ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀಧರ ಬನವಾಸಿ ಹೊಸ ಕವಿತೆಗಳು

ಶ್ರೀಧರ ಬನವಾಸಿ

  1. ಅಶೋಕವನದ ಸೀತೆ

ಕಾನನದ ಝರಿಯೊಂದು ಸಂಗಾತಿಯ
ಅರಸುತ್ತಾ ಹೊರಟಿತ್ತು
ಸುತ್ತಮುತ್ತಲಿನ ಕಾಡು ಬೆಟ್ಟಗಳ ಸಾಂಗತ್ಯವು
ನಡುವೆ ಒಲವಿನ ಗೆಳತಿಯ ಅರಸುತ್ತಾ

ಸಾಗುತಿಹಳು ಈ ಪುಣ್ಯಗಂಗೆಯು
ತನುಮನದೊಂದಿಗೆ ಬೆರೆತು ಅಂತರಂಗವ ಬಯಸಿ
ಸಖಿಯ ಹುಡುಕುವ ಮೋಹದ ಪರಿಯು
ಮೌನ ಪಯಣದಲಿ ಪ್ರೀತಿ-ವಿರಹದ ನೋವಿರಲು
ಗಂಗೆ ಪಾವನಳಾದರೂ ಅವಳ ಬಯಕೆಯ ಹುಡುಕಾಟ
ಬೇರೆಯೇನೋ ಆಗಿರಲು…

ಸುತ್ತ ಅಸುರ ಲೋಕದ ಸಂತಾನವು
ಲಕ್ಷ ಕಣ್ಣುಗಳ ಕಣ್ಗಾವಲು ಸೀತೆಯ ಸುತ್ತುವರೆದಿರಲು
ಬಣ್ಣನೆಗೆ ಸಿಗದ ಆಶೋಕವನವು ಸಾಕ್ಷಾತ್ ದೇವಲೋಕವು
ರಾವಣನ ಸಾಮ್ರಾಜ್ಯದಲಿ ಈ ಸ್ವಪ್ನ ಸೌಂದರ್ಯವೇ
ಸಾಕ್ಷಿಯಾಗಿರಲು
ಅಪಹರಿಸಿ ತಂದ ಜಗನ್ಮಾತೆಯು ಇಲ್ಲಿ ನೆಲೆಸಿರಲು
ರಘುವರನಿಲ್ಲದ ಕ್ಷಣಗಳನು ಎದುರಿಸುತಿಹಳು
ರಾಮನಾಮದಲಿ ಮುಳುಗುತ್ತಾ
ಸುಡುವ ಏಕಾಂತದಲ್ಲಿ ತನ್ನವರಿಗಾಗಿ ಕಾಯುತ್ತಾ

ಕಾನನದ ಝರಿಗೆ ನೋವಿಲ್ಲ; ನಲಿವಿಲ್ಲ
ಸುರಿವ ಮಳೆಯ ಜಾಡು
ಹರಿವ ಓಘಕ್ಕೆ ಸೇರುತ್ತಾ
ದೂರದಲ್ಲಿರುವ ಅಶೋಕವನವು
ಕಂಡ ಆಶಾಗೋಪುರದ ಸದಾಶೆಯು
ಹರಿವ ಗಂಗೆಯ ನೋವಿಗೆ
ಕೊನೆಗೂ ಸಿಕ್ಕಳು ಸೀತೆ ಎಂಬ ಶರಧಿಯು

ಅಶೋಕವನದ ಏಕಾಂತವು ರಾಮನಿಲ್ಲದ ಸ್ವರ್ಗವು
ಬಂಧನದ ಸೀತೆಗೆ ಅವಳ ಪಾತಿವ್ರತ್ಯವೇ ಶ್ರೀರಕ್ಷೆಯು
ಹನುಮನ ಕಾಣುವ ಸರಧಿ
ಅಸುರರ ಸಂಹಾರವಾಗುವ ಮುನ್ನ
ಸೀತೆಯ ಸಾಂಗತ್ಯಕ್ಕೆ ಒಲಿದ ಭಾಗ್ಯವು

ದೂರ ತೀರದಿಂದ ಅರಸಿ ಬಂದ ಝರಿಗೆ
ಸಿಕ್ಕವಳು ಜಾನಕಿಯು
ಗಂಗೆ ಹರಿದಳು ಅಶೋಕವನಕೆ
ಸುರಿವ ಹಾಲಿನ ಅಮೃತ ಕಳಶದಂತೆ
ಇಬ್ಬರು ಸಖಿಯರು ಸೇರಿದ್ದಾರೆ
ಸೀತೆಯ ಕಣ್ಣೀರಿನಲಿ ಗಂಗೆಯು

02. ಊರು ಮುಟ್ಟುವ ತವಕ

ಉಟ್ಟಬಟ್ಟೆಯಲ್ಲಿ ಗುಳೆ ಹೊರಟವರು ಹೀಗೂ ಅಲ್ಲವೇ!
ಬದುಕಿನ ದೋಣಿಗೆ ಹುಟ್ಟನ್ನು ಹಾಕಿ ಮುಂದೆ ಹೋದಂತೆ
ಅದು ತನ್ನದೇ ಪಾಡಿಗೆ ಸಾಗುತ್ತಿರುತ್ತದೆ
ಅವರವರ ನೆಲೆಘಟ್ಟ ಹರಿವ ಜಲಮೂಲಗಳಲ್ಲಿ ಅಡಗಿದಂತೆ

ಚಲಿಸುತ್ತದೆ ದೋಣಿಯು
ಮುಂದಾಗಿದೆ ಹಲವು ದಿಕ್ಕಿನ ಕಡೆಗೆ ಸಾಗಲು
ಸುದೀರ್ಘ ಪಯಣದ ಹಾದಿಯಲಿ
ದಿನ ತಿಂಗಳು ವರ್ಷಗಳ ಅಂತರವು
ಒಳಗಿನ ಅರಿವಿಗೆ ಜಾಗ್ರತೆ ಮೂಡುವವರೆಗೂ
ನಿದ್ರೆ ಹೋದರೆ ಹಸಿವು
ಮತ್ತೆ ಹೊಟ್ಟೆ ತುಂಬಿಸುವ ಹೋರಾಟವು
ಆಯಾಸ ತಪ್ಪಿಸುವ ಘಳಿಗೆಗೆ
ಬದುಕ ಗೆದ್ದು ಬೇಟೆಯಾಡುವ ಸಂಭ್ರಮವು
ಯಾವ ಕ್ಷಣಗಳಿಗೋ

ದುರಿತ ಕಾಲದಲಿ ಬೇಟೆಯಾಡುವುದು ನಾವಲ್ಲವೇ?
ನಂಬಿಕೆಯ ಅನಾಚಾರವೇ ಸರಿ
ಬಿಡದ ಮಾತಿನ ಅಲೆಗಳ ನಡುವೆ
ದೋಣಿಯು ಮುನ್ನುಗ್ಗುತ್ತಿದೆ
ಸುತ್ತಲಿನ ಗಾಳಿ ಪ್ರವಾಹಕೆ ಅಂಜದೆ

ತೇಲುವ ದೋಣಿಯು ಮಾತನಾಡುತ್ತಿದೆ
ನಾಕ ನರಕ ಜೀವಗಳ ನಡುವಿನ ಬದುಕನು ಬಣ್ಣಿಸುತ್ತಿದೆ
ಕೊಡು ಕೊಳ್ಳುವ ಕ್ಷಣಗಳಿಗೆ
ತೇಲುವ ಅವಕಾಶವು ಆ ಜೀವಕ್ಕಂಟಿದೆ
ಸ್ಫಟಿಕದಷ್ಟು ಶುಭ್ರ ನೀರಾದರೂ
ದೋಣಿಯೊಳಗೆ ಸೇರುವಂತಿಲ್ಲ
ಬದುಕನರಸಿ ಹೊರಬಂದವರಲ್ಲಿ ಎಷ್ಟು ಜನ
ಮುಳುಗುವರು ತೇಲುವವರು

ಜೀವನವು ಉಪ್ಪು ಸಕ್ಕರೆ ತುಂಬಿದ ನದಿ-ಶರಧಿಯಲ್ಲಿ
ಸಾಗುವ ದೋಣಿಯಂತೆ
ತೇಲುತ್ತಾ ತೇಲುತ್ತಾ ಕರಗಿ ನೀರಲ್ಲಿ ಒಂದಾಗುವಂತೆ
ಆ ದೋಣಿಯು ಮಾತನಾಡುತ್ತಿದೆ
ಹಸಿವಿನ ಆಸೆಯನ್ನು ಹೇಳುತ್ತಿದೆ
ಕೈಗಳು ಅಪ್ಪಿಕೊಳ್ಳುತ್ತವೆ ಜೀವ ಉಳಿಸಿಕೊಳ್ಳುವ ಆಸೆಗೆ
ಆ ದೋಣಿಯು ಸಾಗುತ್ತಲೇ ಇದೆ
ಊರು ಮುಟ್ಟುವ ಕ್ಷಣದವರೆಗೂ

‍ಲೇಖಕರು Avadhi

5 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading