ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೋಭಾ ಹಿರೇಕೈ ಕಂಡ್ರಾಜಿ ಹೊಸ ಕವಿತೆ- ನಿವೃತ್ತಿಯ ನಂತರ…

ಶೋಭಾ ಹಿರೇಕೈ ಕಂಡ್ರಾಜಿ

ತೊಂದರೆಯೇನಿಲ್ಲ ಸಖಿ,
ಮರೆತ ಮುಂಜಾನೆಯ ನಡುಗೆ
ಮುಸ್ಸಂಜೆಯ ಹಾಡು,
ನಡು ಮಧ್ಯಾನದ ಗಡದ್ದು
ಗೊರಕೆಯ ನಿದ್ದೆಯನ್ನೆಲ್ಲ ಮತ್ತೆ ನೆನಪಿಸಿಕೊಳ್ಳುತ್ತೇನೆ.

ಮಗುಚಿ ಮಗುಚಿ
ಒಂದಕ್ಷರವೂ ಕಣ್ತಪ್ಪದಂತೆ
ಹಳೆಯ ಪತ್ರಿಕೆಗಳ ಹರಿದ ಪುಟಗಳನ್ನೂ ಬಿಡದೆ
ಮತ್ತೆ ಮಾಸಲು ಮಾಡುತ್ತೇನೆ

ಸೊರಗಿ ನಿಂತ ಹೂಗಿಡ, ಹಾಲ್ಬಳ್ಳಿಗೆಲ್ಲ
ಸುಡು ಮಣ್ಣು ಹಸಿ ಗೊಬ್ಬರ ಹಾಕಿ
ಮಾಡಿಗೆ ಹಿಡಿದ ಬಲೆಯ ಧೂಳ ಒರೆಸಿ
ಕುಕ್ಕರಿನ ಕೇಕೆ
ಮಿಕ್ಸರಿನ ಗರ್ ಗರ್ ಸುತ್ತುಗಳ
ಲೆಕ್ಕ ಕಲಿತು
ನಿನಗೊಂದಿಷ್ಟು ಸವಡಿ ಮಾಡಿ ಕೊಡುತ್ತೇನೆ.

ಮಗನ ನೌಕರಿಯ, ಮಗಳ ಮದುವೆಯ
ನೀ ಎಚ್ಚರ ತಪ್ಪಿ ಬಿದ್ದು ಬಿಟ್ಟಾಗ
ಹೊತ್ತ ಹರಕೆಗಳನ್ನೆಲ್ಲ
ಖುದ್ದಾಗಿ ನಾನೇ ಹೋಗಿ
ತೀರಿಸಿ ಬರುತ್ತೇನೆ.

ಗೋಗರೆಯುವ ಕಡಲೂರಿನ
ಆ ನೀಲಿ ದಂಡೆಗೆ ಕರೆದೊಯ್ದು
ದಿನ ಪೂರ್ತಿ ಹಳೆಯ ನೆನಪುಗಳ ನಿನ್ನ ಮುಂದಿಟ್ಟು
ನೆರಿಗೆ ಗಲ್ಲದ ಒಳಗೂ…
ನಾಚಿಕೆಯುಕ್ಕಿಸುತ್ತೇನೆ.

ವಾರಕ್ಕೊಮ್ಮೆ ತಪ್ಪದೇ ಹೋಗಿ
ಅವ್ವಳ ಗುಳಿಗೆಯ ಚೀಟಿ ಹುಡುಕಿ, ಮಂಡಿ ತಿಕ್ಕಿ
ಬಿಸಿ ನೀರಿನ ಉಗಿ ತಾಗಿಸಿ
ಕೊಟ್ಟಿಗೆಯ ಕರುವ
ಎತ್ತಿ ಮುದ್ದಾಡಿ
ಗೀಬಿನ ಹಾಲು ತೀರುವವರೆಗೂ
ತಿಂದು ತೇಗಿ
ಒಂದೆರಡು ಕೇಜಿ ಉಬ್ಬಿ ಬರುತ್ತೇನೆ.

ಮರೆತ ಬಂಧು ಬಳಗ
ಊರುಕೇರಿಯನ್ನೆಲ್ಲ ನಿನ್ನೊಂದಿಗೆ ತಿರುಗಿ
ಮೊಮ್ಮಕ್ಕಳಿಗೆಂದು ಹೊಸ ಹಾಡನ್ನಷ್ಡು
ಉರು ಹೊಡೆಯುತ್ತೇನೆ.

ಅದಕ್ಕೇ…
ನಾಳೆಯಿಂದ ಕೆಲಸವಿಲ್ಲದವನೆಂದು ಮಾತ್ರ
ಜರಿಯ ಬೇಡ ಸಖಿ,
ಕೆಲಸದ ಪಟ್ಟಿಯನ್ನೆಲ್ಲ ಈಗಲೇ
ನಿನಗೊಪ್ಪಿಸಿ ಬಿಡುತ್ತೇನೆ.

‍ಲೇಖಕರು Admin

21 June, 2022

3 Comments

  1. ಥ್ಯಾಂಕ್ಸ್ ಅವಧಿ.

    ಥ್ಯಾಂಕ್ಸ್ ಅವಧಿ

  2. ಇಬ್ಬನಿ ಇನಿ

    ಲೌಲಿ ಕವಿತೆ

  3. Nagaraj Harapanahalli

    ಧ್ವನಿಪೂರ್ಣ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading