ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀದೇವಿ ಕೆರೆಮನೆ ಕವಿತೆ – ನಿಜಕ್ಕೂ ಗೊತ್ತಿರಲಿಲ್ಲ..

ಶ್ರೀದೇವಿ ಕೆರೆಮನೆ

ಗೊತ್ತಿರಲಿಲ್ಲ ಗಂಡಿನ ದನಿಯೂ
ಮಂತ್ರ ಮುಗ್ಧವಾಗಿಸುತ್ತದೆಯೆಂದು
ಗಡುಸಾದರೂ ಇಷ್ಟು ಇಂಪೆನಿಸಬಹುದೆಂದು
ಕೇಳುವಾಗೆಲ್ಲ ಒಳಗೊಂದು
ಮಿಡಿನಾಗರ ಹೆಡೆಯೆತ್ತಿ ಮಿಸುಕಿ
ಮತ್ತೆ ಸಿಂಬಿ ಸುತ್ತಿ ತಲೆಯಡಗಿಸಿ
ಮೆತ್ತಗೆ ಮಲಗಿದ ಹಾಗೆ

ಗೊತ್ತಿರಲಿಲ್ಲ ಗಂಡಸಿನ ದನಿಯಲ್ಲೂ
ಅರಿವಾಗದ ಸೆಳೆತವೊಂದಿರಬಹುದೆಂದು
ಕಿಂದರ ಜೋಗಿಯ ಕಿನ್ನರಿಗೆ ಮರುಳಾಗಿ
ಹಿಂಬಾಲಿಸಿ ಕಡಲಿಗೆ ಹಾರಿದ
ಇಲಿಗಳ ಸ್ಥಿತಿಗೆ ತಂದು ನಿಲ್ಲಿಸಿ
ಎದೆಯೊಳಗೆ ನಗಾರಿ ಮೊಳಗಬಹುದೆಂದು

ಗೊತ್ತಿರಲಿಲ್ಲ ಗಂಡಸಿನ ದನಿಯಲ್ಲಿ
ಅರಿವಾಗದ ಉನ್ಮಾದ ಇರಬಹುದೆಂದು
ಮೈಯ್ಯೊಳಗೆ ತುಸುತುಸುವೇ ಏರಿದ ನಶೆ
ಮತ್ತೆ ಮತ್ತೆ ಕೇಳಿ ಕೆರಳಿಸಿ
ಕೇಳಿದಾಗಲೆಲ್ಲ ಕೇಳಿಗೆ ಕರೆದಂತಾಗಿ
ಮೈ ಮರೆಯುವಂತೆ ಮಾಡಬಹುದೆಂದು

ಗೊತ್ತಿರಲಿಲ್ಲ ಗಂಡಸಿನ ದನಿಯಲ್ಲಿ
ಇಷ್ಟೆಲ್ಲ ಮಾಟವಿರಬಹುದೆಂದು
ಯಾರೋ ಮಾಯಕಾರ ಛೂ ಮಂತ್ರ ಹಾಕಿ
ಶೂನ್ಯದೊಳಗಿಂದ ಬೂದಿ ತೂರಿ ಬಂದು
ಕಡೆಗಣಿಸಿ ಜಗದ ಆಗು ಹೋಗುಗಳನ್ನೆಲ್ಲ
ಬಿಗಿ ಹಿಡಿದಂತೆ ಮನಸು ಮಂಕಾಗಿ
ಲೋಕದ ಹಂಗು ಮರೆತು ಬಹುದೆಂದು

ಗೊತ್ತಿರಲಿಲ್ಲ ಗಂಧರ್ವ ಲೋಕದಿಂದ ಇಳಿದು
ಮೈ ಮನಸುಗಳನ್ನೆಲ್ಲ ಆವರಿಸಿ
ಚಳಿಗೆ ನಡುಗುತ್ತಲೇ ಬೆವರೊರೆಸಿಕೊಳ್ಳುವ
ಅಯೋಮಯತೆಗೆ ದೂಡುವ ಗುಣ
ಗಂಡಿನ ಗುಡುಗು ದನಿಯಲ್ಲಿರುವುದು
ನಿಜಕ್ಕೂ ದೇವರಾಣೆ ಗೊತ್ತಿರಲಿಲ್ಲ.

‍ಲೇಖಕರು avadhi

3 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading