ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೋಭಾ ದಿನೇಶ್ ಹೊಸ ಕವಿತೆ: ಆತ ಮಾಗಿದ ಕಾಫಿ ಹಣ್ಣಿನಂತೆ…

-ಶೋಭಾ ದಿನೇಶ್

ಹಾಗೆಯೇ ಇದ್ದಾನಲ್ಲ, ಮತ್ತಷ್ಟು ಹರಯ ಸೇರಿದಂತಿದೆ
ಅದೆಷ್ಟು ವರ್ಷಗಳು ಸಂದು ಹೋದವು ನಮ್ಮ ನಡುವೆ…
ನಾವಿಬ್ಬರೂ ಹೀಗೆ ನೋಡದೇ, ಹರಟದೇ..

ಅಚಾನಕ್ಕು ಮೊನ್ನೆ ಸೆಮಿನಾರಿನಲ್ಲಿ ಸಿಕ್ಕವನು ಹಿಡಿಯಾಗಿ ನಕ್ಕಿದ್ದ
ಏನೂ ಕಳೆದುಕೊಂಡೇ ಇಲ್ಲವೇನೋ ಅನ್ನುವ ಹಾಗೆ
ಕಾಫಿಕಣದಲ್ಲಿ ಒಣಗಲು ಬಿಟ್ಟ ಉರುಟು ಕಾಫಿ ಬೀಜದಂತೆ ಕುಲು ಕುಲು ನಗು

ಕಾಫೀ?? ಎಂದುಸುರಿ ಒಪ್ಪಿಗೆಗೂ ಕಾಯದೇ ಹೊರಟವನ ಹಿಂದೆ
ಸುಮ್ಮನೇ ನಡೆಯುತ್ತೇನೆ ಪ್ರತಿಭಟಿಸದೇ
ಪ್ರತೀ ಬಾರಿಯೂ ಸೋಲುತ್ತೇನೆ ಹೀಗೆ…

ನಮ್ಮಿಬ್ಬರ ನಡುವಿನ ಟೇಬಲ್ ಮೇಲೆ ತೆಕ್ಕೆಗಟ್ಟಳೆ ನೆನಪುಗಳು
ಅವನು ಮಾತಾಡುತ್ತಲೇ ಇದ್ದಾನೆ, ಎಲ್ಲವನ್ನೂ ಮರೆತಂತೆ
ಮಾರ್ಚಿ ತಿಂಗಳ ಮೊದಲ ಮಳೆಗೆ ಅರಳಿದ ಕಾಫಿ ಹೂವಿನ ಘಮಲಿನಂತೆ…

ಅದೇ ಹೊಳಪು ಕಣ್ಣುಗಳಲ್ಲಿ ಮಾಗಿದ ಕಾಫಿ ಹಣ್ಣಿನಂತೆ
ನೀನಿಲ್ಲದೇ ಬದುಕಿಲ್ಲ ಅಂದವನ ಬದುಕು ಸಹಜವಾಗಿಯೇ ಇದೆ
ನಾನು ಹಳೆಯ ಪ್ರೇಮವೊಂದನ್ನು ಹುಡುಕುತ್ತಿದ್ದೇನೆ

ಆಗಷ್ಟೇ ಹುರಿದ ಕಾಫಿ ಬೀಜದಿಂದ ಭಟ್ಟಿ ಇಳಿಸಿದ ಡಿಕಾಕ್ಷನ್ನಿಗೆ
ಹದವಾಗಿ ಕುದಿಸಿದ ಇಷ್ಟೇ ಹಾಲು ಬೆರೆಸಿ
ದಿವ್ಯ ಕಾಫಿಯೊಂದನ್ನು ತಯಾರಿಸಿ ಮುಂದಿಟ್ಟಿದ್ದಾನೆ…

ಅವನು ಮರೆತ ಟನ್ನುಗಟ್ಟಳೆ ನೆನಪುಗಳನ್ನು ನೇವರಿಸುತ್ತಿದ್ದೇನೆ
ಎಲ್ಲವನೂ ನಿಯಂತ್ರಿಸುವ ನನ್ನ ಮನಸಿನ ಅಂಕೆಗೆ ಕಣ್ಣುಗಳು ಒಳಪಟ್ಟಿಲ್ಲ
ಸುಖಾಸುಮ್ಮನೆ ತುಂಬಿಕೊಳ್ಳುತ್ತಿವೆ…

‍ಲೇಖಕರು avadhi

3 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading