂಬಾ ಪ್ರಾಮಾಣಿಕವಾಗಿ ಮನಬಿಚ್ಚಿ ಮಾತಾಡಿದರು. ನಾನು ಪ್ರಸ್ತಾಪಿಸಿದ ವಿಷಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ʻನಿಮ್ಮ ರಚನಾತ್ಮಕ ಕೆಲಸಗಳಿಗೆ ನನ್ನ ಪೂರ್ಣ ಬೆಂಬಲ ಇರುತ್ತೆ. ನೀವು ಮುಂದುವರೀಬೇಕುʼ ಎಂದು ಪ್ರೀತಿಪೂರ್ವಕ ಒತ್ತಾಯ ಮಾಡಿದರು. ನಾನು ಅವರ ಮಾತಿಗೆ ಒಪ್ಪಿದೆ. ಅವರು ಮಾತಾಡಿದಂತೆ ನಡೆದುಕೊಂಡರು. ನನಗೆ ಅವರ ಬಗ್ಗೆ ಇದ್ದ ಗೌರವ ಮತ್ತಷ್ಟು ಹೆಚ್ಚಾಯಿತು. ಅಂದು ಅವರು ಮುಖ್ಯಮಂತ್ರಿಯಾಗಿ ಮಾತಾಡಿರಲಿಲ್ಲ ಹಿತೈಷಿಯ ಮನಸ್ಸಿನಿಂದ ಮಾತಾಡಿದ್ದರು.

* *

‍ಲೇಖಕರು avadhi

July 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: