ಶ್ರೀಧರ ಪತ್ತಾರ
ನೀರವ ರಾತ್ರಿಯಲಿ
ಕೋಣೆಯೊಳಗೊಂದು ಹಣತೆ
ಬೆಳಕು ಸುರಿಸುತಿತ್ತು…
ನಸುನಾಚುತ ಅವಳೆಂದಳು…
ಹೊಕ್ಕುಳಿನಾಳಕ್ಕಿಳಿವ
ನೋವು ತುಂಬ ಹಿತ…
ಈಗ ಅವನೊಳಗಿನ ಉನ್ಮತ್ತ ಕುದುರೆಗಳು
ಹೇಂಕರಿಸಿ ನಾಗಾಲೋಟಕ್ಕಿಳಿದವು
ಕಡಿವಾಣಕ್ಕೆ ಸಿಗದೆ…
ಪ್ರತಿ ಬಾರಿಯೂ ಗೆಲುವಾಗುವವಳ
ಅದೇ ಮಾತು…
ಎದುರಿಗೆ ಬೆಳಕ ಸಂಭ್ರಮದಿ
ನಸುನಗುವ ಅದೇ ಹಣತೆ…
ಈ ಬಾರಿ ದೇಹದ ಕಸುವೆಲ್ಲ
ಒಗ್ಗೂಡಿಸಿ ಉದ್ಗರಿಸಿ ಆಹ್ಲಾದಗೊಂಡವನು ಅವಳ ಮೆಚ್ಚುಗೆಗೆ ಕಾದು ನಿಂತ
ಢಾಳಾಗಿ ಉರಿವ ಹಣತೆ
ಕಣ್ಮುಚ್ಚಿಕೊಂಡಿತು….
ಕಣ್ಣೊರೆಸಿಕೊಳ್ಳುತ್ತ ಅವಳೆಂದಳು…
ಇಂದು ನಿನ್ನ ಕಾಮನೆಗಳಿಗೆ ಕನಿಕರವಿರಲಿಲ್ಲ
ಅಂತೆಯೇ…
ಕತ್ತಲೆಗೆ ಬೆಳಕು ಆಹುತಿಯಾಯ್ತು…
ಅವನಿಗೆ ಪಿಚ್ಚೆನಿಸಿ
ಅವಳೆದುರು ಮಂಡಿಯೂರಿ ಶರಣಾಗತನಾದ
ಕತ್ತಲೆ ಇನ್ನೂ ಗಹಗಹಿಸುತಲೇಯಿತ್ತು.
0 ಪ್ರತಿಕ್ರಿಯೆಗಳು