ಶ್ರೀದೇವಿ ಕೆರೆಮನೆ
ಬಿಟ್ಟಿರಲಾಗದು ಎನ್ನುತ್ತ ಬಂದೇ ಬಿಡುವೆನೆಂದು
ಹಠ ಹಿಡಿದು ಹೊರಟವನನ್ನು
ನಾನೇ ತಡೆದಿದ್ದೇನೆ ಬಲವಂತದಿಂದ
ಬರಲು ಯಾವ ಆಧಾರವೂ ಇಲ್ಲವೆಂದು
ಬರುತ್ತೇನೆಂದು ಹೇಳಿದ ಬೆನ್ನಲ್ಲೇ
ಮುಖ ತಿರುವಿ ಹೊರಟು ನಿಂತಾಗಲೂ ಕೂಡ
ಎಲ್ಲದಕ್ಕೂ ಕಾರಣ ಕೇಳುವ ನಾನು
ಯಾವುದಕ್ಕೂ ಆಧಾರ ಬೇಡದ ನೀನು
ಯಾವ ಗಳಿಗೆಯಲ್ಲಿ ಜೊತೆಗೂಡಿದೆವೋ
ಇಬ್ಬರಿಗೂ ಗೊತ್ತೇ ಆಗಲಿಲ್ಲ
ಜೊತೆಯಾಗಿದ್ದು ಹೇಗೆಂದು ತರ್ಕಿಸುತ್ತಲೇ ಇದ್ದ ನನಗೆ
ಅದೃಷ್ಟ, ದೈವ ಸಂಕಲ್ಪದಿಂದ ಹಿಡಿದು
ಮೂರು ವರ್ಷಗಳ ಕಾಲ ಅನುಸರಿಸಿದ
ಸತ್ಯ ನಿನ್ನ ಬಾಯಿಂದಲೇ ಬಂದರೂ ತೃಪ್ತಿಯಿಲ್ಲ
ಕೊನೆಗೆ ಗ್ರಹಚಾರ ಎಂದಿದ್ದು ಮಾತ್ರ
ಕ್ಷಮಿಸಲಾಗದ ಘನಘೋರ ಅಪರಾಧ

ಈಗ ಬರುತ್ತೇನೆಂದರೆ ಬರಲೂ ಆಗದ
ಹೋಗುತ್ತೇನೆಂದರೆ ಹೋಗಲೂ ಆಗದ
ತ್ರಿಶಂಕು ಸ್ಥಿತಿಯ ಸಂಬಂಧದಲ್ಲಿ
ಎಲ್ಲಿದ್ದೇವೋ ಅಲ್ಲಿಯೇ ಪರಿತಪಿಸುತ್ತಿದ್ದೇವೆ
ಒಳಗಿದ್ದರೆ ಉಸಿರುಗಟ್ಟುವ ನೀರಭಯ
ಹೊರಗಿದ್ದರೆ ಶ್ವಾಸಕ್ಕೆಳುಕದ ಗಾಳಿಯ ನಡುಕ
ನೀರಿಂದ ಹೊರತೆಗೆದ ಮೀನು
ಉಸಿರಿಗಾಗಿ ಮಿಡುಕುತ್ತ ತೇಕುವಾಗ
ಮತ್ತದೇ ಮೂರಕ್ಕಿಳಿಯದ
ಆರಕ್ಕೆ ಏರಲೂ ಆಗದ ಒಲವ ನೋವು
ಹೊರಟು ಹೋಗುತ್ತೇನೆಂದು ನೀನು ಹೇಳಿದ್ದನ್ನು ನೆನೆಸಿ
ಹೂಂಕರಿಸುತ್ತೇನೆ ಎದೆಯೊಳಗಿನ ನಿರ್ಜೀವ ಕವಿತೆಗೆ
ಮತ್ತೀಗ ದಿನವೂ ಇಷ್ಟಿಷ್ಟೇ ಹನಿಸಿದರೂ
ಚಿಗುರುವುದಿಲ್ಲ ಸತ್ತ ಗರಿಕೆಯಂತಹ ಪ್ರೇಮ
ಈಗೀಗ ಹೊರಡು ಎಂದು ಕತ್ತು ಹಿಡಿದು ದೂಡಿದರೂ
ನೀನೂ ಹೋಗುವ ಮನಸ್ಸು ಮಾಡುತ್ತಿಲ್ಲ
ಉಸಿರುಗಟ್ಟಿಸುವ ಮೌನ, ನಿರ್ಲಕ್ಷದಲಿ
ಜೊತೆಗಿರಲೂ ಆಗದ ಸತ್ಯ ತಿಳಿದಿದೆ ನನಗೂ
ಎಲ್ಲಿದ್ದೇವೋ ಅಲ್ಲೇ ಇದ್ದುಬಿಡುವುದು
ಜೊತೆಗಿದ್ದು ಉಬ್ಬರಿಸುವುದಕ್ಕಿಂತ ಲೇಸು






ಮೌನ ಕಟ್ಟೆ ಒಡೆದ ಭಾವ ತೀಕ್ಷ್ಣ ವಾಗಿ ಮೂಡಿದಂತಿದೆ…
ಚೆನ್ನಾಗಿದೆ ಕವಿತೆ.
ಗಂಡು ಹೆಣ್ಣಿನ ವೈವಾಹಿಕ, ಪ್ರಣಯ ಸಂಬಂಧಗಳಲ್ಲಿ ಬರುತ್ತಿರುವ ಬಿಕ್ಕಟ್ಟುಗಳನ್ನು , ಯಾಂತ್ರಿಕ ಗ್ರಹಿಕೆಗಳನ್ನು, ಅದರ ಸಂಕೀರ್ಣತೆಗಳನ್ನು ಸರಳವಾಗಿ ಓದುಗರಿಗೆ ದಾಟಿಸುವ ಕವಿತೆಯಿದು. ಇಂತಹ ಕವಿತೆಗಳಿಗೆ ಹೆಚ್ಚು ಜನರನ್ನು ತಲುಪುವ ಶಕ್ತಿಯಿರುತ್ತದೆ..
ಜೊತೆಗಿದ್ದು ಉಬ್ಬರಿಸಲಾಗದು ನಿಜ ಪ್ರಸ್ತುತ ಪರಿಸ್ಥಿತಿ. ಸುಂದರ ಕವನ ಅರ್ಥಪೂರ್ಣ ಶ್ರೀ..