ಶ್ರೀನಿವಾಸ ಪ್ರಭು ಅಂಕಣ: ‘ನನ್ನ ಗೆಳತಿಯರೇ ಹಾಗೆ! ಸಮಯ ಸಂಜೀವಿನಿಯರು!’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 119

ಹೊಸ ಶತಮಾನದ ಆರಂಭದ ವರ್ಷಗಳಲ್ಲೇ ಹಲವಾರು ಹೊಸ ಟಿ ವಿ ವಾಹಿನಿಗಳೂ ಆರಂಭವಾದವು. ಅವುಗಳಲ್ಲಿ ಕೆಲವು ವಾಹಿನಿಗಳು ತೀವ್ರ ಸ್ಪರ್ಧೆಯನ್ನು ಎದುರಿಸಲಾರದೇ ಕಣದಿಂದಲೇ ನಿರ್ಗಮಿಸಿದರೆ ಮತ್ತೆ ಕೆಲವು ವಾಹಿನಿಗಳು ಮಾಲೀಕತ್ವದ ಬದಲಾವಣೆಯೊಂದಿಗೆ ಹೊಸ ರೂಪದಲ್ಲಿ, ಹೊಸ ಅವತಾರದಲ್ಲಿ ಮತ್ತೆ ಕಣಕ್ಕೆ ಧುಮುಕಿದವು. ಒಂದಂತೂ ನಿಜ: ಹೀಗೆ ಹಲವಾರು ವಾಹಿನಿಗಳು ಹುರುಪಿನಿಂದ ಆರಂಭಗೊಂಡು ತುರುಸಿನ ಚಟುವಟಿಕೆಗಳನ್ನು ಆರಂಭಿಸಿದ ಮೇಲೆ ಕಲಾವಿದರಿಗೆ, ತಂತ್ರಜ್ಞರಿಗೆ ಹೇರಳ ಅವಕಾಶಗಳು ದೊರೆಯತೊಡಗಿದವು.

ಚಲನಚಿತ್ರ ಕ್ಷೇತ್ರದಲ್ಲಿ ಇದ್ದ ತೀವ್ರ ಪೈಪೋಟಿಯ ವಾತಾವರಣದಲ್ಲಿ ಅವಕಾಶವಂಚಿತರಾಗಿ ಬಸವಳಿದಿದ್ದ ಅನೇಕ ಕಲಾವಿದರು ಹಾಗೂ ತಂತ್ರಜ್ಞರಿಗೆ ಒಂದು ಗಟ್ಟಿ ನೆಲೆಯನ್ನು ಒದಗಿಸಿಕೊಡುವಲ್ಲಿ ಟಿ ವಿ ಉದ್ದಿಮೆ ಯಶಸ್ವಿಯಾಯಿತು. ದೀರ್ಘ ಕಾಲ ನಡೆಯುವ ದೈನಂದಿನ ಮಹಾ ಧಾರಾವಾಹಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ವೃತ್ತಿಪರ ಕಲಾವಿದರು—ತಂತ್ರಜ್ಞರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತಲ್ಲದೇ ಅನೇಕ ಹೊಸ ಪ್ರತಿಭೆಗಳೂ ಬೆಳಕಿಗೆ ಬರತೊಡಗಿದವು.

ಆ ಸಂದರ್ಭದಲ್ಲಿ ಪ್ರಾರಂಭವಾಗಿದ್ದ ಒಂದು ವಾಹಿನಿಯೆಂದರೆ ‘ಸುಪ್ರಭಾತ’. ಈ ವಾಹಿನಿಗಾಗಿ ಪ್ರತಿಭಾವಂತ ನಟ—ನಿರ್ದೇಶಕ ಸುನಿಲ್ ಪುರಾಣಿಕ್ ಅವರು ನಿರ್ಮಿಸಿ ನಿರ್ದೇಶಿಸಿದ ‘ಚಿತ್ತಾರ’ ಎಂಬ ದೈನಂದಿನ ಧಾರಾವಾಹಿಯಲ್ಲಿ ನಾನು ಮುಖ್ಯ ಪಾತ್ರ ವಹಿಸಿದ್ದೆ. ಸುನಿಲ್ ಪುರಾಣಿಕ್ , ಜ್ಯೋತಿ ಹಾಗೂ ಶಮಾ ಅವರುಗಳು ಇತರ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ವಿ.ಮನೋಹರ್ ಅವರು ಸಂಗೀತ ನೀಡಿದ್ದ ಈ ಧಾರಾವಾಹಿಯ ಕಥೆ—ಚಿತ್ರಕಥೆಯನ್ನು ಪುರಾಣಿಕ್ ಅವರೇ ರಚಿಸಿದ್ದರು. ಶೇಷಗಿರಿ ಅವರು ಸಂಭಾಷಣೆಯನ್ನು ಸೊಗಸಾಗಿ ಬರೆದುಕೊಟ್ಟಿದ್ದರೆಂಬುದು ಈಗಲೂ ನನಗೆ ಚೆನ್ನಾಗಿ ನೆನಪಿರುವ ಸಂಗತಿ. ‘ಚಿತ್ತಾರ’ ಧಾರಾವಾಹಿ ಆಗ ಸಾಕಷ್ಟು ಜನಪ್ರಿಯವಾಗಿ ನೂರಾರು ಕಂತುಗಳನ್ನು ಪೂರೈಸಿದರೂ ಸುಪ್ರಭಾತ ವಾಹಿನಿಗೆ ರಸಿಕರ ಹೆಚ್ಚಿನ ಮನ್ನಣೆ ದೊರೆಯದೆ ನಿಂತೇ ಹೋಯಿತು.

ದೂರದರ್ಶನಕ್ಕಾಗಿಯೇ ಲಿಂಗದೇವರು ನಿರ್ಮಿಸಿ ನಿರ್ದೇಶಿಸಿದ ಧಾರಾವಾಹಿಯೆಂದರೆ ಯಶವಂತ ಚಿತ್ತಾಲರ ಕಾದಂಬರಿಯನ್ನು ಆಧರಿಸಿದ ‘ಶಿಕಾರಿ’. ಆ ವೇಳೆಗಾಗಲೇ ಚಲನಚಿತ್ರ ರಂಗದಲ್ಲಿ ಭದ್ರವಾಗಿ ನೆಲೆಯೂರತೊಡಗಿದ್ದ ಆತ್ಮೀಯ ಗೆಳೆಯ ರವೀಂದ್ರ ಅಲಿಯಾಸ್ ಅವಿನಾಶ್ ‘ಶಿಕಾರಿ’ಯ ಕೇಂದ್ರಪಾತ್ರವಾದ ನಾಗಪ್ಪನ ಪಾತ್ರವನ್ನು ನಿರ್ವಹಿಸಿದ್ದ. ಸಿ. ಆರ್. ಸಿಂಹ, ನಾನು, ಪವಿತ್ರ ಲೋಕೇಶ್ ಹಾಗೂ ಆಶಾಲತಾ ಇತರ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದೆವು. ಈ ಧಾರಾವಾಹಿಗೂ ವಿ.ಮನೋಹರ್ ಅವರೇ ಸಂಗೀತ ನೀಡಿದ್ದರು. ಜೋಗಿ ಹಾಗೂ ಉದಯ ಮರಕಿಣಿ ಅವರ ಜೋಡಿ ಈ ಧಾರಾವಾಹಿಯ ಚಿತ್ರಕಥೆಯನ್ನು ಚಿತ್ತಾಲರ ಮೂಲ ಕಾದಂಬರಿಯ ವಿಶಿಷ್ಟತೆ—ಘನತೆಗೆ ಒಂದಿನಿತೂ ಊನವಾಗದಂತೆ ಸೊಗಸಾಗಿ ರೂಪಿಸಿದ್ದರು. ಲಿಂಗದೇವರು ಅವರ ಚೊಚ್ಚಲ ನಿರ್ದೇಶನದ ಈ ಧಾರಾವಾಹಿ ಆ ಕಾಲದಲ್ಲಿ ಯಾವುದೇ ಅತಿರೇಕ—ಗಿಮಿಕ್ ಗಳಿಲ್ಲದ ‘ಹೊಸ ಹಾದಿಯ ಧಾರಾವಾಹಿ’ಯೆಂದೇ ಹೆಸರು ಗಳಿಸಿತ್ತು.

ಆ ಸಮಯದಲ್ಲಿ ನಾನು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದು ಉಂಟಾದರೂ ಅದೇನೋ ಚಿತ್ರರಂಗದಲ್ಲಿ ನನಗೆ ಹೆಚ್ಚಿನ ಅವಕಾಶಗಳು ದೊರೆಯಲಿಲ್ಲ. ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಒಳ್ಳೆಯ ಪಾತ್ರಗಳನ್ನು ನಿರ್ವಹಿಸುವ ಅವಕಾಶ ಒದಗಿ ಬರಲಿಲ್ಲ ಅನ್ನುವುದು ಹೆಚ್ಚು ಸೂಕ್ತವೇನೋ! ನಾನಾಗಿ ಯಾರನ್ನೂ ಅವಕಾಶಕ್ಕಾಗಿ ಬೇಡದ ನನ್ನ ಸಂಕೋಚದ ಸ್ವಭಾವದಿಂದಾಗಿಯೂ ಹಲವಾರು ಅವಕಾಶಗಳಿಂದ ನಾನು ವಂಚಿತನಾಗಿದ್ದಿರಬಹುದು. ನನ್ನ ಸಂಕೋಚ—ಸ್ವಾಭಿಮಾನಗಳು ಹಲವರಿಗೆ ಅಹಂಕಾರದಂತೆಯೂ ಗೋಚರವಾಗಿರಬಹುದು! ಜೊತೆಗೆ ನಿರ್ಮಾಪಕ— ನಿರ್ದೇಶಕ ಹಾಗೂ ಕಲಾವಿದರ ನಡುವೆ ಕೊಂಡಿ ಬೆಸೆಯುವ ಮಧ್ಯವರ್ತಿಗಳನ್ನು ನಾನು ಸರಿಯಾಗಿ ‘ಗಮನಿಸಿಕೊಳ್ಳದೇ’ ಹೋದದ್ದೂ ಮತ್ತೊಂದು ಕಾರಣವಿರಬಹುದು! ಹಾಗಾಗಿ ಸಾಲು ಸಾಲಾಗಿ ಬಂದ ಕಿರುತೆರೆಯ ಆಹ್ವಾನವನ್ನು ನಾನು ತಿರಸ್ಕರಿಸುವ ಸಾಹಸಕ್ಕೆ ಹೋಗಲಿಲ್ಲ! ‘ಅವರು ಟಿವಿಯಲ್ಲಿ ತುಂಬಾ ಬಿಸಿ಼ ಇದಾರೆ..ಅವರ ಡೇಟ್ಸ್ ಸಿಗೋಲ್ಲ’ ಎಂಬ ವದಂತಿಗಳೂ ಚಿತ್ರರಂಗದಲ್ಲಿ ಹಬ್ಬಿ ಒಂದಷ್ಟು ಅವಕಾಶಗಳಿಗೆ ಕಲ್ಲು ಹಾಕಿದ್ದೂ ಉಂಟು! ಬಂದ ಮತ್ತಷ್ಟು ಅವಕಾಶಗಳು ಯಾರ ಯಾರದೋ ಅದೃಶ್ಯ ಕೈವಾಡದಿಂದಾಗಿ ‘ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋಯಿತು’ ಎನ್ನುವಂತೆ ಆದ ಪ್ರಸಂಗಗಳಿಗೂ ಏನೂ ಕಡಿಮೆಯಿಲ್ಲ.

ಅಂಥದೊಂದು ಪ್ರಸಂಗವನ್ನು ಈಗ ನಿಮ್ಮೆದುರು ತೆರೆದಿಡುತ್ತೇನೆ. ಒಂದು ದಿನ, ‘ಸಧ್ಯದಲ್ಲೇ ಚಿತ್ರೀಕರಣ ಆರಂಭಿಸುವ ಚಿತ್ರವೊಂದರಲ್ಲಿ ಮುಖ್ಯ ಪಾತ್ರವೊಂದಕ್ಕೆ ನಿಮ್ಮನ್ನು ತೆಗೆದುಕೊಳ್ಳಲು ಯೋಚಿಸುತ್ತಿದ್ದೇವೆ..ಈ ಕುರಿತು ಮಾತಾಡಲು ತಮ್ಮ ಮನೆಗೆ ಬರಬಹುದೇ?’ ಎಂದು ‘ಶ್ರೀನಿವಾಸ’ ನಾಮಾಂಕಿತರಾದ ನಿರ್ದೇಶಕರೊಬ್ಬರು ಫೋನ್ ಮಾಡಿದರು. ಮರುದಿನ ಹನ್ನೊಂದು ಗಂಟೆಗೆ ಮನೆಗೆ ಬರಲು ಅವರಿಗೆ ಸೂಚಿಸಿದೆ. ಹೇಳಿದ ಸಮಯಕ್ಕೆ ಸರಿಯಾಗಿ ಕಾರ್ಯಕಾರಿ ನಿರ್ಮಾಪಕರಾದ ‘ಗುರುರಾಜ’ ಎನ್ನುವವರ ಜತೆಯಲ್ಲಿ ನಿರ್ದೇಶಕರು ನಮ್ಮ ಮನೆಗೆ ಆಗಮಿಸಿದರು.

ನನ್ನನ್ನು ನೋಡಿದೊಡನೆಯೇ ಗುರುರಾಜರ ಮುಖ ಮೊರದಗಲವಾಗಿ ನೂರು ಕ್ಯಾಂಡಲ್ ಬಲ್ಬ್ ನಂತೆ ಬೆಳಗತೊಡಗಿತು! “ಅಬ್ಬಾ! ನೂರು ಜನಾನ ಇಂಟರ್ ವ್ಯೂ ಮಾಡಿದ ಮೇಲೆ ಈ ಫೇಸ್ ನನಗೆ ದೊರಕಿಂದಿ! ಏಮಿ ಅದೃಷ್ಟಮು ಸಾರ್ ನಾದಿ..ಓಹೋಹೋ…ಸೋ ಲಕ್ಕಿ ಸೋ ಲಕ್ಕಿ ನೇನು..” ಎಂದು ವಿವಿಧ ಭಾಷೆಗಳಲ್ಲಿ ಹರ್ಷೋದ್ಗಾರ ಮಾಡುತ್ತಾ ಸಂಭ್ರಮಿಸತೊಡಗಿದರು. ನಿರ್ದೇಶಕರೂ ಸಹಾ, ‘ನೊಡಿದಿರೋ? ಎಂಥವರ ಬಳಿ ನಿಮ್ಮನ್ನು ಕರೆ ತಂದಿದ್ದೇನೆ!’ ಎಂಬ ಭಾವ ಸೂಸುವ ವಿಜಯದ ಮುಗುಳ್ನಗೆಯನ್ನು ತುಳುಕಿಸುತ್ತಾ ಕೃತಾರ್ಥರಾದವರಂತೆ ಕೈಕಟ್ಟಿಕೊಂಡು ನಿಂತಿದ್ದರು. ಈ ಸಂಭ್ರಮಾತಿರೇಕಗಳ ಕಾರಣವೊಂದೂ ತಿಳಿಯದ ಅಯೋಮಯ ಸ್ಥಿತಿಯಲ್ಲಿದ್ದ ನಾನು ಅವರನ್ನು ಒಳ ಕರೆತಂದು ಕುಳ್ಳಿರಿಸಿದೆ. ಖುಷಿಯ ಆವೇಶ ತುಸು ತಗ್ಗಿದ ಮೇಲೆ ಇಬ್ಬರೂ ಸಮಾಧಾನದಿಂದ ಮಾತನಾಡತೊಡಗಿದರು.

ಒಂದು ಯಶಸ್ವೀ ಮಲಯಾಳಂ ಚಿತ್ರದ ರೀಮೇಕ್ ಕನ್ನಡದಲ್ಲಿ ಸಿದ್ಧವಾಗುತ್ತಿದೆ; ಮೂಲ ಮಲಯಾಳಿ ಚಿತ್ರದಲ್ಲಿ ಖ್ಯಾತ ನಟ ಮಮ್ಮುಟ್ಟಿಯವರು ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು; ಕನ್ನಡದಲ್ಲಿ ಆ ಪಾತ್ರವನ್ನು ಯಾರು ನಿರ್ವಹಿಸಬಹುದು ಎಂಬುದರ ಕುರಿತಾಗಿ ಸಾಕಷ್ಟು ಚರ್ಚೆ—ಜಿಜ್ಞಾಸೆ ನಡೆದರೂ ಒಂದು ತೀರ್ಮಾನಕ್ಕೆ ಬರಲಾಗಿರಲಿಲ್ಲ; ನೂರಕ್ಕೂ ಹೆಚ್ಚು ಜನರನ್ನು ನೋಡಿ ಆಡಿಷನ್ ನಡೆಸಿದ್ದರೂ ಫಲಕಾರಿಯಾಗಿರಲಿಲ್ಲ; ಕೊನೆಗೆ ಧಾರಾವಾಹಿಯೊಂದರ ಎಪಿಸೋಡ್ ನಲ್ಲಿ ನನ್ನನ್ನು ನೋಡಿದಾಗ ನಾನು ಆ ಪಾತ್ರಕ್ಕೆ ಹೊಂದಬಹುದು ಎಂದು ಅನ್ನಿಸಿಬಿಟ್ಟಿದೆ ನಿರ್ದೇಶಕರಿಗೆ; ಒಡನೆಯೇ ನನ್ನನ್ನು ಸಂಪರ್ಕಿಸಿ ನಿರ್ಮಾಪಕರೊಟ್ಟಿಗೆ ಮನೆಗೆ ಬಂದಿದ್ದಾರೆ! ನಿಜಕ್ಕೂ ಆ ಕ್ಷಣ ಮನಸ್ಸಿಗೆ ತುಂಬಾ ಸಮಾಧಾನವಾಯಿತು; ಇದ್ದ ಆತಂಕ—ಅಸಮಾಧಾನಗಳು ದೂರವಾದಂತೆನ್ನಿಸಿತು. ಕಮರ್ಷಿಯಲ್ ಚೌಕಟ್ಟಿನ ಚಿತ್ರವೊಂದರಲ್ಲಿ ಮುಖ್ಯ ಪೋಷಕ ಪಾತ್ರವೊಂದಕ್ಕೆ ನನ್ನನ್ನೇ ಅರಸಿಕೊಂಡು ಬಂದಿದ್ದಾರೆ! ಬಹುಶಃ ಈ ರಂಗದಲ್ಲಿ ಮುಂದುವರಿಯಲು ಇದೊಂದು ಹೆಬ್ಬಾಗಿಲಾಗಬಹುದು!

ಹೀಗೊಂದು ಲಹರಿಯಲ್ಲಿ ನಾನಿರುವಂತೆಯೇ ನಿರ್ದೇಶಕರು ಸವಿಸ್ತಾರವಾಗಿ ಚಿತ್ರದ ಕಥಾಶ್ರವಣ ಮಾಡಿಸಿದರು. ನನ್ನ ಪಾತ್ರದ ಪ್ರಾಮುಖ್ಯತೆಯನ್ನೂ ಚಿತ್ರದಲ್ಲಿ ಆ ಪಾತ್ರ ಆವರಿಸಿಕೊಂಡಿರುವ ಪರಿಯನ್ನೂ ಮಮ್ಮುಟ್ಟಿಯವರು ಹೇಗೆ ಮೂಲಚಿತ್ರದಲ್ಲಿ ‘ಚಿಂದಿ’ ಎಬ್ಬಿಸಿದ್ದಾರೆಂಬುದನ್ನೂ ಪರಿಪರಿಯಾಗಿ ಬಣ್ಣಿಸಿದರು. ನಾನೂ ಮೈಯೆಲ್ಲಾ ಕಿವಿಯಾಗಿ ಅವರು ಹೇಳಿದ್ದೆಲ್ಲವನ್ನೂ ಭಟ್ಟಿ ಇಳಿಸಿಕೊಂಡೆ. ನಂತರ ನಿರ್ಮಾಪಕರು ಸಂಭಾವನೆಯ ಬಗ್ಗೆ ಕೇಳಿದರು. ಎಂದಿನ ನನ್ನ ಪೆದ್ದುತನದ ಶೈಲಿಯಲ್ಲಿ, “ನನಗೆ ಒಳ್ಳೆಯ ಪಾತ್ರ ಮುಖ್ಯ..ಹಣವಲ್ಲ” ಎಂದು ಏನೇನೋ ಹೇಳಿ ಮತ್ತಷ್ಟು ಪೆದ್ದಾಗಿ ನಕ್ಕು ‘ನೀವೇ ನಿರ್ಧರಿಸಿ ಹೇಳಿ’ ಎಂದುಬಿಟ್ಟೆ. ಆದರೆ ಅವರು ನನ್ನ ಪೆದ್ದುತನದ ಪ್ರಯೋಜನ ಪಡೆಯುವ ಪ್ರಯತ್ನ ಮಾಡಿದವರಂತೆ ಕಾಣಲಿಲ್ಲ. ಆಗ ನಾನು ತೆಗೆದುಕೊಳ್ಳುತ್ತಿದ್ದ ಸಂಭಾವನೆಗಿಂತ ಕೊಂಚ ಹೆಚ್ಚು ಅನ್ನುವಂತೆಯೇ ಒಂದು ಸಂಖ್ಯೆಯನ್ನು ಹೇಳಿದಾಗ ನಾನು ಮರು ಮಾತಿಲ್ಲದೇ ಒಪ್ಪಿಕೊಂಡುಬಿಟ್ಟೆ. ಇನ್ನು ಮೂರು—ನಾಲ್ಕು ದಿನಗಳಲ್ಲಿಯೇ ಚಿತ್ರೀಕರಣ ಆರಂಭವೆಂದು ನುಡಿದ ನಿರ್ಮಾಪಕರು ಕರಾರು ಪತ್ರಗಳಿಗೆ ಸಹಿ ಹಾಕಿಸಿಕೊಂಡು ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಮುಂಗಡವಾಗಿ ನೀಡಿದಾಗ ಗಾಬರಿ—ಖುಷಿಗಳೆರಡೂ ನುಗ್ಗಿ ಬಂದವು! ‘ಅಬ್ಬಾ! ಅದೆಷ್ಟು ಕ್ರಮಬದ್ಧವಾಗಿ ಶಿಸ್ತಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ’ ಎಂದು ನನಗೆ ನಿಜಕ್ಕೂ ಆಶ್ಚರ್ಯ ಆಯಿತು. ‘ಎಲ್ಲ ಬೆಳವಣಿಗೆಗಳ ಕುರಿತಾಗಿ ಕಾಲಕಾಲಕ್ಕೆ ಫೋನ್ ಮಾಡುತ್ತಿರುತ್ತೇವೆ; ಇಂದು ಸಂಜೆಯೇ ನಮ್ಮ ಪ್ರಸಾಧನ ಕಲಾವಿದ ಬಂದು ನಿಮ್ಮ ಪಾತ್ರಕ್ಕೆ ಅಗತ್ಯವಾದ ವಿಗ್ ಸಿದ್ಧಪಡಿಸಿಕೊಡುತ್ತಾನೆ’ ಎಂದು ನುಡಿದು ಮತ್ತೊಮ್ಮೆ ಆನಂದತುಂದಿಲರಾಗಿ ಕೇಕೆ ಹಾಕಿ ನನಗೆ ಧನ್ಯವಾದಗಳನ್ನರ್ಪಿಸಿ ನಿರ್ಮಾಪಕ—ನಿರ್ದೇಶಕರಿಬ್ಬರೂ ತೆರಳಿದರು.

ಸಂಜೆಯೇ ಪ್ರಸಾಧನ ಕಲಾವಿದರು ಬಂದು ಸೊಗಸಾದ ವಿಗ್ ಅನ್ನೂ ಸಿದ್ಧ ಪಡಿಸಿಕೊಟ್ಟರು. ವಸ್ತ್ರ ವಿನ್ಯಾಸಕರು ಬಂದು ಬಟ್ಟೆ ಬರೆಗಳನ್ನು ಸಿದ್ಧ ಪಡಿಸಲು ಅಳತೆ ತೆಗೆದುಕೊಂಡು ಹೋದರು. ಇನ್ನು ಮೂರು ನಾಲ್ಕು ದಿನದಲ್ಲಿ ಚಿತ್ರೀಕರಣ ಆರಂಭ. ನಾನೂ ಪಾತ್ರ ನಿರ್ವಹಣೆಗೆ ಬೇಕಾದ ಸಿದ್ಧತೆಗಳನ್ನು ನನ್ನದೇ ಶೈಲಿಯಲ್ಲಿ ಮಾಡಿಕೊಳ್ಳುತ್ತಿದ್ದೆ. ಅದೇ ಸಮಯದಲ್ಲಿಯೇ, ಈ ನಿರ್ಮಾಪಕರು ಕೇಳಿರುವ ದಿನಾಂಕಗಳಂದೇ ಬೇಕೆಂದು ಮತ್ತೊಂದು ಚಿತ್ರಕ್ಕೆ ಆಹ್ವಾನ ಬರಬೇಕೇ! ಅದೂ ಸಹಾ ಮುಖ್ಯ ಪಾತ್ರವೇ. ಆದರೇನು ಮಾಡುವುದು? ಈಗಾಗಲೇ ಇವರಿಗೆ ಡೇಟ್ಸ್ ಕೊಟ್ಟಾಗಿದೆ. ವಿಧಿಯಿಲ್ಲದೇ ಹೊಸ ಅವಕಾಶವನ್ನು ತಿರಸ್ಕರಿಸಬೇಕಾಯಿತು. ಮರುದಿನ ನಿರ್ಮಾಪಕರ ಅಥವಾ ಮ್ಯಾನೇಜರ್ ಅವರ ಕರೆಯ ನಿರೀಕ್ಷೆಯಲ್ಲಿದ್ದ ನನಗೆ ಯಾವುದೇ ಕರೆ ಬಾರದಿದ್ದಾಗ ನಿರಾಸೆಯಾಯಿತು. ಮರುದಿನವೂ ಅದೇ ಕಥೆ! ಸಂಜೆಯ ತನಕ ಅವರಿಂದ ಕರೆ ಬಾರದಿದ್ದಾಗ ಕೊಂಚ ಗಲಿಬಿಲಿಗೊಂಡು ನಾನೇ ನಿರ್ದೇಶಕರಿಗೆ ಫೋನ್ ಮಾಡಿದೆ. ‘ಅದು..ಇಲ್ಲ ಸರ್..ಏನೋ ಪ್ರಾಬ್ಲಮ್ ಆಗಿದೆ ಪ್ರೊಡಕ್ಷನ್ ಕಡೆ…ಯಾವುದಕ್ಕೂ ತಿಳಿಸ್ತೇನೆ’ ಎಂದು ತಡಬಡಾಯಿಸುತ್ತಲೇ ಹೇಳಿ ಫೋನ್ ಇಟ್ಟರು.

ನನಗೇಕೋ ತೀರಾ ಕಸಿವಿಸಿಯಾಯಿತಷ್ಟೇ ಅಲ್ಲ, ಅನುಮಾನಗಳೂ ಕಾಡತೊಡಗಿದವು. ‘ಪ್ರೊಡಕ್ಷನ್ ಕಡೆ ತೊಂದರೆ’ ಅಂದರೆ ಹಣ ಕಾಸಿನ ಮುಗ್ಗಟ್ಟೇ ಇರಬೇಕು..ಅಂತೂ ಯಾಕೋ ಅದೃಷ್ಟ ನನ್ನ ಕೈಹಿಡಿಯುವ ಲಕ್ಷಣ ಕಾಣ್ತಿಲ್ಲ..ಹೊಸದಾಗಿ ಬಂದ ಚಿತ್ರದ ಆಹ್ವಾನವನ್ನಾದರೂ ಒಪ್ಪಿಕೋಬಹುದಾಗಿತ್ತು..ಈಗ ಎರಡೂ ಕಡೆ ಇಲ್ಲದ ಹಾಗಾಯ್ತು’ ಎಂದೊಂದಷ್ಟು ಸ್ವಗತಗಳಲ್ಲಿ ಮುಳುಗಿ ಕೊನೆಗೆ ನನಗೆ ನಾನೇ ಸಮಾಧಾನ ಹೇಳಿಕೊಂಡೆ.

ಮರುದಿನ ಬೆಳಿಗ್ಗೆ ರಂಜನಿ ಪುರವಣಿಯಲ್ಲಿದ್ದ ಸುದ್ದಿಯೊಂದರ ಕಡೆ ನನ್ನ ಗಮನ ಸೆಳೆದಳು. ನೋಡಿದರೆ , ನಾನು ಯಾವ ಚಿತ್ರದಲ್ಲಿ ಅಭಿನಯಿಸಬೇಕಿತ್ತೋ ಆ ಚಿತ್ರದ ಮುಹೂರ್ತ ಹಿಂದಿನ ದಿನ ಅದ್ದೂರಿಯಾಗಿ ಚಲನಚಿತ್ರ ರಂಗದ ದಿಗ್ಗಜರ ನೇತೃತ್ವದಲ್ಲಿ ನೆರವೇರಿದೆ! ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ ತಾರಾಗಣದ ಪಟ್ಟಿಯಲ್ಲಿ ಎಲ್ಲೂ ನನ್ನ ಹೆಸರೇ ಕಾಣುತ್ತಿಲ್ಲ! ಮರುದಿನದಿಂದಲೇ ಚಿತ್ರೀಕರಣ ಆರಂಭ ಎಂದು ಬೇರೆ ನಿರ್ದೇಶಕರು ಘೋಷಿಸಿದ್ದಾರೆ! ಸುದ್ದಿಯನ್ನು ನೋಡಿ ಗರಬಡಿದವನಂತೆ ಕುಳಿತುಬಿಟ್ಟೆ. ರಂಜನಿ ಒಂದಿಷ್ಟು ಸಮಾಧಾನ ಹೇಳಿ ಸಂತೈಸಿ ಕಾಲೇಜ್ ಗೆ ಹೊರಟುಬಿಟ್ಟಳು. ಮಕ್ಕಳೂ ಸ್ಕೂಲು—ಕಾಲೇಜಿಗೆ ಹೊರಟಾಗಿತ್ತು. ಒಬ್ಬನೇ ಮನೆಯಲ್ಲಿ! ಯಾಕೋ ಮನಸ್ಸಿಗೆ ತುಂಬಾ ಖೇದವಾಯಿತು. ಇಂಥವೆಲ್ಲಾ ಈ ಕ್ಷೇತ್ರದಲ್ಲಿ, ಅಷ್ಟೇಕೆ, ಯಾವ ಕ್ಷೇತ್ರದಲ್ಲಾದರೂ ಸಹಜವೇ ಎಂಬುದು ಅರಿವಿದ್ದರೂ ನಮಗೇ ಅಂಥ ಪೆಟ್ಟು ಬಿದ್ದಾಗ ಆಗುವ ನೋವು ವಿಪರೀತ. ಶೂನ್ಯವನ್ನೇ ದಿಟ್ಟಿಸುತ್ತಾ, ನನ್ನ ದುರಾದೃಷ್ಟವನ್ನು ಹಳಿದುಕೊಳ್ಳುತ್ತಾ ಅದೆಷ್ಟೋ ಹೊತ್ತು ಸುಮ್ಮನೇ ಕುಳಿತಿದ್ದೆ.

ನಿರ್ದೇಶಕರಿಗೆ—ನಿರ್ಮಾಪಕರಿಗೆ ನಾಲ್ಕಾರು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ. ಮಧ್ಯಾಹ್ನದ ವೇಳೆಗೆ ನಿರ್ದೇಶಕನಿಂದ ಕರೆ ಬಂದಿತು. “ಏನ್ರೀ ಶ್ರೀನಿವಾಸ್ , ಏನು ಹುಡುಗಾಟ ಆಡ್ತಿದೀರಾ ನನ್ನ ಜತೆ? ಪ್ರೆಸ್ ಮೀಟ್ ವಿಷಯ ನನಗೆ ಯಾಕೆ ಹೇಳಲಿಲ್ಲ? ನನ್ನ ಹೆಸರೂ ಎಲ್ಲೂ ಕಾಣ್ತಿಲ್ಲ ಯಾಕೆ?” ಎಂದು ಕೊಂಚ ಕಟುವಾಗಿಯೇ ಕೇಳಿದೆ. “ಸಾರಿ ಸರ್, ಅನಿವಾರ್ಯವಾಗಿ,ನನ್ನ ಕೈಮೀರಿದ ಕಾರಣಗಳಿಂದಾಗಿ ನಿಮ್ಮ ಬದಲಿಗೆ ಬೇರೊಬ್ಬರು ಬಂದಿದ್ದಾರೆ; ನನ್ನ ಮೊದಲ ಆಯ್ಕೆ ನೀವೇ; ಆದರೇನು ಮಾಡಲಿ? ಕೊನೆಯ ಮಾತು ನನ್ನದಲ್ಲವಲ್ಲಾ” ಎಂದೆಲ್ಲಾ ಅವರು ಪೇಚಾಡಿಕೊಂಡರು. ಅದೆಷ್ಟು ಅತ್ತುಕೊಂಡರು ಎಂದರೆ ಕೊನೆಗೆ ಅನ್ಯಾಯಕ್ಕೊಳಗಾದ ನಾನೇ ಅವರಿಗೆ ಸಮಾಧಾನ ಮಾಡಬೇಕಾಗಿ ಬಂತು. ಮಾತು ಮುಗಿಸುತ್ತಾ ಆ ನಿರ್ದೇಶಕರು ಕೊನೆಯಲ್ಲಿ, “ಹಾಗಾದ್ರೆ ಮನೆ ಹತ್ರ ಯಾವಾಗ ಬರೋಣ ಸಾರ್?” ಎಂದು ಅಳುಕುತ್ತಲೇ ಕೇಳಿದರು. ಅವರ ಧ್ವನಿಯ ಅಸ್ಥಿರತೆಯಿಂದಲೇ ಮುಂಗಡ ನೀಡಿದ್ದ ಹಣದ ವಸೂಲಿಗಾಗಿ ಈ ಪೀಠಿಕೆ ಎಂಬುದು ನನಗೆ ಅರ್ಥವಾಗಿಹೋಯಿತು.”ಮುಂಗಡ ಹಣ ವಾಪಸ್ ಕೊಡಬೇಕೇನ್ರೀ” ಎಂದು ನಾನೇ ಕೇಳಿದ್ದಕ್ಕೆ ದೇಶಾವರಿ ನಗು ನಗುತ್ತಾ ಹೌದೆಂದರು ಆ ನಿರ್ದೇಶಕರು. ‘ಸಂಜೆ ಫೋನ್ ಮಾಡಿಕೊಂಡು ಮನೆ ಹತ್ತಿರ ಬನ್ನಿ’ ಎಂದಷ್ಟೇ ಹೇಳಿ ಫೋನ್ ಇಟ್ಟುಬಿಟ್ಟೆ.

ರಂಜನಿಗೆ ಫೋನ್ ಮಾಡಿ ಅವಳಿಗೆ ಎಲ್ಲಾ ವಿಷಯವನ್ನೂ ತಿಳಿಸಿ ಬ್ಯಾಂಕ್ ನಿಂದ ಹಣ ತೆಗೆದುಕೊಂಡು ಬರಲು ಸೂಚಿಸಿದೆ. ಸಂಜೆ ರಂಜನಿ ಮನೆಗೆ ಬಂದ ಮೇಲೆ ಕಾಫಿ ಕುಡಿಯುತ್ತಾ ಮಾತಾಡತೊಡಗಿದಳು: “ಪ್ರಭೂಜೀ,ಇವತ್ತು ನನ್ನ ಕಲೀಗ್ ಲತಾ ಸುರೇಶ್ ಜೊತೆ ಮಾತಾಡ್ತಾ ಇದ್ದಾಗ ಹಾಗೇ ಪ್ರಾಸಂಗಿಕವಾಗಿ ನಿಮ್ಮ ಈ ಸಿನೆಮಾ ವಿಷಯ ಹೇಳಿದೆ. ಅವಳು, ‘ಯಾವುದೇ ಕಾರಣಕ್ಕೂ ಮುಂಗಡ ಕೊಟ್ಟಿರೋ ಹಣಾನ ವಾಪಸ್ ಕೊಡಬೇಡಿ’ ಅಂತ ಖಡಾಖಂಡಿತವಾಗಿ ಹೇಳಿಬಿಟ್ಟಳು. ಅವಳ ತಂದೆ ಹೈಕೋರ್ಟ್ ಜಡ್ಜ್ ಆಗಿ ಭಾಳ ದೊಡ್ಡ ಹೆಸರು ತೊಗೊಂಡೋರು. ಅವಳಿಗೂ ಈ ಕಾನೂನಿನ ವಿಚಾರ ತಕ್ಕಮಟ್ಟಿಗೆ ಗೊತ್ತು. ‘ನೀವಾಗೇ ಏನಾದ್ರೂ ಪಾತ್ರ ಮಾಡೋಲ್ಲ ಅಂತ ಹಿಂದೆ ಸರಿದಿದ್ರೆ ಆಗ ಮಾತು ಬೇರೆ ಆಗ್ತಿತ್ತು.. ಈಗ ಅವರೇ ನಿಮ್ಮನ್ನ ಬದಲಾಯಿಸಿರೋದ್ರಿಂದ ತೊಂದರೆ ಆಗಿರೋದು ನಿಮಗೇ ಹೊರತು ಅವರಿಗಲ್ಲ.. ಇನ್ನೂ ನೀವೇ ಬೇಕಾದ್ರೆ ನಷ್ಟ ಪರಿಹಾರ ಅಂತ ಇನ್ನಷ್ಟು ಹಣ ಕೇಳಬಹುದೇ ಹೊರತು ಮುಂಗಡ ಕೊಟ್ಟಿರೋದನ್ನ ಖಂಡಿತಾ ವಾಪಸ್ ಕೊಡಬೇಕಾಗಿಲ್ಲ.. ಕಾನೂನು ನಿಮ್ಮ ಪರವಾಗಿ ಇದ್ದೇ ಇರುತ್ತೆ ಅಂತ ಹೇಳಿದಳು ಲತಾ.”

ರಂಜನಿಯ ಮಾತುಗಳನ್ನು ಕೇಳಿದ ಮೇಲೆ ನನಗೂ ಹೌದಲ್ಲವೇ ಅನ್ನಿಸಿತು! ತೊಂದರೆ ಆಗಿರುವುದು ನನಗೆ; ಒಳಗೊಳಗೇ ಹಿಂಸೆ—ಅವಮಾನಗಳನ್ನು ಅನುಭವಿಸುತ್ತಿರುವುದು ನಾನು; ಇದು ಸಾಲದೆಂಬಂತೆ ಈ ಚಿತ್ರವನ್ನು ನಂಬಿಕೊಂಡು ಅರಸಿಕೊಂಡು ಬಂದಿದ್ದ ಮತ್ತೊಂದು ಒಳ್ಳೆಯ ಅವಕಾಶವನ್ನು ಕೈಚೆಲ್ಲಿದ್ದೇನೆ; ಇಷ್ಟೆಲ್ಲಾ ಆಗಿರುವಾಗ ನಾನೇಕೆ ಮುಂಗಡ ಹಣ ಮರಳಿಸಬೇಕು? ಅನ್ನಿಸಿತು. ಈ ವಿಷಯವನ್ನು ಅವರಿಗೆ ಹೇಗೆ ಹೇಳಬೇಕೆಂದು ಮನಸ್ಸಿನಲ್ಲೇ ಅಭ್ಯಾಸ ಮಾಡಿಕೊಂಡು ಅವರನ್ನೆದುರಿಸಲು ಸಿದ್ಧನಾದೆ. ಅಂದು ಸಂಜೆ ನಿರ್ದೇಶಕರು ಫೋನ್ ಮಾಡುವವರಿದ್ದರು. ಅಂದೇ ‘ರಂಗ ಶಂಕರ’ದಲ್ಲಿ ‘ಇತಿ ನಿನ್ನ ಅಮೃತಾ’ ನಾಟಕದ ಪ್ರದರ್ಶನವಿತ್ತು. ಪ್ರದರ್ಶನಕ್ಕೆ ಮುನ್ನ ಬಂದ ನಿರ್ದೇಶಕರ ಕರೆಗಳನ್ನು ನಾನು ಸ್ವೀಕರಿಸಲಿಲ್ಲ.

ಪ್ರದರ್ಶನವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಪ್ರೇಕ್ಷಕರ ಮೆಚ್ಚುನುಡಿಗಳನ್ನು ಮೆಲುಕು ಹಾಕುತ್ತಾ ಮನೆಯತ್ತ ಹೊರಟಾಗ ಮತ್ತೆ ನಿರ್ದೇಶಕರ ಕರೆ ಬಂದಿತು. ಕಾರ್ ಅನ್ನು ಒಂದು ಬದಿಗೆ ನಿಲ್ಲಿಸಿ ಕರೆಯನ್ನು ಸ್ವೀಕರಿಸಿದೆ. “ನಮಸ್ತೆ ಸರ್..ಸಂಜೆ ಸುಮಾರು ಸಲ ಫೋನ್ ಮಾಡಿದ್ದೆ.. ನೀವು ಅವಾಯ್ಡ್ ಮಾಡಿಬಿಟ್ರಿ.. ಯಾವಾಗ ಬರೋಣ ಸರ್ ಮನೆ ಹತ್ರ?” ಎಂದರು ನಿರ್ದೇಶಕರು. “ಯಾಕೆ ಬರಬೇಕು ನೀವು ಮನೆ ಹತ್ರ?” ಎಂದೆ ನಾನು ಅಮಾಯಕನಂತೆ. “ಅದೇ ಸರ್.. ಹೇಳಿದ್ದರಲ್ಲಾ.. ಅಡ್ವಾನ್ಸ್ ಅಮೌಂಟ್ ವಾಪಸ್ ಕೊಡ್ತೀನಿ ಅಂತ..” ಎಂದು ತೊದಲಿದರು ನಿರ್ದೇಶಕರು. ಅದೆಲ್ಲಿಂದ ಉಕ್ಕಿಬಂದಿತೋ ಅಷ್ಟು ಭಯಂಕರ ಸಿಟ್ಟು ಕಾಣೆ…ಒಂದೇ ಸಮನೆ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡು ದಬಾಯಿಸತೊಡಗಿಬಿಟ್ಟೆ: “ನೋಡಿ ಶ್ರೀನಿವಾಸ್ , ಅಡ್ವಾನ್ಸ್ ಮರಳಿಸುವ ಪ್ರಶ್ನೆಯೇ ಇಲ್ಲ.. ನಿಮಗಾದರೂ ಹಾಗೆ ಕೇಳಲು ನಾಚಿಕೆಯಾಗಬೇಡವೇ? ಒಬ್ಬ ಹಿರಿಯ ಕಲಾವಿದನಿಗೆ ನೀವು ನೀಡುವ ಗೌರವ ಇದೇ ಏನು? ನಾನು ಮನಸ್ಸು ಮಾಡಿದರೆ ನಿಮ್ಮ ಮೇಲೆ ಕಾನೂನಾತ್ಮಕವಾದ ಕ್ರಮ ನಾನು ಜರುಗಿಸಬಹುದು.. ಆದರೆ ನಾನು ಆ ಮಟ್ಟಕ್ಕೆ ಇಳಿಯುವವನಲ್ಲ.. ಪಾತ್ರ ಬದಲಾವಣೆ ಮಾಡಿದ್ದರ ಬಗ್ಗೆ ನನ್ನದೇನೂ ಆಕ್ಷೇಪಣೆಯಿಲ್ಲ.. ಆದರೆ ಅದನ್ನು ಸಕಾರಣವಾಗಿ ತಿಳಿಸಿ ಒಂದು ಕ್ಷಮೆ ಯಾಚಿಸುವಷ್ಟಾದರೂ ಸೌಜನ್ಯ ಇರಬೇಡವೇ ನಿಮಗೆ? ಯಾವ ಧೈರ್ಯ—ಯಾವ ಆಧಾರದ ಮೇಲೆ ಮುಂಗಡ ಹಣ ಮರಳಿ ಕೇಳುತ್ತಿದ್ದೀರಿ? ಯಾವ ಕಾರಣಕ್ಕೂ ಕೊಡುವುದಿಲ್ಲ… ನೀವೇನೇ ಕ್ರಮ ತೆಗೆದುಕೊಳ್ತೀವಿ ಅಂತ ಹೆದರಿಸಿದರೂ ನಾನು ಸೊಪ್ಪು ಹಾಕುವುದಿಲ್ಲ.. ಕಾನೂನು ನನ್ನ ಪರವಾಗಿದೆಯೆಂಬುದನ್ನು ನಾನು ಬಲ್ಲೆ” ಎಂದು ಮುಂತಾಗಿ 10—15 ನಿಮಿಷ ಕೂಗಾಡಿಬಿಟ್ಟೆ. ಪಾಪದ ಪ್ರಾಣಿ ನನ್ನ ಅಟಾಟೋಪಕ್ಕೆ ಹೆದರಿ ‘ಸರಿ ಸರ್’ ಎಂದವರೇ ಫೋನ್ ಇಟ್ಟುಬಿಟ್ಟರು. ನಾನು ಮತ್ತೈದು ನಿಮಿಷ ಸುಧಾರಿಸಿಕೊಂಡು ಅಲ್ಲಿಂದ ಹೊರಟೆ.

ರಂಜನಿಗೆ ನಡೆದದ್ದೆಲ್ಲವನ್ನೂ ಹೇಳಿ ‘ಲತಾ ಅವರಿಗೆ ನನ್ನ ವಂದನೆಗಳನ್ನು ತಿಳಿಸಿಬಿಡು..ಅವರು ತಿಳಿ ಹೇಳದಿದ್ದರೆ ನನಗಿಷ್ಟು ಧೈರ್ಯ ಬರುತ್ತಿರಲಿಲ್ಲ’ ಎಂದೆ. ‘ನನ್ನ ಗೆಳತಿಯರೇ ಹಾಗೆ! ಸಮಯ ಸಂಜೀವಿನಿಯರು!’ ಎಂದ ರಂಜನಿಯ ಕಣ್ಣುಗಳಲ್ಲಿ ಬೆಳಕು ಚಿಮ್ಮುತ್ತಿತ್ತು. ಮತ್ತೆ ಆ ನಿರ್ದೇಶಕರಾಗಲೀ ನಿರ್ಮಾಪಕರಾಗಲೀ ನನಗೆ ಫೋನ್ ಮಾಡಲಿಲ್ಲ. ಆದರೂ ಈಗಲೂ ಒಮ್ಮೊಮ್ಮೆ ನನ್ನನ್ನು ಒಂದು ಪ್ರಶ್ನೆ ಕಾಡುವುದುಂಟು: “ನಾನು ಮಾಡಿದ್ದು ಸರಿಯೇ? ಅವರ ಋಣಕ್ಕೆ ಬಿದ್ದುಬಿಟ್ಟೆನೇ?” ಎಂದೆಲ್ಲಾ ಅನ್ನಿಸಿಬಿಡುವುದುಂಟು. ತೊಂದರೆಯಾಗಿರುವುದು ನನಗೇ ಆದ್ದರಿಂದ ಋಣದ ಪ್ರಶ್ನೆಯೇ ಏಳುವುದಿಲ್ಲ; ನಾನು ಮಾಡಿರುವುದು ಸರಿಯಾಗಿಯೇ ಇದೆ” ಎಂದು ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ. ಸರಿ ತಾನೇ?

‍ಲೇಖಕರು avadhi

December 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: