ಶ್ರೀದೇವಿ ಕೆರೆಮನೆ
ಮಾಯೆಯೆಂಬ ಅಲ್ಲಮ
ರಾಜಸಭೆಯಲ್ಲಿ ನರ್ತಿಸುವುದೆಂದರೆ
ಸುಲಭಕ್ಕೆ ದಕ್ಕುವ ಮಾತಲ್ಲ
ಸಾವಿರ ಲಾಸ್ಯದ ಭಂಗಿಗಳನ್ನು
ನುಂಗಿ ನೊಣೆಯ ಬಹುದು
ಒಂದೇ ಒಂದು ತಪ್ಪು ಹೆಜ್ಜೆ
ಮನಸೊಪ್ಪಿದರೆ ಧನಕನಕಗಳ ರಾಶಿ ರಾಶಿ
ತೊಡಿಸಬಹುದು ರಾಜ ಕೈಯ್ಯಾರೆ
ಕೊರಳ ಕಂಠೀರವವನ್ನೇ
ವಾಸ್ತವದ ಅರಿವಿದ್ದೂ
ಮದ್ದಳೆಯ ಒಂದೇ ನುಲಿತಕ್ಕೆ
ಹದ ತಪ್ಪುವುದೇಕೋ ಹಾಳಾದ ಮನಸು
ಸೆರೆಯ ವಾಸಕೆ ಬಯಸುವುದೇಕೋ
ಎಂದೂ ಜಾರದ, ಯಾರಿಗೂ ಸೋಲದ
ಹೆಣ್ಣೆಂದು ಬಿರುದು ಪಡೆದಾಕೆಯೇ
ಹೀಗೆ ತಲ್ಲಣಿಸಿದರೆ
ಎಂದು ಯೋಚಿಸುವಷ್ಟರಲ್ಲಿ
ಹೆಣ್ಣೆಂದರೆ ಮಾಯೆ ಎಂದೆಲ್ಲ
ಉಸುರಿಬಿಟ್ಟನಲ್ಲ ಕಿರಾತಕ
ಹೆಣ್ಣಿನ ಮಾಯೆಗೆ, ಮಾಯೆಯೇ ಆದ ಹೆಣ್ಣಿಗೆ
ಕುಂಡಲಿನಿಯ ಮಹಾ ಪ್ರಸ್ಥಾನದೊಳಗೇ
ಮಿಡುಕು ಹುಟ್ಟಿಸಿ ಎದೆಯೊಳಗೇ
ಮಳೆಯ ಪ್ರವಾಹ ನುಗ್ಗಿಸಿದ
ಗಂಡೆಂಬ ಗಂಡು
ಮಾಯೆಯಲ್ಲದೇ ಇನ್ನೇನು?
ಕೆಣಕಿ, ಹೆಣ್ಣೊಳಗನ್ನು ಬಡಿದೆಬ್ಬಿಸಿ,
ಆಧ್ಯಾತ್ಮದ ಸೋಗು ಹಾಕಿದ
ಗಂಡು ಮಾಯೆಗೆ
ಹೆಣ್ಣೇ ಕಾಡುವ ಪರಿಗೆ
ಮಾತು ಬರೀ ಮೂಕ ಯಾತನೆ
ಈಗ. ಅಲ್ಲಮ ಮಾಯೆಯೋ
ಮಾಯೆಯೆಂಬ ಮಾಯೆಯೋ?

ಪ್ರೀತಿ ಎಂದರೆ
ಅವನತಮುಖಿಯಾದವಳ ಮನದ ತುಂಬಾ ದುಗುಡ
ಕಾಡುವ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ
ಈ ಗಂಡಸರೇಕೆ ಹೀಗೆ?
ಪ್ರೀತಿ ಎಂದರೆ ಬರೀ ಸಂಗ ಎಂಬ ಭ್ರಮೆಯೇಕೆ
ಒಂದು ಕುಡಿನೋಟ,
ಪುಟ್ಟದೊಂದು ಮುಗುಳ್ನಗೆ
ಮಾತಿಲ್ಲದ ಮೌನ ಸ್ಪರ್ಶ ಕೂಡ
ಪ್ರೇಮವೇ ಎಂದು ಯಾಕೆ ಅರ್ಥವಾಗುತ್ತಿಲ್ಲ?
ಇಷ್ಟಕ್ಕೂ ಆಕೆ ಕೇಳಿದ್ದೇನು?
ಈ ಪುರುಷ ಕಲಿಗಳಂತೆ ಯಾರದ್ದೋ
ತರಿದ ಶಿರವನ್ನಲ್ಲ
ಬೊಗಸೆಯಲ್ಲೊಮ್ಮೆ ಮುಖ ಹಿಡಿದು
ದಿಟ್ಟಿಗೆ ದಿಟ್ಟಿ ಕೂಡಿಸುವುದು ವ್ಯಭಿಚಾರವೇ?
ಒಂದು ಕಣ್ಣೋಟವನ್ನೂ ಸಹಿಸಲಾಗದ ಪುಕ್ಕಲ
ಶೂನ್ಯಪೀಠವನ್ನು ಆಳುವುದು ಹೇಗೆ?
ಹೆಣ್ಣು ಕಣ್ಣಂಚಲ್ಲೇ ನೋಡಿದರೂ
ಕೆರಳಿ ನಿಲ್ಲುವ ಗಂಡಸ್ತನವನ್ನು
ಹಿಡಿದಿಡಲಾಗದವನ ಎದುರು
ಎದೆಯೊಳಗಿನ ಭಾವ ಹೇಳಿಕೊಳ್ಳುವುದಾದರೂ ಹೇಗೆ?
ಈ ಮದ್ದಳೆಯಲ್ಲೇ ಲೋಕ ಆಳುವವ
ಹೆಣ್ಣೆಂದರೆ ಜಾರಿಣಿ ಎಂದು ಜರಿದದ್ದೇಕೆ?
ಕಿರುಬೆರಳು ಸೋಕಿಸಿದರೂ
ಬಿಸಿಯೇರುವ ಮೈಯ್ಯನ್ನು ಹಿಡಿತದಲ್ಲಿಡಲಾಗದವರಿಗೆ
ಯಾವುದೆಂದರೆ ಯಾವುದೆಂದು
ಇದೆಂದರೆ ಇದೇ ಎಂದು
ಹೇಳುವುದಾದರೂ ಹೇಗೆ?
ಕುಚ ನಿತಂಬಗಳಿರುವುದು ಕೆಣಕು ನೋಟ???ಲ್ಲ
ಎಂಬ ಸತ್ಯ ತಿಳಿಸುವುದಾದರೂ ಯಾರು?
ಪ್ರೀತಿ ಎಂದರೆ ಬರೀ ಅಂಗಮರ್ಧನ
ಎಂದಷ್ಟೇ ತಿಳಿದುಕೊಂಡವರಿಂದ
ಈ ಅಲ್ಲಮನೂ ಹೊರತಾಗಿಲ್ಲ
ಮಾಯೆ ಈಗ ತಗ್ಗಿಸಿದ ತಲೆಎತ್ತುವ
ಧೈರ್ಯ ತೋರುತ್ತಿಲ್ಲ

ಬಕುಳದ ಕಣ್ಣಲ್ಲಿ ದಾರ ಪೋಣಿಸಿದಷ್ಟು ಸುಲಭವಲ್ಲ
ಸುತ್ತಲೂ ಸುರುಗಿ ಹರಡಿ
ಮಾಲೆ ಕಟ್ಟುತ್ತಿರುವ ಮಾಯೆಯಲ್ಲಿ
ಯಾವುದೋ ಉದಾಸೀನ
ಮನಸ್ಸು ತಲ್ಲಣದ ಗೂಡು
ಕಣ್ಣಲ್ಲಿ ಎಲ್ಲವೂ ಮೀರಿದ ನೋವು
ಒಂದೊಂದೇ ಸುರುಗಿ ಕಟ್ಟಿದಾಗಲೂ
ಕೈಗೆ ಅಂಟಿದ ಹಳದಿ ಪರಾಗ
ಮೂಗಿಗೆ ಅಡರಿದ ನವಿರು ಘಾಟು
ಗಮನಕ್ಕೆ ಬರುತ್ತಿಲ್ಲ ಯಾವುದೆಂದರೆ ಯಾವುದೂ
ಅದು ಹೇಗೆ ಮಾಲೆ ಮಾಡಿದಳೋ
ಲಿಂಗದ ಶಿರಕ್ಕಿಟ್ಟಳೋ
ಅದಾವಾಗ ಮುಗಿಯಿತೋ ಪೂಜೆ ಅಭಿಷೇಕ
ಖಾಲಿ ಮನಸಿನೊಳಗೆ
ಈಗ ಅಲ್ಲಮನೂ ಶೂನ್ಯ ಪೀಠಾಧಿಪತಿ
ಮುಗಿದು ಹೋದವು ಒಂದು ರಾತ್ರಿ
ಎರಡು ಹಗಲುಗಳ
ದರ್ಶನವಿಲ್ಲದ ಸುದೀರ್ಘ ದಿನಗಳು
ಮೊನ್ನೆಯಷ್ಟೇ ಹತ್ತಿರ ಬಂದು ಒಪ್ಪಿಕೊಂಡು
ಇನ್ನು ಮುಂದೆ ಈತ ತನ್ನವನಷ್ಟೇ ಎಂದು
ಮೈ ಮನಸ್ಸನ್ನೆಲ್ಲ ಆವರಿಸಲು
ಢವಗುಡುವ ಎದೆಯನ್ನು ಬಿಗಿಹಿಡಿದು ಕಾದರೆ
ಒಮ್ಮಿಂದೊಮ್ಮೆಲೇ ನಿರಾಕಾರಿ
ಮತ್ತೆ ಬಂದವಳೆ ಮಾಲೆ ಕಟ್ಟತೊಡಗಿದಳು.
ದಾರಕ್ಕೆ ಒಂದೊಂದಾಗಿ ಪೋಣಿಸಿದ್ದು
ಸುರುಗಿಯೋ ಬಕುಳವೋ
ಯಾವುದೆಂದೂ ಅರಿವಾಗದ ಅಯೋಮಯತೆ
ಸುರುಗಿಯ ಪರಿಮಳ ಹೊಕ್ಕಳ ಸುಳಿಯಲ್ಲಿ
ಕೈಯ್ಯ ಸ್ಪರ್ಶಕ್ಕೆ ಎದೆ ಮೆತ್ತೆಗಿಂತಲೂ
ಮೃದುವಾದ ಬಕುಳದ ನವಿರು
ಪಕಳೆಯೂ ಪುಳಕಗೊಂಡಿದ್ದು ಅರಿವಾಗುತ್ತಿಲ್ಲ
ಅಲ್ಲೆಲ್ಲೋ ದೂರದಲ್ಲಿ ಕೇಳಿದ
ಮದ್ದಳೆಯ ರಭಸದ ದನಿಗೆ
ಮೈ ತುಂಬಾ ರೋಮಾಂಚನದ ನಡುಕ
ಇನಿತಿನಿತೇ ದೂರವಾಗುತ್ತ
ಮತ್ತೆ ಸದ್ದು ಕೇಳಿಸದೇ ಕಾತುರ
ಬಕುಳದ ಕಣ್ಣಲ್ಲಿ ದಾರ ಪೋಣಿಸಿದಷ್ಟು ಸುಲಭವಲ್ಲ
ನಿರಾಕಾರಿ ಅಲ್ಲಮನನ್ನು ಅಂತರಂಗಕ್ಕೆಳೆದು ಕೊಳ್ಳುವುದು
ಈಗ ಕೈಯ್ಯಲ್ಲಿ ಮಾಲೆಯಾದ
ಹೂಗಳೆಲ್ಲವೂ ಒಟ್ಟಾಗಿ ಗಹಗಹಿಸಿದ ಸದ್ದು
ಕಿವಿ ಮುಚ್ಚಿಕೊಂಡ ಮಾಯೆಯ ಕೈಯ್ಯೊಳಗೆ
ಬಕುಳದ ಮೆದುತನವೆಲ್ಲ ನರಳಿ
ಬಿಕ್ಕಳಿಸುವ ವಿರಹ

ಬಯಲಾದ ಅಲ್ಲಮ
ಅಲ್ಲಮನೊಳಗೇನೋ ತಹತಹ
ಬೆಳ್ಳಂಬೆಳಿಗ್ಗೇಯೇ ಪಾಳು ಶಿವಾಲಯದೊಳಗಿನ
ಹಿಮಾಲಯದೊಡೆಯನ ಪೂಜೆಗೆಂದು
ಹೂವು ಕರ್ಪೂರ ಹಿಡಿದು ಬರುವವಳು
ಸೂರ್ಯ ನೆತ್ತಿಗೇರಿದರೂ ಪತ್ತೆಯಿಲ್ಲ
ಮಾರು ದೂರದಿಂದಲೇ ಗೆಜ್ಜೆಯ ದನಿ
ಗಾವುದ ದೂರದಲ್ಲಿರುವಾಗಲೇ ಬರುವ ಸೂಚನೆ
ನೀಡುವ ಪೂಸಿದ ಗಂಧ ಲೇಪನದ ಸುವಾಸನೆ
ಯಾವುದೂ ಸನಿಹವಾಗುತ್ತಿಲ್ಲ
ಮನದೊಳಗೇಕೋ ಅಸಹನೆ
ಬರಬೇಕಿತ್ತಲ್ಲವೇ ಇಷ್ಟು ಹೊತ್ತಿಗಾಗಲೇ
ತಿಳಿಯಬೇಡವೋ ಬಂದಿದ್ದು ನಿನಗೆಂದು
ಬೂದಿಬಡಕ ನೀನು, ಸ್ಮಶಾನ ವಾಸಿ
ಎಂದೆಲ್ಲ ಕೊಂಕು ನುಡಿಯುತ್ತ
ತಾನೇ ಕೊಂಕುತ್ತ, ಕೊಂಕು ನೋಟ ತೂರುತ್ತ
ಬೇಡವೆಂದರೂ ಎದೆಯಾವರಿಸಿದವಳು
ಬುಸುಗುಡುತ್ತಿದೆ ಎಂದೂ ಇಲ್ಲದ ಅಸಹನೆ
ಏರುತ್ತಿರುವ ಕೋಪದ ಅಲೆಗಳು
ಆಕ್ರಮಿಸುತ್ತಿದೆ ಷಟ್ ಸ್ಥಳಗಳನ್ನೂ ಮೀರಿ
ಸೂರ್ಯ ಜಾರುವ ಹೊತ್ತಾದರೂ
ಶಿವನ ಆರಾಧನೆಗೆ ಬರಬೇಕೆಂಬ ಪ್ರಜ್ಞೆ ಬೇಡವೇ?
ಸೊಕ್ಕಿನ ನರ್ತಕಿ, ಮೈತುಂಬ ನಟನೆ
ಕುದಿಯುವ ಮನದಾಳದಲ್ಲೊಂದು ಶಂಕೆ
ಯಾಕೋ ಕುಳಿತಲ್ಲಿ ಕುಳಿತಿರಲಾಗುತ್ತಿಲ್ಲ
ಅನಾರೋಗ್ಯವೇ? ಬರುವ ಸ್ಥಿತಿಯಲ್ಲಿಲ್ಲವೇ
ನೋಡುವ ಅವಕಾಶ ಇದೊಂದೇ
ಪರಶಿವನ ಆರಾಧನೆಯ ನೆಪ
ನಡುನೆತ್ತಿ ತಾಪವೇರಿ ಸುಡುವಂತಾಗಿದೆ
ಕ್ರೋಧ ಅಸಹಾಯಕತೆಗಳೆಲ್ಲವೂ ಮುಗಿದು
ಬಂದರೆ ಸಾಕೆಂಬ ದಯನೀಯತೆ
ಹೆಣ್ಣೆಂಬುದೇ ಮಾಯೆ, ತ್ಯಜಿಸಿ ಬಿಡಿ
ಕೇಳುವವರಿದ್ದಾರೆಂದು ಉಪದೇಶಿಸುವುದು
ಅದೆಷ್ಟು ಸರಳ, ಆಚರಿಸುವುದು?
ಅದೋ ಅದೋ.. ಅದೇ ಸುವಾಸನೆ
ಗಾಳಿಯ ತಂಪಿನ ಜೊತೆಗೆ
ಮೂಗರಳಿಸುವಂತೆ ಅಡರುತ್ತಿದೆ
ನೆರಳಾಡಿದಂತಾಗಿ, ಮುಖದಲ್ಲಿ ಬಿಗುಮಾನ ತುರುಕಿಸಿ
ಕತ್ತೆತ್ತಿದರೆ ಅದಾರೋ ದಾಸಿ
ಬಯಲಾದ ಮಾಯೆಗೆ ಶಿವನಾಮದ
ದಾರಿ ತೋರಲು ಬೇಡುತ್ತಿದ್ದಾಳೆ
ಕಂಗೆಟ್ಟು ಕುಸಿದು ಉಮ್ಮಳಿಸಿದಾತನ
ಮಂಜುಗಣ್ಣಿನೆದುರು ಯಾರದ್ದೋ ಗಹಗಹಿಸುವಿಕೆ
“ದೂರ ತಳ್ಳಿ ತಿರಸ್ಕರಿಸಿದೆಯಲ್ಲೋ
ಮದ್ದಳೆ ಹಿಡಿದ ರಂಗನಾಯಕ”
ಕಿವಿಯಲ್ಲಿ ಚಿರಪರಿಚಿತ ದನಿ
ಬಯಲಾಗುತ್ತಿದ್ದಾನೆ ಅಲ್ಲಮ
ರಂಗ ಪ್ರವೇಶದ ಮುನ್ನವೇ
ವೇಷ ಕಳಿಚಿಟ್ಟ ಮಾಯೆಗಾಗಿ

ಮಾಯೆಯ ಅಂಗಳದಲ್ಲಿ
ಮನದೊಳಗೆ ಮದ್ದಳೆಯ ಸದ್ದಿಲ್ಲ
ಅದೆಂತಹುದ್ದೋ ನಿರ್ವಾತ
ಕಣ್ಣರಿಯದಿದ್ದರೂ ಕರುಳು ಒದ್ದಾಡುತ್ತಿದೆ
ಅದೆಲ್ಲಿಗೋ ಪಯಣ ದಿಕ್ಕುದೆಸೆಯಿಲ್ಲದೇ
ಕಂಗೆಟ್ಟವಳು ಎರಡೇ ದಾಪಿಗೆ
ಶಿವಾಲಯದ ನವರಂಗದ ಕೆಳಗೆ
ಹಾಡುವ ಹಾಡಿಗೆ ಮದ್ದಳೆಯ ಜೊತೆಯಿಲ್ಲ
ಮನಸೊಪ್ಪದ ಕುಣಿತದಲ್ಲಿ ಹೆಜ್ಜೆ
ತಾಳತಪ್ಪಿ ರಸಭಂಗವಾಗುವ ಮುನ್ನವೇ
ರಂಗಸಜ್ಜಿಕೆಯಿಂದ ನಿರ್ಗಮಿಸುವ ಆತುರ
ಎಲ್ಲಿದ್ದಾನೆ ಆತ?
ಮಾಯೆಯ ಮಾಯೆ ಅಡಗಿಸುವ ಹಠತೊಟ್ಟು
ಮಾಯೆಗೇ ಮಂಕುಬೂದಿ ಎರಚಿದಾತ
ಪ್ರೀತಿಯ ಅಹವಾಲಿಗೆ ಗಹಗಹಿಸಿ
ಕಿರುಗಣ್ಣಲ್ಲೂ ನೋಡದೇ ತಿರಸ್ಕರಿಸಿ
ಡಮರುಗವ ನೆಲಕ್ಕಪ್ಪಳಿಸಿ ಒಡೆದಾತ
ಎದೆಯೊಳಗೆ ಅಡಗಿಸಲಾಗದ ತಲ್ಲಣ
ಮರಗಿಡಗಳ ಕೇಳಿದಳು,
ಪಿಕಶುಕಗಳ ಅಂಗಲಾಚಿ ಶರಣಾಗಿ
ಅತನಿರುವ ತೋರಲು ಬೇಡಿದಳು
ಹರಿವ ನದಿಗೆ ಅಡ್ಡನಿಂತು ಬೊಬ್ಬಿರಿದಳು
ಕಂಡಿರಾ? ಆ ಮನ ಕದ್ದ ಮದ್ದಳೆಯವನನ್ನು
ಕೂದಲು ಕೆದರಿ, ಕಣ್ಣು ಕರೆಗಟ್ಟಿ
ಎರಡು ದಿನಗಳಿಂದ ತೊಟ್ಟು ಹನಿಯೂ
ತುಟಿ ಸೋಕದೆ ಬಿಳಿಚಿರುವಾಗ
ಯಾರೋ ಶೂನ್ಯ ಮಂಟಪದ
ಮಠಾಧಿಪತಿಯನ್ನು ಎದುರು ನಿಲ್ಲಿಸಿ
ಇವನು ಪ್ರಭುದೇವನೆಂದರು
ಕರುಳು ಗುರುತಿಸಿದರೂ ತುಟಿ ಬಿಚ್ಚುವಂತಿಲ್ಲ
ಎಂದೂ ಕಾಣದ ವ್ಯಂಗ್ಯವೊಂದು
ಸುಳಿದುಹೋಯಿತು
ತದೇಕಚಿತ್ತಳಾಗಿ ದಿಟ್ಟಿಸಿದವಳ ತುಟಿಯಂಚಿನಲ್ಲಿ
ನಗೆಯ ಹರಿತಕ್ಕೆ ಬೆಚ್ಚಿಬಿದ್ದ ಪ್ರಭುದೇವ
ಪ್ರೀತಿಯನ್ನು ಮಾಯೆ ಎಂದವ
ಇಹದ ಮೋಹ, ಅಧಿಕಾರದ ದಾಹಕ್ಕೆಲ್ಲ
ಮಾಯೆಯನ್ನು ಹೊಣೆ ಮಾಡಿ
ಬೆನ್ನು ಹಾಕಿ ಓಡಿ ಹೋದವ
ಶೂನ್ಯದ ಹೆಸರಲ್ಲಿ ಸಿಂಹಾಸನವನ್ನೇರಿದ್ದಾನೆ.
ಮಾಯೆಯ ತ್ಯಜಿಸಿ ಮೋಹಕ್ಕಂಟಿದ ಅಲ್ಲಮ
ನಗೆಯ ಕುಹಕಕ್ಕಂಜಿ ಡಮರುಗವ ಒಡೆದು,
ಮದ್ದಳೆಯ ಎಡಗಾಲಲ್ಲಿ ಒದ್ದು
ಶೂನ್ಯಪೀಠದಿಂದೆದ್ದ, ಜಂಬತೊರೆದು
ಮೊಣಕಾಲೂರಿ ಶರಣಾದ
ಉಧೋ ಉಧೋ ಮಾಯೆ
ಚೆಂಡು ಇದೀಗ ನಿನ್ನ ಅಂಗಳದಲ್ಲಿ .

ಅಲ್ಲಮನನ್ನು ಅರಸುತ್ತ..
ಕೈಯ್ಯಲ್ಲಿ ಹೂವು ಹಣ್ಣು ಅಕ್ಷತೆ
ಕುಂಕುಮ, ಧೂಪದ ಬಾನಿ ಒಂದಿಷ್ಟು ಗಂಧ
ಜೊತೆಗೆ ಹೆಜ್ಜೆಯಿಟ್ಟ ಸಖಿಯರನ್ನೆಲ್ಲ
ಜುಲುಮೆಯಿಂದ ದೂರ ಸರಿಸಿ
ದೂರದ ಶಿವಾಲಯಕೆ ಹೊರಟಾಕೆಯ
ಒಳಗೆ ನಿಗಿನಿಗಿಸುವ ಕೆಂಡ
ಶಿವಾಲಯದ ಆಸುಪಾಸಲ್ಲೆಲ್ಲೂ
ಅಲ್ಲಮನ ಸುಳಿವಿಲ್ಲ
ಡಮರುಗದ ದನಿಯೂ ಮೊರೆಯುತ್ತಿಲ್ಲ
ಗರ್ಭಗುಡಿಯ ಒಳಗೆ ಅನ್ಯಮನಸ್ಕಳಾಗಿ
ಹೂ ಮುಡಿಸಿ, ಕುಂಕುಮವಿಟ್ಟಳು
ನಿಟ್ಟುಸಿರಿಟ್ಟು ಒಳಗೊಳಗೇ ಕೋಪಿಸಿದಳು
ಬಂದಿದ್ದು ನಿನಗಾಗಿ ಅಲ್ಲವೋ ಸ್ಮಶಾನವಾಸಿ,
ಎಲ್ಲಾತ? ಜಗವನ್ನೇ ಕುಣಿಸುವ ಮದ್ದಳೆಯವ?
ಪ್ರಶ್ನಿಸಿ ಕೊಂಕಿಸಿದಳು ಕತ್ತು.
ದಿಟ್ಟಿಸಿದರೆ ಗಂಧ ಪೂಸುವಾಗ ಶಿವನನ್ನೇ
ಅರರೆ, ಮನ ಕದ್ದು ,ಬವಣೆಗೊಳಪಡಿಸಿ
ಲಿಂಗದೊಳಗೆ ಅಡಗಿ ಕುಳಿತಿದ್ದಾನಲ್ಲ
ದಿನವಿಡೀ ಆತನನ್ನೇ ಕಂಡಂತಾಗುವ ಭ್ರಮೆಗೆ
ರೋಸಿ ಕಣ್ಣುಜ್ಜಿಕೊಂಡರೂ
ಅಲ್ಲಿ ಕಂಡಿದ್ದು ಲಿಂಗವಲ್ಲದ ಅಲ್ಲಮ
ಮಂತ್ರಘೋಷ, ಜಾಗಟೆಯ ದನಿ
ಕೇಳಿಸಿದರೂ ಕಿವಿಗಿಳಿಯಲಿಲ್ಲ
ಧೂಪದಾರತಿ, ಮಂಗಳಾರತಿ ಕಣ್ತುಂಬಲಿಲ್ಲ
ಲಿಂಗದೊಳಗೆ ಕಣ್ಣು ಮುಚ್ಚಾಲೆಯಾಡುವವನೇ
ಕಣ್ಣು ತಪ್ಪಿಸುವ ನಾಟಕವೇಕೇ?
ಮನದೊಳಗೇ ಅನುಸಂಧಾನ ನಡೆಸುತ್ತ
ಲಿಂಗದೆದುರು ಶಿಲೆಯಾದವಳ ಕಂಡು
ಹಣ್ಣು ಹಾಲು ತಂದಿಲ್ಲವೇ?
ನೈವೇದ್ಯದ ಅರ್ಪಣೆಗೇನಿದೆ?
ಮೀಸೆ ಮರೆಯಲ್ಲೇ ನಗುತ್ತ ಕೇಳಿದವರಿಗೆ
ನನ್ನನ್ನೇ ಆತನಿಗೆ ಸಮರ್ಪಿಸುತ್ತೇನೆ
ಎಂದುಸುರಿಯೇ ಬಿಟ್ಟಳು ತರಳೆ
ಲೋಕ ಬೆಚ್ಚಿಬಿದ್ದು, ಗಡಗಡನೆ ನಡುಗಿತು,
ಬೂದಿ ಬಳಿದು, ಊರೂರು ತಿರುಗುವ ಶಿವನಿಗೆ
ತನ್ನನ್ನೇ ನೀಡುವ ಶಪಥಗೈಯ್ಯುವುದೇ?
ಹಾಹಾಕಾರ ಎಲ್ಲೆಲ್ಲೂ
ಲೋಕಪಾಲನಿಗೇ ಈ ಆಹ್ವಾನವೇ?
ಜಗನ್ಮಾತೆಗೆ ಸವತಿಯಾಗುವ ಕನಸೇ?
ಮನದಲ್ಲೇ ನಕ್ಕಳು, ಅಲ್ಲೇ ಅಡಗಿಸಿದಳು
ಆತ ಎಲ್ಲರಿಗೂ ಭಕ್ತವತ್ಸಲ
ಬಯಸಿದ ಹೆಣ್ಣಿಗೆ ಮಾತ್ರ ಅಸಂಗತ
ನನಗಲ್ಲ, ಶಿವೆಗೂ ಸಿಗದ ಅಲ್ಲಮನೀತ.
ಕುಹಕದ ಎಲ್ಲ ಮಾತುಗಳಿಗೆ ಬೆನ್ನು ಹಾಕಿ
ಇಹ ಪರವೆರಡರಲ್ಲೂ ಒಂದೇ ಗುರಿ ಹೊತ್ತು
ಹೊರಟೇ ಬಿಟ್ಟಳು ಮದ್ದಳೆಯ ದನಿಯರಸಿ

ಅಲ್ಲಮ ಎಂಬ ಮಾಯೆ..
ಬಯಸಿ ಬಯಸಿ ಎಲ್ಲವನ್ನೂ ಬಿಟ್ಟು
ಸಂದಿಗೊಂದಿಗಳಲ್ಲೆಲ್ಲ ತಡುಕಿ
ಯಾವುದೋ ಪಾಳು ಶಿವಾಲಯದಲ್ಲಿ
ತನ್ನನ್ನೇ ಮರೆತು ಡಮರುಗದ
ನಾದದಲ್ಲಿ ತಲ್ಲೀನನಾದ ಅಲ್ಲಮನನ್ನು
ಹುಡುಕಿ ಹೊರಟಳು ಮಾಯೆ.
ಮುಖದಲ್ಲಿಷ್ಟು ಸಿಡುಕು
ಕಣ್ಣಲ್ಲಿ ನಿಗಿನಿಗಿಸುವ ಕೆಂಡ
ಬಯಸಿ ಬಂದ ಮಾಯೆಯ ಎದೆಯೊಳಗೆ
ಹೇಳಿಕೊಳ್ಳಲಾಗದ ಉಮ್ಮಳ
ಮನದ ಬಯಕೆ ಅರುಹಲಾಗದ ಒತ್ತಡ
ಹೇಳಿಕೊಳ್ಳಲೆಂದು ಬಳಿಸಾಗಿದರೆ
ಅಲ್ಲಮನ ಡಮರುಗದ ಸದ್ದೀಗ
ರಣಚಂಡೆಯಾಗಿ ಎದೆ ನಡುಗಿಸುತ್ತಿದೆ
ಮನದಾಳದ ಮಾತನ್ನು
ಅಲ್ಲೇ ಹುದುಗಿಸಿಕೊಂಡರೆ
ಮೈ ಕಿಚ್ಚೆದ್ದ ಬೆಂಕಿ
ಸುಡುವ ಬೆಂಕಿಯ ಉಡಿಯಲ್ಲಿ
ಅಡಗಿಸಿಟ್ಟುಕೊಂಡ ಯಾತನೆ
ಒಡಲೆಲ್ಲ ಬೆಂದು ಎದ್ದ ನೀರಗುಳ್ಳೆ
ಟಪಟಪನೆ ಒಡೆದು ಕೀವು ಸೋರುತ್ತ
ನರಕ ಯಾತನೆಯ ಅನುಭವ
ಕಣ್ಣೆದುರಿಗಿರುವ ಅಲ್ಲಮನನ್ನು
ಬೆರಳ ತುದಿಯಲ್ಲಾದರೂ
ಒಮ್ಮೆ ಸೋಕಬೇಕೆಂಬ ಆಸೆಗೆ
ಕಟ್ಟು ಹಾಕಲಾಗದೇ ಗುಡಿಯಲ್ಲಿ
ತುಂಬಿರುವ ಜನಜಂಗುಳಿಯಲ್ಲಿ
ಒಮ್ಮೆ ಮುಟ್ಟಲು ಹೋದರೆ
ಎಲ್ಲವೂ ಬಟಾಬಯಲು
ಅಲ್ಲಮನೆಂಬ ಮಾಯೆ
ಈ ಮಾಯೆಗೆ ಯಾವಾಗಲೂ ಮಾಯೆಯೇ.

ಭಯಗೊಂಡ ಶಿವ
ಅಲ್ಲೆಲ್ಲೋ ಅಲ್ಲಮ ಮದ್ದಳೆ ಒಡೆದ ಸದ್ದು
ಬೇಡವೆಂದು ಕಿವಿ ಮುಚ್ಚಿಕೊಂಡರೂ ಅಪ್ಪಳಿಸುತ್ತಿದೆ
ಇತ್ತ ಅರಮನೆಯ ಸುಖವನ್ನೆಲ್ಲ ತ್ಯಜಿಸಿ
ಬಟ್ಟ ಬಯಲಾಗಿ ಹೋದ ಪ್ರಭುದೇವನಿಗಾಗಿ
ಕಂಡ ಕಂಡ ಶಿವಾಲಯವನ್ನೆಲ್ಲ ಅಂಡೆಲೆಯುತ್ತಿರುವ
ಮಾಯೆಯ ಎದೆಯೊಳಗೆ ರುದ್ರ ನಗಾರಿಯ ನರ್ತನ
ನಗು ಮರೆತು ಅದೆಷ್ಟೋ ಶತಮಾನವಾಗಿದೆ
ಒಂದಕ್ಷರವನ್ನೂ ಉಸುರದೆ ವರ್ಷಗಳೇ ಉರುಳಿದೆ
ಕಣ್ಣ ಕೊನೆಯಲ್ಲಿರುವ ಕಾಡಿಗೆ ಕದಡಿ ಹೋಗಿ
ಕಣ್ಣ ಕೆಳಗೆಲ್ಲ ಹರಡಿಕೊಂಡಿದೆ
ಮಾಸಿದ ಬಟ್ಟೆಯೊಳಗೆ ಮೊಡದೊಳಗೆ ಅವಿತ ಸೂರ್ಯ
ಎಲ್ಲವನ್ನೂ ಹಿಡಿದಿಟ್ಟುಕೊಂಡ ಮಾಯೆಗೆ
ಅದೆಂತಹುದ್ದೋ ನರಳಾಟ,
ಸುಖವೋ ದುಃಖವೋ ಅರಿವಾಗದ ಹಿತವಾದ ನೋವು
ಎದೆಯೊಳಗೆ ಮೊರೆವ ಸುನಾಮಿ.
ಎದುರು ನಿಂತ ಅಲ್ಲಮನ ತೋಳೊಳಗೆ ಬಳಸಲು
ನಾಚಿಕೆ ಬಿಟ್ಟು ಕೈ ಚಾಚಿದ್ದಾಳೆ
ತೆರೆದ ತೋಳೊಳಗೆ ಗುಬ್ಬಚ್ಚಿಯಂತೆ ಸೇರಿದ
ಅಲ್ಲಮನನ್ನು ಢವಗುಡುವ ಎದೆಗೆ ಒರಗಿಸಿಕೊಳ್ಳಬೇಕೆನ್ನುವಷ್ಟರಲ್ಲಿ
ಅರೆ.. ಎಲ್ಲಿದ್ದಾನೆ ಆತ, ಶೂನ್ಯಾಧಿಕಾರಿ?
ಶಿವನೆದುರಿಗೆ ಬೆಳಗಿದ ಕರ್ಪೂರದಂತೆ ಸುಗಂಧವಷ್ಟೇ.
ನನ್ನ ಸೆಳೆವುದೇನೂ ಸುಲಭದ ಮಾತಲ್ಲ
ಪ್ರಭುದೇವನ ನಗುವಿನ ಆರ್ಭಟಕ್ಕೆ
ತರಳೆಗೆ ಕಣ್ಣುಗತ್ತಲೆ
ಬಾ.. ಹೆಣ್ಣೆ, ನೀನು ಮಾಯೆಯಾದರೆ
ನಿನ್ನೊಳಗೆ ಒಂದಾಗಿಸಿಕೊ
ಮಾತಲ್ಲೀಗ ಕ್ರೋಧದ ಛಾಯೆ
ಅತ್ತ ಈ ನಾಟಕವನ್ನು ನೋಡುತ್ತಿರುವ ಶಿವ
ಮದ್ದಳೆಯ ಪುಡಿಗೈದ ಅಲ್ಲಮನ ಕೋಪಕ್ಕೆ ಹೆದರಿ
ಡಮರುಗವನ್ನೇ ಪರಿತ್ಯಜಿಸಿದ್ದಾನೆ






ಅದ್ಬುತ ರಚನೆ,ಭಾವನೆಗಳು,ಸೋಲು, ಸೆಳೆತ,ಎಲ್ಲವೂ,ಉತ್ತಮ ಕವಿತೆ.
ಥ್ಯಾಂಕ್ಯೂ ಮೇಡಂ
ಸೂಪರ್…..
ಥ್ಯಾಂಕ್ಯೂ ಪುನಿತ
ವಾವ್…. ಅದ್ಭುತ ಎಂದಷ್ಟೇ ಹೇಳಬಲ್ಲೇ…. ಮತ್ತೆ ಮತ್ತೆ ಗಟ್ಟಿ ಧ್ವನಿಯಲ್ಲಿ ಓದಿ ಆನಂದಿಸಿದೆ….
ಉತ್ತಮ ಕವಿತೆ.
ಶ್ರೀದೇವಿಯವರೇ ಎಷ್ಟು ವಿಶಿಷ್ಟ !
ಈ ಅಲ್ಲಮನ ಮದ್ದಳೆಯ ಸದ್ದು ಏನೆಲ್ಲಾ ಬಡಿದೆಬ್ಬಿಸಿದೆ , ಅದು ಎಬ್ಬಿಸದ ಅಲೆ ಎಲ್ಲೆಲ್ಲೆಲ್ಲಾ ತಾಕಿದೆ . ನವಿರಾದ ಅಪ್ತ ಭಾವನೆಗಳು ಬೆಸೆದ ಕವಿತೆಗಳು. ಈ ಅವಧಿಯಲ್ಲಿ ಬಹಳಷ್ಟು ಭಾವನೆಗಳ ಹರವು ಖುಷಿ ಧನ್ಯವಾದ
ಅಲ್ಲಮ ಎಬ್ಬಿಸದ ಅಲೆಗಳೇ ನನ್ನ ತಟ್ಟಿದೆ
ಅಲ್ಲಮನನ್ನು ಕಾವ್ಯದ ಕಣ್ಣಿಂದ ನೋಡಿ ಪ್ತತಿಕ್ರಿಯಿಸುವುದು ಕಾವ್ಯಕ್ಕೆ ಪ್ರತಿಕ್ರಿಯೆ ಆಗಬಹುದೇ ಹೊರತು ಅಲ್ಲಮನಿಗಲ್ಲ! ಅದರಲ್ಲೂ, ಹರಿಹರನ ಚಿತ್ರಣ ಅಡ್ಡಿಯಿಲ್ಲ.. ಮುಂದೆ ಬಂದವರು ಉಲ್ಟಾ ಮಾಡಿದ್ದಾರೆ…ಚಾಮರಸನದೂ ಕಾವ್ಯದ ದೃಷ್ಟಿಯಿಂದ OK, ಅಲ್ಲಮನಲ್ಲಿಲ್ಲ…
ಸರ್ ಕನ್ನಡ ಕ್ಲಾಸ್ ತಗೊಂಡ ಹಾಗಿದೆ
ಚೆನ್ನಾಗಿವೆ
ಥ್ಯಾಂಕ್ಯೂ
Just amazing
No words !!!!!!!
Shree mdm
Keep going
ಥ್ಯಾಂಕ್ಯೂ ಜಯ್..
ಬಹಳ ಚೆನ್ನಾಗಿದೆ,
ಥ್ಯಾಂಕ್ಯೂ ಸರ್
idu melnotakke kaanuva Allama.. Avanu ulida vachanakaararante ashtu sulabhadalli dakkuvavanalla..
nutana doshetty
ನಿಜ ಅಲ್ಲಮನನ್ನು ಅರಿಯುವುದು ಅಷ್ಟು ಸುಲಭವಲ್ಲ..
Bahala chennagive spandagalu, samvedanegalu. Bayalaada allama, nirbhayalaada maaye.bhaava nirbharathege ede sotha maddale. Katthalege itthaleyayya.
ಥ್ಯಾಂಕ್ಯೂ ಸರ್
ಕವನಗಳು ಕ್ಷಣಕ್ಷಣಕ್ಕೂ ಹೊಸತನಕ್ಕೆ ತೆರೆದು ಮೌನಕ್ಕೆ ತಳ್ಳಿದವು ಮ್ಯಾಮ್.
ಋತಾ ಥ್ಯಾಂಕ್ಯೂ
ಶ್ರೀದೇವಿ ಮೇಡಂ ಅವಧಿಯಲ್ಲಿ ನಿಮ್ಮ ಅಲ್ಲಮ ಕವಿತೆಗಳು ತುಂಬಾ ಚೆನ್ನಾಗಿವೆ ನಿಮ್ಮ ಎಲ್ಲಾ ಬರಹಗಳು ಚೆನ್ನಾಗಿರುತ್ತವೆ ನಿಮಗೆ ಅಭಿನಂದನೆಗಳು
ಥ್ಯಾಂಕ್ಯೂ ಸರ್.
ಅಲ್ವಮನೊಬ್ಬನೇ ಅನುಭಾವಿ, ಪ್ರಶ್ನಾತೀತನೆಂಬ ಹುಸಿನಂಬಿಕೆಯಲ್ಲಿದ್ದ ನನ್ನ ಅರಿವಿನ ಪೊರೆಯನ್ನು ಹರಿಸಿದ ಕವಿತೆಗಳು!! ಧನ್ಯವಾದಗಳು
ಅಲ್ಲಮ ಲೋಕದ ಕಣ್ಣಿಗೆ ಅನುಭಾವಿಯೇ. ಆದರೆ ಅದು ಮಾಯೆಗಲ್ಲ ಮಾಯೆಗೆ ಆತ ಪೇಮಿ ಮಾತ್ರ.
ನಾನು ಇತ್ತೀಚೆಗೆ ಕವನಗಳನ್ನು ಓದುವುದರಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ. ಆದರೂ ಈ ಕವಿತೆಗಳು ಎರಡನೇ ಓದನ್ನು ಬಯಸುತ್ತಿವೆ.
ಓಹ್ ಥ್ಯಾಂಕ್ಯೂ