ಶೇಷಗಿರಿ ನೆಲಕ್ಕೆ ಬಂದ ‘ಚಾವುಂಡರಾಯ’

ಸತೀಶ ಕುಲಕರ್ಣಿ

ಇತಿಹಾಸದೊಳಗೆ ಹರಳುಗಟ್ಟಿದ ವ್ಯಕ್ತಿ ಸಾಧಕ ಚಾವುಂಡರಾಯನ ಕುರಿತಾದ ಅಪರೂಪದ ನಾಟಕ ಶೇಷಗಿರಿಯಲ್ಲಿ ಪ್ರದರ್ಶನವಾಯಿತು.

ಸದಾ ಹೊಸ ಹೊಸ ಪ್ರಯೋಗಗಳ ಮಾಡುತ್ತ ನಾಡಿನ ಗಮನ ಸೆಳೆದ ಶೇಷಗಿರಿಯ ಗಜಾನನ ಯುವಕ ಮಂಡಳ ಈ ಬಾರಿ ಹಿಂಸೆ ಅಹಿಂಸೆ ದ್ವಂದ್ವ ಕಥಾನಕವಾದ ‘ಚಾವುಂಡರಾಯ’ ನಾಟಕವನ್ನು ಇದೀಗ ರಾಷ್ಟ್ರೀಯ ನಾಟಕ ಶಾಲೆಯಿಂದ ಹೊರ ಬಂದಿರುವ ಶ್ವೇತಾರಾಣಿ ಹಾಸನ ಇದನ್ನು ನಿರ್ದೇಶಿಸಿದ್ದರು. ತಮಿಳು ನಾಡಿನ ತೆರೆಗೆ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿರುವ ಕನ್ನಡಿಗ ಜಯರಾಮ್ ರಾಮಪುರ ಇದನ್ನು ರಚಿಸಿದವರು.

ಒಂದೊಂದೆ ಯುದ್ಧ ಗೆಲ್ಲುತ್ತ, ಶತ್ರು ಸಂಹಾರ ಮಾಡಿ, ಗಂಗ ಸಾಮ್ರಾಜ್ಯ ವಿಸ್ತರಿಸುವ ಚಾವುಂಡರಾಯ ಪ್ರತಿ ಯುದ್ಧದ ಕೊನೆಯಲ್ಲಿ ಪಶ್ವಾತ್ತಾಪ ಮತ್ತು ಪ್ರಾಯಶ್ಚಿತ್ತ, ಎದರು ರಾಜನನ್ನು ಕೊಂದಾಗ ಒಂದು ಕ್ಷಣ ಅನುಭವಿಸುತ್ತಾನೆ. ಅದೇನೋ ಪಾಪ ಪ್ರಜ್ಞೆ ಕಾಡುತ್ತದೆ. ಚಾವುಂಡರಾಯ ಎಂದೂ ರಾಜನಾಗುವ ಬಯಕೆಯವನಲ್ಲ. ಸದಾ ದಂಡನಾಯಕ. ಕೊನೆಗೆ ತನ್ನನ್ನು ತಾನು ಪರಿಶುದ್ಧವಾಗಿಸಲು ಬಾಹುಬಲಿ ಮೂರ್ತಿಯನ್ನು ನಿರ್ಮಿಸಿ ಮನಶ್ಯಾಂತಿ ಪಡೆಯಲು ಯತ್ನಿಸುವುದೇ ನಾಟಕದ ತಿರುಳು.

ಜೈನ್ ಪರಂಪರೆಯ ಮುಖ್ಯ ಕವಿಗಳಲ್ಲೊಬ್ಬನಾದ ರನ್ನ ಕವಿ ಚಾವುಂಡರಾಯನ ಸನಿಹ ಬಯಸಿ, ಯುದ್ಧ ಭೀಕರತೆಯನ್ನು ಕಣ್ಣಾರೆ ಕಾಣುವ ತವಕದಿಂದ ಬರುವ ದೃಶ್ಯದೊಂದಿಗೆ ನಾಟಕ ಆರಂಭವಾಗುತ್ತದೆ. ಕವಿಯೊಬ್ಬ ಕಲಿಯಾದ ಇತಿಹಾಸ ಸತ್ಯವಿದು. ನಾಟಕಕಾರ ಜಯರಾಮ್ ರನ್ನ ಕವಿಯನ್ನು ಕೇಂದ್ರವಾಗಿಸಲು ಯತ್ನಿಸಿದ್ದಾರೆ.

ಚಾವುಂಡರಾಯ ಪ್ರತಿ ಹೋರಾಟದಲ್ಲಿ ಅನುಭವಿಸುವ ಯಾತನೆ ಹಿಂಸಾ ವಿರೋಧಿಯಾದರೂ ಕರ್ತವ್ಯ ಮರೆಯುವುದಿಲ್ಲ. ರಕ್ಕಸಗಂಗ, ನಾಗವರ್ಮ ಹತ್ಯೆಗಳು ಸಾಕಷ್ಟು ಬಾಧಿಸಿದರು ಕೊನೆಗೆ ಶಾಂತ ಬದುಕಿನ ಬಾಹುಬಲಿ ಮೂರ್ತಿಯನ್ನು ನಿರ್ಮಿಸಿ ಆತ್ಮಾವಲೋಕನ ಮಾಡುವುದರೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ಚಾವುಂಡರಾಯ ಮತ್ತು ಬಾಹುಬಲಿ ನಡುವಿನ ಕೊನೆ ಅಂಕದಲ್ಲಿ ನಡೆಯುವ ಸಂವಾದ ಇಡೀ ನಾಟಕದ ಹೃದಯಸಂವಾದವಾಗಿದೆ. ನ್ಯಾಯ ಅನ್ಯಾಯ, ನೀತಿ ಅನೀತಿ, ಆದರ್ಶ ವಾಸ್ತವ ದರ್ಶನ ಸಾಕ್ಷಾತ್ಕಾರಗಳ ಸಂಘರ್ಷವನ್ನು ಅದ್ಭುತವಾಗಿ ನಾಟಕಕಾರ ಬರೆದಿದ್ದಾರೆ. ಜೊತೆಗೆ ನಿರ್ದೇಶಕರು ಅಷ್ಟೇ ಹೃದಯಸ್ಪರ್ಶಿಯಾಗಿ ರಂಗಕ್ಕೆ ತಂದಿದ್ದರು. ಇದು ಚಾವುಂಡರಾಯ ನಾಟಕದ ಮೊದಲ ಪ್ರಯೋಗ. ಶೇಷಗಿರಿ ಎಂಬ ನೆಲದ ರೈತಾಪಿ ಮಕ್ಕಳು ಅಭಿನಯಿಸಿದ ಅದ್ಭುತ ಪ್ರಯೋಗ. ಇನ್ನಿಷ್ಟು ಹಾಡು, ಸಂಗೀತ, ಶ್ರೀಮಂತ ರಂಗ ಸಜ್ಜಿಕೆ ಬೇಕಿತ್ತು ಅನ್ನಿಸದೇ ಇರಲಿಲ್ಲ. ಸಂಪೂರ್ಣವಾಗಿ ಸ್ತ್ರೀ ಪಾತ್ರಗಳು ಇಲ್ಲದ ಪುರುಷ ಪ್ರಧಾನ ನಾಟಕ ಇದಾಗಿತ್ತು.

ಚಾವುಂಡರಾಯನಾಗಿ ದೇವಿಪ್ರಸಾದ ಯರತೋಟಿ, ರನ್ನನಾಗಿ ಜಮೀರ ಪಠಾಣ, ಪಾಂಚಾಲ ಗಣೇಶ ಲಮಾಣಿ, ರಕ್ಕಸಗಂಗನಾಗಿ ವಿನೂತಕುಮಾರ ಚಿಕ್ಕಮಂಗಳೂರ, ಮಾರಸಿಂಘನಾಗಿ ಸಿದ್ದಪ್ಪ ರೊಟ್ಟಿ ಇನ್ನಿತರ ಪಾತ್ರಗಳಲ್ಲಿ ಮಹೇಶ ಬಾರ್ಕಿ, ಸಿದ್ದು ಕೊಂಡೋಜಿ, ಸಣ್ಣಪ್ಪ ಗೊರವರ, ನಾಗರಾಜ ಕಾಶಂಬಿ, ಹರೀಶ ಗುರಪ್ಪನವರ ಗಮನ ಸೆಳೆದರು.

ಗಣೇಶ ಹೆಗ್ಗೊಡ ಮತ್ತು ಲಕ್ಷ್ಮಣ ರೊಟ್ಟಿ ಸಂಗೀತ, ವಿನೂತಕುಮಾರ ರಂಗವಿನ್ಯಾಸ ಹಾಗೂ ವಸ್ತ್ರ ವಿನ್ಯಾಸವನ್ನು ಶಿವಮೂರ್ತಿ ಹುಣಸಿಹಳ್ಳಿ ಮತ್ತು ಗೋಪಿ ನಿರ್ವಹಿಸಿದ್ದರು. ವಿಶೇಷವೆಂದರೆ ಖ್ಯಾತ ನಿರ್ದೇಶಕ ಶ್ರೀಪಾದ ಭಟ್ಟ ನಾಟಕಕ್ಕೆ ಅಂತಿಮ ಸ್ಪರ್ಶ ನೀಡಿದ್ದರು. ಪ್ರಭು ಗುರಪ್ಪನವರ ಮತ್ತು ನಾಗರಾಜ ಧಾರೇಶ್ವರ ಪ್ರದರ್ಶನದ ಜವಾಬ್ದಾರಿ ಹೊತ್ತಿದ್ದರು.

ಈಗಾಗಲೇ ನಾಡಿನಾದ್ಯಂತ ಉಷಾಹರಣ, ಇವನಮ್ಮವ, ಪಾಪು ಗಾಂಧಿ ಬಾಪು ಗಾಂಧಿಯಾದ ಕಥೆ, ನ್ಯಾದ ಬಾಗಿಲು, ವಾಲಿವಧೆ ನಾಟಕಗಳ ಮೂಲಕ ಹೆಸರು ಮಾಡಿರುವ ಶೇಷಗಿರಿ ಕಲಾ ತಂಡಕ್ಕೆ ಮತ್ತೊಂದು ಗರಿಯಾಗಿ ಚಾವುಂಡರಾಯ ಇದೇ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವದ ಮೂಲಕ ಮತ್ತೊಮ್ಮೆ ಗರಿಗೆದರಲಿವೆ.

ನಾಟಕ ಪ್ರದರ್ಶನಕ್ಕಾಗಿ ಆಗಮಿಸಿದ್ದ ಶ್ರೀನಿವಾಸ ಜಿ ಕಪ್ಪಣ್ಣ, ಜಯರಾಮ ನಾಟಕಕಾರ ಜಯರಾಮ್ ರಾಮಪುರ, ಶಶಿಧಾರ ಬಾರಿಘಾಟ, ಪ್ರೊ. ಶೇಖರ ಭಜಂತ್ರಿ, ಕಲಾವಿದ ಕರಿಯಪ್ಪ ಹಂಚಿನಮನಿ ಅವರುಗಳೊಂದಿಗೆ ಹಾವೇರಿಯಲ್ಲಿ ನಾಟಕ ಪ್ರದರ್ಶನದ ಅಪರಾಹ್ನ ಸಾಹಿತ್ಯ ಸಂವಾದ ಕೂಡ ಹಂಚಿನಮನಿ ಆರ್ಟ ಗ್ಯಾಲರಿಯಲ್ಲಿ ಏರ್ಪಟ್ಟಿತ್ತು.

‍ಲೇಖಕರು Admin

October 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: