ಶ್ರೀನಿವಾಸ ಪ್ರಭು ಅಂಕಣ: ಆಹಾ! ಈಟಿವಿ ‘ಸರೋಜಿನಿ’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 112
———————
“ಸಂಚಿನ ಸುಳಿ”—ನಾನು ಕೇಂದ್ರಪಾತ್ರದಲ್ಲಿ— ಇನ್ಸ್ ಪೆಕ್ಟರ್ ರಾಜ್ ಆಗಿ ಅಭಿನಯಿಸಿದ ಒಂದು ಜನಪ್ರಿಯ ಧಾರಾವಾಹಿ. ಈ ಧಾರಾವಾಹಿ ಪ್ರಸಾರವಾದದ್ದು ಉದಯ ಟಿವಿಯಲ್ಲಿ. ಧಾರಾವಾಹಿಯ ನಿರ್ದೇಶಕ ಎಂ ಪಿ ನಂದಕಿಶೋರ್ , ನನ್ನ ಆತ್ಮೀಯ ಮಿತ್ರ. ನಾನು ಸೆಂಟ್ರಲ್ ಕಾಲೇಜ್ ನಲ್ಲಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿಯೇ ನಂದಕಿಶೋರ ಅಲ್ಲಿಯೇ ಫಿಸಿಕ್ಸ್ ಎಂ ಎಸ್ ಸಿ ಮಾಡುತ್ತಿದ್ದ. ಮೊದಲಿನಿಂದಲೂ ಸಾಹಿತ್ಯಿಕ ಹಾಗೂ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದ ನಂದಕಿಶೋರನ ಪ್ರಾರಂಭದ ದೆಸೆಯ ಹಲವಾರು ಕಥೆಗಳ ಪ್ರಥಮ ಓದುಗ ನಾನು!

ಕನ್ನಡ ಚಿತ್ರರಂಗದ ಹಿರಿಯ ಪ್ರಸಿದ್ಧ ಕಲಾವಿದೆ ಎಸ್ ಕೆ ಪದ್ಮಾದೇವಿ ಅವರು ನಂದಕಿಶೋರನ ತಾಯಿ. 1934ರಲ್ಲಿ ತೆರೆಕಂಡ ‘ಸತಿ ಸುಲೋಚನಾ’ ಕನ್ನಡದ ಪ್ರಪ್ರಥಮ ಚಿತ್ರವೆಂದು ದಾಖಲಾಗಿದ್ದರೂ ಚಿತ್ರೀಕರಣಗೊಂಡ ಪ್ರಥಮ ಕನ್ನಡ ಚಲನಚಿತ್ರ ‘ಭಕ್ತ ಧೃವ’ ಎಂದೂ ಆದರೆ ಕಾರಣಾಂತರಗಳಿಂದ ‘ಸತಿ ಸುಲೋಚನಾ’ ಚಿತ್ರ ಬಿಡುಗಡೆಯಾದ ನಂತರ ಇದು ಬಿಡುಗಡೆಯಾಯಿತೆಂದೂ ಹೇಳುತ್ತಾರೆ. ‘ಭಕ್ತಧೃವ’ ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದವರು ಎಸ್ ಕೆ ಪದ್ಮಾದೇವಿ ಅವರು. ಮುಂದೆ ‘ಸಂಸಾರ ನೌಕೆ’,’ವಸಂತಸೇನಾ’,’ಮುಕ್ತಿ’ ಮೊದಲಾದ ಚಿತ್ರಗಳಲ್ಲಿಯೂ ಮುಖ್ಯ ಪಾತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದ್ದರು. ಹಲವಾರು ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದ್ದ ಪದ್ಮಾದೇವಿಯವರು ತಮ್ಮ ಸುಪುತ್ರ ನಂದಕಿಶೋರ್ ತನ್ನದೇ ಎಂಟರ್ ಟೇನರ್ಸ್ ಇಂಡಿಯಾ ಸಂಸ್ಥೆಗಾಗಿ ನಿರ್ದೇಶಿಸಿದ ‘ಸಂಚಿನ ಸುಳಿ’ ಧಾರಾವಾಹಿಯ ಒಂದೆರಡು ಎಪಿಸೋಡ್ ಗಳಲ್ಲಿ ನಮ್ಮ ಜೊತೆಗೆ ಅಭಿನಯಿಸಿದ್ದರು. ಅಂತಹ ಹಿರಿಯ ಪ್ರಬುದ್ಧ ಕಲಾವಿದೆಯೊಂದಿಗೆ ನಟಿಸಲು ಅವಕಾಶ ದೊರೆತದ್ದು ನನಗೊಂದು ಹೆಮ್ಮೆಯ ಸಂಗತಿ.

‘ಸಂಚಿನ ಸುಳಿ’ ಹೆಸರೇ ಸೂಚಿಸುವಂತೆ ಒಂದು ಪತ್ತೇದಾರಿ ಧಾರಾವಾಹಿ. ಹಿಂದಿಯಲ್ಲಿ ಅಧಿಕಾರಿ ಸೋದರರು ನಿರ್ಮಿಸಿ ನಿರ್ದೇಶಿಸಿದ್ದ ‘ಸುರಾಗ್’ ಧಾರಾವಾಹಿಯ ಕನ್ನಡದ ಮರುಸೃಷ್ಟಿಯೇ ‘ಸಂಚಿನ ಸುಳಿ’.’ ಸುರಾಗ್’ ಧಾರಾವಾಹಿಯಲ್ಲಿ ಇನ್ಸ್ ಪೆಕ್ಟರ್ ನ ಕೇಂದ್ರಪಾತ್ರವನ್ನು ನಿರ್ವಹಿಸಿದ್ದವರು ಸುದೇಶ್ ಬೆರ್ರಿ ಎಂಬ ಪ್ರತಿಭಾವಂತ ಕಲಾವಿದ. ಅಮಿತಾಭ್ ಬಚ್ಚನ್ ಅವರನ್ನು ಅನುಕರಿಸುವಂತೆ ಕೆಲವೊಮ್ಮೆ ಭಾಸವಾದರೂ ತಮ್ಮದೇ ವಿಶಿಷ್ಟ ಹಾವಭಾವ—ಮ್ಯಾನರಿಸಂ ಹಾಗೂ ಸಂಭಾಷಣಾಶೈಲಿಗಳಿಂದ ಬಹುದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದರು ಸುದೇಶ್ ಬೆರ್ರಿ. ಹೀಗೆ ಇತಿಹಾಸವನ್ನೇ ಸೃಷ್ಟಿಸಿದ್ದಂತಹ ಜನಪ್ರಿಯ ಪಾತ್ರವೊಂದರ ಮರುಸೃಷ್ಟಿಯ ಜವಾಬ್ದಾರಿ ನನ್ನ ಹೆಗಲೇರಿತ್ತು! ನನಗೆ ಮೊದಲಿನಿಂದಲೂ ಪತ್ತೇದಾರಿ ಕಥೆಗಳೆಂದರೆ ವಿಶೇಷ ಒಲವೇ ಇತ್ತಲ್ಲಾ! ಶೆರ್ಲಾಕ್ ಹೋಮ್ಸ್ ನ ಅನೇಕ ಪತ್ತೇದಾರಿ ಕಥೆಗಳನ್ನು ಕನ್ನಡಕ್ಕೆ ಅಳವಡಿಸಿಕೊಂಡು ‘ಅಜಿತನ ಸಾಹಸಗಳು’ ಎಂಬ ಧಾರಾವಾಹಿಯನ್ನು ದೂರದರ್ಶನಕ್ಕಾಗಿ ನಿರ್ದೇಶಿಸಿದ್ದರ ಬಗ್ಗೆ ಈಗಾಗಲೇ ನಿಮಗೆ ಹೇಳಿದ್ದೇನೆ. ಅಲ್ಲಿ ನಿರ್ದೇಶಕನಾಗಿದ್ದೆ; ಇಲ್ಲಿ ನಟನಾಗಿ ಕೇಂದ್ರಪಾತ್ರವನ್ನು ನಿರ್ವಹಿಸಬೇಕು!

ಆತ್ಮೀಯ ಗೆಳೆಯ ನಂದಕಿಶೋರನೇ ನಿರ್ದೇಶಕನಾದ್ದರಿಂದ ಜೊತೆಯಲ್ಲಿ ಕುಳಿತು ಚರ್ಚಿಸಿ ಒಟ್ಟಾರೆ ಪ್ರಸ್ತುತಿಯ ರೂಪುರೇಷೆಗಳನ್ನು ಸಿದ್ಧ ಪಡಿಸುತ್ತಿದ್ದೆವು. ಸಹಾಯಕ ನಿರ್ದೇಶಕನಾಗಿ—ಸಂಚಿಕೆ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದವನು ಮತ್ತೊಬ್ಬ ಆತ್ಮೀಯ ಗೆಳೆಯ—ಪ್ರತಿಭಾವಂತ ನಟ ಜಯರಾಜ್. ದಿಲೀಪ್ ರಾಜ್ , ಅಶೋಕ್ , ಸ್ನೇಹಾ, ದೀಪಾ ಅಯ್ಯರ್ ಹಾಗೂ ಅನೇಕ ರಂಗಭೂಮಿ ಕಲಾವಿದರು ‘ಸಂಚಿನ ಸುಳಿ’ಯಲ್ಲಿ ನನ್ನ ಜೊತೆ ಅಭಿನಯಿಸಿದ್ದರು. ಪ್ರತಿಭಾವಂತ ಕ್ಯಾಮರಾಮನ್ ಮಂಜುನಾಥ್ ಅವರು ಛಾಯಾಗ್ರಹಣದ ಹೊಣೆ ಹೊತ್ತಿದ್ದರು. ಒಂದೊಂದು ಕಂತಿನಲ್ಲಿ ಒಂದೊಂದು ಸ್ವತಂತ್ರ ಕಥೆಯನ್ನು ಹೇಳುತ್ತಿದ್ದುದರಿಂದ ‘ಈ ಬಾರಿ ಏನು’ ಎಂಬ ಪ್ರಶ್ನೆ ಸದಾ ವೀಕ್ಷಕರ ಮುಂದಿರುತ್ತಿತ್ತು. ನನಗಂತೂ ‘ಸಂಚಿನ ಸುಳಿ’ ಒಂದು ಮರೆಯಲಾಗದ ಅನುಭವ. ಮೊದಲೇ ಅಭಿನಯವೆಂದರೆ ಬಲು ಆಸಕ್ತಿಯ ಕ್ಷೇತ್ರ; ಅದರ ಜೊತೆಗೆ ಪರಮ ಪ್ರೀತಿಯ ಪತ್ತೇದಾರ ಇನ್ಸ್ ಪೆಕ್ಟರ್ ನ ಪಾತ್ರವೆಂದರೆ ಕೇಳಬೇಕೇ? ನಂದಕಿಶೋರನೂ ಬಹಳ ಮುತುವರ್ಜಿಯಿಂದ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ ಸಾಕಷ್ಟು ಅದ್ದೂರಿಯಾಗಿಯೇ ಧಾರಾವಾಹಿಯನ್ನು ನಿರ್ಮಿಸಿ ಸಮರ್ಥವಾಗಿ ನಿರ್ದೇಶಿಸಿದ ಕೂಡಾ. ನನ್ನ ಸದಾಕಾಲದ ಮೆಚ್ಚಿನ ಧಾರಾವಾಹಿಗಳಲ್ಲಿ ‘ಸಂಚಿನ ಸುಳಿ’ಗೆ ವಿಶೇಷ ಸ್ಥಾನ! ಈಗಲೂ ಯೂಟ್ಯೂಬ್ ನಲ್ಲಿ ಲಭ್ಯವಿರುವ ‘ಸಂಚಿನ ಸುಳಿ’ಯ ಒಂದೆರಡು ಕಂತುಗಳನ್ನು ಆಗಾಗ್ಗೆ ನೋಡುತ್ತಿರುತ್ತೇನೆ!

‘ಈಟಿವಿ ಕನ್ನಡ’ ಉದ್ಘಾಟನೆಗೊಂಡು ಪ್ರಸಾರ ಕಾರ್ಯವನ್ನು ಪ್ರಾರಂಭಿಸಿದ ದಿನಾಂಕ— 10/12/2000. ಅದಕ್ಕೆ ಪೂರ್ವಭಾವಿಯಾಗಿಯೇ ಅನೇಕ ಧಾರಾವಾಹಿಗಳ ಚಿತ್ರೀಕರಣ ಹೈದರಾಬಾದ್ ನ ರಾಮೊಜಿರಾವ್ ಸ್ಟುಡಿಯೋ ಹಾಗೂ ಇನ್ನಿತರ ಕಡೆಗಳಲ್ಲಿ ಬಹಳ ತುರುಸಿನಿಂದ ನಡೆಯುತ್ತಿತ್ತು. ಚಿತ್ರೀಕರಣದ ಸಲುವಾಗಿ ತಿಂಗಳಿಗೆ 10—15 ದಿನಗಳ ಕಾಲ ಹೈದರಾಬಾದ್ ಗೆ ಹೋಗಿ ಬರಬೇಕಾಗುತ್ತಿತ್ತು. ಸ್ಟುಡಿಯೋ ಆವರಣದಲ್ಲಿಯೇ ಅನೇಕ ಸುಸಜ್ಜಿತ ಕೋಣೆಗಳನ್ನು ಕಲಾವಿದರು ಹಾಗೂ ತಂತ್ರಜ್ಞರು ತಂಗುವುದಕ್ಕಾಗಿ ಸಿದ್ಧಪಡಿಸಿದ್ದರು. ಧಾರಾವಾಹಿಗಳ ಚಿತ್ರೀಕರಣಕ್ಕಾಗಿ ನಾನು ಅಲ್ಲಿಗೆ ಹೋಗುತ್ತಿದ್ದರೂ ಅಲ್ಲಿ ಮುಖ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಗೆಳೆಯ ಸೂರಿ ನನಗೆ ಬೇರೆ ಕೆಲ ವಿಶೇಷ ಜವಾಬ್ದಾರಿಗಳನ್ನೂ ಹೊರಿಸಿದ್ದ. ಅಲ್ಲಿ ಆಯ್ಕೆಯಾಗಿದ್ದ ವಾರ್ತಾವಾಚಕರಿಗೆ ಹಾಗೂ ಉದ್ಘೋಷಕರಿಗೆ ಕೆಲವಾರು ದಿನಗಳ ಶಿಬಿರವನ್ನು ನಡೆಸಿ ತರಬೇತಿಯನ್ನು ನೀಡಿದ್ದೆ. ‘ಇದು ಈಟಿವಿ ಕನ್ನಡ..ನಿಮ್ಮ ಛಾನಲ್’ ಎಂದು ಪದೇ ಪದೇ ಪ್ರಸಾರದಲ್ಲಿ ಅನುರಣನಗೊಳ್ಳುತ್ತಿದ್ದ ಉದ್ಘೋಷಕ್ಕೆ ನಾನೇ ಧ್ವನಿ ನೀಡಿದ್ದೆ. ಜತೆಗೆ ದಿನದ—ವಾರದ ಮುಖ್ಯ ಕಾರ್ಯಕ್ರಮಗಳ ಪರಿಚಯ ಮಾಡಿಕೊಡುವ ವರದಿಗಳಿಗೂ ನಾನೇ ಹಿನ್ನೆಲೆಯ ದನಿಯಾಗಿದ್ದೆ. ಹಿನ್ನೆಲೆಯ ದನಿಯ ಅಗತ್ಯವಿದ್ದಲ್ಲೆಲ್ಲಾ—ಅದು ವರದಿಯಾಗಿರಲಿ ಸಾಕ್ಷ್ಯಚಿತ್ರವಾಗಿರಲಿ—ಈಟಿವಿ ಕಾರ್ಯಕ್ರಮ ಆಯೋಜಕರು ನನ್ನನ್ನು ಕರೆಯುತ್ತಿದ್ದರು.

ಆ ಸಮಯದಲ್ಲಿ ನಾನು ಅಭಿನಯಿಸಿದ ಒಂದು ಪ್ರಮುಖ ಧಾರಾವಾಹಿ ‘ಸರೋಜಿನಿ’. ಈಟಿವಿಯ ಆರಂಭದ ದಿನಗಳಲ್ಲಿ ಪ್ರಸಾರಗೊಂಡ ಈ ಧಾರಾವಾಹಿಯ ನಿರ್ದೇಶಕರು ಕೇಸರಿ ಹರವೂ. ಸಂಭಾಷಣೆಗಳೊಂದಿಗೆ ಚಿತ್ರಕಥೆಯನ್ನು ಸಿದ್ಧಪಡಿಸುತ್ತಿದ್ದವರು ರಘುನಂದನ್. ರಘುನಂದನ್ ದೆಹಲಿಯ ನಾಟಕಶಾಲೆಯಲ್ಲಿ ನಮ್ಮ ನಂತರದ ವರ್ಗದಲ್ಲಿದ್ದವರು. ‘ಸರೋಜಿನಿ’ಯಲ್ಲಿ ನನ್ನದು ರಾಜ್ಯದ ಮುಖ್ಯಮಂತ್ರಿಯ ಕೇಂದ್ರಪಾತ್ರ. ನನ್ನ ಪತ್ನಿಯ ಪಾತ್ರವನ್ನು ಪ್ರಸಿದ್ಧ ಅಭಿನೇತ್ರಿ ತಾರಾ ಅವರು ನಿರ್ವಹಿಸುತ್ತಿದ್ದರು. ಅವರ ಗೆಳೆಯನ ಮತ್ತೊಂದು ಪ್ರಮುಖ ಪಾತ್ರದ ನಿರ್ವಹಣೆಯ ಹೊಣೆ ಪ್ರತಿಭಾವಂತ ನಟ ಸುಚೇಂದ್ರ ಪ್ರಸಾದರ ಹೆಗಲೇರಿತ್ತು. ‘ಕಾನೂರು ಹೆಗ್ಗಡಿತಿ’ ಚಿತ್ರದಲ್ಲಿ ಹೂವಯ್ಯನ ಪಾತ್ರದಲ್ಲಿ ಮನೋಜ್ಞ ಅಭಿನಯವನ್ನು ನೀಡಿ ಗಮನ ಸೆಳೆದಿದ್ದ ಸುಚೇಂದ್ರಪ್ರಸಾದ್ , ಗಾಢವಾಗಿ ತಟ್ಟುವ ತುಂಬುದನಿಯ ಸಂವೇದನಾಶೀಲ ನಟ. ನಮ್ಮ ಜತೆಗೆ ರಂಗಭೂಮಿಯ ಅನೇಕ ಪ್ರತಿಭಾವಂತ ಕಲಾವಿದರು ಮುಖ್ಯ ಪಾತ್ರಗಳಲ್ಲಿದ್ದರು. ರೇಣುಕಾ ಪ್ರಸಾದ್ , ಜಯರಾಜ್ , ಬಿ.ಜಯಶ್ರೀ, ಕೆ.ಎಸ್.ಶ್ರೀಧರ್ ಅಲಿಯಾಸ್ ಚಿದು… ಇವರಲ್ಲಿ ಪ್ರಮುಖರು. ಹೈದರಾಬಾದ್ ನ ಕೆಲ ಸ್ಥಳೀಯ ಕನ್ನಡ ಕಲಾವಿದರೂ ಸಹಾ ನಮ್ಮ ತಂಡದಲ್ಲಿದ್ದರು.

ಅದಾಗಲೇ ತಮ್ಮ ‘ಭೂಮಿಗೀತ’ ಚಿತ್ರದಿಂದ ಸೃಜನಶೀಲ ನಿರ್ದೇಶಕರೆಂದು ಖ್ಯಾತರಾಗಿದ್ದ ಕೇಸರಿ ಹರವೂ ಹಾಗೂ ರಘುನಂದನ್ ಜೋಡಿ ಬಹಳ ಸೊಗಸಾದ ಚಿತ್ರಕಥೆಯನ್ನು ಸಿದ್ಧಪಡಿಸಿದ್ದರು. ಒಂದು ರಾಜ್ಯದ ರಾಜಕಾರಣದ ಸಂದರ್ಭದಲ್ಲಿ ಪುಟಿದೇಳುವ ಬಿಕ್ಕಟ್ಟು ಅಧಿಕಾರದ ಮೇಲಾಟಕ್ಕಾಗಿ ನಡೆಯುವ ತಂತ್ರ ಪ್ರತಿತಂತ್ರಗಾರಿಕೆಗಳು—ಷಡ್ಯಂತ್ರಗಳು, ದ್ರೋಹ ವಿಶ್ವಾಸಘಾತಗಳು—ಪದೇಪದೇ ಮಗ್ಗುಲು ಬದಲಿಸುವ ನಿಷ್ಠೆಗಳು… ಇವೆಲ್ಲವುಗಳ ಜತೆ ಮುಖ್ಯಮಂತ್ರಿಯ ವೈಯಕ್ತಿಕ ಬದುಕಿನ ಗೊಂದಲ—ತಲ್ಲಣಗಳು—ಅನುಮಾನ ಶಂಕೆಗಳು—ಎದುರಾಗುವ ಕೌಟುಂಬಿಕ ಸಮಸ್ಯೆಗಳು.. ಎಲ್ಲವನ್ನೂ ಅತ್ಯಂತ ಸಮರ್ಥವಾಗಿ ಒಂದ ಸಮರ್ಪಕ ಹದದಲ್ಲಿ ಹೆಣೆಯುವ ಪ್ರಯತ್ನವಾಗಿತ್ತು ‘ಸರೋಜಿನಿ’ ಧಾರಾವಾಹಿ. ನನ್ನ ವೃತ್ತಿಬದುಕಿನಲ್ಲಿ ನಾನು ಪದೇಪದೇ ನೆನಪಿಸಿಕೊಳ್ಳುವ ಪ್ರಮುಖ ಪಾತ್ರಗಳ ಯಾದಿಯಲ್ಲಿ ಸರೋಜಿನಿಯ ಮುಖ್ಯಮಂತ್ರಿಯ ಪಾತ್ರ ಮೊದಲಲ್ಲೇ ಬರುತ್ತದೆ.

ಕೇಸರಿ ಹರವೂ ಬಹಳ ಶಿಸ್ತಿನ ಸ್ವಭಾವದ, ರಾಜಿಯಾಗದ ಸ್ವಭಾವದ ಖಡಕ್ ನಿರ್ದೇಶಕ. ಒಂದು ಪ್ರಸಂಗ ನೆನಪಾಗುತ್ತಿದೆ:
ಮುಖ್ಯಮಂತ್ರಿಯಾದ ನನಗೆ ರವೆ ಇಡ್ಲಿ ಪ್ರಿಯವಾದ ಖಾದ್ಯ; ಅಂದು ಅಡುಗೆಯವರು ಅದನ್ನು ಸಿದ್ಧಪಡಿಸಿ ನನಗೆ ಬಡಿಸುವ, ರವೆ ಇಡ್ಲಿಯ ಬಗ್ಗೆಯೇ ಒಂದೆರಡು ಮಾತಾಡುವ ಒಂದು ಸರಸ ಸನ್ನಿವೇಶದ ದೃಶ್ಯವನ್ನು ರಘುನಂದನ್ ಬರೆದುಕೊಟ್ಟಿದ್ದರು. ಬೆಳಿಗ್ಗೆಯೇ, ಉಪಹಾರದ ಹೊತ್ತಿಗೇ ಈ ಉಪಹಾರದ ದೃಶ್ಯದ ಚಿತ್ರೀಕರಣವಾಗಬೇಕಿತ್ತು. ಎಲ್ಲ ಪೂರ್ವಭಾವಿ ಸಿದ್ಧತೆಗಳ ನಂತರ ಬೆಳಕಿನ ವ್ಯವಸ್ಥೆಯೂ ಪೂರ್ಣಗೊಂಡು ಛಾಯಾಗ್ರಾಹಕ ಸುರೇಂದ್ರನಾಥ ಬೇಗೂರ್ ಅವರು ‘ರೆಡಿ’ ಎಂದು ಘೋಷಿಸಿದರು. ಇನ್ನೇನು ಚಿತ್ರೀಕರಣ ಆರಂಭವಾಗಬೇಕು, ನೋಡಿದರೆ ರವೆ ಇಡ್ಲಿ ಇಲ್ಲ! ಬೇರೇನೋ ಖಾದ್ಯಗಳನ್ನು ತಂದಿಟ್ಟಿದ್ದಾರೆ! ಕೇಸರಿ ಅವರಿಗೆ ಸಿಟ್ಟು ನೆತ್ತಿಗೇರಿಬಿಟ್ಟಿತು.. ಸಿಂಹ ಗರ್ಜನೆ ಶುರುವಾಗಿಯೇ ಬಿಟ್ಟಿತು! “ನಾನು ಕೇಳಿರುವುದು ದೃಶ್ಯದಲ್ಲಿ ಬರೆದಿರುವುದು ರವೆ ಇಡ್ಲಿ ಎಂದು! ನೀವು ನಿಮ್ಮಿಷ್ಟದ ಪ್ರಕಾರ ಉಪ್ಪಿಟ್ಟನ್ನೊ ದೋಸೆಯನ್ನೋ ತಂದು ಬಡಿದುಬಿಟ್ಟರೆ ನಾನು ಚಿತ್ರೀಕರಣ ಮಾಡಲು ಸಾಧ್ಯವಿಲ್ಲ! ರವೆ ಇಡ್ಲಿ ತರುವ ತನಕ ನಾನು ಶೂಟಿಂಗ್ ಪ್ರಾರಂಭಿಸುವುದಿಲ್ಲ!” ಎಂದು ಪಟ್ಟು ಹಿಡಿದುಬಿಟ್ಟರು ಕೇಸರಿ!

ಸರಿಯೇ…ಹೇಗೋ ಹೊಂದಿಸಿಕೊಂಡು ಹೋಗ್ತಾರೆ ಅನ್ನುವಂಥ ಬೇಜವಾಬ್ದಾರಿತನದ ಧೋರಣೆಯನ್ನು ನಿರ್ದೇಶಕನಾದವನು ಹೇಗಾದರೂ ಸಹಿಸಿಯಾನು? ಕೂಡಲೇ ಮ್ಯಾನೇಜರ್ ಗಳು ರವೆ ಇಡ್ಲಿಯ ಶೋಧನೆಗಾಗಿ ಧಾವಿಸಿದರು! ತಾಸುಗಟ್ಟಲೆ ಸುತ್ತಮುತ್ತಲ ಬಡಾವಣೆಗಳಲ್ಲೆಲ್ಲಾ ಎಷ್ಟು ಹುಡುಕಿದರೂ ರವೆ ಇಡ್ಲಿ ಸಿಗಲಿಲ್ಲ! ಸಿಟಿಯಿಂದ ಬೇರೆ ತುಂಬಾ ದೂರದಲ್ಲಿ ನಗರದ ಹೊರವಲಯದಲ್ಲಿ ಸ್ಟುಡಿಯೋ ಇದ್ದದ್ದು. ಅದೇಕೋ ಸುತ್ತಮುತ್ತಲ ಯಾವ ಹೋಟಲ್ ನವರೂ ಅಂದು ರವೆ ಇಡ್ಲಿ ಮಾಡುವ ಮನಸ್ಸೇ ಮಾಡದಿದ್ದುದು ನಮ್ಮ ದುರಾದೃಷ್ಟವೇ ಸರಿ! ಎರಡು ಮೂರು ತಾಸಿನ ಹುಡುಕಾಟದ ನಂತರ ಹ್ಯಾಪುಮೋರೆ ಹಾಕಿಕೊಂಡು ಬಂದ ಮ್ಯಾನೇಜರ್ ಗಳ ಮುಖ ನೋಡಿ ಮತ್ತಷ್ಟು ಸಿಟ್ಟಿಗೆದ್ದ ನಿರ್ದೇಶಕರು ಇನ್ನಷ್ಟು ಅವರಿಗೆ ಚುರುಕು ಮುಟ್ಟಿಸಿ , ಜವಾಬ್ದಾರಿ—ಬದ್ಧತೆಗಳ ಮಹತ್ವವನ್ನು ವಿವರಿಸಿ ಕೊನೆಗೆ, “ಸರಿ.. ಹಾಳಾಗಿಹೋಗ್ಲಿ.. ಅದೇನಿದೆಯೋ ಅದನ್ನೇ ಇಟ್ಟುಕೊಂಡು ಸೀನ್ ಮಾಡೋಣ ಬನ್ನಿ” ಎಂದು ಸಿಡುಕುತ್ತಲೇ ಶೂಟಿಂಗ್ ಮುಂದುವರಿಸಿದರು. ನನಗೆ ನೆನಪಿರುವ ಮಟ್ಟಿಗೆ ಅಂದು ರವೆ ಇಡ್ಲಿಯ ಬದಲಿಗೆ ಬಂದು ‘ನನ್ನ ಪ್ರಿಯ ತಿಂಡಿ’ಯಾದದ್ದು ಮಸಾಲೆ ದೋಸೆ!

ಶೂಟಿಂಗ್ ಮುಗಿದ ನಂತರ ಆ ವೇಳೆಗಾಗಲೇ ನನಗೆ ಸಾಕಷ್ಟು ಆತ್ಮೀಯನಾಗಿದ್ದ ಛಾಯಾಗ್ರಾಹಕ ಸುರೇಂದ್ರನಾಥ್ ಬೇಗೂರ್ ನನ್ನ ಬಳಿ ಬಂದು ಮೆಲ್ಲಗೆ ಪಿಸುಮಾತಿನಲ್ಲಿ ಕೇಳಿದ: “ಪ್ರಭು ಸರ್.. ನಂಗೊಂದು ಡೌಟು.. ಈಗ ಸ್ಕ್ರಿಪ್ಟ್ ಬರೆಯೋರು ‘ರವೆ ಇಡ್ಲಿ ಸಿ ಎಂ ಸಾಹೇಬರಿಗೆ ಇಷ್ಟ ಅಂತ ಬರ್ದಿದಾರೆ ಸರಿ.. ಅವರು ‘ಮಸಾಲೆ ದೋಸೆ ಸಿ ಎಂ ಗೆ ಪ್ರಿಯವಾದ ತಿಂಡಿ’ ಅಂತ ಬೇಕಾದರೂ ಬರೆದಿರಬಹುದಿತ್ತಲ್ಲವಾ ಸರ್? ಆಗ ಏನಾದರೂ ಸಮಸ್ಯೆ ಆಗ್ತಿತ್ತಾ?”.. ಒಂದು ಕ್ಷಣ ನನಗೇನೂ ಹೇಳಲು ತೋಚಲಿಲ್ಲ! ಅವನ ದನಿಯಲ್ಲಿದ್ದ ಸಣ್ಣ ಕುಹಕ—ವ್ಯಂಗ್ಯ ಅರ್ಥವಾಯಿತಾದರೂ ಒಬ್ಬ ನಿರ್ದೇಶಕನಾಗಿ ಇನ್ನೊಬ್ಬ ನಿರ್ದೇಶಕನನ್ನು ಬಿಟ್ಟುಕೊಡಲು ಮನಸ್ಸಾಗಲಿಲ್ಲ! “ಇಲ್ಲಿ ಹೊಂದಾಣಿಕೆ ಮಾಡಿಕೊಂಡು ಸಮಸ್ಯೆ ಪರಿಹಾರ ಮಾಡಿಕೊಳ್ಳೋದಕ್ಕಿಂತಲೂ ಒಂದು ಬದ್ಧತೆಗೆ—ಶಿಸ್ತಿಗೆ ಜೋತುಬೀಳೋದು ನಿರ್ದೇಶಕನಿಗೆ ಮುಖ್ಯ ಆಗುತ್ತೆ ಸುರೇಂದ್ರ.. ಇವತ್ತು ಇಡ್ಲಿಯಂತಹ ಚಿಕ್ಕ ವಿಚಾರಕ್ಕೆ ಆದದ್ದು ನಾಳೆ ಯಾವುದೋ ದೊಡ್ಡ ತಾತ್ವಿಕ ವಿಚಾರಕ್ಕೋ ಇನ್ಯಾವುದೋ ದೊಡ್ಡ ಸಂಗತಿಗೋ ಆದರೆ ಆಗಲೂ ರಾಜಿ ಮಾಡಿಕೊಳ್ಳೋಕ್ಕಾಗುತ್ತಾ? ಮುಖ್ಯ ರಾಜಿಯ ಪ್ರವೃತ್ತಿಗಳನ್ನ ಬೆಳೆಸಬಾರದು ಅನ್ನೋದು ನಿರ್ದೇಶಕರ ಇಂಗಿತ” ಎಂದು ನನಗೆ ತೋಚಿದಂತೆ ವ್ಯಾಖ್ಯಾನ ನೀಡಿದೆ. ಅದು ಹೇಗೋ ಈ ವಿಚಾರ ಕೇಸರಿಯವರ ಕಿವಿಯನ್ನೂ ಮುಟ್ಟಿ ಅವರು ನನ್ನ ವ್ಯಾಖ್ಯಾನವನ್ನು ಮೆಚ್ಚಿಕೊಂಡು, ‘ಹೌದು..ನನ್ನ ಉದ್ದೇಶವೂ ಅದೇ ಆಗಿತ್ತು’ ಎಂದರಂತೆ!

‘ಸರೋಜಿನಿ’ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲೇ ಒಂದು ದಿನ ‘ಕರ್ನಾಟಕದ ಶಾಶ್ವತ ಮುಖ್ಯಮಂತ್ರಿ’ ಎಂದೇ ಖ್ಯಾತರಾದ ಪ್ರಸಿದ್ಧ ನಟ ಮುಖ್ಯಮಂತ್ರಿ ಚಂದ್ರು ನಮ್ಮ ಚಿತ್ರೀಕರಣ ನಡೆಯುತ್ತಿದ್ದ ಸ್ಟುಡಿಯೋಗೆ ಬಂದರು. ತಮ್ಮ ಎಂದಿನ ಶೈಲಿಯಲ್ಲಿ ತಮಾಷೆ ಮಾಡುತ್ತಾ ಎಲ್ಲರನ್ನೂ ನಗಿಸುತ್ತಾ ನನ್ನ ಬಳಿ ಬಂದು, “ಓಹೋ! ನೀನಾ ಸಿ ಎಮ್ಮು? ಬೇರೆ ಎಲ್ಲಿ ಓ ಕೆ… ಆದ್ರೆ ಸಿ ಎಂ ಆಗೋಕೆ ಬೇಕಾದ ಮೂಲಭೂತ ಅರ್ಹತೇನೇ ನಿನಗಿಲ್ಲವಲ್ಲಯ್ಯಾ!” ಎಂದುಬಿಟ್ಟರು! ನನ್ನ ಮುಖ ಈ ಟೀಕೆಯನ್ನು ಕೇಳಿ ಪೆಚ್ಚಾಗಿಹೋಯಿತು! “”ಯಾಕೆ ಚಂದ್ರಣ್ಣಾ ಹಾಗಂತಿದೀರಿ? ಯಾವ ಅರ್ಹತೆ ನನಗಿಲ್ಲ ಅಂತ ನೀವು ಹೇಳ್ತಿರೋದು?” ಎಂದೆ ನಾನು. “ವಯಸ್ಸು ಕಣೋ! ವಯಸ್ಸು! ಇಷ್ಟು ಚಿಕ್ಕ ವಯಸ್ಸಿನ ಸಿ ಎಂ ಯಾರಿರ್ತಾರೆ ಹೇಳು?”ಎಂದು ಚಂದ್ರು ಜೋರಾಗಿ ನಕ್ಕರು! ತಕ್ಷಣ ನನಗೆ ನಾಟಕದ ಒಂದು ಸಂಭಾಷಣೆ—ಬಹುಶಃ ಕಂಬಾರರ ನಾಟಕದ್ದಿರಬೇಕು—’ಅಂವ ಬಿಡ್ರಿ.. ಅವಂಗ ರಾಷ್ಟ್ರಪತೀಗೆ ಆಗೋ ಅಷ್ಟು ವಯಸ್ಸಾತು”—ಈ ಮಾತು ನೆನಪಿಗೆ ಬಂತು! ಇರಲಿ.

ಹೀಗೇ ಒಂದಷ್ಟು ಸಮಯ ಮುಂದುವರಿದ ಮೇಲೆ ಕೇಸರಿ ಹಾಗೂ ರಘುನಂದನ್ ಅವರಿಗೆ ಅಲ್ಲಿನ ವ್ಯವಸ್ಥೆಗೆ ಹೊಂದಿಕೊಳ್ಳುವುದು ಕಷ್ಟವಾಗಿ ಅವರಿಬ್ಬರೂ ‘ಸರೋಜಿನಿ’ಯನ್ನು ನಡುನೀರಿನಲ್ಲಿ ಕೈಬಿಟ್ಟು ಹೊರಟುಹೋದರು. ಅದುವರೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಟಿ.ಎನ್.ನಾಗೇಶ್ ಹಾಗೂ ಜಯರಾಜ್ ಅವರೇ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತು ಸರೋಜಿನಿಯನ್ನು ಮುನ್ನಡೆಸತೊಡಗಿದರು. ಸಂಭಾಷಣೆ—ಚಿತ್ರಕಥೆಯನ್ನು ಸಿದ್ಧಪಡಿಸಿಕೊಡಲು ಬಂದವರು ಸೃಜನಶೀಲ ಬರಹಗಾರ—ನಾಟಕಕಾರ ಬಸವರಾಜ ಸೂಳೇರಿಪಾಳ್ಯ. ವೈಯಕ್ತಿಕವಾಗಿ ನಾನು ಬಹಳವಾಗಿ ಮೆಚ್ಚಿಕೊಂಡ ಬರಹಗಾರ ಈ ಬಸವರಾಜ. ವಿಶಿಷ್ಟ ನುಡಿಕಟ್ಟುಗಳ, ಅಪಾರ ಚಿತ್ರಕಶಕ್ತಿಯ ಸಮರ್ಥ ಬರವಣಿಗೆ ಬಸವರಾಜನದು. ಇವರುಗಳ ಸಾರಥ್ಯದಲ್ಲಿ ಮತ್ತಷ್ಟು ದೂರ ಸುಗಮವಾಗಿ ಕ್ರಮಿಸಿ ಕೊನೆಗೊಂಡಿತು ‘ಸರೋಜಿನಿ’ ಧಾರಾವಾಹಿ.

‍ಲೇಖಕರು avadhi

October 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: