ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.
ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 113
——————
ಈಟಿವಿಗಾಗಿ ನಾನು ನಿರ್ದೇಶಿಸಿದ ಒಂದು ಟೆಲಿಚಿತ್ರ—’ಮುಕ್ತ’. ಇದು ದೇ.ಬ. ಶೇಷ ಮಜುಂದಾರ ಅವರ ಮೂಲ ಬಂಗಾಳಿ ಭಾಷೆಯಲ್ಲಿ ರಚಿತವಾಗಿರುವ ‘ತಾಮ್ರಪತ್ರ’ ನಾಟಕದ ಟೆಲಿ ಚಿತ್ರ ರೂಪಾಂತರ. ದೆಹಲಿಯ ಶಾ. ಬಾಲುರಾವ್ ಅವರು ಈ ಮೊದಲೇ ‘ತಾಮ್ರಪತ್ರ’ ನಾಟಕವನ್ನು ಕನ್ನಡಕ್ಕೆ ತಂದು ಅದರ ಸಾಕಷ್ಟು ರಂಗ ಪ್ರದರ್ಶನಗಳಾಗಿದ್ದವು. ದೆಹಲಿಯ ನಾಟಕಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದ ಹಾಗೂ ಇತ್ತೀಚೆಗಷ್ಟೇ ನಮ್ಮನ್ನಗಲಿದ ಗೋಪಾಲಕೃಷ್ಣ ನಾಯರಿ ಅವರು ಬಹಳ ಸೊಗಸಾಗಿ ‘ತಾಮ್ರಪತ್ರ’ ನಾಟಕವನ್ನು ರಂಗದ ಮೇಲೆ ತಂದಿದ್ದರು.
ನನಗೆ ನೆನಪಿರುವ ಮಟ್ಟಿಗೆ ‘ಮುಕ್ತ’ ಟೆಲಿಚಿತ್ರದ ಅವತರಣಿಕೆಯನ್ನು ನಮಗೆ ಸಿದ್ಧಪಡಿಸಿಕೊಟ್ಟವರು ಪ್ರಸಿದ್ಧ ನಾಟಕಕಾರ ಗೋಪಾಲ ವಾಜಪೇಯಿ ಅವರು. ದತ್ತಣ್ಣ, ಅಕ್ಕ ನಳಿನಿ ಮೂರ್ತಿ, ರಾಧಿಕಾ ಪ್ರಭು (ನನ್ನ ಮಗಳು) ಮುಂತಾದವರು ಅಭಿನಯಿಸಿದ್ದ ಈ ನಾಟಕವನ್ನು ರಾಮೋಜಿರಾವ್ ಸ್ಟುಡಿಯೋದಲ್ಲಿಯೇ ಚಿತ್ರೀಕರಿಸಿದ್ದೆವು. ಗಣರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಈ ‘ಮುಕ್ತ’ ಟೆಲಿಚಿತ್ರವನ್ನು ಪ್ರಸಾರ ಮಾಡಲಾಗಿತ್ತು. ಅದೇಕೋ..ಈ ‘ಮುಕ್ತ’ ಟೆಲಿಚಿತ್ರದ ಹೆಚ್ಚಿನ ವಿವರಗಳು ನೆನಪಿನಿಂದ ಜಾರಿಹೋಗಿವೆ. ಸುಮಾರು ನೂರು ನಿಮಿಷಗಳ ಅವಧಿಯ ಈ ಟೆಲಿಚಿತ್ರ ಪ್ರಸಾರವಾದಾಗ ವೀಕ್ಷಕರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿತ್ತು.
ಅನಂತರ ಈಟಿವಿಗಾಗಿ ನಾನು ನಿರ್ದೇಶಿಸಿದ ಸಾಪ್ತಾಹಿಕ ಧಾರಾವಾಹಿ ‘ಅಂತರಗಂಗೆ’. ಈ ಧಾರಾವಾಹಿಯ ಕಥೆ—ಚಿತ್ರಕಥೆಗಳನ್ನು ನಾನೇ ಸಿದ್ಧಪಡಿಸಿದ್ದೆ. ಕೆ.ಎಸ್. ಶ್ರೀಧರ್ ಅಲಿಯಾಸ್ ಚಿದು, ವಿನಯಾ ಪ್ರಸಾದ್, ವಿದ್ಯಾ ಮೂರ್ತಿ, ಬಾಬು ಹಿರಣ್ಣಯ್ಯ, ಶ್ರೀನಿವಾಸ ಮೇಷ್ಟ್ರು, ವಿಜಯಕುಮಾರ ಜಿತೂರಿ, ಪ್ರಕಾಶ್.. ಇವರುಗಳ ಜತೆಗೆ ಬಾಲ ಕಲಾವಿದರಾದ ನೇಹಾ, ಮಗಳು ರಾಧಿಕಾ ಪ್ರಭು ಹಾಗೂ ಮಗ ಅನಿರುದ್ಧ ಪ್ರಭು—ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.
ಪ್ರಖ್ಯಾತ ಹೃದಯ ತಜ್ಞನಾಗಿದ್ದ ಅವಿನಾಶ್ ನ ಪತ್ನಿ ಶಾಶ್ವತಿ ಹೃದಯ ಸಂಬಂಧಿ ಕಾಯಿಲೆಯಿಂದಾಗಿಯೇ ಅಸುನೀಗಿರುತ್ತಾಳೆ. ಇಬ್ಬರು ಚಿಕ್ಕ ಮಕ್ಕಳನ್ನು ಬಿಟ್ಟು ಹೊರಟುಹೋದ ಮಡದಿಯ ಅಗಲಿಕೆಯ ನೋವನ್ನು ಸಹಿಸಲಾರದೇ ಕುಗ್ಗಿಹೋಗಿರುತ್ತಾನೆ ಅವಿನಾಶ್. ಪ್ರಸಿದ್ಧ ಪತ್ರಕರ್ತೆ ಮೇಘಾ ಒಂದು ವಿಶೇಷ ಸಂದರ್ಭಕ್ಕಾಗಿ ಡಾ॥ಅವಿನಾಶನನ್ನು ಸಂದರ್ಶಿಸಲು ಬರುತ್ತಾಳೆ. ಒಬ್ಬ ಮಗಳ ತಾಯಿಯಾದ ಈ ಪತ್ರಕರ್ತೆ ಧೂರ್ತ ಗಂಡನ ಜೊತೆ ಇರಲಾಗದೇ ಬಿಟ್ಟುಬಂದಿರುತ್ತಾಳೆ. ಸಂದರ್ಶನವೇ ನೆಪವಾಗಿ ವೈದ್ಯ ಹಾಗೂ ಪತ್ರಕರ್ತೆಯ ನಡುವೆ ಮೊಳಕೆಯೊಡೆದ ಸ್ನೇಹ ನಿಧಾನವಾಗಿ ಪ್ರೀತಿಯಾಗಿ ಪರಿವರ್ತನೆಗೊಂಡು ಅವರಿಬ್ಬರೂ ಬಾಳಸಂಗಾತಿಗಳಾಗಲು ತೀರ್ಮಾನಿಸುತ್ತಾರೆ. ಆ ನಂತರದ ಅವರ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು.. ಹೊಸ ಸಂದರ್ಭಕ್ಕೆ—ಹೊಸ ಸಂಬಂಧಗಳಿಗೆ ಹೊಂದಿಕೊಳ್ಳಲು ಪರದಾಡುವ ಮಕ್ಕಳ ಸೂಕ್ಷ್ಮ ಮನಸ್ಥಿತಿ.. ಅಗಲಿದ ಪತ್ನಿಯ ನೆನಪಿನಿಂದ ಹೊರಬರಲು ಹೆಣಗುವ ವೈದ್ಯನ ತಲ್ಲಣಗಳು.. ಎಲ್ಲವನ್ನೂ ಒಂದು ಸೂತ್ರಕ್ಕೆ ತಂದು ಜೋಡಿಸಲು ಯತ್ನಿಸುವ ಪತ್ರಕರ್ತೆಯ ಸಂಘರ್ಷ… ಈ ಎಲ್ಲ ಸೂಕ್ಷ್ಮ ಮನೋವ್ಯಾಪಾರಗಳ ಸುತ್ತ ಚಿತ್ರಕಥೆಯನ್ನು ಹೆಣೆಯುವ ಪ್ರಯತ್ನ ಮಾಡಿದ್ದೆ.
ನನಗೆ ಬಹಳ ತೃಪ್ತಿಯನ್ನು ತಂದುಕೊಟ್ಟ ಧಾರಾವಾಹಿ ಈ ‘ಅಂತರಗಂಗೆ’. ಚಿದು, ವಿನಯಾ ಪ್ರಸಾದ್ ಹಾಗೂ ವಿದ್ಯಾಮೂರ್ತಿಯವರು ಅವರು ಅತ್ಯಂತ ಮನೋಜ್ಞವಾಗಿ ಅಭಿನಯಿಸಿದ್ದರು. ಬಾಲ ಕಲಾವಿದರಾಗಿ ನೇಹಾ, ರಾಧಿಕಾ ಹಾಗೂ ಅನಿರುದ್ಧರದೂ ಸಹಾ ಸಹಜ ಭಾವಪೂರ್ಣ ಅಭಿನಯ. ಈ ಧಾರಾವಾಹಿಗಾಗಿ ಬಾಳಗೆಳತಿ ರಂಜನಿಯೇ “ಅಂತರಗಂಗೆ..ಅಂತರಗಂಗೆ” ಎಂದು ಆರಂಭವಾಗುವ ಶೀರ್ಷಿಕೆ ಗೀತೆಯನ್ನು ಬರೆದುಕೊಟ್ಟಿದ್ದಳು. ‘ಆಸರೆ’ ಧಾರಾವಾಹಿಯ ದಿನಗಳಿಂದಲೇ ನಮ್ಮ ಆಪ್ತ ಬಳಗಕ್ಕೆ ಸೇರಿಹೋಗಿದ್ದ ಪ್ರವೀಣ್ ಡಿ ರಾವ್ ಸೊಗಸಾಗಿ ರಾಗಸಂಯೋಜನೆ ಮಾಡಿದ್ದರು. ಎಂ ಡಿ ಪಲ್ಲವಿ ಹಾಗೂ ಸ್ನೇಹಜಾ ಪ್ರವೀಣ್ ಅವರ ಯುಗಳ ಗಾಯನದಲ್ಲಿ ಈ ಗೀತೆ ಸುಶ್ರಾವ್ಯವಾಗಿ ಮೂಡಿಬಂದಿತ್ತು.
‘ಅಂತರಗಂಗೆ’ ಯ ನಂತರ ಈಟಿವಿಗಾಗಿ ನಾನು ಮಾಡಿದ ದೈನಂದಿನ ಧಾರಾವಾಹಿ “ಸಂಜೆ ಮಲ್ಲಿಗೆ”. ಇದು ಬೆಂಗಾಲಿ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಒಂದು ಅತ್ಯಂತ ಜನಪ್ರಿಯ ಬೆಂಗಾಲಿ ಧಾರಾವಾಹಿಯ ಮರು ನಿರ್ಮಾಣ—ಕನ್ನಡದಲ್ಲಿ. ಈ ಬಾರಿ ನಿರ್ದೇಶನ—ನಿರ್ಮಾಣಗಳೆರಡರ ಜವಾಬ್ದಾರಿಯನ್ನೂ ನಾನೇ ವಹಿಸಿಕೊಂಡಿದ್ದೆ. ಸಹಾಯಕ ನಿರ್ದೇಶಕರಾಗಿ ಪರಮಾಪ್ತ ಬಲಗೈ ಬಂಟರಾಗಿದ್ದ ಅಶೋಕ್ ಜೈನ್ ಹಾಗೂ ತಿಮ್ಮಣ್ಣ ಗೌಡರಿದ್ದರು. ನಿರ್ಮಾಣ ವ್ಯವಸ್ಥೆ ಹಾಗೂ ಪ್ರಸಾಧನದ ಜವಾಬ್ದಾರಿ ಎಂದಿನಂತೆ ಗೆಳೆಯ ರಮೇಶ್ ಬಾಬು ಅವರ ಹೆಗಲೇರಿತ್ತು. ಊಟೋಪಚಾರ ಹಾಗೂ ಇನ್ನಿತರ ಎಲ್ಲಾ ಅಗತ್ಯಗಳ ಪೂರೈಕೆಯ ಹೊಣೆಯನ್ನು ಮತ್ತೊಬ್ಬ ಬಂಟ ಪ್ರಕಾಶ ವಹಿಸಿಕೊಂಡಿದ್ದ. ಆರ್ಥಿಕ ಮುಗ್ಗಟ್ಟಿನ ಸಂದರ್ಭಗಳಲ್ಲಿ ಕೈಹಿಡಿದು ಮುನ್ನಡೆಸಲು ನಳಿನಿ ಅಕ್ಕ—ಮೂರ್ತಿ ಭಾವ ಹಾಗೂ ಭಾವನಂಟ ಜಗದೀಶ್ ಬಾಬು ಅವರ ಸಹಾಯ ಹಸ್ತ ಎಂದಿನಂತೆ ಚಾಚಿಯೇ ಇದ್ದಿತು!
ಈಟಿವಿಯವರು ಮೂಲ ಬೆಂಗಾಲಿ ಧಾರಾವಾಹಿಯ ಕಂತುಗಳ ಟೇಪ್ ಗಳನ್ನು ನಮಗೆ ಕಳಿಸಿಬಿಡುತ್ತಿದ್ದರು. ಅವುಗಳನ್ನು ನಾವು ಕನ್ನಡಕ್ಕೆ ಅಳವಡಿಸಿಕೊಂಡು ಚಿತ್ರಕಥೆ ಸಿದ್ಧಪಡಿಸಿಕೊಂಡು ಚಿತ್ರೀಕರಣ ಮಾಡಬೇಕಿತ್ತು. ಈ ಕೆಲಸದಲ್ಲಿ ನಮಗೆ ನೆರವಾದವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೂರ್ತಿಭಾವನ ಶಿಷ್ಯರಾಗಿದ್ದ ಇಬ್ಬರು ಬೆಂಗಾಲಿ ಹುಡುಗರು. ಅವರು ಇಂಗ್ಲೀಷ್ ಗೆ ಅನುವಾದಿಸಿಕೊಡುತ್ತಿದ್ದ ಸಂಭಾಷಣಾ ಭಾಗಗಳನ್ನು ನಾನು ಹಾಗೂ ರಂಜನಿ ಇಬ್ಬರೂ ಸೇರಿಕೊಂಡು ಸೂಕ್ತ ಬದಲಾವಣೆಗಳೊಂದಿಗೆ ಕನ್ನಡಕ್ಕೆ ಅಳವಡಿಸಿಕೊಳ್ಳುತ್ತಿದ್ದೆವು.
ಅಬಲಾಶ್ರಮವೊಂದರಲ್ಲಿ ಬಾಳಸಂಜೆಯ ದಿನಗಳನ್ನು ದೂಡುತ್ತಿದ್ದ ಹಲವು ತಾಯಂದಿರ ಬದುಕಿನ ಸುತ್ತ ಹೆಣೆದ ಕಥಾನಕ—”ಸಂಜೆಮಲ್ಲಿಗೆ”. ತಮ್ಮ ಕೌಟುಂಬಿಕ ಜವಾಬ್ದಾರಿ—ಕರ್ತವ್ಯಗಳೆಲ್ಲವನ್ನೂ ಅತ್ಯಂತ ಪ್ರೀತಿಯಿಂದ, ನಿಸ್ಪೃಹತೆಯಿಂದ ಪೂರೈಸಿ ಇಳಿಗಾಲದಲ್ಲಿ ಹಲವು ಹತ್ತು ಕಾರಣಗಳಿಗೆ ಕುಟುಂಬದವರ ಪ್ರೀತ್ಯಾದರಗಳಿಂದಲೇ ವಂಚಿತರಾಗಿ ಯಾವ ಆಸೆ ಭರವಸೆಗಳೂ ಇಲ್ಲದ ನೀರಸವಾಗಿ ಬದುಕು ಸಾಗಿಸುವ ಹಲ ತಾಯಂದಿರ ಹೃದಯಸ್ಪರ್ಶಿ ಕಥಾನಕ “ಸಂಜೆ ಮಲ್ಲಿಗೆ”.
ಈಟಿವಿಯವರ ಆದೇಶದಂತೆ ಪ್ರಮುಖ ತಾರೆಯರನ್ನೇ ಮುಖ್ಯ ಪಾತ್ರಗಳನ್ನು ನಿರ್ವಹಿಸಲು ಆರಿಸಿಕೊಳ್ಳಲಾಗಿತ್ತು. ಪ್ರಸಿದ್ಧ ಚಲನಚಿತ್ರ ತಾರೆಯರಾದ ಜಯಂತಿ, ಭಾರತಿ ವಿಷ್ಣುವರ್ಧನ್ , ಬಿ.ವಿ.ರಾಧಾ, ಬಿ.ಜಯಾ, ಎಂ.ಎನ್.ಲಕ್ಷ್ಮೀದೇವಿ, ಯಮುನಾ ಮೂರ್ತಿ, ಆರ್.ಟಿ.ರಮಾ, ನಳಿನಿ ಮೂರ್ತಿ, ಕಿಶೋರಿ ಬಲ್ಲಾಳ್ , ವೈಜಯಂತಿ ಕಾಶಿ— ಇವರುಗಳು ಪ್ರಮುಖ ಪಾತ್ರಗಳನ್ನು ನಿರ್ವಹಿಸುವವರಿದ್ದರು. ಇವರ ಜತೆಗೆ ವೆಂಕಿ, ಕಲಾಗಂಗೋತ್ರಿ ಕಿಟ್ಟಿ, ನಟರಂಗ ಶಶಿ ಕುಮಾರ್, ಮಂಜುನಾಥ ಹೆಗಡೆ, ವಿಕ್ರಂ ಸೂರಿ, ಪ್ರದೀಪ್ , ಸುಂದರಶ್ರೀ, ಸಾರಿಕಾ ರಾಜೇ ಅರಸ್, ಮರೀನಾ ತಾರಾ, ದಮಯಂತಿ ನಾಗರಾಜ್ ಮುಂತಾದವರು ಇತರ ಮುಖ್ಯ ಪಾತ್ರಗಳಲ್ಲಿದ್ದರು.
‘ಸರೋಜಿನಿ’ ಧಾರಾವಾಹಿಯಿಂದ ಪರಿಚಿತನಾಗಿದ್ದ ಸುರೇಂದ್ರನಾಥ್ ಬೇಗೂರ್ ಇಲ್ಲಿಯೂ ಛಾಯಾಗ್ರಹಣದ ಹೊಣೆ ಹೊತ್ತಿದ್ದ. “ಹೂಗಳು ಸಂಜೆ ಮಲ್ಲಿಗೆ ಹೂಗಳು” ಎಂದೇ ಆರಂಭವಾಗುವ ಅತ್ಯಂತ ಅರ್ಥಪೂರ್ಣ ಶೀರ್ಷಿಕೆಗೀತೆಯನ್ನು ರಂಜನಿಯೇ ಬರೆದುಕೊಟ್ಟಿದ್ದಳು.ಎಂದಿನಂತೆ ಆಪ್ತ ಮಿತ್ರ ಪ್ರವೀಣ್ ಡಿ ರಾವ್ ಅದ್ಭುತವಾದ ರೀತಿಯಲ್ಲಿ ಸ್ವರಸಂಯೋಜನೆ ಮಾಡಿಕೊಟ್ಟಿದ್ದರು. ಅತ್ಯಂತ ಸುಶ್ರಾವ್ಯವಾಗಿ ಮನಮುಟ್ಟುವಂತೆ ಈ ಗೀತೆಯನ್ನು ಹಾಡಿದ್ದವರು ಎಂ.ಡಿ.ಪಲ್ಲವಿ ಹಾಗೂ ಸ್ನೇಹಜಾ ಪ್ರವೀಣ್. ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡು ಒಂದು ಸುಮುಹೂರ್ತದಲ್ಲಿ ‘ಸಂಜೆ ಮಲ್ಲಿಗೆ’ಯ ಚಿತ್ರೀಕರಣ ಆರಂಭಿಸಿಯೇ ಬಿಟ್ಟೆವು. ನಾಲ್ಕಾರು ದಿನಗಳ ಚಿತ್ರೀಕರಣ ಉತ್ತರ ಹಳ್ಳಿಯ ಸಮೀಪದ ಕಲಾಕುಟೀರವೆಂಬ ಸ್ಥಳದಲ್ಲಿ ಸುಸೂತ್ರವಾಗಿ ನಡೆಯಿತು. ಕಲಾಕುಟೀರದ ಹೊರ ಆವರಣದಲ್ಲಿ ಒಂದು ಉದ್ಯಾನವನವೂ ಕಲ್ಲುಮಂಟಪವೂ ಬಗೆಬಗೆಯ ವಿನ್ಯಾಸದ ಬಂಡೆಕಲ್ಲುಗಳೂ ಇದ್ದು ಆಶ್ರಮದ ವಾತಾವರಣವನ್ನು ಬಿಂಬಿಸಲು ನೆರವಾಗುವಂತಿದ್ದವು.
ಕಲಾಕುಟೀರದ ಮನೋಹರ ವಾತಾವರಣದಲ್ಲಿ ನಾಲ್ಕಾರು ದಿನಗಳ ಚಿತ್ರೀಕರಣ ತುಂಬಾ ಸೊಗಸಾಗಿ ಯಾವ ಎಡರು ತೊಡರುಗಳೂ ಇಲ್ಲದೆ ಸಾಂಗವಾಗಿ ನೆರವೇರಿತು. ನಮ್ಮ ಉತ್ಸಾಹ—ಸಂಭ್ರಮಗಳಿಗಂತೂ ಪಾರವೇ ಇಲ್ಲ! ದೊಡ್ಡ ದೊಡ್ಡ ತಾರೆಯರು ಅಭಿನಯಿಸುತ್ತಿದ್ದರೂ ಯಾವುದೇ ಕಿರಿಪಿರಿಗಳಿಲ್ಲದೆ ಚಿತ್ರೀಕರಣ ಸುಗಮವಾಗಿ ಸಾಗುತ್ತಿದೆ. ಪ್ರಥಮಬಾರಿಗೆ ನಿರ್ಮಾಣದ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ನನಗಂತೂ ಪ್ರಾರಂಭದಲ್ಲಿದ್ದ ಅಳುಕು ಆತಂಕಗಳೆಲ್ಲಾ ದೂರವಾಗಿ ನಿರಾಳವಾಗಿ ಉಸಿರಾಡುವಂತಾಯಿತು. ಅಷ್ಟರಲ್ಲೇ, ‘ಅಷ್ಟು ಖುಷಿ ಪಡಬೇಡವೋ ತಮ್ಮಾ.. ಖುಷಿಯ ಬಲೂನಿಗೆ ಸೂಜಿ ಚುಚ್ಚಲು ನಾನಿದ್ದೇನೆ’ ಎಂದು ಸಾರುವಂತೆ ಬಿತ್ತು ನೋಡಿ ಮೊದಲ ಪೆಟ್ಟು! ಏನಾಯಿತೆಂದು ವಿವರಿಸುತ್ತೇನೆ:
ಅಂದು ಚಿತ್ರೀಕರಣ ಮುಗಿಸಿ ಮರುದಿನದ ದೃಶ್ಯಗಳನ್ನು ಪರಿಷ್ಕರಿಸಿಕೊಳ್ಳುತ್ತಾ ಮನೆಯಲ್ಲಿ ಕುಳಿತಿದ್ದೆ. ಮರುದಿನ ಜಯಂತಿ ಹಾಗೂ ಭಾರತಿಯವರ ಕೆಲ ದೃಶ್ಯಗಳನ್ನು ಚಿತ್ರೀಕರಿಸುವುದೆಂದು ನಿಗದಿಯಾಗಿತ್ತು. ಜಯಂತಿಯವರು ಪ್ರಾರಂಭದ ಎರಡು ದಿನಗಳು ನಮ್ಮೊಟ್ಟಿಗೆ ಇದ್ದು ನಂತರ ಯಾವುದೋ ಚಿತ್ರದ ಶೂಟಿಂಗ್ ಗಾಗಿ ಉತ್ತರ ಭಾರತದ ಕಡೆಗೆ ಹೋಗಿದ್ದರು. ಅಂದು ರಾತ್ರಿ ಅವರು ಮರಳಿ ಬರುವುದೆಂದು ತೀರ್ಮಾನವಾಗಿದ್ದರಿಂದ ಮರುದಿನ ಅವರ ದೃಶ್ಯಗಳನ್ನು ಚಿತ್ರೀಕರಣಕ್ಕಾಗಿ ಸಿದ್ಧಪಡಿಸಿಕೊಂಡಿದ್ದೆ. ರಾತ್ರಿ ಹತ್ತರ ಸಮಯ. ಫೋನ್ ರಿಂಗಣಿಸಿತು. ಕರೆಯನ್ನು ಸ್ವೀಕರಿಸಿ ‘ಹಲೋ’ ಎಂದೆ. ಅತ್ತಲಿಂದ ಧ್ವನಿ: ‘ನಮಸ್ಕಾರ ಸರ್.. ನಾನು ಕೃಷ್ಣಕುಮಾರ್ ಅಂತ.. ಜಯಂತಿ ಅವರ ಮಗ.. ಅಮ್ಮ ಶೂಟಿಂಗ್ ಗೆ ಅಂತ ನಾರ್ತ್ ಸೈಡ್ ಹೋಗಿದಾರಲ್ಲಾ, ಅವರು ಇವತ್ತು ಅಂದ್ರೆ ಈಗ ರಾತ್ರಿ ಫ್ಲೈಟ್ ಗೆ ಬರಬೇಕಾಗಿತ್ತು. ಆದರೆ ಅಲ್ಲೇನೋ ಭಾರೀ ದೊಡ್ಡ ಪ್ರಾಬ್ಲಂ ಆಗಿ ಶೂಟಿಂಗ್ ನಡೆದೇ ಇಲ್ಲವಂತೆ. ವಾಸ್ತವವಾಗಿ ನಾಳೆಯಿಂದ ಶೂಟಿಂಗ್ ಶುರುವಾಗ್ತಿದೆಯಂತೆ.. ಹಾಗಾಗಿ ಅವರು ವಾಪಸ್ ಬರೋದು ಇನ್ನೂ ಐದಾರು ದಿನ ಆಗಬಹುದು.. ಅಲ್ಲೀವರೆಗೂ ಸ್ವಲ್ಪ ಅಡ್ಜಸ್ಟ್ ಮಾಡಿಕೋಬೇಕಂತೆ.”
ಇಷ್ಟು ವಿವರಗಳನ್ನು ಕೇಳುತ್ತಿದ್ದಂತೆ ಏರಿದ್ದ ಉತ್ಸಾಹವೆಲ್ಲಾ ಅಷ್ಟೇ ವೇಗವಾಗಿ ಜರ್ರೆಂದು ಇಳಿದುಹೋಯಿತು.”ಆಯ್ತು ಸರ್..thanks for the information” ಎಂದು ನುಡಿದು ಫೋನ್ ಕೆಳಗಿಟ್ಟೆ. ಇದೇನಿದು ಹೊಸ ಸಮಸ್ಯೆ!? ಮಿಕಗಳನ್ನು ಹುಡುಕಿಕೊಂಡು ಬರುವ ಸಮಸ್ಯೆಗಳ ಕಣ್ಣಿಗೆ ಬೀಳುವ ಮೊದಲ ಪ್ರಜೆ ನಾನೇ ಎಂದು ಕಾಣುತ್ತದೆ!! (ಅಥವಾ ಎಲ್ಲರೂ ಹಾಗೇ ಅಂದುಕೊಳ್ಳುತ್ತಾರೇನೋ!!) ಮುಂದಿನ ವಾರದಿಂದಲೇ ‘ಸಂಜೆಮಲ್ಲಿಗೆ’ ಧಾರಾವಾಹಿ ಪ್ರಸಾರವಾಗುತ್ತದೆಂದು ಆಗಲೇ ನಿಗದಿಯಾಗಿ ಹೋಗಿದೆ. ಆ ಸಂಬಂಧವಾಗಿ ಜಾಹೀರಾತುಗಳು ಹಾಗೂ ಪ್ರೋಮೋಗಳು ಬೇರೆ ಪ್ರಸಾರವಾಗುತ್ತಿವೆ. ಇನ್ನೊಂದು ವಾರ ಮುಖ್ಯ ಪಾತ್ರಧಾರಿಯೇ ಶೂಟಿಂಗ್ ಗೆ ಲಭ್ಯರಿಲ್ಲದೇ ಹೋದರೆ ಪ್ರಸಾರವನ್ನು ಆರಂಭಿಸುವುದೂ ಅಸಾಧ್ಯವೇ!
ತಕ್ಷಣವೇ ಈಟಿವಿ ಅಧಿಕಾರಿಗಳೊಂದಿಗೆ ಫೋನ್ ನಲ್ಲಿ ಮಾತಾಡಿದೆ. ಅವರಿಗೆ ಹೇಳಿದೆ: “ನಮ್ಮ ಪಾಲಿಗಿರುವುದು ಎರಡೇ ದಾರಿ: ಮೊದಲನೆಯದು, ಧಾರಾವಾಹಿಯ ಪ್ರಸಾರದ ದಿನಾಂಕವನ್ನು ಮುಂದೂಡುವುದು; ಎರಡನೆಯದು ಮುಖ್ಯ ಕಲಾವಿದರನ್ನೇ ತೆಗೆದುಹಾಕಿ ಬದಲಿ ವ್ಯವಸ್ಥೆ ಮಾಡಿಕೊಂಡು ಚಿತ್ರೀಕರಣ ಮುಂದುವರಿಸುವುದು”.. ‘ಯಾವುದೇ ಕಾರಣಕ್ಕೂ ಪ್ರಸಾರವನ್ನು ಮುಂದೂಡಲಾಗದು.. ಕಲಾವಿದರನ್ನೇ ಬದಲಾಯಿಸಿ” ಎಂದುಬಿಟ್ಟರು ಈಟಿವಿ ಅಧಿಕಾರಿಗಳು! ಬೇರೆ ದಾರಿಯೇ ಇಲ್ಲದೇ ಪ್ರತಿಭಾವಂತ ಕಲಾವಿದೆಯೊಬ್ಬರನ್ನು ಹುಡುಕಲು ಆರಂಭಿಸಿದೆವು.ಆಗ ತಕ್ಷಣಕ್ಕೆ ನಮಗೆ ಹೊಳೆದ ಹೆಸರು ವೈಶಾಲಿ ಕಾಸರವಳ್ಳಿ. ಅದೃಷ್ಟವಶಾತ್ ಆ ಸಮಯದಲ್ಲಿ ಅವರಿಗೂ ಬೇರೆ ಯಾವ ಚಿತ್ರೀಕರಣಗಳೂ ಇಲ್ಲದೆ ಬಿಡುವಾಗಿದ್ದುದರಿಂದ ಸಂತೋಷವಾಗಿ ನಮ್ಮ ಆಹ್ವಾನವನ್ನು ಒಪ್ಪಿಕೊಂಡು ಬಂದರು. ಮರುದಿನದಿಂದಲೇ ಶೂಟಿಂಗ್ ಮುಂದುವರೆಯಿತು.
0 ಪ್ರತಿಕ್ರಿಯೆಗಳು