ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವಕುಮಾರ ಮೆಣಸಿನಕಾಯಿ ಹೊಸ ಕವಿತೆ- ಅಪ್ಪ ಈಗೀಗ ನೆನಪಾಗುತ್ತಾರೆ..!

ಶಿವಕುಮಾರ ಮೆಣಸಿನಕಾಯಿ

ಅಪ್ಪ ಈಗೀಗ ನೆನಪಾಗುತ್ತಾರೆ..!
ಟ್ರಾಫಿಕ್ ಸಿಗ್ನಲ್ ನಲ್ಲಿ ಸೆಕೆಂಡ್ ಗಳನ್ನು ಎಣಿಸುವಾಗ ಪಕ್ಕದಲ್ಲಿ ಬಸವಳಿದ ಹಿರಿಯ ಜೀವ ಕಂಡಾಗ
ಅಪ್ಪ ಈಗೀಗ ನೆನಪಾಗುತ್ತಾರೆ..

ತಿಂಗಳ ಕೊನೆಗೆ ಪೇಟಿಎಂ, ಫೋನ್ ಪೆ, ಎಟಿಎಮ್ ನಲ್ಲಿ ಬ್ಯಾಲೆನ್ಸ್ ಕಡಿಮೆ ಆದಾಗ ಅದು ಹೇಗೆ ಪಾಸ್ ಬುಕ್ ನಲ್ಲೇ ಅರ್ಧ ಜೀವನ ಕಳೆದು ಬಿಟ್ಟೆ ಅನಿಸಿದಾಗ
ಅಪ್ಪ ಈಗೀಗ ನೆನಪಾಗುತ್ತಾರೆ…

ಹೆಂಡತಿ, ಏನ್ರೀ ನೀವು ಒಂದ್ ಮನೆ ಮಾಡಲು ಆಗಲಿಲ್ಲ ಅಂದಾಗ, ಸಾಲ – ಸೋಲ ಗೊತ್ತಾಗದೆ ಅರ್ಧ ಜೀವನ ಕಳೆದು ಬಿಟ್ಟೆ ಅನಿಸಿದಾಗ
ಅಪ್ಪ ಈಗೀಗ ನೆನಪಾಗುತ್ತಾರೆ…

ಯಾವಾಗಲು ಮೊಬೈಲ್ ನಲ್ಲೇ ಮುಳುಗಿ ಆನ್ ಲೈನ್ ಕ್ಲಾಸ್ ಕಲಿಯುವ ಮಗನನ್ನು ನೋಡಿದಾಗ ಅಟ್ಲಾಸ್ ಸೈಕಲ್ ಮೇಲೆ ಶಾಲೆಗೆ ಹೋಗಿದ್ದು ನೆನೆದಾಗ
ಅಪ್ಪ ಈಗೀಗ ನೆನಪಾಗುತ್ತಾರೆ…

ಶಾಬಾದಿಮಠ ಕ್ಯಾಲೆಂಡರ್ ನಲ್ಲಿ ಹುಣ್ಣಿವೆ – ಅಮಾವಾಸ್ಯೆ ಹುಡುಕಲು ಯತ್ನಿಸಿ ಶ್ರಾವಣ ಕಳೆದೆ ಹೋಯಿತು ಎಂಬುದು ಅರಿವಿಗೆ ಬಂದಾಗ
ಅಪ್ಪ ಈಗೀಗ ನೆನಪಾಗುತ್ತಾರೆ..

ಅವತ್ತೆಂದೋ ಒಂದಿನ ತೆಗೆದಿಟ್ಟಿದ್ದ ನೀಲಿ ಬಣ್ಣದ ಟೀ ಶರ್ಟ್ ಇವತ್ತು ಮಗ ತೊಟ್ಟು ಎದುರಿಗೆ ನಿಂತಾಗ ಕನ್ನಡ ಶಾಲೆಯ ಯೂನಿಫಾರ್ಮ್ ಕಣ್ಮುಂದೆ ಬರುತ್ತದೆ
ಅಪ್ಪ ಈಗೀಗ ನೆನಪಾಗುತ್ತಾರೆ…

ಬಾಲ್ಯದಲ್ಲಿ ಜತೆಗಿದ್ದು ಬಡತನ ಹೊದ್ದು ದೊಡ್ಡವರಾದ ಗೆಳೆಯರೆಲ್ಲ ಮಹಲು ಕಟ್ಟಲು ಹೊರಟಾಗ, ಒಂದು ಥರ್ಟಿ – ಫಾರ್ಟಿ ಸೈಟ್ ಇರಬೇಕಿತ್ತು ಎನಿಸುತ್ತದೆ
ಅಪ್ಪ ಈಗೀಗ ನೆನಪಾಗುತ್ತಾರೆ..

ಹಾಳು ಕೊರೋನ ಬಂತು ಜಾತ್ರೆ ರದ್ದಾಯಿತು ಅಂತೆಲ್ಲ ವಾರ್ತೆ ಓದಿದಾಗ ಇದಕ್ಕೂ ಮೊದಲು ಹತ್ತಾರು ವರ್ಷ ಊರ ಜಾತ್ರೆಗೆ ಹೋಗಲೇ ಇಲ್ಲ ಎಂಬ ಕೊರಗು
ಅಪ್ಪ ಈಗೀಗ ನೆನಪಾಗುತ್ತಾರೆ…

ಕೊನೆಗೊಮ್ಮೆ ನೋಡಲೇ ಇಲ್ಲ
ಊರ ಮನೆಯ ಮುರುಕು ಕುರ್ಚಿಯ ಮೇಲೆ ಇನ್ನೂ ಸುಮ್ಮನೆ ಕೂತಿರಬೇಕು, ದಾರಿ ಕಾಯುತ್ತಾ, ಕಣ್ಣು ಉಜ್ಜುತ್ತಾ..
ಅಪ್ಪ ಈಗೀಗ ನೆನಪಾಗುತ್ತಾರೆ…

‍ಲೇಖಕರು Admin

22 January, 2022

1 Comment

  1. Bhimarao

    ಭಾವನೆಗಳು ಸುಮಧುರವಾಗಿ ಮೂಡಿ ಬಂದಿವೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading