ಶ್ರೀನಿವಾಸ ಪ್ರಭು ಅಂಕಣ- ಅನೂಹ್ಯ ಮಾಯಾಲೋಕದ ಮಿಂಚುನೋಟ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

9

ಚಾಮರಾಜಪೇಟೆಯ ಮೊದಲ ಮುಖ್ಯ ರಸ್ತೆಯಲ್ಲೇˌ ನಮ್ಮ ಮನೆಯಿಂದ ತುಸು ದೂರದಲ್ಲೇ ನಮ್ಮ ಅಂಗಡಿ ಇದ್ದದ್ದು: ಜಗದಂಬಾ ಸ್ಟೋರ್ಸ್. ನಮ್ಮ ಬಿಡುವಿನ ಸಮಯದಲ್ಲಿ, ಅಥವಾ ಅಂಗಡಿಗೆ ಬೇಕಾದ ದಿನಸಿ ಮತ್ತಿತರ ಪದಾರ್ಥಗಳನ್ನು ತರಲು ಅಣ್ಣ ಮಾರ್ಕೆಟ್ ಗೆ ಹೋಗಬೇಕಾದಂಥ ಸಂದರ್ಭಗಳಲ್ಲಿ ನಾವುಗಳು ಯಾರಾದರೂ ಅಂಗಡಿ ನೋಡಿಕೊಳ್ಳಲು ಕೂರುತ್ತಿದ್ದುದುಂಟು. ನಳಿನಿ ಅಕ್ಕನಿಗಂತೂ ಅಂಗಡಿ ನೋಡಿಕೊಳ್ಳುವುದು ಖುಷಿಯ ವಿಷಯವೇ ಆಗಿತ್ತು. ಎಷ್ಟೋ ಸಲ ನಾನೋ ಅಣ್ಣಯ್ಯನೋ ಅಕ್ಕನಿಗೆ ಬೆಂಗಾವಲ ಬಂಟರಾಗಿರುತ್ತಿದ್ದೆವು.

ಒಮ್ಮೊಮ್ಮೆ ನಾನೊಬ್ಬನೇ ಅಂಗಡಿ ನೋಡಿಕೊಳ್ಳಬೇಕಾದ ಪ್ರಸಂಗ ಬಂದಾಗ ಅಣ್ಣ, ‘ತುಂಬಾ ಸಾಮಾನು ತೊಗೊಳ್ಳೋದಕ್ಕೆ ಯಾರಾದರೂ ಬಂದರೆ ಸ್ವಲ್ಪ ಹೊತ್ತು ಬಿಟ್ಟುಕೊಂಡು ಬನ್ನಿ,ನಮ್ಮ ತಂದೆ ಬರ್ತಾರೆ ಅಂತ ಹೇಳಿ ಕಳಿಸು. ಚಿಕ್ಕ ಪುಟ್ಟದಾದರೆ ನೀನೇ ಕೊಟ್ಟು ದುಡ್ಡು ತೊಗೋ’ ಎಂದು ಹೇಳಿ, ವಸ್ತುಗಳ ಬೆಲೆಯನ್ನು ಬರೆದುಕೊಟ್ಟು ಸೈಕಲ್ ಮೇಲೆ ಮಾರ್ಕೆಟ್ ಗೆ ಹೋಗುತ್ತಿದ್ದರು.

ಮಾರ್ಕೆಟ್ ನಲ್ಲಿ ಅಂಗಡಿಗೆ ಬೇಕಾದ ಸಾಮಾನುಗಳನ್ನೆಲ್ಲಾ ಖರೀದಿ ಮಾಡಿಕೊಂಡು, ಸೈಕಲ್ ಮೇಲೆ ಹೇರಿಕೊಂಡು, ಮಾರ್ಕೆಟ್ ನಿಂದ ಚಾಮರಾಜ ಪೇಟೆಯವರೆಗೆ ನಿಧಾನವಾಗಿ ದೂಡಿಕೊಂಡು ಬರುತ್ತಿದ್ದರು. ಆ ದೃಶ್ಯ ನೆನಪಾದಾಗಲೆಲ್ಲಾ ಯಾಕೋ ಕಣ್ಣು ಮಂಜಾಗುತ್ತದೆ.. ಎದೆ ಭಾರವಾಗುತ್ತದೆ. ತಂದ ಸಾಮಾನುಗಳನ್ನು ಅಂಗಡಿಯಲ್ಲಿ ಜೋಡಿಸಿ ‘ಗುರುದೇವಾ’ ಎನ್ನುತ್ತಾ ಕುಳಿತು ಬೆವರೊರೆಸಿಕೊಳ್ಳುತ್ತಿದ್ದರು. ಕೊಂಚ ದಣಿವಾರಿಸಿಕೊಂಡು ‘ಸರಿ, ನೀನು ಹೋಗೋ ಮರಿ, ಮನೇಗೆ ಹೋಗಿ ಓದಿಕೋ’ ಎಂದು ಹೇಳಿ ಕಳಿಸುತ್ತಿದ್ದರು.

‘ಬೆಂಗಳೂರಿಗೆ ಬಂದಮೇಲೆ ಕಿಟ್ಟಣ್ಣನ ಬದುಕೇ ಬದಲಾಗಿ ಹೋಯಿತು. ಅವರ ಮನೋಧರ್ಮದಲ್ಲೂ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಂಡವು’ ಎಂದು ರಾಜು (ಡಾ॥ಸಿ. ಎನ್. ರಾಮಚಂದ್ರನ್) ಜ್ಞಾಪಿಸಿಕೊಳ್ಳುತ್ತಾರೆ. ಆ ಕಾಲದಲ್ಲಿ , ಅಂದರೆ ಸ್ವಾತಂತ್ರ್ಯದ ಹೊಸ್ತಿಲಲ್ಲಿದ್ದಾಗ ಅಣ್ಣ ಬರೆದ ಒಂದು ಕಥೆಯ ಹಂದರ ಹೇಗಿತ್ತು ಎಂಬುದನ್ನು ನೆನಪಿಸಿಕೊಂಡು ರಾಜು ಹೇಳುತ್ತಾರೆ: ಸಂಪ್ರದಾಯಸ್ಥ ಶ್ರೀಮಂತ ಬ್ರಾಹ್ಮಣರ ಮನೆಯೊಂದರಲ್ಲಿ ಬೇರೆ ಜಾತಿಯ ಹೆಣ್ಣುಮಗಳೊಬ್ಬಳು ಕೆಲಸ ಮಾಡುತ್ತಿರುತ್ತಾಳೆ. ಆ ಮನೆಯ ಯಜಮಾನರ ಮಗ ಆ ಹುಡುಗಿಯನ್ನು ಪ್ರೀತಿಸಿ ಮನೆಯವರ ಕೆಂಗಣ್ಣಿಗೆ ತುತ್ತಾಗುತ್ತಾನೆ. ಮನೆಯವರೆಲ್ಲರ ವಿರೋಧದ ನಡುವೆಯೂ ‘ಜಾತಿ ಗೀತಿ ಎಲ್ಲವೂ ನಾವು ಕಟ್ಟಿಕೊಂಡಿರುವ ಗೋಡೆಗಳು… ಆ ಗೋಡೆಗಳನ್ನು ಕುಟ್ಟಿ ಕೆಡವಿ ನೆಲಸಮ ಮಾಡಬೇಕಾದ ಸಮಯ ಬಂದಿದೆ.. ಈಗ ಎಲ್ಲರೂ ಸ್ವತಂತ್ರರು, ಎಲ್ಲರೂ ಸಮಾನರು’ ಎಂದು ಘೋಷಿಸುತ್ತಾ ಮನೆಬಿಟ್ಟು ಹೋಗಿ ತಾನು ಪ್ರೀತಿಸಿದ ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾಗುತ್ತಾನೆ.

ಇಷ್ಟು ಪ್ರಗತಿಪರರಾಗಿ, ಪ್ರಖರ ವಿಚಾರವಾದಿಯಾಗಿ, ಸರ್ವಸಮತಾವಾದಿಯಾಗಿ, ಬಹ್ವಂಶ ನಾಸ್ತಿಕರಾಗಿ ಇದ್ದ ಅಣ್ಣ ಬರಬರುತ್ತಾ ನಿಧಾನವಾಗಿ ಮಂಕಾಗಿ ಬಿಡುತ್ತಾರೆ… ಸೋತು ಹೋದವರಂತೆ ಕಾಣುತ್ತಾರೆ… ಬಲವಾಗಿ ಧಾರ್ಮಿಕತೆಯನ್ನು ಅಪ್ಪಿಕೊಂಡು ಹೆಚ್ಚು ಹೆಚ್ಚು ಆಸ್ತಿಕರಾಗುತ್ತಾರೆ ಅಂದರೆ, ಸ್ವಾತಂತ್ರ್ಯೋತ್ತರದ ಪರಿಸ್ಥಿತಿಗಳಿಂದ ಅವರಿಗೆ ಯಾವ ಮಟ್ಟದ ಭ್ರಮನಿರಸನವಾಗಿದ್ದಿರಬಹುದು!.. ಕಂಡ ‘ಸುರಾಜ್ಯ’ದ ಕನಸುಗಳೆಲ್ಲಾ ಕಣ್ಣೆದುರಿಗೇ ಗೋಣು ಮುರಿದುಕೊಂಡು ನೆಲಕಚ್ಚಿ ಭ್ರಷ್ಟ ವ್ಯವಸ್ಥೆಯೊಂದು ಸ್ಥಾಪಿತವಾಗುತ್ತಿರುವಾಗ ಯಾವ ಮಟ್ಟದ ಹತಾಶೆ-ನಿರಾಸೆಗಳು ಅವರನ್ನು ಕಾಡಿದ್ದಿರಬಹುದು!! ಈ ಹತಾಶೆಗೆ ವೈಯಕ್ತಿಕ ಕಾರಣವೂ ಜತೆ ಸೇರಿ ಅವರ ಖಿನ್ನತೆಯನ್ನು ಮತ್ತಷ್ಟು ಗಾಢವಾಗಿಸಿದವು.

‘ಮೊದಲ ಪತ್ನಿಯ ಅಕಾಲ ಮರಣದ ನೋವು, ಮರಣಶಯ್ಯೆಯಲ್ಲಿ ತಾಯಿ ಇದ್ದಾಗ ಅವರ ಬಳಿ ಇರಲಾಗದೇ ಹೋದ ಸಂಕಟ, ಹಿಂದಿ ಪ್ರಚಾರಕರಾಗಿ ಕೊಣನೂರು-ಚಿಕ್ಕಮಗಳೂರು ಪ್ರದೇಶಗಳಲ್ಲಿ ಅಲೆದು, ಕೊಣನೂರಿನಲ್ಲಿ ಅರೆಕಾಲಿಕ ಹಿಂದಿ ಶಿಕ್ಷಕರಾಗಿ ಎಷ್ಟು ಸಮಯ ದುಡಿದರೂ ಒಳ ರಾಜಕೀಯಗಳಿಂದಾಗಿ ಪೂರ್ಣಕಾಲಿಕ ಶಿಕ್ಷಕ ವೃತ್ತಿ ದೊರೆಯದ ನಿರಾಸೆ, ಕೊಣನೂರು-ಬಸವಾಪಟ್ಟಣಗಳಲ್ಲಿ ಅಂಗಡಿ ಇಟ್ಟರೂ ವ್ಯಾಪಾರ ಊರ್ಜಿತವಾಗದ ದುರಾದೃಷ್ಟ, ಪಿತ್ರಾರ್ಜಿತವಾಗಿ ಬಂದ ತೋಟದ ಕಿರುಪಾಲನ್ನೂ ಮಾರಲೇ ಬೇಕಾಗಿ ಬಂದ ಅನಿವಾರ್ಯ ಸನ್ನಿವೇಶ, ಬೆಳೆದ-ಬೆಳೆಯುತ್ತಿರುವ ಐದು ಮಕ್ಕಳ ಜವಾಬ್ದಾರಿಯನ್ನು ಹೆಗಲಮೇಲೆ ಹೊತ್ತು ‘ಮುಂದೇನು’ ಎಂಬ ಪ್ರಶ್ನೆಗೆ ಯಾವ ಉತ್ತರವೂ ತೋಚದಂತಹ ಒಂದು ಅತಂತ್ರ ಸ್ಥಿತಿ… ಇದೆಲ್ಲವೂ ಒಟ್ಟುಸೇರಿಕೊಂಡು ಅಣ್ಣನನ್ನು ಅತಿ ಧಾರ್ಮಿಕತೆಯತ್ತ (ಮುಂದೆ ಸನ್ಯಾಸದತ್ತ) ದೂಡಿದವು ಎಂದು ತೋರುತ್ತದೆ… ಅವರ ವಿದ್ವತ್ತಿಗೆ, ಸೃಜನಶೀಲತೆಗೆ ತಕ್ಕ ಮನ್ನಣೆ ದೊರೆತಿದ್ದರೆ ಅವರ ವ್ಯಕ್ತಿತ್ವವೇ ಬೇರೆ ರೀತಿಯಾಗಿ ರೂಪುಗೊಳ್ಳುತ್ತಿತ್ತೇನೋ’ ಎಂದು ರಾಜು ಭಾರವಾದ ಮನಸ್ಸಿನಿಂದ ಹೇಳುತ್ತಾರೆ.

ಏನೇ ಆದರೂ ಆ ಒಂದು ಸಂಧಿಕಾಲದಲ್ಲಿ ಅಣ್ಣ ಸಂಸಾರದಿಂದ ವಿಮುಖರಾಗಲಿಲ್ಲ. ಬದಲಿಗೆ ಒಂದು ತಪಸ್ಸಿನ ಹಾಗೆ ತಮ್ಮ ಕುಟುಂಬವನ್ನು ಕಾಪಿಟ್ಟುಕೊಂಡು ಬಂದರು; ಮಕ್ಕಳ ವಿದ್ಯಾಭ್ಯಾಸವನ್ನೇ ತಮ್ಮ ಜೀವನದ ಪರಮ ಗುರಿಯಾಗಿಸಿಕೊಂಡರು. ಎಷ್ಟೇ ಧಾರ್ಮಿಕತೆಯತ್ತ ವಾಲಿದರೂ ಮಾನವತಾವಾದಿಯಾಗಿಯೇ ಉಳಿದುಕೊಂಡರು…

ಅಂತೂ ಅಣ್ಣ ಕಾಡುತ್ತಲೇ ಇರುತ್ತಾರೆ… ಅವರ ಅನುಪಸ್ಥಿತಿಯಲ್ಲಿ ಹೆಚ್ಚು ಹೆಚ್ಚು ಕಾಡುತ್ತಾರೆ. ಇರಲಿ. ನನ್ನ ಶಾಲೆಯ ಕಥೆಗೆ ಮರಳುತ್ತೇನೆ…

ಮಾಡೆಲ್ ಹೈಸ್ಕೂಲ್ ನಲ್ಲಿ ವರ್ಷಾಂತ್ಯದಲ್ಲಿ ಯಾವುದೋ ಒಂದು ವಿಶೇಷ ಸಂದರ್ಭಕ್ಕಾಗಿ ಬಹಳ ದೊಡ್ಡಮಟ್ಟದ ಸಮಾರಂಭವನ್ನೇ ಆಯೋಜಿಸಿದ್ದರು. ಒಂದು ವಾರ ಪೂರ್ತಿ ಸ್ಕೂಲ್ ನಲ್ಲಿ ಹಬ್ಬದ ವಾತಾವರಣ. ಅಂತರ ಶಾಲಾ ಮಟ್ಟದಲ್ಲಿ ಹತ್ತಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಣ್ಣಯ್ಯ ಭಾಷಣ ಸ್ಪರ್ಧೆಯಲ್ಲಿ, ನಾನು ಚಿತ್ರಗೀತೆ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ಕೊಟ್ಟಿದ್ದೆವು. ನಾನು ಹಾಡಲು ಆರಿಸಿಕೊಂಡಿದ್ದ ಗೀತೆ ‘ನಮ್ಮ ಊರು’ ಚಿತ್ರದ ‘ಹೋಗದಿರಿ ಸೋದರರೇ ಹೋಗದಿರೀ ಬಂಧುಗಳೇ’ ಎಂದು ಪ್ರಾರಂಭವಾಗುವ ಹಾಡು. ಮನೆಯವರೆಲ್ಲರ ಕಿವಿ ತೂತು ಬೀಳುವ ಹಾಗೆ ನೂರಾರು ಸಲ ಮನೆಯಲ್ಲಿ ಹಾಡಿ ಹಾಡಿ ಅಭ್ಯಾಸ ಮಾಡಿದ್ದೆ. ‘ತುಂಬಾ ಚೆನ್ನಾಗಿ ಬರ್ತಿದೆ..ˌಒಂದು ಪ್ರೈಜ಼್ ಗ್ಯಾರಂಟಿ’ ಎಂದು ಅಕ್ಕ-ಅಣ್ಣಯ್ಯ ಹುರಿದುಂಬಿಸಿದ್ದರು.

ಅದೇ ಸಮಯಕ್ಕೆ ಸರಿಯಾಗಿ ಚಿಕ್ಕಜ್ಜ ಶಾಮರಾಯರು ಕೊಣನೂರಿನಿಂದ ಬಂದಿದ್ದರು. ನ್ಯೂಸ್ ಪೇಪರ್ ಏಜಂಟ್ ಆಗಿದ್ದ ಅವರಿಗೆ ‘ಪ್ರಜಾವಾಣಿ’ ಆಫೀಸ್ ನಲ್ಲಿ ಏನೋ ಕೆಲಸವಿತ್ತಂತೆ. ಅಣ್ಣಯ್ಯನಿಗೆ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಬಂದು ಮನೆಯಲ್ಲಿ ಎಲ್ಲರಿಗೂ ತುಂಬಾ ಖುಷಿಯಾಗಿತ್ತು. ಆ ಖುಷಿಯನ್ನು ಎರಡರಷ್ಟಾಗಿಸುವ ಗುರುತರ ಜವಾಬ್ದಾರಿ ನನ್ನ ಹೆಗಲ ಮೇಲಿತ್ತು! ಸಂಜೆ ಚಿತ್ರಗೀತೆ ಗಾಯನ ಸ್ಪರ್ಧೆ. ನನಗೆ ಮಧ್ಯಾಹ್ನದಿಂದಲೇ ಎದೆಯಲ್ಲಿ ಭತ್ತ ಕುಟ್ಟಲು ಶುರುವಾಗಿ ಹೋಯಿತು.

ಹೊಟ್ಟೆಯಲ್ಲಿ ಗುಡುಗುಡುಗುಡು ಕಲ್ಲುಗಳುರುಳಿದಂತೆ ಸದ್ದು.. ಸಂಕಟ. ಹಾಡುವಾಗ ನನಗಾಗಬಹುದಾದ ಸಭಾ ಕಂಪನವನ್ನು ನೆನೆಸಿಕೊಂಡೇ ಕಂಪನ ಶುರುವಾಗಿ ಹೋಯಿತು! ಪ್ರೇಕ್ಷಾಗೃಹದಲ್ಲಿ ಚಿಕ್ಕಜ್ಜನ ಪಕ್ಕ ಕುಳಿತು ‘ದೇವರೇ..ದೇವರೇ..ಏನಾದರೂ ಕಾರಣಕ್ಕೆ ಇವತ್ತು ಈ ಸ್ಪರ್ಧೆ ರದ್ದಾಗೋ ಹಾಗೆ ಮಾಡಿಬಿಡಪ್ಪಾ’ ಎಂದು ಮನಸ್ಸಿನಲ್ಲೇ ಮೊರೆಯಿಡುತ್ತಿದ್ದೆ. ಅಷ್ಟರಲ್ಲೇ ಕಾದ ಸೀಸವನ್ನು ಕಿವಿಗೆ ಸುರಿದಂತೆ ನನ್ನ ಹೆಸರನ್ನು ಕೂಗಿ ಕರೆದದ್ದು ದಾಖಲಾಯಿತು. ಸೀದಾ ಸ್ಟೇಜ್ ಮೇಲೆ ಹೋಗಿ ನಿಂತೆ. ನಮ್ಮ ಕ್ಲಾಸ್ ನ ಹುಡುಗರು ಚಪ್ಪಾಳೆ ಬೇರೆ ತಟ್ಟಿ ಸ್ವಾಗತಿಸಿದರು! ಸಭಾಂಗಣವಂತೂ ಕಿಕ್ಕಿರಿದು ತುಂಬಿಹೋಗಿತ್ತು.

ಹೆಣ್ಣುಮಕ್ಕಳೆಲ್ಲಾ ಮುಂದೆಯೇ ಆಸೀನರಾಗಿಬಿಟ್ಟಿದ್ದರು. ನಾನು ಸ್ಟೇಜ್ ಮೇಲೆ ಹೋದವನೇ ಸಭಾಂಗಣದ ಛಾವಣಿಯತ್ತ ನೋಡಿ ಒಂದು ಭಾಗದಲ್ಲಿ ದೃಷ್ಟಿಯನ್ನು ಕೇಂದ್ರೀಕರಿಸಿದೆ. ಛೇ!! ಈ ಕೈಕಾಲುಗಳಿಗೂ ಬೇರೆ ಕೆಲಸವಿಲ್ಲ.. ಸುಮ್ಮನೇ ನಡುಗುತ್ತಿರುತ್ತವೆ! ಏನಾದರೂ ಆಗಲಿ ಎಂದು ‘ಹೋಗದಿರೀ ಸೋದರರೇ… ಹೋಗದಿರೀ ಬಂಧುಗಳೇ’ ಎಂದುಹಾಡಲು ಶುರುವಿಟ್ಟುಕೊಂಡೆ. ಹಾಡುತ್ತಿದ್ದ ನನ್ನ ಧ್ವನಿಗಿಂತ ನಗಾರಿಯ ಹಾಗೆ ಬಡಿದುಕೊಳ್ಳುತ್ತಿದ್ದ ನನ್ನ ಎದೆ ಬಡಿತವೇ ತಾಳದ ಹಾಗೆ ಗುಡುಗುತ್ತಿತ್ತು. ಪಲ್ಲವಿ ಆಯಿತು.. ಮೊದಲ ಚರಣ ಮುಗಿಯುತ್ತಾ ಬಂದಿತು… ಅಷ್ಟರಲ್ಲಿ ಧ್ವನಿಯೂ ನಡುಗತೊಡಗಿ ಪೂರ್ಣಪ್ರ ಮಾಣದ ಕಂಪನರಾಯನಾಗಿ ಹೋಗಿದ್ದೆ.

ಯಾಕೋ ಇನ್ನು ಮುಂದುವರಿಸುವುದು ಅಸಾಧ್ಯ ಅನ್ನಿಸಿತು. ಇನ್ನೊಂದು ಕ್ಷಣ ಅಲ್ಲಿದ್ದರೂ ಕುಸಿದೇ ಬಿಡುತ್ತೇನೆ ಅನ್ನಿಸಿ ಹೋಗದಿರೀ ಸೋದರರೇ ಎಂದು ಹಾಡುತ್ತಲೇ ಸ್ಟೇಜ್ ನಿಂದ ಕೆಳಗೆ ಧುಮುಕಿ ಓಡಿಹೋಗಿ ಚಿಕ್ಕಜ್ಜನ ಪಕ್ಕ ಕುಳಿತುಬಿಟ್ಟೆ. ‘ಥೂ..ಇದು ಯಾವ ಕರ್ಮ… ಇನ್ನು ಯಾವತ್ತೂ ಹಾಡಿನ ಸ್ಪರ್ಧೇಗೆ.. ಹಾಡು ಯಾಕೆ, ಯಾವ ಸ್ಪರ್ಧೇಗೂ ಹೆಸರು ಕೊಡೊಲ್ಲ’ ಎಂದು ತೀರ್ಮಾನಿಸಿಬಿಟ್ಟೆ. ಪಾಪ ಚಿಕ್ಕಜ್ಜ, ‘ಚೆನ್ನಾಗಿ ಹೇಳಿದೆ ಕಣೋ ಮರಿ.. ಪ್ರೈಜ಼್ ಬಂದರೂ ಬರಬಹುದು’ ಎಂದು ಸಮಾಧಾನ ಮಾಡಿದರು. ಅದೇವೇಳೆಗೆ ಆ ಕಡೆ ಬಂದ ಉಷಾ ಮೇಡಂ, ‘ಏನೋ ಪ್ರಭೂ, ಹೋಗದಿರೀ ಹೋಗದಿರೀ ಅಂತ ಆ ಪಾಟಿ ಅಲವತ್ತುಕೊಂಡು ನೀನೇ ಸ್ಟೇಜ್ ಬಿಟ್ಟು ಹೋಗಿಬಿಟ್ಟೆಯಲ್ಲೋ.. ಅದೂ ಪೂರ್ತಿ ಹಾಡೂ ಹೇಳದೇನೇ’ ಎಂದು ತಮಾಷೆ ಮಾಡಿದಾಗ ಅಳುವೇ ಬಂದ ಹಾಗಾಯಿತು. ಮೇಡಂ ಪಕ್ಕದಲ್ಲಿದ್ದ ನಮ್ಮ ತರಗತಿಯ ಪದ್ಮಾ— ಜಲಜಾ ಕಿಸಕ್ಕಂತ ನಕ್ಕಾಗ ಕಣ್ಣೀರು ಧುಮುಕಿಯೇ ಬಿಟ್ಟಿತು. ಯಾವ ಸ್ಪರ್ಧೆಗೂ ಸೇರಲೇಬಾರದು ಎನ್ನುವ ನನ್ನ ನಿರ್ಧಾರ ಇನ್ನಷ್ಟು ಗಟ್ಟಿಯಾಯಿತು.

ನಾಟಕ ಸ್ಪರ್ಧೆಗೆ ಬಂದಿದ್ದ ಐದಾರು ನಾಟಕಗಳಲ್ಲಿ ನನಗೆ ತುಂಬಾ ಹಿಡಿಸಿದ್ದು ‘ಅಂಗುಲಿಮಾಲಾ’. ಈ ಮೊದಲು ಬಸವಾಪಟ್ಟಣದಲ್ಲಿ ಅಲ್ಲಿನ ಸ್ಕೂಲ್ ಅಧ್ಯಾಪಕರು ಸೇರಿ ಅಭಿನಯಿಸಿದ್ದ ‘ನಂಜಿನ ನಾಲಿಗೆ’ ಎನ್ನುವ ನಾಟಕ ನನ್ನನ್ನು ಬಹುವಾಗಿ ಸೆಳೆದಿತ್ತು. ಮುಖ್ಯ ಪಾತ್ರಧಾರಿಗಳ ಅಭಿನಯ ತುಂಬಾ ಸೊಗಸಾಗಿತ್ತು. ಆದರೆ ಅಂಗುಲಿಮಾಲಾ ನಾಟಕ ಅನೇಕ ಕಾರಣಗಳಿಗೆ ಗಮನಾರ್ಹ ನಾಟಕವಾಯಿತು.

ಇದ್ದ ಇತಿಮಿತಿಗಳಲ್ಲೇ ಕಲಾವಿದರು ಮಾಡಿಕೊಂಡಿದ್ದ ಸೊಗಸಾದ ರಂಗಸಜ್ಜಿಕೆ, ಬಣ್ಣಬಣ್ಣದ ದೀಪಗಳನ್ನು ಸಂದರ್ಭಕ್ಕೆ ತಕ್ಕಂತೆ ಬೆಳಗಿಸಿ ಆರಿಸುತ್ತಿದ್ದ ಚಾಕಚಕ್ಯತೆ, ಸಂದರ್ಭೋಚಿತ ಹಿನ್ನೆಲೆ ಸಂಗೀತ ಹಾಗೂ ಪಾತ್ರಧಾರಿಗಳ ಉತ್ತಮ ಅಭಿನಯಗಳಿಂದಾಗಿ ಅಂಗುಲಿಮಾಲಾ ನಾಟಕ ತುಂಬಾ ಕಳೆಗಟ್ಟಿತು. ಇದು ನಾನು ನೋಡಿದ ಮೊದಲ ‘ಸಂಪೂರ್ಣ ನಾಟಕ’ ಎನ್ನಬಹುದೇನೋ. ಒಂದು ಹೊಸ, ಅನೂಹ್ಯ ಮಾಯಾಲೋಕದ ಮಿಂಚುನೋಟವೊಂದನ್ನು ನೀಡಿ, ಮುಂದೆ ನನ್ನ ಕನಸುಗಳು ಗರಿಗೆದರಲು ಅನುವು ಮಾಡಿಕೊಟ್ಟಿದ್ದು- ‘ಅಂಗುಲಿಮಾಲಾ’ ನಾಟಕ.

‍ಲೇಖಕರು Admin

July 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: